ಬಂಡಾರ ಬಳೆದ ಹಣಿ

ಕವಿತೆ

ಬಂಡಾರ ಬಳೆದ ಹಣಿ

ಡಾ.ಸುಜಾತಾ ಸಿ.

ಬಂಡಾರ ಬಳೆದ ಹಣಿ
ಬಾಯಿತುಂಬ ಎಲೆ ಅಡಿಕೆ
ಜೋತು ಬಿದ್ದ ಗುಳಿ ಕೆನ್ಯೆ
ಜಿಡ್ಡು ಗಟ್ಟಿದ ಜಟಾಧರಿ
ಕೈ ತುಂಬಾ ಹಸಿರ ಬಳಿ
ಎದೆ ತುಂಬಾ ಕವಡೆ ಸರ
ಮೈ ತುಂಬಾ ಹಸಿರುಟ್ಟು
ಪಡಲಗಿ ಹಿಡಿದು
ಓಣಿ ಓಣಿ ತಿರುಗುವಳು
ಜೋಗತಿ ಎಂದು ಹೆಸರಿಟ್ಟು
ಕೂಗುವರೆಲ್ಲರೂ
ಕತ್ತಲೆಯ ಬದುಕಲ್ಲಿ
ಸದಾ ಬುಡ್ಡಿ ಚಿಮಣದ
ಬೆಳಕಾಗಿಸಿ ಹಂಬಲಿಸಿ
ಸೂರ್ಯನ ಬೆಳಕಿಗೆ
ಜೋಗಕ್ಕೆ ಜೊಗತಿ
ಊಧೋ ಉಧೋ ಎಂದು
ಹೋರಟಳು ಮಕ್ಕಳ ಸಲುವಲೆಂದು
ಕಂಡ ಕಣ್ಣು ಉರಿ ಕೆಂಡವಾಗಿ
ಗೈಯ್ಯಾಳಿ ಎಂದು
ಕೊಟ್ಟುಬಿಟ್ಟರು ಪಟ್ಟವ
ಒಣ ರೊಟ್ಟಿ ಜೊಳಕೆ
ಕೈ ಚಾಚಿ ಜೋಳಿಗೆ ಬಾಯಿ
ತೆರೆದಾಗ ಮೂಗು ಮುರಿಯುತ್ತಲೇ
ಒಳಹೋದ ಹೆಣ್ಣು
ವಟಗುಟ್ಟಿ ತಂದಾಕಿದ
ಹಳಸಲು ಜೊಳಿಗೆ ಬಟ್ಟೆ
ಅವಳ ಅಂಗಳದ ತುಂಬೆಲ್ಲ
ಹನಿಯ ರಂಗವಲ್ಲಿ ಚೆಲ್ಲಿ
ಮುಂದೆ ನಡೆದಾಗ
ಬೊಗಸೆಯೊಡ್ಡಿ ನೀರು
ಕುಡಿದು ದಾಹ ತೀರದಿರಲು
ಮುಂದಿನ ಮನೆಯ ಪಯಣ
ಒಂದು ಕಾಸು ಎಸೆದು
ಒಳ ಹೊದ ತಾಯಿ
ದುರ್ಗುಟ್ಟಿ ನೊಡಿದರು
ಹರಸಿ ಮುಗುಳು ನಗೆ ನಕ್ಕು
ದಾರಿ ಸಾಗಿಸಿ ಜನಸಂದಣಿ
ಕಡೆಗೆ ಕಾಲ ಎಳೆಯುತ್ತಾ
ವಿಶ್ರಮಿಸಲು‌ ಬೇವಿನ ಮರದ
ಆಶ್ರಯ ಪಡೆದು ಕುಳಿತಿರಲು
ಬಡಕಲು ದೇಹದ
ಮುಖ ಬಾಡಿದ ನನ್ನಂತೆ
ಇರುವ ಹಸಿದ ಹೊಟ್ಟೆಗೆ
ಅನ್ನ ಕೇಳಿರಲು
ಜೊಳಿಗೆ ಒಳಗಡೆ
ಒಣ ರೊಟ್ಟಿ ಕುಟುಕಲು
ಒಡಲ ಹಸಿವಿಗೆ ಆಸರೆಯಾ ಮಾಡಿ
ಎದ್ದು ನಡೆದಳು
ಬೇವಿನ ಎಸಳು
ಬಿಸಿಲೊದ್ದು ತಣ್ಣಗಿರಲಿ
ನಿನ್ನ ಕುಡಿ ಬಳ್ಳಿ ಎಂದು
ಹರಸಿದಂತಾಗಿ
ಮನೆಯ ಕಡೆಗೆ ಹೆಜ್ಜೆ ಇಡಲು
ಗುಡಿಸಲ ತುಂಬೆಲ್ಲಾ ಕಣ್ಣಾಗಿ
ಕಾವಲಾಗಿ ಕಾಯತಲಿರುವ
ಚಿಕ್ಕಮಕ್ಕಳು ಬಂದು
ಎದೆಗವಚಿ ಕೊಂಡಾಗ
ಬಿಸಿಲ ಝಳಕೊ
ಒಳ ಬೆಗುದಿಗೊ
ಒತ್ತರಿಸಿ ಬಂದ ಕಣ್ಣ ಹನಿಯ
ಉಪ್ಪುಂಡು ಬಿಕ್ಕಿ ಬಿಕ್ಕಿ
ಅತ್ತಾಗ ಸಂಜೆಯ ಕಿರಣ
ಮುಸುಕ್ಕೊದ್ದು ಮಲಗಿದಾಗ
ಗೋಧುಳಿ ಕೆಮ್ಮಣ್ಣು
ಮುಖ ಮೊತಿ ಮುಚ್ಚಿ
ಅಳುವೆಲ್ಲ ನುಂಗಿ
ಮತ್ತೇ ಹಣಿಗೆ ಸಿಂಗರಿಸಿದಳು
ಬಂಡಾರವ ಬಳಿದ ಬಂಗಾರದ ತಾಯಿ

5 thoughts on “ಬಂಡಾರ ಬಳೆದ ಹಣಿ

  1. ತುಂಬಾ ಚೆನ್ನಾಗಿದೆ ಮೇಡಮ್.ಜೋಳಗಿ ಹಿಡಿದ ಜೋಗತಿ ಕಣ್ಣು ಮುಂದೆ ಬಂದು ನಿಂತ ಹಾಗೆ ಅನಸುತ್ತಿದೆ.ನಿಮ್ಮ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ ಮೇಡಮ್.ಮುಂದಿನ ಬರಹದ ನಿರೀಕ್ಷೆಯಲ್ಲಿರುವ ನಿಮ್ಮ…..

    1. ಬಂಡಾರ ಬಳೆದ ಹಣಿ ಓದಿದೆ ˌ ಚಿಂತಿಸುವಂತೆ ಮಾಡಿತು. ಅವ್ವ ಸಾವಿತ್ರಿಬಾಯಿ ಫುಲೆಯವರನ್ನು ಇವರು ಅರಿಯಬೇಕಷ್ಟೆ. ಧನ್ಯವಾದಗಳು.

Leave a Reply

Back To Top