ಯೋಗ್ಯತೆಯಲ್ಲ ಯೋಗ ಬೇಕು

ಲೇಖನ

ಯೋಗ್ಯತೆಯಲ್ಲ ಯೋಗ ಬೇಕು

ಜ್ಯೋತಿ ಬಾಳಿಗಾ


“ಯಾಕೆ ಒಳ್ಳೆ ಇಡ್ಲಿ ಹಿಟ್ಟು ಊದಿಕೊಂಡ
ಹಾಗೆ ಮುಖ ಮಾಡಿ ಕೂತಿದ್ದೀಯಾ… ಏನಾಯಿತು ?” ಎಂದು ನನ್ನವರು ಕೇಳಿದಾಗ

“ಯಾಕೋ ಮನಸ್ಸು ಸರಿಯಿಲ್ಲ ಕಣ್ರಿ.. ಅಳು ಬರುವ ಹಾಗಿದೆ…” ಎಂದು ನನ್ನ ಮನದ ಬೇಗುದಿಯನ್ನು ತಿಳಿಸದೇ ಮಾತನ್ನು ತಳ್ಳಿ ಹಾಕಿದೆ.


“ವಿಷಯ ಏನೂಂತ ಹೇಳಿದ್ರೆ ನನಗೂ ಗೊತ್ತಾಗುತ್ತದೆ, ಅದು ಬಿಟ್ಟು ಮನಸ್ಸು ಸರಿಯಿಲ್ಲಾಂತ ಹೇಳಿದ್ರೆ ಹೇಗೆ …? ಇಡೀ ದಿನ ಓದುವುದು, ಬರೆಯೋದೆ ಆಯಿತು. ಯೋಚನೆ ಮಾಡಿ ಮಾಡಿ ತಲೆ ಹಾಳು ಮಾಡಿಕೊಳ್ಳೋದು ಅಲ್ಲದೇ ನಮ್ಮ ತಲೆನೂ ಕೆಡಿಸ್ತಾ ಇದ್ದೀಯಾ…” ಎಂದು ಹರಿಹಾಯ್ದರು.



ಯಾವಾಗ ನಾನು ಸಪ್ಪಗಾದರೂ, ಅದರ‌ ನೇರ ಹೊಣೆ ನನ್ನ ಬರವಣಿಗೆಯ ಮೇಲೆ ಹಾಕುತ್ತಾರೆ. ಕೊನೆಗೆ ಬರೆಯೋದು ನಿಲ್ಲಿಸು ಎಂದು ನನ್ನ ಬುಡಕ್ಕೆ ಬರುತ್ತೆ ಮಾತು. ಅದಕ್ಕೆ ನನ್ನವರಿಗೆ ವಿಷಯ ಏನೂಂತ ಹೇಳುವ ಮನಸ್ಸು ಮಾಡಿದೆ.



“ಅಲ್ಲಾರೀ‌… ಹೆಣ್ಣು ಮಕ್ಕಳು ಆಗದೇ ಇರೋದು ನಮ್ಮ ತಪ್ಪಾ ? ಹೆಣ್ಣು ಮಕ್ಕಳು ಮನೆಯ ನಂದಾದೀಪ. ಮನೆಗೊಂದು ಕಳೆ ಹೀಗೆ ಏನಾದರೂ ಪೋಸ್ಟ್ ಹಾಕಲಿ ಬೇಡ ಅನ್ನಲ್ಲ ನಾನು. ಆದರೆ ಹೆಣ್ಣುಮಕ್ಕಳು ಹುಟ್ಟಬೇಕು ಅಂದ್ರೆ ಪುಣ್ಯ ಮಾಡಿರಬೇಕಂತೆ, ಯೋಗ್ಯತೆ ಇದ್ದವರಿಗೆ ಮಾತ್ರ ಹೆಣ್ಣುಮಕ್ಕಳು ಹುಟ್ಟುತ್ತವೆಯಂತೆ … ಹೀಗೆ ಪೋಸ್ಟ್ ಹಾಕಿ ಹೊಟ್ಟೆ ಉರಿಸುತ್ತಾ ಇದ್ದಾರೆ‌ ಕಣ್ರಿ…” ಎಂದು ಗೋಳಿಟ್ಟೆ.



“ಮಕ್ಕಳು ಹುಟ್ಟುವುದೇ ಒಂದು ಅದೃಷ್ಟ ಕಣೆ. ಹೆಣ್ಣಾಗಲಿ, ಗಂಡಾಗಲಿ ದೇವರು ಕೊಟ್ಟ ವರದಂತೆ ಸ್ವೀಕರಿಸಿ ಯೋಗ್ಯ ರೀತಿಯಲ್ಲಿ ಬೆಳಸಬೇಕೆ ಹೊರತು ಪಾಪ, ಪುಣ್ಯ ಎಂದು ಜಿದ್ದಿಗೆ ಬಿದ್ದವರ ಹಾಗೆ ಪೋಸ್ಟ್ ಹಾಕುವುದಲ್ಲ. ಒಮ್ಮೆ ಸುತ್ತಮುತ್ತಲಿನ ಜನರನ್ನು ನೋಡು, ಹೆಣ್ಣೋ, ಗಂಡೋ ಒಂದು ಮಗು ಹುಟ್ಟಿದರೆ ಸಾಕೂಂತ ಕಾಯುವ ಜೀವಗಳು ಎಷ್ಟಿವೆ ಗೊತ್ತಿಲ್ವಾ ? ಗಂಡು ಮಕ್ಕಳು ಹುಟ್ಟಿ ಏನು ತೊಂದರೆಯಾಗಿದೆ ನಿನಗೆ ? ಒಂದು ವೇಳೆ ಹೆಣ್ಣು ಮಕ್ಕಳೇ ಹುಟ್ಟಿದ್ರೆ ಏನ್ ಸಾಧನೆ ಮಾಡಿಸುತ್ತಿದ್ದೆ ನೀನು..? ನಿನ್ನ ಗಂಡು ಮಕ್ಕಳು ಯಾರಿಗೆ ಯಾವುದಕ್ಕೆ ಕಡಿಮೆ ಇದ್ದಾರೆ ಹೇಳು..? ” ಎಂದು  ಪ್ರಶ್ನೆಗಳ ಸುರಿಮಳೆ ಸುರಿಸಿದರು.



ನಾನು ಮೌನವಾಗಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ.

“ಮಕ್ಕಳು ತಂದೆ ತಾಯಿಯ ಕಷ್ಟ ಅರಿತುಕೊಂಡು ಅವರಿಗೆ ವಿಧೇಯರಾಗಿರಬೇಕೆ ಹೊರತು ಹೇಳಿದ ಮಾತು ಕೇಳದೆ, ಅಷ್ಟೇನೂ ಚೆನ್ನಾಗಿಲ್ಲದ ತಂದೆಯ ಆರ್ಥಿಕ ಸ್ಥಿತಿಯನ್ನು ನೋಡಿದರೂ ಕೂಡ ಹಠಮಾಡಿ ತಮಗೆ ಬೇಕಾದದ್ದನ್ನು ತರಿಸಿಕೊಳ್ಳುವವರು, ಅಮ್ಮನಿಗೆ ಆರೋಗ್ಯ ಸರಿಯಿಲ್ಲದಿದ್ದರೂ ಕಿಂಚಿತ್ತೂ ಸಹಾಯ ಮಾಡದೇ ಬರೀ ಅಲಂಕಾರ ಮಾಡಿಕೊಂಡು ಷೋಕೇಷಿನಲ್ಲಿ ಇಡುವ ಬೊಂಬೆ ತರಹ ಇದ್ದರೆ ಏನು ಪ್ರಯೋಜನ ಹೇಳು…? ಅವತ್ತು ಪರಿಚಯದವರ ಮನೆಗೆ ಹೋದಾಗ ನೀನೆ ನೋಡಲಿಲ್ವಾ? ಅವರ ಮನೆಯ ಪರಿಸ್ಥಿತಿ ನೋಡಿ ಅರ್ಥಮಾಡಿಕೊಳ್ಳದೆ ಹೊಸ ಮೊಬೈಲ್ ಬೇಕೂಂತ ಅಷ್ಟು ದೊಡ್ಡ ಹುಡುಗಿ ಹೇಗೆ ಹಠ ಮಾಡ್ತಿದ್ದಳು….”ಎಂದು ವಾಸ್ತವದ ಅರಿವು ಮಾಡಿಸಿ ಸಮಾಧಾನ ಮಾಡಿದರು.



“ಹೌದು ರೀ… ನಾನು ಇಷ್ಟು ದಿನದಿಂದ
ಸುಮ್ಮನೆ ತಲೆಕೆಡಿಸಿಕೊಂಡಿದ್ದೆ..” ಎಂದು ಹೇಳಿದೆ.

“ಹೆಣ್ಣೋ, ಗಂಡೋ ಆರೋಗ್ಯವಂತ , ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವಂತ ಮಕ್ಕಳು ಮುಖ್ಯ ಕಣೆ..”  ಎಂದು ಬೆನ್ನು ತಟ್ಟಿ ಹೋದರು.

ನನಗೆ ನನ್ನ ಮಕ್ಕಳ ಬಾಲ್ಯದ ನೆನಪುಗಳು ಕಾಡಲು ಶುರುವಾದವು.

ಮೊದಲನೆಯ ಮಗು ಹೆಣ್ಣಾಗಬೇಕೂಂತ ತುಂಬಾ ಆಸೆಯಿಂದ ಇದ್ದೆ. ಗಂಡು ಮಗು ಆದಾಗ ಆಸೆ ನಿರಾಸೆಯಾಗಿತ್ತು. ಗಂಡೋ ಹೆಣ್ಣೋ ಮಗು ಹುಟ್ಟಿತಲ್ವಾ ? ಸಂತೋಷ ಪಡು ಎಂದು ಮನೆಯವರೆಲ್ಲಾ ಹೇಳಿದರೂ ಮನಸ್ಸಿನಲ್ಲಿ ಹೆಣ್ಣಾಗಲಿಲ್ಲ ಎಂಬ ಕೊರಗು ಇದ್ದೆ ಇತ್ತು.



ಅವನ ಹುಡುಗಾಟಿಕೆಯ ಬುದ್ಧಿಗೋ, ನನಗೆ ಮಗುವನ್ನು ನೋಡಿಕೊಳ್ಳಲು ತಿಳಿಯದೆಯೋ ದೊಡ್ಡ ಮಗ ನನ್ನಿಂದ ಏಟು, ಬೈಗುಳ ಸರಿಯಾಗಿ ತಿನ್ನುತ್ತಿದ್ದ. ನನಗೆ ಅವನಿಗೆ ತರಕಾರಿ ತಿನ್ನಿಸುವ ಹುಚ್ಚು. ಅವನಿಗೆ ತರಕಾರಿ ಅಂದರೆ ಗಂಟಲಿನಲ್ಲಿ ಇಳಿಯುತಿರಲಿಲ್ಲ. ಹೇಗಾದರೂ ಮಾಡಿ ತಿನ್ನಿಸಬೇಕೆಂದು ಬೇಯಿಸಿ ಮಿಕ್ಸಿಯಲ್ಲಿ ಹಾಕಿಯೋ ಹೊಸ ಹೊಸ ಸಂಶೋಧನೆ ಮಾಡಿಯೋ ಅವನಿಗೆ ತರಕಾರಿಯನ್ನು ತಿನ್ನಿಸುತ್ತಿದ್ದೆ.



ನನ್ನ ಒತ್ತಾಯಕ್ಕೋ, ಹೆದರಿಕೆಗೋ ಆ ಕ್ಷಣ ತಿಂದರೂ ಸ್ವಲ್ಪ ಹೊತ್ತಿನಲ್ಲಿ ಎಲ್ಲಾ ವಾಂತಿ ಮಾಡುತ್ತಿದ್ದ. ಹೀಗೆ ವಾಂತಿ ಬಳಿದು ಬಳಿದು ಸಾಕಾಗಿ ಕೊನೆಗೆ ನಾನು ಅಲ್ಲಲ್ಲಿ ಬಕೆಟ್ ಇಡೋಕೆ ಶುರು ಮಾಡಿದೆ. ವಾಂತಿ ಬಂದ ಕೂಡಲೇ ಬಕೆಟ್ನಲ್ಲೇ ವಾಂತಿ ಮಾಡಬೇಕೂಂತ ಕಲಿಸಿದ್ದೆ. ತರಕಾರಿ ತಿಂದ ಕೂಡಲೇ ಬಕೇಟ್ ನಲ್ಲಿ ವಾಂತಿ ಮಾಡೋದು ಮಾಡ್ತಿದ್ದ. ಆಮೇಲೆ ನಾನು ತೊಳೆದಿಡುವುದು ಹೀಗೆ ದಿನಾ ಹೋಗ್ತಾ ಇತ್ತು. ಯಾವಾಗ ನಾನು ಮತ್ತೊಮ್ಮೆ ತಾಯಿಯಾಗುವೆನೆಂದು ತಿಳಿಯಿತೋ


ಎರಡನೆಯ ಮಗು ಹೆಣ್ಣಾಗಲಿ ಎಂದು ಆಶಿಸಿದ್ದೆ. ಮೊದಲನೆಯ ಸಲ ಇರುವಾಗ ಇದ್ದ ಗರ್ಭಿಣಿಯ ಲಕ್ಷಣ ಕಾಣಿಸದೇ ಇದ್ದಾಗ ನನ್ನ ಆಸೆ ಹೆಚ್ಚಾಯಿತು. ಮೊದಲನೆ ಗರ್ಭಾವಸ್ಥೆಯಲ್ಲಿ ನನಗೆ ಅಷ್ಟೊಂದು ವಾಂತಿ ಇರಲಿಲ್ಲ. ಎರಡನೆಯ ಗರ್ಭಾವಸ್ಥೆಯಲ್ಲಿ ನನಗೆ ವಾಂತಿ ಶುರುವಾಯಿತು. ಅನ್ನ ಬಿಡಿ, ನೀರು ಕುಡಿದರೂ ವಾಂತಿ ಬರುತಿತ್ತು. ನಾನು ಓಡಿ ಹೋಗಿ ಬಾತ್ ರೂಮಿನಲ್ಲಿ ವಾಂತಿ ಮಾಡಿ ಬರುತ್ತಿದ್ದೆ. ನನ್ನ ವಾಂತಿ ನೋಡಿ ನೋಡಿ ನನ್ನ ಮಗ ಒಂದು ದಿನ ಬಕೆಟ್ ಹಿಡಿದು ನಿಂತಿದ್ದಾನೆ. ಅಮ್ಮಾ… ಇದರಲ್ಲಿ ವಾಂತಿ ಮಾಡು ಎಂದು ಬಕೆಟ್ ಕೈಯಲ್ಲಿ ಕೊಟ್ಟ. ನನಗೂ ಓಡಿ ಓಡಿ ಸುಸ್ತಾಗಿದ್ದ ಕಾರಣ ಬಕೆಟ್ ನಲ್ಲಿ ವಾಂತಿ ಮಾಡಿ ಮಲಗಿದೆ. ಸ್ವಲ್ಪ ಹೊತ್ತಿನಲ್ಲಿ ಸದ್ದು ಕೇಳಿ ಎಚ್ಚೆತ್ತಾಗ ಮಗನ ಕೈಯಲ್ಲಿ ಕ್ಲೀನ್ ಮಾಡಿದ ಬಕೆಟ್ ಇದೆ. ಇವರು ಬಂದಿದ್ರಾ ಎಂದು ನೋಡಿದರೆ ಹಾಕಿದ ಲಾಕ್ ಹಾಗೇ ಇದೆ.



ಆರೋಗ್ಯ ಸರಿಯಿಲ್ಲಾಂದ್ರೆ ಒಂದು ತೊಟ್ಟು ನೀರು ಕೊಡೋದಕ್ಕೂ‌ ಹೆಣ್ಣಿನ ಗತಿಯಿಲ್ಲ ಎಂದು ಎಷ್ಟೋ ಸಲ ಗಂಡು ಮಗು ಹುಟ್ಟಿದಾಗ ಬೇಸರ ಮಾಡಿಕೊಂಡಿದ್ದೆ. ಆದರೆ ನನ್ನೆಲ್ಲಾ ಮಾತುಗಳನ್ನು ಹಿಂಪಡೆಯುವಂತೆ ಮಾಡಿದ್ದ ನನ್ನ ಮಗ.



ಕ್ಲೀನ್ ಆದ ಬಕೇಟ್ ನೋಡಿದಾಗ
ನನಗಂತೂ ನಿಜವಾಗಿ ಅಳುನೇ ಬಂದು ಬಿಡ್ತು. ನನ್ನ ಕಂದನಿಗೆ ಅವಾಗ ಬರಿ ಎರಡುವರೆ ವರ್ಷ…!!



ಅವನ ಗುಣವನ್ನು ‌ನೋಡಿದ ಮೇಲೆ ಮತ್ತೆಂದೂ ಹೆಣ್ಣು ಹುಟ್ಟಲಿಲ್ಲ ಎಂದು ದುಃಖವನ್ನು ಪಡಲಿಲ್ಲ ನಾನು. ಎರಡನೆಯ ಮಗುವೂ ಗಂಡು ಮಗುವಾದಾಗ ಸಂಭ್ರಮದಿಂದ ಸ್ವಾಗತಿಸಿದೆ.



ನನಗಿನ್ನೂ ನೆನಪಿದೆ. ಎಂಟು ವರ್ಷದ ಹಿಂದೆ ನನಗೆ ಆರೋಗ್ಯ ಸಮಸ್ಯೆಯಿಂದ
ವೈದ್ಯರು ಬೆಡ್ ರೆಸ್ಟ್ ಹೇಳಿದ್ದರು. ಇವರು ಅಡುಗೆಯನ್ನು ಮಾಡಿಕೊಟ್ಟು ತೋಟದ ಉಸ್ತುವಾರಿ‌ ನೋಡಿಕೊಳ್ಳಲು ಹೋದಾಗ ಇಬ್ಬರೂ ಗಂಡು ಮಕ್ಕಳೇ ನನ್ನ ಅಪ್ಪ ಅಮ್ಮನಂತೆ ನೋಡಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಅಡುಗೆಯಿಂದ ಹಿಡಿದು ಮನೆಯ ಸ್ವಚ್ಚತೆಯ ಕೆಲಸದಲ್ಲೂ ಜೊತೆಗೂಡುತ್ತಾರೆ.



ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಗಂಡು ಮಕ್ಕಳನ್ನು ಹೆಡೆದವರಿಗೆ ನೋವು ಕೊಡುವ ಪೋಷಕರೇ ಈಗ ಹೇಳಿ ಹೆಣ್ಣು ಮಕ್ಕಳು ಹುಟ್ಟಿದರೆ ಭಾಗ್ಯವೋ..? ಗಂಡೋ, ಹೆಣ್ಣೋ ನಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಯೋಗ್ಯ ರೀತಿಯಲ್ಲಿ ಬೆಳಸುವುದು ಉತ್ತಮವೋ…?!

*************************************************

One thought on “ಯೋಗ್ಯತೆಯಲ್ಲ ಯೋಗ ಬೇಕು

Leave a Reply

Back To Top