ಅಂಕಣ ಬರಹ
ಹೊಸ ದನಿ – ಹೊಸ ಬನಿ-೧೩.
ಸಿದ್ಧಾಂತದ ಚೌಕಟ್ಟಿನಲ್ಲೇ ಉಳಿದೂ
ಬೆಳಕಿಗೆ ತಡಕುವ ವಸಂತ ಬನ್ನಾಡಿ ಕವಿತೆಗಳು
ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ವಾಣಿಜ್ಯ ಪಾಠ ಕಲಿಸುತ್ತಿದ್ದ ಶ್ರೀ ವಸಂತ ಬನ್ನಾಡಿ ಅಲ್ಲಿನ ರಂಗ ಅಧ್ಯಯನ ಕೇಂದ್ರದ ಸಂಚಾಲಕರಾಗಿಯೂ ಪ್ರಸಿದ್ಧರು. ಶಬ್ದಗುಣ ಹೆಸರಿನ ಅರ್ಧವಾರ್ಷಿಕ ಸಾಹಿತ್ಯ ಪತ್ರಿಕೆಯನ್ನು ಅತ್ಯಂತ ಶ್ರೀಮಂತವಾಗಿ ಸಂಪಾದಿಸುತ್ತಿದ್ದವರು ಅವರು. ಶಬ್ದಗುಣ ಕೂಡ ಉಳಿದೆಲ್ಲ ಹಲವು ಸಾಹಿತ್ಯ ಪತ್ರಿಕೆಗಳ ಹಾಗೇ ಪ್ರಾರಂಭದಲ್ಲಿ ಅತಿ ಉತ್ಸಾಹ ತೋರುತ್ತಲೇ ಮೂರು ಸಂಚಿಕೆಗಳನ್ನು ಸಂಪಾದಿಸುವಷ್ಟರಲ್ಲೇ ಅಕಾಲಿಕ ಮರಣಕ್ಕೆ ತುತ್ತಾಯಿತು. ಸಾಹಿತ್ಯ ಪತ್ರಿಕೆಗಳ ಬಗ್ಗೆ ಪ್ರೀತಿಯ ಮಾತು ಆಡುತ್ತಲೇ ಅದರ ಪೋಷಣೆಗೆ ಅತಿ ಅವಶ್ಯವಾದ ಚಂದಾ ಕೊಡದೆ ಆದರೆ ಪತ್ರಿಕೆ ಪಾಪ ಪ್ರಕಟಣೆ ನಿಲ್ಲಿಸಿತೆಂದು ಚಿರ ಸ್ಮರಣೆಯ ಲೇಖನ ಬರೆಯುವ ಲೇಖಕರೇ ಹೆಚ್ಚಿರುವಾಗ ಸಾಹಿತ್ಯ ಪತ್ರಿಕೆಗಳ ಪ್ರಕಟಣೆಯ ಬಗ್ಗೆಯೇ ವಿಸ್ತೃತ ಲೇಖನ ಬರೆಯಬಹುದು. ಇರಲಿ,ಆದರೆ ತಂದದ್ದು ಮೂರೇ ಮೂರು ಸಂಚಿಕೆಗಳೇ ಆದರೂ ಆ ಸಂಚಿಕೆಗಳನ್ನು ರೂಪಿಸುವುದಕ್ಕೆ ಫಣಿರಾಜ್ ಮತ್ತು ರಾಜಶೇಖರರಂಥ ಅಪ್ಪಟ ಸಮಾಜ ವಾದೀ ಚಿಂತನೆಯ ಲೇಖಕರ ಸಹಕಾರ ಇವರಿಗೆ ಇತ್ತೆಂದರೆ ನಿಸ್ಸಂಶಯವಾಗಿ ಬನ್ನಾಡಿಯವರ ಚಿಂತನೆಯ ಹಾದಿಯನ್ನು ಮತ್ತೆ ಸ್ಪಷ್ಟಪಡಿಸುವ ಅವಶ್ಯಕತೆಯೇ ಇಲ್ಲ. ತಮ್ಮೆಲ್ಲ ಸಮಯ ಮತ್ತು (ಆರ್ಥಿಕ) ಶಕ್ತಿಯನ್ನು ಕೂಡ ರಂಗ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಮತ್ತು ಪ್ರಕಾಶನದ ಕೆಲಸಕ್ಕೂ ಬಳಸಿಯೇ (ಪ್ರ)ಸಿದ್ಧರಾದ ಶ್ರೀ ಬನ್ನಾಡಿ ರಂಗ ಕರ್ಮಿಯಾಗಿ ಕೂಡ ಸಮಾಜವಾದೀ ಸಿದ್ಧಾಂತದ ಪ್ರತಿ ಪಾದಕರಾಗಿ ನಿರಂತರವಾಗಿ ಫ್ಯೂಡಲ್ ತತ್ವಗಳ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಗರ್ಜಿಸುತ್ತಲೇ ಇರುವವರು.
ಈವರೆಗೆ ಐದು ಕವನ ಸಂಕಲನಗಳನ್ನು ಪ್ರಕಟಿಸಿದ್ದರೂ ಫೇಸ್ಬುಕ್ಕಿನಲ್ಲಿ ಅತ್ಯಂತ ಚಟುವಟಿಕೆಯಿಂದ ಸಮಾಜ ಮುಖೀ ಬರಹಗಾರರ ಪರವಾಗಿ ಮಾತನಾಡುತ್ತಲೇ ಪ್ರಭುತ್ವದ ವಿರುದ್ಧದ ತಮ್ಮ ನಿಲುವುಗಳನ್ನು ಅತ್ಯಂತ ಸ್ಪಷ್ಟವಾಗಿಯೇ ಪ್ರಕಟಿಸುವ ಬನ್ನಾಡಿಯವರ ಕವಿತೆಗಳು ಫೇಸ್ಬುಕ್ಕಿನಲ್ಲಿ ಪ್ರಕಟಿಸುವ ರೀತಿಯೇ ಭಿನ್ನವಾದುದು. ಬಹುತೇಕರು ಫೇಸ್ಬುಕ್ಕಿನಲ್ಲಿ ಕವಿತೆ ಎಂದು ತಾವು ಭಾವಿಸಿದುದನ್ನು ಪ್ರಕಟಿಸುವಾಗ ಅದಕ್ಕೊಂದು ಶೀರ್ಷಿಕೆಯ ಅಗತ್ಯತೆ ಇದೆ ಎಂದೇ ಭಾವಿಸದೇ ಇರುವ ಹೊತ್ತಲ್ಲಿ ಇವರು ಪ್ರಕಟಿಸುವ ಪ್ರತಿ ಕವಿತೆಯೂ ಅತ್ಯಂತ ಸಮರ್ಥ ಶೀರ್ಷಿಕೆ ಮತ್ತು ಅಗತ್ಯವಿದ್ದಲ್ಲಿ ಅತ್ಯಗತ್ಯವಾದ ಚಿತ್ರಗಳ ಜೊತೆಗೇ ಪ್ರಕಟವಾಗುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಜೊತೆಗೇ ಸಹ ಬರಹಗಾರರ ಸಣ್ಣದೊಂದು ಬರಹಕ್ಕೂ ಚಂದದ ಪ್ರತಿಕ್ರಿಯೆ ಕೊಡುವ ಅವರ ಗುಣ ಕೂಡ ನೀವು ಬಲ್ಲಿರಿ.
ಮೂಲತಃ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದ ಯಾವುದೇ ಲೇಖಕ ಕವಿಯಾಗಿ ಪ್ರಕಟವಾಗುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಈಗಾಗಲೇ ಆ ಸಿದ್ಧಾಂತದ ಚೌಕಟ್ಟಿಗೆ ತನ್ನೆಲ್ಲ ಬೌದ್ಧಿಕ ಸಾಮರ್ಥ್ಯವನ್ನೂ ವ್ಯಯಿಸಿ ತನ್ನ ಚೌಕಟ್ಟಿನ ಆಚೆಗೆ ಹೊರಬರಲಾರದೇ ತಳಮಳಿಸುವುದು ಮತ್ತು ಏನೇ ಹೇಳ ಹೊರಟರೂ ಕಡೆಗೆ ಆ ಮೂಲಕ್ಕೇ ಮತ್ತೆ ಮತ್ತೆ ಮರಳುವ ಕಾರಣದಿಂದಾಗಿ ಕವಿಯಾಗಿ ಕಾಣುವುದಕ್ಕಿಂತ ಲೇಖಕನಾಗಿಯೇ ಉಳಿದುಬಿಡುವುದೂ ಮತ್ತು ಆ ಅಂಥ ಚಿಂತನೆಯ ಲೇಖಕ ಬರೆಯ ಹೊರಟ ಕವಿತೆಯು ಕೂಡ ಆ ಸಿದ್ಧಾಂತದ ಘೋಷ ವಾಕ್ಯವೇ ಆಗಿ ಪರಿಸಮಾಪ್ತಿ ಆಗುವುದನ್ನು ನಾವು ಬಲ್ಲೆವು. ಬನ್ನಾಡಿಯವರ ಕಾವ್ಯ ಕೃಷಿ ಈ ಆರೋಪಗಳನ್ನು ಅಥವ ಮಿತಿಗಳನ್ನು ಸಮರ್ಥವಾಗಿ ಎದುರಿಸುತ್ತಿರುವುದನ್ನು ಅವರ ಕವಿತೆಗಳ ಓದಿನ ಮೂಲಕ ಗುರ್ತಿಸಬಹುದು
ಕಡಲ ಧ್ಯಾನ ಸಂಕಲನಕ್ಕೆ ಬಾಲೂರಾವ್ ದತ್ತಿನಿಧಿಯ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿಯನ್ನು ಮತ್ತು ನೀಲಿ ಹೂ ಸಂಕಲನಕ್ಕೆ ಪುತಿನ ಕಾವ್ಯ ಪುರಸ್ಕಾರ ಪಡೆದ ಬನ್ನಾಡಿ ಕವಿತೆಗಳು ಬಿಎಂಶ್ರೀ ಅವರ ಹಾಗೆಯೇ ಸಮರ್ಥ ಅನುವಾದ ಸಾಮರ್ಥ್ಯವನ್ನೂ ಪುತಿನ ಥರದ ಸರ್ವರ ಸಮಾನತೆಯನ್ನೂ ಪಡೆದುದರ ಕಾರಣವಾಗಿದೆ. ಕಾವ್ಯ ವಿಮರ್ಶೆಯ ಸವೆದ ಜಾಡುಗಳು ಈ ಕವಿಯು ಎತ್ತಿಹಿಡಿದ ಭಾವನಾತ್ಮಕ ನೆಲೆಯಾಚೆಗಿನ ಬೌದ್ಧಿಕ ತಹತಹಿಕೆಗಳನ್ನು ಬೇಕೆಂತಲೇ ಬದಿಗೆ ಸರಿಸುವ ಕಾರಣದಿಂದಾಗಿ ಜನಪ್ರಿಯ ಆವೃತ್ತಿಯ ಬಹು ಪ್ರಸರಣದ ಪತ್ರಿಕೆಗಳಲ್ಲಿ ಇಂಥವರ ಕಾವ್ಯ ಪ್ರಕಟವಾಗುವುದು ಅಪರೂಪ. ಹಾಗೆಂದೇ ಏನೋ ತಮ್ಮ ಚಿಂತನೆಗಳನ್ನು ಕವಿತೆಗಳನ್ನಾಗಿ ಪೋಣಿಸುವ ವಸಂತರು ತಮ್ಮ ಹೆಸರಿನಂತೆಯೇ ಎಂಥ ಗ್ರೀಷ್ಮದಲ್ಲೂ ವಸಂತದ ಚಿಗುರನ್ನು ಕಾಣಿಸಬಲ್ಲ ಕನಸುಳ್ಳವರು. ಅವರ ಬಿಡಿ ಬಿಡಿ ಕವಿತೆಗಳ ಡಿಸೆಕ್ಷನ್ನಿಗಿಂತಲೂ ಒಟ್ಟೂ ಕಾವ್ಯದ ಅನುಸರಣದ ಅಭ್ಯಾಸಕ್ಕಾಗಿ ಈ ಟಿಪ್ಪಣಿಯಲ್ಲಿ ಎಂದಿನಂತೆ ಪ್ರತ್ಯೇಕವಾಗಿ ವಿಭಾಗಿಸದೇ ಅವರ ಕಾವ್ಯದ ನಿಲುವಿನ ಬದ್ಧತೆಯ ಸೂಕ್ಷ್ಮವನ್ನು ಒಟ್ಟಂದದಲ್ಲಿ ಸವಿಯಲು ಅವರ ನಾಲ್ಕು ಕವಿತೆಗಳನ್ನು ಇಲ್ಲಿ ಕಾಣಿಸುತ್ತಿದ್ದೇನೆ.
“ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು?” ಎನ್ನುವ ಸಂಕಟದಲ್ಲೇ ಒಟ್ಟೂ ವರ್ತಮಾನದ ದಾಂಗುಡಿಗಳನ್ನು ವಿಮರ್ಶಿಸುತ್ತಲೇ ಸುಳ್ಳು ಸುಳ್ಳೇ ಒಳಾರ್ಥಗಳಿವೆ ಎಂದು ಬಿಂಬಿಸುವವರ ಪ್ಯೂರಿಟಿಯನ್ನು ಈ ಇಂಪ್ಯೂರ್ ಕವಿತೆ ಹೇ(ಕೇ)ಳುತ್ತಿದೆ.
೧.ಯಾರಿಗಾಗಿ ಬರೆಯಬೇಕಾಗಿದೆ ಕಾವ್ಯ..
………………………………………………………….
ಈ ಜಗತ್ತು ಯಾವತ್ತೂ ನನಗೆ
ಬೇಸರ ಬರಿಸಿರಲಿಲ್ಲ
ನನ್ನ ಅಜ್ಜಿಯ ನಡುಗುವ ಕೈಗಳು ಮುಖದ ಸುಕ್ಕುಗಳು ನನ್ನ ಜೀವನ ಪ್ರೀತಿಯನ್ನು ಹೆಚ್ಚಿಸಿದವು
ನನ್ನ ಸಂಪರ್ಕಕ್ಕೆ ಬಂದವರು
ಒಳ್ಳೆಯವರೂ ಆಗಿರಲಿಲ್ಲ
ಕೆಟ್ಟವರೂ ಆಗಿರಲಿಲ್ಲ
ಅಥವಾ
ಎರಡೂ ಆಗಿದ್ದರು
ಎರಡೂ ಆಗಿರಲಿಲ್ಲ
ಹೀಗೆ ಹಾರಿಹೋದವು ನನ್ನ ಯೌವ್ವನದ ದಿನಗಳು
ಯಾವ ಪೂರ್ವನಿರ್ಧರಿತ ಯೋಚನೆಗಳೂ ಇಲ್ಲದೆ
ಎಲ್ಲರಿಗೂ ಕಷ್ಟಗಳು ಇದ್ದವು
ಸಾಗರದಂತೆ ಮೈ ಚಾಚಿಕೊಂಡ ಕಷ್ಟಗಳು
ನಡುವೆ ಉಕ್ಕುವ ನಗು
ಬದುಕಿನ ಭರವಸೆ ಹುಟ್ಟಿಸುವ ನಗು
ಸುಟ್ಟು ಹಾಕಿಬಿಡಬಲ್ಲ ಬೆಂಕಿ
ಹೂವಾಗಿ ಅರಳಿದ ಗಳಿಗೆಗಳೂ ಇದ್ದವು
ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ
ಒಂದೋ ನಾನು ಓದುತ್ತಿರುವ ಪುಸ್ತಕಗಳಿಂದ
ಎದ್ದು ಬಂದವರ ಹಾಗೆಯೂ
ಅಥವಾ ಅವರೇ
ಪುಸ್ತಕಗಳ ಒಳಗೆ ಸೇರಿಕೊಂಡವರ ಹಾಗೆಯೂ ಇರುತ್ತಿದ್ದುದರಿಂದ
ನನಗೆ ಎಲ್ಲವೂ
ಆಸಕ್ತಿದಾಯಕವೂ ನಿಗೂಢವೂ ಅಚ್ಚರಿದಾಯಕವೂ ಸಂತೋಷ ಕೊಡುವಂತದ್ದೂ ಖಿನ್ನನಾಗಿಸುವಂಥದ್ದೂ
ಆಗಿ ಹೊಸ ವರ್ಷವೆನಿಸುತ್ತಿರಲಿಲ್ಲ ಯಾವ ವರ್ಷವೂ
ಸಣ್ಣಪುಟ್ಟ ಆಸೆಗಳು
ಹತ್ತಿಕ್ಕಿಕೊಂಡ ಸ್ವಾರ್ಥ
ಹೆಡೆಬಿಚ್ಚುವ ಈಷ್ಯೆ೯
ಮನಸ್ಸು ಬಿಚ್ಚಿ ಹೇಳಿಕೊಳ್ಳುವ ಸಂಕಟಗಳು
ಹೇಳದೇ ಉಳಿದ ಮಾತುಗಳು
ಎಲ್ಲವೂ
ನದಿಯೊಂದು ಹರಿಯುವ ಹಾಗೆ
ಹರಿಯುತ್ತಲೇ ಇರುವಾಗ
ಬೆಚ್ಚಿ ಬೀಳಿಸಿದ್ದು
ಎಲ್ಲೋ ದೂರದಲ್ಲಿ ಎಂಬಂತೆ ಕೇಳಿಬರುತ್ತಿದ್ದ
ಕೊಲೆಯ ಸದ್ದುಗಳು
ಮನುಷ್ಯ ದೇಹವನ್ನು ಕತ್ತರಿಸಿ
ಮೂಟೆಯಲಿ ಕಟ್ಟಿ ಬಿಸಾಕುತ್ತಿದ್ದ ಭೀಭತ್ಸಗಳು
ಹಣಕ್ಕಾಗಿಯೋ ಪೂರ್ವದ್ವೇಷದಿಂದಲೋ
ನಡೆಯುತ್ತಿದ್ದರಬಹುದಾದ ಕೃತ್ಯಗಳು
ಅವೇ ಕೃತ್ಯಗಳು ಸಾಮೂಹಿಕವಾಗಿ ಬಿಟ್ಟರೆ?
ಸಾಮೂಹಿಕವಾಗಿ ಒಬ್ಬನನ್ನು ಬೆನ್ನಟ್ಟಿದರೆ?
ಗುಡಿಸಲುಗಳ ಮೇಲಿನ
ಸಾಮೂಹಿಕ ದಾಳಿಯಾಗಿ ಬಿಟ್ಟರೆ?
ಮುಗಿಸಿಬಿಡಲೆಂದೇ
ಒಂದೇ ದಿಕ್ಕಿನಲ್ಲಿ ಯೋಚಿಸುವ
ಇಬ್ಬರು ಮೂವರು ಹತ್ತಾರು ನೂರಾರು ಕೈಗಳು
ಒಟ್ಟಾಗಿ ವಧಿಸತೊಡಗಿದರೆ?
ಕಮರಿ ಹೋಯಿತು ನನ್ನ ಕಲ್ಪನೆ
ಕಮರಿ ಹೋಗಿತ್ತು ನನ್ನ ಜಗತ್ತಿನ ಕಲ್ಪನೆಯೂ
ನಡು ವಯಸ್ಸಿಗೆ ಕವಿದುಕೊಂಡಿತು ಕಣ್ಣಿಗೆ ಕತ್ತಲ ಪೊರೆ
ಎಲ್ಲ ಅಸಡ್ಡಾಳಗಳ ನಡುವೆಯೂ
ಸಹ್ಯವೆನಿಸಿದ್ದ ಜಗತ್ತು
ಮೊದಲ ಬಾರಿಗೆ ಒಡೆದುಹೋಯಿತು
ಕನ್ನಡಿಯೊಂದು ಠಳ್ಳನೇ ಒಡೆದು ಚೂರಾಗುವಂತೆ
ಅರ್ಥವಾಗದಂತೆ
ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು?
ಸಿದ್ಧಾಂತದ ಅಂಟಲ್ಲಿ ಸಿಲುಕಿದವರು ಅದರಿಂದ ಹೊರ ಬಂದರೂ ಬಿಟ್ಟೂ ಬಿಡದೇ ಕಾಡುವ ಆ ಅದೇ ದಾರಿಗಳು ಅವರು ನಂಬಿದ ಅಧ್ಯಾತ್ಮದ ದಾರಿಯೇ ಆಗಿ ಬದಲಾಗುವುದನ್ನು ಈ ಪದ್ಯ ಸಮರ್ಥಿಸುತ್ತಿದೆ. ಈ ಕವಿತೆಯಲ್ಲಿ ಕವಿ ಯಾರೊಂದಿಗೆ ಸಂಕಟದ ಸಾಗರವನ್ನು ದಾಟಿದ್ದು ಪ್ರೇಮಿಯೊಂದಿಗೋ, ಗೆಳೆಯನೊಂದಿಗೋ ಅಥವ ತನ್ನದೇ ಸಿದ್ಧಾಂತದೊಂದಿಗೋ ಎನ್ನುವುದು ಆಯಾ ಓದುಗರ ಮರ್ಜಿಗೆ ಬಿಟ್ಟ ಸಂಗತಿ.
೨. ದಾಟಿದೆವು ನಾವು ಸಂಕಟದ ಸಾಗರವನು
…………………………………………………….
ಸಂಕಟದ ಮಹಾಸಾಗರಗಳೇ ತುಂಬಿವೆ
ನಮ್ಮ ಗತಕಾಲದ ದಿನಚರಿಯ ಪುಟಗಳಲಿ
ಎಂತಹ ದಾರುಣ ಕಾಲವನು
ದಾಟಿ ಬಂದೆವು ನಾವು
ನಿನ್ನನು ತಲುಪಲು ನನ್ನ ಬಳಿ ಅಂದು
ಒಂದು ಮುರುಕು ದೋಣಿಯೂ ಇರಲಿಲ್ಲ
ಆಚೆ ದಡದಲ್ಲಿ ಕೈಬೀಸಿ ಹಾಗೆಯೇ
ಮರೆಯಾಗಿ ಬಿಡುತ್ತಿದ್ದೆ ನೀನು
ನಕ್ಷತ್ರಗಳ ಗೊಂಚಲನು ಮನೆಯಂಗಳದಲಿ ನೆಡುವ
ಕಣಸ ಕಂಡಿದ್ದೆವು ನಾವು
ಕಾಲೂರಲೊಂದು ಅಂಗುಲ ನೆಲ
ಬಿಸಿಲ ತಾಪ ಮರೆಸಲು ನಾಕು ಹಿಡಿ ಸೋಗೆ
ಇಷ್ಟಿದ್ದರೆ ಸಾಕು,ಗೆದ್ದೆವು ಅಂದುಕೊಂಡಿದ್ದೆವು
ಇಕ್ಕಟ್ಟಾಗುತ್ತಾ ಹೋಗುವ ಊರ ಓಣಿಯ ದಾರಿ
ಬೆನ್ನಿಗಂಟಿ ಈಟಿ ಇರಿವ ಮಂದಿಯ ಕಿಡಿ ಕಣ್ಣು
ಸಾಗುತ್ತಲೇ ಇರಬೇಕೆಂಬ ಹಂಸ ನಡೆಯನು
ಗಟ್ಟಿಗೊಳಿಸಿದವು ನಮ್ಮಲಿ
ನಮ್ಮ ಜೊತೆಗಿದ್ದುದು ಗಾಳಿಯ ಮರ್ಮರ
ಬಿಡದೆ ಹಿಂಬಾಲಿಸುವ ಕೋಗಿಲೆಯ
ಕುಹೂ ಕುಹೂ ಗಾನ
ಶೃತಿ ಹಿಡಿವ ಏಕತಾರಿ ಜೀರುಂಡೆ ಜೀಕು
ಕವುಚಿ ಬಿದ್ದ ಬೋಗುಣಿಯೆಂಬ ಆಕಾಶದ ಸೊಗಸು
ಪ್ರತೀ ಸಲ ಸಾಗರದ ಮುಂದೆ ನಿಂತಾಗಲೂ
ಯೋಚಿಸುವುದಿದೆ ನಾವು
ನಿರಾಳತೆಯ ಹೊದಿಕೆ ಹೊದ್ದಿರುವ
ಸಾಗರವೆಂಬ ಸಾಗರವೇ
ಹಾಗೆ ಕೂಗಿ ಕೊಳ್ಳುತ್ತಿದೆಯೇಕೆ
ಲೋಕಕೆ ಮುಖ ಮಾಡಿ?
ಕೊತ ಕೊತ ಕುದ್ದು
ಅಲೆಯಲೆಯಾಗಿ ಹೊರಳಿ
ದನಿಯೆತ್ತಿ ದಡಕ್ಕನೆ ಅಪ್ಪಳಿಸುತ್ತಿದೆಯೇಕೆ?
ಅಂತಹ ಸಂಕಟ ಅದೇನು ಹುದುಗಿದೆ ನಿನ್ನ ಒಡಲಲಿ?
ನಮ್ಮ ಉಸಿರ ಬಿಸಿಯನು ಉಳಿಸಿದ್ದು
ಧನ ಕನಕ ಬಣ್ಣ ಬಡಿವಾರಗಳಲ್ಲ
ದಿನವೂ ಇಷ್ಟಿಷ್ಟೇ ಹಂಚಿಕೊಂಡ
ಒಲವೆಂಬ ಮಾಯಕದ ಗುಟುಕುಗಳು
ಮಿಂದುಟ್ಟು ನಲಿಯ ಬಯಸಿದ್ದು ನಾನು
ನಿನ್ನ ಅಂಗ ಭಂಗಿಗಳ ನಿರಾಭರಣ ಝರಿಯಲಿ
ಮುಗಿಲ ನಕ್ಷತ್ರಕೆ ಆಸೆಪಡದ ನಾನು
ಮುಖವೂರಲು ಬಯಸಿದ್ದು
ನಿನ್ನ ನಿಬಿಡ ಹೆರಳಿನ ಸಿಕ್ಕುಗಳಲಿ
———————————-
“ಕಡಲು ಮತ್ತು ನೀನು” ಪದ್ಯದ ವಿನಯವಂತಿಕೆ ಎಂದಿನ ಇವರ ರೂಕ್ಷ ರೀತಿಯಿಂದ ಬಿಡಿಸಿಕೊಂಡ ಆದರೆ ಸಂಬಂಧಕ್ಕೂ ಸಿದ್ಧಾಂತದ ಹೊರೆಯನ್ನು ದಾಟಿಸುವ ಯತ್ನ
೩.ಕಡಲು ಮತ್ತು ನೀನು
………………….…..
ಮಳೆಗಾಲದ ಕಡಲು ಎಂದಿನ ಕಡಲಿನಂತಲ್ಲ
ನೋಡಿದ್ದೀಯ ನೀನು ಮಳೆಗಾಲದ ಕಡಲನು?
ಅದು ಅಲ್ಲೋಲ ಕಲ್ಲೋಲ ಮಗುಚುವುದನು?
ಜಗತ್ತಿನ ಕೊಳೆ ಕೆಸರನು
ಮರುಮಾತನಾಡದೆ ಹೊದ್ದು
ಕೆಸರಾಗುವುದನು ತಾನೂ
ನೀಲಾಕಾಶ ತಾನಾಗಬೇಕೆಂದು
ವರುಷವಿಡೀ ಕನಸುವ ಕಡಲು ಈಗ ಕಪ್ಪಾಗುವುದು
ಅದೂ ಎಂಥಾ ಕಪ್ಪು
ಕಾಡಿಗೆ ಕಪ್ಪು ಕಡಲು!
ತಾಳಲಾರದೆ ತಳಮಳ ಅಗ್ನಿಕುಂಡವಾಗುವುದು
ಕೊತ ಕೊತ ಕುದಿಯುವುದು
ನೋಡಿದ್ದೀಯಾ ನೀನು ನೋಡಿದ್ದೀಯಾ
ನೋಡಿದ್ದೇನೆ ನಾನು ಕಡಲನು ನಿನ್ನ ಕಣ್ಣುಗಳಲಿ
ಕಡಲು ಅಲ್ಲಿ ತುಳುಕಾಡುವುದನು
ಯಾರ ಊಹೆಗೂ ನಿಲುಕದ
ಭಾವ ಕಡಲು
ಒಂದು ವ್ಯತ್ಯಾಸವಿದೆ
ಮಳೆಗಾಲದ ಕಡಲಿಗೂ ನಿನ್ನ ಕಾಡಿಗೆ ಕಣ್ಣಿಗೂ
ಭೋರ್ಗರೆವ ನೀನು ರೆಪ್ಪೆಗಳ ಒಳಗೇ
ಕೂಗು ಹಾಕುವುದಿಲ್ಲ ಕಡಲಂತೆ
ಕತ್ತರಿಸುತ್ತಾ ಹರಿಯುವುದೂ ಇಲ್ಲ
ಯಾರನೂ ನೋಯಿಸುವ ಇರಾದೆ ಇರದ ನೀನು
ಎಲ್ಲವನು ಬಲ್ಲ ಮೌನ ಕಡಲು
ಬೇಸರ ಮುತ್ತಿಕೊಂಡಾ ನಿನ್ನನು
ಮರಳುವೆ ನೀನು ನಿನ್ನ ಅಲೆಹಾಡಿನರಮನೆಗೆ
ಅನುಗಾಲದ ಕಡಲಂತೆ ಶಾಂತ,ಗಂಭೀರ
ಅಲೆ ಅಲೆಗಳಲಿ ಫಳಫಳ ಬೆಳ್ಳಿ ಬೆಳಕ ಚಿಮ್ಮಿಸುವ
ರುದ್ರ ನೀಲ ಮನೋಹರ ಮಡಿಲು
ಇಂಗಿ ಹೋಗುವುದು ನಿನ್ನೊಳಗೆ
ಯಾರ ಗಮನಕೂ ಬಾರದೆ ಬೆಂಕಿಯ ನದಿಯೊಂದು
ದೂರದಲೆ ನಿಂತು ನಿನ್ನ ನೋಡುವೆ ನಾನು
ಕಡಲ ಅನತಿ ದೂರದಲಿ ಕೈ ಕಟ್ಟಿ ನಿಂತಿರುವ
ಅನಾದಿ ಬಂಡೆಯೊಂದಿರುವುದಲ್ಲ ಹಾಗೆ
ಪ್ರೀತಿಯ ಸಿಂಚನದಲಿ ದಿನವೂ
ತೋಯಬಯಸುವವನು
ಸ್ಪರ್ಶದ ದಿಗಿಲಿಗೆ ಹಾತೊರೆಯುವವನು
ಬಿರುಮಳೆ ಹೆಂಡದ ನಶೆ ಏರಿಸಿಕೊಂಡ ಕಡಲು
ಬಾನೆತ್ತರ ಚಿಮ್ಮಿ ಬಂದೆರಗುವುದಲ್ಲ
ಬಯಸುವೆ ಅದನೇ ನಾನೂ
ಉಪ್ಪು ತೋಳಾಗಿ ಬಂದು ನೀನು ಅಪ್ಪುವುದನು
————————————————
ಮಾಧ್ವ ಸಂಪ್ರದಾಯವನ್ನು ಬಿಡದೆಯೂ ಮಾರ್ಕ್ಸ್ ವಾದದ ಅಪ್ರತಿಮ ಪ್ರತಿ ಪಾದಕರಾಗಿದ್ದ ಕವಿ ಸು.ರಂ.ಎಕ್ಕುಂಡಿ ಯಾಕೋ ಈಗ ನೆನಪಾಗುತ್ತಾರೆ. ತಾವು ನಂಬಿದ ಸಿದ್ಧಾಂತ ಮತ್ತು ತತ್ವಕ್ಕೆ ನಿಷ್ಠೆ ಇಟ್ಟುಕೊಂಡೂ ಬದುಕಿನ ರೀತಿಯಲ್ಲಿ ರಾಜಿಯಾಗದೆ ಆದರ್ಶವಾಗುವುದು ಕಡು ಕಷ್ಟದ ಕೆಲಸ. ವಸಂತ ಬನ್ನಾಡಿಯವರೂ ಎಕ್ಕುಂಡಿಯವರ ಮಾರ್ಗವನ್ನು ಅನುಲಕ್ಷಿಸಿದ್ದೇ ಆದರೆ ಅವರೊಳಗಿನ ಕವಿಗೆ ಮತ್ತಷ್ಟು ಕಸುವು ಮತ್ತು ಕಸುಬು ಸಿದ್ಧಿಸೀತೆಂಬ ಆಶಯದೊಂದಿಗೆ
“ಮಳೆಗಾಲದ ಹಾಡು ಪಾಡು” ಕವಿತೆಯ ಸಾಲುಗಳಾದ
ಒರತೆ ಕೊರತೆಗಳ ನಡುವೆಯೂ ಹಳೆ ಕಾಲದ ಹಾಡುಗಳನು ಸುಮ್ಮನೆ ಕೇಳಿದಂತೆ ಎಂದು ಹೇಳಿದ ಹಾಗೆ.
೪. ಮಳೆಗಾಲದ ಹಾಡು ಪಾಡು
………………………………………………….
ಸರಿದು ಹೋಗುವುದು ಕಾಲ ಕಣ್ಣೆದುರೇ
ನಾಗಾಲೋಟದ ಕುದುರೆಯಂತೆ
ಮೊನ್ನೆ ಮೊನ್ನೆ ಹಾರೈಸಿ ಕಾದಿದ್ದ ಚಳಿಗಾಲ
ಬಿಸಿಲಾಗಿ ಕಂಗೆಡಿಸಿದ್ದೇ ಬಂತು
ಇನ್ನೇನು ಬರಲಿದೆ ಮಳೆಗಾಲ
ಬರಲಿ ಅದೂ,ಲೆಕ್ಕ ಇಡುವುದು ಬೇಡ ನಾವು
ಅದು ಹೊತ್ತು ತರುವ ನೋವುಗಳ ಗೊಂಚಲನು
ಈಗ ಇರುವ ಸಂಕಟಕೆ ಇನ್ನೊಂದು ಎಂದು
ಮನಸು ಗಟ್ಟಿ ಮಾಡಿಕೊಂಡರಾಯಿತು
ಅಜ್ಜಿ ಅಮ್ಮಂದಿರು ಹಪ್ಪಳ ಸಂಡಿಗೆ
ಕೂಡಿಡುತ್ತಿದ್ದುದು ಈ ಕಾಲಕೆಂದೇ
ಶುರುವಾದರೆ ಜಡಿಮಳೆ
ಹೊರಗೆ ಹೋಗುವಂತೆಯೂ ಇಲ್ಲ
ಒಳಗೆ ಕೂರುವಂತೆಯೂ ಇಲ್ಲ
ತಂದು ಒಳಕೋಣೆಯಲಿ ರಾಶಿ ಹಾಕುವುದು
ತೀರದ ಚಡಪಡಿಕೆಗಳನು
ಮಳೆಗಾಲವೆಂದರೆ ಬೇರೆ ಕಾಲದ ಹಾಗಲ್ಲ
‘ಮೂವತ್ತು ಮಳೆಗಾಲವಾದರೂ
ಇನ್ನೂ ಬುದ್ಧಿ ಬಂದಿಲ್ಲ ನಿನಗೆ’
ಬೈಸಿಕೊಳ್ಳುತ್ತಲೇ ಬಂದಿದ್ದೇವಲ್ಲ
ಮಳೆಗಾಲದ ಹೆಸರಿನಲ್ಲೇ!
ಕಾಲದ ಕುದುರೆಯೇನು
ನಾವು ಹೇಳಿದಂತೆ ಕೇಳುವುದೇ?
ಬೆನ್ನ ಮೇಲೇರಿ ಕೂತರೆ ಮುಗಿಯಿತು
ನಮಗೊಲಿವಂತೆ ಮಣಿಯುವ ವಸ್ತು
ಇಲ್ಲಿ ಯಾವುದೂ ಇಲ್ಲ
ಇದ್ದುದರಲ್ಲಿ ಒಳ್ಳೆ ಬಟ್ಟೆ ಧರಿಸುವುದು
ಕಾಲನ ಕಣ್ಣು ತಪ್ಪಿಸಿ ಪ್ರೀತಿ ಮಾಡುವುದು
ಏಕಾಂತದ ಮಳೆ ಹನಿಯೊಳಗೆ ಸೇರಿಕೊಳ್ಳುವುದು
ಮತ್ತೆ ದಾರುಣ ಸೆಕೆಗಾಗಿ ಕಾಯುವುದು,ಇಷ್ಟೇ
ನಚ್ಚಗಿನ ಬಿಸಿಲಂತೆ ಚಮತ್ಕಾರಗಳನೂ ಒಡ್ಡುವುದಿದೆ
ಮಳೆ ಚಳಿ ಸೆಕೆಗಾಲಗಳೂ
ದಯಾಮಯಿ ಕಣ್ಣು ತೆರೆದು
ಪ್ರೀತಿಸುತ್ತಿದ್ದರಾಯ್ತು
ಒರತೆ ಕೊರತೆಗಳ ನಡುವೆಯೂ
ಹಳೆ ಕಾಲದ ಹಾಡುಗಳನು ಸುಮ್ಮನೆ ಕೇಳಿದಂತೆ
******************************************
ಡಿ ಎಸ್ ರಾಮಸ್ವಾಮಿ.
ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ
ಬನ್ನಾಡಿ ಸರ್ ರ ಕವಿತೆಗಳು ಮನಸ್ಸಿಗೆ ನಾಟುವಂತೆ ಇರುತ್ತವೆ. ಸೊಗಸಾದ ಬರಹ ಸರ್