ಬಣ್ಣದ ಚಿಟ್ಟೆಗಳು

ಕಥೆ

ಬಣ್ಣದ ಚಿಟ್ಟೆಗಳು

ವಾಣಿ ಅಂಬರೀಶ

Red and black butterflies. The composition of a bright red and black butterfly butterflies on a white background. Tattoo style. Morpho vector illustration

ಈ ಊರಿನ ಕುವರ ಆ ಊರಿನ ಕುವರಿ

ಅವಳೆಲ್ಲೋ ಇವನ್ನೇಲ್ಲೋ,,

ಇನ್ನೂ ಇವರಿಬ್ಬರ ಪ್ರೀತಿ ಇನ್ನೇಲ್ಲೋ..

ಅದೇ ನಾ ಹೇಳ ಬಯಸುವ ಇವರಿಬ್ಬರ ನಡುವೆ ಪ್ರೀತಿ ಬೆಸೆಯುವ ಪ್ರೇಮದ ಕಥೆ..

ಮಲ್ನಾಡಿನ ಮುದ್ದು ಮನಸ್ಸಿನ ಬೆಡಗಿ, ಕೊಡಗಿನ ಕುವರಿ ಈ ಸ್ವಪ್ನ ಸುಂದರಿ, ಇವಳೇ ಈ ಕಥೆಯ ಕಥಾನಾಯಕಿ

“ನಯನಶ್ರೀ “

ಈ ಭೂಮಿಯ ಮೇಲಿರುವ ಅದ್ಭುತಗಳಲ್ಲೊಂದಾದ ಆ ಮಲೆನಾಡಿನ ಹಸಿರ ಸಿರಿಯ ಸೊಬಗಿನಲ್ಲಿ ಚಂದದಿ ನಲಿದಾಡುತ ಬೆಳೆದಿರುವಳು ಈ ಕಥೆಯ ನಾಯಕಿ..

ಅನಂತಸ್ವಾಮಿ ಮತ್ತು ವೈದೇಹಿ ಎಂಬ ದಂಪತಿಗಳ ಪುತ್ರಿ ನನ್ನ ಕಥೆಯ ಸುಂದರಿ…ಇವರಿಗೆ ಆರತಿಗೂ ಒಬ್ಬಳೇ, ಕೀರುತಿಗೂ ಇವಳೊಬ್ಬಳೆ ಹಾಗಾಗಿ ಇನ್ನಷ್ಟು ಪ್ರೀತಿ, ಮಮತೆ,

ಅಪ್ಯಾಯತೆಗಳ ಜೊತೆಗೆ ಚಿನ್ನದ ಗಣಿಯ ಹಾಗೇ ಜೋಪಾನ ಮಾಡುತ್ತಿದ್ದರು.

ಈ ನಮ್ಮ ಕಥಾನಾಯಕಿಯ ಚೆಲುವ ಬಣ್ಣಿಸಲು ಅದೆಷ್ಟು ಮಣಿಮುತ್ತಿನ ಹಾರ ಪೋಣಿಸಿದರೂ ಸಾಲದು..

ಮೋಡದ ಮರೆಯ ಚಂದಿರನಂತೆ ಮುದ್ದು ಬಿಂಬ,

ಪ್ರಕೃತಿಯ ಮಡಿಲಿನಲಿ ಆಕೃತಿಯ ರೂಪವಾಗಿ ನಮ್ಮ ಸಂಸ್ಕೃತಿಯೇ ಮೆಚ್ಚುವಂತಹ ಶ್ವೇತಾ ಸುಂದರಿ, ಚೆಲುವಿನ ಚಿತ್ತಾರದ ಚೈತ್ರ ಚಂದಿರನಂತೆ ಅವಳ ಚೆಲುವು, ಕಣ್ಣಿನೊಳಗೆ ಸೌಂದರ್ಯವೋ ಸೌಂದರ್ಯದೊಳಗೆ ಕಣ್ಣೋ ಎನ್ನುವಂತಹ ನಯನಗಳು, ಉದ್ದನೇಯ ರೇಷ್ಮೆಯ ನೂಲಿನಂತಹ ಕೇಶರಾಶಿಯಿಂದ ಸೌಂದರ್ಯ ದೇವತೆಗೆ ಸೆಡ್ಡು ಹೊಡೆಯುವಂತೆ ಇದ್ದಳು..

ಇನ್ನು ನಮ್ಮ ಕಥಾನಾಯಕನ ಬಗ್ಗೆ ಹೇಳುವುದಾದರೆ, ಇವನ್ನೊಬ್ಬ ಬಿಸಿಲನಾಡು ರಾಯಚೂರಿನ ಗಂಡೆದೆಯುವಕ,

ಈ ಕಥೆಯ ಕಥಾನಾಯಕ “ಶತಾವರ “..

ರಾಮಮೂರ್ತಿ ಹಾಗೂ ಲಕ್ಷ್ಮೀ ಎಂಬ ದಂಪತಿಗಳ ಮೂವರು ಮಕ್ಕಳಲ್ಲಿ ನಮ್ಮ ಕಥೆಯ ನಾಯಕ ಕಿರಿಯ ಪುತ್ರನು. ಶ್ವೇತ ಮತ್ತು ಸ್ವಾತಿ ಎಂಬ ಸಹೋದರಿಯರ ಜೊತೆ ಆಟ, ಪಾಠ, ಚೇಷ್ಟೆಗಳ ಜೊತೆಗೆ ವಿದ್ಯಾ-ಬುದ್ದಿವಂತನಾಗಿ ಬೆಳೆಯುತ್ತಾನೆ.

ನಮ್ಮ ನಾಯಕನೂ ಸಹ ಸುಂದರನಾಗಿರುತ್ತಾನೆ, ಎತ್ತರದ ಮೈಕಟ್ಟು, ಗೋದಿ ಬಣ್ಣದವನಾಗಿರುತ್ತಾನೆ..

ರೇಷ್ಮೆಯಂತಹ ಕೇಶರಾಶಿಯಡಿ

ಚಂದನವನವೇ ನಾಚುವಂತ ಕೋಲ್ಮಿಂಚಿನ ಕಣ್ಣುವುಳ್ಳವ,,

ಮರೆಯದಂತೆ ಮುಖದಲಿ ಮಂದಹಾಸ ಮೂಡಿಸುವ ಸುಂದರ ಮೊಗದ ಸೋಜಿಗ..

ಇವನೇ ಈ ಕಥೆಯ ಬಿಸಿಲಸಿಮೆಯ ಕಥಾನಾಯಕ

“ಶತಾವರ “..

ಇವರಿಬ್ಬರ ಜೀವನದ ಗುರಿ, ತಲುಪಬೇಕಾದ ದಾರಿ ಒಂದೇ ಆಗಿದ್ದರೂ ಪ್ರಯಾಣಿಸುವ ದಿಕ್ಕು ಮಾತ್ರ ಬೇರೆ ಬೇರೆಯಾಗಿರುತ್ತದೆ. ಇಬ್ಬರು ಸಹ ಉತ್ತಮ ಸಮಾಜದ ನಿರ್ಮಾಣ, ಜನಸೇವೆ ಈ ಸಮಾಜದ ಬಗೆಗಿನ ಕಳಕಳಿ ಉಳ್ಳವರಾಗಿರುತ್ತಾರೆ. ಹಾಗಾಗಿ ಇಬ್ಬರು ಸಹ ಆಯ್ಕೆ ಮಾಡಿಕೊಂಡಿರುವುದು ಐ.ಎ.ಸ್ ಎಂಬ ಉನ್ನತವಾದ ಗೌರವಾನ್ವಿತ ಪದವಿ. ಇದರಿಂದ ಅವರ ಆಸೆಗಳ ಪೂರೈಸಿಕೊಳ್ಳುವ ನಿಟ್ಟಿನಲ್ಲಿರುತ್ತಾರೆ..

ನಂತರದ ದಿನಗಳಲ್ಲಿ ಶತಾವರ ರವರು ಐ.ಎ.ಸ್ ಪರೀಕ್ಷೆ ತೇರ್ಗಡೆಯಾಗಿ ಎರಡು ವರ್ಷದ ಪ್ರೋಬೆಷನರಿ ಅವಧಿ ಮುಗಿಸಿಕೊಂಡು ಕೊಡಗು ಜಿಲ್ಲೆಯ ಸಿ.ಇ.ಒ ಆಗಿ ನೇಮಕ ಹೊಂದುತ್ತಾರೆ. ಇನ್ನೂ ನಯನಶ್ರೀ ಅವರು ತಮ್ಮ ಕನಸನ್ನು ಪೂರೈಸುವ ಹಾದಿಯಲ್ಲಿರುತ್ತಾರೆ.

ಶತಾವರ ರವರು ತಮ್ಮ ಮೊದಲ ದಿನದ ಕೆಲಸಕ್ಕೆ ಅತ್ಯಂತ ಉತ್ಸುಕರಾಗಿ ಸೇರುತ್ತಾರೆ. ಇವರಿಗೆ ಎಲ್ಲಾ ಜವಾಬ್ದಾರಿಗಳ ಅರಿವಿರುತ್ತದೆ ಹಾಗೂ ಅವರ ಕಾರ್ಯವೈಖರಿಯಿಂದ ಎಲ್ಲರ ಮನ ಗೆದ್ದಿರುತ್ತಾರೆ.

ಹಾಗೆ ಒಂದು ದಿನ ಕೊಡಗಿನ ಒಂದು ಕಾಲೇಜಿನ ಇಪ್ಪತ್ತೈದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗಿಯಾಗಿರುತ್ತಾರೆ. ನಯನಶ್ರೀಯು ಕೂಡ ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿರುವುದರಿಂದ ಅವಳ ಸ್ನೇಹಿತೆಯರೊಡನೆ ಬಂದಿರುತ್ತಾಳೆ.

ಇನ್ನೇನು ಕಾರ್ಯಕ್ರಮ ಶುರುವಾಗುತ್ತದೆ ಹಲವು ಗಣ್ಯರು ಸೇರಿ ಜ್ಯೋತಿ ಬೆಳೆಗಿಸುವ ಮೂಲಕ. ಕೆಲ ಗಣ್ಯರ ಭಾಷಣದ ನಂತರ ನೂತನ ಸಿ.ಇ.ಒ ಶತಾವರರವರ ಸರದಿ ಬಂದಾಗ ಅವರ ಮಾತುಗಳು ಯಾವ ವಾಕ್ ಚಾತುರ್ಯರಿಗೂ ಕಡಿಮೆ ಇಲ್ಲ ಎಂಬಂತೆ ಇದ್ದವು, ಕೇಳುಗರನ್ನು ಅವರ ಮಾತಿನಿಂದಲೇ ಮಂತ್ರ

ಮುಗ್ಧರನ್ನಾಗಿಸುತ್ತಿದ್ದರು, ಅವರ ಸೂರ್ಯನ ಹೊಳಪಿನ ಕಣ್ಣುಗಳಿಂದ ಎಲ್ಲಾ ಜನರ ಚಿತ್ತವನ್ನು ಕಟ್ಟಿಹಾಕಿಕೊಂಡಿದ್ದರು.

ಅವರ ಭಾಷಣ ಮುಗಿಯುವ ತನಕ ನಯನಶ್ರೀ ಅಂತು ಬೇರಾವುದೋ ಲೋಕದಲ್ಲಿ ಮಗ್ನಳಾಗಿರುತ್ತಾಳೆ.

ಭಾಷಣ ಮುಗಿದ ನಂತರ ಚಪ್ಪಾಳೆಯ ಧ್ವನಿಯಿಂದ ಎಚ್ಚೆತ್ತುಕೊಂಡಳು.. ಶತಾವರರವರ ಮಾತುಗಳು ಕೇಳಿದ ಅವಳು ಮೊದಲ ನೋಟದಲ್ಲಿಯೇ ಅವರಿಗೆ ಮನಸೋತು ತನ್ನ ಪುಟ್ಟ ಹೃದಯದಲ್ಲಿ ದೊಡ್ಡದಾದ ದೇವಾಲಯವನ್ನೇ ನಿರ್ಮಿಸಲಾರಂಭಿಸಿದಳು.

ನಂತರದ ದಿನಗಳಲ್ಲಿ ಇವರೇಕೆ ಹೀಗೆ ಈ ಸಮಾಜದ ಬಗ್ಗೆ ನನಗಿರುವ ಆಸೆ, ಕನಸುಗಳನ್ನು ಹೋತ್ತುಕೊಂಡಿದ್ದಾರಲ್ಲ, ಎಲ್ಲೋ ಇದ್ದ ನಾವಿಬ್ಬರು ಹೇಗೆ ಒಂದೇ ಹಾದಿಯಲ್ಲಿ ಯೋಚಿಸಲು ಹೇಗೆ ಸಾಧ್ಯ, ಹೀಗೆ ಹಲವಾರು ವಿಷಯಗಳು ನಮ್ಮ ಕಥಾನಾಯಕಿಯ ಮನಸ್ಸಿನ ನೆಮ್ಮದಿಗೆ ಅಡ್ಡಿಪಡಿಸುತ್ತಿದ್ದವು.

ಹಾಗೆಯೇ ಶತಾವರರವರನ್ನು ಸೂಕ್ಷ್ಮವಾಗಿ ತೆರೆಮರೆಯಲ್ಲಿ ಗಮನಿಸುತ್ತಾ ಅವರ ಬಗ್ಗೆ ತನ್ನಲ್ಲೇ ಇರುವ ಪ್ರೀತಿಯ ಹೂವಿಗೆ ನೀರೆರೆದು ಜೋಪಾನ ಮಾಡುತ್ತಿದ್ದಳು.

ಹಾಗೆ ಒಂದು ದಿನ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ ನಯನಶ್ರೀಗೆ ನೆನಪಾಗುವುದೇ, ಪಾರಿವಾಳಗಳ ಮೂಲಕ ಸಂದೇಶ ರವಾನಿಸುತ್ತಿದ್ದ ಹಳೆಯ ದಿನಗಳು.

ಆದರೆ, ಈಗ ನಾವಿರುವ ಕಾಲದಲ್ಲಿ ಅಂತಹ ಪಾರಿವಾಳಗಳು ಸಿಕ್ಕುವುದಿಲ್ಲವಲ್ಲವೇ…?? ಅದಕ್ಕಾಗಿ ಅವಳೊಂದು ಅನಾಮಧೇಯ ಪತ್ರದಲ್ಲಿ ಶತಾವರರವರ ಆಡಳಿತ ದಕ್ಷತೆ,ಕಾರ್ಯ ವೈಖರಿ, ಜನರ ಸಮಸ್ಯೆಗಳ ಅವಲೋಕಿಸುವ ಪರಿ, ಅವರ ಪ್ರಾಮಾಣಿಕತೆ, ಅವರೆಡೆ ಕೆಲಸ ನಿರ್ವಹಿಸುತ್ತಿದ್ದ ಉಳಿದ ನೌಕರರ ಕಡೆ ಅವರಿಗಿರುವ ಗೌರವ ಹಾಗೂ ಅವರು ಹಾಜರಾಗುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ, ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ಮತ್ತು ಹೀಗೆ ಹಲವಾರು ಅವರ ಚಟುವಟಿಕೆಗಳ ಬಗ್ಗೆ ಬರೆದು ಕಛೇರಿಯ ವಿಳಾಸಕ್ಕೆ ಕಳುಹಿಸುತ್ತಿದ್ದಳು..

ಹೀಗೆ ಸತತ ಕೆಲ ದಿನಗಳ ಕಾಲ ನಡೆಯುತ್ತಾ ಇರುತ್ತದೆ.. ಶತಾವರ ರವರಿಗೂ ಸಹ ದಿನಾಲೂ ಬರುವ ಪತ್ರಗಳನ್ನು ಓದುತ್ತಾ ಯಾರಿರಬಹುದು ಇವರು, ನನ್ನ ಬಗ್ಗೆ ಇಂತಹ ಒಳ್ಳೆಯ ಅಭಿಪ್ರಾಯವನ್ನಿಟ್ಟುಕೊಂಡು, ನಾ ಹೋಗಿ ಬಂದ ಕಡೆಗಳ ಬಗೆಗೂ ಹೇಳುತ್ತಿದ್ದಾರಲ್ಲ ಎಂಬ ಸಣ್ಣ ಕುತೂಹಲ ಹಾಗೆ ಬಂದು ಹೋಗುತ್ತದೆ.

ಈಗಾಗಲೆ ಸಿ.ಇ.ಒ ರವರ ಮನದಲ್ಲಿ ಸಣ್ಣದೊಂದು ಕುತೂಹಲ ಮೂಡಿಸಿರುವ ನಯನಶ್ರೀ ಮುಂದಿನ ದಿನಗಳಲ್ಲಿ ಅವರ ಬಗ್ಗೆ ತನ್ನದೇ ಆದ ಮಾತುಗಳ ಸಾಲುಗಳನ್ನು ಬರೆಯುತ್ತಾಳೆ.

ಅವರ ಚೆಲುವ ನೋಡಿ ಇವಳಾಗುತ್ತಾಳೆ ಕವಯಿತ್ರಿ, ಬರೆಯುತ್ತಾಳೇ ಬಣ್ಣಿಸಿ ಬರಹಗಾರ್ತಿಯಾಗಿ…

ಇವನಾರವ ಸುಂದರ ಸೋಜಿಗ,,

ಕಣ್ಣರಳಿಸಿ ನೋಡಿದಷ್ಟು ಸುಂದರ,,

ಬಣ್ಣಿಸಲಾರೆ ನಾ ಇನ್ನೂ ಅವನ ಚೆಲುವ…

ಮುಂಜಾನೆಯ ನಗುವಿನಲಿ ಪೂರ್ಣ ಸೂರ್ಯ ಪ್ರಕಾಶದಂತೆ,,

ಇಳಿ ಸಂಜೆಯಲಿ ಸುಂದರ ಮುದ್ದು ಚಂದಿರನಂತೆ…

ನಾನಾದೆ ಇವನಿಗೆ ಮೂಖವಿಸ್ಮಿತ…

ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಬಣ್ಣಿಸುತ್ತಾ ಅವಳು ಅನಾಮಧೇಯ ಪತ್ರಗಳ ಮೂಲಕ ತನ್ನ ಮನದ ಭಾವನೆಗಳನ್ನು ಬರೆದು ಕಛೇರಿಗೆ ಪತ್ರಗಳನ್ನು ಕಳಿಸುತ್ತಾ ಇರುತ್ತಾಳೆ.

ಇನ್ನೂ ಇವೆಲ್ಲ ಗಮನಿಸುತ್ತಾ, ಎಲ್ಲಾ ಪತ್ರಗಳನ್ನು ಓದುತ್ತಾ ಯಾರೀ ಸ್ವಪ್ನ ಸುಂದರಿ, ಈ ರೀತಿಯಲಿ ನನ್ನ ಮನವ ಕಾಡುತಿಹಳು ಎಂದು ಆಕೆಯ ಮೊಗವ ನೋಡದೇನೆ ಇವರ ಮನಸ್ಸಿನಲ್ಲಿಯೂ ಸಣ್ಣದಾದ ಬಯಕೆ ಚಿಗುರು ಹೊಡೆಯುತ್ತದೆ.ಗ

ಪ್ರೀತಿಯ ಆಸೆಯ ಕಂಗಳಿಂದ ಅವಳು ಕಳುಹಿಸುವ ಪ್ರತ್ರಕ್ಕಾಗಿ

ಕಾಯುವ ತವಕವೂ ಬರುತ್ತದೆ.

ಹೀಗಿರುವಾಗ ನಯನಶ್ರೀಯು ಒಮ್ಮೆ ತನ್ನ ಪತ್ರದಲ್ಲಿ ಆಕೆಯ ಹೆಸರು ಮತ್ತು ಅವಳ ಸಂಕ್ಷಿಪ್ತ ವಿವರಗಳೊಂದಿಗೆ ನಿಮ್ಮನ್ನೊಮ್ಮೆ ಭೇಟಿಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ. ಹಾಗೆ ಆ ಪತ್ರದ ಹಿಂಬದಿಯಲ್ಲಿ ನಿಮಗೂ ನನ್ನೋಮ್ಮೆ ಭೇಟಿ ಮಾಡವ ಇಚ್ಛೆ ಇದ್ದಲ್ಲಿ ನನ್ನ ನಾಳೆಯ ಪತ್ರದಲ್ಲಿ ಸಮಯ ಮತ್ತು ಭೇಟಿ ಮಾಡುವ ಸ್ಥಳದ ಬಗ್ಗೆ ತಿಳುಸುತ್ತೇನೆ ಹಾಗೂ ನಿಮಗಾಗಿ ನಾ ಕಾಯುತ್ತಾ ಇರುತ್ತೇನೆ ಎಂದು ಬರೆಯುತ್ತಾಳೆ.

ಶತಾವರರವರಿಗೂ ನಯನಶ್ರೀಯನ್ನೂ ನೋಡಬೇಕೆಂಬ ಇಚ್ಛೆ ಇದ್ದುದರಿಂದ ಮಾರನೇಯ ದಿನದ ಅವಳ ಪತ್ರಕ್ಕಾಗಿ ಕಾಯುತ್ತಿರುವಾಗ ಅವಳ ಪತ್ರ ಬರುತ್ತದೆ. ಅದರಲ್ಲಿ ಮೊದಲೇ ತಿಳಿಸಿದ ಹಾಗೆ ಸಮಯ ಮತ್ತು ಸ್ಥಳದ ಬಗ್ಗೆ ಬರೆದಿರುತ್ತಾಳೆ..ಆದೇ ದಿನದ ತಿಳಿ ಸಂಜೆಯಲಿ ಒಬ್ಬರನ್ನೊಬ್ಬರು ಭೇಟಿ ಮಾಡುವ ಸಂದರ್ಭ ಬರುತ್ತದೆ. ಒಬ್ಬರಿಗೆ ಇನ್ನೊಬ್ಬರು ಕಾಯುವ ರೀತಿಯೂಹೀಗಿರುತ್ತದೆ..

ಅನುರಾಗದ ಅಲೆಯಲಿ,

ಪ್ರೀತಿಯ ಕೊಳಲನಿಡಿದು ನಿಂತ ಕೃಷ್ಣನ ಹಾಗೆ

ಶತಾವರ ಕಾಯುತ್ತಿದ್ದರೆ,,

ಅಂಬರದಾಚೆ ಇನ್ನೂ ಎತ್ತರಕ್ಕಿರುವ ಪ್ರೀತಿಯನು,

ಸೇರಗ ತುದಿಯಲ್ಲಿಡಿದುಕೊಂಡ ರಾಧೆಯ ಹಾಗೆ,,

ನಯನಶ್ರೀ ಕಾಯುತ್ತಾ ಕುಳಿತಿದ್ದಳು.

ನಯನಶ್ರೀಯ ಮುಖವನ್ನೇ ನೋಡದೆ ಅವಳ ಬರಹಗಳಿಗೆ ಮನಸೋತು ಹೋದ ಶತಾವರರವರು ದಿಕ್ಕೇ ತೋಚದ ಹಾಗೆ ನಿಂತಿರುತ್ತಾರೆ. ಅಷ್ಟರಲ್ಲಿಯೇ ಅವರನ್ನು ಕಂಡ ನಯನಶ್ರೀಯು ಅತ್ತಿರ ಹೋಗಿ “ನಮಸ್ತೇ ಶತಾವರ ರವರೇ” ಎನ್ನಲು ಅವರು ” ನೀವು..??” ಎಂದು ಕೇಳಲು ಇವಳು ” ನಾ ನಯನಶ್ರೀ ” ಎಂದು ಹೇಳುತ್ತಾಳೆ. ಆಗ ಶತಾವರ ರವರು ” ಹೋ,,ಹೋ,, ನೀವೆನಾ..!! ಆ ಅನಾಮದಯ ಪತ್ರಗಳ ಹಿಂದಿರುವ ರುವರಿ” ಎನ್ನಲು, ಇವಳು ” ಹೌದು, ಆ ಬರವಣಿಗೆಯ ಹಿಂದಿನ ಕೈಗಳು ನನ್ನದೇ” ಎಂದು ಉತ್ತರಿಸುತ್ತಾಳೆ. ಹಾಗೆ ಇನ್ನೂ ಹಲವು ಮಾತುಗಳನ್ನಾಡತ್ತಾ ಅವರ ಮೊದಲ ಭೇಟಿಯುನ್ನು ಮುಕ್ತಾಯಗೊಳಿಸುತ್ತಾರೆ…

ಒಬ್ಬರಿಗೆ ಇನ್ನೊಬ್ಬರ ಭೇಟಿ,

ಕಣ್ಣು ಕಣ್ಣುಗಳ ಸಂಗಮ,,

ಎರಡು ಹೃದಯಗಳ ಸಮಾಗಮ…

ಈ ಬದುಕೆಂಬ ಬಣ್ಣದ ಆಟದಲಿ,

ಅವಳ್ಯಾರೋ, ಇವನ್ಯಾರೋ

ಆದರೂ ಬೆಸೆಯಿತು ಸುಂದರ ಅನುಭಂದ,

ಹೀಗೆ ಇರಲಿ ಇವರಿಬ್ಬರ ಪ್ರೀತಿಯ ಬಂಧ,

ಬಾರದಿರಲಿ ಎಂತಹದೇ ತೊಡಕಿನ ಬಂಧ..

ಇನ್ನೇನು ಶುರುವಾಯ್ತು ಇಬ್ಬರ ನಡುವಿನ ಪ್ರೀತಿಯ ಜೊತೆಗಿನ ಪಯಣ..

ಮನದ ಕದವ ಸರಿಸಿ ಮಾತನಾಡಿಕೊಂಡ ಅದೇಷ್ಟೋ ಮಾತುಗಳು, ಭೇಟಿಯಾದ ನೂರು ಜಾಗಗಳು, ಸಾವಿರಾರು ನೆನಪುಗಳ ಮೂಟೆಯೊಂದಿಗೆ ಸಾಗುತ್ತಿರುವ ಪ್ರೀತಿ ಬಾಳ ನೌಕೆಯ ಖಾಯಂ ಪ್ರಯಾಣಿಕರಾಗಿ ಬಿಡುತ್ತಾರೆ ಶತಾವರ ಹಾಗೂ ನಯನಶ್ರೀ…

ಇವರಿಬ್ಬರ ಈ ಪ್ರೀತಿ ಶತಾವರ ರವರ ಕೆಲಸಕ್ಕೂ ಮತ್ತು ನಯನಶ್ರೀಯ ತಾನು ಕೂಡ ಐ.ಎ.ಸ್ ಅಗಬೇಕೆಂಬ ಕನಸಿಗೇನು ಅಡ್ಡಿಯಾಗಿರುವುದಿಲ್ಲ.

ಹೀಗಿರುವಾಗ ಒಂದು ದಿನ ಅವರ ಪ್ರೀತಿಯ ಬಗ್ಗೆ ಅವರವರ ಪೋಷಕರಿಗೆ ಹೇಳುತ್ತಾರೆ. ಇಬ್ಬರ ಆಯ್ಕೆಯು ಸೂಕ್ತವಾಗಿ ಇದ್ದುದರಿಂದ ಯಾವುದೇ ಅಡ್ಡಿ-ಅಡಚಣೆ ಮಾಡದೇ ಎರಡೂ ಕುಟುಂಬದವರು ಇವರ ಪ್ರೀತಿಗೆ ಅಸ್ತು ಎನ್ನುತ್ತಾರೆ.

ಇಬ್ಬರ ಪ್ರೀತಿಯು ಆಳವಾಗಿ ಬೇರೂರಿತ್ತು. ಇವರ ಮದುವೆಯ ಮಮತೆಯ ಕರೆಯೋಲೆಗೂ ಎರಡು ಕುಟುಂಬದವರು ಒಪ್ಪಿಗೆ

ನೀಡಾಯಿತು. ಮೇಲಿರುವ ಎಲ್ಲಾ ದೇವಾನುದೇವತೆಗಳ ಆಶೀರ್ವಾದಗಳೊಂದಿಗೆ ನಮ್ಮ ನಯನಶ್ರೀಗೆ ಶತಾವರರಿಂದ ಮೂರು ಗಂಟುಗಳ ನಂಟಿನ ತಾಳಿ ಭಾಗ್ಯ ಮಾತ್ರ ನೇರವೇರಬೇಕಾಗಿತ್ತು.

ಇನ್ನೇನು ಒಳ್ಳೆಯ ಅಳಿಯ ಸಿಕ್ಕಾಯಿತು, ಅವರಿಬ್ಬರಿಗೂ ಸಂಪ್ರದಾಯದ ಪ್ರಕಾರ ಜೋಡಿ ಮಾಡಿಸಿದರೆ ಆಯ್ತು ಎನ್ನುತ್ತಾ ನಯನಶ್ರೀಯ ಪೋಷಕರು ಒಂದು ಕಡೆ, ಈ ಕಡೆ ಶತಾವರರವರ ಪೋಷಕರು ಅವನ ಕನಸ್ಸಿನಂತಯೇ ಒಳ್ಳೆಯ ಉದ್ಯೋಗ ಮತ್ತು ಒಳ್ಳೆಯ ಮನಸ್ಸಿನ ಹುಡುಗಿಯು ಕೂಡ ಬಂದಾಯಿತು, ಮದುವೆಯೊಂದು ಮಾಡಿಸಿ ನಮ್ಮ ಜವಾಬ್ದಾರಿಯನ್ನು ಇಳಿಸಿಕೊಳ್ಳುವ ಬಗ್ಗೆ ಮಾತಾನಾಡುತ್ತಾ ಇರುತ್ತಾರೆ.

ಆದರೆ, ಆಕಾಶದಲ್ಲಿ ಹಾರಾಡುವ ಪ್ರಣಯ ಪಕ್ಷಿಗಳಂತೆ, ಒಂದೇ ಜೀವ ಎರಡು ದೇಹದಂತಿರುವ ನಯನಶ್ರೀ ಮತ್ತು ಶತಾವರರವರಿಗೆ ಅವರ ಮದುವೆಗೂ ಮುನ್ನ ನಯನಶ್ರೀ ಯ ಕನಸ್ಸು ಕೂಡ ಮುಖ್ಯವಾಗಿ ಇರುವುದರಿಂದ ಇವರಿಗೆ ಅಷ್ಟೇನೂ ಮದುವೆಯ ಬಗ್ಗೆ ಆತುರ ಇರಲಿಲ್ಲ…

ಇವರೆಲ್ಲರ ಇಚ್ಛೆ ಮತ್ತು ಯೋಚನೆಗಳು ಹೀಗಿರುವಾಗ ಆ ಕ್ರೂರ ವಿಧಿಯ ಸಂಚು ಬೇರೆಯದ್ದೇ ಆಗಿರುತ್ತದೆ. ಸುಖ ಸಂತೋಷಗಳು ತುಂಬಿದ್ದ ಇವರುಗಳ ಜೀವನದಲ್ಲಿ ನಡೆಯ ಬಾರದ ಘಟನೆ ನಡೆದೇ ಬಿಡುತ್ತದೆ .

ಒಂದು ದಿನ ಸಂಜೆಯ ಸಮಯದಲ್ಲಿ ನಯನಶ್ರೀ ಮತ್ತು ಶತಾವರರಿಬ್ಬರು ಭೇಟಿಯಾಗುತ್ತಾರೆ.

ಮಾತು ಮರೆತ ಮೌನಿಗಳಂತೆ,

ಒಬ್ಬರ ಕಣ್ಣಲಿ ಒಬ್ಬರು ನೋಡುತ,

ಈ ಜಗದ ಪರಿವೇ ಇಲ್ಲದೇ,

ಪ್ರೀತಿಯ ತೋಟದಲ್ಲಿರುವ,

ಬಣ್ಣದ ಚೀಟ್ಟೆಗಳಾಗಿರುತ್ತಾರೆ….

ಸಮಯ ಆಗಲೇ ರಾತ್ರಿ 8.15 ಆಗಿರುತ್ತದೆ,

ಶತಾವರ: ಸರಿ ಹೋಗೊಣ ಮನೆಗೆ ಈಗಾಗಲೇ ಬಹಳ ಸಮಯ ಆಗಿದೆ.

ನಯನಶ್ರೀ: ಹೋ.. ಹೌದಲ್ಲವೇ, ನಿನ್ನ ಜೊತೆ ಇದ್ದರೆ ಸಮಯ ಹೋಗೊದೇ ಗೊತ್ತಾಗುವುದಿಲ್ಲ.

ಶತಾವರ: ಸರಿ ಬಾ, ಹಾಗದರೆ ನಾ ನಿನ್ನ ಮನೆಗೆ ಬಿಟ್ಟು ನಾ ಹೋಗ್ತೀನಿ.

ನಯನಶ್ರೀ: ಇಲ್ಲ ಬೇಡ, ಅಪ್ಪಾಜಿ ಬರ್ತೀನಿ ಅಂತ ಹೇಳಿದ್ರು.

ಶತಾವರ: ಸರಿ, ಫೋನ್ ಮಾಡಿ ಕೇಳು ತಡವಾಗುತ್ತೆ ಅಂದ್ರೆ ನಾನೆ ಬಿಡ್ತೀನಿ.

ನಯನಶ್ರೀ: ಆಯ್ತು..

ಅಂತ ಅವಳ ತಂದೆಗೆ ಫೋನ್ ಮಾಡಿದಾಗ,

ನಯನಶ್ರೀಯ ತಂದೆ: ಸರೇ ಪುಟ್ಟ ಅಲ್ಲೇ ಇರು ಬರ್ತಾ ಇದೀನಿ ಅಂತ ಹೇಳುತ್ತಾರೆ.

ಹಾಗೆ ತುಸು ಹೊತ್ತು ಮಾತಾಡುತ ಇರುವಾಗಲೇ ಆ ಕಡೆ ರಸ್ತೆ ಬದಿಯಲ್ಲಿ

ನಯನಶ್ರೀಯ ತಂದೆ: ಮಗಳೇ ನಾ ಇಲ್ಲಿದೀನಿ, ಬಾ ಹೋಗೊಣ.

ನಯನಶ್ರೀ : ಹಾ..! ಅಪ್ಪ ಬರ್ತಾ ಇದೀನಿ.

ಶತಾವರ : ಸರಿ, ಊಟ ಮಾಡಿ ಮಲಗು ಹಾಗೆ ಇರಬೇಡ

ನಯನಶ್ರೀ : ಹೂ…! ಆಯ್ತು…ನಾ ಹೋಗ್ತೀನಿ ಅಂತ ಹೇಳಿ ತುಸು ಮಂದಹಾಸದಿಂದ ತಂದೆಯ ಕಡೆ ನೋಡುತ್ತಾ ಆ ಕಡೆ ರಸ್ತೆಬದಿಯಿಂದ ಈ ಕಡೆ ರಸ್ತೆಬದಿಯನ್ನು ದಾಟುವಾಗ ಬಂತೊಂದು ಯಮಬಯಂಕರ ಲಾರಿ ಅಟ್ಟಹಾಸ ಮೆರೆಯುವ ಕ್ರೂರ ವಿಧಿಯ ರೂಪದಲ್ಲಿ…

ನಯನಶ್ರೀಯ ತಂದೆ ಮಗಳೇ…!!!! ಎಂದು

ಶತಾವರನು ನಯನ..!!! ಎಂದು ಕಿರುಚ್ಚುತ್ತಾ ಓಡಿ ಬಂದು ನೋಡುವಷ್ಟರಲ್ಲಿ ಈ ಲೋಕದ ನಂಟನ್ನೇ ತ್ಯಜಿಸಿದಳ ಎಂಬಂತೆ ಅವಳ ದೇಹ ನಡುರಸ್ತೆಯಲ್ಲಿ ರಕ್ತವ ಚಿಮ್ಮಿ ಬಿದ್ದಿರುತ್ತದೆ..

ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ವೈದ್ಯರು ಸಹ ತಕ್ಷಣವೇ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ…

ನಯನಶ್ರೀಯ ತಲೆಯ ಭಾಗಕ್ಕೆ ಹೆಚ್ಚಿನ ಪೆಟ್ಟು ತಗುಲ್ಲಿದ್ದರಿಂದ ಅತಿಯಾದ ರಕ್ತಸಾವ್ರವಾಗಿ ಅವಳು ಕೋಮ ಸ್ಥಿತಿಯಲ್ಲಿ ತನ್ನ ಜೀವ ಕೈಯ ತುದಿಬೆರಳಿನಲ್ಲಿ ಹಿಡಿದುಕೊಂಡು ಉಸಿರಾಡುತ್ತಾ ಇರುತ್ತಾಳೆ..

ಹೇ,, ದೇವ…!!

ನೀನ್ಯಾಕೆ ಇಷ್ಟೊಂದು ಕ್ರೂರಿ,

ಸಹಿಸಲಾಗಲ್ಲಿಲ್ಲವೇ ಆ ಎರಡು ಹಕ್ಕಿಗಳ ಕಂಡು,

ಆ ಮುಗ್ಧ ಮನಸಿನ ಮೇಲೆ ಕರುಣೆಯೇ ಇಲ್ಲವೇ,

ಗುಬ್ಬಿಯ ಮೇಲೆಯೇ ನಿನ್ನ ಬ್ರಹ್ಮಾಸ್ತ್ರ….??

ಹೋ…ನಟನಶಂಕರ…!!

ಎಲ್ಲರ ಕಣ್ಣಿರಿನ ಸಮುದ್ರದ ಮೇಲೆಯೇ

ನಿನ್ನ ರುದ್ರ ನರ್ತನ,,,

ಉಸಿರು ಕೊಡುವ ನೀನೇ

ಆ ಮುಗ್ಧ ಉಸಿರಿನ ಕಂಟಕವಾದೆಯೇ,,,

ಅವಳ ಜೀವನದ ನಿನ್ನ ಅಟ್ಟಹಾಸದಲ್ಲಿ

ನಮ್ಮೆಲ್ಲರ ಜೀವನಗಳು ಸಂಕಷ್ಟದ ಹಾದಿಯಲಿ….!!

ಸಾವು-ಬದುಕಿನ ಮಧ್ಯೆ ನಯನಾಳ ಹೋರಾಟ, ಭರವಸೆ ನೀಡುವ ವೈದ್ಯರೇ ಇನ್ನೇನ್ನಿದ್ದರು ಆ ದೇವರ ಮೇಲೆ ಭಾರ ಹಾಕಬೇಕು ಅಷ್ಟೇ, ನಮ್ಮೆಲ್ಲಾ ಪ್ರಯತ್ನಗಳು ಮಾಡಿ ಆಯಿತು ಎನ್ನುತ್ತಾರೆ. ಇನ್ನೂ ಶತಾವರನ ಪರಿಸ್ಥಿತಿ ಅಂತು ಒಂಟಿ ಪಕ್ಷಿಯಂತೆ, ನೀರಿನಿಂದ ಹೊರಬಂದ ಮೀನಿನಂತೆ

ಅದೇಂತಹುದೇ ಮಾತುಗಳಲ್ಲಿ ಅವರ ಮನದ ದುಃಖವನ್ನು ಹೇಳಲು ಆಗುವುದಿಲ್ಲ ಎಂಬಂತೆ ಚಡಪಡಿಸುತ ಇದ್ದರು. ಇನ್ನು ನಯನಶ್ರೀ ಅವರ ಪೋಷಕರ ಕಣ್ಣಿರಂತು ಕೈಲಾಸವಾಸನ ಪಾದಗಳನ್ನು ಸ್ಪರ್ಶಿಸಿ ಬರುವಂತಿದ್ದವು.ಶತಾವರನ ಕುಟುಂಬದವರು ಸಹ ಕಣ್ಣೀರಲ್ಲಿಯೇ ಕೈ ತೊಳೆಯುತ್ತಿದ್ದರು..

“ಅಂತೂ ಕೊನೆಗೆ ನಯನಳ ತಂದೆ ತಾಯಿಯ ಪೂರ್ವ ಜನ್ಮದ ಅದೃಷ್ಟವೋ,ಈ ಜನ್ಮದ ಪೂಜೆಯ ಫಲವೊ..!

ಶತಾವರನ ಬಂಡೆಕಲ್ಲಿನಂತಹ ಗಟ್ಟಿ ಪ್ರೀತಿಯೋ..!

ಕೈ ಚೆಲ್ಲಿ ನಿಂತ ವೈದ್ಯರ ಸಾಹಸವೋ..!!

ಎಂಬಂತೆ ಅಚ್ಚರಿಯಲ್ಲೊಂದು ಘಟನೆ ನಡೆಯುತ್ತದೆ..”

ಅದೇ ನಯನಶ್ರೀಯು ಇದೊಂದು ವೈದ್ಯ ಲೋಕಕ್ಕೆ ಸವಾಲು ಎನ್ನುವಂತೆ ಕೋಮಾ ಸ್ಥಿತಿಯಿಂದ ಹೊರ ಬರುವುದು..

ತನ್ನ ಕಣ್ಣುಗಳಿಂದಲೇ ಸುತ್ತ ನೆರೆದಿದ್ದ ತನ್ನವರೇಲ್ಲರನ್ನು ತನ್ನ ನಯನಗಳಿಂದಲೇ ಸಮಾಧಾನ ಪಡಿಸುತ್ತಾ ನಿಧಾನವಾಗಿ ಮಾತಾನಾಡಲು ಪ್ರಯತ್ನಿಸುತ್ತಿದ್ದಳು..

ಎರಡು ಕುಟುಂಬಗಳ ಆಶೀರ್ವಾದಗಳೊಂದಿಗೆ

ಶತಾವರನ ನಿಷ್ಕಲ್ಮಶ ಮನಸ್ಸಿನ ಪ್ರೀತಿಯು ಮುಗ್ಧ ಮುದ್ದು ಜೀವಕ್ಕೆ ಮರು ಜೀವ ನೀಡುತ್ತವೆ.

ಇನ್ನೂ ಇವರಿಬ್ಬರನು ತಡೆಯುವವರು ಯಾರಿಲ್ಲ…

ಆ ಪರಶಿವನೇ ಇವರ ಪ್ರೀತಿಗೆ ಶರಣಾಗಿ ಅನುರಾಗದ ಒಲವ ಭಿಕ್ಷೆಯನು ಇಟ್ಟು ಮತ್ತದೇ ಪ್ರೀತಿಯ ತೋಟದಲಿ ಹಾರಾಡುವ ಬಣ್ಣದ ಚಿಟ್ಟೆಗಳನ್ನಾಗಿ ಮಾಡಿ ತನ್ನ ಇರುವಿಕೆಯನ್ನು ಸಾಭಿತು ಪಡಿಸಿದನು..

Leave a Reply

Back To Top