ನಾಗರೀಕತೆಯನ್ನು ಆರಂಭಿಸಿದ ಮಿತ್ರರು

ಅಂಕಣ ಬರಹ-01

ಶಾಂತಿ ವಾಸು

ರೇಡಿಯೋ ಸಾಮ್ರಾಜ್ಯ

ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಬೆಂಗಳೂರು ಎಂಬುದು ಬಹು ನೆಮ್ಮದಿಯ ತಾಣವಾಗಿತ್ತು. ಕರ್ನಾಟಕದ ಬೇರೆ ಬೇರೆ ಹಳ್ಳಿಗಳು, ದೇಶದ ನಾನಾ ರಾಜ್ಯಗಳಿಂದ ಉದ್ಯೋಗ, ಜೀವನವನ್ನರಸಿ ಬಂದವರಿಗೆ ಬದುಕು ಸೃಷ್ಟಿಸುತ್ತಾ, ವಿವಿಧ ಸಂಸ್ಕೃತಿಯ ಜೊತೆಗೆ ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಬ ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ, ಬೆಳಕಿನ ಮೂಲವಾಗಿ ಪರಿಚಯವಾದ ಮನೆಗಳ ಬಲ್ಬುಗಳು, ಬೀದಿ ದೀಪಗಳು, ಸೈಕಲ್ಲಿಗೆ ಡೈನಾಮ ಲೈಟ್, (ಸೈಕಲ್ಲು ತುಳಿಯುವಾಗ ಪುಟ್ಟ ಬಲ್ಬ್ ಹೊತ್ತಿಕೊಳ್ಳುತ್ತಿತ್ತು.) ಈ ಡೈನಾಮ ಲೈಟುಗಳು ಬರುವ ಮೊದಲು ಬೆಳಕಿನ ಉದ್ದೇಶಕ್ಕಾಗಿ ದೀಪ ಆರಿಹೋಗದಿರಲು ಸೀಮೆಎಣ್ಣೆ ಜೊತೆಗೆ ಎರಡು ಮೂರು ತರಹದ ಎಣ್ಣೆಯನ್ನು ಮಿಶ್ರ ಗೊಳಿಸಿ, ಹಸಿರು ಹಾಗೂ ಕೆಂಪು ಗಾಜಿನ ವಿಭಜಕಗಳಿದ್ದ  ಸಣ್ಣ ಬಡ್ಡಿ ದೀಪದಲ್ಲಿ ತುಂಬಿಸಿ, ರಾತ್ರಿ ಹೊತ್ತು ರಸ್ತೆಗಳಲ್ಲಿ ದೀಪ ಉರಿಸಿಕೊಂಡು ಹೋಗುತ್ತಿದ್ದುದನ್ನು ಹಾಗೂ ಈ ವ್ಯವಸ್ಥೆ ಆಗಿನ ಕಾಲಕ್ಕೆ ಕಡ್ಡಾಯವಾಗಿತ್ತು ಎಂಬುದನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಇದು ಈ ಶೀರ್ಷಿಕೆಗೆ ಅನ್ವಯವಾಗದಿದ್ದರೂ, ನಮ್ಮಂಥ ಎಷ್ಟೋ ಜನರಿಗೆ ಇದು ಹೊಸ ವಿಷಯವಾದ್ದರಿಂದ ಹೇಳುತ್ತಿದ್ದೇನೆ ಅಷ್ಟೇ.

70ರ ದಶಕದಲ್ಲಿ ಮಧ್ಯಮ ವರ್ಗದವರಿಗೆ ಸ್ಕೂಟರು, ಕ್ಯಾಮೆರಾಗಳು, ಲೈಟರಿನಲ್ಲಿ ಉರಿಯುವ ಗ್ಯಾಸ್ ಸ್ಟವುಗಳು ಕೈಗೆಟುವ ಹಾಗಾದುವಲ್ಲದೆ,  ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ಲಿನ ವಸ್ತುಗಳಾದ ಟ್ಯೂಬ್ ಲೈಟು, ಜನರೇಟರ್, ಆಂಟೆನಾ ಇದ್ದ ಟ್ರಾನ್ಸಿಸ್ಟರ್, ಎಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆ, ಮಿಕ್ಸಿ, ನೀರು ಕಾಯಿಸುವ ಕಾಯಿಲ್, ಗೀಸರ್, ಕ್ಯಾಸೆಟ್ಟುಗಳಲ್ಲಿ ಹಾಡು ಕೇಳಬಹುದಾದ ಸ್ಟೀರಿಯೋ, , ಗ್ರಾಮಾಫೋನ್, ಕಾರ್ಯಕ್ರಮ ಹಾಗೂ ಸಮಾರಂಭದಲ್ಲಿ ಎತ್ತರದ ಕಂಬ, ಮರಗಳು, ಕಟ್ಟಡಗಳ ಮೇಲೆ ಕಟ್ಟುವ ಸ್ಪೀಕರುಗಳು, ನೀರಿನ ಮೋಟರು, ಟೇಬಲ್ ಫ್ಯಾನುಗಳು, ಸೀಲಿಂಗ್ ಫ್ಯಾನುಗಳು, ಗ್ರೈಂಡರ್, ಮನೆಯ ಮೇಲೆ ಆಂಟೆನಾ ಕಟ್ಟಬೇಕಿದ್ದ ಟೆಲಿವಿಷನ್, ಆಂಟೆನಾ ಇದ್ದ ಫೋನು, ಮೈಕುಗಳು, ಹೀಗೆ ಒಂದೊಂದಾಗಿ ಪರಿಚಯವಾಗುತ್ತಾ 20 ರೂಪಾಯಿಗೆ ಒಂದು ಆಟೋಮ್ಯಾಟಿಕ್ ಕೈಗಡಿಯಾರ ಎಂಬುದಂತೂ ಆಗಿನ  ಒಂದು ದೊಡ್ಡ ಕ್ರಾಂತಿಕಾರಿ ಬೆಳವಣಿಗೆಯಾಗಿ ಹೋಯಿತು.

ಮೇಲೆ ಹೇಳಿದ ವಿಷಯವು, ಬೆಂಗಳೂರಿನ ಜನಸಾಮಾನ್ಯರು 70ರ ದಶಕದಲ್ಲಿ, ಹಲವಾರು ಹೊಸತುಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳುತ್ತಾ  ಜೀವನಶೈಲಿಯನ್ನು  ಉನ್ನತವಾಗಿಸಿಕೊಂಡು, ಬೆಳವಣಿಗೆಗೆ ಒಗ್ಗಿಕೊಂಡ ಸಂಕ್ಷಿಪ್ತ ಪಕ್ಷಿನೋಟಕ್ಕೆ ಸಾಕ್ಷಿಯಾದರೆ, ಅದೇ ದಶಕಕ್ಕೆ ಎಂಟು ಅಥವಾ ಹತ್ತು ವರ್ಷದ ಮಕ್ಕಳಾಗಿದ್ದವರಿಗೆ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಾದವರಿಗೆ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಜಾಹೀರಾತು ಎಂದಾಕ್ಷಣ ಇಂದಿಗೂ, ಎಂದಿಗೂ ನೆನಪಾಗುವುದು ಬಿನಾಕ ಹಲ್ಲುಪುಡಿ, ಗೋಪಾಲ್ ಹಲ್ಲುಪುಡಿ, ಕೋಲ್ಗೇಟ್ ಹಲ್ಲುಪುಡಿ, ವೀಕೋ ವಜ್ರದಂತಿ, ಲೈಫಬಾಯ್ ಸೋಪು ಎನ್ನುವುದು ಆಗಾಗ ಮೇಲುಕುಹಾಕುವ ವಿಚಾರ.

ಆಗೆಲ್ಲ ಸುದ್ದಿ ಹಾಗೂ ಜಾಹೀರಾತಿನ ಮಾಧ್ಯಮವಾಗಿ ಬಾವುಟಗಳು, ಪೋಸ್ಟ್ ಕಾರ್ಡುಗಳು, ಟೆಲಿಗ್ರಾಂ ಹಾಗೂ ಪತ್ರಿಕೆಗಳು ಮಾತ್ರ ಪ್ರಚಲಿತದಲ್ಲಿದ್ದು, ಏನೇ ಸುದ್ದಿ ಇದ್ದರೂ ಮಾರನೇ ದಿನವೋ ಅಥವಾ ಎಂದಿಗೂ ತಿಳಿಯುತ್ತಿತ್ತು. ಎಷ್ಟೋ ವಿಷಯಗಳು ಕೆಲವೊಮ್ಮೆ ತಿಳಿಯುತ್ತಲೇ ಇರಲಿಲ್ಲವೆಂಬುದು ಸಾರ್ವಕಾಲಿಕ ವಿಪರ್ಯಾಸವೇ ಹೌದು. ಟೆಲಿಗ್ರಾಂ ಎಂದರೆ ಅಳಿಸುವುದಕ್ಕೇ ಬರುವುದು ಎನ್ನುವುದು ಆಗಿನ ಜನರ ನಂಬಿಕೆಯಾಗಿತ್ತು.

ಹೀಗಿರುವಾಗ ಕಡಿಮೆ ವಿದ್ಯುತ್ತನ್ನು ಬಳಸಿ, ಆಗಿಂದಾಗ್ಗೆ ಸುದ್ದಿ ತಿಳಿದುಕೊಳ್ಳವ ಹಾಗೂ ಜನರ ಮನರಂಜನೆಗಾಗಿ ಬಂದ ಮೊದಲ ಹೆಜ್ಜೆ ಗುರುತಾದ ರೇಡಿಯೋವನ್ನು ಶ್ರೀಸಾಮಾನ್ಯರು ಸಂತಸದಿಂದಲೇ ಸ್ವಾಗತಿಸಿದ್ದರು. ಕರ್ನಾಟಕದ ಜನಸಾಮಾನ್ಯರಿಗೆ ಹಿಂದಿ ಭಾಷೆಯ ಪರಿಚಯ ಮಾತ್ರ ರೇಡಿಯೋ ಬಂದ ನಂತರವೇ ಆದದ್ದು ಸುಳ್ಳಲ್ಲ. ಹಾಗಾಗಿಯೇ 1940 ರಿಂದ 1980 ರವರೆಗಿನ ಕಾಲಘಟ್ಟವನ್ನು ಹಿಂದಿ ಹಾಡುಗಳ “ಸುವರ್ಣ ಯುಗ” ಎಂದು ಕರೆಯಬಹುದು. “ಮರ್ಫಿ” ಸಂಸ್ಥೆಯ ರೇಡಿಯೋಗಳು ಆಗಿನ ಕಾಲದ ಹೆಮ್ಮೆಯ ಉತ್ಪನ್ನವಾಗಿತ್ತು.

ಶೆಲ್ಲಿನ ಸಹಾಯದಿಂದ ಚಲಾಯಿಸಬಹುದಾಗಿದ್ದ ಟ್ರಾನ್ಸಿಸ್ಟರುಗಳಿಗೆ ವಿದ್ಯುತ್ ಬೇಕಿರಲಿಲ್ಲವೆಂಬುದು ಆ ದಿನಗಳ ವಿಶೇಷ. ಪೆಟ್ಟಿಗೆ ಗಾತ್ರದ ರೇಡಿಯೋನಲ್ಲಿ ಮುಂದೆ ಇದ್ದ ಬ್ಯಾಂಡಿನ ಸಹಾಯದಿಂದ ಅತ್ತಿತ್ತ ಓಡಾಡುತ್ತಿದ್ದ ಮುಳ್ಳನ್ನು ನಿರ್ದಿಷ್ಟ ಸಂಖ್ಯೆಯ ಮೇಲೆ ನಿಲ್ಲಿಸಿದರೆ  ಹಾಡುಗಳು, ವಾರ್ತೆಗಳು ಹಾಗೂ ಕ್ರಿಕೆಟ್ಟಿನ ಕಾಮೆಂಟರಿಯನ್ನು ಕೇಳಬಹುದಿತ್ತು. ತರಂಗಾಂತರದ ಮೂಲಕ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಹಲವಾರು ಅಡಚನೆಗಳಿಂದ ಕೂಡಿರುತ್ತಿದ್ದು, ಮಧ್ಯೆ ಅಲೆಯ ಶಬ್ದ ಕೇಳುತ್ತಿತ್ತು. ಅನೇಕ ಸಂಧರ್ಭಗಳಲ್ಲಿ ಏನೂ ಕೇಳಿಸದೆಯೂ ನಿಂತು ಹೋಗುತ್ತಿತ್ತು. ಆಗ ಅಕ್ಕಪಕ್ಕದ ಮನೆಗಳಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿಯನ್ನು ಜನ ಅರಸಿ ಹೋಗುತ್ತಿದ್ದುದು ಆ ಕಾಲದ ಜನರಿಗೆ ರೇಡಿಯೋ ಪ್ರೀತಿ ಎಷ್ಟಿತ್ತು ಎಂದು ತಿಳಿಯುತ್ತದೆ.

ಇಷ್ಟೇ ಅಲ್ಲ, ಉದ್ಯಾನವನಗಳಲ್ಲಿ ಪ್ರತಿ ಸಂಜೆ (ಭಾನುವಾರ ಹೊರತುಪಡಿಸಿ) ಒಂದು ನಿರ್ಧಿಷ್ಟ ಸಮಯದಲ್ಲಿ ಪ್ರಸಾರವಾಗುತ್ತಿದ್ದ ರೇಡಿಯೋ ಕಾರ್ಯಕ್ರಮ ಕೇಳಲು ಜನರು ತಂಡೋಪತಂಡವಾಗಿ ಜಮಾಯಿಸಿರುತ್ತಿದ್ದರು. ಉದ್ಯಾನದ ಮಧ್ಯೆ, ರೇಡಿಯೋ ಹಾಕಿ ಎತ್ತರದ ಕಂಬಗಳ ಮೇಲೆ ಸ್ಪೀಕರುಗಳನ್ನು ಕಟ್ಟಿ ಆ ಮೂಲಕ ಜನರಿಗೆ ಸುದ್ದಿಗಳು, ಹಾಡು, ಕ್ರಿಕೆಟ್ ಕಾಮೆಂಟರಿ, ಶಾಸ್ತ್ರೀಯ ಸಂಗೀತ ಹೀಗೆ ಅನೇಕ ಕಾರ್ಯಕ್ರಮಗಳನ್ನು ಕೇಳಿಸಲಾಗುತ್ತಿತ್ತು.   ಕೆಲವೊಮ್ಮೆ ರೇಡಿಯೋಗಳ ಜೊತೆಜೊತೆಗೆ ಆಗ ತೆರೆಕಂಡ ಕಪ್ಪುಬಿಳುಪು ಸಿನಿಮಾಗಳನ್ನು, ಆ ದಿನಗಳಲ್ಲಿ ರಾತ್ರಿ ಹೊತ್ತು ರಸ್ತೆಗಳಲ್ಲಿ ಪ್ರೊಜೆಕ್ಟರ್ ಮೂಲಕ ಎತ್ತರದ ಪರದೆ ಮೇಲೆ ಪ್ರದರ್ಶಿಸುತ್ತಿದ್ದರು. ಮಕ್ಕಳಿಗಾಗಿ ಮೌಲ್ಯಾಧಾರಿತ ಕನ್ನಡದ ಸಿನಿಮಾಗಳನ್ನು ಶಾಲೆಗಳಲ್ಲಿಯೂ ಪ್ರದರ್ಶಿಸುತ್ತಿದ್ದರು. ಮಿಕ್ಕಂತೆ  ಚಿತ್ರಮಂದಿರಗಳಿಗೆ, ಟೆಂಟುಗಳಿಗೆ  ಹೋಗಿ ದುಡ್ಡು ಕೊಟ್ಟು ನೋಡಬೇಕಾಗಿತ್ತಾಗಲೀ, ಈಗಿನಂತೆ ಟಿವಿಯ ವಿವಿಧ ಚಾನೆಲ್ಲುಗಳು, ಕಂಪ್ಯೂಟರ್, ಲ್ಯಾಪ್ ಟಾಪ್ ಮೊಬೈಲ್ ಅಥವಾ ಟ್ಯಾಬ್ಲೆಟ್ಟುಗಳು ಆಗ ಇರಲಿಲ್ಲ. ಹಾಗಾಗಿ ಸಿನಿಮಾ ಹಾಡುಗಳನ್ನು ಕೇಳಲು ರೇಡಿಯೋ ಎಂಬುದು, ಆಗಿನ ಕಾಲದ ಜನರ ಆಪ್ತಮಿತ್ರ ಎಂದರೆ ತಪ್ಪಾಗದು.

*************************************************

Leave a Reply

Back To Top