ನದಿ.
ವಾರದ ಕವಿತೆ
ಪೂರ್ಣಿಮಾ ಸುರೇಶ್
ಕಿರಿಕಿರಿ
ಕೊಡಲು ಆರಂಭಿಸಿವೆ
ಈ ಸಂಖ್ಯೆಗಳು
ಇಸವಿ,ಮಾಸ,ದಿನ
ತಳದಲ್ಲಿ ಅದೆಷ್ಟು
ಮಧು ಉಳಿದಿದೆ
ಋತು
ಸುತ್ತು ಸುತ್ತಿ
ಚೈತ್ರದ ಎಳೆಹಸಿರು
ಪಚ್ಚೆ
ಹಳದಿಯಾಗಿ ಮಾಗಿ
ಗೊಣಗಿ
ಕ್ಷೀಣ ಆಕ್ರಂದನ ಚೀರಿ ಕಳಚುವ
ತರಗೆಲೆಯ ನಿಟ್ಟುಸಿರು
ನಿರಂತರ ಮರ್ಮರ
ಹೆಜ್ಜೆ,ದನಿ,ಗಾಳಿಯ
ಸ್ಪರ್ಶಕ್ಕೆ
ಒಡಲ ಹಾಡು ನಿಟ್ಟುಸಿರು
ಒಣ ಶಬ್ದ ಸೂತಕವಾಗಿ
ತೊಡೆಯಲ್ಲಿ ತರಚಿ
ಉಳಿದುಹೋದ
ಕಲೆಗಳೂ
ಆಪ್ತ ಪಳೆಯುಳಿಕೆ
ನೀರಾಗುವ ಪುಳಕಿತ
ಘಳಿಗೆಯಲ್ಲೂ
ಬಚ್ಚಲಿನ ಹಂಡೆ
ಇಣುಕಿ
ಉಳಿದಿರಬಹುದಾದ
ಬೆಚ್ಚಗಿನ ನೀರಿನ
ಲೆಕ್ಕಾಚಾರ
ಒದ್ದೆ ತಲೆಗೂದಲಿನ ಸಂದಿಯಲಿ
ಜಲಬಿಂದುಗಳ
ಪಿಸು
ಒಂದು ಕುಂಭದ್ರೋಣ
ಮಳೆಯಾಗಿ
ಒಣಗಿ ಬಿರುಕು ಬಿಟ್ಟ ,
ಬೆಟ್ಟ, ಬಯಲು, ತೊರೆ,
ತೊಯ್ದು
ಒದ್ದೆ ಒದ್ದೆಯಾಗಿ
ಹೆಣ್ಣಾಗಬೇಕು
ಹರಿಯುತ್ತಲೇ ಇರಬೇಕು
*************************************************