ಕಾದಂಬರಿ ಕುರಿತು
ಚೋಮನದುಡಿ.
ಡಾ.ಶಿವರಾಮ ಕಾರಂತ
ಭಾರತೀಯ ಸಾರಸ್ವತ ಲೋಕದಲ್ಲಿ ದಲಿತರು , ಅದರಲ್ಲಿಯೂ ಅಸ್ಪೃಶ್ಯರು ಎದುರಿಸುತಿದ್ದ ಸಾಮಾಜಿಕ ಅನ್ಯಾಯಗಳ ವಿರುದ್ಧ ಶಾಂತವಾಗಿಯೇ ಪ್ರಥಮ ಬಾರಿಗೆ ದನಿಯೆತ್ತಿದ ಸಾಮಾಜಿಕ ಕಾದಂಬರಿ ಹಾಗೂ ಮೊದಲ ದಲಿತ ಕಾದಂಬರಿ ಎಂದು ಗುರುತಿಸಲ್ಪಡುವ ಶಿವರಾಮ ಕಾರಂತರ “ಚೋಮನ ದುಡಿ” ನನ್ನ ನೆಚ್ಚಿನ ಕಾದಂಬರಿ. ಸ್ವಾತಂತ್ರ್ಯದ ತರುವಾಯ ಪ್ರಜಾಪ್ರಭುತ್ತದ ಕೋಟೆಯಲ್ಲಿ ಹಲವಾರು ಸಂವೇದನಶೀಲ ಬರಹಗಾರರು ದಲಿತ ಲೋಕದ ಒಳಹರಿವು ಕುರಿತು ಅನನ್ಯವು, ಅನುಪಮವೂ ಆದ ಕೃತಿಗಳು ಬಂದಿವೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ, ಆಂಗ್ಲರ ದಬ್ಬಾಳಿಕೆಯ ನಡುವೆ ಹಾಗೂ ಜಿಡ್ಡುಗಟ್ಟಿದ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ 1933 ರಲ್ಲಿ ಪ್ರಕಟವಾದ ಈ ಕಾದಂಬರಿ ತುಂಬಾ ವಿಶೇಷ ಹಾಗೂ ಅಪ್ತವೆನಿಸುತ್ತದೆ.
ಚೋಮನ ಪಾತ್ರದ ಮುಖಾಂತರ ಇಡೀ ದಲಿತ ಸಂವೇದನೆಯನ್ನು ಕಾರಂತರು ಕಟ್ಟಿ ಕೊಡುವ ಕ್ರಮ ಸಹೃದಯರನ್ನು ಆಕರ್ಷಿಸುತ್ತದೆ. ಕೆಳವರ್ಗ ಹಾಗೂ ಮೇಲ್ವರ್ಗಗಳ ನಡುವಿನ ಸಾಮಾಜಿಕ ಕಂದಕವನ್ನು ಈ ಕಾದಂಬರಿಯು ಅನಾವರಣಗೊಳಿಸುವ ರೀತಿ ಅಪ್ಯಾಯಮಾನವಾಗಿದೆ. ಚೋಮನಲ್ಲಿ ಮೊಳಕೆಯೊಡೆದ ತಾನು ಬೇಸಾಯಗಾರ ಆಗಬೇಕು ಎಂಬ ಉತ್ಕಟ ಸಂಘರ್ಷದ ಸುತ್ತ ಕಾದಂಬರಿಯ ವಸ್ತು ಚಲಿಸುತ್ತಿರುತ್ತದೆ.
ಇನ್ನೂ, ಒಬ್ಬ ಓದುಗನಾಗಿ ನನಗೆ ಕಾಡಿದ ; ಕಾಡುತ್ತಿರುವ ಈ ಕಾದಂಬರಿಯ ದೃಶ್ಯವೆಂದರೆ ಅದು ಚೋಮನ ಮಗನ ನೀಲನ ಸಾವು.. ಅಲ್ಲಲ್ಲ..ಕೊಲೆ !! ನೀಲ ನೀರಿನಲ್ಲಿ ಈಜಾಡುತಿದ್ದಾಗ ಕೈ ಸೋತು ಮುಳುಗುತಿರುತ್ತಾನೆ. ಆ ಸಮಯದಲ್ಲಿ ಹಳ್ಳದ ಮೇಲಣ ದಂಡೆಯ ಮೇಲೆ ಎಷ್ಟೋ ಜನ ಮೇಲು ಜಾತಿಯವರು ಬಟ್ಟೆ ಒಗೆಯುತಿದ್ದರು, ಕೆಲವು ಹುಡುಗರು ಅದೇ ನೀರಿನಲ್ಲಿ ಆಡುತಿದ್ದರು. ಆದರೆ ಮುಳುಗುತಿದ್ದವನ ಉಸಿರು ಹೊಲೆಯನಾಗಿದ್ದರಿಂದ ಅವನ ಕೂಗು, ಆಕ್ರಂದನ ಅಲ್ಲಿರುವ ಜಾಣ ಕಿವುಡರಿಗೆ ಕೇಳಿಸದೆ ಹೋಗುತ್ತದೆ. ನಡು ಹಗಲಿನಲ್ಲಿಯೇ ನಮ್ಮ ಸಾಮಾಜಿಕ ಜಾತಿ ವ್ಯವಸ್ಥೆಯು ನೀಲನ ಉಸಿರನ್ನು ನಂದಿಸಿ ಬಿಡುತ್ತದೆ.
ಕಾದಂಬರಿಯ ಮತ್ತೊಂದು ಪ್ರಮುಖ ಪಾತ್ರ ಬೆಳ್ಳಿ. ಚೋಮನ ಮಗಳಾದ ಬೆಳ್ಳಿ ಚೋಮನಿಗೆ ತಾಯಿಯಾಗಿ, ತನ್ನ ಸಹೋದರಿಗೆ ಅಮ್ಮನಾಗಿ ಅಕ್ಕರೆಯಿಂದ ಆರೈಕೆ ಮಾಡುವ ಪರಿ ಸ್ತ್ರೀ ಸಂಕುಲದ ಅನನ್ಯತೆಯನ್ನು ಸಾರುತ್ತದೆ. ತನ್ನ ಕುಟುಂಬಕ್ಕಾಗಿ ತೋಟದ ಎಸ್ಟೇಟ್ ಗೆ ಹೋಗುವ, ವಯೋ ಸಹಜವಾದ ಕಾಮಕ್ಕೆ ಬಲಿಯಾಗವುದು ಇವೆಲ್ಲವು ಸಹೃದಯ ಓದುಗರಲ್ಲಿ ಅವಳ ಬಗೆಗೆ ಅನುಕಂಪವನ್ನು ಮೂಡಿಸುತ್ತವೆ.
ಕಾದಂಬರಿಯ ಮತ್ತೊಂದು ಮಗ್ಗುಲು ಚೋಮನ ಹೆಂಡ ಮತ್ತು ದುಡಿ. ಅವುಗಳೇ ಅವನ ನಿಜವಾದ ಜೀವನ ಸಂಗಾತಿಗಳು. ಅವನ ಸಂತೋಷವನ್ನು, ಅವನ ದುಃಖವನ್ನೂ ಸಶಕ್ತವಾಗಿ ಪ್ರತಿಬಿಂಬಿಸುವಂತವುಗಳೆಂದರೆ ಅವು ಹೆಂಡ ಮತ್ತು ದುಡಿ. ಕಾದಂಬರಿಯ ಆರಂಭದಲ್ಲಿಯ ‘ದುಡಿ’ ಯ ಸದ್ದು ಚೋಮನ ಸಂತೋಷವನ್ನು ಪ್ರತಿನಿಧಿಸಿದರೆ, ಕೊನೆಯಲ್ಲಿ ಅಪ್ಪಳಿಸುವ ನಿನಾದ ಚೋಮನ ನೋವು, ಹತಾಶೆ, ಅವಮಾನ, ಒಂಟಿತನ ಎಲ್ಲವನ್ನೂ ಮೌನವಾಗಿ ಸಾರುತ್ತ ಅವನನ್ನೇ ಬೀಳ್ಕೊಡುತ್ತವೆ..!!
ಈ ಎಲ್ಲ ಕಾರಣಗಳಿಂದಾಗಿಯೇ ಈ ಕಾದಂಬರಿ ಪ್ರಕಟವಾಗಿ ಒಂಬತ್ತು ದಶಕಗಳು ಆಗುತ್ತ ಬಂದರೂ ಇಂದಿಗೂ ಸಂವೇದನಶೀಲ ಸಹೃದಯ ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತಿದೆ.
ರತ್ನರಾಯ ಮಲ್ಲ
ಚೆನ್ನಾಗಿದೆ ವಿಮರ್ಶೆ. ಹೊಸ ತಲೆಮಾರಿಗೆ ಹಳೆಬೇರುಗಳನ್ನು ಪರಿಚಯಿಸುವ ಇಂತಹ ವಿಮರ್ಶಾಬರಹಗಳು ಬರುತ್ತಲೇ ಇರಲಿ! ಕಾರಂತಜ್ಜ ಮತ್ತೆ ನಮ್ಮ ಕನ್ನಡಿಗರನ್ನ ತಲುಪಲಿ.