ವಾರದ ಕತೆ

ಧ್ರುವ ತಾರೆ

ವಿನುತಾ ಹಂಚಿನಮನಿ

.

DUQUE DE CAXIAS,(BRAZIL),MAY,20,2020:
doctors take care of patients with covid-19 and an intensive care unit (ICU) at hospital são josé specialized in the treatment of covid-19

ಸಂಜೆ ನಾಲ್ಕು ಗಂಟೆಯ ಸಮಯ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯಲ್ಲಿ ಗದ್ದಲ ಸ್ವಲ್ಪ ಕಡಿಮೆಯಾಗಿದೆ. ಈಗ ಸಾಧಾರಣವಿರುವ ದವಾಖಾನೆಗೆ ಮಹತ್ವ ಬಂದು, ಕೊರೊನಾ ರೋಗಿಗಳಿಂದ ಯಾವಾಗಲೂ ಗಿಜಿಗುಟ್ಟುತ್ತಿದೆ. ರೋಗಿಗಳನ್ನು ಬಿಟ್ರೆ ಬೇರೆ ಯಾರೂ ಇಲ್ಲಿಗೆ ಬರುವ ಧೈರ್ಯ ಮಾಡುವುದಿಲ್ಲ. ಅಲ್ಲಿಯೇ ಒದಗಿಸುವ ಊಟದ ಸಮಯ ಮುಗಿದಿದ್ದರಿಂದ ನರ್ಸ್, ಆಯಾ ಓಡಾಟ ಕೂಡ ಕಡಿಮೆಯಾಗಿದೆ. ಡಾಕ್ಟರ್ ಇನ್ನು ಬರುವುದು ರಾತ್ರಿಗೇ.  ಹೊರಗಡೆ ಸಿಟಿಯಲ್ಲಿ ಲಾಕ್ಡೌನ್ ಇದ್ದುದರಿಂದ ಜನಸಂಚಾರವಿಲ್ಲ. ವಾಹನಗಳ ಸದ್ದು ಕಡಿಮೆಯೇ! ಅಲ್ಲೊಂದು-ಇಲ್ಲೊಂದು ಪಿಸುಮಾತಿನ ಶಬ್ದ ಮತ್ತು ಡ್ಯೂಟಿ ಮುಗಿಸಿ ಹೋಗುವ ತರಾತುರಿಯಲ್ಲಿ ಇರುವ ನರ್ಸ್ ಆಯಾಗಳ ಹೆಜ್ಜೆಯ ಮತ್ತು ಟಕ್ ಟಕ್ ಅನ್ನುವ ಬೂಟಿನ ಸದ್ದು ಬಿಟ್ಟರೆ ಬೇರೆ ಎಲ್ಲ ಶಾಂತವಾಗಿದೆ. ಆದರೆ ಆಸ್ಪತ್ರೆಯಲ್ಲಿ ಮಲಗಿದವರ ಎದೆಯ ಬಡಿತ ಮತ್ತು ತಲೆಯಲ್ಲಿ ಸುತ್ತುವ ನಾನಾ ನಮೂನೆಯ ಬಿರುಗಾಳಿಯಂತಹ ವಿಚಾರಗಳಿಗೆ ಎಲ್ಲಿಯ ಪ್ರತಿಬಂಧ? ಈ ಶಾಂತಿಯನ್ನು ರಣಶಾಂತಿ ಮತ್ತು ಮೌನವನ್ನು ಸ್ಮಶಾನ ಮೌನವೆನ್ನಬಹುದು.

 ಶಕುಂತಲಾ ಆಸ್ಪತ್ರೆಯ ಮೊದಲ ಮಹಡಿಯ ಸೆಮಿ ಸ್ಪೆಷಲ್ ರೂಮಿನಲ್ಲಿ ಕೋವಿಡ್ ಪೇಷಂಟ್ ರಂಗಣ್ಣ ತನ್ನ ಕಾಟ ಮೇಲೆ ಮಲಗಿ ವಿಚಾರ ಮಂಥನದಲ್ಲಿ ಮುಳುಗಿದ್ದಾನೆ. ಇಲ್ಲಿಗೆ ಬಂದು ಸುಮಾರು ಒಂದು ವಾರ ಆಗಿರಬಹುದು. ದಿನದ ಲೆಕ್ಕ ಯಾರಿಗಿದೆ? ಜೀವಕ್ಕೆ ಲೆಕ್ಕವಿಲ್ಲದಾಗ?…. ರೂಮಿನ ಅರ್ಧಭಾಗ ವ್ಯಾಪಿಸಿಕೊಂಡ ಕಾಟ್ ಮೇಲೆ ಮಲಗಿ ಹೊರ ಜಗತ್ತಿನ ಸಂಪರ್ಕವೇ ಇಲ್ಲವಾಗಿದೆ. ತಲೆಮೇಲೆ  ತಿರುಗುತ್ತಿರುವ ಫ್ಯಾನ್ ಸಪ್ಪಳ ಮಾಡುತ್ತ ತನ್ನ ಸೇವೆಯನ್ನು ಪ್ರಚಾರ ಮಾಡುತ್ತಿದೆ……. ಮುಖದ ಮೇಲೆ ಫಿಕ್ಸ್ ಮಾಡಿದ ವೆಂಟಿಲೇಟರ್ ನಿಶಬ್ದ ಕಾರ್ಯತತ್ಪರ…….. ಪಕ್ಕದಲ್ಲಿ ನಿಲ್ಲಿಸಿದ ಕಬ್ಬಿಣದ ಸ್ಟ್ಯಾಂಡಗೆ ಬಾಟ್ಲಿ ಜೋಡಿಸಿ ಅದರಿಂದ ಹೊರಟ ಇನ್ನೊಂದು ತುದಿ ರಂಗಣ್ಣನ ಎಡಗೈಯಲ್ಲಿ ಸೂಜಿಯ ಮುಖಾಂತರ ಹೊಕ್ಕಿದೆ……. ಅಲ್ಲಿಂದ ಬರುತ್ತಿರುವ ಔಷಧ, ವೆಂಟಿಲೇಟರ್ ನಿಂದ ಪೂರೈಕೆಯಾಗುತ್ತಿರುವ ಪ್ರಾಣವಾಯು ತನ್ನನ್ನು ಜೀವದಿಂದ ಇಟ್ಟಿವೆ ಎನ್ನುವುದು ಅವನಿಗೆ ಗೊತ್ತು. ಇಲ್ಲಿಗೆ ಬರುವ ಮೊದಲು ಒಂದು ವಾರ ಧಾರವಾಡದ ಇಳಕಲ್ ಆಸ್ಪತ್ರೆಯಲ್ಲಿ ಇದ್ದವ, ಅಲ್ಲಿ ಆಕ್ಸಿಜನ್ ಸ್ಟಾಕ್ ಇಲ್ಲ ಅಂತ  ಈ ದವಾಖಾನೆಗೆ ಬರಬೇಕಾಯಿತು. ಉಳಿವಿನ ಬಗ್ಗೆ ರಂಗಣ್ಣನಿಗೆ ಯಾವಾಗ ಭರವಸೆ ಇಲ್ಲದಾಯಿತೊ ಆ ಕ್ಷಣದಿಂದ ಅವನ ಮನಸ್ಸಿನಲ್ಲಿ ವಿಚಾರಗಳ ಯುದ್ಧ ನಡೆದಿದೆ.

“ಅಲ್ಲಾ! ನನಗೆ ಯಾಕೆ ಈ ರೋಗ ಬಂತು? ಇಷ್ಟು ವರ್ಷ ಡಯಾಬಿಟಸ್ ಅನುಭವಿಸಿದ್ದು ಬೇಕಾದಷ್ಟು ಆಗಿರುವಾಗ! ನಾನೆಷ್ಟು ಕಾಳಜಿ ತಗೆದುಕೊಂಡಿದ್ದೆ, ಮದ್ದಣ್ಣ ತೀರಿಹೋದಾಗ! ದೂರದಿಂದ ನೋಡಿದ್ದು ಬಿಟ್ಟರೆ ಸಂಪರ್ಕ ಎಲ್ಲಿ ಬಂದಿತ್ತು? ಸ್ಮಶಾನಕ್ಕೆ ಹೋಗಿರಲಿಲ್ಲ. ಅವನು ಸತ್ತದ್ದು ಕೊವಿಡ್ ನಿಂದ ಅಂತ ಗೊತ್ತಾದ ಕೂಡಲೇ ಎಲ್ಲರೂ ಅಲ್ಲಲ್ಲೇ ಸ್ಟ್ಯಾಚು ತರ ಆದರಲ್ಲ! ಸ್ವಂತ ಅತ್ತೆಯ ಮಗ, ಒಬ್ಬಂಟಿ ಬೇರೆ… ಇಂತಹ ಸಮಯದೊಳಗೆ ನಾನಿದ್ದು ಏನು ಉಪಯೋಗ ಆಯ್ತು! ನನ್ನ ಹಂಗ ರಾಘು ಮತ್ತು ಪರಿಮಳರಿಗೆ ಈ ರೋಗ ಅಮರಿಕೊಂಡಿತ್ತಲ್ಲಾ!  ರಾಘುನಿಂದ ನನಗೆ ಬಂದಿರಬಹುದು …..”.

ಹೀಗೆ ಸಾಗಿತ್ತು ವಿಚಾರಧಾರೆ. ಯಾರನ್ನೂ ಭೆಟ್ಟಿಯಾಗುವ ಹಂಗಿಲ್ಲ,  ಮನಸ್ಸಿನ ಮಾತನ್ನು ಹೇಳಿ ಹಗುರ ಮಾಡಿಕೊಳ್ಳುವ ಹಂಗಿಲ್ಲಾ ಅನ್ನುವ ಬೇಸರ!

 ರಂಗಣ್ಣನ ತಮ್ಮ ರಾಘು ಹುಬ್ಬಳ್ಳಿಯೊಳಗ ತಮ್ಮ ಸೋದರ ಅತ್ತೆಯ ಮಗ ಮದ್ದಣ್ಣನ ಒಟ್ಟಿಗೆ ಇರುತ್ತಿದ್ದ. ಇಬ್ಬರೂ ಬ್ರಹ್ಮಚಾರಿಗಳು. ಒಬ್ಬರಿಗೊಬ್ಬರು ಆಸರೆಯಾಗಿದ್ದರು. ಯಾವಾಗ ಮದ್ದಣ್ಣ ಸಾವಿಗೆ ಈಡಾದನೋ, ಒಮ್ಮೆಲೆ ಎಲ್ಲರ ಮನಸ್ಸಿನಲ್ಲಿ ನಡುಕ ಶುರುವಾಗಿತ್ತು. ಮದ್ದಣ್ಣನಿಗೆ ಅದು ಹೇಗೆ ಬಂದಿತು? ಯಾರಿಗೂ ಗೊತ್ತಿಲ್ಲ….. ಆಸ್ಪತ್ರೆ  ತಲುಪುವದರೊಳಗೆ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನೊಟ್ಟಿಗೆ ಇರುತ್ತಿದ್ದ ರಾಘುನಿಗೆ  ತಾಗಿರಬೇಕು, ಗೊತ್ತಾಗಿರಲಿಲ್ಲ.

 ಅವನಿಗೆ ಕ್ರಿಯಾ ಕರ್ಮ ಮಾಡಿ ಅಣ್ಣ ರಂಗಣ್ಣನೊಟ್ಟಿಗೆ ಕೆಲವು ದಿನ ಇರುವುದರಲ್ಲಿಯೇ ರಾಘುನಿಗೆ ಕರುನಾ ಪಾಸಿಟಿವ್ ಅಂತ ಗೊತ್ತಾಯ್ತು. ಅದರೊಟ್ಟಿಗೆ ಇಲ್ಲಿರುವ ರಂಗಣ್ಣನಿಗೆ ಕೂಡ. ಮೂವರು ಆಸ್ಪತ್ರೆಗೆ ದಾಖಲಾದರು. ಒಂದು ವಾರದಲ್ಲಿ ಅವರಿಬ್ಬರು ಆರಾಮಾಗಿ ಮನೆಗೆ ಹೋದರು. ರಂಗಣ್ಣನಿಗೆ ರೋಗ ಉಲ್ಬಣಿಸ ತೊಡಗಿತು. ಧಾರವಾಡದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗದ ಕಾರಣ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಗೆ ಸೇರಿಸಬೇಕಾಗಿ ಬಂತು. ಕೆಲವೊಮ್ಮೆ ಆಕ್ಸಿಜನ್ ಸಪ್ಲೈ ತೆಗೆಯುವುದು ಮತ್ತೆ ಉಸಿರಾಟದ ತೊಂದರೆ ಕಾಣಿಸಿದ ಕೂಡಲೇ ಮತ್ತೆ ಹಚ್ಚುವುದು ನಡೆದೇ ಇತ್ತು. ದಿನಕಳೆದಂತೆ ರೋಗ ಉಲ್ಬಣಿಸಿತ್ತು. ತನ್ನ ಮನಸ್ಸಿನಲ್ಲಿ ನಡೆಯುತ್ತಿರುವ ವಿಚಾರಗಳನ್ನು ಯಾರಿಗೆ ಹೇಳಿಕೊಳ್ಳಬೇಕು?

 ಜೀವನಚಕ್ರ ಕಣ್ಣುಮುಂದೆ ಬರತೊಡಗಿತು.

ನಾ ಎಷ್ಟು ಸಂತೋಷದಿಂದ ಇದ್ದೆ ಸಣ್ಣವನಿರುವಾಗ ದೊಡ್ಡ ಮನೆತನ, ಕೂಡುಕುಟುಂಬ ಯಾವುದಕ್ಕೂ ಕೊರತೆ ಇಲ್ಲದ ಜೀವನ. ಮನಿಯೊಳಗ ಅಪ್ಪ-ಅವ್ವ ಅಕ್ಕ-ತಮ್ಮ ಮತ್ತೆ ನಾಲ್ಕು ಜನ ತಂಗಿಯರು. ಸಹಜೀವನ, ಸಹಕಾರ, ಹಂಚಿಕೊಳ್ಳುವುದು ಸಾಮಾನ್ಯವಿತ್ತು. ಯಾರ್ದನ್ನು ಯಾರೋ ಉಪಯೋಗಿಸಿದರೂ ಬೇಸರ ಇಲ್ಲ, ಪ್ರತಿಬಂಧ ಇಲ್ಲ ಅದರೊಳಗ ನನಗ ಅಕ್ಕ ತಮ್ಮ ತಂಗಿಯರು ಅಂದರ ಪ್ರಾಣ. ಅವರಿಗೆ ಸಿಟ್ಟು ಬರದಂಗ ಬ್ಯಾಸರವಾಗದಂಗ ಇರೋದು ನನಗೆ ಸೇರ್ತಿತ್ತು. ಹೀಗಾಗಿ ‘ಭೋಳೇಶಂಕರ’ ಅಂತ ಬಿರುದು ಸಿಕ್ಕಿತ್ತು. ಆರು ವರ್ಷ ಕಳೆದ ಮೇಲೆ ಸಾಲಿಗೆ ಸೇರಿಸಿದರು. ಹಳ್ಳಿಯೊಳಗಿನ ಸಾಲಿ, ಮತ್ತ ಪರಿಚಯದ ಮಾಸ್ತರರು. ಕೆಲವರು ಗೆಳೆಯರು ಹೆಚ್ಚಾದರೂ ಹೆಚ್ಚಿನ ಬದಲಾವಣೆ ಅನ್ನಿಸಲಿಲ್ಲ. ಆದರೆ ಸರಿಯಾದ ಸಮಯಕ್ಕ ಸಾಲಿಗೆ ಹೋಗಿ ಬರುವುದು ಸ್ವಲ್ಪ ಕಠಿಣ ಆಗ್ತಿತ್ತು. ಯಾಕಂದರೆ ಆಟ ಆಡಲಿಕ್ಕೆ ವೇಳೆ ಹೆಚ್ಚು ಸಿಗುತ್ತಿರಲಿಲ್ಲ. ಒಂದು ಮಾತ್ರ ಖುಷಿ ಕೊಟ್ಟಿದ್ದು ನನ್ನ ಗೆಳೆಯರೆಲ್ಲಾ ಅದs ಸಾಲಿವಳಗ ಇದ್ದರು. ಕೆಲವರು ಕ್ಲಾಸಿನೊಳಗೆ ಮತ್ತ  ಕೆಲವರು ಸಾಲಿವಳಗ. ಹಿಂಗಾಗಿ ನಮ್ಮ ಆಟ ಮಸ್ತಿ ಅಲ್ಲಿನೂ ಸುರುವಾಯ್ತು. ಸಾಲಿ ಮುಗಿಸಿ ಮನೆಗೆ ಬಂದ ಕೂಡಲೇ ಅಭ್ಯಾಸಕ್ಕಿಂತ ಊಟ ತಿಂಡಿಯ ಕಡೆಗೇ ಲಕ್ಷ್ಯ. ಮಾಸ್ತರೆಲ್ಲ ಕಾಕಾ, ಮಾಮಾ, ಚಿಕ್ಕಪ್ಪ ಅಂತ ಸೋದರಸಂಬಂಧಿ ಇದ್ದದ್ದಕ್ಕ ಹೆದರಿಕೆ ಇರಲಿಲ್ಲ.

ಶನಿವಾರ ಅರ್ಧದಿನದ ಸಾಲಿ. ಉಳಿದರ್ಧ ದಿನ ಮುಂದಿನ ವಾರಕ್ಕೆ ಶಾಲೆಗೆ ಬೇಕಾಗುವ ಅರಿವೆ -ಬಟ್ಟೆ ನೋಡಿಕೊಳ್ಳುವುದು ಇಂತಹ ಕೆಲಸ.  ರವಿವಾರ ಮಾತ್ರ ಹಿಡಿಯುವವರು ಇದ್ದಿಲ್ಲ. ಮುಂಜಾನೆ ನದಿಗೆ ಹೋಗಿ ಸ್ನಾನ ಮಾಡಿ, ಸಾಕು ಅನ್ನಿಸುವಷ್ಟು ಈಸಿ, ಬಿಸಿಲು ಏರಿದ ಕೂಡಲೇ ಕಲ್ಮೇಶ್ವರ ಗುಡಿಗೆ ಹೋಗುವುದು. ಅಲ್ಲೆ ಸೀನ, ವೆಂಕಟ, ನಾನಿ ಯಾರಾದರೊಬ್ಬರು ಅವಲಕ್ಕಿ ಹಣ್ಣು ತಂದಿರುತ್ತಿದ್ದರು ಅದನ್ನು ತಿಂದು ಮತ್ತೆ ಆಟ. ಮಾಸ್ತರರ ಅಣಕ ಮಾಡಿ ತೋರಿಸುವುದು, ಹುಡುಗಿಯರ ಬಗ್ಗೆ ಕಾಮೆಂಟ್ ಮಾಡುವುದು ನಡೀತಿತ್ತು. ನಮಗೆಲ್ಲ ಸಿನಿಮಾ ಮತ್ತ ನಾಟಕದ  ನಾಟಕದ ಹುಚ್ಚು ಭಾಳಿತ್ತು. ಆವಾಗ ಬ್ಯಾರೆ ಏನೂ ಮನರಂಜನೆ ಇರುತ್ತಿರಲಿಲ್ಲ. ನೋಡಿ ಬಂದ ಸಿನೆಮಾದ್ದು ಕೆಲವು ಸೀನು ನಾವs ಅಭಿನಯ ಮಾಡುತ್ತಿದ್ದೆವು. ಹೆಚ್ಚಾಗಿ ಭಕ್ತ ಕನಕದಾಸ, ಸತ್ಯಹರಿಶ್ಚಂದ್ರ, ಕೃಷ್ಣದೇವರಾಯ, ಬಬ್ರುವಾಹನ ಇಂತಹ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾದ್ದು. ನನಗೆ ಯಾವಾಗಲೂ ಕನಕದಾಸನ ಪಾತ್ರ. ಕನಕನ್ನ ಕಂಭಕ್ಕ ಕಟ್ಟಿ ಹೊಡೆಯುವುದು, ಬಾಳೆಹಣ್ಣು ತಿನ್ನಲಿಕ್ಕೆ ಕೊಡುವುದು ಬಹಳ ಮಜಾ ಬರುತ್ತಿತ್ತು. ಸತ್ಯಹರಿಶ್ಚಂದ್ರನ ಸಿನಿಮಾದ ವೀರಬಾಹುವಿನ ಪಾತ್ರ ಮಾಡಲಿಕ್ಕೆ ಪ್ರಯತ್ನ ಮಾಡಿದ್ದೇ ಮಾಡಿದ್ದು. ಸಂಜೆಯಾದರೂ ಊಟದ ಖಬರು ಇಲ್ಲದ ಆಟ ನಡೀತಿತ್ತು. ಮನೆಯವರೆಗೂ ಗೊತ್ತಿತ್ತು ,ಹಸಿವಾದರೆ ಮನೆಗೆ ಬರ್ತಾರೆ ಅಂತ

.

ಹಬ್ಬ-ಹುಣ್ಣಿಮೆ ಬಂದರೆ ನಮ್ಮೂರ ಒಳಗೆ ಗುಡಿಗೆ ಹೋಗುವ ಜನ ಜಾಸ್ತಿ. ನಮ್ಮ ನಾನಿ ಅಪ್ಪ ಗುಡಿ ಪೂಜಾರಿ. ಒಮ್ಮೊಮ್ಮೆ ದೇವರ ಪೂಜೆ ಮಾಡುವ ಪ್ರಸಂಗ ನಾನಿಗೆ ಬರ್ತಿತ್ತು. ಅವತ್ತಿನ ದಕ್ಷಿಣ ರೊಕ್ಕ ನಮ್ಮ ಮುಂದಿನ ಸಿನಿಮಾದ ಖರ್ಚಿಗೆ ಅಂತ ಇಡುತ್ತಿದ್ದ. ಶ್ರೀಮಂತಿಕೆ ಬಡತನ ವ್ಯತ್ಯಾಸ ಆಗ್ತಿದ್ದಿಲ್ಲಾ. ಬಾಲ್ಯದ ಮುಗ್ಧತೆ ಎಷ್ಟು ಚೆಂದ ಇತ್ತು?  ಈಗ ಅರಿವಿಗೆ ಬರ್ತದ. ಯಾವುದೇ ರೀತಿಯ ಏರು ಇಳಿವು ಇಲ್ಲದ ಜೀವನ ಸಾಗಿತ್ತು.

 ಸಾಲಿಯೊಳಗ ಮುಂದಿನ ಕ್ಲಾಸಿಗೆ ಹೋಗುವುದು ಗ್ಯಾರಂಟಿ ಇರುತ್ತಿತ್ತಲ್ಲ. ಅಭ್ಯಾಸದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಏನು ಓದುತ್ತೇನೆ, ಎಷ್ಟು ಮಾರ್ಕ್ಸ್ ತೆಗಿತೀನಿ ಅಂತ ಅಪ್ಪ ಕೂಡ ಹೆಚ್ಚು ಜಿಕೇರಿ ಮಾಡ್ತಿದ್ದಿಲ್ಲ. ಪಾಠ ತಿಳಿಲಿಲ್ಲ ಅಂದ್ರೆ ಗೆಳೆಯರು ಇದ್ದರಲ್ಲ, ನಾನೀ, ಸೀನಾ ಹೇಳಿಕೊಡುತ್ತಿದ್ದರು. ಹಂಗೂ ಹಿಂಗೂ ಮಾಡಿ ಎಸ್ಎಸ್ಸಿ ಪಾಸಾದೆ. ಕಾಲೇಜಿಗೆ ಹೋಗಾಕ ಹಸಿರು ನಿಶಾನಿ ಸಿಕ್ಕಂಗಾಯ್ತು. ಅದs ಊರೊಳಗಿನ ಕಾಲೇಜಿಗೆ ಆರ್ಟ್ಸ್ ಗೆ ಎಡ್ಮಿಶನ್ ಮಾಡಿಸಿದೆ. ನಾನಿ ಒಬ್ಬಾವ ಮಾತ್ರ ಸೈನ್ಸಗೆ ಸೇರಿದ. ಗಣಿತದ ತಲಿಬಿಸಿ, ಪ್ರ್ಯಾಕ್ಟಿಕಲ್ಸ್ ದ ಉಪದ್ರ ಬ್ಯಾಡಾ ಅನಿಸಿತ್ತು ನನಗ. ಈಗ ಮೊದಲಿನ ಹುಡುಗುತನ ಸ್ವಲ್ಪ ಕಡಿಮೆಯಾಗಿತ್ತು. ಮನಿ ಕೆಲಸ ಜಾಸ್ತಿ ಆಗಿತ್ತು. ಮನಿಯೊಳಗಿನ ಹಿಂಡ ಜನರೊಳಗ ಅದೇನು ಭಾಳ ಅನಸ್ತಿದ್ದಿಲ್ಲ. ಮನಿಯೊಳಗ ಮದುವಿ, ಮುಂಜವಿ ಇಂಥಾದ್ದೆಲ್ಲಾ ಕಾರ್ಯಕ್ರಮಕ್ಕ ಇದ್ದರಲ್ಲ ಆಜೂ- ಬಾಜೂ ನಮ್ಮವರು……ಗೊತ್ತಾಗದ ನಡದು ಹೋಗ್ತಿತ್ತು.

ನಮ್ಮಜ್ಜ ತನ್ನ ನಾಲ್ಕು ಗಂಡ ಮಕ್ಕಳೊಳಗ ಇಬ್ಬರು ಮಕ್ಕಳನ್ನು ದತ್ತಕ ಕೊಟ್ಟಿದ್ದು, ಅವರಿಬ್ಬರ ಕುಟುಂಬ ಮತ್ತು ಇನ್ನುಳಿದ ಇಬ್ಬರದು ವರ್ಷದಿಂದ ವರ್ಷಕ್ಕೆ ಬೆಳೆದು ಅರ್ಧ ಊರಲ್ಲಿ ನಮ್ಮ ಸಂಬಂಧಿಕರು ತುಂಬಿದ್ದರು. ನೋಡುತ್ತಾ ನೋಡುತ್ತಾ ನಾಲ್ಕು ವರ್ಷ ಮುಗಿದು, ನನ್ನ ಗ್ರಾಜುಯೇಷನ್ ಆಗಿಹೋಯಿತು. ಈ ನಾಲ್ಕು ವರ್ಷದೊಳಗ ಎರಡು ಮುಂಜವಿ, ಇಬ್ಬರ ಅಕ್ಕಂದಿರ ಮದುವೆ ನಡೆದು ಹೋಯಿತು. ಅಪ್ಪನ ಮಾಸ್ತರಿಕೆ ಪಗಾರ ದೊಡ್ಡ ಸಂಸಾರಕ್ಕ ಕಡಿಮೆ ಬೀಳುತ್ತಿತ್ತು ಮದುವೆಗೆ, ಮುಂಜುವಿಗೆ ಹೊಲದ ಒಂದೊಂದು ತುಕಡಿ ಹೊಲ ಗೇಣಿ ಮಾಡುವ ರೈತನಿಗೆ ಮಾರುವುದು ನಡೆದಿತ್ತು. ಅಕ್ಕ ಮತ್ತು ತಂಗಿಯಂದಿರ ಗಂಡನ ಮನಿ ಅಂದ್ರ ಸಂಬಂಧಿಕರs. ಅಕ್ಕನ ಗಂಡ ನನ್ನ ಖಾಸ ಸೋದರಮಾವ. ಹಂಗ ನೋಡಿದರೆ ಹೊಸಬರು ಪರಿವಾರದೊಳಗೆ ಸೇರಲಿಲ್ಲ, ಏನೂ ಬದಲಾವಣೆ ಆದಂಗ ಅನಿಸಲಿಲ್ಲ. ಜೀವನ ಸರಳವಾಗಿ ಹರಿಯುವ ನದಿಯಾಗಿತ್ತು.

 ನೌಕರಿ ಬ್ಯಾಟಿಗೆ ಶುರುಮಾಡಿದೆ. ನನ್ನ ಸಾದಾ ಬಿ ಎ ಗೆ ಕೆಲಸ ಸಿಗೋದು ಕಠಿಣ ಇತ್ತು. ಪೂರ್ವಜರು ಮಾಡಿದ ಪೌರೋಹಿತ್ಯ ಮತ್ತು ಮಾಸ್ತರ್ಕಿಗೆ ನನಗೆ ಯೋಗ್ಯತಾ ಇರಲಿಲ್ಲ. ನನ್ನದು ಅಂತ ಜೀವನ ಕಟ್ಟಿಕೊಳ್ಳಾಕ ಒಂದು ಕೆಲಸ ಅವಶ್ಯವಿತ್ತು. ಖರೆ ಹೇಳಬೇಕಂದ್ರೆ, ಬೇರೆಯಾದ ಅಸ್ತಿತ್ವ ನಮಗ್ಯಾರಿಗೂ ಇರಲಿಲ್ಲ. ಆದರೂ ಪಾಯಿಪ್ಸ್ ಮಾರುವ ಒಂದು ಪ್ರೈವೇಟ್ ಕಂಪನಿಯೊಳಗ ಕ್ಲರ್ಕ್ ಕೆಲಸ ಸಿಕ್ಕಿತು. ಆದರೆ ಊರು ಬಿಟ್ಟು ಹತ್ತಿರದ ಊರಿಗೆ ಹೋಗಬೇಕಾಯಿತು. ಅಲ್ಲಿ ನಾ ಇರಬೇಕೆಂದರೆ ಮನಿ ಮಾಡಬೇಕು ಅಂತ ಹೇಳಿ ನಮ್ಮವ್ವ ಮತ್ತು ನಮ್ಮ ಅಕ್ಕ ಕೂಡಿ ನನ್ನ ಮದುವೆ ಮಾಡಬೇಕಂತ ಕನ್ಯಾ ಹುಡುಕಲಿಕ್ಕೆ ಹತ್ತಿದರು. ದೂರದ ಸಂಬಂಧಿಗಳ ಬಡವರ ಹುಡಿಗಿ ರಾಧಾ ನನ್ನ ಅರ್ಧಾಂಗಿಯಾಗಿ ಮನಿ ತುಂಬಿದಳು. ಸೌಮ್ಯ ಸ್ವಭಾವದ ರಾಧಾ ಎಲ್ಲ ರೀತಿಯಿಂದ ಹೊಂದಿಕೆ ಆಗಿದ್ದಳು. ಆದರ ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳ ಭಾಗ್ಯ ಸಿಗಲಿಲ್ಲ. ಅವ್ವ ರಾಧಾಳನ್ನ ಡಾಕ್ಟರ್ ಕಡೆಗೆ ಕರ್ಕೊಂಡು ಹೋದಳು. ಅವಾಗ ಬೇರೆ ಏನೋ ವಿಷಯ ಹೊರಗೆ ಬಂತು. ಏನಂದ್ರೆ ರಾಧಾಗ ಡಯಾಬಿಟಿಸ್ ಇತ್ತು. ಅದು ಕೂಡ ಹೆಚ್ಚಿನ ಪ್ರಮಾಣದ ಸಕ್ಕರೆ ರೋಗ. ಸರಿ ಅದಕ್ಕೆ ಟ್ರೀಟ್ಮೆಂಟ್ ಸುರುವಾಯಿತು. ಮಕ್ಕಳ ವಿಷಯ ಮರೆತು ಹೋಯಿತು. ಮುಂದೆ ಕೆಲವರ್ಷದೊಳಗ ನನಗೂ ಡಯಾಬಿಟಸ್ ಶುರುವಾಗಿತ್ತು. ಆದರೂ ನಾ ತಲಿಬಿಸಿ ಮಾಡಿಕೊಳ್ಳಲಿಕ್ಕೆ ಹೋಗಲಿಲ್ಲ. ನಮ್ಮ ಸಂಬಂಧಿಕರು ಬಹುತೇಕ ಜನರಿಗೆ ಇದು ಇತ್ತು. ಬಹುಶಃ ಆನುವಂಶಿಕತೆ ಇರಬಹುದು ಅನಿಸಿ ನಾನೂ ಕೂಡ ಔಷಧಿ ತೆಗೆದುಕೊಳ್ಳಹತ್ತಿದೆ. ಕೂಡು ಕುಟುಂಬದೊಳಗೆ ಇದ್ದುಕೊಂಡು ಸದಾಕಾಲ ಸಾವು – ನೋವು, ರೋಗ – ರುಜಿನ, ಮದುವಿ – ಮುಂಜವಿಯಂತ ಅದರ ಸಲುವಾಗಿ ದುಡಿತ ಇರುವಾಗ ಯಾವ ಕೊರತಿ ಅನ್ನಿಸಲಿಲ್ಲ.

ನಾ ಕೆಲಸ ಮಾಡುವ ಕಂಪನಿಯೊಳಗ  ಬಡ್ತಿ ಸಿಕ್ಕು ನಾ ಮ್ಯಾನೇಜರ್ ಆದೆ. ಮನಿ ಕಟ್ಟಿಸಲಿಕ್ಕೆ ಸಾಲ ಕೊಡುತ್ತಿದ್ದರು ಅಂತ ಹೇಳಿ ಎಂಜಿನಿಯರ್ ಭಾವನ ಒತ್ತಾಯಕ್ಕೆ ಮಣಿದು ಸಾಲ ತೆಗೆದು ಧಾರವಾಡ ದೊಳಗ ಒಂದು ಅಪಾರ್ಟ್ಮೆಂಟ್ ಒಳಗ ಒಂದು ಫ್ಲ್ಯಾಟ್ ಖರೀದಿ ಮಾಡಿದೆ. ಅದs ವೇಳೆಗೆ ಅವ್ವ, ಅಕ್ಕ, ಮಾಮಾ ಎಲ್ಲಾರೂ ಧಾರವಾಡಕ್ಕೆ ಶಿಫ್ಟ್ ಆದರು. ನನ್ನ ಮನಿ ಬ್ಯಾರೆ ಆದ್ರೂ ಎಲ್ಲಾ ಒಟ್ಟಿಗೆ ನಡೆತಿತ್ತು. ಒಬ್ಬರಿಗೊಬ್ಬರು ಸಹಾಯಕ್ಕ ಕೈಚಾಚುತುತ್ತರಿಂದ ಸುಖದ ದುಃಖದ ದಿನಗಳು ತಮ್ಮ ಪರಿಣಾಮವನ್ನು ನನ್ನ ಮೇಲೆ ಮಾಡದೆ ಸಾಗಿದ್ದವು.

 ರಾಧಾಗೆ 50 ವರ್ಷ ತುಂಬುವ ಕಾಲ ಆಕಿ ಎರಡೂ ಕಿಡ್ನಿ ಫೇಲಾದವು. ಇಷ್ಟು ಸಣ್ಣ ವಯಸ್ಸಿಗೆ ಕಿಡ್ನಿ ಬೇರೆ ಹಾಕಿಸಬೇಕು ಇಲ್ಲ ಡಯಾಲಿಸಿಸ್ ಮಾಡುತ್ತಿರಬೇಕು. ಉಪಾಯವಿಲ್ಲದೆ ವಾರಕ್ಕೊಮ್ಮೆ ಡಯಾಲಿಸೀಸ್ ಸುರುವು ಮಾಡಿದೆ. ಮನಸ್ಥೈರ್ಯ ಕುಂದ ತೊಡಗಿತ್ತು. ಆರೋಗ್ಯ, ಹಣದ ಸಮಸ್ಯೆ ದೊಡ್ಡದಾಗಿ ಬೆಳೆದವು. ವಾರಕ್ಕೊಮ್ಮೆ ರಾಧಾಳನ್ನು ಬೆಳಿಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡಯಾಲಿಸಿಸ್ ಮಾಡಿಸಿ ಕರೆದು ತರುತ್ತಿದ್ದೆ. ಒಂದು ವರ್ಷದಿಂದ ನಡೆದಿತ್ತು. ಮುಂದೇನು ಇದೇ ರೀತಿ ನಡೆಯಬಹುದು ಅನ್ನುವುದು ಖಾತ್ರಿ ಇರಲಿಲ್ಲ. ದಿನದಿಂದ ದಿನಕ್ಕ ಸಮಸ್ಯೆಗಳು ಹೆಚ್ಚಾಗುತ್ತಿದ್ದವು.

 ಒಂದು ಶನಿವಾರ ಇದೇ ರೀತಿ ಆಕೆಯನ್ನು ಮನಿಗೆ  ಕರೆದುಕೊಂಡು ಬರ್ತಿರುವಾಗ ನನ್ನ ಸ್ಕೂಟರಿಗೆ ಒಂದು ಹಂದಿ ಅಡ್ಡ ಬಂದು, ಅದನ್ನು ತಪ್ಪಿಸುವ ಸಲುವಾಗಿ ಸಲುವಾಗಿ ಗಾಡಿ ತಿರಗಿಸಲಿಕ್ಕೆ ಹೋದೆ, ಸ್ಕಿಡ್ಡಾಗಿ ಸ್ಕೂಟಿ ಹೊರಳಿ ಬಿತ್ತು. ರೋಡ್ ಸರಿ ಇರಲಿಲ್ಲ. ಹಿಂದೆ ಕುಳಿತ ರಾಧಾ ಆಯತಪ್ಪಿ ಪುಟಿದು ರಸ್ತೆ ಬದಿಗೆ ಬಿದ್ದಳು. ನಾನು ಬಿದ್ದಿರಲಿಲ್ಲ ಅವಳು ಬಿದ್ದ ಜಾಗದಲ್ಲಿ ಒಂದು ಕಲ್ಲಿಗೆ ಅವಳ ತಲೆ ಜೋರಾಗಿ ತಾಗಿತ್ತು. ಕೆಳಗಿಳಿದು ಹೋಗಿ ಎಬ್ಬಿಸಲು ನೋಡಿದರೆ ರಕ್ತ ಹರಿದಿತ್ತು, ರಾಧಾಗೆ ಎಚ್ಚರವಿಲ್ಲ. ಗಾಬರಿಯಾಯಿತು! ಅಲ್ಲೇ ಹೋಗುತ್ತಿರುವ ಆಟೋರಿಕ್ಷಾ ನಿಲ್ಲಿಸಿ ಡ್ರೈವರ್ ಸಹಾಯದಿಂದ ಆಟೋದಲ್ಲಿ ಹಾಕಿಕೊಂಡು ಅದೇ ದವಾಖಾನೆಗೆ ಹೋದೆ. ಹೋಗ್ತಾ ತಮ್ಮನಿಗೆ ಮತ್ತು ಮಾವನಿಗೆ ಫೋನ್ ಮಾಡಿದೆ. ಅಲ್ಲಿ ಮುಟ್ಟಿದ ಮೇಲೆ ಡಾಕ್ಟರ್ ನೋಡಿದವರು ಕೈಚೆಲ್ಲಿದರು. ರಾಧಾಳ ಪ್ರಾಣಪಕ್ಷಿ ಹಾರಿಹೋಗಿತ್ತು! ಇದೆಂತ ಶಾಕ್!!  ಅರ್ಧಗಂಟೆಯ ಹಿಂದೆಯಷ್ಟೇ ನನ್ನ ಬೆನ್ನಿಗಾತು  ಕುಳಿತವಳು ಈಗ ಶವಾ ಅಂದರ!

ಜೀವನದ ಮತ್ತೊಂದು ಅಧ್ಯಾಯ ಮುಗಿದಿತ್ತು. ಈಗ ನಾನು ಒಬ್ಬಂಟಿಯಾಗಿದ್ದೆ. ಮಕ್ಕಳಿಲ್ಲದಿದ್ದರೂ ಅವಳಿಗೆ ನಾನು, ನನಗೆ ಅವಳು ಮಗುವಾಗಿದ್ದೆವು. ದೇವರು ಅದನ್ನೂ ಕಸಿದುಕೊಂಡಿದ್ದಾ. ಇನ್ನೆರಡು ವರ್ಷ ಸರ್ವಿಸ್ ಉಳಿದಿತ್ತು. ಕೆಲಸ ಮಾಡುವ ಉಮೇದು ಹೊರಟುಹೋಗಿತ್ತು. ಯಾರಿಗಾಗಿ ಮಾಡಬೇಕು? ಯಾಕೆ ಮಾಡಬೇಕು? ಅನ್ನುವ ಪ್ರಶ್ನೆ ಪದೇ ಪದೇ ಕಾಡತೊಡಗಿತು. ಜೀವನದಲ್ಲಿರುವ ನಿರುತ್ಸಾಹ ಕೊನೆಗೂ ಸ್ವಯಂ ನಿವೃತ್ತಿ ಘೋಷಣೆ ಮಾಡಿತು. ತಿಳಿದುದನ್ನು ಇರುವಷ್ಟು ಕಾಲ ಮಾಡಿದರಾಯ್ತು ಅನ್ನಿಸಿ ಹೆಚ್ಚಾಗಿ ಪರೋಪಕಾರದಲ್ಲಿ ತೊಡಗಿಸಿಕೊಂಡೆ. ಮನಸ್ಸಿಗೆ ಸ್ವಲ್ಪಮಟ್ಟಿಗೆ ಶಾಂತಿ ಸಮಾಧಾನ ಸಿಕ್ಕಿತು.

ಈ ರೀತಿ ರಂಗಣ್ಣ ತನ್ನ ಜೀವನದ ಎರಡನೇ ಇನಿಂಗ್ಸ್ ಶುರು ಮಾಡಿಕೊಂಡ. ಅವನ ಕೂಡ ಇರುತ್ತಿದ್ದ ಅವನ ತಾಯಿ ಈಗ ಅಲ್ಲಿಯೇ ಹತ್ತಿರದಲ್ಲಿರುವ ಮಗಳ ಮನೆಗೆ ಹೋಗಿ ಇರತೊಡಗಿದರು. ರಂಗಣ್ಣನ ಅಕ್ಕ-ತಂಗಿಯರು ತಮ್ಮ ತಮ್ಮ ಜೀವನದಲ್ಲಿ ವ್ಯಸ್ತರಾಗಿದ್ದರು. ಪರಿವಾರ ಇಲ್ಲದವನು ಇವನೊಬ್ಬನೇ ಮತ್ತೆ ತಮ್ಮ ರಾಘು. ಅವನು ಮದುವೆ ಮಾಡಿಕೊಳ್ಳಲೇ ಇಲ್ಲ. ಸೋದರಸಂಬಂಧಿ ಮದ್ದಣನ ಒಟ್ಟಿಗೆ ಇರತೊಡಗಿದ. ಅವನೂ ಕೂಡ ಬ್ರಹ್ಮಚಾರಿ. ಹೀಗಾಗಿ ಅವರ ಜೀವನಶೈಲಿ ಒಂದೇ ರೀತಿ ಇದ್ದುದರಿಂದ ಯಾವುದೇ ಸಮಸ್ಯೆಯಿಲ್ಲದೆ ಬದುಕು ಸಾಗಿತ್ತು. ರಂಗಣ್ಣ ಕೆಲವೊಮ್ಮೆ ತನ್ನ ಮನೆಯಲ್ಲಿ, ಕೆಲವೊಮ್ಮೆ ಅಕ್ಕನ ಮನೆಯಲ್ಲಿ ಇರುತ್ತ ಕಾಲಹರಣ ಮಾಡತೊಡಗಿದ್ದ.

ಹಾಸಿಗೆಯ ಮೇಲೆ ಧ್ಯಾನಿಸುತ್ತಾ ಮಲಗಿದ ರಂಗಣ್ಣನಿಗೆ ಮತ್ತೆ ಕೆಲವು ನೆನಪುಗಳು ಚಿತ್ರದಂತೆ ಕಣ್ಣುಮುಂದೆ ಬರತೊಡಗಿದವು.

 ತಂಗಿ ಪರಿಮಳ ಮಂಡಿ ನೋವು ಹೆಚ್ಚಾಗಿ ನಡೆದಾಡಲು ಕಷ್ಟಪಡುವಂತಾಯಿತು.  ಔಷಧೋಪಚಾರ ನಡೆದಿದ್ದರೂ ಮೊಣಕಾಲು ಆಪರೇಷನ್ ಆಗಬೇಕೆಂದು ಡಾಕ್ಟರ್ ಹೇಳಿದಾಗ ಎಷ್ಟೊಂದು ಹೆದರಿದ್ದಳು? ನಾನೇ ಧೈರ್ಯ ಹೇಳಿ  ತನ್ನ ನಿವೃತ್ತಿಯಲ್ಲಿ ಬಂದ ಹಣ ಖರ್ಚು ಮಾಡಿ ಅವಳಿಗೆ ಆಪರೇಷನ್ ಮಾಡಿಸಿದೆ.  ಆಕೀ ಕಾಲು ನಡೆದಾಡುವಂತಾಯಿತು. ಅವಳ ಗಂಡ ಉಂಡಾಡಿ ಗುಂಡ. ಇವಳು ಆರೋಗ್ಯವಾಗಿದ್ದರೆ ಮನಿ ಸರಿಯಾಗಿ ನಡಿಯುತ್ತಿತ್ತು. ಹೀಗಾಗಿ ನನಗೇ ಹೆಚ್ಚು ಸಂತೋಷವಾಗಿತ್ತು. ಇನ್ನೇನು ಪರಿಮಳ ಆರಾಮ ಆದಳು  ಅನ್ನುವ ಹೊತ್ತಿಗೆ ಅವಳ ಗಂಡನಿಗೆ ಶುಗರ್ ಹೆಚ್ಚಾಗಿ ದವಾಖಾನೆಯಲ್ಲಿ ಇರಬೇಕಾಯಿತು. ಅವನು ಮೊದಲಿನಿಂದ ಡಯಾಬಿಟಿಸ್ ಪೇಷಂಟ್. ಶಿಸ್ತಿನ,  ಜೀವನ ಶೈಲಿ ಇಲ್ಲದ್ದಕ್ಕೆ ಈಗ ಎರಡೂ ಕಿಡ್ನಿ ಸೋತಿದ್ದವು. ಆರು ತಿಂಗಳ ಗಟ್ಟಲೆ ಉಪಚಾರ ನಡೆದು ಕೊನೆಗೆ ಅವನು ಕಣ್ಣುಮುಚ್ಚಿದ. ಪರಿಮಳ ಮತ್ತ ಮಕ್ಕಳಿಬ್ಬರು ಸಣ್ಣವರು. ನಾನೇ ಮುಂದೆ ನಿಂತು ನಿಭಾಯಿಸಿದೆ. ಸಾಧ್ಯವಾದ ಮಟ್ಟಿಗೆ ಹಣದ ಸಹಾಯ ಮತ್ತೆಲ್ಲ  ಆಸರೆಯ ಮೂಲಕ ಕೆಲಸ ಪೂರ್ತಿ ಮುಗಿಸಿದೆ. ಸ್ವಲ್ಪ ದಿವಸಗಳಿಂದ ಮಾಡುತ್ತಿದ್ದ ಕಾಲೇಜ್ ಹಾಸ್ಟೆಲ್ ವಾರ್ಡನ್ ಕೆಲಸಕ್ಕ ತೊಂದರೆಯಾಗುತ್ತಿತ್ತು. ಸಮಯ ಕಳೆಯಲು ಇರಲಿ ಅಂತ ಸೇರಿಕೊಂಡ ಕೆಲಸಕ್ಕೆ ಈಗ ಸಮಯ ಉಳಿಯುತ್ತಿರಲಿಲ್ಲ.

ಒಂದು ಮುಗಿಯುವುದರೊಳಗೆ ಇನ್ನೊಂದು! ಭಾವನೆಗೆ ಸಣ್ಣದೊಂದು ಸ್ಟ್ರೋಕ್.  ಶಿಸ್ತಿನಿಂದ ಇರುವವರಿಗೆ ಹೃದಯದ ಸಮಸ್ಯೆ! ಆಶ್ಚರ್ಯವೆನಿಸಿತು. ಆದರೆ ವಯಸ್ಸು ಸಾಗುತ್ತಿತ್ತಲ್ಲ! ಕೆಲವುಕಾಲ ಮಲಗಿದ, ಆಮೇಲೆ ಆಂಜಿಯೋಪ್ಲ್ಯಾಸ್ಟಿ ಮಾಡಬೇಕಾಯಿತು. ಅವನ ಮಗನಿಗೆ ಬೆಂಗಳೂರಿನೊಳಗೆ ಕೆಲಸ. ಹೀಗಾಗಿ ನಾನೇ ನಿಂತೆ. ಅವನು ಸಂಪೂರ್ಣ ಆಗುವವರಿಗೆ ಅವ್ವ ಅಸ್ವಸ್ಥಳಾದಳು. ಆರೋಗ್ಯದ ಸಮಸ್ಯೆ ಏನೂ ಇರಲಿಲ್ಲ ವಯೋಸಹಜ ಕಾಯಿಲೆ. ಹಾಸಿಗೆಗೆ ಅಂಟಿಕೊಂಡು ಬಿಟ್ಲು. ಅವಳನ್ನು ನೋಡಿಕೊಳ್ಳಲು ಒಬ್ಬರು ಸದಾಕಾಲ ಬೇಕಾಗಿತ್ತು. ಇದಕ್ಕಿಂತ ಹೆಚ್ಚಿನ ಕಾರ್ಯ ಯಾವುದಿದ್ದೀತು? ಅಂತೆನಿಸಿ ಹಾಸ್ಟೆಲ್ ವಾರ್ಡನ್ ಕೆಲಸ ಬಿಟ್ಟು ಬಿಟ್ಟೆ. ತಾಯಿಯನ್ನು ಜೋಪಾನ ಮಾಡುವ ನನ್ನ ಕರ್ತವ್ಯ ಮನಸ್ಸುಗೊಟ್ಟು ಮಾಡಿದೆ. ಒಂದಾರು ತಿಂಗಳಲ್ಲಿ ಆಕೆ ಇಹಲೋಕ ಯಾತ್ರೆ ಮುಗಿಸಿದಳು.

ಪರೋಪಕಾರಿ ರಂಗಣ್ಣ ಈಗ ಮತ್ತೆ ಖಾಲಿಯಾದ. ಅವನಿಗೆ ಎಲ್ಲರೂ ಚಾಷ್ಟಿ ಮಾಡುವರು ‘ನೀನು ನಿವೃತ್ತಿ ಹೊಂದಿದ ಮೇಲೆ ನರ್ಸ್ ಕೆಲಸ ಸರಿಯಾಗಿ ಮಾಡ್ತಾ ಇದ್ದಿ ನೋಡು, ಮುಂದಿನ ಡ್ಯೂಟಿ ಎಲ್ಲೆ?’ ಅಂತ. ಸತತವಾಗಿ ಅವನ ಸಮಯ, ಹಣ, ಶಕ್ತಿ ಸಂಬಂಧಿಕರ ಆರೋಗ್ಯದಲ್ಲಿ  ಹಂಚಿ ಹೋಗುತ್ತಿತ್ತು. ಅದರಿಂದ ಅವನಿಗೆ ಒಂದು ರೀತಿಯ ಸಮಾಧಾನ ಸಿಗುತ್ತಿತ್ತು.

 ಇನ್ನೇನು ಸಮಸ್ಯೆ ಇಲ್ಲ ಅನ್ನುವ ಕಾಲಕ್ಕೆ ಜಗತ್ತಿಗೆ ಕರೋನಾ ಮಾರಿ ಕಾಲಿಟ್ಟಿತ್ತು ಎಲ್ಲರ ದಿನಚರಿ ಹಣೆಬರಹ ಬದಲಾಯಿಸುವ ಹೆಮ್ಮಾರಿ ರೋಗದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಎಲ್ಲರೂ ಅನ್ನುವಂತೆ ರಂಗಣ್ಣ ಕೂಡ ‘ನನಗೆ ಅದೇನು ಬರ್ತದೆ ತೆಗಿ’ ಅಂತ ತಲೆ ಕೊಡುವುತ್ತಿದ್ದ. ಅಲ್ಲೆಲ್ಲೋ ಬಂತು! ಯಾರು ಯಾರು ಬಲಿಯಾದರು! ಅನ್ನುತ್ತಾ ಅದು ಎಲ್ಲರ ಮನೆ ಬಾಗಿಲಿಗೆ ಬಂದು ಬಾಗಿಲ ಬಡಿಯ ತೊಡಗಿತು. ಗಾಬರಿ ಆತಂಕದೊಳಗೆ ಬೇಕಾದ ನಿಯಮ ಪಾಲಿಸುತ್ತಾ ನಾಲ್ಕು ಗೋಡೆಗಳ ಮಧ್ಯೆ ಜನರು ರೋಗವನ್ನು, ಸರಕಾರವನ್ನು, ಜನರನ್ನು ಆಪಾದಿಸುತ್ತಾ ಇರುವಾಗ ಕೊರೊನಾ ರಂಗಣ್ಣನ ಮನೆಗೆ ಎಂಟ್ರಿ ಕೊಟ್ಟಿತ್ತು. ಹುಬ್ಬಳ್ಳಿಯಲ್ಲಿರುವ ಮದ್ದಣ್ಣನಿಗೆ ಆರೋಗ್ಯ ಸರಿಯಿಲ್ಲ ಅಂತ ಗೊತ್ತಾಯ್ತು. ಹೊರತು ಕೊರೊನಾ ಬಂದಿದೆ ಅಂತ ಅನಿಸಿರಲಿಲ್ಲ. ಆದರೂ ಹೆಚ್ಚಿನವರು ಅಲ್ಲಿಗೆ ಹೋಗಲಿಲ್ಲ. ಅವ ಮಾತ್ರ ಹೋಗಿಬಿಟ್ಟ. ಅವನೊಟ್ಟಿಗೆ ಇರುತ್ತಿದ್ದ ರಾಘು ನಿಗೂ ಮತ್ತ  ಮದ್ದಣ್ಣನ ಅಂತ್ಯಕ್ರಿಯೆಗೆ ಹೋದ ಪರಿಮಳಾಳಿಗೂ ರೋಗ ವಕ್ಕರಿಸಿತು. ಅವರಿಬ್ಬರು ಆಸ್ಪತ್ರೆಗೆ ದಾಖಲಾದರು. ಹತ್ತು ದಿನಗಳಲ್ಲಿ ರಾಘು ಮತ್ತು ಪರಿಮಳ ನೆಗೆಟಿವ್ ರಿಪೋರ್ಟ್ ನೊಂದಿಗೆ ಹೊರಗೆ ಬಂದರೆ ರಂಗಣ್ಣನ ಕಾಯಿಲೆ ಉಲ್ಬಣಿಸಿ ವೆಂಟಿಲೇಟರ್ ಅವಶ್ಯವಾಗಿ  ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಗೆ ಅಡ್ಮಿಟ್ ಆಗಬೇಕಾಯಿತು. ಕೆಲವೊಮ್ಮೆ ಕಡಿಮೆಯಾಗಿ ಮತ್ತೆ ಹೆಚ್ಚಾಗಿ ಈಗ ಯಾವ ಭರವಸೆ ಇಲ್ಲದ ಪರಿಸ್ಥಿತಿ ಅಂತ ಡಾಕ್ಟರ್ ಕೈಚೆಲ್ಲಿದರು. ಮಲಗಿಕೊಂಡೆ ತನ್ನ ಜೀವನ ಜಾಲಾಡಿದ ರಂಗಣ್ಣನಿಗೆ ಈಗ ಎಲ್ಲರನ್ನೂ ಒಮ್ಮೆ ನೋಡುವ ಬಯಕೆ. ಹಾಗೆ ಅಂತ ಫೋನಿನಲ್ಲಿ ಹೇಳಿಕೊಂಡಿದ್ದ ಮತ್ತು ಕಾಯುತ್ತಿದ್ದ.

ನಾನು ಯಾವ ಪಾಪ ಮಾಡಿದೆ ಅಂತ ಇಂತ ಪರದೇಶಿ ಸಾವು ಬಂತು? ಒಂದು ರೀತಿ ಛಲೋನs! ಯಾರಿಂದಲೂ ಸೇವೆ ಮಾಡಿಸಿಕೊಳ್ಳದ ಅಸ್ಪೃಶ್ಯತೆಯನ್ನು ದೇವರು ನನಗೆ ಕರುಣಿಸಿದ್ದು. ನನಗಾದರೂ ಯಾರಿದ್ದರೂ ಹೆಂಡತಿ, ಅವ್ವ, ಮಕ್ಕಳು ಯಾರೂ ಇಲ್ಲ! ಹುಟ್ಟುವಾಗ ಒಬ್ಬಂಟಿ ಭ್ರೂಣ ಸಾಯುವಾಗ ಏಕಾಂಗಿ ಜೀವ. ಹುಟ್ಟುವಾಗಿನ ಪರಿಸ್ಥಿತಿಯ ಅರಿವು ನಮಗಿರುವುದಿಲ್ಲ. ಆದರೆ ಸಾಯುವುದು ಪೂರ್ಣ ಪ್ರಜ್ಞೆಯೊಳಗ. ಅದಕ್ಕs ದುಃಖ ಆಗ್ತದೆ. ಅಂತ ನಿಟ್ಟಿಸಿರು ಬಿಟ್ಟ ಹಾಗೆಯೇ ಪ್ರಾಣವನ್ನು ಬಿಟ್ಟ.

ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರವನ್ನು ಆಸ್ಪತ್ರೆಯವರೇ ಮಾಡಿ ಮುಗಿಸಿದರು ಒಂದು ಕೆಲಸವೆಂಬಂತೆ. ಸಂಪ್ರದಾಯಸ್ಥ ಜೀವಿಗೆ ಒಂದು ಒಳ್ಳೆಯ ಕ್ರಿಯಾಕರ್ಮ ಕೂಡ ದಕ್ಕಲಿಲ್ಲ. ದೊಡ್ಡ ಕುಟುಂಬದೊಳಗೆ ಜೀವನ ಕಳೆದ ರಂಗಣ್ಣನಿಗೆ ಸಾವು ಮಾತ್ರ ಅಜ್ಞಾತವಾಗಿತ್ತು. ತಾನು ಸ್ವತಃ ಎಷ್ಟು ಜನರ ಸೇವೆ ಮಾಡಿದ್ದ ಅವನಿಗೆ ಏನೂ ಲಭ್ಯವಾಗಲಿಲ್ಲ. ಈ ರೀತಿ ಲೆಕ್ಕ ಇಡಲಿಕ್ಕೆ ಬರುವುದಿಲ್ಲ. ಕೊರೊನಾ ಎನೆಲ್ಲ ನೀತಿ ಪಾಠ ಕಲಿಸಿದ್ದರೂ ಸಾವನ್ನು ಈ ರೀತಿ ಎದುರಿಸಲು ಕಲಿಸಿದ್ದು ಮಾತ್ರ ಭಯಾನಕ. ಮಾನವನಿಂದ ಆದ ಪ್ರಕೃತಿಯ ಕೊಲೆಗೆ ಈ ರೀತಿಯ ಸೇಡಿನಂತಹ ಈ ನ್ಯಾಯ ನಿರ್ಣಯ ಮಾತ್ರ ವಿಪರೀತ.

ಎಷ್ಟೇ ಗದ್ದಲದಲ್ಲಿ ,ಬಳಗದಲ್ಲಿ ಜೀವಿಸಿದ್ದರೂ ಆತ್ಮ ಮಾತ್ರ ಯಾವಾಗಲೂ ಒಂಟಿಯೇ! ತನ್ನ ದುಃಖವನ್ನು ಮನುಷ್ಯ ತಾನೇ ಜೀರ್ಣಿಸಿಕೊಳ್ಳಬೇಕು ಅಲ್ಲವೇ? ಜೀವನದ ಏಕಾಂಗಿತನ ಆಕಾಶದಲ್ಲಿ ಮಿನುಗುವ ಧೃವತಾರೆಯಂತೆ. ಎಷ್ಷೇ ಮಿನುಗಿದರೂ ರಂಗಣ್ಣನಂತೆ ಏಕಾಂಗಿ ಮತ್ತು ದೂರ. ಇದೇ ಅಂತಿಮ ಸತ್ಯ.

*********************************

2 thoughts on “

Leave a Reply

Back To Top