ಲಿವಿಂಗ್ ಟುಗೆದರ್

ಲೇಖನ

ಲಿವಿಂಗ್ ಟುಗೆದರ್

ಸುಜಾತಾ ರವೀಶ್

Girl, Women, Young, Bella, Beautiful

ಇಬ್ಬರೂ ಸಮಾನ ಮನಸ್ಕರು ಒಂದೇ ಸೂರಿನಡಿ ವಾಸಿಸುತ್ತಾ ಭಾವನಾತ್ಮಕ ಹಾಗೂ ದೈಹಿಕ ಸಂಬಂಧಗಳನ್ನು ವಿವಾಹ ವ್ಯವಸ್ಥೆ ಇಲ್ಲದೆ ಹೊಂದಿ ಜೀವಿಸುವುದಕ್ಕೆ livein relationship ಅಥವಾ ಸಹಬಾಳ್ವೆ ಪದ್ಧತಿ ಎನ್ನುತ್ತಾರೆ. 

ಈಗ ಎರಡು ದಶಕಗಳಿಂದೀಚೆಗೆ ಪ್ರಪಂಚದಲ್ಲಿ ಶುರುವಾಗಿರುವ ಹಾಗೂ ಸಮಾಜಶಾಸ್ತ್ರಜ್ಞರು ಮತ್ತು ಮಾನವ ಶಾಸ್ತ್ರಜ್ಞರ ನಿರೀಕ್ಷೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ವ್ಯವಸ್ಥೆ ಇದು ಪ್ರಚಲಿತ ಅಸ್ತಿತ್ವದಲ್ಲಿರುವ ಕುಟುಂಬ ಎಂಬ ಸಾಮಾಜಿಕ ಪರಿಕಲ್ಪನೆಯಿಂದ ಹೊರತಾದ ಹೊಸ ಬದಲಾವಣೆಯ ಅಲೆ ಇದು . 

ಮನುಷ್ಯ ಒಂದು ಸಾಮಾಜಿಕ ಪ್ರಾಣಿ ಜೀವನವೇ ಸವಾಲು ಹಾಗೂ ಸಮಸ್ಯೆಗಳ ಪಯಣ .  ಆಗ ಸಾಹಚರ್ಯದ ಅಗತ್ಯವಿರುತ್ತದೆ . ಅದೇ ಸಂಸಾರ ಮದುವೆಯ ವ್ಯವಸ್ಥೆಗೆ ಕಾರಣೀಭೂತವಾಗುತ್ತದೆ.  ಆದರೆ ಈಗಿನ ಸಾಮಾಜಿಕ ಪರಿವರ್ತನೆಗಳ ದಾಳಿ, ಸಾಂಸಾರಿಕ ಬಂಧಗಳ ಶಿಥಿಲತೆ, ಹಳಸಿದ ಸಡಿಲಾದ ಸಂಬಂಧಗಳಿಗೆ ಕಾರಣವಾಗಿ ವಿವಾಹ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ.  ಹಾಗೂ ಈ ರೀತಿ ವಿವಾಹ ವ್ಯವಸ್ಥೆಯ ವಿರುದ್ಧ ಎತ್ತಿದ ಪ್ರಶ್ನೆಯೇ ಈ ಸಹಬಾಳ್ವೆ ಜೀವನ ಪದ್ಧತಿ. 

ಮೊದಲಿಗೆ ಈ ಪದ್ಧತಿಗೆ ಕಾರಣಗಳೇನು ಎಂಬುದರ ಬಗ್ಗೆ ದೃಷ್ಟಿ ಹರಿಸಿದಾಗ… 

ಜಾಗತೀಕರಣ  ಯಾವುದೇ ಆರ್ಥಿಕ ಬದಲಾವಣೆ ಸಾಮಾಜಿಕ ಮತ್ತು ನೈತಿಕ ಬದಲಾವಣೆಯನ್ನು ತರುತ್ತದೆ. ಕೈಗಾರೀಕರಣದ ಪ್ರಭಾವದಿಂದ ದೀರ್ಘಕಾಲದ ಕೆಲಸ ಒತ್ತಡದ ಜೀವನ ಹಾಗೂ ನಿಷ್ಕ್ರಿಯ ಸಾಮಾಜಿಕ ಜೀವನಗಳು ಮದುವೆಯ ಕಡೆಯಿಂದ ಅನ್ಯ ಸಂಬಂಧಗಳತ್ತ ಆಕರ್ಷಿಸುತ್ತದೆ.  ಪಾಶ್ಚಿಮಾತ್ಯೀಕರಣ ಆಧುನೀಕರಣದತ್ತ ಮಾರು ಹೋಗುತ್ತಿರುವ ಯುವ ಜನಾಂಗ ಪಾಶ್ಚಾತ್ಯ ಉಡುಗೊರೆಯಾದ ಲಿವ್ ಇನ್ ರಿಲೇಶನ್ ಶಿಪ್ ಅನ್ನು ಆಹಾರ ವಸ್ತ್ರ ಆಚಾರ ವಿಚಾರದಂತೆ ಇದನ್ನು ಕೂಡ ಅಂಧಾನುಕರಣೆ ಮಾಡುತ್ತಿದೆ. ಇವುಗಳೊಂದಿಗೆ ಜನಸಂಖ್ಯೆಯ ಚಲನಶೀಲತೆ (ಹೆಚ್ಚಿನ ಉದ್ಯೋಗ ನಿಮಿತ್ತ) ಸಹ ತನ್ನದೇ ಕೊಡುಗೆ ನೀಡುತ್ತಿದೆ .

ಮಹಿಳಾ ಶಿಕ್ಷಣ ಮಟ್ಟ ಏರಿಕೆ

ಪುರುಷರಂತೆ ಸ್ತ್ರೀಯರು ಸಹ ಶಿಕ್ಷಣ ಉದ್ಯೋಗ ಎಲ್ಲ ರಂಗಗಳಲ್ಲೂ ಸಮಾನತೆ ಹೊಂದುತ್ತಿದ್ದಾರೆ.  ಹಾಗಾಗಿ ಮದುವೆಯ ವಯಸ್ಸಿನ ಸರಾಸರಿ ಏರಿಕೆ ಮತ್ತು ವೈವಾಹಿಕ ಆಯ್ಕೆಯ ಸ್ವಾತಂತ್ರ್ಯ ಹಾಗೂ ಜೊತೆಯಲ್ಲಿ ಆರ್ಥಿಕ ಸ್ವಾತಂತ್ರ್ಯ ಇಂದಿನ ಯುಗದ ಮಹಿಳೆಯರನ್ನು ಹೆಚ್ಚು  ದಿಟ್ಥರಾಗಿಸುತ್ತದೆ. ಹೊಸದಾಗಿ ಸಂಬಂಧ ಬೆಳೆಸುವುದರೊಂದಿಗೆ ಗಂಡ ಹೆಂಡಿರ ನಡುವಣ ಪ್ರತ್ಯೇಕತೆ ಉದ್ವಿಗ್ನತೆ ಘರ್ಷಣೆ ಹೆಚ್ಚಿಸಿ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ . “ಜೀವನಕ್ಕಾಗಿ ಸತ್ತ ಸಂಬಂಧದ ಹೊರೆ ಹೊರುವುದಕ್ಕಿಂತ ಸಂಬಂಧವನ್ನು ಕೊನೆಗಾಣಿಸಿ ಕೊಳ್ಳುವುದು ಉತ್ತಮ” ಎಂಬ ನಿಲುವಿಗೆ ಅಂಟಿಕೊಳ್ಳುವುದನ್ನು ಕಾಣಬಹುದು. 

ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆ ಮಹಿಳೆಯರಾಗಲಿ ಪುರುಷರಾಗಲಿ ವೃತ್ತಿ ಜೀವನವೇ ಕೇಂದ್ರಬಿಂದು ಆಗುತ್ತಿದೆ.  ಹಾಗಾಗಿ ಮದುವೆಯ ವಯಸ್ಸಿನಲ್ಲಿ ವಿಳಂಬ, ವೈವಾಹಿಕ ಅಡ್ಡಿ ಪಡಿಸುವಿಕೆ ಮದುವೆಯ ಪೂರ್ವಭಾವಿಯಾಗಿಯೋ ಅಥವಾ ಮದುವೆಯವರೆಗಿನ ಸ್ಟಾಪ್ ಗ್ಯಾಪ್ ವ್ಯವಸ್ಥೆ ಆಗಿಯೋ ಈ ಲಿವ್ ಇನ್ ರಿಲೇಷನ್ ಶಿಪ್ ಗಳು ಜನಪ್ರಿಯ ಆಗುತ್ತಿವೆ . ಸಂಸಾರದಲ್ಲಿನ ನಿರ್ಬಂಧ ಅಸಮಾನತೆ ಹಾಗೂ ಮಾನಸಿಕ ದೈಹಿಕ ಹಿಂಸೆಗಳನ್ನು ಮೌನವಾಗಿ ಯಾರೂ ಸಹಿಸುತ್ತಿಲ್ಲ ಹೀಗಾಗಿ ಈ ಪದ್ಧತಿ 

ಸಾಂಸ್ಥಿಕ ವೈವಾಹಿಕ ಸಂಕೋಲೆಯಿಂದ ಬಿಡಿಸಿಕೊಳ್ಳುವ ಮಾರ್ಗವಾಗಿಯೂ ಪರಿಣಮಿಸಿದೆ .

ಆದರೆ ಭಾರತದಂತಹ ಪುರಾತನ ಸಂಸ್ಕೃತಿಯ ದೇಶದಲ್ಲಿ ಇದು ಸರಿಯೇ? ನಿಜಕ್ಕೂ ಇದು ಒಂದು ನೈತಿಕ ಅಧಃಪತನವೇ ಸರಿ.  ಮದುವೆ ಎಂಬುದು ಸಮಾಜ ಅಂಗೀಕರಿಸಿದ ರಕ್ಷಣೆ ಕೊಟ್ಟ ಒಂದು ವ್ಯವಸ್ಥಿತ ಒಡಂಬಡಿಕೆ. ನ್ಯಾಯಸಮ್ಮತವೂ ಸಹ . ಆದರೆ ಈ ಲಿವ್ ಇನ್ ಸಂಬಂಧಗಳು ಮನುಷ್ಯರಲ್ಲಿ ಬದ್ಧತೆಯ ಕೊರತೆಯನ್ನುಂಟು ಮಾಡುತ್ತದೆ.  ಬಟ್ಟೆ ಬದಲಿಸುವ ಹಾಗೆ ಸಂಗಾತಿಯನ್ನು ಬದಲಾಯಿಸಬಹುದು . ನೈತಿಕ ಸಾಮಾಜಿಕ ಮೌಲ್ಯಗಳು ಪ್ರಪಾತದ ದಾರಿ ಹಿಡಿಯುತ್ತಿರುವ ದ್ಯೋತಕ. ಕುಟುಂಬ ವ್ಯವಸ್ಥೆಯಲ್ಲಿ ಪ್ರಬಲವಾಗಿರುವ ಕರ್ತವ್ಯ’ ತ್ಯಾಗ, ಬದ್ಧತೆ ಮತ್ತು ವಿಧೇಯತೆ ಜಾಗದಲ್ಲಿ ಈ ಸಂಬಂಧ ಸ್ವಾರ್ಥ ,ಸಹವಾಸ ಕಾಮತೃಪ್ತಿ, ಸಮಾನತೆ ಮತ್ತು ಒಗ್ಗಿ ಕೊಳ್ಳುವಿಕೆ ಅಂತಹ ದುರ್ಬುದ್ಧಿ ಬಿತ್ತುತ್ತಿದೆ_  ಸಾಮಾಜಿಕ ಬಂಧಗಳ ಬಗ್ಗೆ ಅಗೌರವ ಸಂಬಂಧಗಳಲ್ಲಿ ಅಸಹನೆ ಅಸಹಿಷ್ಣುತೆಗಳು ಸ್ಯೆ ಕೊರತೆ ಹುಟ್ಟುಹಾಕುತ್ತಿದೆ . ಹಕ್ಕುಗಳು ಜವಾಬ್ದಾರಿಗಳೂ ಇರದ ಜೀವನ ದೀರ್ಘಕಾಲದಲ್ಲಿ ಮಾನಸಿಕ ಸಮಸ್ಯೆಗಳನ್ನು ತರುತ್ತದೆ ಇಲ್ಲಿ ದೈಹಿಕ ಹೊಂದಾಣಿಕೆ ಹಾಗೂ ಭಾವನಾತ್ಮಕ ಅಂಶಗಳೇ ಮುಖ್ಯವಾಗಲಿ ಬೇರೆ ಉತ್ತಮ ಅಂಶಗಳು ಗೌಣವಾಗುತ್ತದೆ . ಸಾಮಾಜಿಕ ಬೇಜವಾಬ್ದಾರಿತನ ಯಾವುದೇ ಭದ್ರತೆ ಇಲ್ಲದ ಸಂಬಂಧಗಳು ಅಕ್ರಮ ಸಂತಾನಗಳಿಗೆ ಅನೈತಿಕತೆಗೆ ಮತ್ತಷ್ಟು ಎಡೆಮಾಡಿಕೊಡುತ್ತದೆ . ಸಾಮುದಾಯಿಕವಾಗಿ ಗೌರವ ಸ್ಥಾನಮಾನಗಳಿರದೆ ನೋವುಗಳನ್ನು ಉಂಟು ಮಾಡುತ್ತದೆ.  ಕಾನೂನುಬದ್ಧವಲ್ಲದ ಜನ್ಮ ಕೊಟ್ಟ ಮಕ್ಕಳು ಮತ್ತು ಅವರ ಬೆಳವಣಿಗೆಯಲ್ಲಿ ಅವರ ಮಾನಸಿಕ ಪರಿಸ್ಥಿತಿ ಇವುಗಳ ಬಗ್ಗೆ ಯೋಚಿಸುವಾಗ ಬರೀ ಸ್ವಾರ್ಥಪರತೆ ಕಾಮ ವಾಂಛೆಗಳೇ ಪ್ರಧಾನವಾದ ಈ ಸಂಬಂಧಗಳು ಸಾಧುವೇ ಅಗತ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ .

ಭವ್ಯ ಪ್ರಾಚೀನ ಸಂಸ್ಕೃತಿಯ ನಮ್ಮ ದೇಶ ತನ್ನ ಕುಟುಂಬ ವ್ಯವಸ್ಥೆ ಪರಸ್ಪರ ಮಮತೆ ವಾತ್ಸಲ್ಯದಿಂದಲೇ ಪ್ರಪಂಚದಲ್ಲಿ ಪ್ರಸಿದ್ಧ . ಮೌಢ್ಯ ಅಂಧಾನುಕರಣೆಯಿಂದ ಸಚ್ಚರಿತೆಯ ಎಳನೀರನ್ನು ಬಿಟ್ಟು ಕೊಚ್ಚೆ ಗುಂಡಿನ ಕಲುಷಿತ ನೀರಿಗೆ ಆಸೆ ಪಡುವುದು ತರವೇ?  

*******************************************

3 thoughts on “ಲಿವಿಂಗ್ ಟುಗೆದರ್

Leave a Reply

Back To Top