ಅಂಕಣ ಬರಹ

ಋಗ್ವೇದ ಸ್ಫುರಣ

ಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿ

ಋಗ್ವೇದ ಸ್ಫುರಣ
ಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿ
ಪ್ರ : ಅಭಿನವ ಪ್ರಕಟಣೆಯ
ವರ್ಷ : ೨೦೧೭
ಬೆಲೆ : ರೂ.೨೦೦
ಪುಟಗಳು : ೧೬೦

ಪ್ರಾಚೀನ ಭಾರತದ ಅತ್ಯಂತ ಪ್ರಮುಖ ಭಾಷಿಕ ದಾಖಲೆಯಾದ ಋಗ್ವೇದ ಸೂಕ್ತಗಳಲ್ಲಿರುವ ಋಕ್ಕುಗಳೊಳಗಿನ ಬಿಡಿ ಪದ್ಯಗಳ  ಸರಳ ಅನುವಾದ ಈ ಕೃತಿಯಲ್ಲಿದೆ.  ಮೂಲ ಸಂಸ್ಕೃತದಲ್ಲಿರುವ ಈ ಪದ್ಯಗಳನ್ನು  ಆರಂಭದಲ್ಲಿ ಸೂಕ್ತ ವ್ಯಾಖ್ಯಾನಗಳ ಮೂಲಕವೂ ನಂತರ ತಿಳಿಗನ್ನಡದಲ್ಲಿ ವ್ಯಾಖ್ಯಾನಗಳಾಗಿಯೂ ನೀಡಲಾಗಿದೆ.  ಋಗ್ವೇದದ ಋಕ್ಕುಗಳು ಪ್ರಕೃತಿಯ ಮಹಾಶಕ್ತಿಗಳು.  ವಾಸ್ತವದ ನೆಲೆಯಲ್ಲಿ ಗ್ರಹಿಸುವಂಥವು.  ವಿಶ್ವಭ್ರಾತೃತ್ವವನ್ನು ಪ್ರೇರಿಸುವ  ಭಾರತೀಯ ಸಂಸ್ಕೃತಿಗೆ ಋಗ್ವೇದವು ಉಗಮ ಸ್ಥಾನ.  ಉಪನಿಷತ್ತುಗಳಲ್ಲಿ ವಿಸ್ತೃತವಾಗಿ ಚರ್ಚಿತವಾಗಿರುವ ಅದ್ವೈತ ತತ್ವವು  ಮೊದಲು ಕಾಣಿಸಿದ್ದು ಋಗ್ವೇದದಲ್ಲಿ.  ಪರಸ್ಪರ ಪ್ರೀತಿ-ಪೋಷಣೆಗಳು ಜಗತ್ತಿನ ಕಲ್ಯಾಣಕ್ಕೆ ಅಗತ್ಯ ಮತ್ತು ವಿಶ್ವ ಸಾಮರಸ್ಯವೇ ತಮ್ಮ ಏಕೈಕ ಗುರಿ ಎಂದು ತಿಳಿದವರು ವೇದಕಾಲದ ಋಷಿಗಳು.  ಕೇವಲ ಮಾನವನ ಸುಖವಲ್ಲ ವಿಶ್ವ ನಿಯಮದ ಗುರಿ.  ಬದಲಾಗಿ ಅದು ಸಕಲ ಚರಾಚರ ಜೀವಿಗಳು ಅಪ್ರತಿಹತವಾದ ಋತದ ಮೂಲಕ ಪಡೆಯುವ  ಆನಂದವಾಗಿದೆ. ಈ ವಿಶ್ವದಲ್ಲಿ ಗೆಲ್ಲುವುದು ಋತವೊಂದೇ.  ಅನೃತವಲ್ಲವೆಂದು ಋಗ್ವೇದ ಹೇಳುತ್ತದೆ.  ಈ ಋತಕ್ಕೆ ಯಾವುದು ಅಡ್ಡ ನಿಲ್ಲುತ್ತದೆಯೋ ಅದು ಆಸುರೀ ಶಕ್ತಿ. ಅಂಥ ಶಕ್ತಿಗಳ ವಿರುದ್ಧ ವೇದಕಾಲದ ಋಷಿಗಳು ಅನವರತ ಹೋರಾಡಿದರು.

    ಋಗ್ವೇದ ಸ್ಫುರಣದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಆಯ್ದ ಸೂಕ್ತಗಳ ಕನ್ನಡ ರೂಪದ ಜತೆಗೆ ಸರಳ ವ್ಯಾಖ್ಯಾನಗಳ ಮೂಲಕ ಚಿಕ್ಕ ಮಕ್ಕಳಿಗೂ ಅರ್ಥವಾಗುವಂಥ ವಿವರಣೆಗಳಿವೆ. ಎರಡನೆಯ ಭಾಗದಲ್ಲಿ ಬೇರೆ ಬೇರೆ ಸಂದರ್ಭಗಳನ್ನು ಸೂಚಿಸುವಂಥ ಬಿಡಿ ಕವಿತೆಗಳಿವೆ.  ವೇದಕಾಲದಲ್ಲಿ ಜನಜೀವನ ಹೇಗಿತ್ತು,  ಸಾಮಾಜಿಕ ರೀತಿ-ನೀತಿಗಳು ಮತ್ತು ಪದ್ಧತಿ-ಪರಂಪರೆಗಳು ಹೇಗಿದ್ದವು ಎಂಬುದರ ಚಿತ್ರಣವನ್ನು ಈ ಕವಿತೆಗಳು ನೀಡುತ್ತವೆ. ಯುದ್ಧಭೂಮಿಯಲ್ಲಿ ಯೋಧನ ಚಿತ್ರ, ಮುಪ್ಪು ಮತ್ತು ಮರಣ, ದಾಂಪತ್ಯ ತತ್ವ, ಮಳೆಗಾಲದಲ್ಲಿ ಕಪ್ಪೆಗಳು, ಕಳೇಬರವನ್ನು ಕುರಿತು, ಪತಿಯನ್ನು ಕಳೆದುಕೊಂಡ ಪತ್ನಿ, ಕಸಬುಗಾರಿಕೆ,  ಕಾಳ್ಗಿಚ್ಚು, ಸವತಿ ಸಂಬಂಧ, ಶ್ರದ್ಧೆ ಮೊದಲಾದ ಕವಿತೆಗಳ ವಸ್ತುವನ್ನು ನೋಡಿದರೆ ಅವು ಆಧುನಿಕ ಕವಿತೆಗಳಿಗಿಂತ ಭಿನ್ನವಾಗಿ ಕಾಣುವುದಿಲ್ಲ.  ವೇದಕಾಲದ ಸಾಮಾಜಿಕ ಚಿಂತನೆಗಳು, ಎಷ್ಟರ ಮಟ್ಟಿಗೆ ಜೀವಪರವಾಗಿದ್ದವು ಎಂಬುದನ್ನು ಈ ಕವಿತೆಗಳು ನಿರೂಪಿಸುತ್ತವೆ.

    ಕಾವ್ಯದ ಅನುವಾದಕ್ಕೆ ವಿಶೇಷ ಮಹತ್ವವಿದೆ. ಮೂಲದ ಛಂದಸ್ಸನ್ನೂ ಅಲಂಕಾರಗಳನ್ನೂ ಅರ್ಥಪೂರ್ಣವಾಗಿ ಉಳಿಸಿಕೊಳ್ಳುವುದು ಅನುವಾದಕರ ಸೃಜನಶಕ್ತಿಗೆ ಒಂದು ಬಹಳ ದೊಡ್ಡ ಸವಾಲು. ಇಲ್ಲಿ ಅನುವಾದಕರೂ ಸ್ವತಃ ಅನುಭವಿ ಕವಿಗಳೂ ಆದ ಹೆಚ್.ಎಸ್.ಆರ್. ಅವರು ಈ ಸವಾಲನ್ನು ಗೆಲ್ಲುವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ.  ಅನುವಾದಿತ ಕವಿತೆಗಳನ್ನೂ ಭಾವಗೀತೆಗಳಾಗಿ ಹಾಡುವಷ್ಟು ಛಂದೋಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ.

*********************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top