ಕನಸುಗಳು ಖಾಸಗಿ

ಪುಸ್ತಕ ಪರಿಚಯ

ಕನಸುಗಳು ಖಾಸಗಿ

ಕತ್ತಲದಾರಿಯ ಸಂದಿಗೊಂದಿಗಳಲ್ಲಿ ಕರೆದೊಯ್ಯುವ  ‘ಕನಸುಗಳು ಖಾಸಗಿ’

         ಆಧುನಿಕ ಜಗತ್ತಿನ ಕರಾಳ ಮುಖಗಳನ್ನು ‘ಕನಸುಗಳು ಖಾಸಗಿ’ ಎಂಬ ತಮ್ಮ ಒಂಬತ್ತು ಕಥೆಗಳ ಸಂಕಲನದ ಮೂಲಕ   ನರೇಂದ್ರ ಪೈಯವರು  ಕಾಣಿಸಿಕೊಟ್ಟಿದ್ದಾರೆ.. ಇಲ್ಲಿರುವುದು ಕನಸುಗಳು ಅನ್ನುವುದಕ್ಕಿಂತ   ಕಥೆಗಳನ್ನು ಓದುತ್ತಿರುವಾಗ ಕಣ್ಣ ಮುಂದೆ ರುದ್ರ ನರ್ತನ ಮಾಡುವ ದುಸ್ವಪ್ನಗಳು ಅನ್ನುವುದು ಹೆಚ್ಚು ಸೂಕ್ತ .  ವೇಗದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳು ತ್ತಿರುವ ಇಂದಿನ ಜಗತ್ತಿನಲ್ಲಿ  ಸಂಬಂಧಗಳು  ಛಿದ್ರಗೊಂಡಿವೆ, ಸ್ವಾರ್ಥ ಮೇರೆ ಮೀರಿದೆ, ಹಿಂಸೆ ಹದ್ದು ಮೀರಿದೆ, ಮೌಲ್ಯಗಳು ಪಾತಾಳಕ್ಕೆ ಕುಸಿದಿವೆ. ಹಣ ಸಂಪಾದನೆ ಮತ್ತು ಭೌತಿಕ ಸುಖಾಪೇಕ್ಷೆಗಳಷ್ಟೇ ಜೀವನದ ಗುರಿಯಾಗಿ ಜನರು ಕತ್ತಲದಾರಿಗಳ ಸಂದಿಗೊಂದಿಗಳಲ್ಲಿ  ಕುರುಡರಂತೆ ನಡೆಯುತ್ತಿರುವ ಒಂದು ಸಂವೇದನಾಶೂನ್ಯ ಜಗತ್ತನ್ನು ನಮ್ಮ ಮುಂದಿಡುವ ಈ ಕಥಾಸಂಕಲನವು ಸದ್ದಿಲ್ಲದೆ   ಒಂದು ಹಾರರ್ ಚಿತ್ರವನ್ನು ನೋಡಿದ ಅನುಭವ ಕೊಡುತ್ತದೆ..

  ಖಾಸಗಿ ಕನಸುಗಳು ಯಾವುದೋ ಕ್ಷಣದಲ್ಲಿ ನಿಯಂತ್ರಣ ತಪ್ಪಿ ಸಾರ್ವಜನಿಕವಾದಾಗ ಆಗುವ ಅನಾಹುತಗಳ ಚಿತ್ರಣವು   ‘ಕನಸುಗಳು  ಖಾಸಗಿ ‘ ಎಂಬ  ಮೊದಲ ಕಥೆಯಲ್ಲಿದೆ. ಹಳೆಯ ಕಾಲೇಜು ಸಹಪಾಠಿ ಕಳುಹಿಸಿದ ಇ- ಮೆಯಿಲ್ ನಲ್ಲಿ ಹಂಚಿಕೊಂಡ ನೆನಪಿನ ಮೆಲುಕುಗಳಲ್ಲಿ ಬಂದ ಚೆಲುವೆ ರಜನಿ..ಅಂದಿನ ಹುಡುಗಾಟದ ದಿನಗಳಲ್ಲಿ ಅವಳನ್ನು ಪ್ರೀತಿಸಿದ ಸಂದರ್ಭವು ಮರುಕಳಿಸುವಂತೆ ಮಾಡಿದ ಹುಕಿಯಲ್ಲಿ ಸುರೇಶ ಆ ಮೆಯಿಲ್ ನ್ನು ಯಾರು ಯಾರಿಗೋ ಫಾರ್ವರ್ಡ್ ಮಾಡುತ್ತ ಹೋಗುವಾಗ ಅದರ ಪರಿಣಾಮದ ಕಲ್ಪನೆ ಅವನಿಗಿರುವುದಿಲ್ಲ. ರಜನಿಯಲ್ಲಿ ಪ್ರೀತಿ ಹುಟ್ಟುವಂತೆ ಮಾಡಿ ತನ್ನ ಕನಸುಗಳನ್ನು ತನ್ನೊಳಗೇ ಇಟ್ಟುಕೊಂಡು ಕನಸು ಕಂಡ ಗಂಗು ಒಂದೆಡೆಯಾದರೆ ಅವನ ಪ್ರೀತಿಯ ಗುಂಗಿನಲ್ಲಿ ಗಂಡನನ್ನು ಪ್ರೀತಿಸುವಲ್ಲಿ ವಿಫಲಳಾದ ರಜನಿ ಇನ್ನೊಂದೆಡೆ. ಮೆಯಿಲ್ ಓದಿದ ಗಂಡ ಅವಳ ಕೊಲೆ ಮಾಡುವುದಂತೂ ಭೀಕರ ದುರಂತ. ಈ ಕ್ರೂರ ಕೃತ್ಯಕ್ಕೆ ಕಾರಣ ಗುಂಗನೇ, ಸುರೇಶನೇ  ಗಂಡನೇ ಅಥವಾ ಕೇವಲ ಬೆರಳೊತ್ತುವ ಮೂಲಕ ಖಾಸಗಿ ವಿಚಾರಗಳನ್ನು ಜಗಜ್ಜಾಹೀರು ಮಾಡುವಂಥ ಯಂತ್ರಯುಗವು ಕರುಣಿಸಿದ ಈ ಮೆಯಿಲ್ ಎಂಬ ಮಾಯಾಜಾಲವೇ? ಕಥೆಯು ಪ್ರಶ್ನೆಯನ್ನು ಹಾಗೆಯೇ ಉಳಿಸುತ್ತದೆ.

     ಪ್ರಾಮಾಣಿಕವಾಗಿ ದುಡಿದು ಕಷ್ಟಪಟ್ಟು ಒದ್ದಾಡಿ ತನ್ನ ಮಗಳು ರುಕ್ಕುವನ್ನು ಒಂದು ಒಳ್ಳೆಯ ಸ್ಥಿತಿಗೆ ತಂದ ಅಪ್ಪಿಯಮ್ಮ (    ಕಥೆ : ರುಕ್ಕಮಣಿ) ಮಗಳು ಪಥಭ್ರಷ್ಟಳಾಗಿ ನಡೆದು ಬದುಕು ಒಡ್ಡಿದ ಚಕ್ರವ್ಯೂಹದಲ್ಲಿ ಸಿಲುಕಿ ದಿಕ್ಕುಗಾಣದೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಯಾರು? ಹಿರಿಯರ ಮಾತುಗಳಿಗೆ ಕಿಲುಬು ಕಾಸಿನ ಬೆಲೆಯನ್ನೂ ಕೊಡದೆ ತಾವು ಕಂಡ ದಾರಿಯಲ್ಲಿ ನಡೆದು ಅನಾಹುತಗಳಿಗೆ ಆಹ್ವಾನ ನೀಡುವ ಹಾದಿ ತಪ್ಪಿದ ಯುವ ಜನಾಂಗವೆ? ಅಥವಾ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರೆ? ಅಥವಾ ವಿಜ್ಞಾನದ ಮುನ್ನಡೆಯಿಂದಾಗಿ ಸುಲಭ ಲಭ್ಯವಾಗಿರುವ ಸುಖ ಸಾಧನೆಗಳೆ?

     ‘ಕೆಂಪು ಹಾಲು ‘ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸುವ ಕಥೆ. ಲೋಕದ ರೀತಿ ನೀತಿಗಳು ಅರ್ಥವಾಗದ ಪುಟ್ಟ ಹುಡುಗನ ದೃಷ್ಟಿಯಿಂದ ಈ ಕಥೆ ನಿರೂಪಿತವಾಗುತ್ತದೆ. ಹುಡುಗನಿಗೆ ‘ ‘ಪಾಪದವನಂತೆ ‘ ಕಾಣಿಸುವ ಉನ್ನಿಕೃಷ್ಣನ ಭೂತ ಬಂಗಲೆಗೆ ದಿನಾ ಹಾಲು ತರಲು ಹೋಗುವ ಪುಟ್ಟ ಹುಡುಗನ ಅನುಭವಗಳು ಇಲ್ಲಿವೆ. ಪಕ್ಕದಲ್ಲೇ ಇರುವ ಪಾಳು ಬಿದ್ದ ಶಾಲೆಯಲ್ಲಿ ಉನ್ನಿಕೃಷ್ಣ ಮತ್ತು ಸದಾ ಬೀಡಿ ಸೇದುವ ಚೀಂಕ್ರ ಏನು ಮಾಡುತ್ತಾರೆಂದು ಅವನಿಗೆ ಅರ್ಥವಾಗುವುದಿಲ್ಲ.  ಒಂದೆಡೆ       ಅವನು ಉನ್ನಿಕೃಷ್ಣನ ಮಗಳು ಮುನ್ನಿಯೊಂದಿಗೆ ಸೇರಿ   ಅಮ್ಮನ ಹಾಲು ಕುಡಿದು ಸೊಕ್ಕಿನಿಂದ ಕುಣಿದಾಡುವ ಬೆಕ್ಕಿನ ಮರಿಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಚಿತ್ರಣವಿದ್ದರೆ ಇನ್ನೊಂದೆಡೆ  ಅವನ ಕುಡುಕ ತಂದೆ ಮಾಡುವ ಅವಾಂತರಗಳಿಂದ ಆಗುವ ಅಪಮಾನದಿಂದ ಅವನು ಕುದಿಯುವ‌ ಚಿತ್ರಣವಿದೆ. ಮುಂದೆ ಉನ್ನಿಕೃಷ್ಣ ಮತ್ತು ಚೀಂಕ್ರರನ್ನು ಪೋಲೀಸರು ಅರೆಸ್ಟ್ ಮಾಡಿ ಕೊಂಡೊಯ್ಯುವ ಚಿತ್ರಣವಿದೆ.      ಕೆಲವು ದಿನಗಳ ನಂತರ ಚೀಂಕ್ರನ ಮಗ ಕೈಯಲ್ಲಿ ಕೋವಿಯೊಂದಿಗೆ ಪೋಲೀಸರ ಕೈಗೆ ಸಿಕ್ಕು ಅವರಿಂದ ಕೊಲ್ಲಲ್ಪಡುತ್ತಾನೆ. ಹೀಗೆ ಅಮಾಯಕರಂತೆ ಪೋಸು ಕೊಡುವವರು ಕಾನೂನು ಬಾಹಿರ ಸಮಾಜ ಘಾತಕ  ಹಿಂಸಾ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದರಿಂದ   ದೆವ್ವದ ಕಥೆಗಳಲ್ಲಗುವಂತೆ ಹಾಲು ಕೆಂಪಾಗಿದೆ.

ದುಗ್ಗಪ್ಪನೆಂಬ ಬಡ ವೃದ್ಧನ ಕರುಣಕಥೆಯನ್ನು ನಿರೂಪಿಸುವ ಕಥೆ ‘ರಿಕವರಿ’. ಕೋಮಲ ಹೃದಯದ ದುಗ್ಗಪ್ಪ ತನ್ನ ನಿವೃತ್ತಿಯ ದಿನ ಸಿಕ್ಕಿದ ನಾಲ್ಕು ಸಾವಿರ ರೂಪಾಯಿಯಲ್ಲಿ  ಅರ್ಧದಷ್ಟನ್ನು ಅಸಹಾಯಕ ಸ್ಥಿತಿಯಲ್ಲಿದ್ದ ತನ್ನ ಕಿರಿಯ ಸಹೋದ್ಯೋಗಿಗೆ ಕೊಟ್ಟವನು. ಬಾಡಿಗೆ ಮನೆಯ ಮಾಲೀಕ ದುರಾಸೆಯಿಂದ ತನಗೆ ಹೆಚ್ಚು ಬಾಡಿಗೆ ಸಿಗುವ ಅವಕಾಶ ಬಂದಾಗ ಬಡ ದುಗ್ಗಪ್ಪನ ಕುಟುಂಬವನ್ನು ಅಲ್ಲಿಂದ ಎಬ್ಬಿಸುತ್ತಾನೆ.  ದುಗ್ಗಪ್ಪ ಹಿಂದೆ ಕೊಟ್ಟಿದ್ದ ಮುಂಗಡ ಹಣ ಮೂವತ್ತು ಸಾವಿರವನ್ನು ಹಿಂಪಡೆಯಲು  ಪಡುವ ಕಷ್ಟ, ಮನೆಯಲ್ಲಿ ಹೆಂಡತಿ ಮತ್ತು ಸೊಸೆ ಆ ಹಣಕ್ಕಾಗಿ ಬಾಯಿ ಬಿಡುವುದು- ಎಲ್ಲವೂ ಓದುಗನಿಗೆ ಕ್ರೂರವಾಗಿ ಕಾಣುತ್ತದೆ.

      ತನ್ನ ಅಕ್ಕನ ಋಣದಲ್ಲಿರುವ ತಮ್ಮ,  ತಾನು ಸಂಸಾರಸ್ಥನಾದ ನಂತರ ಅಕ್ಕ ಮಾಡುತ್ತಿದ್ದ ಅಡ್ಡದಾರಿಯ ಕೆಲಸಗಳನ್ನು ಬೆಂಬಲಿಸಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾಗ ಹೆಂಡತಿಯ ಬೇಡಿಕೆಗಳನ್ನು ಪೂರೈಸಲಾರದೆ ತೊಳಲಾಡುತ್ತಾನೆ.ಡ್ರಗ್ಸ್ ಜಾಲದೊಳಗೆ ಸಿಕ್ಕಿಬಿದ್ದಿರುವ ಸುನಂದಕ್ಕ ತನ್ನ ಮೇಲೆ ಹಲ್ಲೆಯಾಗಿದೆ ಎಂದು  ಸುಳ್ಳು    ದೂರು ಕೊಟ್ಟಾಗ ಕೋರ್ಟಿಗೆ ಹೋಗುವ ಕೇಸಿಗೆ ಸಾಕ್ಷಿ ನೀಡಲು ತಮ್ಮ ಹೋಗಬೇಕಾಗುತ್ತದೆ. ಆದರೆ ಕೋರ್ಟಿನಲ್ಲಿ ಹಿಯರಿಂಗ್ ಗಾಗಿ ಕಾಯುತ್ತಿದ್ದಾಗ ಅಕ್ಕ ನಾಟಕ ಮಾಡುತ್ತಿರುವುದು ಗೊತ್ತಾಗಿ ಸಹಿಸಲಾರದೆ ಆತ ಪ್ರತಿಕೂಲವಾದ ಸಾಕ್ಷಿ ಹೇಳಿ ಬರುತ್ತಾನೆ.(ಕಥೆ : ಸಾಕ್ಷಿ).

  ‘ ಹಿಂಸಾರೂಪೇಣ ‘ ಅನ್ನುವ      ಕಥೆ    ಸೃಷ್ಟಿಸುವ ವಾತಾವರಣ ಮನಸ್ಸಿಗೆ ಅಸಹನೀಯ ಹಿಂಸೆಯನ್ನುಂಟು ಮಾಡುತ್ತದೆ. ತಾನು  ವಾಸವಾಗಿದ್ದ ಅಪಾರ್ಟ್ ಮೆಂಟಿನ ಹೊರಗೆ ಅತಿ ಸಮೀಪವೇ ಇದ್ದ ದೇವಸ್ಥಾನದ ಧಾರ್ಮಿಕ ಆವರಣದೊಳಗೆ ನಡೆದ ಕುಡುಕನ ಕೊಲೆಯ ಬರ್ಬರ ಕೃತ್ಯದ  ಬಗ್ಗೆ ತಿಳಿದು, ಶವವನ್ನು ನೋಡಿದ ನಂತರ ಕಥಾನಾಯಕನಿಗೆ  ರಾತ್ರಿ ಯಾರೋ ಕಿವಿಯಲ್ಲಿ ಒಂದೇ ಸಮನೆ ಪಿಸುಗುಟ್ಟಿದಂತಾಗುತ್ತದೆ. ಹಲವು ದಿನಗಳಿಂದ ಹೀಗೇ ಪಿಸುಗುಟ್ಟಿದ ಅನುಭವ. ಹೊರಗೆ ನಿತ್ಯ ಗಲಾಟೆ. ತಾನಿರುವ ರೂಮಿನ ಗೊಡೆಯಾಚೆ ಈ ಕೊಲೆ ಸಂಭವಿಸಿತೇ ಎಂಬುದನ್ನೆಣಿಸುವಾಗ ಅವನು ಭಯದಿಂದ ಕಂಪಿಸುತ್ತಾನೆ. ಒಂದೆಡೆ    ದೇವಸ್ಥಾನದ ಪವಿತ್ರ ವಾತಾವರಣ, ಯೋಗ,  ಭಜನೆ,  ಶಾಂತಿಮಂತ್ರ  ಧ್ಯಾನಗಳು ಸೃಷ್ಟಿಸುವ ವಾಯಾವರಣವಾದರೆ ಇನ್ನೊಂದೆಡೆ ಕೊಲೆ, ಹಿಂಸೆ, ಡ್ರಗ್ಸ್ ವ್ಯವಹಾರ, ಸಾಲ ವಸೂಲಿ, ಫೈಟಿಂಗನ್ನೇ ವೃತ್ತಿಯಾಗಿ ಮಾಡಿಕೊಂಡವರ ಗುಂಪು, ಬ್ಯಾಂಕಿನಲ್ಲಿನ ಬಡ್ಡಿ ವ್ಯವಹಾರ– ಹೀಗೆ ನೂರಾರು ಗೊಂದಲಗಳು ಅವನೊಳಗೆ ತುಂಬಿ  ಅಪರಿಚಿತ ಧ್ವನಿಗಳು ಪಿಸುಗುಟ್ಟುತ್ತವೆ.

      ನೋಟುಬ್ಯಾನ್ ಘೋಷಣೆಯಾದ ಸಮಯದಲ್ಲಿ ಕಥಾನಾಯಕನ ಅಜ್ಜಮ್ಮ ಜತನದಿಂದ ಸೇರಿಸಿಟ್ಟಿದ್ದ ದುಡ್ಡಿನ ಗಂಟಿನೊಳಗಣ ಐನೂರರ ನೋಟುಗಳ ಬಗ್ಗೆ ಕಾಳಜಿ ತೋರಿಸುವ ನೆಪದಲ್ಲಿ ಅದರ ಮೇಲೆ ಕಣ್ಣಿಟ್ಟವರು ಹಲವಾರು ಮಂದಿ. ಪಾಪ, ಆಕೆಗೆ ಅದರ ಲೆಕ್ಕ ತಿಳಿಯದು.  ನಿರೂಪಕ ಮೊದಲು ನೋಡಿದಾಗ ಅದರಲ್ಲಿ ೩೬ ಸಾವಿರ ರೂಪಾಯಿ ಇರುತ್ತದೆ.   ಅದೇ ಸಮಯ ಮನೆಯಲ್ಲಿ ಟಿ.ವಿ.ರಿಪೇರಿಗೆ ೬೦೦೦ ರೂಪಾಯಿ ಕೊಡಬೇಕಾಗಿದೆ.‌ ಟಿ.ವಿ.ನೋಡುವವರು ಮುಖ್ಯವಾಗಿ ಅಜ್ಜಮ್ಮ.  ಆದ್ದರಿಂದ ಆ ದುಡ್ಡನ್ನು ಟಿ.ವಿ.ಗಾಗಿ ಖರ್ಚು ಮಾಡುವುದೆಂದು ನಿರ್ಧರಿಸಿದ   ನಿರೂಪಕ ಅಜ್ಜಮ್ಮನ ಗಂಟಿನಲ್ಲಿದ್ದುದನ್ನು  ಕೊನೆಗೆ ಎಣಿಸಿ ನೋಡಿದರೆ ಅಲ್ಲಿ ಇದ್ದದ್ದೂ ಅಷ್ಟೇ ಹಣ. ಉಳಿದ ಹಣ ಎಲ್ಲಿ  ಹೋಯಿತು, ಅಜ್ಜಮ್ಮನನ್ನು ಕಾಣಲು ಬಂದವರು ತೆಗೆದಿರಬಹುದೇ ಎಂದು ಆತ ಅನುಮಾನಿಸುತ್ತಾನೆ.‌ ಆ ಮೊತ್ತವು ತನ್ನ ಹೆಂಡತಿಯ ಕೈಸೇರಿದ ಬಗ್ಗೆ ಅವನಿಗೆ ಗೊತ್ತಾಗುವುದು ಕೊನೆಗೆ. ಮಾನವೀಯ ಸಂಬಂಧಗಳಿಗಿಂತ ಹಣದ ಮಹತ್ವ ಹೆಚ್ಚಾಗಿ ಮೌಲ್ಯಗಳು ಕುಸಿದ ಚಿತ್ರಣ ಈ ಕಥೆಯಲ್ಲಿದೆ.

  ‘ಭೇಟಿ’ ಇತರೆಲ್ಲ ಕಥೆಗಳಿಗಿಂತ ಭಿನ್ನವಾಗಿದೆ. ನಿಸರ್ಗದ ಗರ್ಭದಲ್ಲಿ ಅಡಗಿರುವ ನಿಗೂಢ ರಹಸ್ಯಗಳತ್ತ ಇದು ಬೊಟ್ಟು ಮಾಡಿ ತೋರಿಸುತ್ತದೆ. ಕಥಾನಾಯಕ ತನ್ನ ಅಮ್ಮ, ಅಕ್ಕ, ಮತ್ತು ಮಗಳನ್ನು ಯಾವುದೋ ಆಕಸ್ಮಿಕದಲ್ಲಿ ಕಳೆದುಕೊಂಡಿದ್ದಾನೆ. ಅವರ ಅಪರಕ್ರಿಯೆಗಳನ್ನು ಮಾಡಲು ಅವನ ದೊಡ್ಡಪ್ಪ ಕಾಡು ಪ್ರದೇಶದಲ್ಲಿ ಗದ್ದೆಯ ಮಧ್ಯೆ‌ಎತ್ತರದಲ್ಲಿದ್ದ ಗುಡಿಯೊಂದಕ್ಕೆ ಕಳುಹಿಸುತ್ತಾನೆ. ಭಟ್ಟರೊಂದಿಗೆ ಅಲ್ಲಿಗೆ ಹೋಗಿ ಎಲ್ಲ ಕ್ರಿಯೆಗಳನ್ನು ಮುಗಿಸಿ ಹೊರಗೆ ಬಂದ ನಂತರ ಸಂಪ್ರದಾಯದಂತೆ ‘ಯಾರಾದರೂ ಕರೆದಂತೆ ಅನ್ನಿಸಿದರೆ ತಿರುಗಿ ನೋಡಬೇಡ ಅಂದಿದ್ದರಿಂದ ಅವನಿಗೆ ಯಾರೋ ಹಿಂದಿನಿಂದ ಪಿಸುಗುಟ್ಟಿ ಕರೆದಂತೆ ಅನ್ನಿಸಿದರೂ, ಮುಂದಿನ ಜೀವನವನ್ನೆಣಿಸಿ ತಿರುಗಿ ನೋಡದೆ ಮನೆಗೆ ಬರುತ್ತಾನೆ.‌ಅವನ ಜತೆಗೆ ಬಂದ ಅಕ್ಕ ಆ ಬಗ್ಗೆ ಬೇಸರ ವ್ಯಕ್ತಪಡಿಸಿದಾಗ ಅವನನ್ನು ಅಪರಾಧ ಪ್ರಜ್ಞೆ ಕಾಡುತ್ತದೆ. ಅವನ ಕಿವಿಗೆ ಕೇಳಿಸಿದ್ದು ಭ್ರಮೆಯೋ ನಿಜವೋ ಎಂಬುದರ ಬಗೆಗಿನ ಜಿಜ್ಞಾಸೆಯನ್ನು ಕಥೆಗಾರರು ಓದುಗರಿಗೆ ಬಿಡುತ್ತಾರೆ. ಆರ್.ಕೆ.ನಾರಾಯಣ್ ಅವರ ಕೆಲವು ಕಥೆಗಳಿಗೆ ಈ ಗುಣವಿದೆ.

    ‘ಕಥನ ಕುತೂಹಲ’ ವಸ್ತುವಿನ ದೃಷ್ಟಿಯಿಂದ ಹೊಸತಲ್ಲದಿದ್ದರೂ ತಂತ್ರ, ರಚನೆ, ವಿನ್ಯಾಸಗಳು ವಿಶಿಷ್ಟವಾಗಿವೆ. ವ್ಯೂಹದೊಳಗೆ ವ್ಯೂಹಗಳು ಸುತ್ತಿಕೊಂಡಿರುವ ಒಂದು ಚಕ್ರವ್ಯೂಹವೇ ಇಲ್ಲಿದೆ. ತಮ್ಮ ಸತ್ತ ನಂತರ ತಮ್ಮನ ಆಸ್ತಿಯನ್ನು ದೋಚಿಕೊಂಡ ಧರ್ಮಪ್ಪ ತಮ್ಮನ ಮಗಳು ಸತ್ಯಭಾಮಾಳನ್ನು ಗೌತಮ್ ರಾಜ್ ಎಂಬ ‘ ಏನೂ ಗೊತ್ತಿಲ್ಲ’ದವನಿಗೆ ಮೂರು ಲಕ್ಷ ವರದಕ್ಷಿಣೆಯ ‘ವಾಗ್ದಾನ’ ನೀಡಿ ಕಟ್ಟಿದರೆ ತನ್ನ ಮಗನಿಗೆ ಬಂದ ವರದಕ್ಷಿಣೆಯಲ್ಲಿ ಕೊನೆಯ ಮಗಳ ಮದುವೆ ಮಾಡುವ ಹವಣಿಕೆ ಗೌತಮನ ತಾಯಿಯದ್ದು. ಗಂಡ ತನ್ನ ಬಗ್ಗೆ ಆಸಕ್ತಿ ತೋರಿಸಲಿಲ್ಲವೆಂದು ಅವನನ್ನು ಬಿಟ್ಟು ಬಂದು ಬೇರೊಬ್ಬನೊಂದಿಗೆ ತಿರುಗಾಡುವ ಗೌತಮನ ಅಕ್ಕ ಊರ್ವಶಿ  ಇದ್ದಾಳೆ.‌ಬೊಂಬಾಯಿಯಲ್ಲಿ ‘ವ್ಯವಹಾರ’ನಡೆಸುತ್ತಿರುವ ಅವಳ ಅಕ್ಕನ ಬಳಿಗೆ ಕಳುಹಿಸಲೆಂದು ಅಣ್ಣ ದೇವಣ್ಣನಿಗೆ ಪತ್ರ ಬರೆದು ತಮ್ಮನ ಪತ್ನಿ ಚೆಲುವೆ ಸತ್ಯಭಾಮಾಳನ್ನು ಉಪಾಯ ಮಾಡಿ ಕರೆದೊಯ್ಯಲು ಅವಳೇ ಯೋಜನೆ ಹಾಕುತ್ತಾಳೆ. ಅದಕ್ಕಾಗಿ ತಮ್ಮನ ಹೆಸರಿನಲ್ಲಿ ‘ಹೆಂಡತಿ ಕಾಣೆಯಾಗಿದ್ದಾಳೆಂಬ ಕಂಪ್ಲೈಂಟೂ ಹೋಗುತ್ತದೆ. ಇತ್ತ ಧರ್ಮಪ್ಪನೂ ವರದಕ್ಷಿಣೆ ಕೇಸ್ ಎಂದು ಗೌತಮನ ತಾಯಿಯ ಕಡೆಯಿಂದ ದುಡ್ಡು ವಸೂಲಿ ಮಾಡುವ ಯೋಜನೆಯ ಮಧ್ಯೆ ಗೌತಮನ ಕೊಲೆ ಮಾಡಿಸುತ್ತಾನೆ. ಅಬ್ಬಾ!!ಈ ಸುಳಿಯಲ್ಲಿ ಸಿಕ್ಕು ಸತ್ಯಭಾಮಾ ಎಷ್ಟು ನರಳಬೇಕೋ ಗೊತ್ತಿಲ್ಲ..

     ನರೇಂದ್ರ ಅವರ ಕಥೆಗಳ ವಸ್ತುಗಳಿಗಿಂತಲೂ ಅವರ ಕಥನ ಶೈಲಿ ಇಲ್ಲಿ ಮುಖ್ಯವಾದದ್ದು. ‘ಕಥೆಗಳಲ್ಲಿ ಹೇಳುವುದಕ್ಕಿಂತಲೂ ಕಾಣಿಸುವುದು ಮುಖ್ಯ’ ಎಂದು ಅವರ ಮೊದಲ ಕಥೆಗಳ ಸಂದರ್ಭದಲ್ಲಿ   ಉಪದೇಶ ನೀಡಿದ್ದ ಕಥೆಗಾರ ವಿವೇಕ ಶಾನುಭಾಗರನ್ನು ಅವರು ತಮ್ಮ ದೀರ್ಘ ಮುನ್ನುಡಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಅದನ್ನನುಸರಿಸಿಯೇ ಇರಬೇಕು ಇಲ್ಲಿ ಅವರ ಕಥೆಗಳ ಚಿತ್ರಕಶಕ್ತಿಯು ಅದ್ಭುತ ಆಳವನ್ನು ಮೈಗೂಡಿಸಿಕೊಂಡಿದೆ. ಆದ್ದರಿಂದಲೇ ಎಲ್ಲ ಕಥೆಗಳೂ ಒಂದು ರೀತಿಯಲ್ಲಿ   ಕಾಫ್ಕಾನ ಕಥೆಗಳಂತೆ    ಮಬ್ಬುಗತ್ತಲಿನ ವಾತಾವರಣವನ್ನು ಸೃಷ್ಟಿಸಿ ಕಥೆಗಾರರು ಹೇಳಬಯಸುವ ಆಧುನಿಕ ಜಗತ್ತಿನ ಒಂದು ನಿರಾಶಾದಾಯಕ  ಚಿತ್ರಣವನ್ನು ನೀಡುವಲ್ಲಿ ಯಶಸ್ವಿಯಾಗುತ್ತವೆ. ಕೆಲವು ಕಥೆಗಳಲ್ಲಿ ಒಂದೇ ಓದಿಗೆ ಅರ್ಥವಾಗದ ಅಸ್ಪಷ್ಟತೆ ಇದೆ. ಇದಕ್ಕೆ ಕಾರಣ ಸಾಲುಗಳ ನಡುವೆ ಅರ್ಥವನ್ನು ಅಡಗಿಸಿಡುವ ಕಾವ್ಯಾತ್ಮಕ ಗುಣ.  ಓದಿ ಅರ್ಥವಾದ ನಂತರ ಬಹಳಷ್ಟು ಕಾಡುವ ಕಥೆಗಳಿವು. ಕನ್ನಡ ಕಥಾಜಗತ್ತಿನಲ್ಲಿ ತಮ್ಮದೇ ಆದ ದೃಢ ಹೆಜ್ಜೆಗಳನ್ನೂರುವ ಕಥೆಗಾರರ ಲಕ್ಷಣವಿದು.

    ಖಾಸಗಿ ಕನಸುಗಳನ್ನು ಸಾರ್ವತ್ರಿಕವಾಗಿಸಿದಂತೆಯೇ ಮಂ  ಗಳೂರು ಕನ್ನಡ, ಕುಂದಾಪುರ ಕನ್ನಡಗಳಂತಹ ಪ್ರಾದೇಶಿಕ ಭಾಷೆಗಳ ಸವಿಯನ್ನು ಎಲ್ಲರಿಗೂ ಉಣಬಡಿಸುವ ಪ್ರಯತ್ನವನ್ನು ನರೇಂದ್ರ ಪೈಯವರು ಇಲ್ಲಿ ಮಾಡಿದ್ದಾರೆ. ಜತೆಗೆ ಅಲ್ಲಲ್ಲಿ ಬರುವ ತಿಳಿಹಾಸ್ಯದ ತುಣುಕುಗಳು ಮತ್ತು ಬಾಲ್ಯದ ನೆನಪುಗಳು ಕಥೆಗಳನ್ನು ಆಪ್ತವಾಗಿಸುತ್ತವೆ.

**********************************************************

ಪಾರ್ವತಿ ಜಿ.ಐತಾಳ್.

One thought on “ಕನಸುಗಳು ಖಾಸಗಿ

  1. ಖ್ಯಾತ ಲೇಖಕ ಶ್ರೀ ನರೇಂದ್ರ ಪೈ ಅವರ ‘ಕನಸುಗಳು ಖಾಸಗಿ’ ಕಥಾ ಸಂಕಲನದ ಪಾರ್ವತಿ ಮೇಡಂ ಅವರು ಬರೆದ ವಿಮರ್ಶಾ ಲೇಖನ ಮಾರ್ಮಿಕವಾಗಿ ಮೂಡಿಬಂದಿದೆ. ಸಂಕಲನದ ಪುಸ್ತಕವನ್ನು ಓದಬೇಕಂಬ ಹಂಬಲ ಮೂಡಿಸುತ್ತದೆ.

Leave a Reply

Back To Top