ಅಂಕಣ ಬರಹ

ದೇವರಮನೆಯಲ್ಲಿ ಕುರಿಂಜಿ

(ಬಿಸಿಲನಾಡಾದ ಬಳ್ಳಾರಿ ಸೀಮೆಯಲ್ಲೂ ಕುರಿಂಜಿಯಿದೆ ಎಂಬ ಖಬರಿಲ್ಲದೆ,ಎರಡು ವರ್ಷದ ಹಿಂದೆ ಬರೆದ ಲೇಖನವಿದು.)

Neelakurinji, the Wonder Flower to Bloom after 12 Years: Kerala Will Soon  Turn Blue!


ತರೀಕೆರೆ ಸೀಮೆಗೆ ಸೇರಿದ ಕೆಮ್ಮಣ್ಣುಗುಂಡಿ, ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಹತ್ತಿಗಿರಿ ಮುಂತಾದ ಶೋಲಾ ಬೆಟ್ಟಗಳಲ್ಲಿ ಬಾಲ್ಯದಿಂದಲೂ ಅಲೆದಿದ್ದೇನೆ. ಆಗ ಕಳೆಯಂತೆ ಬೆಳೆದಿರುತ್ತಿದ್ದ ಅನಾಮಿಕವಾದ ಹಸಿರು ಗಿಡಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಅವು 12 ವರ್ಷಕ್ಕೊಮ್ಮೆ ಹೂಬಿಟ್ಟು ಗಿರಿಕಣಿವೆಗಳನ್ನು ಹೂವಿನ ತೊಟ್ಟಿಲಾಗಿ ಮಾಡಬಲ್ಲ ಕುರಿಂಜಿಗಳೆಂದು ಗೊತ್ತಿರಲಿಲ್ಲ. ತಿಳಿಯುತ್ತ ಹೋದಂತೆ, ನಮ್ಮ ಆಸುಪಾಸಿನಲ್ಲೇ ಇರುವ ಅವನ್ನು ಗಮನಿಸದೆ ಹೋದೆನೆಲ್ಲ ಎಂದು ತುಸು ಲಜ್ಜೆಯಾಗಿತ್ತು. ಕಳೆದ ಋತುವಿನಲ್ಲಿ ಕುರಿಂಜಿಯ ಭೇಟಿ ಮಾಡಿದೆ.


ಕುರಿಂಜಿಯ ಸಾಮಾನ್ಯವಾಗಿ ಪಶ್ಚಿಮಘಟ್ಟದ ಶೋಲಾಕಾಡುಗಳಲ್ಲಿ ಬೆಳೆಯುತ್ತದೆ. ಅದರಲ್ಲೂ ನಾಲ್ಕೈದು ಸಾವಿರ ಅಡಿ ಎತ್ತರದಲ್ಲಿ ಮತ್ತು ಧೋಧೋ ಮಳೆ ಬೀಳುವಲ್ಲಿ. ಶೋಲಾಕಾಡುಗಳ ವಿಶಿಷ್ಟ ಚಹರೆಯೆಂದರೆ-ಬೋಳಾಗಿ ಕಾಣುವ ಹುಲ್ಲುಬೆಳೆದ ಬೆಟ್ಟಗಳು; ಆಳವಾದ ಕಣಿವೆಗಳಲ್ಲಿ ಹಸಿರುಹಿಮ ಹೆಪ್ಪುಗಟ್ಟಿದಂತೆ ಕಾಡು; ಬೆಟ್ಟ-ಕಣಿವೆಗಳನ್ನು ಹೊಗೆಯಂತೆ ಬಂದು ತಬ್ಬಿಕೊಂಡು ಆಟವಾಡುವ ಮೋಡಗಳು; ಹರನ ಜಟೆಯಿಂದ ಜಿನುಗುವ ಗಂಗೆಯಂತೆ ಒಸರುವ ಜಲಧಾರೆಗಳು; ಮುಖದೋರದೆ ಹಚ್ಚನೆ ಕಂಬಳಿಯೊಳಗೆ ಅಡಗಿ ಕಣಿವೆಯೇ ಹಾಡುವಂತೆ ಮಾಡುವ ಹಕ್ಕಿಗಳು; ಅಪರೂಪಕ್ಕೆ ಹುಲ್ಲುಹಾಸಿನ ನೆತ್ತಿಗಳ ಮೇಲೆ ಕಾಣುವ ಕಾಡುಕೋಣ, ಕಾಡುಕುರಿ, ಕಡವೆ, ಜಿಂಕೆಗಳು; ಎಂದೂ ಕಾಣಿಸದ ಹುಲಿ.
ಇಂತಹ ಪರಿಸರದಲ್ಲಿ ವಾಸಿಸುವ ಕುರಿಂಜಿ, ನೋಡಲು ಮೊಳಕಾಲೆತ್ತರದ ಸಾಧಾರಣ ಗಿಡ; ಕಪ್ಪುಹಸುರಿನ ದಪ್ಪನೆಯ ಎಲೆಗಳಿಗೆ ಹಸ್ತರೇಖೆಯಂತೆ ಎದ್ದುಕಾಣುವ ಗೀರುನರ; ಚಳಿಗೆದ್ದ ನವಿರಿನಂತೆ ಸೂಕ್ಷ್ಮವಾದ ಸುಂಕು. ಅಂಚಿನಲ್ಲಿ ಗರಗಸದ ಹಲ್ಲಿನಂತೆ ಕಚ್ಚುಗಳು. ಫರ್ನ್ ಹಾಗೂ ಹುಲ್ಲಿನ ಜತೆ ಬೆರೆತು ಬೆಳೆಯುವ ಇದು, ಹೂವಿಲ್ಲದ ದಿನಗಳಲ್ಲಿ ಯಾವ ಆಸಕ್ತಿಯನ್ನೂ ಕೆರಳಿಸುವುದಿಲ್ಲ. ಗೊರಟೆಯಂತೆ ಕಾಣುವ ಇದರ ಹೂ ಕೂಡ ಬಹಳ ಸುಂದರವಲ್ಲ. ಬಹುಶಃ ಹೂಬಿಡಲು ತೆಗೆದುಕೊಳ್ಳುವ ದೀರ್ಘಕಾಲ ಮತ್ತು ಹೂತಳೆದ ಕಾಲಕ್ಕೆ ಕಣಿವೆಗಳನ್ನೆ ನೀಲಿಯಾಗಿಸುವ ಶಕ್ತಿಯಿಂದ ಅದು ಖ್ಯಾತೆ. ಉದಕಮಂಡಲದ ಬೆಟ್ಟಗಳಿಗೆ ‘ನೀಲಗಿರಿ’ ಹೆಸರು ಬರಲು ಕುರಿಂಜಿಯೇ ಕಾರಣ. ನೀಲದ ಜತೆಗೆ ತಿಳಿಗೆಂಪು ಹಾಗೂ ಮಾಸಲುಬಿಳಿ ಕುರುಂಜಿಯೂ ಇವೆ. ಮಲೆನಾಡಿಗರಾದ ಕಲ್ಕುಳಿ ಹೆಗ್ಗಡೆಯವರ ಪ್ರಕಾರ, ಕುರಿಂಜಿ ಜಾತಿಗೆ ಸಮೀಪವಾದ ಗುರುಗಿ ಸಹ ಐದಾರು ವರ್ಷಕ್ಕೊಮ್ಮೆ ಹೂಬಿಡುತ್ತದೆ. ವ್ಯತ್ಯಾಸವೆಂದರೆ, ಕುರಿಂಜಿ ಬೆಟ್ಟದ ಬಯಲಲ್ಲಿದ್ದರೆ, ಗುರುಗಿ ಕಾಡಂಚಿನ ನೆರಳಲ್ಲಿ ಬೆಳೆಯುತ್ತದೆ. ಕುರಿಂಜಿ ಕೆಮ್ಮಣ್ಣುಗುಂಡಿ, ಬಾಬಾಬುಡನ್‍ಗಿರಿ, ಕುದುರೆಮುಖ, ಕೊಡಚಾದ್ರಿ, ದೇವರಮನೆ, ಕುಮಾರಪರ್ವತಗಳ ಶೋಲಾಗಳಲ್ಲಿ ಚದುರಿಕೊಂಡಿದೆ. ಕುದುರೆಮುಖದ ಬಳಿ ಕುರಿಂಜಿ ಎಂಬ ಬೆಟ್ಟವೇ ಇದೆ. ಕುರಿಂಜಿಗೆ ಕನ್ನಡದಲ್ಲಿ ಹಾರ್ಲೆ ಎನ್ನುವರು. ಇದರ ನಿಜ ವೈಭವ ತಮಿಳುನಾಡಿನ ಉದಕಮಂಡಲ, ಪಳನಿ, ಕೊಡೈಕೆನಾಲ್, ಏರ್ಕಾಡು ಹಾಗೂ ಕೇರಳದ ಮುನ್ನಾರ್‍ಗಳಲ್ಲಿದೆ. ಅಲ್ಲಿ ಇಡೀ ಬೆಟ್ಟಕಂದರಗಳ ಮೇಲೆ ರಂಗಿನ ಚಾದರವಾಗಿ ಹಬ್ಬುವ ಕುರುಂಜಿ ತನ್ನ ಸರ್ವಾಧಿಕಾರ ಸ್ಥಾಪಿಸುತ್ತದೆ; ಹಿಮಾಲಯದ ಹೂಕಣಿವೆಗಳ ಚೆಲುವನ್ನು ನೆನಪಿಸುತ್ತದೆ.


ನಾನು ಕುರಿಂಜಿ ಕಾಣಲು ನನಗೆ ಅತಿಪರಿಚಿತವಾಗಿರುವ ಬಾಬಾಬುಡನಗಿರಿ ಶ್ರೇಣಿಯನ್ನು ಬಿಟ್ಟು, ಮೂಡಿಗೆರೆ ಸಮೀಪದ ದೇವರಮನೆಯನ್ನು ಆರಿಸಿಕೊಂಡೆ. ದೇವರಮನೆ ಕೆಳಗಿನ ಬೆಟ್ಟಗೆರೆಯಲ್ಲಿರುವ ಕಿರಿಯಗೆಳೆಯ ಸಂಪತ್, ‘ಹೂಬಿಟ್ಟಿವೆ ಬನ್ನಿ. ಆದರೆ ಕಾಡಾನೆಗಳ ಕಾಟ’ ಎಂದು ಎಚ್ಚರಿಕೆ ಸಹಿತವಾದ ಆಹ್ವಾನ ಕೊಟ್ಟರು. ಕ್ಯಾಮೆರಾಧಾರಿ ಸೋದರ ಕಲೀಮನೊಡನೆ ಬೆಟ್ಟಗೆರೆಗೆ ಹೋದೆ. ಸಂಪತ್ ಮನೆ ಅವರ ಪುಟ್ಟ ಕಾಫಿತೋಟದಲ್ಲಿದೆ. ಮನೆಯ ಸುತ್ತಮುತ್ತವಿದ್ದ ಮರ ಗಿಡಗಳಿಗೆ ಶೋಲಾ ಪರಿಸರದ ನೂರಾರು ಬಗೆಯ ಹಕ್ಕಿಗಳು ಬಂದುಹೋಗುತ್ತಿದ್ದವು. ಈ ಹಾರುವ ಹೂಗಳನ್ನು ಕಂಡು ಕುರುಂಜಿಯನ್ನು ಮರೆಯುವ ಲಕ್ಷಣ ತೋರಿಸುತ್ತಿದ್ದ ಪಕ್ಷಿಪ್ರಿಯ ತಮ್ಮನನ್ನು ಉಪಾಯವಾಗಿ ಎಬ್ಬಿಸಿಕೊಂಡು ದೇವರಮನೆಗೆ ಹೊರಟೆವು.
ದೇವರಮನೆ- ಕರ್ನಾಟಕದಲ್ಲಿ ಹಾಯುವ ಪಶ್ಚಿಮಘಟ್ಟಗಳ ಸಾಲಿನ ಮೋಹಕ ಪರ್ವತ ಶ್ರೇಣಿಗಳಲ್ಲಿ ಒಂದು. ಹಚ್ಚನೆಯ ಹಚ್ಚಡ ಹೊದ್ದ ಪರ್ವತ-ಕಣಿವೆ; ಅವಕ್ಕೆ ಮನಬಂದಾಗ ಮುಸುಕುವ ಹೊಗೆಮಂಜಿನ ಅಪ್ಪುಗೆ. ಇದು ಭೈರವಾರಾಧನೆಯ ಕ್ಷೇತ್ರ ಕೂಡ. ‘ದೇವರ’ ವಿಶೇಷಣ ಅಂಟಿಸಿಕೊಡಿರುವ ಹಳ್ಳಿ, ಕಣಿವೆ, ಗುಡ್ಡ, ಕಾಡು, ಕೆರೆಗಳು ಸಾಮಾನ್ಯವಾಗಿ ಭೈರವಾರಾಧನೆಗೆ ಸಂಬಂಧಿಸಿದವು. ಅಲ್ಲಿರುವ ಭೈರವ ಗುಡಿಯನ್ನೂ ರುದ್ರಭೀಷಣ ಭಂಗಿಯ ಮೂರ್ತಿಶಿಲ್ಪಗಳನ್ನೂ ಕಂಡರೆ, ಹಿಂದೆ ಇದೊಂದು ನರಬಲಿ ಮುಂತಾಗಿ ತಾಂತ್ರಿಕ ನಿಗೂಢಾಚರಣೆ ನಡೆಯುತ್ತಿದ್ದ ಸ್ಥಳವಾಗಿತ್ತು ಎಂದು ಭಾಸವಾಗುತ್ತದೆ. ಪುರಾವೆಗೆಂಬಂತೆ ಅಲ್ಲೊಂದು ನರಬಲಿ ಫಲಕವೂ ಇದೆ.
ಬೆಟ್ಟಗೆರೆಯಿಂದ ದೇವರಮನೆಗೆ ಏರುಹಾದಿ. ತೆಳಗೆ ಕಣಿವೆಯಾಳದಲ್ಲಿ ಕಾಣುವ ಒಂದು ಹಳ್ಳಿಯ ಹೆಸರು ಕೇಳಿ ಖುಶಿಯಾಯಿತು: ‘ಕೋಗಿಲೆ’! ಹಾದಿಯುದ್ದಕ್ಕೂ ಚಿಕ್ಕಚಿಕ್ಕ ಬೆಟ್ಟಗಳು. ಅವುಗಳ ತುಂಬ ಹೊಲದಲ್ಲಿ ಪೈರು ಬೆಳೆದಂತೆ ಕುರುಂಜಿ ಗಿಡ. ಕುರುಂಜಿ ಕನಕಾಂಬರದಂತೆ ಮುಚ್ಚಿದ ಮಗುವಿನ ಮುಷ್ಠಿಯಂತಹ ಪುಟ್ಟತೆನೆಯಲ್ಲಿ ಹೂಬಿಡುತ್ತ ಬರುತ್ತದೆ. ನಾವು ಹೋದಾಗ ಹೂವೈಭವ ಮುಗಿಯುತ್ತಿತ್ತು. ಕೂಲಿಗೆ ಹೋಗುವ ಹೆಂಗಸರು ರಸ್ತೆಯಲ್ಲಿ ನಡೆವಾಗ ಕೈಗೆ ಸಿಕ್ಕ ಬೇಲಿಹೂವನ್ನು ತುರುಬಿಗೆ ಸಿಕ್ಕಿಸಿಕೊಳ್ಳುವಂತೆ, ತೆನೆಯ ತುದಿಯಲ್ಲಿ ಕೆಲವಷ್ಟೆ ಉಳಿದಿದ್ದವು.

Neelakurinji-- flower that turns the mountains blue


ಸ್ಥಳೀಯರಿಗೆ `ಹಾರ್ಲೆ’ ಎಂಟು ಹತ್ತು ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುವುದು ತಿಳಿದಿದೆ. ಅದನ್ನೊಂದು ವಿಶೇಷವೆಂದು ಅವರು ಭಾವಿಸಿಲ್ಲ. ಅದನ್ನು ದನ ತಿಂದರೆ ಉಚ್ಚಿಕೊಳ್ಳುತ್ತವೆ ಎಂಬುದನ್ನು ಬಲ್ಲರು. ಮಲೆನಾಡ ಜಾನಪದದಲ್ಲೂ ಕುರಿಂಜಿಯ ಉಲ್ಲೇಖ ಕಾಣಲಿಲ್ಲ. ಪದ್ಮಾ ಶ್ರೀರಾಮ್ ಅವರು ಬರೆದ ‘ನೀಲಮೊಗದ ಚೆಲುವೆ’ಯಂತಹ ಕೆಲವು ಲೇಖನಗಳನ್ನು ಬಿಟ್ಟರೆ, ಇದರ ಮೇಲೆ ಹೆಚ್ಚಿನ ಬರೆಹಗಳೂ ಇದ್ದಂತಿಲ್ಲ. ಬಿ.ಜಿ.ಎಲ್. ಸ್ವಾಮಿಯವರ ‘ಹಸಿರುಹೊನ್ನು’ ಕೂಡ ಕುರಿಂಜಿಯ ಪ್ರಸ್ತಾಪಿಸುವುದಿಲ್ಲ. ಪಶ್ಚಿಮಘಟ್ಟಗಳಲ್ಲಿ ಜೀವಮಾನವೆಲ್ಲ ಕಳೆದ ತೇಜಸ್ವಿಯವರಿಗೂ ಕುರಿಂಜಿ ಕಾಡಿಲ್ಲ. ಬಹುಶಃ ಪ್ರಾಣಿ ಹಕ್ಕಿಗಳ ಮೇಲೆ ಅವರಿಗಿದ್ದಷ್ಟು ಕುತೂಹಲ ಸಸ್ಯಗಳ ಬಗ್ಗೆ ಇರಲಿಲ್ಲವೆ?
ಕನ್ನಡ ಸಂಸ್ಕøತಿಗೆ ಹೋಲಿಸಿದರೆ, ತಮಿಳು ಸಂಸ್ಕøತಿಯಲ್ಲಿ ಕುರಿಂಜಿ ನೂರಾರು ರೂಪದಲ್ಲಿ ಕಾಣಿಸುತ್ತದೆ. ಅಲ್ಲಿನ ಬುಡಕಟ್ಟು ಜನ, ಮದುಮಗಳಿಗೆ ಎರಡು ಕುರುಂಜಿ ವಯಸ್ಸಾಯಿತು, ಅವನಿಗೆ ಸಾಯುವಾಗ ಎಂಟು ಕುರಿಂಜಿ ವಯಸ್ಸಾಗಿತ್ತು ಎಂದು, ಅದನ್ನು ಆಯಸ್ಸು ಅಳೆಯುವ ಮಾನವಾಗಿಸಿಕೊಂಡಿರುವರು. ತಮಿಳಿನ ಪ್ರಾಚೀನ ಅಭಿಜಾತ ಸಾಹಿತ್ಯದಲ್ಲಿ ಕುರಿಂಜಿ ವಿರಾಜಮಾನ. ಪ್ರೇಮಕಾವ್ಯವಿರುವ ಸಂಗಂ ಸಾಹಿತ್ಯದಲ್ಲಿ ತಮಿಳುನಾಡನ್ನು ಕರಾವಳಿ, ಮರುಭೂಮಿ, ಕಾನುಪ್ರದೇಶ, ಹೊಲಗದ್ದೆಯ ಬಯಲು ಹಾಗೂ ಬೆಟ್ಟಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಭೂಪ್ರದೇಶದ ಜತೆಗೂ ಒಂದೊಂದು ಸಸ್ಯ ಇಲ್ಲವೇ ಹೂವನ್ನು ಸಮೀಕರಿಸಲಾಗಿದೆ. ಗುಡ್ಡಗಾಡಿನ ಪ್ರದೇಶಕ್ಕೆ ಕುರಿಂಜಿ ಸಂಕೇತ. ಇದರಿಂದ `ಕುರಿಂಜಿ ತಿಣೈ’ ಎಂಬ ಕಾವ್ಯ ಸಂಪ್ರದಾಯವೇ ಹುಟ್ಟಿದೆ. ಈ ಕಾವ್ಯದ ವಸ್ತು, ಅಗಲಿದ ಪ್ರೇಮಿಗಳ ಮಾತುಕತೆ ಮತ್ತು ಕೂಟ. ಇದಕ್ಕೆ ಪೂರಕವಾಗಿ ಕುರಿಂಜಿ ತಿಣೈನಲ್ಲಿ ಬೆಟ್ಟಪ್ರದೇಶದ, ಕುರಿಂಜಿ ಹೂವಿನ, ನಡುರಾತ್ರಿಯ, ಇಬ್ಬನಿ ಸುರಿವ ಚಳಿಗಾಲದ, ಹುಲಿ ಆನೆ ನವಿಲುಗಳ, ಬಿದಿರಿನ ಹಿಂಡಿಲುಗಳ, ಜಲದ ಅಬ್ಬಿಗಳ, ದುಂಬಿಗಳ, ಜೇನುಕೀಳುವ ಜನರ ಬದುಕಿನ ವರ್ಣನೆಗಳು. ಈ ಕಾವ್ಯಮಾರ್ಗದ ಅಧಿದೇವತೆ ಮುರುಗನ್. ಬೆಟ್ಟಪ್ರದೇಶದ ದೈವವಾದ ಮುರುಗನ್ ಕುರಿಂಜಿಹಾರ ತೊಟ್ಟು ಬುಡಕಟ್ಟಿನ ಚೆಲುವೆಯಾದ ವೆಳ್ಳಿಯನ್ನು ಪ್ರೇಮಿಸುವವನು. ಕೊಡೈಕೆನಾಲಿನ ಕುರಿಂಜಿ ಬನದಲ್ಲಿ ಅವನದೊಂದು ಗುಡಿಯಿದೆ. ತಮಿಳರ ಆದಿಮಕಾವ್ಯವಾದ ‘ಶಿಲ್ಪಪ್ಪದಿಕಾರಂ’ನ ನಾಯಕಿ ಕನ್ನಗಿ ಸಹ ಕಡಲತೀರದಲ್ಲಿ ಹುಟ್ಟಿಬೆಳೆದು, ಮದುರೆಯಂತಹ ಬಯಲುನಾಡಲ್ಲಿ ದುರಂತ ಕಂಡು, ಕೊನೆಗೆ ಕುರುಂಜಿ ಹೂವಿನ ಬೆಟ್ಟದಲ್ಲಿ ಪ್ರಾಣತ್ಯಾಗ ಮಾಡುವವಳು. ತಮಿಳು ಮನೆಮಾತಿನ ಕನ್ನಡ ಕವಿ, ಎ.ಕೆ. ರಾಮಾನುಜನ್ ಪ್ರಾಚೀನ ಸಂಗಂ ಸಾಹಿತ್ಯವನ್ನು ‘ಪೊಯೆಮ್ಸ್ ಆಫ್ ಲವ್ ಅಂಡ್ ವಾರ್’ ಹಾಗೂ ‘ಇಂಟೀರಿಯರ್ ಲ್ಯಾಂಡ್‍ಸ್ಕೇಪ್’ ಎಂದು ಇಂಗ್ಲೀಶಿಗೆ ಅನುವಾದಿಸಿದ್ದಾರೆ. ಅವರು ಅನುವಾದಿಸಿರುವ ಕುರಿಂಜಿ ತಿಣೈನ ಎರಡು ಪದ್ಯಗಳ ಕನ್ನಡ ಸಾರವಿದು:

What's the life span of a Kurinji flower? - Quora

1. ಇಳೆಗಿಂತಲೂ ದೊಡ್ಡ, ದಿಟಕ್ಕೂ ಆಗಸಕ್ಕಿಂತಲೂ ಎತ್ತರ
ನೀರಿಗಿಂತಲೂ ಹೆಚ್ಚು ಆಳ ನನ್ನ ಗಂಡಿನ ಮೇಲಣ ಪ್ರೇಮ
ಪರ್ವತಗಳ ಇಳುಕಲಿನಲಿ ಕಡುಕಪ್ಪನೆಯ ದೇಟಿನ
ಚೆಲುವಾದ ಕುರಿಂಜಿ ಹೂಗಳಿಂದ ದುಂಬಿಗಳು ಮಾಡುವ ಜೇನು

2. ಹುರುಳಿಕಾಯ ಬತ್ತಲೆಬೇರು ನಸುಗೆಂಪಾಗಿದೆ
ಕಾಡುಕೋಳಿಯ ಕಾಲಿನಂತೆ
ಚಿಗರೆ ಹಿಂಡು ಮಾಗಿದ ಕಾಯಿಗಳ ಮೇಲೆರಗುತಿದೆ
ಇಬ್ಬನಿ ಸುರಿವ ಮುಂಜಾನೆಯ ಋತುವಿನ ಹೊಡೆತಕ್ಕೆ
ಬೇರೆ ಮದ್ದಿಲ್ಲ, ನನ್ನ ಗಂಡಿನ ಹರವಾದ ಎದೆಯ ಹೊರತು.

Why Neelakurinji flowers only once in 12 years? | A plant from  Strobilanthes family

ಕುರಿಂಜಿ ತಿಣೈ ಕಾವ್ಯಮಾರ್ಗವೆಂದರೆ- ಪಶ್ಚಿಮಘಟ್ಟದ ಸಸ್ಯಾವಳಿ, ಕೀಟ, ಹಕ್ಕಿ, ಪ್ರಾಣಿ, ನೀರು, ಗಾಳಿ, ಜನ, ಅವರ ದುಡಿಮೆ, ಹಾಡು ಕತೆ ಸಂಗೀತಗಳೆಲ್ಲವನ್ನು ತುಂಬಿಕೊಂಡ ಅನನ್ಯಲೋಕ. ಈ ಲೋಕದಲ್ಲಿ ಒಂದು ಲೋಕದೃಷ್ಟಿಯೂ ಅಡಗಿದೆ. ಕುರಿಂಜಿಪಾಟ್ಟು ಎಂಬ ಹಾಡುಗಳನ್ನು ನಾಟ್ಟುಕುರಿಂಜಿ ಎಂಬ ರಾಗದಲ್ಲಿ ಸಂಜೆ ಹೊತ್ತು ಹಾಡುವರು; ಅದರ ಜತೆ ನುಡಿಸುವ ತಂತಿವಾದ್ಯದ ಹೆಸರು ಕುರಿಂಜಿಯಾಳ್. ತಮಿಳು ಸಂಸ್ಕøತಿಯ ಜತೆ ಆಪ್ತನಂಟನ್ನು ಏರ್ಪಡಿಸಿಕೊಳ್ಳದೆ ಹೋದ ಕನ್ನಡ ಸಾಹಿತ್ಯಕ್ಕೆ ಇವೆಲ್ಲ ಯಾವುದೊ ಲೋಕದ ವಿಚಾರಗಳಂತೆ ತೋರಬಹುದು. ಸಂಸ್ಕøತ ಕಾವ್ಯಮೀಮಾಂಸೆಗೆ ತನ್ನನ್ನು ಅಗತ್ಯಕ್ಕಿಂತ ಹೆಚ್ಚಾಗಿ ತೆತ್ತುಕೊಂಡು ಜೀತಮಾಡಿದ ಕನ್ನಡ ಶಿಷ್ಟ ಕಾವ್ಯಪರಂಪರೆ, ದ್ರಾವಿಡ ಸೀಮೆಯ ಸ್ಥಳೀಯ ಸಾಂಸ್ಕøತಿಕ ನೆಲೆಗಳ ಮೂಲಕ ತನ್ನದೇ ಮೀಮಾಂಸೆ ಕಟ್ಟಿಕೊಳ್ಳಲಾರದೆ ಹೋಯಿತು. ಆಧುನಿಕ ಕಾಲದಲ್ಲಿ ಈ ತಮಿಳು ಸಂಸ್ಕøತಿಯೊಂದಿಗೆ ಕನ್ನಡ ಸಂಸ್ಕøತಿಯನ್ನು ಕೂಡಿಸುವ ಕಸುವು ಬಿಜಿಎಲ್ ಸ್ವಾಮಿಗಿತ್ತು. ರಾಮಾನುಜನ್‍ಗಿತ್ತು. ಶಿವಪ್ರಕಾಶರಿಗಿದೆ. ಈ ದಿಸೆಯಲ್ಲಿ ಕನ್ನಡವು ಹೊಸಹಾದಿ ಸೋಸಬೇಕಿದೆ.
ಕುರಿಂಜಿ ಸಂಸ್ಕøತಿಯನ್ನು ತಮಿಳು ಸಿನಿಮಾ ಸಂಗೀತ ಚಿತ್ರಕಲೆಗಳು ಅದ್ಭುತವಾಗಿ ಮುಂದುವರೆಸಿದವು. ಅಲ್ಲಿ ಕುರಿಂಜಿ ಹೆಸರಲ್ಲಿ ಶಾಲೆ ಆಸ್ಪತ್ರೆ ಹೋಟೆಲು ರೆಸಾರ್ಟು ಬಡಾವಣೆಗಳಿವೆ; ಒಬ್ಬ ಇಂಜಿನಿಯರ್ ತಮಿಳು ಲಿಪಿಗಾಗಿ ಕುರಿಂಜಿ ಫಾಂಟ್ ಎಂಬ ಅಕ್ಷರವಿನ್ಯಾಸ ಸೃಷ್ಟಿಸಿರುವನು. ತಮಿಳು ಸಿನಿಮಾ ಗೀತಕಾರನೊಬ್ಬನ ಹೆಸರು ಕುರಿಂಜಿಪ್ರಭ; ತಮಿಳು ಸಿನಿಮಾಗಳು ಕುರಿಂಜಿಯ ಹೂಸುಗ್ಗಿಯನ್ನು ಸೆರೆಹಿಡಿಯಲು ಮರೆಯುವುದಿಲ್ಲ. ‘ಕುರಿಂಜಿ ಮಲರ್’ ಚಿತ್ರದಲ್ಲಿ ‘ಕುರಿಂಜಿ ಮಲರೈ’ ಎಂಬ ಜಾನಕಿ-ಜೇಸುದಾಸ್ ಹಾಡಿರುವ ಇಂಪಾದ ಹಾಡಿದೆ. ವ್ಯಂಗ್ಯವೆಂದರೆ ಈ ಹಾಡಿನ ಮೊದಲ ಸಾಲು ಕುರಿಂಜಿ ಬೆಳೆಯುವ ಶೋಲಾಬೆಟ್ಟಗಳಲ್ಲಿ ಚಿತ್ರೀಕರಣಗೊಂಡಿದೆ. ಅದು ಹೂವಿಲ್ಲದ ಕಾಲ.

Kurinji Flower – An Overview about Neelakurinji


ತಮಿಳರ ಈ ಯತ್ನಗಳ ಹಿಂದೆ ಅವರ ಸಾಂಸ್ಕøತಿಕ ಪ್ರಜ್ಞೆಯಿದೆ. ಜತೆಗೆ ಸಾಂಸ್ಕøತಿಕ ಸಂಕೇತಗಳನ್ನು ಮಾರುಕಟ್ಟೆಗಾಗಿ ಬಳಸುವ ವ್ಯಾಪಾರಿ ಜಾಣ್ಮೆ ಕೂಡ. ಕೇರಳ-ತಮಿಳುನಾಡಿನ ಗಿರಿಧಾಮಗಳಿಗೆ ಪ್ರವಾಸಿಗರನ್ನು ಸೆಳೆಯಲು ಅವರಿಗೆ ಕುರಿಂಜಿಯೊಂದು ದೊಡ್ಡ ಆಕರ್ಷಣೆ. ಅಲ್ಲಿನ ಹೋಟೆಲುಗಳಲ್ಲಿ ಕುರಿಂಜಿ ಋತುವಿನ ವರ್ಷಗಳ್ನು ಸೂಚಿಸುವ ಮಾಹಿತಿ ಬರೆಹಗಳಿರುತ್ತವೆ. ಒಮ್ಮೆ ದಕ್ಷಿಣ ಭಾರತದ ಎತ್ತರ ಶಿಖರವಾದ ಮುನ್ನಾರಿನ ಎರವಿಕುಲಮ್‍ಗೆ ಕಾಡುಮೇಕೆ ನೋಡಲು ಹೋಗಿದ್ದೆವು. ಕುರಿಂಜಿ ಗಿಡಗಳಿಂದ ತುಂಬಿಹೋಗಿದ್ದ ಬೆಟ್ಟದ ಕೋಡಿನಲ್ಲಿ ಮೇಕೆ ನಿರಾಳ ಮೇಯುತ್ತಿದ್ದವು. ಅದು ಹೂವಿನ ಕಾಲವಾಗಿರಲಿಲ್ಲ. ಈಚೆಗೆ ಕುರಿಂಜಿ ನೆಲೆಗಳಾದ ಶೋಲಾಗಳನ್ನು ಚಹತೋಟಗಳನ್ನಾಗಿ ಮಾಡಲಾಗಿದೆ. ಕುರಿಂಜಿ ದಟ್ಟವಾದ ಹುಲ್ಲಿನ ಜತೆ ಬೆಳೆಯುವುದರಿಂದ, ಆ ಹುಲ್ಲಿಗೆ ಬೆಂಕಿಬಿದ್ದಾಗಲೆಲ್ಲ ತಾನೂ ಭಸ್ಮವಾಗುತ್ತದೆ. ಕರ್ನಾಟಕದ ಶೋಲಾಗಳಲ್ಲಿ ಈ ಖಾಂಡವದಹನ ಪ್ರಸಂಗಗಳು ಸಾಮಾನ್ಯೆ. ಈಗೀಗ ತಮಿಳುನಾಡಲ್ಲಿ ಕುರಿಂಜಿ ಉಳಿಸುವ ಚಳುವಳಿಗಳೂ ಹುಟ್ಟಿಕೊಂಡಿವೆ.


ಕೆಲವು ಜಾತಿಯ ಮೀನುಗಳು ಹೊಳೆಗಳಲ್ಲಿ ನೂರಾರು ಮೈಲಿ ಪಯಣಿಸಿ ಹೊಸಸಂತಾನಕ್ಕೆ ಮೊಟ್ಟೆಯಿಟ್ಟು ಜೀವಬಿಡುತ್ತವೆ. ಅದರಂತೆ ದಶಕಗಳ ಕಾಲ ಕಾಯುವ ಕುರಿಂಜಿ ಹೂತರೆ ಅದರ ಮರಣದ ಸೂಚನೆ. ಬಿದಿರು ಕೂಡ ಹೀಗೆ ತಾನೇ? ಕುರಿಂಜಿ ಹೂತಳೆದು ಸತ್ತ ಬಳಿಕ, ಬಿದ್ದ ಅದರ ಬೀಜಗಳು ಮಳೆಗಾಲಕ್ಕೆ ಕಾದು ಸಸಿಯಾಗಿ ಹೊಸ ಬದುಕನ್ನು ಆರಂಭಿಸುತ್ತವೆ. ಇದರ ಹುಟ್ಟುಸಾವಿನ ಈ ಯಾನ ಎಷ್ಟು ಸಹಸ್ರ ಶತಮಾನಗಳಿಂದ ನಡೆದುಬಂದಿದೆಯೊ? ಹೆಚ್ಚಿನ ಸಸ್ಯಗಳಿಗೆ ‘ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆ’; ಕುರಿಂಜಿಗಾದರೊ ದಶಕಕೊಂದು ಹೊಸತು ಜನ್ಮ. ಆದರೆ ಸಾವಿನ ಸಾನಿಧ್ಯದಲ್ಲಿ ಅದು ಹೂತಳೆದು ಪಡುವ ಸಂಭ್ರಮ, ಸಾವು ಮತ್ತು ಮರುಹುಟ್ಟುಗಳ ನಡುವೆ ಮಾಡುವ ಧ್ಯಾನ ಅಪೂರ್ವ. ಕುರಿಂಜಿ ಬೆಳೆಯುವ ಮುಳ್ಳಯ್ಯನಗಿರಿ, ಬಾಬಾಬುಡನಗಿರಿ ಕೊಡಚಾದ್ರಿಗಳು ನಾಥರು ಸೂಫಿಗಳು ಅವಧೂತರ ತಾಣಗಳಾಗಿದ್ದು, ಇಲ್ಲಿ ಧ್ಯಾನದ ಗುಹೆಗಳಿವೆ; ವಿಭಿನ್ನ ದಾರ್ಶನಿಕ ಪರಂಪರೆಗೆ ಸೇರಿದ ಸಂತರು ಒಂದೇ ಗುಹೆಗಳಲ್ಲಿದ್ದ ಚರಿತ್ರೆಯಿದೆ. ಮಂಜು ಮಳೆ ಬಿಸಿಲು ಚಳಿಗಳೆಂಬ ಪರೀಷಹಗಳನ್ನು ಎದುರಿಸುತ್ತ ಸಹಸ್ರಾರು ವರ್ಷಗಳಿಂದ ನಿಂತಿರುವ ಶೋಲಾಬೆಟ್ಟಗಳನ್ನು ನೋಡುವಾಗ, ಅವೂ ಸ್ವತಃ ಧ್ಯಾನಸ್ಥವಾಗಿವೆ ಅನಿಸುತ್ತದೆ. ಅವುಗಳ ತುದಿಯಲ್ಲಿ ಗಡಗಡಿಸುವ ಚಳಿಯಲ್ಲಿ ಕುರಿಂಜಿ ಪುಷ್ಪವತಿಯಾಗಲು ತಾಳ್ಮೆಯಿಂದ ಕಾಯುತ್ತದೆ-ದೂರ ವ್ಯಾಪಾರಕ್ಕೊ ಕದನಕ್ಕೊ ಹೋದ ನಲ್ಲನ ಆಗಮನ ಕಾಯುವ ನಲ್ಲೆಯಂತೆ; ಜ್ಞಾನೋದಯದ ಗಳಿಗೆಯನ್ನು ಸಹನೆಯಿಂದ ಕಾಯುವ ಸಂತನಂತೆ.


ಕುರಿಂಜಿ ಅರಳಿದ ಹತ್ತು ದಿನಗಳ ತನಕ ಮಾತ್ರ ಪುಷ್ಪೋತ್ಸವ. ತಡವಾಗಿ ಹೋದಕಾರಣ, ದೇವರಮನೆಯಲ್ಲಿ ಕುರಿಂಜಿಸುಗ್ಗಿ ಕ್ಷೀಣವಾಗಿ ಕಂಡಿತು. ಆದರೂ ಕುರಿಂಜಿತಿಣೈ ಕಾವ್ಯದಲ್ಲಿರುವ ಜೇನು ಕೊರೆವಚಳಿ ಮಂಜು ಇಬ್ಬನಿ ಜಲಧಾರೆಗಳನ್ನು ಕಂಡೆವು. ದೇವರಮನೆಯ ಶಿಖರಗಳಿಂದ ಉಕ್ಕುವ ಚಿಲುಮೆಗಳು ಹರಿದು ಭೈರವನ ಗುಡಿಯ ಕೆಳಗೆ ಪ್ರಶಾಂತವಾದ ಕೆರೆಯನ್ನು ನಿರ್ಮಿಸಿದ್ದವು. ಅದರ ಕನ್ನಡಿಯಲ್ಲಿ ಗುಡಿಯ ಹಿಂದಿರುವ ಕುರಿಂಜಿ ಬೆಟ್ಟದ ಚಿತ್ರ ಕಂಡಿತು. ಗುಡಿಯ ಉಸ್ತುವಾರಿ ಮಾಡುತ್ತ ನೆಲೆಸಿರುವ ಜೋಗಿಗಳ ಮನೆಯಲ್ಲಿ ಕುರುಂಜಿ ಹೂವಿನ ಜೇನನ್ನು ಕೊಂಡೆವು. ವಿಶಿಷ್ಟ ಪರಿಮಳದ ಜೇನು.


ದೇವತೆಗಳಲ್ಲಿ ಭೈರವ ಉಗ್ರಸ್ವರೂಪಿ. ಅಡಿಗರು ಅವನನ್ನು ವಿನಾಶದ ರೂಪಕವಾಗಿ ಗ್ರಹಿಸಿ ‘ಸಮಾಜ ಭೈರವ’ ಕವನ ರಚಿಸಿದ್ದಾರೆ. ಅಲ್ಲಿ ಸಮಾಜವೆಂಬ ಭೈರವನು ವ್ಯಕ್ತಿವಿಶಿಷ್ಟತೆಯನ್ನು ನಿರಾಕರಿಸುವ ರೂಕ್ಷತೆಯ ಸಂಕೇತ; ‘ಹುಲ್ಲಿಗಿಲ್ಲ ಕಳ್ಳಿಗಿಲ್ಲ ಹೂವಿಗೇಕೆ ಸೌರಭ’ ಎನ್ನುತ್ತ ಸಮಾನತೆಯ ಹೆಸರಲ್ಲಿ ಏಕರೂಪತೆ ಹೇರುವ ಸರ್ವಾಧಿಕಾರಿ. ವ್ಯಂಗ್ಯವೆಂದರೆ ದೇವರಮನೆಯ ಭೈರವನು ಹೂವು-ಹುಲ್ಲು ಒಟ್ಟಿಗೆ ಬೆಳೆದಿರುವ ಬೆಟ್ಟದಲ್ಲಿ ನೆಲೆಸಿದ್ದಾನೆ. ಬಲಿಯ ಕೆನ್ನೆತ್ತರಿದ್ದ ತಾಣದಲ್ಲಿ ಕುರಿಂಜಿಯ ಸೌರಭವಿದೆ. ಕುವೆಂಪು ಅವರ ‘ಹೂವುದೇವರು’ ಕವನದ ರೂಪಕದ ಮೂಲಕ ಹೇಳುವುದಾದರೆ, ಅದು ತನ್ನ ಚೆಲುವಿನಿಂದ ದೇವರಮನೆಯೇ ಆಗಿದೆ. ಆತಂಕ ಹುಟ್ಟಿಸಿದ್ದ ಕಾಡಾನೆಗಳ ಅಂಜಿಕೆ ಕಳೆದು, ತುಟಿಯ ಮೇಲುಳಿದಿದ್ದ ಜೇನ ಪರಿಮಳ ಸವಿಯುತ್ತ, ಮತ್ತೊಂದು ಕುರಿಂಜಿಯ ತನಕ ಬದುಕಿದ್ದರೆ ದೇವರಮನೆಗೆ ಬರಬೇಕು- ಅದರಲ್ಲೂ ಅದು ಹೂಮುಡಿದು ತನ್ನ ಶಿಖರಸ್ಥಿತಿಯಲ್ಲಿರುವಾಗ-ಎಂದುಕೊಂಡು ಮರಳಿದೆವು. ಅಲ್ಲಿತನಕ ಕುರಿಂಜಿಯದೇ ಧ್ಯಾನ.


*******************************************

ರಹಮತ್ ತರೀಕೆರೆ

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Leave a Reply

Back To Top