ಅಂಕಣ ಬರಹ
ಹಾಡು ಹಳೆಯದಾದರೇನು
ಹಳೆಯ ಹಾಡುಗಳನ್ನು ಕೇಳುವಾಗಲೆಲ್ಲಾ ಎಂಥದೋ ಭಾವುಕತೆಗೆ ಒಳಗಾಗುವುದು, ಏನೋ ಒಂದು ರೀತಿ ಹೊಟ್ಟೆ ಚುಳ್ ಎನ್ನುವುದು, ಆ ಹಳೇ ದಿನಗಳ ನೆನಪುಗಳೆಲ್ಲಾ ಹಿಂದಿನ ಜನ್ಮದ ನೆನಪುಗಳೇನೋ ಎನ್ನುವಂತೆ ಕಾಡುವುದು… ಹೀಗೆಲ್ಲಾ ನನಗೆ ಮಾತ್ರ ಅನಿಸುತ್ತದಾ? ಬೇರೆಯವರಿಗೂ ಹೀಗೆಲ್ಲಾ ಆಗುತ್ತದಾ? ಗೊತ್ತಿಲ್ಲ. ಆದರೆ ನನಗೆ ಇದರ ಜೊತೆಗೆ ಇನ್ನೂ ವಿಚ್ ವಿಚಿತ್ರವಾಗೆಲ್ಲ ಏನೇನೋ ಅನ್ನಿಸುವುದಿದೆ. ಹಳೇ ಫೋಟೋಗಳನ್ನು ನೋಡುವಾಗ ಅದರಲ್ಲಿನ ಅಪರಿಚಿತರ ಬಗ್ಗೆ ಏನೇನೋ ಅನಿಸುತ್ತದೆ. ಅವರನ್ನು ನಾನೆಲ್ಲೋ ಭೇಟಿ ಮಾಡಿರುವೆ, ಮಾತಾಡಿಸಿರುವೆ, ಅಥವಾ ಇವರೆಲ್ಲಾ ಎಲ್ಲಿಯವರು, ಇವರೂ ನಮ್ಮಂತೆಯೇ ಬದುಕುತ್ತಿರುವರಾ… ಇನ್ನೂ ಏನೇನೋ ಅನಿಸಿ ಕಾಡತೊಡಗುತ್ತದೆ. ತಲೆ ಕೊಡವಿ ಎದ್ದು ಹೋಗದಿದ್ದರೆ ತಲೆಯೇ ಉದುರಿಹೋಗುತ್ತದೇನೋ ಅನಿಸಿಬಿಡುವಷ್ಟು.
ಆದರೂ ಹಳೆಯ ಮಧುರ ಹಾಡುಗಳೆಂದರೆ ನನಗೆ ವಿಪರೀತ ಇಷ್ಟ. ಎಂದೋ ಪ್ರೀತಿಯಿಂದ ಹಾಡಿಕೊಳ್ಳುತ್ತಿದ್ದ ಹಾಡುಗಳು, ಎಂದೂ ಶ್ರುತಿ ತಾಳಗಳ ಲೆಕ್ಕಾಚಾರದ ಮಾತನ್ನು ನನ್ನೊಂದಿಗೆ ಆಡಿಲ್ಲ. ಭಾವದ ಅಗತ್ಯಕ್ಕೆ ತಕ್ಕಂತೆ ಒಂದಾಗಿವೆ. ಮನಸನ್ನು ಮುದಗೊಳಿಸಿವೆ.
ನಾನು ಐದನೇ ತರಗತಿಯಲ್ಲಿದ್ದಾಗ ಸರ್ವಶಕ್ತ ಎನ್ನುವ ಪದ್ಯವೊಂದು ನಮ್ಮ ಪಠ್ಯಪುಸ್ತಕದಲ್ಲಿತ್ತು. “ದೇವ ನಿನ್ನ ಇರವ ನಂಬಿ ಜೀವಕೋಟಿ ಸಾಗಿದೆ, ಕಾವನೆಂಬ ಅರಿವಿನಲ್ಲಿ ನಿನ್ನ ಚರಣಕೆರಗಿದೆ” ಎಂದು ಅದರ ಪಲ್ಲವಿ. ಬರೆದ ಕವಿ ಹೆಸರನ್ನು ಮರೆತಿರುವುದಕ್ಕೆ ಕ್ಷಮೆ ಇರಲಿ. ಅದೆಷ್ಟು ಚಂದದ ರಾಗದಲ್ಲಿ ನಮಗದನ್ನು ನಮ್ಮ ಬಸವಣ್ಯೆಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರಂದರೆ ಆ ಪ್ರಾರ್ಥನೆಯನ್ನು ಹಾಡುತ್ತಾ ಹೋದಂತೆ ಕಣ್ತುಂಬುತ್ತಿತ್ತು. ಅಳು ಅಳುತ್ತಲೇ ಅದನ್ನು ಹಾಡಿ ಮುಗಿಸುವಾಗ ಎಂಥದೋ ಸಮಾಧಾನ, ಧನ್ಯತಾ ಭಾವ ಮನಸಿಗೆ. ನಿರಾಳ ಎನಿಸಿಬಿಡುತ್ತಿತ್ತು. ಇಂತಹ ಅದೆಷ್ಟೋ ಹಾಡುಗಳನ್ನು ನಮ್ಮ ಬಸವಣ್ಯಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರು. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು(ಬಿ.ಎಂ.ಶ್ರೀ.)”, ಆ ಹಾ ಹಾ ಮಲ್ಲಿಗೆ, ಬರುವೆನೇ ನಿನ್ನಲ್ಲಿಗೆ(ಬೇಂದ್ರೆ)”, ” ಈ ನಾಡಿನಲಿ ನಾನು ಮೂಡಿಬಂದುದೆ ಸೊಗಸು, ಭಾರತವ ಪ್ರೀತಿಸುವ ಭಾಗ್ಯವೆನದಾಯ್ತು”….. ಹೀಗೆ ಅದೆಷ್ಟೋ ಭಾವಪೂರ್ಣ ಹಾಡುಗಳನ್ನು ಮಕ್ಕಳಿಂದ ಹಾಡಿಸಿದ ಶ್ರೇಯ ಅವರದು. ಅವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ ಅದರ ಪರಿಣಾಮ. ನಾವಿವತ್ತು ಏನಾಗಿ ಬೆಳೆದಿದ್ದೇವೋ ಅದರ ಹಿಂದಿನ ಮೌಲ್ಯಗಳನ್ನು ನಾವು ಪಡೆದದ್ದು ಇಂತಹ ಅದೆಷ್ಟೋ ಹಾಡುಗಳಿಂದ ಎಂದರೆ ಸುಳ್ಳಲ್ಲ.
ಅವು ಕಾಲದ ಜೊತೆ ಮರೆಯಾಗತೊಡಗಿದಾಗ ಒಂಥರಾ ಸಂಕಟವಾಗುತ್ತಿತ್ತು. ಮೆದುಳಿನ ಸಾಮರ್ಥ್ಯದ ಬಗ್ಗೆ ಅನುಮಾನವಾಗುತ್ತಿತ್ತು. ಆಗ ಹೊಳೆದದ್ದು, ಡೈರಿಯೆನ್ನುವ ಗಂಧದ ಡಬ್ಬಿಯಲ್ಲಿ ನನ್ನ ಪ್ರೀತಿಯ ನವಿರಾದ ನವಿಲುಗರಿಯಂಥ ಹಾಡುಗಳನ್ನು ಬರೆದಿಡಬೇಕು ಎನ್ನುವುದು. ಬರೆದೆ. ಬರೆದ ಹಾಡುಗಳಲ್ಲಿ ನನ್ನಿಷ್ಟದ “ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ, ಬಾಡಿಹೋಗುವ ಮುನ್ನ ಕೀಳುವರಾರೆಂದು” ಎನ್ನುವ ಕವಿತೆಯೂ ಇತ್ತು. ಆದರೆ ಚಿಕ್ಕಂದಿನಲ್ಲಿ ನನಗೆ ಅದನ್ನು ಬರೆದವರು ಯಾರು ಎನ್ನುವುದು ಗೊತ್ತಿರಲಿಲ್ಲ. ಇತ್ತೀಚೆಗೆ ಅದನ್ನಯ ಬರೆದವರು ವ್ಯಾಸರಾಯ ಬಲ್ಲಾಳರು ಎಂದು ತಿಳಿದದ್ದು. ಡೈರಿಯಲ್ಲೇನೋ ಬರೆದಿಟ್ಟಿದ್ದೆ. ಆದರೆ ಒಂದಿನ ಯಾರೋ ಆ ಡೈರಿಯನ್ನೇ ಅಪಹರಿಸಿಬಿಟ್ಟರು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅಳುವೇ ಬಂತು. ನೆನಪಿದ್ದಷ್ಟೂ ಹಾಡುಗಳನ್ನು ಮತ್ತೆ ಬರೆದಿಟ್ಟುಕೊಂಡೆ. ಆದರೆ ಒಂದಷ್ಟು ಇಷ್ಟದ ಹಾಡುಗಳು ನೆನಪಿನಿಂದಲೂ ಹಾರಿದ್ದವು. ಅತ್ತೆ ಅಷ್ಟೇ. ಆಗಲೇ “ಕಾಡು ಮಲ್ಲಿಗೆಯೊಂದು…” ಕವಿತೆಯೂ, ಕಳೆದು ಹೋದದ್ದು.
ಆದರೆ ಮೊನ್ನೆ ವಿಜಯ ಪ್ರಕಾಶರ ಧ್ವನಿಯಲ್ಲಿ ಆ ಹಾಡನ್ನು, ಅದೇ ಧಾಟಿಯಲ್ಲಿ ಮತ್ತೂ ವಿಸ್ತೃತ ಸ್ವರ ಪ್ರಸ್ತರ, ಆಲಾಪ ಮತ್ತು ಚಂದದ ಪ್ರಸ್ತುತಿಯೊಂದಿಗೆ ಕೇಳಿದಾಗ ಕಿವಿಗಳಿಗೆ ಅಪೂರ್ವ ಆನಂದವಾಅಯಿತು. ಅದರ ಸಾಹಿತ್ಯವೂ ಸಿಕ್ಕಿದ್ದು ಮತ್ತೊಂದೇ ಎತ್ತರದ ಖುಷಿ. ಆದರೆ ಕೆಲವರು ಯಾಕೆ ಹಾಗೆ ಮತ್ತೊಬ್ಬರ ಸಂಗ್ರಹವನ್ನು ಕದಿಯುತ್ತಾರೋ ಗೊತ್ತಿಲ್ಲ. ನನಗೆ ಹೀಗೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಶುರುವಾದದ್ದು ಬಹಳ ಚಿಕ್ಕಂದಿನಲ್ಲಿಯೇ. ಈಗ ನನ್ನ ತರಗತಿಯ ಪ್ರತಿಯೊಬ್ಬ ಮಗುವಿನಿಂದಲೂ ಈ ಕೆಲಸವನ್ನು ಮಾಡಿಸುತ್ತಿರುತ್ತೇನೆ. ಆಸಕ್ತಿ ಮತ್ತು ಪ್ರೀತಿಯಿಂದ ಮಾಡುವವರನ್ನು ಕಂಡಾಗ ಮಾಡಿಸಿದ ಕೆಲಸ ಸಾರ್ಥಕವಾಯಿತು ಎನಿಸುತ್ತದೆ.
ಈ “ಕಾಡುಮಲ್ಲಿಗೆಯೊಂದು” ಕವಿತೆ ಒಂದೊಂದು ಬಾರಿ ಒಂದೊಂದು ಅರ್ಥವನ್ನು ಹೊಳೆಯಿಸುತ್ತದೆ. ನಿರ್ಲಕ್ಷಿತ ಸಮುದಾಯವೊಂದರ ದನಿಯಾಗಿ ಹಾಡುತ್ತದೆ. ಮೀರಾ ಎನ್ನುವ ಕವಯಿತ್ರಿಯ ಕವಿತೆಯೊಂದು ಕವಿತೆ ಇದ್ದಕ್ಕೆ ಸಮವರ್ತಿಯೆನ್ನುವಂತೆ ಇದೆ. “ಬಿಳಿ ಮಲ್ಲಿಗೆ ಮುಡಿ ಏರುತ ನಗುತಿರೆ, ಕಾಕಡ ಗಿಡದಲಿ ಬಾಡುತಿದೆ…” ಎಂದು ಆ ಹಾಡು ಶುರುವಾಗುತ್ತದೆ. “ಕಾಡುಮಲ್ಲಿಗೆ”ಯ ನೆನಪಲ್ಲಿ, ಅನುಪಸ್ಥಿತಿಯಲ್ಲಿ ಈ ಕವಿತೆ ನನಗೆ ಸಾಂತ್ವನ ಹೇಳಿತ್ತು. ಆದರೆ ” ಕಾಡು ಮಲ್ಲಿಗೆಯ” ಮುಂದೆ ಇದು ಸಪ್ಪೆಯೇ ಎಂದು ಬಹಳಷ್ಟು ಸಾರಿ ಅನ್ನಿಸಿದೆ.
ಇವುಗಳ ಯಾದಿಯಲ್ಲಿ ಬರುವ ಮತ್ತೊಂದು ಗೀತೆಯೆಂದರೆ “ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿ ಬಂತು, ಸಂಗಾತಿ ನಿನ್ನ ನೆನಪು, ನನ್ನೆದೆಗೆ ತಂಪು ತಂತು..” ಕವಿತೆ. ಹರೆಯದ ಕನಸುಗಳಿಗೆ ಕಸುವು ತುಂಬಿದ ಕವಿತೆ ಇದು ಎಂದರೆ ತಪ್ಪಾಗಲಾರದು. ಅಷ್ಟು ಮುದ್ದಾದ ಭಾವಗೀತೆ ಇದು. “ಆ ಶುಕ್ರ ತಾರೆ ನಕ್ಷತ್ರ ಧಾರೆ ಧರಗೇರಿ ಏರಿ ಏರಿ, ನನ್ನೆದೆಯ ವೀಣೆ ನಿನ್ನೆದೆಯ ಮೀಟಿ ಇದು ರಾಗ ರಾಸ ವೀಣೆ” ಎಂದು ತಾರಕವನ್ನು ಮುಟ್ಟುವ ಜಾಗವಂತೂ ಭಾವ ತೀವ್ರತೆ ತೀವ್ರ ಗತಿ ಪಡೆದುಕೊಂಡು ಶಿಖರ ಮುಟ್ಟುತ್ತದೆ. ಹಾಗೇ ನಾವೆಲ್ಲರೂ ಹಾಡಿನೊಳಗೆ ಲೀನವಾಗುತ್ತೇವೆ.
ಚಿಕ್ಕಂದಿನಲ್ಲಿ ಹಾಡಿಕೊಳ್ಳುತ್ತಿದ್ದ ಮತ್ತೊಂದು ದೇಶಭಕ್ತಿ ಗೀತೆಯೆಂದರೆ, “ಮೊಳಗಲಿ ಮೊಳಗಲಿ ನಾಡಗೀತವು, ಮೂಡಲಿ ಮೂಡಲಿ ಸುಪ್ರಭಾತವು” ಎನ್ನುವ ಈ ಗೀತೆ. ಬಹಳ ವರ್ಷಗಳ ವರೆಗೂ ನನಗೆ ಈ ಗೀತೆಯನ್ನು ಬರೆದವರು ಎಚ್.ಎಸ್.ವೆಂಕಟೇಶಮೂರ್ತಿಯವರು ಎನ್ನುವ ವಿಚಾರವೇ ತಿಳಿದಿರಲಿಲ್ಲ. ಆದರೆ ಆ ಗೀತೆಗಿದ್ದ ಪ್ರಸಿದ್ಧಿಯ ಬಗ್ಗೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರ ನಾಲಿಗೆ ಮೇಲೆ ನಲಿದಾಡುತ್ತಿದ್ದ ಗೀತೆ ಅದು. ಈಗಲೂ ನಾ ನನ್ನ ಮಕ್ಕಳಿಗೆ ಅದನ್ನು ಹೇಳಿಕೊಡುತ್ತಿರುತ್ತೇನೆ. ಇಂತಹುದೇ ಮತ್ತೊಂದು ದೇಶಭಕ್ತಿ ಗೀತೆಯೆಂದರೆ “ಕುಹೂ ಕುಹೂ ನೀ ಕೋಗಿಲೆಯೆ ನಾ ಹಾಡುವ ಹಾಡೊಂದ ಹಾಡುವೆಯಾ ನಾ ಹೇಳುವ ಮಾತೊಂದ ಕೇಳುವೆಯಾ…” ಗೀತೆ. ಈಗಲೂ ಇದನ್ನು ಬರೆದ ಕವಿಯ ಬಗ್ಗೆ ನನಗೆ ಅಸ್ಪಷ್ಟ ತಿಳಿವಳಿಕೆ. ಆದರೆ ಅದು ಕೇಳುವ ಹಾಡುವ ಹೃದಯಗಳಲ್ಲಿ ನೆಲೆಸಿರುವ ರೀತಿಯ ಬಗ್ಗೆ ಸ್ವತಃ ಕವಿಗೇ ಎಂತಹ ಹೆಮ್ಮೆ ಮತ್ತು ಪರಮಾನಂದವಿರಬಹುದು… ಬಹುದೊಡ್ಡ ಅಚ್ಚರಿ…
ಇಂತಹ ಅದೆಷ್ಟೋ ಮುಗಿಯದ ಹಾಡುಗಳು… ನಾನು ದೂರ ಶಿಕ್ಷಣದ ಮೂಲಕ ಬಿಎಡ್ ಮಾಡುತ್ತಿದ್ದ ಕಾಲದಲ್ಲಿ ನಡೆದ ಒಂದು ಘಟನೆಯನ್ನು ಹೇಳುವೆ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ನಮ್ಮ ಇಗ್ನೂ ಸೆಂಟರ್ ಇದ್ದದ್ದು. ಕಾಂಟ್ಯಾಕ್ಟ್ ಪ್ರೋಗ್ರಾಮಿಗಾಗಿ ಅಲ್ಲಿ ಉಳಿಯಬೇಕಾಗಿ ಬಂದಿತ್ತು. ಅಲ್ಲಿ ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಪ್ರತ್ಯೇಕ ಡಾರ್ಮೆಟ್ರಿಗಳಿದ್ದವು, ಒಂದರ ಎದುರು ಇನ್ನೊಂದು. ಒಂದು ದಿನ ಸ್ನಾನಕ್ಕೆ ಹೋದಾಗ ನಾನು ಯಾವ ಪರಿವೆಯಿಲ್ಲದೆ “ಏನೆ ಕೇಳು ಕೊಡುವೆ ನಿನಗೆ ನಾನೀಗ…” ಎನ್ನುವ ಗೀತ ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಾ ಮಜವಾಗಿ ಸ್ನಾನ ಮಾಡಿ ಬಂದಿದ್ದೆ. ಅವತ್ತು ಮಧ್ಯಾಹ್ನ ಯಾರೋ ಪಕ್ಕದ ಪುರುಷರ ರೂಮಿನವರೊಬ್ಬರು ಗೆಳತಿಯರಲ್ಲಿ “ಯಾರದು ಆ ಹಾಡನ್ನು ಹಾಡುತ್ತಿದ್ದವರು? ಏ ಚನ್ನಾಗಿ ಹಾಡುತ್ತಿದ್ದರು…” ಎಂದು ಒಂಥರಾ ನಗಾಡುತ್ತಾ ಕೇಳಿದರಂತೆ. ನನಗೆ ಹೀಗಾಗಬಹುದೆಂಬುದರ ಅರಿವೇ ಇರಲಿಲ್ಲ. ಜೀವ ಬಾಯಿಗೆ ಬಂದಂತಾಗಿತ್ತು. “ದಯವಿಟ್ಟು ಅದು ನಾನು ಎಂದು ತೋರಿಸಬೇಡಿ ಕಣ್ರೇ ಅವರಿಗೆ… ಪ್ಲೀಸ್..” ಎಂದು ಗೋಗರೆದಿದ್ದೆ. ಈಗಲೂ ಆ ಘಟನೆಯನ್ನು ನೆನೆದಾಗಲೆಲ್ಲಾ ನಗು ಬರುತ್ತದೆ…
ಇಂತಹ ಅದೆಷ್ಟೋ ಬೆಚ್ಚನೆ ನೆನಪುಗಳನ್ನು ಕೊಟ್ಟ ಆ ಹಳೆಯ ಹಾಡುಗಳಿಗೆ ಶರಣು ಶರಣಾರ್ತಿ…
*************************************
ಆಶಾ ಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.