ಅಂಕಣ ಬರಹ

ಗುರುತುಗಳು

ಗುರುತುಗಳು
ಮೂಲ ಮಲೆಯಾಳ ; ಸೇತು ಕನ್ನಡಕ್ಕೆ : ಡಾ.ಅಶೋಕ್ ಕುಮಾರ್
ಪ್ರಕಾಶನ : ಕೇಂದ್ರಸಾಹಿತ್ಯ ಅಕಾಡೆಮಿ
ಪ್ರಕಟಣೆಯ ವರ್ಷ : ೨೦೧೧
ಬೆಲೆ : ರೂ.೨೦೦
ಪುಟಗಳು : ೩೪೬

ಇದು ಮುಖ್ಯವಾಗಿ ಸಿಂಗಲ್ ಪೇರೆಂಟ್ ಆಗಿರುವ ಒಬ್ಬ ತಾಯಿ ಮತ್ತು ಮಗಳ ಸುತ್ತ ಹೆಣೆಯಲಾದ ಕತೆ.  ತಾಳ ತಪ್ಪಿದ ವೈವಾಹಿಕ ಜೀವನದಿಂದ ನೊಂದು ಸ್ವತಂತ್ರವಾಗಿ ಬಾಳುತ್ತೇನೆಂದು ಸಬರ್‌ವಾಲ್ ಕುಟುಂಬವು ನಡೆಸುತ್ತಿರುವ ಒಂದು ಕಂಪೆನಿಯ ಹೆಚ್.ಆರ್.ಮುಖ್ಯಸ್ಥೆಯಾಗಿ ಸೇರುತ್ತಾಳೆ ಪ್ರಿಯಂವದಾ ಮೆನೋನ್.  ಬುದ್ಧಿವಂತೆಯಾದ ಆಕೆ ಪರಿಶ್ರಮ ಪಟ್ಟು ದುಡಿಯುವವಳು.   ತನ್ನ ಪ್ರೀತಿಯ ಮಗಳು ನೀತುವನ್ನು ಎಂ.ಬಿ.ಎ.ಓದಿಸುತ್ತಿದ್ದಾಳೆ. ಅಪ್ಪನ ಪ್ರೀತಿಯೆಂದರೆ ಏನೆಂದು ತಿಳಿಯದ ನೀತು ವಾಚಾಳಿಯಾಗಿ ಬೆಳೆಯುತ್ತಾಳೆ ಒಮ್ಮೆ ತನ್ನ ಉದ್ಯೋಗದ ಒಂದು ಭಾಗವಾಗಿ ಗೋವಾದಲ್ಲಿ ನಡೆಯುವ ಉದ್ಯಮಿಗಳ ಸೆಮಿನಾರಿನಲ್ಲಿ ಪ್ರಿಯಂವದಾ ಪ್ರಬಂಧ ಮಂಡಿಸುತ್ತಾಳೆ. ಅಲ್ಲಿ ಆಕೆ ಬಹಳ ಹಿಂದಿನಿಂದಲೂ ತನ್ನ ಗುರುವೆಂದು ಭಾವಿಸಿ ಗೌರವಿಸುತ್ತಿದ್ದ ಡಾ.ರಾಯ್ ಚೌಧುರಿಯನ್ನು ಭೇಟಿಯಾಗುತ್ತಾಳೆ.  ಮಾತನಾಡುತ್ತ ಆತನಿಗೆ ಮಾನಸಿಕವಾಗಿ ತುಂಬ ಹತ್ತಿರವಾಗುತ್ತಾಳೆ. ಅವರ ಸಂಬಂಧ ಊರಿಗೆ ಮರಳಿದ ನಂತರವೂ ಮುಂದುವರಿಯುತ್ತದೆ.  ಆದರೆ ಆತನೊಂದಿಗಿನ ಅಮ್ಮನ ಈ ಆತ್ಮೀಯತೆ ನೀತುವಿಗೆ ಇಷ್ಟವಾಗುವುದಿಲ್ಲ. ನೀತುವಿನ ತಿರಸ್ಕಾರವು ಪ್ರಿಯಂವದೆಯ ಔದ್ಯೋಗಿಕ ಮತ್ತು ಕೌಟುಂಬಿಕ ಜೀವನದ ಸಂತೋಷಕ್ಕೆ ಭಂಗ ತರುತ್ತದೆ.  ತನ್ನ ಮನೆಗೆ ಬರುವ ನೀತುವಿನ ಗೆಳತಿಯರ ಮೂಲಕ ಅವಳ ಜತೆಗೆ ರಾಜಿ ಮಾಡಿಕೊಳ್ಳಲು ಪ್ರಿಯಂವದಾ ಪ್ರಯತ್ನಿಸುತ್ತಾಳೆ.  ನೀತು ಹರಿನಾರಾಯಣನೆಂಬ ತನ್ನ ಬುದ್ಧಿಜೀವಿ ಸಹಪಾಠಿಯ ಸ್ನೇಹ ಬೆಳೆಸುತ್ತಾಳೆ.  ಗೆಳತಿಯರು ಬೇಡವೆಂದು ಉಪದೇಶಿಸಿದರೂ ಉಪಯೋಗವಾಗುವುದಿಲ್ಲ. ನೀತು ಅಮ್ಮನನ್ನು ನಿರ್ಲಕ್ಷಿಸಿ ವಿದೇಶದಲ್ಲಿದ್ದ ತನ್ನ ಅಪ್ಪ ರಂಜಿತ್‌ಗೆ ಹತ್ತಿರವಾಗಲು ಪ್ರಯತ್ನಿಸುತ್ತಾಳೆ. ಹತಾಶಳಾದ ಪ್ರಿಯಂವದಾಳ ಕನಸುಗಳಲ್ಲಿ ಅವಳು ಗೋವಾದಲ್ಲಿ ಕಂಡ ಪಾತ್ರಗಳು ಮತ್ತೆ ಮತ್ತೆ ಬರುತ್ತವೆ.

  ತನ್ನ ಮನೆಯಲ್ಲಿ ಸಹಾಯಕ್ಕೆಂದು ಪ್ರಿಯಂವದಾ ನಿವೇದಿತಾ ಎಂಬ ಪರ್ಸನಲ್ ಮ್ಯಾನೇಜರ್‌ನ್ನು ನೇಮಿಸಿಕೊಳ್ಳುತ್ತಾಳೆ. ರೇವತಿ ಎಂಬ ನಿಜನಾಮಧೇಯವುಳ್ಳ ಆಕೆಯನ್ನು ಕಂಪೆನಿಯಲ್ಲೂ ತನ್ನ ಜೂನಿಯರಾಗಿ ನೇಮಿಸಿಕೊಳ್ಳುತ್ತಾಳೆ. ರೇವತಿಯ ಜತೆ ಸೇರಿ ಪ್ರಿಯಂವದಾ ಕಂಪೆನಿಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಾಳೆ. ಮಗಳ ಬಗ್ಗೆ ಚಿಂತೆಯಿಂದಾಗಿ ಕೆಲಸ ಮಾಡಲಾಗದೆ ಕಂಪೆನಿಯಿಂದ ದೀರ್ಘಕಾಲದ ರಜಕ್ಕಾಗಿ ಅರ್ಜಿ ಹಾಕುತ್ತಾಳೆ. ಇದರೆಡೆಯಲ್ಲಿ  ನೀತುವಿನ ಮನಃಪರಿವರ್ತನೆಯಾಗಿ  ಅವರಿಬ್ಬರೂ ಊರಲ್ಲಿ ನೆಲೆಸಲು ಬರುತ್ತಾರೆ.  ಉಳಿದದ್ದನ್ನು ಓದುಗರ ಕಲ್ಪನೆಗೆ ಬಿಟ್ಟು ಕಾದಂಬರಿ ಇಲ್ಲಿಗೆ ಮುಕ್ತಾಯವಾಗುತ್ತದೆ.

ಕಾದಂಬರಿಯಲ್ಲಿ ಅಲ್ಲಲ್ಲಿ ಬರುವ ಮಳೆಗೆ ಅತೀವ ಸೌಂದರ್ಯವೂ ಆಕರ್ಷಣೆಯೂ ಇದೆ.  ಬದುಕಿನ ಸಂಕೀರ್ಣ ಸಮಸ್ಯೆಗಳು, ಮನುಷ್ಯ ಸಂಬಂಧಗಳ ವಾಸ್ತವ ಸತ್ಯ ಹಾಗೂ ಟೊಳ್ಳುತನ, ಸ್ವಪ್ನ ಸದೃಶ ನಿರೂಪಣೆಯೊಂದಿಗೆ  ಇಲ್ಲಿ ತಾಯಿ-ಮಗಳ ಬದುಕು ಚಿತ್ರಣಗೊಂಡಿದೆ. ಅದಮ್ಯವೂ ಸಂಕೀರ್ಣವೂ ಆದ ಮನುಷ್ಯ ಮನಸ್ಸು ಅನುಭವಿಸುವ ಸಂಕಟಗಳಿಗೆ ಸರಳ ಉತ್ತರಗಳನ್ನು ಪಡೆಯುವ ಬಗೆಯನ್ನು ಕಾದಂಬರಿ ಹೇಳುತ್ತದೆ.  ಒಂದು ಊರಿನ ಎಲ್ಲಾ ಸುಖ-ದುಃಖಗಳನ್ನು ಕಪ್ಪು-ಬಿಳುಪುಗಳೊಂದಿಗೆ ಶರೀರದ ಮೇಲೆ ಗುರುತುಗಳಾಗಿಸಿದ ಹಿಮ-ಧ್ರುವಗಳಲ್ಲಿ ಏಕಾಂತ ಧ್ಯಾನದಲ್ಲಿ ಮುಳುಗಿದ ಪೆಂಗ್ವಿನ್‌ಗಳು ಪೂರ್ವಜನ್ಮದಲ್ಲಿ ವಿಧವೆಗಳಾಗಿದ್ದವೆಂದೂ ಅವುಗಳ ಕುಲದಲ್ಲಿ ಹುಟ್ಟಿದ ಪ್ರಿಯಂವದಾಳ ಹಾಗೂ ಮಗಳು ನೀತುವಿನ ಕತೆಗಳನ್ನು ಪ್ರಕೃತಿಯೊಂದಿಗೆ ಮಿಳಿತಗೊಳಿಸಿ ಸೇತು ಅವರು ಮನೋಜ್ಞವಾಗಿ ಪ್ರಸ್ತುತಗೊಳಿಸಿದ್ದಾರೆ.

 ನಗರೀಕರಣಕ್ಕೊಳಗಾದ ಬದುಕಿನಲ್ಲಿ ಮನುಷ್ಯ ಮನಸ್ಸುಗಳ ಆತಂಕ, ತಲ್ಲಣ,  ಕೌಟುಂಬಿಕ ಬದುಕಿನ ಸಂಘರ್ಷಗಳು,ಹಾಗೂ ಎಡೆಬಿಡದೆ ಅನುಭವಿಸುವ ನೋವು ಈ ಕಾದಂಬರಿಯಲ್ಲಿವೆ.  ಭೌತಿಕ ಜಗತ್ತಿನ ಆಂತರಿಕ ಸಂಘರ್ಷಗಳ ನಡುವೆ  ವ್ಯಕ್ತಿಯ ಮನಸ್ಸುಗಳು ಸೃಷ್ಟಿಸುವ ವಿಚಿತ್ರ ಅನುಭವಗಳು ಓದುಗರಲ್ಲಿ ಹೊಸ ಕುತೂಹಲವನ್ನು ಹುಟ್ಟಿಸುತ್ತವೆ.  ಮೂಲ ಮಲೆಯಾಳದ ಸುಭಗ ಶೈಲಿಗೆ ನಿಷ್ಠರಾಗಿ ಅಶೋಕ ಕುಮಾರ್ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

*************************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

3 thoughts on “

  1. ಧನ್ಯವಾದಗಳು ಮೇಡಮ್,                                 ಕತೆಯೊಳಗಣ ಕತೆ, ಮುನಿಸ್ವಾಮಿಯ ಬದುಕು, ಆರಾಧನಾ ಪಾತ್ರರ ಬಗೆಗಿನ ವಿಶ್ಲೇಷಣೆಗಳು, ಗ್ರಾಮೀಣ ಬದುಕಿನ ಹಿಂದಿನ ಇಂದಿನ ರಸ ರಸಹೀನತೆಗಳೂ ಕಾದಂಬರಿಯಲ್ಲಿ ಹಾಸುಹೊಕ್ಕಾಗಿವೆ.

Leave a Reply

Back To Top