ತಕ್ಕ ಪಾಠ

ಅನುವಾದಿತ ಕವಿ

ತಕ್ಕ ಪಾಠ

ತೆಲುಗಿನಲ್ಲಿ: ಆದೋನಿ ಬಾಷಾ

ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು.

ರೈಲು ಚಲಿಸುತ್ತಿದ್ದ ಹಾಗೆ ಒಬ್ಬ ವ್ಯಕ್ತಿ ಬೇಗಬೇಗನೇ ನಾನಿದ್ದ ಡಬ್ಬಿಯೊಳಗೆ ಹತ್ತಿದ. ಅಲ್ಲಿಯವರೆಗೆ ಅದರಲ್ಲಿ ನಾನೊಬ್ಬನೇ ಪ್ರಯಾಣಿಕ. ಜೊತೆ ಸಿಕ್ಕಿತೆಂದು ಸ್ವಲ್ಪ ನಿರಂಬಳವಾಯಿತು. ಬೆಳೆಗ್ಗೆಯಿಂದ ಕುಂಭದ್ರೋಣ ಮಳೆ ! ಈ ಅಕಾಲ ಮಳೆಗಳಿಂದಾಗಿ ರೈಲುಗಳೆಲ್ಲಾ ಖಾಲಿಯಾಗಿ ತಿರುಗುತ್ತಿದ್ದವು.


ನಾನೊಬ್ಬ ನಿವೃತ್ತ ಪೋಲೀಸ್ ಅಧಿಕಾರಿ. ಅನಂತಪುರದಲ್ಲಿ ನಿವೃತ್ತಿ ಪಡೆದು, ದೆಹಲಿಯಲ್ಲಿದ್ದ ನನ್ನ ಮಗನ ಹತ್ತಿರ ನನ್ನ ವಿಶ್ರಾಂತ ಜೀವನವನ್ನ ನಡೆಸುತ್ತಿದ್ದೇನೆ. ಪ್ರತೀ ವರ್ಷ ನಮ್ಮ ಕುಟುಂಬವೆಲ್ಲಾ ಕಾರಲ್ಲಿ ಹೊರಟು ವೈಷ್ಣೋದೇವಿಯ ದರ್ಶನ ಮಾಡಿಕೊಳ್ಳುತ್ತೇವೆ. ಈ ಸಲ ನನ್ನ ಹೆಂಡತಿ ಅನಾರೋಗ್ಯದಿಂದ ಬರಲಿಲ್ಲ. ಅವಳನ್ನ ನೋಡಿಕೊಳ್ಳಲು ನನ್ನ ಸೊಸೆ ಸಹ ಉಳಿದಳು. ನಾನು, ನನ್ನ ಮಗ ಮಾತ್ರ ಹೊರಟೆವು.
ಕೆಲ ವರ್ಷಗಳ ಹಿಂದೆ ನನಗೆ ಲಕ್ವ ಹೊಡೆದಿದ್ದು ನನ್ನ ಕಾಲುಗಳೆರಡೂ ಸ್ವರ್ಶೆಯನ್ನು ಕಳೆದುಕೊಂಡಿದ್ದವು. ಗಾಲಿಕುರ್ಚಿಯಲ್ಲೇ ನನ್ನ ಓಡಾಟ. ಎಂದಿನ ಹಾಗೇ ಅದರೊಂದಿಗೆ ಕಾರಲ್ಲಿ ಹೊರಟಿದ್ದೆವು. ಪಲ್ಲಕಿಯಲ್ಲೇ ದೇವಿಯ ದರ್ಶನ ಮಾಡಿಕೊಂಡು ಮರು ಪ್ರಯಾಣದಲ್ಲಿ ಜಮ್ಮುವಿನಲ್ಲಿ ನನ್ನ ಮೊಮ್ಮಗನ ಸಲುವಾಗಿ ಕೆಲ ಆಟದ ವಸ್ತುಗಳನ್ನು ಕೊಂಡುಕೊಂಡೆವು. ಅಷ್ಟರಲ್ಲಿ ಮಳೆ ಶುರುವಾಗಿತ್ತು. ದಿನವಿಡೀ ಬೀಳುತ್ತಲೇ ಇತ್ತು. ಹಾದಿಯಲ್ಲಿ ನೆಲ ಜಾರಿಕೆಗಳಾಗಿವೆಯೆಂದು ತಿಳಿದು ಬಂದದ್ದರಿಂದ ಕಾರನ್ನ ಚಾಲಕನ ಸುಪರ್ದಿಗೆ ಒಪ್ಪಿಸಿ ನಾವಿಬ್ಬರೂ ರೈಲಿನಲ್ಲಿ ದೆಹಲಿ ಸೇರಬೇಕೆಂದಿದ್ದೆವು.
ಜಮ್ಮು ನಿಲ್ದಾಣದಲ್ಲಿ ನನ್ನ ಮಗ ಮತ್ತು ಕಾರಿನ ಚಾಲಕ ಸೇರಿ ನನ್ನನ್ನ ನನ್ನ ಕುರ್ಚಿಯ ಸಮೇತ ಡಬ್ಬಿಯೊಳಕ್ಕೆ ಹತ್ತಿಸಿದರು. ಅವರಿಬ್ಬರೂ ಸಾಮಾನು ತರಲು ಹೊರಗಡೆಗೆ ಹೋದಾಗ ರೈಲು ಹೊರಟಿದ್ದು, ನನ್ನ ಮಗ ಬರುವ ವೇಳೆಗೆ ವೇಗ ತಳೆದಿತ್ತು. ಹಾಗಾಗಿ ಅವನು ರೈಲು ಹತ್ತಲಾಗಲಿಲ್ಲ. ನಾನು ಒಬ್ಬಂಟಿಗನಾಗಿ ಪ್ರಯಾಣಸ ಬೇಕಾಗಿ ಬಂದಿತ್ತು.
ನಾನು ಡಬ್ಬಿಯ ಬಾಗಿಲ ಹತ್ತಿರ ನನ್ನ ಕುರ್ಚಿಯಲ್ಲಿ ಕೂತಿದ್ದೆ. ರೈಲು ಹತ್ತಿದ ವ್ಯಕ್ತಿ ನನ್ನ ಎದುರು ಸೀಟಿನಲ್ಲಿ ಕೂತ. ನಾನು ನನ್ನ ಸೀಟಿನಲ್ಲಿ ಕೂರಲು ಆತನ ಸಹಾಯ ಪಡೆಯಬೇಕೆಂದಿದ್ದೆ. ಅವನ ಕಡೆಗೆ ನೋಡಿದವನು ಬೆಚ್ಚಿಬಿದ್ದೆ.
ಎಲ್ಲೋ ನೋಡಿದ ಮುಖ !


ಎಲ್ಲಿ ಅಂತ ನೆನಪು ಬರಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಎಷ್ಟೋ ಜನರನ್ನ ನೋಡಿದ್ದೇನೆ. ಅವರುಗಳಲ್ಲಿ ಕೆಲವರಂತೂ ಅಪರಾಧಿಗಳು. ನನ್ಗೆಲ್ಲೋ ಹುಚ್ಚು ! ದೇಶದ ಈ ಮೂಲೆಯಲ್ಲಿ ನನಗೆ ಗೊತ್ತಿರುವ ಮನುಷ್ಯ ಹೇಗೆ ಸಿಕ್ಕಿಯಾನು ? ಮನುಷ್ಯನನ್ನ ಹೋಲಿದ ಮನುಷ್ಯರಿರಬಹುದು ಅಥವಾ ನನ್ನ ಕಣ್ಣೇ ನನ್ನನ್ನು ಮೋಸಮಾಡುತ್ತಿರಬಹುದು.


ಅಷ್ಟರಲ್ಲೇ ಆ ವ್ಯಕ್ತಿಯೇ ನನ್ನ ಗುರ್ತುಹಿಡಿದು ಮಾತಾಡಿದ. “ ಸಾರ್ ! ನೀವು ಇನಸ್ಪೆಕ್ಟರ್ ಚಂದ್ರ ಅವರಲ್ವಾ ? ನನ್ನ ಗುರ್ತು ಹಿಡಿದಿದೀರಾ ? ನಾನು ರಾಜೇಶ್ ಸಾರ್. ಇಪ್ಪತ್ತೈದು ವರ್ಷಗಳ ಹಿಂದೆ ಅನಂತಪುರದಲ್ಲಿ ನನ್ನ ಹೆಂಡತಿಯ ಕೊಲೆ ಕೇಸನ್ನ ನೀವೇ ಪತ್ತೇದಾರಿ ಮಾಡಿದ್ದು .” ಅಂದ.


ಆದ್ರೂ ನನಗೆ ನೆನಪಿಗೆ ಬರಲಿಲ್ಲ. “ ನಿನ್ನ ಹೆಂಡತಿ ಹೆಸರೇನಪ್ಪಾ “ ಅಂತ ಕೇಳಿದೆ.
“ ಆಶಾ “ ಅಂತ ಅವನು ಹೇಳಿದ ತಕ್ಶಣ ನನ್ನ ತಲೆಯಲ್ಲಿ ಒಂದು ತುಮುಲವೇ ಎದ್ದಿತು. ನೆನಪಿನ ಪೊರೆಗಳ ಕೆಳಗಿಂದ ಒಂದು ಸುಂದರವಾದ ಮತ್ತು ಮುಗ್ಧ ಮುಖ ಎಲ್ಲ ಪೊರೆಗಳನ್ನ ಸೀಳುತ್ತ ಮೇಲ್ಬಂದು ನನ್ನ ಕಣ್ಣ ಮುಂದೆ ನಿಂತಿತು.

ಅವಳ ಆ ಮುಖವನ್ನು ನಾನು ಹೇಗೆ ಮರೆತೇನು ? ತುಂಬಾ ಧೈರ್ಯವಂತನೆಂದು ಬೀಗುತ್ತಿದ್ದ ನನ್ನನ್ನೇ ಅವಳ ಕೊಲೆ ಬೆಚ್ಚಿ ಬೇಳಿಸಿತ್ತು. ಎಷ್ಟೋ ವರ್ಷಗಳ ವರೆಗೆ ಅವಳ ಮುಖ ನನ್ನ ಕನಸಲ್ಲಿ ಬರುತ್ತಿತ್ತು. “ಅಂಕಲ್ ! ನನ್ನ ಕೊಂದ ಆ ಕೊಲೆಪಾತಕಿಯನ್ನ ಹಿಡಿಯಿರಿ ಪ್ಲೀಜ್ “ ಅಂತ ಬೇಡುತ್ತಿತ್ತು. ಆದರೇ ನಾನೆಷ್ಟು ಪ್ರಯತ್ನಿಸಿದರೂ ಆ ಕೊಲೆಗಾರ ಸಿಕ್ಕಿರಲಿಲ್ಲ. ನನ್ನ ಸರ್ವೀಸಿನಲ್ಲಿ ಕೊಲೆಗಾರನನ್ನು ಹಿಡಿಯದೇ ಉಳಿದ ಕೇಸು ಅದೊಂದೇ ಆಗಿತ್ತು.

ಆಗಲೇ ರಾಜೇಶ್ ನನ್ನ ಕುರ್ಚಿಯನ್ನ ನೋಡಿದ. “ ನಿಮ್ಮ ಕಾಲಿಗೇನಾಗಿದೆ ಸಾರ್ “ ಅಂತ ಕೇಳಿದ.
ನಾನು ನನ್ನ ವಿವರಗಳನ್ನು ಹೇಳಿದೆ. “ ಇನ್ನು ದೆಹಲಿಯಲ್ಲಿ ನನ್ನ ಸೊಸೆ ಬಂದು ನನ್ನ ಇಳಿಸಿಕೊಳ್ಳೂವವರೆಗೂ ನಂದು ಒಬ್ಬಂಟಿ ಪ್ರಯಾಣವೇ ! ಅದ್ಸರಿ. ಈ ಮೂಲೆಯಲ್ಲಿ ನೀನೇನ್ಮಾಡ್ತಿದ್ದೀಯಾ “ ಅಂತ ಕೇಳಿದೆ.
“ ವ್ಯಾಪಾರದ ಸಂಬಂಧ ನಾನು ಇಡೀ ದೇಶ ಸುತ್ತುತ್ತಾ ಇರ್ತೇನೆ ಸಾರ್” ಎಂದ.
ಅವನ ವ್ಯಾಪಾರದ ಬಗ್ಗೆ ಕೇಳಬೇಕೆನಿಸಿತು. ಆದರೇ ನಮ್ಮ ಮಾತು ಆಶಾಳ ಕೊಲೆಯ ಕಡೆಗೆ ತಿರುಗಿತು.
“ ಸಾರ್ ! ನನ್ನ ಹೆಂಡತಿಯ ಕೊಲೆಗಾರ ಇನ್ನೂ ವರೆಗೆ ಸಿಕ್ಕಿಲ್ಲ. ಕೊನೆಗೆ ಆ ಕೊಲೆ ರಹಸ್ಯವಾಗೇ ಉಳಿದು ಹೋಯ್ತು.” ನಿರಾಶಾ ದನಿಯಲ್ಲಿ ಹೇಳಿದ ರಾಜೇಶ್.
ಅವನ ಮಾತು ಕೇಳಿದ ನನಗೆ ಬೇಜಾರಾಯಿತು. ಹಾಗೇ ಕಣ್ಣು ಮುಚ್ಚಿಕೊಂಡೆ. ರೈಲು ಮುಂದೆ ಹೋಗುತ್ತಿತ್ತು. ನನ್ನ ಮೆದಳು ಹಿಂದಿನ ನೆನಪಿಗೆ ಮರಳಹತ್ತಿತು.


ನಾನು ಅನಂತಪುರದಲ್ಲಿ ಸರ್ಕಲ್ ಇನ್ಸ್ಪೆಕ್ಟರನಾಗಿ ಕೆಲಸ ಮಾಡುತ್ತಿದ್ದ ದಿನಗಳವು. ನಮ್ಮ ಪಟ್ಟಣದಲ್ಲಿ ಇದ್ದಕ್ಕಿದ್ದಹಾಗೇ ಕಳ್ಳರ ತಂಡ ಒಂದು ತಲೆ ಎತ್ತಿತ್ತು. ಬೀಗ ಹಾಕಿದ ಮನೆಗಳು ಅಥವಾ ಒಬ್ಬಂಟಿಗರಾಗಿ ಯಾರಾದರೂ ಇದ್ದ ಮನೆಗಳನ್ನೇ ಗುರಿ ಮಾಡಿಕೊಂಡು ದರೋಡೆಗಳನ್ನ ಮಾಡುತ್ತಿದ್ದರು. ಕಾವಲಿಗೆ ನಾಯಿ ಇದ್ದರೇ ಅದಕ್ಕೆ ವಿಷ ಬೆರೆಸಿದ ಬಿಸ್ಕತ್ತುಗಳನ್ನ ತಿನಿಸಿ ಕೊಲ್ಲುತ್ತಿದ್ದರು. ಮುಂಜಾಗರೂಕತೆಯಾಗಿ ಟೆಲಿಫೋನ್ ವೈರುಗಳನ್ನೆಲ್ಲಾ ಕತ್ತರಿಸಿ ಹಾಕುತ್ತಿದ್ದರು. ಉಡ್ ಕಟ್ಟರಿನಿಂದ ಹಿಂಬಾಗಿಲಿಗೆ ತೂತು ಕೊರೆದು ಚಿಲಕ ತೆಗೆದು ಒಳಗೆ ನುಸುಳುತ್ತಿದ್ದರು. ಕುರುಹು ಕಾಣದ ಹಾಗೆ ಕೈಗಳಿಗೆ ಕೈಚೀಲ ಹಾಕಿ ದರೋಡೆ ಮಾಡುತ್ತಿದ್ದರು. ಒಂದು ವೇಳೆ ಮನೆಯಲ್ಲಿ ಯಾರಾದರೂ ಕಂಡಲ್ಲಿ ಅವರ ಕತ್ತಿಗೆ ಪ್ಲಾಸ್ಟಿಕ್ ವೈರ್ ಬಿಗಿಸಿ ಕೊಂದುಬಿಡುತ್ತಿದ್ದರು.
ಪೋಲೀಸರಿಗೆ ಯಾವುದೇ ತರದ ಸಾಕ್ಷಾಧಾರಗಳು ಸಿಗದ ಹಾಗೆ ಕೆಲಸ ಮಾಡುತ್ತಿದ್ದರು. ನಾವು ಏನೇ ಪ್ರಯತ್ನ ಮಾಡಿದರೂ ಅವರುಗಳನ್ನು ಹಿಡಿಯಲಾಗಿರಲಿಲ್ಲ. ರಾತ್ರಿಯಲ್ಲಿ ನಾನೇ ಸ್ವತಃ ಗಸ್ತು ತಿರುಗುತ್ತಿದ್ದೆ. ಆದರೂ ಇಂಥ ಕಳ್ಳತನಗಳು ಕಮ್ಮಿಯಾಗಲಿಲ್ಲ. ವಾರದಲ್ಲಿ ಎಲ್ಲೋ ಒಂದುಕಡೆ ಕಳವು ನಡೆಯುತ್ತಿತ್ತು.

ಒಂದು ದಿನ ಬೆಳಗಿನ ಜಾವದಲ್ಲಿ ಸ್ಟೇಷನ್ ನಿಂದ ಫೋನ್ ಬಂತು. ಊರ ಹೊರಗಿನ ಬಡಾವಣೆಯಲ್ಲಿಯ ಒಂದು ಮನೆಯಲ್ಲಿ ಒಬ್ಬಂಟಿಗಳಾಗಿದ್ದ ಆಶಾ ಎನ್ನುವ ಗೃಹಿಣಿಯನ್ನು ಕೊಂದು ಕಳ್ಳರು ಮನೆಯನ್ನು ಲೂಟಿ ಮಾಡಿದ್ದಾರೆ ಎಂದು ಡ್ಯೂಟಿಯಲ್ಲಿದ್ದ ಪೇದೆ ಹೇಳಿದ. ನಂಗೆ ತುಂಬಾ ಆಶ್ಚರ್ಯವಾಯಿತು.

ಯಾಕೆ ಅಂದ್ರೆ, ಆಶಾ ನಂಗೆ ಗೊತ್ತಿದ್ದ ಹೆಂಗಸಾಗಿದ್ದಳು. ಕಳೆದ ವರ್ಷ ತನ್ನ ಮದುವೆಯಾಗುವ ವರೆಗೆ ನನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಒಳ್ಳೆಯ ಹುಡುಗಿ. ತಂದೆ ತಾಯಿ ಇಲ್ಲದ ಅನಾಥೆ. ಕಂದನಿರುವಾಗಲೇ ಅವರು ಅವಳನ್ನು ಗುಡಿಯಲ್ಲಿ ಬಿಟ್ಟಿದ್ದರಂತೆ. ಅನಾಥಾಶ್ರಮದಲ್ಲಿದ್ದುಕೊಂಡು ಬೆಳಿದಿದ್ದಳು. ಸ್ವಯಂಕೃಷಿಯಿಂದ ಚೆನ್ನಾಗಿ ಓದಿಕೊಂಡು ಊರಿನಲ್ಲಿನ ಒಂದು ಹೆಸರಾಂತ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇರಿದ್ದಳು. ಒಳ್ಳೆ ಹೆಸರು ಗಳಿಸಿದ್ದಳು. ಅದಕ್ಕೇ ನನಗೆ ಅವಳೆಂದರೇ ತುಂಬಾ ಅಭಿಮಾನ.

ನನ್ನ ಮಕ್ಕಳಿಬ್ಬರೂ ಅದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರು ಓದಿನ ಮೇಲೆ ಅಷ್ಟೇನೂ ಶ್ರದ್ಧೆ ತೋರಿಸುತ್ತಿರಲಿಲ್ಲ. ಹಾಗಾಗಿ ನಾನು ಆಶಾಳನ್ನ ನಮ್ಮ ಮನೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡಲು ಕೇಳಿಕೊಂಡೆ. ಅವಳು ಒಪ್ಪಿ ಮನೆಗೆ ಸಂಜೆಗಳಲ್ಲಿ ಬಂದು ಪಾಠ ಹೇಳಿಕೊಡುತ್ತಿದ್ದಳು. ಅವಳು ಬಂದಮೇಲೆ ನನ್ನ ಮಕ್ಕಳ ಓದಿನಲ್ಲಿ ತುಂಬಾ ಸುಧಾರಣೆ ಕಂಡು ಬಂತು. ಅದಕ್ಕೆ ಕೃತಜ್ಞತೆಯಾಗಿ ನಾವು ಅವಳ ಮದುವೆಯಲ್ಲಿ ಒಂದು ಬಂಗಾರದ ಲಾಕೆಟ್ ಕೊಟ್ಟೆವು. ಅದನ್ನೋ ನೋಡಿ ಅವಳು, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆ ಲಾಕೆಟ್ಟನ್ನ ತನ್ನ ಜೀವನವಿಡೀ ಜತನವಾಗಿ ಇಟ್ಟುಕೊಳ್ಳುತ್ತೇನೆ ಎಂದಿದ್ದಳು.


ಆಶಾಳನ್ನು ಪ್ರೀತಿಸಿ ಮದುವೆಯಾದ ರಾಜೇಶ್ ಮುಂಚೆ ಕಾರುಗಳ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದ. ಅವಳು ಕೆಲಸ ಮಾಡುತ್ತಿದ್ದ ಶಾಲೆಯ ಎದುರಲ್ಲೇ ಇತ್ತು ಅವನ ಷೆಡ್. ಒಂದು ದಿನ ಅವನಿಗೆ ಆಶಾಳ ಜೊತೆ ಪರಿಚಯವಾಯಿತು. ಅದು ಪ್ರೀತಿಯಾಯ್ತು. ನಂತರ ರಾಜೇಶ್ ಕಾರುಗಳ ಮಧ್ಯವರ್ತಿಕೆಯಲ್ಲಿ ತುಂಬಾ ಹಣ ಗಳಿಸಿದ. ನಂತರ ಆಶಾಳ ಕೆಲಸ ಬಿಡಿಸಿ ಅವಳನ್ನು ಮದುವೆಯಾದ.


ಊರಿನ ಹೊರಗಡೆಯ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಹಿಡಿದು ಸಂಸಾರ ಹೂಡಿದ್ದರು. ಆಶಾ ಅದೃಷ್ಟವಂತಳೆಂದು ನಾನು, ನನ್ನ ಹೆಂಡತಿ ಸಂತೋಷಪಟ್ಟೆವು. ಆದರೇ ಮದುವೆಯಾದ ಒಂದು ವರ್ಷದಲ್ಲಿ ಹೀಗೆ ಅವಳಿಗೆ ನೂರು ವರ್ಷ ತುಂಬುತ್ತದೆಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ.
ಅವತ್ತು ನಾನು ಘಟನಾಸ್ಥಳಕ್ಕೆ ಸೇರುವ ಮೊದಲೇ ನನಗಿಂತಾ ಮುಂಚೆ ಬಂದ ಪೋಲೀಸ್ ತಂಡ ತಮ್ಮ ತನಿಖೆ ಶುರುಮಾಡಿತ್ತು. ಎಸ್ಸೈ,ಫೋಟೋಗ್ರಾಫರ್, ಬೆರಳಚ್ಚು ತಜ್ಞ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಬೆಡ್ ರೂಮಿನಲ್ಲಿ ಆಶಾಳ ಹೆಣ ಇತ್ತು. ಅರಳಿದ ಅವಳ ಕಣ್ಣಲ್ಲಿ ಭಯ ಮತ್ತು ಆಶ್ಚರ್ಯಗಳ ಮಿಶ್ರಿತ ಭಾವಗಳಿದ್ದವು. ಆಕೆಯ ಕೊರಳ ಮೇಲೆ ಕಾಣಿಸಿದ ಕಲೆಗಳಿಂದ ಅವಳ ಕತ್ತಿಗೆ ಹಗ್ಗ ಬಿಗಿದು ಕೊಂದಿರುವರೆಂದು ತಿಳಿಯುತ್ತಿತ್ತು. ಆಕೆಯ ಮೈಮೇಲಿನ ಒಡವೆಗಳೂ ಸೇರಿ ಕಬ್ಬಿಣದ ಪೆಟ್ಟಿಗೆಯೊಳಗಿನ ಹಣವೆಲ್ಲಾ ಚೋರೀಯಾಗಿತ್ತು.
ಹಿತ್ತಲಬಾಗಿಲ ಚಿಲಕ ಬಿಚ್ಚಿತ್ತು. ಅಲ್ಲಿ ಅವರು ಸಾಕಿದ ನಾಯಿ ಸತ್ತು ಬಿದ್ದಿತ್ತು. ಅದರ ಪಕ್ಕದಲ್ಲಿ ಬಿಸ್ಕತ್ತುಗಳ ತುಂಡುಗಳು ಬಿದ್ದಿದ್ದವು. ಟೆಲಿಫೋನ್ ವೈರುಗಳೆಲ್ಲಾ ಕತ್ತರಿಸಲ್ಪಟ್ಟಿದ್ದವು.
ಕೊಲೆನಡೆದ ವಿಧಾನ ನೋಡಿದರೇ ಖಂಡಿತವಾಗಿ ಇದು ಆ ಕಳ್ಳರ ತಂಡದ ಕೆಲಸಾನೇ ಅನಿಸುತ್ತಿತ್ತು.
ಮೃತದೇಹವನ್ನು ಮೊದಲು ನೋಡಿದ ಮನೆ ಕೆಲಸದವಳು ಕಾಂತಂಳನ್ನು ವಿಚಾರಿಸಿದಾಗ ಕಣ್ಣೊರೆಸಿಕೊಳ್ಳುತ್ತಾ ತಾನು ನೋಡಿದ್ದೆಲ್ಲಾ ಹೇಳಿದ್ದಳು.
“ ಎಂದಿನಹಾಗೇ ನಾನು ಆರುಗಂಟೆಗೆ ಮನೆಕೆಲಸಕ್ಕೆ ಬಂದೆ. ಹಿತ್ತಲಲ್ಲಿ ಸತ್ತು ಬಿದ್ದಿದ್ದ ನಾಯಿ ನೋಡಿ ಭಯವಾಯಿತು. ರಂಗನಾಥ್ ಅಯ್ಯರವರನ್ನು ಕರೆತಂದೆ. ಬಾಗಿಲು ತೆಗೆದಿದ್ದರಿಂದ ಇಬ್ಬರೂ ಒಳಗೆ ಹೋಗಿ ನೋಡಿದೆವು. ಬೆಡ್ ರೂಮಿನಲ್ಲಿ ಅಮ್ಮ ಹೀಗೆ ಕಂಡರು. ನಾನಂತೂ ಭಯದಿಂದ ನಡುಗಿಹೋದೆ. ಇವರು ತಕ್ಷಣ ಪೋಲಿಸರಿಗೆ ಫೋನ್ ಮಾಡಿದರು “ ಎಂದಳು.
ರಂಗನಾಥ್ ರವರು ಪಕ್ಕದ ಮನೆಯವರು. ಅವರು ಕಾಂತಂ ಮಾತುಗಳಿಗೆ ಪುಷ್ಟಿ ಕೊಡುತ್ತಾ “ ನೆನ್ನೆ ರಾತ್ರಿ ಹತ್ತು ಗಂಟೆಗೆ ನಾನು ಮನೆಗೆ ಬರುವಾಗ ರಾಜೇಶ್ ಕಾರಿನಲ್ಲಿ ಹೋಗ್ತಾ ಎದುರಾದರು. ನಾಳೆ ಹೈದರಾಬಾದಿನಲ್ಲಿ ನಡೆಯಲಿರುವ ಯಾವುದೋ ಹಳೇ ಕಾರುಗಳ ಲಿಲಾಮಿನಲ್ಲಿ ಭಾಗವಹಿಸಬೇಕು ಅಂತ ಹೇಳಿದರು. ಅವರು ಹೀಗೆ ತುಂಬಾಸರ್ತಿ ಹೈದರಾಬಾದ್ ಗೆ ಹೋಗ್ತಿರ್ತಾರೆ. ಅಲ್ಲ್ಲಿ ಪ್ಯಾರಡೈಜ್ ಲಾಡ್ಜಿನಲ್ಲಿ ಇಳ್ಕೊತಾರೆ. ಆ ಲಾಡ್ಜ್ ನ ಫೋನ್ ನಂಬರ್ ನನ್ನ ಹತ್ತಿರವಿದೆ. ಇಷ್ಟಕ್ಕೂ ಮುಂಚೆ ಎಸ್ಸೈನವರು ಅಲ್ಲಿಗೆ ಫೋನ್ ಮಾಡಿ ರಾಜೇಶ್ ಜೊತೆಗೆ ಮಾತಾಡಿದಾರೆ. ಅವರು ತಕ್ಷಣ ಹೊರಟಿದ್ದಾರೆ ಇಲ್ಲಿಗೆ ಬರಲು “ ಅಂದರು.


“ ನೆನ್ನೆ ಅರ್ಧರಾತ್ರಿಯ ನಂತರ ನಿಮಗೆ ಈ ಮನೆಯಿಂದ ಏನಾದ್ರೂ ಶಬ್ದಗಳು, ಕೂಗಾಟ ಕೇಳಿಬಂತಾ ?” ಅಂತ ಕೇಳಿದೆ.
“ ಇಲ್ಲ ಸಾರ್ ! ಆದರೇ ನಮ್ಮಿಬ್ಬರ ಮನೆಗಳಿಗೆ ತುಂಬಾ ದೂರವಿದೆ. ಶಬ್ದಗಳೆಲ್ಲ ಕೇಳಿಬರೋ ಅವಕಾಶ ಕಮ್ಮಿ “ ಎಂದರು ರಂಗನಾಥ್.
ಪಂಚನಾಮೆ ಮುಗಿದನಂತರ ಹೆಣವನ್ನ ಮಾರ್ಚುರಿಗೆ ಕಳಿಸಿದೆ. ನಂತರ ನಂಗೊಂದು ಆಲೋಚನೆ ಬಂತು. ನೆನ್ನೆ ರಾತ್ರಿ ಆಶಾ ಒಬ್ಬಂಟಿಗಳಾಗಿದ್ದಾಳೆಂದು ಕಳ್ಳರಿಗೆ ಹೇಗೆ ಗೊತ್ತಾಯಿತು ? ಸಾಧಾರಣವಾಗಿ ಕಳ್ಳರಿಗೆ ಇಂಥ ಮಾಹಿತಿ ಸಿಗುವುದು ಮನೆ ಕೆಲಸದವರಿಂದಲೇ. ಅದಕ್ಕೆ ನಾನು ಕಾಂತಂಳ ಮೇಲೆ ನಿಗಾ ಇರಿಸಲು ಹೇಳಿದೆ.
ಸಂಜೆ ಹೈದರಾಬಾದ್ ನಿಂದ ತಿರುಗಿಬಂದ ರಾಜೇಶ್ ಹೆಂಡತಿಯ ಹೆಣ ನೋಡಿ ಬಿಕ್ಕಿ ಬಿಕ್ಕಿ ಅತ್ತ. “ ನನ್ನ ಹೆಂಡತಿಗೆ ಕಳ್ಳರನ್ನು ಎದುರಿಸೋಷ್ಟು ಧೈರ್ಯವಿರಲಿಲ್ಲ. ಆದರೂ ಕಳ್ಳ್ರು ಅವಳನ್ನೇಕೆ ಕೊಂದರೋ ಅರ್ಥವಾಗುವುದಿಲ್ಲ.” ಅಂತ ಗೋಳಿಟ್ಟ.
“ಆಶಾ ಅವರ ಮುಖಗಳನ್ನು ನೋಡಿರ್ತಾಳೆ. ಸಾಕ್ಷ್ಯವಿರಬಾರದೆಂದು ಅವಳನ್ನ ಮುಗಿಸಿದಾರೆ “ ಅಂತ ನಾನಂದೆ.


ನಂತರ ದರೋಡೆಯಾದ ಮೊಬಲಗು, ಒಡವೆಗಳ ವಿವರ ಹೇಳಿದ ರಾಜೇಶ್. ಎಲ್ಲ ಸೇರಿ ಇಪ್ಪತ್ತು ಸಾವಿರ ನಗದು. ಆರು ತೊಲೆ ಬಂಗಾರ ಕಳುವಾಗಿತ್ತು. ಒಡವೆಗಳಲ್ಲಿ ಆಶಾಗೆ ನಾವು ಕೊಟ್ಟ ಬಂಗಾರದ ಲಾಕೆಟ್ ಸಹ ಇತ್ತು.
ಪೋಸ್ಟ್ ಮಾರ್ಟೆಮ್ ವರದಿಯ ಪ್ರಕಾರ ಕೊಲೆ ಅರ್ಧರಾತ್ರಿ ದಾಟಿ ಹನ್ನೆರಡೂವರೆ, ಒಂದುಗಂಟೆಗಳ ನಡುವೆ ನಡೆದಿದೆ, ಹತಳಾದವಳ ಕೊರಳಿಗೆ ಪ್ಲಾಸ್ಟಿಕ್ ವೈರನ್ನು ಬಿಗಿದು ಕೊಲೆಮಾಡಲಾಗಿದೆ ಅಂತ ಬಂತು. ಉಳಿದ ಕೊಲೆಗಳು ಸಹ ಇದೇರೀತಿ ಆಗಿದ್ದವು.
ಆದಕಾರಣ ಇದು ಸಹ ಆ ಕಳ್ಳರ ತಂಡದವರ ಕೆಲಸವೇ ಅಂತ ನನಗೆ ಮನದಟ್ಟಾಯಿತು. ಕೆಲಸದವಳ ಮೇಲಿಟ್ಟ ನಿಗಾದಿಂದ ಕಳ್ಳರ ಸುಳಿವು ಸಿಗಬಹುದೆಂಬ ನನ್ನ ಕಲ್ಪನೆ ಸುಳ್ಳಾಗಿತ್ತು. ಅವಳಿಗೆ ಈ ಕೊಲೆಯ ಜೊತೆ ಏನೂ ಸಂಬಂಧವಿಲ್ಲವೆಂದು ತಿಳಿಯಿತು.
ಆದರೇ ಬೆರಳಚ್ಚಿನ ವರದಿ ಬಂದನಂತರ ಈ ಕೇಸಿಗೆ ಹೊಸ ತಿರುವು ಸಿಕ್ಕಿತು. ಅವರ ಮನೆಯ ಹಾಲಿನಲ್ಲಿ ಕೆಲವು ಕಡೆ ಯಾರೋ ಹೊಸ ವ್ಯಕ್ತಿಯ ಬೆರಳಚ್ಚು ಕಂಡಿತ್ತು. ಅವು ಆಶಾ ಮತ್ತು ರಾಜೇಶ್ ರವು ಆಗಿರಲಿಲ್ಲ. ಬಂದ ಕಳ್ಳರಲ್ಲಿ ಯಾರೋ ಒಬ್ಬ ಕೈಗವಸು ಹಾಕಿರಲಿಲ್ಲವೆಂದು ಅರ್ಥವಾಯಿತು. ನಾನು ತಕ್ಷಣ ಅವುಗಳನ್ನು ಹತ್ತಿರದ ಪೋಲೀಸ್ ಸ್ಟೇಶನ್ ಗಳಿಗೆ ಕಳಿಸಿದ್ದೆ. ಆದರೇ ಅವುಗಳು ಅವರ ದಾಖಲೆಗಳಲ್ಲಿದ್ದ ಯಾವ ಬೆರಳಚ್ಚುಗಳ ಜೊತೆ ಹೊಂದಿರಲಿಲ್ಲ. ಹಾಗಾಗಿ ನನ್ನ ತನಿಖೆ ಮುಂದುವರೆಯಲಿಲ್ಲ.
ಮತ್ತೊಂದು ಸಲ ಘಟನಾಸ್ಥಳವನ್ನು ವಿವರವಾಗಿ ಪರಿಶೀಲಿಸಿದೆ. ನನ್ನ ಶ್ರಮ ವ್ಯರ್ಥವಾಗಲಿಲ್ಲ. ಬೆಡ್ ರೂಮಿನಲ್ಲಿ ಮಂಚದ ಕೆಳಗಿನ ಖಾನೆಯೊಳಗೆ ಆಶಾಳ ದಿನಚರಿ ಸಿಕ್ಕಿತು. ಓದಿದೆ. ಅದರಲ್ಲಿ ಅವಳು ಬರೆದುಕೊಂಡ ಎರಡು ವಾಕ್ಯ ನನ್ನನ್ನ ಕುತೂಹಲಕ್ಕೀಡು ಮಾಡಿತ್ತು. “ ಇವತ್ತು ನನಗೊಂದು ರಹಸ್ಯ ತಿಳಿದು ಬಂದಿದೆ. ಇದನ್ನು ಅಂಕಲ್ ಗೆ ತಿಳಿಸಬೇಕು “ ಎಂದಿತ್ತು. ಆದರೇ ಆ ರಹಸ್ಯ ನನಗೆ ಹೇಳಿರಲಿಲ್ಲ.
ತಿಂಗಳ ಕೆಳಗೆ ಊರಲ್ಲಿ ಯಾವುದಾದರೂ ಪ್ರಸಂಗ ನಡೆದಿದೆಯಾ ? ಇದು ತಿಳೀಯಲು ನಾನು ಹಳೇ ದಿನ ಪತ್ರಿಕೆಗಳನ್ನ ತಿರುವಿಹಾಕಿದೆ. ಕಳೆದ ತಿಂಗಳಿಂದಳೇ ಊರಲ್ಲಿ ಕಳ್ಳತನಗಳು ಪ್ರಾರಂಭವಾಗಿದ್ದವು ಎಂದು ತಿಳಿದುಬಂತು. ಆಶಾಗೆ ಕಳ್ಳರ ತಂಡದ ಬಗ್ಗೆ ಏನಾದರೂ ಸುಳಿವು ತಿಳಿದರಬೇಕು. ಅದಕ್ಕೇ ಅವರು ಅವಳನ್ನ ಕೊಲೆಗೈದಿರಬೇಕು ಅನಿಸಿತ್ತು.
ಈ ವಿಷಯದ ಬಗ್ಗೆ ರಾಜೇಶ್ ನ ಕೇಳಿದ್ರೇ ಅವನು “ ಆಶಾ ನನಗೇನೂ ಇದರ ಬಗ್ಗೆ ಹೇಳಿರಲಿಲ್ಲ. ಅದು ನಿಮಗೇ ಹೇಳಬೇಕೆಂದುಕೊಂಡಿದ್ದಾಳೆ ಅಂದ್ರೇ ಅದು ಕಳ್ಳರ ಬಗ್ಗೇ ಇರಬಹುದು. “ ಅಂದ.
ಎರಡು ದಿನದ ನಂತರ ನಮ್ಮ ಗಸ್ತು ತಂಡ ಒಬ್ಬ ಕಳ್ಳನನ್ನು ಹಿಡಿಯಿತು. ಅತನ ಬೆರಳಚ್ಚು ಆಶಾಳ ಮನೆಯಲ್ಲಿ ಸಿಕ್ಕ ಬೆರಳಚ್ಚಿಗೆ ಹೊಂದಿದ್ದವು. ಈ ಕೇಸಿನ ಕಗ್ಗಂಟು ಬಿಚ್ಚಿತೆಂದು ಎಣಿಸಿದ್ದೆ. ಆದರೇ ವಿಷಯ ತಿಳಿದ ಮೇಲೆ ನನ್ನ ಆಶೆಗಳಮೇಲೆ ತಣ್ಣೀರು ಸುರಿದಂತಾಯಿತು.
ಅವನೊಬ್ಬ ಚಿಲ್ಲರೆ ಕಳ್ಳ. ಕೊಲೆ ನಡೆದ ರಾತ್ರಿ ಅವನು ರಸ್ತೆಮೇಲೆ ಅನುಮಾನಾಸ್ಪದ ರೀತಿಯಲ್ಲಿ ಅಲೆದಾಡುತಿದ್ದಾಗ ನಮ್ಮವರು ಅವನನ್ನು ತಂದು ಲಾಕಪ್ ನಲ್ಲಿ ಹಾಕಿ ಬೆಳಗಿನ ಜಾವ ನಾಲಕ್ಕು ಗಂಟೆಗೆ ಬಿಟ್ಟಿದ್ದಾರೆ. ಅವನು ಆಶಾಳ ಮನೆ ಮೇಲೆ ಹೋಗ್ತಾ ಹಿತ್ತಲು ಬಾಗಿಲು ತೆಗೆದದ್ದು ನೋಡಿ ಕಳ್ಳತನ ಮಾಡುವ ಉದ್ದೇಶದಿಂದ ಮನೆ ಹೊಕ್ಕಿದ್ದಾನೆ. ಆದರೇ ಬೆಡ್ ರೂಮಲ್ಲಿ ಹೆಣ ನೋಡಿ ಹೆದರಿ ಓಡಿಹೋಗಿದ್ದಾನೆ. ಕೊಲೆನಡೆದ ಸಮಯಕ್ಕೆ ನಮ್ಮ ಲಾಕಪ್ಪಿನಲ್ಲೇ ಇದ್ದಿದ್ದರಿಂದ ಅವನನ್ನು ಶಂಕಿಸಲು ಆಸ್ಪದವೇ ಇಲ್ಲ. ಇನ್ನೂ ಹೇಳ್ಬೇಕಾದರೇ ಅವನ ನಿರ್ದೋಷಿತ್ವಕ್ಕೆ ನಾವೇ ಸಾಬೀತಾಗಿ ನಿಂತಿದ್ದೇವೆ ಅಂತಾಯ್ತು.
ಬಾಯಿಗೆ ಬಂದ ತುತ್ತು ಕೈಜಾರಿಹೋದ್ದಕ್ಕೆ ನಾನು ತುಂಬಾ ನಿರಾಶೆಗೊಂಡೆ. ಅದರ ಮೇಲೆ ದಿನಾಲೂ ನಮ್ಮ ಇಲಾಖೆಯ ಮೇಲೆ ದಿನಪತ್ರಿಕೆಗಳಲ್ಲಿ ಬರುತ್ತಿದ್ದ ವಿಮರ್ಶೆಗಳು ನನ್ನನ್ನು ಇನ್ನೂ ಅಶಾಂತಿಗೆ ಗುರಿ ಮಾಡಿದ್ದವು. ಅದಕ್ಕೂ ಹೆಚ್ಚು ನನ್ನ ಮೇಲಧಿಕಾರಿಗಳ ಮತ್ತು ರಾಜಕಾರಣಿಗಳ ಒತ್ತಡ.
ನಾನಂತೂ ನಿದ್ರಾಹಾರ ಬಿಟ್ಟು ಕಳ್ಳರ ಬೇಟೆಗೆ ಬಿದ್ದೆ. ಕಡೆಗೂ ನನ್ನ ಕಷ್ಟ ಫಲಿಸಿತು. ಕಳ್ಳರು ಸಿಕ್ಕಿಬಿದ್ದರು. ಅವರು ಮಾಡಿದ ಕಳ್ಲತನಗಳನ್ನೆಲ್ಲಾ ಒಪ್ಪಿದರು. ಆದರೇ ಆಶಾಳ ಮನೆಯ ಕಳ್ಳತನ ಮಾತ್ರ ತಾವು ಮಾಡಲಿಲ್ಲ ಎಂದರು. ಎಷ್ಟು ರೀತಿ ಕಿರುಕುಳ ಕೊಟ್ಟರೂ ಒಪ್ಪಲಿಲ್ಲ. ಆದರಿಂದ ಅವರು ಆ ಕೊಲೆ ಮಾಡಿರಲಕ್ಕಿಲ್ಲವೆಂದು ನಿರ್ಧರಿಸಿದೆ.


ಽಽಽಽಽಽಽಽಽಽಽಽಽಽಽಽಽಽಽಽ


ನಾನು ಯೋಚನೆಯಲ್ಲಿ ಬಿದ್ದೆ. ಇಲ್ಲಿಯವರೆಗೂ ಆಶಾಳ ಕೊಲೆ ಬರೀ ದರೋಡೆಯ ದೃಷ್ಟಿಯಲ್ಲಿ ನೋಡಿದ್ದೆ. ದರೋಡೆಯ ಮುಸುಗಲ್ಲಿ ಯಾರಾದರೂ ಅವಳ ಪ್ರಾಣ ತೆಗೆದಿದ್ದರೇ ಎನ್ನುವ ಸಂಶಯ ಬಂದು ನನ್ನ ಅನುಮಾನ ರಾಜೇಶ್ ನ ಮೇಲೆ ನೆಟ್ಟಿತು. ಆದರೇ ಆಶಾಳನ್ನ ಕೊಲ್ಲುವುದರಿಂದ ಅವನಿಗಾಗುವ ಲಾಭವೇನು ? ಅವಳೋ ಅನಾಥೆ. ಅವಳ ಹೆಸರಿನಲ್ಲಿ ಆಸ್ತಿ ಏನೂ ಇರಲಿಲ್ಲ. ಕಡೆಗೆ ಒಂದು ಪಾಲಸಿ ಕೂಡಾ ಇರಲಿಲ್ಲ. ಶೀಲದ ವಿಷಯದಲ್ಲಿ ಅವಳು ನಿಯತ್ತಿನವಳು. ರಾಜೇಶ್ ಅವಳನ್ನ ಕೊಲ್ಲಲು ಯಾವ ಕಾರಣವೂ ಸಿಕ್ಕಲಿಲ್ಲ. ಆದರೂ ರಾಜೇಶ್ ನನ್ನು ಕಸ್ಟಡಿಯೊಳಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದೆ.


ಕೊಲೆ ನಡೆದ ಸಮಯದಲ್ಲಿ ತಾನು ಊರಲ್ಲೇ ಇಲ್ಲವೆಂದು ರಾಜೇಶ್ ವಾದಿಸಿದ. ಅದಕ್ಕೆ ಸಾಕ್ಷ್ಯವಾಗಿ ತಾನು ಅವತ್ತಿನ ರಾತ್ರಿ ಕಾರಲ್ಲಿ ಹೋಗ್ತಾ ರಹದಾರಿಯ ಮೇಲೆ ಪಾವತಿ ಮಾಡಿದ ಸುಂಕದ ಕಟ್ಟೆಯ (ಟೋಲ್ ಗೇಟ್) ರಶೀದಿ ಗಳನ್ನು ತೋರಿಸಿದ. ಆ ರಶೀದಿಗಳಲ್ಲಿ ಆತನ ಕಾರಿನ ನಂಬರ್, ತಾರೀಕು, ಸಮಯ ಕೂಡಾ ಹಾಕಿರುತ್ತಾರೆ. ಅದರ ಪ್ರಕಾರ ಕೊಲೆ ನಡೆದ ರಾತ್ರಿ ಹನ್ನೊಂದು ಗಂಟೆಗೆ ರಾಜೇಶ್ ರಹದಾರಿಯ ಗೇಟ್ ದಾಟಿದ್ದ. ಮರುದಿನದ ಮಧ್ಯಾಹ್ನ ಎರಡು ಗಂಟೆಗೆ ವಾಪಸು ಬಂದಿದ್ದ. ಅದರಲ್ಲಿಯ ನಿಜಾಂಶ ತಿಳಿಯಲು ನಾನು ರಾಜೇಶ್ ನನ್ನು ನನ್ನ ಹಿಂದೆ ಟೋಲ್ ಗೇಟ್ ಗೆ ಕರೆದುಕೊಂಡು ಹೋದೆ.


ಆ ರಶೀದಿಗಳು ನಕಲಿ ಅಲ್ಲವೆಂದು ತಿಳಿದುಬಂತು. ಅವತ್ತು ಕಾರು ನಡೆಸಿದ್ದು ಸಹ ರಾಜೇಶ್ ಎಂದು ಅಲ್ಲಿಯ ಕೆಲಸದವನು ಗುರ್ತು ಹಿಡಿದ. ರಾಜೇಶ್ ನ ಕಾರು ಬಂಪರ್ ತಗುಲಿ ಅಲ್ಲಿ ನಿಲ್ಲಿಸಿದ ಸ್ಕೂಟರ್ ಹೆಡ್ ಲೈಟ್ ಒಡೆದರೇ ರಾಜೇಶ್ ನೂರು ರುಪಾಯಿಯ ನಷ್ಟ ಪರಿಹಾರ ಕೊಟ್ಟಿದ್ದ ಎಂದು ಹೇಳಿದ. ಆದರೂ ನಾನು ತೃಪ್ತಿ ಹೊಂದದೇ ಹೈದರಾಬಾದ್ ಗೆ ಹೋಗಿ ರಾಜೇಶ್ ತಂಗಿದ ಪ್ಯಾರಡೈಸ್ ಹೋಟೆಲ್ ನಲ್ಲಿ ವಿಚಾರಿಸಿದೆ. ಅಲ್ಲಿಯ ರಿಸೆಪ್ಷನಿಸ್ಟ್ ತಮ್ಮ ಪುಸ್ತಕ ನೋಡಿ ರಾಜೇಶ್ ಬೆಳೆಗ್ಗೆ ಏಳು ಗಂಟೆಗೆ ಕೋಣೆ ತೆಗೆದುಕೊಂಡಿದ್ದು, ಮಧ್ಯಾಹ್ನ ಫೋನ್ ಬಂದ ತಕ್ಷಣ ಖಾಲೀ ಮಾಡದನೆಂದು ಹೇಳಿದರು. ಅಲ್ಲಿ ರಾಜೇಶ್ ಗೆ ಮಜಬೂತಾದ ಸಾಕ್ಷ್ಯ ಇರುವುದರಿಂದ ಇನ್ನೇನೂ ಮಾಡಲಿಕ್ಕಾಗದೇ ಅವನನ್ನು ಬಿಟ್ಟುಬಿಟ್ಟೆ. ನಂತರ ಎಷ್ಟೋ ವರ್ಷಗಳ ವರೆಗೂ ಆಶಾಳ ಕೊಲೆ ಕೇಸು ಒಂದು ನಿಗೂಢವಾಗೇ ಉಳಿದುಹೋಯ್ತು. ಕೊನೆಗೆ ನಾನು ನಿವೃತ್ತಿ ಹೊಂದುವಾಗ ಆ ಫೈಲು ಶಾಶ್ವತವಾಗಿ ಮುಚ್ಚಲ್ಪಟ್ಟಿತ್ತು.
***
“ ಏನ್ಸಾರ್ ಆಲೋಚನೆ ಮಾಡ್ತಿದ್ದೀರಾ ? ಇನ್ನೂ ನನ್ನ ಮೇಲೆ ಸಂಶಯಾನಾ ? “ ರಾಜೇಶ್ ಮಾತಿಗೆ ವರ್ತಮಾನಕ್ಕೆ ಬಂದೆ.
ನಾನಿನ್ನೂ ವೀಲ್ ಚೇರಿನಲ್ಲಿದ್ದೆ. ರೈಲು ವೇಗವಾಗಿ ಮುಂದಕ್ಕೆ ಹೋಗುತ್ತಿತ್ತು. ಕತ್ತಲೆ ಹರಡುತ್ತಿತ್ತು. ಡಬ್ಬಿಯ ಬಾಗಿಲಿನಿಂದ ತಣ್ಣನ ಗಾಳಿ ನುಸುಳುತ್ತಿತ್ತು.
“ ತಪ್ಪಿತಸ್ತ ಸಿಗುವವರೆಗೂ ಪೋಲೀಸರ ದೃಷ್ಟಿಯಲ್ಲಿ ಎಲ್ಲರೂ ಅನುಮಾನಿತರೇ. ಆದರೇ ಈಗ ಅವನು ಸಿಕ್ಕರೂ ನಾನು ಮಾಡೋದೇನಿಲ್ಲ. ಯಾಕಂದರೇ ಆ ಫೈಲ್ ಶಾಶ್ವತವಾಗಿ ಬಂದಾಗಿದೆ. ಆದರೇ ಆ ಕೊಲೆಗಾರನನ್ನ ಹಿಡಿದು ಆಶಾಳ ಆತ್ಮಕ್ಕೆ ಶಾಂತಿ ಕೊಡಲಾರದೇ ಹೋದೆನಲ್ಲಾ ಅಂತ ನನಗೆ ದುಃಖವಾಗ್ತಿದೆ “ ಎಂದೆ.
“ನನಗೂ ಹಾಗೇ ಆಗ್ತಿದೆ . ಆ ದಿವಸದ ರಾತ್ರಿ ಆಶಾಳನ್ನ ಒಬ್ಬಂಟಿಗಳಾಗಿ ಬಿಟ್ಟುಹೋಗಿದ್ದಕ್ಕೆ ನನಗೆ ಸಹ ತುಂಬಾ ಬೇಜಾರಾಗ್ತಿದೆ “ ಎನ್ನುತ್ತಾ ರಾಜೇಶ್ ಕಣ್ಣು ಮುಚ್ಚಿ ತಲೆ ಹಿಂದಕ್ಕೆ ಬಗ್ಗಿಸಿದ.
ಆಗ ನನ್ನ ದೃಷ್ಟಿ ಅವನ ಕೊರಳಲ್ಲಿ ನೇತಾಡುತ್ತಿದ್ದ ಲಾಕೆಟ್ಟಿನ ಮೇಲೆ ಬಿತ್ತು. ಒಮ್ಮೆಲೇ ನನ್ನ ತಲೆಯಲ್ಲಿ ಸಾವಿರ ಜ್ವಾಲಾಮುಖಿಗಳು ಸಿಡಿದ ಹಾಗಾಯಿತು. ಅದು ನಾವು ಅವಳಿಗೆ ಮದುವೆಯಲ್ಲಿ ಕೊಟ್ಟ ಲಾಕೆಟ್ಟಾಗಿತ್ತು ! ಇಷ್ಟು ವರ್ಷಕಳೆದರೂ ನನಗದು ತುಂಬಾ ನೆನಪು. ಯಾಕಂದರೇ ಅದರ ಮೇಲಿನ
’ ಆಶಾ ’ ಹೆಸರಿನ ಆಂಗ್ಲ ಅಕ್ಷರಗಳ ವಿನ್ಯಾಸ ನಾನು ಸೂಚಿಸಿದ್ದೇ ಆಗಿತ್ತು. ’ ಎ ’ ಅಕ್ಷರದಲ್ಲಿ ಉಳಿದ ಮೂರೂ ಅಕ್ಷರಗಳು ಹುದುಗಿರುತ್ತವೆ.
ನನ್ನ ನೋಟವನ್ನೇ ಹಿಂಬಾಲಿಸಿದ ಅವನು ತನ್ನ ಕೊರಳಲ್ಲಿನ ಲಾಕೆಟ್ ನೋಡಿದ. ತಕ್ಷಣ ಅವನ ಮುಖ ಬಿಳಿಚಿತು. “ ಸಿಗಿಬಿದ್ದೆ ರಾಜೇಶ್ ! ಅಂದರೇ ಆಶಾಳನ್ನ ನೀನೇ ಕೊಂದದ್ದು ! ಕೊನೆಗೂ ನನ್ನ ಸಂಶಯಾನೇ ನಿಜ ಆಯ್ತು” ಆವೇಶದಿಂದ ಉಸಿರಿದೆ.ರಾಜೇಶ್ ಒಂದು ಕ್ಷಣ ತತ್ತರಿಸಿದ. ಅವನ ಮುಖದಲ್ಲಿಯ ಬಣ್ಣ ಒಂದು ಕ್ಷಣ ಬದಲಾಯಿತು. ನಂತರ ಗಹಗಹಿಸಿ ನಕ್ಕ.

“ ಹೌದು. ಆಶಾಳನ್ನ ನಾನೇ ಕೊಂದೆ. ಈಗ ವಿಷಯ ನಿಮಗೆ ಗೊತ್ತಾದರೂ ನೀವೇನು ಮಾಡಬಲ್ಲಿರಿ “ ಅಂದ ನಿರ್ಲಕ್ಷ್ಯವಾಗಿ.
ನನ್ನ ಕೋಪವನ್ನು ನಾನು ಬಲವಂತವಾಗಿ ನುಂಗಿದೆ.
“ ಆ ಅಮಾಯಕ ಹೆಂಗಸನ್ನ ಏಕೆ ಕೊಂದೆ ಹೇಳು. “ ಸಾಧ್ಯವಾದಷ್ಟು ಶಾಂತನಾಗಿ ಕೇಳಿದೆ.
“ ಅವಳು ತನ್ನ ಡೈರಿಯಲ್ಲಿ ಬರೆದಿಟ್ಟುಕೊಂಡ ಆ ರಹಸ್ಯವೇ ಅವಳ ಸಾವಿಗೆ ಕಾರಣ. “
“ ಯಾವ ರಹಸ್ಯ ?”
“ ನಾನು ಹಳೇ ಕಾರುಗಳ ಮಾರಾಟದ ಮುಸುಗಿನಲ್ಲಿ ಮಾದಕ ದ್ರವ್ಯಗಳ ವ್ಯಾಪಾರ ಮಾಡ್ತಾ ಇದ್ದೆ. ಕಾರಿನ ಸೀಟುಗಳ ಕೆಳಗೆ ಅವುಗಳನ್ನ ಅಡಗಿಸಿ ಹೈದರಾಬಾದಿಗೆ ಸರಬರಾಜು ಮಾಡುತ್ತಿದ್ದೆ. ಈ ವಿಷಯ ಆಶಾಳಿಗೆ ಗೊತ್ತಾಗದ ಹಾಗೆ ನಡೆಸುತ್ತಿದ್ದೆ. ಆದರೇ ಒಂದಿನ ಅದ್ಹೇಗೋ ಅವಳಿಗೆ ಗೊತ್ತಾಗಿಹೋಯಿತು. ಅವಳು ಅನಾಥೆಯಾಗಿ ಬೆಳೆದರೂ ತುಂಬಾ ನಿಯತ್ತಿನವಳು. ಸಮಾಜ ಸೇವೆಯ ಹೆಸರಿನಲ್ಲಿ ಗಂಡನನ್ನು ಸಹ ಜೈಲಿಗೆ ಕಳಿಸಬಲ್ಲ ನಿಯತ್ತು ಅವಳದು. ತಕ್ಷಣ ಆ ವ್ಯಾಪಾರ ನಿಲ್ಲಿಸದಿದ್ದರೇ ಪೋಲೀಸರಿಗೆ ವಿಷಯ ತಿಳಿಸುವುದಾಗಿ ನನಗೆ ಹೇಳಿದಳು. ನಿರ್ವಾಹವಿಲ್ಲದೇ ಅವಳ ಮೇಲೆ ಆಣೆ ಇಟ್ಟು ನಿಲ್ಲಿಸ್ತೇನೆ ಅಂತ ಪ್ರಮಾಣ ಮಾಡಿದಮೇಲೆ ಶಾಂತಿಸಿದಳು. ಆದರೇ ನನಗೆ ಆ ವ್ಯಾಪಾರ ನಿಲ್ಲಿಸಲು ಇಷ್ಟವಿರಲಿಲ್ಲ. ಹಾಗಾಗಿ ಸಮಯ ನೋಡಿ ಆಶಾಳನ್ನೇ ತೊಲಗಿಸಬೇಕೆಂದು ನಿಶ್ಚಯಿಸಿದೆ. ಆಗ ಸರಿಯಾಗಿ ಊರಲ್ಲಿ ದರೋಡೆಗಳು ಶುರುವಾದವು. ಅವುಗಳು ನಡೆಯುತ್ತಿರುವ ವಿಧಾನವನ್ನ ನೋಡಿದ ಮೇಲೆ ನನ್ನ ಮೆದುಳಿನಲ್ಲಿ ಒಂದು ಪ್ಲಾನ್ ರೂಪುಗೊಂಡಿತು. ಅದನ್ನೇ ಕಾರ್ಯಾಚರಣೆಗೆ ತಂದು ಆಶಾಳ ಅಡ್ಡಿ ತೊಲಗಿಸಿಕೊಂಡೆ. ದರೋಡೆಗಾಗಿ ಆಗಿರುವ ಕೊಲೆ ಎಂದು ಪೋಲೀಸ್ ನವರನ್ನು ತಪ್ಪು ಹಾದಿ ಹಿಡಿಸಿದೆ. “ ಅಂದ.


“ ಕೊಲೆ ಹೇಗೆ ಮಾಡಿದೆ ? ಅವತ್ತಿನ ಅರ್ಧರಾತ್ರಿ ನೀನು ಹೈದರಾಬಾದಿಗೆ ಹೋದ ದಾಖಲೆಗಳಿವೆಯಲ್ಲಾ ?
“ ಅವೆಲ್ಲಾ ನಾನು ಸೃಷ್ಟಿ ಮಾಡಿದ್ದೇ ! ಅವತ್ತಿನ ರಾತ್ರಿ ಕಾರಿನ ಡಿಕ್ಕಿಯಲ್ಲಿ ಒಂದು ಬೈಕನ್ನ ಇಟ್ಟುಕೊಂಡು ಹೈದರಾಬಾದಿಗೆ ಹೊರಟೆ. ನಾನೇ ಕಾರನ್ನು ನಡೆಸಿದೆನೆಂಬ ಸಾಕ್ಷ್ಯಕ್ಕಾಗಿ ಟೋಲ್ ಗೇಟ್ ಹತ್ತಿರ ಒಂದು ನಿಂತ ಸ್ಕೂಟರ್ ಗೆ ಹೊಡೆದು ನಷ್ಟ ಪರಿಹಾರ ಕೊಟ್ಟೆ. ಟೋಲ್ ಗೇಟಿನ ನಂತರ ಹೈವೇ ಮೇಲ್ ಒಂದು ಹಾಳುಬಿದ್ದ ಫ್ಯಾಕ್ಟರಿ ಇದೆಯಂತ ನನಗೆ ಮುಂಚೆನೇ ಗೊತ್ತಿತ್ತು. ಕಾರನ್ನಲ್ಲಿಟ್ಟು ಅದರ ಡಿಕ್ಕಿಯಿಂದ ಬೈಕನ್ನು ತೆಗೆದು ಅದರ ಮೇಲೆ ಊರಿಗೆ ಮರಳಿ ಬಂದೆ. ಹೆಲ್ಮೆಟ್ ಧರಿಸಿದ್ದರಿಂದ ಯಾರೂ ನನ್ನ ಗುರ್ತು ಹಿಡಿಯಲಿಲ್ಲ. ನಂತರ ದರೋಡೆಕೋರರು ಮಾಡುವ ಹಾಗೆ ನಮ್ಮ ನಾಯಿಗೆ ವಿಷದ ಬಿಸ್ಕತ್ತು ತಿನಿಸಿ ಕೊಂದೆ. ಸ್ವಲ್ಪ ತಳ್ಲಿದರೇ ಸಾಕು ಚಿಲಕ ತೆಕ್ಕೊಳ್ಳುವಹಾಗೆ ಮುಂಚೆನೇ ಏರ್ಪಾಡು ಮಾಡಿದ್ದೆ. ಅದರಿಂದ ಮನೆಯಲ್ಲಿ ಪ್ರವೇಶಿಸಿದೆ. ಆಗ ಎಚ್ಚರಗೊಂಡ ಆಶಾ ಆಶ್ಚರ್ಯದಿಂದ ಚೇತರಿಸಕೊಳ್ಳುವ ಮೊದಲೇ ಅವಳ ಕುತ್ತಿಗೆಗೆ ಪ್ಲಾಸ್ಟಿಕ್ ವೈರ್ ಬಿಗಿದು ಸಾಯಿಸಿದೆ. ಅವಳ ಒಡವೆ ಮತ್ತು ಹಣ ತೆಗೆದುಕೊಂಡು ಬಂದ ದಾರಿಯಲ್ಲೇ ನನ್ನ ಕಾರಿನ ಹತ್ತಿರ ಬಂದು ಸೇರಿಕೊಂಡೆ. ನಂತರ ಎಲ್ಲೂ ನಿಲ್ಲದ ಹಾಗೆ ವೇಗವಾಗಿ ಕಾರನ್ನು ಬಿಟ್ಟುಕೊಂಡು ಬಂದು ಸರಿಯಾದ ಸಮಯಕ್ಕೆ ಹೈದರಾಬಾದ್ ಸೇರಿದೆ “
ರಾಜೇಶ್ ಹೇಳಿದ್ದು ಕೇಳಿ ನನಗೆ ಕೋಪ ನೆತ್ತಿಗೇರಿತು.


“ ನಿನ್ನನ್ನು ಒಳ್ಳೆಯ ಹಾದಿಯಲ್ಲಿ ಇಡಲು ಹೊರಟ ನಿನ್ನ ಹೆಂಡತಿಯನ್ನೇ ನಂಬಿಸಿ ಮೋಸ ಮಾಡಿದೀಯಾ ! ನಿನ್ನ ಸ್ವಾರ್ಥಕ್ಕಾಗಿ ಆ ಅಬಲೆಯನ್ನ ಕೊಲೆ ಮಾಡಿದೀಯಾ ! ನೀನು ಮಾಡಿದ ಈ ಘೋರವಾದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ “ ಕಟುವಾಗಿ ಹೇಳಿದೆ.
ರಾಜೇಶ್ ಗಟ್ಟಿಯಾಗಿ ನಕ್ಕ. “ ನನ್ನನ್ನ್ಯಾರು ಶಿಕ್ಷಿಸ್ತಾರೆ ? ಕಾನೂನಾ ? ನೀವಾ ? ಕಾನೂನು ಯಾವಾಗ್ಲೋ ಸತ್ಹೋಗಿದೆ. ನಿಮ್ಮ ಕಾಲುಗಳು ಬಿದ್ಹೋಗಿವೆ. ವೀಲ್ ಚೇರ್ ಇಲ್ಲದೇ ಹೊರಗೆ ಸಹ ಹೊರಡಲಾರದ ನಿಮ್ಮನ್ನ ನಾನು ಈಗ ಹೊರಗೆ ತಳ್ಳಿ ಬಿಟ್ಟರೇ ನಿಮ್ಮನ್ನ ನೀವು ರಕ್ಷಿಕೊಳ್ಳಬಲ್ಲಿರಾ ? ನಿಮ್ಮ ಕಾಲ ಮೇಲೆ ನಿಲ್ಲಲಾದವರು ನೀವು ನನ್ನನ್ನು ಶಿಕ್ಷಿಸ್ತೀರಾ “ ಲೇವಡಿ ಮಾಡ್ತಾ ಅಂದ.
“ನನ್ನ ಕಾಲುಗಳು ನಿಸ್ಸತ್ತುವಾಗಿರಬಹುದು. ಆದರೇ ನನ್ನಕೈಗಳು ಇನ್ನೂ ಚೆನ್ನಾಗೇ ಇವೆ. ಪಿಸ್ತೋಲು ಚಲಾಯಿಸಲು ನನಗೆ ಒಂದು ಕೈ ಸಾಕು “
ನನ್ನ ಮಾತು ಕೇಳಿದ ರಾಜೇಶ್ ಬೆಚ್ಚಿಬಿದ್ದ. ಮಿಂಚಿನ ವೇಗದಲ್ಲಿ ನನ್ನ ಕೈಯಲ್ಲಿ ಬಂದ ಪಿಸ್ತೋಲನ್ನು ನೋಡಿ ಬೆರಗಾದ. ಭಯದಿಂದ ಅತ್ತಿತ್ತ ನೋಡಿದ.
“ ಕದಲಬೇಡ… ಒಂದಿಂಚು ಸರಿದರೂ ಸುಟ್ಟು ಬಿಡ್ತೇನೆ ಹುಷಾರ್. ನನ್ನ ಗುರಿಯ ಬಗ್ಗೆ ನಿನಗ್ಗೊತ್ತು. ಕಣ್ಣಿಗೆ ಕಾಣದಿದ್ದರೂ ಬರೀ ಸದ್ದಿನ ಮೇಲೆ ಸರಿಯಾಗಿ ಹೊಡೆಯಬಲ್ಲೆ. ಈ ಪಿಸ್ತೋಲಿನಿಂದ ಎಷ್ಟೋಜನ ಅಪರಾಧಿಗಳನ್ನ ಸುಟ್ಟು ಹಾಕಿದೀನಿ. ನೀನೆಷ್ಟರವನು ? ” ರಾಜೇಶ್ ನ ಎದೆಗೆ ಸರಿಯಾಗಿ ಗುರಿಯಿಟ್ಟು ಹೇಳಿದೆ. ಅವನಿಗೆ ಬೆವರಿಳಿಯಿತು. “ ಕಾನೂನನ್ನ ನಿಮ್ಮ ಕೈಯಲ್ಲಿ ತೆಗೆದುಕೊಳ್ಳಬೇಡಿ ಸಾರ್ ! ತಪ್ಪು ಒಪ್ಪಿದ್ದೇನಲ್ವಾ ! ಈಗ ನೀವು ಹೇಗೆ ಹೇಳಿದ್ರೆ ಹಾಗೆ ಮಾಡ್ತೇನೆ “ ಅಂದ ಕಳವಳದಿಂದ
“ನಾನೊಬ್ಬ ನಿವೃತ್ತ ಪೋಲೀಸ್ ಆಫೀಸರ್. ಮೇಲಾಗಿ ವಿಕಲಾಂಗ. ನಿನ್ನನ್ನು ಇಂಥ ಪರಿಸ್ಥಿಗಳಲ್ಲಿ ಕೊಲ್ಲಬೇಕಾಗಿ ಬಂತು ಅಂತ ಹೇಳಿದರೇ ನ್ಯಾಯಸ್ಥಾನ ನಂಬುತ್ತೆ. ಆದರೇ ನನಗೆ ನನ್ನ ಕೈಗಳಿಂದ ನಿನ್ನ ಕೊಲ್ಲಲು ಇಷ್ಟವಿಲ್ಲ. ಅದ ಕಾರಣ ನಿನಗೆ ತಪ್ಪಿಸಿಕೊಳ್ಳಲು ಒಂದು ಅವಕಾಶ ಕೊಡುತ್ತೇನೆ. ನಾನು ಮೂರು ಎಣಿಸಿವುದರೊಳಗೆ ರೈಲಿನಿಂದ ಹೊರಗಡೆ ಹಾರಿಬಿಡು. ನಿನ್ನ ಅದೃಷ್ಟ ಚೆನ್ನಾಗಿದ್ರೆ ಸ್ವಲ್ಪ ಗಾಯಗಳಿಂದ ಬದುಕಿಕೊಳ್ಳಬಹುದು. ಹಾಗೆ ಮಾಡದಿದ್ರೆ ಮಾತ್ರ ನಿನ್ನನ್ನು ಕೊಲ್ಲೋದು ಖಂಡಿತ “ ಎನ್ನುತ್ತ ಲೆಕ್ಕ ಶುರುಮಾಡಿದೆ.
“ಒಂದು” ನನ್ನ ಸ್ವರ ಆ ಡಬ್ಬಿಯಲ್ಲಿ ಪ್ರತಿಧ್ವನಿಸಿತು.
ರಾಜೇಶ್ ದಿಗಿಲಾಗಿ ಅತ್ತಿತ್ತ ನೋಡಿದ. ಹೊರಗಡೆ ಕತ್ತಲಾಗಿರುವುದರಿಂದ ಏನೂ ಕಾಣಲಿಲ್ಲ.
“ಎರಡು”
ನನ್ನ ಸ್ವರ ಗರ್ಜಿಸಿತು. ನಡುಗುತ್ತಾ ಎರಡಡಿ ಬಾಗಿಲಕಡೆಗೆ ಹಾಕಿದ. ನನ್ನ ವೀಲ್ ಚೈರ್ ಅವನ ಕಡೆಗೆ ಸರಿಸಿದೆ. ಕುದುರೆಯ ಮೇಲೆ ನನ್ನ ಕೈ ಬಿಗಿದುಕೊಳ್ಳುವುದು ಅವನು ಕಂಡ. ಬಾಗಿಲ ಕಡೆಗಲ್ಲದೇ ಮತ್ಯಾವ ಕಡೆಗೆ ತಾನು ಹೊರಟರೂ ನನ್ನ ಪಿಸ್ತೋಲು ಸಿಡಿಯುತ್ತದೆ ಎಂದು ಅವನಿಗೆ ಮನದಟ್ಟಾಯಿತು.
“ ಮೂರು”
ನಾನು ಗಟ್ಟಿಯಾಗಿ ಕಿರುಚುತ್ತಾ ಪಿಸ್ತೋಲನ್ನ ಹಾರಿಸಿದೆ. ಅದೇ ಕ್ಷಣದಲ್ಲಿ ರಾಜೇಶ್ ಹೊರಕ್ಕೆ ಹಾರಿದ. ಆ ಸಮಯದಲ್ಲಿ ರೈಲು ರಾವಿ ನದಿಯ ಸೇತುವೆಯ ಮೇಲೆ ಹೋಗುತ್ತಿದೆ ಅಂತ ನೋಡಿಕೊಳ್ಳಲಿಲ್ಲ. ಈ ಮಳೆಗಳಿಂದ ತುಂಬಿ ಹರಿಯುತ್ತಿದ್ದ ರಾವಿ ನದಿಯಲ್ಲಿ ಬಿದ್ದವನು ದಂಡೆಗೆ ಬಂದು ಬದುಕಿ ಉಳಿಯುವುದು ಅಸಾಧ್ಯ ಎನ್ನುವುದು ನಂಗೆ ಗೊತ್ತಿತ್ತು. ಒಂದುವೇಳೆ ಬದುಕಿದರೂ ಮೊಸಳೆಗಳಿಗೆ ಆಹಾರವಾಗುವುದು ತಥ್ಯ.
ನನ್ನ ಎನ್ ಕೌಂಟರ್ ಮುಗಿದಿತ್ತು. ಒಬ್ಬ ದುಷ್ಟನನ್ನು ಮುಗಿಸಲು ನೆರವಾದ ನನ್ನ ಪಿಸ್ತೋಲಿಗೆ ಮುತ್ತಿಟ್ಟೆ. ಸತ್ಯ ಹೇಳ್ಬೇಕಾದರೇ ಅದು ನಿಜವಾದ ಪಿಸ್ತೋಲಾಗಿರಲಿಲ್ಲ. ನನ್ನ ಮೊಮ್ಮಗನ ಸಲುವಾಗಿ ಜಮ್ಮುವಿನಲ್ಲಿ ಕೊಂಡ ಆಟಿಕೆ ಪಿಸ್ತೋಲು. ನೋಡಲಿಕ್ಕೆ ಥೇಟ್ ಪೋಲೀಸರ ಹತ್ತಿರವಿರುವ ಪಿಸ್ತೋಲ್ ತರ ಇರುತ್ತೆ. ಶಬ್ದದಿಂದ ಸಿಡಿಯುತ್ತದೆ. ಆದರೇ ಯಾರನ್ನೂ ಗಾಯಗೊಳಿಸುವುದಿಲ್ಲ. ಇವತ್ತು ಮಾತ್ರ ಅದು ಒಬ್ಬ ಕೊಲೆಗರನನ್ನು ಎನ್ ಕೌಂಟರ್ ಮಾಡಿ ಅವನ ತಪ್ಪಿಗೆ ತಕ್ಕ ಶಿಕ್ಷೆ ಕೊಟ್ಟಿತ್ತು.
***************************************************************

2 thoughts on “ತಕ್ಕ ಪಾಠ

  1. ತುಂಬಾ ಕುತೂಹಲಕಾರಿ ಕತೆ.ಕನ್ನಡಕ್ಕೆ ಭಾಷಾಂತರದ್ದಾದರೂ ಕನ್ನಡದ್ದೇ ಎನ್ನುವಂತೆ ಮಾಡಿದ ಭಾಷಾಂತರ.ಪಾಪಕ್ಕೆ ಎಂದಿದ್ದರೂ ಶಿಕ್ಷೆ ತಪ್ಪಿದ್ದಲ್ಲವೆಂದು ನಿರೂಪಿಸಿದ ಉತ್ಮಮ ಕಥೆ.

Leave a Reply

Back To Top