ಅಂಕಣ ಬರಹ

ಹೊಸ ದನಿ ಹೊಸ ಬನಿ – ೧೦.

ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ

ಚಂ ಸು ಕವಿತೆಗಳು

ರಾಣೇಬೆನ್ನೂರು ಸಮೀಪ ಕೂನಬೇವು ಗ್ರಾಮದ ಸಾಹಿತಿ ಚಂಸು (ಚಂದ್ರಶೇಖರ ಸುಭಾಸ ಗೌಡ ಪಾಟೀಲ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ!) ಅವರ “ಬೇಸಾಯದ ಕತಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೮ನೇ ಸಾಲಿನ ಸಿಂಪಿ ಲಿಂಗಣ್ಣ ದತ್ತಿ (ಜೀವನಚರಿತ್ರೆ) ಪ್ರಶಸ್ತಿ ಪ್ರಕಟವಾದಾಗ ಅವರನ್ನು ಅಭಿನಂದಿಸಲು ಫೋನ್ ಮಾಡಿದ್ದೆ.  ಆ ಲೇಖನಗಳಲ್ಲಿ ಕೆಲವನ್ನು ಓದಿದ್ದರಿಂದಾಗಿ ಬೇಸಾಯದ ಬದುಕಿನ ಹಿಂದಣ ಕಷ್ಟ ಕಾರ್ಪಣ್ಯಗಳ ಕುರಿತು ಮಾತೆತ್ತಿದೆ. “ಅಯ್ಯೋ ಅದು ನಂದು ಒಬ್ಬನ್ನದೇ ಅಲ್ರೀ ಎಲ್ಲ ರೈತ ಮಕ್ಳ ಕತೇರೀ” “ಅಲ್ರೀ ನನ್ ಸಂಕಲ್ನದ ಬಗ್ಗೆ ಬರೆದವ್ರೂ ನೀವೊಬ್ರೇ, ಈಗ ಬಹುಮಾನ ಬಂತಂತ ಫೋನ್ ಮಾಡಿದವ್ರೂ ನೀವೇರೀ” ” ಶಿಶುನಾಳದಾಗ ಭೆಟ್ಟಿಯಾಗಿ ಇಪ್ಪತ್ತೊರ್ಸ ಆದ್ರೂ ನೆಪ್ಪಿಟ್ಟೀರಿ” ಎಂದು ಮಾತಾಡಿದ ಚಂಸು ದನಿಯಲ್ಲಿ ಈವರೆಗಿನ ಅವರ ಮೂರೂ ಕವನ ಸಂಕಲನಗಳಲ್ಲಿ ಕಂಡರಿಸಿದ್ದ ಬಂಡಾಯದ ಮೊಳಗು ಮತ್ತು ಮೊಹರು ಅವರ ಮಾತಲ್ಲಿ ಬತ್ತಿ ಹೋಗಿತ್ತು. ಹ್ಯಾಗಾದರೂ ಬದುಕು ಸಾಗಿಸಿದರೆ ಸಾಕು ಅನ್ನುವ ವ್ಯಥೆಯೂ ತುಂಬಿ ಕೊಂಡಂತಿತ್ತು.

ಚಂಸು “ಬೇಸಾಯದ ಕತಿ” ಅನ್ನುವ ಶೀರ್ಷಿಕೆಯಲ್ಲಿ ತಮ್ಮ ಕೃಷಿ ಅನುಭವಗಳನ್ನು ಪತ್ರಿಕೆಯೊಂದರಲ್ಲಿ ಬರೆಯುತ್ತಿದ್ದರು. ರಾಸಾಯನಿಕಗಳನ್ನು ಬಳಸದೇ ಸಹಜ ಕೃಷಿಯಲ್ಲೇ ಇಳುವರಿ ಕಡಿಮೆಯಾದರೂ ಲುಕ್ಸಾನು ಇಲ್ಲವೆಂಬ ಅವರ ಅನುಭವ ಇತ್ತೀಚೆಗೆ ಎಲ್ಲ ರೈತರಿಗೂ ಮಾದರಿಯಾಗಿದೆ.

೧೯೯೫ರಲ್ಲಿ ಗೆಳೆಯನಿಗೆ, ೨೦೦೪ ರಲ್ಲಿ ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು, ೨೦೦೯ರಲ್ಲಿ ಅದಕ್ಕೇ ಇರಬೇಕು ಎನ್ನುವ ಕವನಸಂಕಲಗಳನ್ನು ಪ್ರಕಟಿಸಿರುವ ಚಂಸು ಪಾಟೀಲ್ ೨೦೦೨ ರಿಂದ ೨೦೦೬ ರವರೆಗೆ ನೋಟ, ಕ್ರಾಂತಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿಯು ಕೆಲಸ ನಿರ್ವಹಿಸಿದ್ದಾರೆ. ೨೦೦೭ ರಿಂದ ರಾಣೇಬೆನ್ನೂರಿಗೆ ಅಂಟಿದಂತಿರುವ ಕೂನಬೇವು ಗ್ರಾಮದಲ್ಲಿ ನೆಲೆಸಿದ್ದು ಸಹಜ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಮೂರು ಸಂಕಲನದ ಎಷ್ಟು ಕವಿತೆಗಳನ್ನು ಜನ ಓದಿದ್ದರೋ ಇಲ್ಲವೋ ಆದರೆ ಮೂರು ಸಾವಿರಕ್ಕೂ ಮೀರಿದ ಅವರ ಫೇಸ್ಬುಕ್ ಗೆಳೆಯರ ಬಳಗದಲ್ಲಿ ಅವರು ಹೊಸದೊಂದು ಕವಿತೆ ಪ್ರಕಟಿಸಿದ ಕೂಡಲೇ ಹಲವರು ಲೈಕುಗಳನ್ನು ಕೊಡುತ್ತಾರೆ. ಮತ್ತು ಮೇಲ್ನೋಟಕ್ಕೆ ಸಾಧಾರಣ ಶೈಲಿಯ ಹಾಸ್ಯದಂತೆ ಕಂಡರೂ ಆಂತರ್ಯದಲ್ಲಿ ವಿಷಾದವೇ ಅವರ ಎಲ್ಲ ಕವಿತೆಗಳಲ್ಲೂ ಸ್ಥಾಯಿಯಾಗಿ ಇರುತ್ತದೆ. ಬಂಡಾಯದ ದನಿ ಇಂಗಿ ಹೋಗಿದ್ದರೂ ಒಟ್ಟೂ ವ್ಯವಸ್ಥೆಯೊಳಗಿನ ದೌರ್ಬಲ್ಯಗಳನ್ನು ಅವರು ಶಕ್ತವಾಗಿ ದಟ್ಟವಾಗಿ ಹೇಳುತ್ತಾರೆ. ರೈತ ವಿರೋಧೀ ನಿಲುವನ್ನು ಪ್ರಶ್ನಿಸುವ ಅವರ ಕವಿತೆಗಳ ಮುಖ್ಯ ಸ್ಥಾಯಿಯೇ ರೈತನ ನಿತ್ಯ ಬದುಕಿನ ಸಮಸ್ಯೆಗಳು ಆಗಿರುವುದನ್ನು ಗಮನಿಸಲೇ ಬೇಕು.

ಇವನಿಗೇಕೆ

ಕವಿತೆಯ ಉಸಾಬರಿ?

ತತ್ವಮೀಮಾಂಸಕರು

ಕಾವ್ಯವಿಮರ್ಶಕರು

ತಗಾದೆ

ತೆಗೆದರು….

ಇಳೆಗೆ

ಬೆಳೆಗೆ

ತಗುಲಿದ

ಕಳೆ

ತೆಗೆಯುವುದು ಹೇಗೆಂದು

ನಾ ಚಿಂತೆಗೆ ಬಿದ್ದಿರುವೆ!

ಕವಿತೆ ಬರೆಯುವಾಗಲೂ ರೈತನ ಸಮಸ್ಯೆಯೇ ಇವರ ಕಾವ್ಯದ ಪ್ರತಿಮೆಗಳಾಗುವುದು ವಿಶೇಷ. ಹಸಿರು ಟವೆಲ್ ಕಟ್ಟಿಕೊಂಡು ಉದ್ದುದ್ದದ ಭಾಷಣ ಹೊಡೆಯುವವರು ಈ ಕವಿಯಿಂದ ಕಲಿಯಬೇಕಾದ್ದು ಬಹಳ ಇದೆ.

ಇಲ್ಲ, ಇಲ್ಲ ನಾವು

ಬದಲಾಗುವುದೇ ಇಲ್ಲ!

ಎಂದು ಪ್ರತಿ ಅನುಪಲ್ಲವಿಯಲ್ಲಿ ಕೊನೆಯಾಗುವ ಕವಿತೆಯ ಆಂತರ್ಯ ಇಡೀ ಜಗತ್ತೇ ಬದಲಾದರೂ ಬದಲಾಗದ ಮನುಷ್ಯನ ಮಿತಿಯ ಬಗ್ಗೆ ಹೇಳುತ್ತದೆ. ಇಡೀ ಪದ್ಯ ಧೇನಿಸಿದ ಸಂಗತಿ ಕಡೆಯಲ್ಲಿ ಹೀಗೆ ವರ್ಣಿತವಾಗುತ್ತದೆ;

ಮೋಡದಂತೆ ಕರಗುತ್ತೇವೆ; ನಿಜ,

ಯಾರ ದಾಹವನ್ನೂ ಇಂಗಿಸುವುದಿಲ್ಲ!

ಹೆಮ್ಮರವಾಗಿ ಬೆಳೆಯುತ್ತೇವೆ; ನಿಜ,

ಯಾರ ಹಸಿವೆಯನ್ನೂ ಪೊರೆಯುವುದಿಲ್ಲ!

ಮಳೆಬಿಲ್ಲಿನಂತೆ  ಬಣ್ಣಗಟ್ಟುತ್ತೇವೆ; ನಿಜ,

ಎಲ್ಲರ ಸಂಭ್ರಮವಾಗಿ ಮೂಡುವುದಿಲ್ಲ!

ನಕ್ಷತ್ರ‌ದಂತೆ ಮಿನುಗುತ್ತೇವೆ; ನಿಜ,

ಯಾರ ಬದುಕನ್ನೂ ಬೆಳಗುವುದಿಲ್ಲ!

ಬದಲಾಗುತ್ತಲೆ ಇದೆ ಜಗತ್ತು

ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ!

ಪ್ರಾಯಶಃ ಪದ್ಯ ಇಲ್ಲಿಗೇ ಆಗಿದ್ದಿದ್ದರೆ ಕವಿತೆ ಗೆಲ್ಲುತ್ತಿತ್ತು. ಆದರೆ ತನ್ನ ಹೇಳಿಕೆಯನ್ನು ಸಮರ್ಥಿಸಲು ಕವಿ ಮತ್ತೆ ಮುಂದುವರೆಸಿದ ಸಾಲುಗಳು ಪದ್ಯವನ್ನು ನಾಟಕೀಯ ಅಂತ್ಯಕ್ಕೆ ಎಡೆಮಾಡುತ್ತದೆ.

“ಮಾನವ ಜಾತಿ ತಾನೊಂದೇ ವಲಂ” ಎಂದಾ ಕವಿಯ ಮಾತು ನಮ್ಮೆದೆಯೊಳಗೆ ಇಳಿಯುವುದೇ ಇಲ್ಲ!

ಇಲ್ಲ, ಇಲ್ಲ ನಾವು

ಬದಲಾಗುವುದೇ ಇಲ್ಲ!

ಈ ಸಾಲು ಪದ್ಯದ ಆಂತರಿಕ ಸತ್ವವನ್ನು ಘೋಷವಾಕ್ಯ ಮಾಡಿದ ಕಾರಣ ಮುಟ್ಟಬೇಕಾದ ಎತ್ತರ ಮುಟ್ಟದ ದೀಪಾವಳಿಯ ರಾಕೆಟ್ಟಿನಂತಾಗಿದೆ.

ಬೆಳಕು

ಬೆಳಕೆ ಆಗಿರುವುದಿಲ್ಲ;

ಕತ್ತಲೆ ಕತ್ತಲೆಯೇ ಆಗಿರುವುದಿಲ್ಲ,;

ಬೆಳಕಿನಲ್ಲಿ ಎಷ್ಟೊಂದು ಕತ್ತಲೆ…‌

ನಾವದನ್ನು ಗಮನಿಸುವುದೇ ಇಲ್ಲ!

ಈ ಸಾಲುಗಳನ್ನು ಓದಿದ ಕೂಡಲೇ ಯಾರೋ ದಾರ್ಶನಿಕರ ನೆನಪಾದರೆ ತಪ್ಪೇನಿಲ್ಲ. ಈ ಕವಿತೆಯಲ್ಲಿ ಚಂಸು ದಾರ್ಶನಿಕ ಸಂಗತಿಗಳನ್ನೇ ಹೇಳಹೊರಟಿದ್ದಾರೆ. ಆದರೆ ಪದ್ಯದ ಕೊನೆ

ಕತ್ತಲಿನಂಥ ದ್ವೇಷದಲ್ಲೂ

ಪ್ರೀತಿಯ ಬೆಳಕು ಮಿಂಚುವುದಿಲ್ಲವೇ?

ಅನ್ನುವಾಗ ಈ ಕವಿ ಹೇಳ ಹೊರಟ ದಾರ್ಶನಿಕ ಸತ್ಯಕ್ಕೆ ತಲೆ ಬಾಗಲೇ ಬೇಕಾಗುತ್ತದೆ.

ವರ್ತಮಾನದ ಸಂಗತಿಗಳಿಗೂ ಕವಿಯನ್ನು ಬಾಧಿಸುತ್ತವೆ. ಆ ಅಂಥ ಸಂಗತಿಗಳು ಕವಿತೆಗಳಾದಾಗ ಅಂದರೆ ನಿತ್ಯದ ಬದುಕಿನಲ್ಲಿ ನಾವೆಲ್ಲ ಕೇಳುತ್ತಲೇ ಇರುವ ಬ್ರಷ್ಟಾಚಾರ, ಅತ್ಯಾಚಾರ, ಮಧ್ಯವರ್ತಿಗಳ ಕಾಟವನ್ನು ಈ ಕವಿ ಪ್ರಶ್ನಿಸಿ ಉತ್ತರಕ್ಕಾಗಿ ತಡುಕುತ್ತಾರೆ.

ಸೀತೆಗೆ

ಪರೀಕ್ಷೆಯ

ಮೇಲೆ ಪರೀಕ್ಷೆ!

ಕೊನೆಗೊಂದು

ಶವಪರೀಕ್ಷೆ…

ವರದಿಗಳೆಷ್ಟೋ

ಅಷ್ಟೂ ರಾಮಾಯಣ!

ಮನಿಷಾಳ ಹತ್ಯೆ ಕುರಿತಂತೆ ಏನೆಲ್ಲವನ್ನೂ ಓದಿದ ನಮಗೆ ಚಂಸು ಅವರ ಈ ಕವಿತೆ ರಾಮಾಯಣದ ಸೀತೆಯನ್ನು ಈ ಕಾಲದ ಮನಿಷಾಳಿಗೆ ಲಿಂಕ್ ಮಾಡುತ್ತಲೇ ನಿಲ್ಲದ ಈ ಅತ್ಯಾಚಾರಗಳ ಬಗ್ಗೆ ವ್ಯಥೆ ಪಡುತ್ತಾರೆ.

ಬರ್ತೇನಂತ ಬಂದೇ ಬಿಟ್ಟಳು

ಎಂಥ ಬಜಾರಿ ಹೆಣ್ಣಪ್ಪ!

ಮಾಯಗಾತಿ ಮುತ್ತೇಬಿಟ್ಟಳು

ಹೋರಿ ಮ್ಯಾಲೆ ಮಾರಿ ಕಣ್ಣಪ್ಪ!

ರೈತ ಮತ್ತು ಭೂಮಿಯ ಮೇಲೆ ವ್ಯವಸ್ಥೆ ಮಾಡುತ್ತಲೇ ಇರುವ ಕಂಟಕಗಳನ್ನು ಮಾರಿಯಂತೆ ಚಿತ್ರಿಸುವ ಈ ಕವಿ ರಾಣೇಬೆನ್ನೂರು ಭಾಗದಲ್ಲಿ ಬಿಟಿ ಹತ್ತಿ ಬೀಜದಿಂದ ಆಗಿದ್ದ ಘಟನೆಯನ್ನು ಸ್ವಾರಸ್ಯವಾಗಿ ವಿಸ್ತರಿಸುತ್ತಲೇ ಒಟ್ಟೂ ಸಾಮಾಜಿಕ ಸನ್ನಿವೇಶವನ್ನು ಚಿತ್ರಿಸುತ್ತಾರೆ

ಅಜ ಒಯ್ದು ಗಜ ಮಾಡುವಳು

ರೂಪಾಂತರವೊ ಎಲ್ಲ ಅಜಗಜಾಂತರ!

ಜೀವ ಸಂಕುಲದ ಸ್ವಭಾವಾ ತಿದ್ದುವಳು

ಕುಲಾಂತರವೊ ಎಲ್ಲ ಕಲಸುಮೇಲೋಗರ!

ಚಾನೆಲ್ಲಗೆ ಚಾಕ್ಲೇಟು ಪೇಪರ್ಗೆ ಬಿಸ್ಕೀಟು

ಏರಿಕೊಂಡೆ ಸಾರೋಟು ಮಾಡ್ತಾಳೆ ಕಣ್ಕಟ್ಟು!

ಇವಳೆ ಲೆಫ್ಟು ಇವಳೆ ರೈಟು ಇವಳೇ ಫ್ರಂಟು

ಚುಂಬಿಸಿ ರಂಬಿಸಿ ಎಗರಿಸಿ ಗಂಟು….

ಸದ್ಯ ಭೂ ಸುಧಾರಣೆ ಕಾಯಿದೆ ಮತ್ತು ಎಪಿಎಂಸಿ ಕುರಿತು ಚರ್ಚೆಗಳು ನಡೆದಿರುವ ಹೊತ್ತಲ್ಲಿ ಚಂಸು ಹೇಗೆ ಅಧಿಕಾರ ಪಿಪಾಸು ವ್ಯವಸ್ಥೆ ಬೇಸಾಯಗಾರನ ಬೆನ್ನು ಸುಲಿಯುತ್ತಿದೆ ಎನ್ನುವುದನ್ನು ಸರಳವಾಗಿ ಹೇಳುತ್ತಲೇ ರೈತನ ಮುಂದಿರುವ ಭವಿಷ್ಯದ ಸವಾಲುಗಳನ್ನು ಪಟ್ಟಿ ಮಾಡುತ್ತಾರೆ. ಇದರ ಮುಂದುವರೆದ ಸಾಲುಗಳನ್ನು ಅವರ ಇನ್ನೊಂದು ಪದ್ಯದಲ್ಲಿ ಹೀಗೆ ಹೇಳುತ್ತಾರೆ;

ಬದಲಾಗುವ ಕಾಯ್ದೆಗಳ

ಮಧ್ಯೆ

ನಿನಗೂ

ಇದೆಯೆ?

ಕೃತಜ್ಞತೆಗೊಂದಿಷ್ಟು ಸ್ಥಳ?

ಚಂಸು ಅವರನ್ನು ಯಾಕೋ ಬೇಸಾಯದಷ್ಟೇ ಕಾಡುವ ಸಂಗತಿಗಳು ಎಂದರೆ ಕತ್ತಲು ಮತ್ತು ಬೆಳಕು. ಅವರ ಇನ್ನೊಂದು ಪದ್ಯ ಹೀಗೆ ಕೊನೆಯಾಗುತ್ತದೆ;

ಒಳಗಿನ ಕತ್ತಲೆಯ

ಕಳೆಯಲು

ಬೆಳೆಸಲೇಬೇಕು

ಆತ್ಮಸಾಕ್ಷಿಯೊಂದಿಗೆ

ನಂಟು!

ಇದನ್ನು ಕವಿಯಾಗಿ ಹೇಳುವುದು ಸುಲಭ. ಆದರೆ ಬದುಕು ಅಷ್ಟು ಸರಳ ಅಲ್ಲವಲ್ಲ. ನಮ್ಮನ್ನು ಮುತ್ತಿರುವ ಕತ್ತಲನ್ನು ತೊಡೆಯುವ ಅಧಿಕಾರಕ್ಕೆ ಆತ್ಮ ಸಾಕ್ಷಿಯೇ ಸತ್ತಿದೆಯಲ್ಲ, ಅದಕ್ಕೇನು ಮಾಡಬೇಕು?

ಇದು

ಎಡವೂ ಅಲ್ಲ!

ಬಲವೂ ಅಲ್ಲ!

ಎಡಬಲವೊಂದಾದ

ಏಕತೆಯ ಹಾದಿ!

ಭಾವೈಕ್ಯತೆಯ ಹಾದಿ!

ಉಳಿದೆಲ್ಲವೂ

ಆಗಲಿ ಬೂದಿ!

ಇದು ಈ ಕವಿ ನೆಚ್ಚಿಕೊಂಡ ಮೆಚ್ಚಿಕೊಂಡ ಬದುಕಿನ ಹಾದಿ. ಹಾಗಾಗಿಯೇ ಗಾಂಧಿ, ಬಸವ, ಅಂಬೇಡ್ಕರರ ಮುಂದಿಟ್ಟು ಕೊಂಡ ಸ್ಪಷ್ಟ ಹಾದಿ. ಆದರೆ ಬದುಕು ಕವಿತೆಯಷ್ಟು ಸರಳ ಅಲ್ಲವಲ್ಲ!

ಸುಮ್ಮನೆ ಕೂತಿದ್ದೇನೆ ಅಂಧಭಕ್ತಿಯ ಸುಳ್ಳಿನುರುಳಿಗೆ ಗೋಣನೊಡ್ಡಿ ವಿಶ್ವಗುರುವಿನ ಪಟಾಕಿ ಹಾರಿಸಿ ಕೂಗುತ್ತ, ತಿಸ್‌ಮದ್ದು ಬುಸ್ ಅಂದಷ್ಟಕ್ಕೆ ಉಬ್ಬಿ ಹಲ್ಕಿರಿಯುತ್ತ!

ಅಡಿಗರ “ಶ್ರೀ ರಾಮ ನವಮಿಯ ದಿನ” ಕವಿತೆಯ ಅಣುಕು ಈ ಸಾಲುಗಳು. ಅಡಿಗರ ಈ ಕವಿತೆಯನ್ನು ನೆನೆಯದೇ ನಮ್ಮ ಯಾವುದೇ ಕಾವ್ಯ ಕುರಿತ ಸಂಕಿರಣಗಳು ನಡೆಯಲಾರವು. ಅದನ್ನು ಅರಿತ ಈ ಕವಿ ಅಣಕವಾಡಿನ ಮೂಲಕ ಮತ್ತೊಂದು ಮಜಲಿಗೆ ಒಯ್ಯುವುದು ಹೀಗೆ;

ಷಟ್ಚಕ್ರ ರಾಕೆಟುಗಳೆಲ್ಲಕ್ಕೂ ಚಲನೆಯೆ

ಮೂಲಾಧಾರ. ಸಹಸ್ರಾರಕ್ಕದೇ ದಾರಿದೀಪ

ಹುತ್ತಗಟ್ಟಿದೆ ಚಿತ್ತ! ಗೆದ್ದಿಲು ಪರಿತ್ಯಕ್ತ ಜಾಗ?

ಎದೆಬಗೆದುಕೊಳ್ಳದೆ ಕಾಣಬಹುದೇ

ಪ್ರಜಾವತ್ಸಲ ಬಾಪೂರಾಮನ ಆ ಅಂಥ ರೂಪ?

ಗಾಂಧಿಯನ್ನು ಕಾಣಬೇಕಿರುವ ರೀತಿಯನ್ನು ಈ ಕವಿತೆ ಬಗೆಯುವ ಬಗೆಯೇ ಸಶಕ್ತವಾಗಿದೆ ಮತ್ತು ವಿಶಿಷ್ಠವೂ ಆಗಿದೆ.

“ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ” ಎಂದು ಒಂದು ಕವಿತೆಯಲ್ಲಿ ತಮ್ಮ ಕನಸನ್ನು ತಾವೇ ವರ್ಣಿಸುವ ಈ ಕವಿಯ ಕನಸು ಖಬರಿಲ್ಲದವೇನೂ ಅಲ್ಲ. ಸಾಮಾಜಿಕ ಮೌಲ್ಯಗಳೇ ದಿವಾಳಿಯಾಗುತ್ತಿರುವ ಹೊತ್ತಲ್ಲಿ ತೀರ ಬೇಕೇ ಬೇಕಾದ ಆದರೆ ಮರೆತೇ ಹೋದ ಖಬರನ್ನು ಚಂಸು ಎತ್ತಿ ಹಿಡಿಯುತ್ತಾರೆ ಮತ್ತು ಆ ಕಾರಣಕ್ಕೇ ಹೆಚ್ಚು ಇಷ್ಟವಾಗುತ್ತಾರೆ.

ಸ್ವಲ್ಪ ಹೊತ್ತು ಬಿಟ್ಟು ಗುಂಪು ಕರಗಿದ ಮೇಲೆ

ಮತ್ತೆ ಅಲ್ಲಿಗೆ ಧಾವಿಸಿದೆ….

ಧ್ಯಾನಸ್ಥ ತಪಸ್ವಿಯಂತೆ ಅದು ಹಾಗೆ ಕೂತಿರುವುದನ್ನು ಕಂಡು ಅಚ್ಚರಿಗೊಂಡೆ!

ಅದೇ ನನ್ನ ಕವಿತೆ ಎಂದು ಎತ್ತಿಕೊಂಡೆ;

ಎದೆಗೊತ್ತಿಕೊಂಡೆ!

ಇಂಥ ಬರವಣಿಗೆಯ ನಡುವೆಯೇ ಬೇಂದ್ರೆಯವರ           “ಕುಣಿಯೋಣು ಬಾರಾ” ಪದ್ಯಕ್ಕೂ ಚಂಸು ಅಣಕು ಮಾಡಬಲ್ಲರು;

ಅವ್ನೌನು

ಲಾಕ್ಡೌನು

ಮುಗೀತು

ಕೊರೊನಾ

ಹೈರಾಣಾ

ಸಾಕಾತು

ಜುಮ್ಮಂತ ನುಗ್ಗಿ

ಬಿಮ್ಮಂತ ಹಿಗ್ಗಿ

ಕುಣಿಯೋಣಾ

ಬಾರಾ

ಕುಣಿಯೋಣಾ

ಬಾರಾ!

ಇನ್ನೂ ಸ್ವಾರಸ್ಯದ ಸಂಗತಿಯೆಂದರೆ ಲಾಕ್ಡೌನ್ ಕಾಲದ ಕವಿ ಈ ಚಂಸು. ಅದನ್ನು ಅತ್ಯಂತ ಸ್ವಾರಸ್ಯವಾಗಿ ಹಾಸ್ಯದಲ್ಲಿ ಹೇಳುತ್ತಲೇ ಆಳದಾಳದ ವಿಷಾದವನ್ನೂ ಗುರ್ತಿಸುವುದು ಇವರ ವಿಶೇಷ ಚಿತ್ರಕ ಶಕ್ತಿ.

ಭಲ ಭಲಾ ಚಂಸು, ನಿಮ್ಮ ಪದ್ಯಗಳು ಓದುಗರದೇ ಆಗುವುದು ಈ ಸರಳ ರೀತಿಯಲ್ಲಿ ಹೇಳುತ್ತಲೇ ಸಂಕೀರ್ಣವೂ ಆಗುವ ತಿರುವುಗಳಿಂದಾಗಿ. ಮತ್ತು ಆ ತಿರುವುಗಳೇ ತಿವಿಯುವ ಆಯುಧಗಳಾಗಿ ಬದಲಾಗುವ ಕಾರಣಕ್ಕಾಗಿ. ಆದರೂ ಏನೆಲ್ಲ ಬಂಡಾಯದ ಮಾತುಗಳನ್ನು ಬರೆಯುತ್ತಿದ್ದ ನಿಮ್ಮ ಕವಿತೆಗಳು ಈಗ ಹತಾಶೆಯ ಮೂಸೆ ಸೇರಿ ನಿಜ ಬದುಕಿನ ಆವರ್ತನಗಳನ್ನು ಸರಳ ಸಾಲುಗಳಲ್ಲಿ ಕಂಡಿರಿಸುತ್ತಿರುವ ಪರಿಗೆ ದಿಗ್ಮೂಡಗೊಂಡಿದ್ದೇನೆ ಮತ್ತು ನಿಮ್ಮೊಳಗಿನ ಆ ಬಂಡಾಯ ಮತ್ತೆ ಪುಟಿದೆದ್ದು ಸದ್ಯದ ಕಾಯಿದೆ ಕಾನೂನುಗಳನ್ನು ಪ್ರಶ್ನಿಸುತ್ತಲೇ ಈ ನೆಲದ ಮಕ್ಕಳ ಹಕ್ಕನ್ನು ಎತ್ತಿ ಹಿಡಿಯಲಿ ಎನ್ನುವ ಆಶದೊಂದಿಗೆ ನಿಮ್ಮ ಕವಿತೆಗಳ ಟಿಪ್ಪಣಿಯನ್ನು ಕೊನೆಗೊಳಿಸುತ್ತಿದ್ದೇನೆ.

—————————————————————————————————

ಚಂಸು ಪಾಟೀಲರ ಆಯ್ದ ಕವಿತೆಗಳು

೧.

ಬದಲಾಗುತ್ತಲೆ ಇದೆ ಜಗತ್ತು

ಅನುಕ್ಷಣ, ಅನುದಿನ, ವರ್ಷ ಯುಗಗಳಾಚೆಗೂ ಪುನರಾವರ್ತನೆಯ ಮಧ್ಯೆಯೂ

ಪರಿವರ್ತನೆಯೆ ಜಗದ ನಿಯಮವೆಂಬಂತೆ

ಬದಲಾಗುತ್ತಲೇ ಇದೆ ಜಗತ್ತು!

ಇಲ್ಲ, ಇಲ್ಲ, ನಾವು ಮಾತ್ರ

ಬದಲಾಗುವುದೇ ಇಲ್ಲ!

ಮುಂಜಾನೆಯ ಇಬ್ಬನಿ ಕರಗಿತಲ್ಲ!

ಮೊಗ್ಗು ಅರಳಿದೆಯಲ್ಲ; ಕೆಂಪನೆ ನೇಸರ

ಬೆಳ್ಳಿತಟ್ಟೆಯಾಗಿ ಫಳಫಳಿಸುತಿಹನಲ್ಲ!

ಚಿಲಿಪಿಲಿಗುಟ್ಟುತಿದ್ದ ಹಕ್ಕಿಗಳೆಲ್ಲೋ ದೂರಕೆ ಹಾರಿ ಹೋಗಿವೆಯಲ್ಲ….

ಬದಲಾಗುತ್ತಲೇ ಇದೆ ಜಗತ್ತು

ಇಲ್ಲ, ಇಲ್ಲ, ನಾವು ಮಾತ್ರ

ಬದಲಾಗುವುದೇ ಇಲ್ಲ!

ಅದೇ ಭಾಷೆ, ಅದೇ ದೇಶ

ಈ ಗಡಿಗಳಾಚೆ ನಾವು ಇಣುಕಿಯೂ ನೋಡುವುದಿಲ್ಲ!

ಇಲ್ಲ, ಇಲ್ಲ ನಾವು

ಬದಲಾಗುವುದೇ ಇಲ್ಲ!

ವೈಶಾಖದಿ ಬಿತ್ತಿದ ಬಿತ್ತವಿದೋ

ತೆನೆದೂಗಿ ನಿಂತಿದೆ!

ಆಷಾಡದ ಸಮೀರನ ಶೀತಗಾಳಿ

ಬಯಲಾಗಿ ಈಗೀಗ ಮತ್ತೆ

ಮೂಡಲಸೋನೆ ಕೀಳುತಿದೆ!

ಮಹಾನವಮಿಗೊಂದಿಷ್ಟು ಪಡುಗಾಳಿ ಬೀಸಿದರೆ

ಹಾಯೆನಿಸುತ್ತದೆ….

ಬದಲಾಗುತ್ತಲೇ ಇದೆ ಜಗತ್ತು

ಇಲ್ಲ, ಇಲ್ಲ ನಾವು ಮಾತ್ರ

ಬದಲಾಗುವುದೇ ಇಲ್ಲ!

ಅದೇ ಧರ್ಮ, ಅದೇ ಜಾತಿ

ಈ ಲಕ್ಷ್ಮಣರೇಖೆಯಾಚೆ ನಾವು ಖಂಡಿತ

ಕಾಲಿಡುವುದಿಲ್ಲ!

ಇಲ್ಲ,.ಇಲ್ಲ ನಾವು

ಬದಲಾಗುವುದೇ ಇಲ್ಲ!

ಮಳೆಮಾರುತ, ಬಿಸಿಲು ಬೆಳದಿಂಗಳು

ಋತುಮಾನಕ್ಕನುಸಾರ ದಿನದಿನವೂ

ತೊಡುತ್ತದೆ ಮತ್ತೊಂದು ವೇಷ-ಘೋಷ!

ಪ್ರತಿನಿಮಿಷಕ್ಕೂ ಅದರದೇ ಗಾಂಭೀರ್ಯ

ತೊಟ್ಟು ನಡೆಯುವುದರಲ್ಲೆ ಏನೋ ತೋಷ!

ಬದಲಾಗುತ್ತಲೇ ಇದೆ ಜಗತ್ತು

ಇಲ್ಲ, ಇಲ್ಲ ನಾವು ಮಾತ್ರ

ಬದಲಾಗುವುದೇ ಇಲ್ಲ!

ಅದೇ ಪಕ್ಷ! ಅದೇ ರಾದ್ಧಾಂತ

ಸಿದ್ಧಾಂತಕ್ಕೊಂದು ಬದ್ಧತೆಯಿಲ್ಲದ ನಾವು

ಗಮ್ಯವನೆಂದೂ ತಲುಪುವುದಿಲ್ಲ!

ಇಲ್ಲ, ಇಲ್ಲ ನಾವು

ಬದಲಾಗುವುದೇ ಇಲ್ಲ!

“ಮಾನವ ಜಾತಿ ತಾನೊಂದೇ ವಲಂ” ಎಂದಾ ಕವಿಯ ಮಾತು ನಮ್ಮೆದೆಯೊಳಗೆ ಇಳಿಯುವುದೇ ಇಲ್ಲ!

ಇಲ್ಲ, ಇಲ್ಲ ನಾವು

ಬದಲಾಗುವುದೇ ಇಲ್ಲ!

೨.

ಬೆಳಕು

ಬೆಳಕೆ ಆಗಿರುವುದಿಲ್ಲ;

ಕತ್ತಲೆ ಕತ್ತಲೆಯೇ ಆಗಿರುವುದಿಲ್ಲ,;

ಬೆಳಕಿನಲ್ಲಿ ಎಷ್ಟೊಂದು ಕತ್ತಲೆ…‌

ನಾವದನ್ನು ಗಮನಿಸುವುದೇ ಇಲ್ಲ!

ಅಥವಾ ಅದು ನಮ್ಮ ಗಮನಕ್ಕೆ ಬರುವುದೇ ಇಲ್ಲ

ಕತ್ತಲೆ ಬರಿ ಕತ್ತಲಾಗಿರುವುದಿಲ್ಲ..

ನಕ್ಷತ್ರನಿಹಾರೀಕೆಗಳನು ನಾವು

ಲಕ್ಷಿಸುವುದೇ ಇಲ್ಲ!

ಬೆಳಕಿನೊಳಗಿನ ಕತ್ತಲೆಗೆ

ಎಷ್ಟು ತಲೆ?

ಕತ್ತಲೆಯೊಳಗಿನ ಬೆಳಕಿಗೆ

ಎಷ್ಟು ಬೆಲೆ?

ಕಟ್ಟಲಾರೆವೆಂದಿಗೂ ಪ್ರೀತಿಯ ಸೌಧ!

ಬೆಳಕಿನಂತ ಪ್ರೀತಿ

ಕತ್ತಲಾಗುವುದಿಲ್ಲವೇ?

ಕತ್ತಲಿನಂಥ ದ್ವೇಷದಲ್ಲೂ

ಪ್ರೀತಿಯ ಬೆಳಕು ಮಿಂಚುವುದಿಲ್ಲವೇ?

ಹಾಗೇ

ಎಲ್ಲ

ಹುಡುಕಿಕೊಳ್ಳಬೇಕು…

ಮತ್ತೆ

ನಮ್ಮನ್ನು

ನಾವೇ!

೩.

ಬರ್ತೇನಂತ ಬಂದೇ ಬಿಟ್ಟಳು

ಎಂಥ ಬಜಾರಿ ಹೆಣ್ಣಪ್ಪ!

ಮಾಯಗಾತಿ ಮುತ್ತೇಬಿಟ್ಟಳು

ಹೋರಿ ಮ್ಯಾಲೆ ಮಾರಿ ಕಣ್ಣಪ್ಪ!

ಬಿಟಿ ಎಂಬ ಕೋಟೆ ಕಟ್ಟಿ

ಕೇಕೆ ಹಾಕಿ ನಕ್ಕಳು!

ಆಳೋರನ್ನೆ ಕಾವಲಿಗಿಟ್ಟು

ಜೋಕೆ ಎಂದು ಗುಟುರಿದಳು!

ಬಟ್ಟೆ ಬಿಚ್ಚಿ ತೊಡೆ ತಟ್ಟಿ

ಮಾರಣ ಹೋಮಕೆ ಕರೆದಳು!

ಲೆಕ್ಕ ಹಾಕಿ ಪುಕ್ಕ ಕಟ್ಟಿ

ಆಕಾಶಕ್ಕೆ ಜಿಗಿಸಿದಳು!

ಕಾಮಿನಿಯೊ

ಮೋಹಿನಿಯೊ

ಎಷ್ಟು ಹೇಳಿದರೂ ಸುಳ್ಳಪ್ಪ

ಹೋರಿ ಮ್ಯಾಲೆ ಮಾರೀ ಕಣ್ಣಪ್ಪ

ಇವಳ ಮನಸು ಪ್ಯೂಜಿಲ್ಲದ ಕರೆಂಟು

ಎಲ್ಲದಕ್ಕಿವಳದೇ ಪೆಟೆಂಟು!

ಬೆನ್ನಿಗೆ ನೆತ್ತರಂಟಿದ ರೆಕ್ಕೆಯುಂಟು

ಅಹಮ್ಮಿನ ತೊನ್ನಿಗೆ ಕಲರ್ ಪೇಂಟು!

ಇವಳ ತಲೆಗೆ ಮೂರೇ ಕೋಡು

ಕೋರೆ ಬೇರೆ ವಿಚಿತ್ರ ನೋಡು!

ಸಂಭೋಗವೆಂಬುದೇ ಕಗ್ಗಂಟು

ವಯಾಗ್ರವಿದ್ದರಷ್ಟೇ ಮಸ್ತಿ ಹಾಡು!

ಚಂಡಿಯೊ

ಶಿಖಂಡಿಯೊ

ಎಷ್ಟು ಹೇಳಿದರೂ ಸುಳ್ಳಪ್ಪ

ಹೋರಿ ಮ್ಯಾಲೆ ಮಾರೀ ಕಣ್ಣಪ್ಪ!

ಹೂಹಣ್ಣು ತರಕಾರಿ ಕಾಳುಕಡಿ ಕಿರಾಣಿ

ಏನೇ ಕೊಂಡರೂ ಇವಳದೆ ಅಗ್ಗದ ಬೆಲ್ಲ!

ಕೈಗೊಂದು ಕಾಲಿಗೊಂದು ಕಂಪನಿ

ಔಷಧಿ ಕುಡಿಸಿ ವಿಮೆ ಇಳಿಸಿ ಹಬ್ಬಿದೆ ಮಾಯಾಜಾಲ!

ಉತ್ತಿ ಬಿತ್ತೋರ್ನೆಲ್ಲ ಭಿಕ್ಷೆಗೆ ಹಚ್ಚುವಳು

ಭೂಮಿ ಬಂಜೆ ಆದರೀವಳೆ ಅನ್ನದಾತೆ!

ಕೂಳುನೀರಿಗೂ ಬೀಗ ಜಡಿವಳು

ಕಾಯ್ದೆ ಫಾಯ್ದೆಗಳಿಗೆಲ್ಲ ಇವಳೇ ಜನ್ಮದಾತೆ!

ಯಶೋಧೆಯೊ

ಪೂತನಿಯೊ

ಎಷ್ಟು ಹೇಳಿದರೂ ಸುಳ್ಳಪ್ಪ

ಹೋರಿ ಮ್ಯಾಲೆ ಮಾರಿ ಕಣ್ಣಪ್ಪ!

ಅಜ ಒಯ್ದು ಗಜ ಮಾಡುವಳು

ರೂಪಾಂತರವೊ ಎಲ್ಲ ಅಜಗಜಾಂತರ!

ಜೀವ ಸಂಕುಲದ ಸ್ವಭಾವಾ ತಿದ್ದುವಳು

ಕುಲಾಂತರವೊ ಎಲ್ಲ ಕಲಸುಮೇಲೋಗರ!

ಚಾನೆಲ್ಲಗೆ ಚಾಕ್ಲೇಟು ಪೇಪರ್ಗೆ ಬಿಸ್ಕೀಟು

ಏರಿಕೊಂಡೆ ಸಾರೋಟು ಮಾಡ್ತಾಳೆ ಕಣ್ಕಟ್ಟು!

ಇವಳೆ ಲೆಫ್ಟು ಇವಳೆ ರೈಟು ಇವಳೇ ಫ್ರಂಟು

ಚುಂಬಿಸಿ ರಂಬಿಸಿ ಎಗರಿಸಿ ಗಂಟು

ಮಂಗಳನಂಗಳಕೂ ಹಾರಿಸುವಳು ರಾಕೇಟು!

ಮಾಟಗಿತ್ತಿಯೊ

ತಾಟಗಿತ್ತಿಯೊ

ಎಷ್ಟು ಹೇಳಿದರೂ ಸುಳ್ಳಪ್ಪ

ಹೋರಿ ಮ್ಯಾಲೆ ಮಾರೀ ಕಣ್ಣಪ್ಪ!

ಅಡಿ ಅಡಿ ಅಡಿಯಾ

ಒಳಗಿಟ್ಟು ಬಾರಾ

ಹಿಡಿ ಹಿಡಿ ಹಿಡಿಯಾ

ಕೈ ಹಿಡಿ ಬಾರಾ

ಇಡಿ ಇಡಿ ಇಂಡಿಯಾ

ನಿನ್ನದೇ ಬಾರಾ

ಉದ್ದ ಬಿದ್ದು ಉದ್ಧರಿಸೆಂದರಾ

ಸೋನಿ ಸಿಂಗು ಚಿದಂಬರಾ!

ಹರೋಹರಾ ಹರೋಹರಾ!

ಅಡ್ಡಬಿದ್ದು ಹರಸೆಂದರೋ ರಾಮಾ

ಅಮಿತ ಮೋದಿ ನಿರ್ಮಲ ಸೀತಾರಾಮ….!

ನಮೊ ನಮೋ

ಶಿವಾಯನಮೋ!

ರಾಮಾ ರಾಮಾ

ಅಯ್ಯೋ ರಾಮಾ!

ಜನಮರುಳೋ

ಜಾತ್ರೆ ಮರುಳೋ

ಎಷ್ಟು ಹೇಳಿದರೂ……!

………

……….‌‌.ಸುಳ್ಳಪ್ಪ!!

೪.

ಅವರಿಷ್ಟದ ಹಾದಿ

ಅವರು ತುಳಿದರು

ಅವರಿಗೆ

ಅದೇ ಸರಿ

ಅದೇ ಬರೋಬರಿ

ಅದೇ ಖುಶಿ

ಅದೇ ಹೆಮ್ಮೆ!

ಇವರಿಷ್ಟದ ಹಾದಿ

ಇವರು ತುಳಿದರು

ಇವರಿಗೆ

ಇದೇ ಸರಿ.

ಇದೇ

ಬರೋಬರಿ

ಇದೇ ಖುಶಿ

ಇದೇ ಹೆಮ್ಮೆ!

ಅವರು ಕಾಂಗ್ರೆಸ್ಸೋ

ಇವರು ಆರೆಸ್ಸೆಸ್ಸೋ

ಗೊತ್ತಿಲ್ಲ!

ನಾವು

ಭಾರತೀಯರು

ನಾವು

ಕಾಂಗ್ರೆಸ್ಸೂ

ಅಲ್ಲ;

ಆರೆಸ್ಸೆಸ್ಸೂ

ಅಲ್ಲ;

ನಮಗೆ ಬೇಕಿದೆ

ಬೇರೆಯದೇ

ದಾರಿ!

ಬುದ್ಧ, ಬಸವ

ಅಂಬೇಡ್ಕರ

ಗಾಂಧೀ ಮಹಾತ್ಮರ

ಅದೇ ಆ ಹಾದಿ!

ನಾವು

ತುಳಿಯುತ್ತೇವೆ

ಇದೇ ಹಾದಿ!

ನಮಗಿದೇ

ಸರಿ.

ನಮಗಿದೇ

ಬರೋಬರಿ!

ನಮಗಿದೇ

ಖುಶಿ

ನಮಗಿದೇ

ಹೆಮ್ಮೆ!

ಇದು

ಎಡವೂ ಅಲ್ಲ!

ಬಲವೂ ಅಲ್ಲ!

ಎಡಬಲವೊಂದಾದ

ಏಕತೆಯ ಹಾದಿ!

ಭಾವೈಕ್ಯತೆಯ ಹಾದಿ!

ಉಳಿದೆಲ್ಲವೂ

ಆಗಲಿ ಬೂದಿ!

ಹೆಣೆಯೋಣವಿನ್ನು

ಈ ಕೌದಿ!

ಜೈ

ಭಾರತಾಂಬೆ!

೫.

ಮಂದಿರ ನಿರ್ಮಾಣದ ಭೂಮಿಪೂಜೆಯ

ಕಾರಣ ಮಾರ್ಮೊಳಗಿದರೂ ಜಯಭೇರಿ

ಜಿಜ್ಞಾಸೆಯೋಲಗದ ಆಡುಂಬೋಲದಲ್ಲಿ

ವ್ಯಕ್ತಮಧ್ಯಕ್ಕೆ ಬಂದುರಿಯದಿರುವುದೆ? ಗಾಬರಿ!

ಅದವಾನಿಯ ರಥಯಾತ್ರೆ ಬಿಹಾರ ತಲುಪಿ ಬಂಧನವೇ ಲಲ್ಲೂ ಪ್ರಸಾದ! ಆ ಕೆಸರಲ್ಲೆ ಕಣ್ಣೊಡೆದು ಅಧಿಕಾರದೆಡೆಗೆ ತುಡಿವ ಹುರುಪಿ-

ನಲ್ಲೆ ದಳದಳ ಅರಳಿತೊಂದು ನೈದಿಲೆ!

ಯಾತ್ರೆಗಲ್ಲಲ್ಲಿ ನಿರ್ಬಂಧ, ನಿಷೇಧಾಜ್ಞೆ

ಕರ್ಫ್ಯೂ ಮಧ್ಯೆಯೂ ಭಾಷಣ, ಉಲ್ಲಂಘನೆ

ಗುಮ್ಮಟವನೊಡೆದು ಜೈಕಾರ ಹಾಕಿದ್ದು

ರಾಜಕಾರಣದೊಂದಪೂರ್ವ ನಟನೆ!

ಕೊಂಚ ಕೈಗೂಡಿ ಸಿಂಹಾಸನದ ಕನಸು

ಮೀಸೆ ಮಣ್ಣಾದರೂ ಗೆದ್ದ ವರಸೆ

ಮೀಸಲಾತಿ ಮಿಸಳಬಾಜಿ, ಅಖಂಡತೆಯ

ವಗ್ಗರಣೆ ರುಚಿ ಹತ್ತಿದ ಮೇಲಿನ್ಯಾವ ಆಸೆ?

ಕಣ್ಣೆದುರಿರುವುದನ್ನೂ ಭೂತಗನ್ನಡಿಯಲ್ಲಿ

ತೋರುವ ಜಾಣ್ಮೆ! ಯೋಗದ ಗರಿಮೆ

ಅಂಬೇಡ್ಕರ್, ಗಾಂಧೀ, ಬಸವ ಬುದ್ಧ ಪಾಟಣಿಗೆ

ಇಳಿದು ಹುತ್ತವ ಬಡಿವುದೇ ಶತಮಾನಗಳ ಗೇಯ್ಮೆ!

ಧೊರ್ಧಂಡರ ದಂಡಕಾಮೇಷ್ಟಿ ಹೋಮಕ್ಕೆ

ಬಲಿಯಾದವದೆಷ್ಟೋ ಮುಗ್ಧ ಜೀವ

ಭುಗಿಲೆದ್ದ ಕೋಮುದಳ್ಳುರಿಯ ಸ್ವಾಹಕ್ಕೆ

ನಾಡೇ ತಲೆತಗ್ಗಿಸಿದ ಹೇಯಘಟನೆ!

ಮಾತಿನಬ್ಬರದ ಮಧ್ಯೆ ಮೌನದ ಬೆಳಕು

ಇದ್ದರೂ ಭ್ರಷ್ಟರಕೂಟದ ಕೈ ಶಿಥಿಲಗೊಂಡು

ಭಾಷೆಭಾವಭಿನ್ನತೆಗೆ ಸ್ಫೂರ್ತ ನಾಯಕತ್ವ

ಇಲ್ಲದೆ ನೆಲಕಚ್ಚಿದ್ದೊಂದು ದುರಂತಚರಿತ!

ಮತ್ತೆ ಚಹಾದ ಪರಿಮಳ! ತಾಜಾ ಇರಬಹುದೆಂಬ ನಂಬುಗೆ! ಇರುಳು ಕಂಡ

ಬಾವಿಗೆ ಹಗಲು ಬಿದ್ದದ್ದೇ ಬಂತು! ಜನ

ಮರುಳೊ ಜಾತ್ರೆ ಮರುಳೊ!

ವಾಸಿಯಾಗದೇ..

ಕೀವುಗಟ್ಟಿದ ವ್ರಣ

ವಿಜ್ರಂಭಿಸಿತೇ..

ಫಿಲೊಕ್ಟಿಕಸ್‌ನ ಮಾಂತ್ರಿಕ ಬಾಣ!

ಸುಮ್ಮನೆ ಕೂತಿದ್ದೇನೆ ಅಂಧಭಕ್ತಿಯ ಸುಳ್ಳಿನುರುಳಿಗೆ ಗೋಣನೊಡ್ಡಿ ವಿಶ್ವಗುರುವಿನ ಪಟಾಕಿ ಹಾರಿಸಿ ಕೂಗುತ್ತ, ತಿಸ್‌ಮದ್ದು ಬುಸ್ ಅಂದಷ್ಟಕ್ಕೆ ಉಬ್ಬಿ ಹಲ್ಕಿರಿಯುತ್ತ!

ಷಟ್ಚಕ್ರ ರಾಕೆಟುಗಳೆಲ್ಲಕ್ಕೂ ಚಲನೆಯೆ

ಮೂಲಾಧಾರ. ಸಹಸ್ರಾರಕ್ಕದೇ ದಾರಿದೀಪ

ಹುತ್ತಗಟ್ಟಿದೆ ಚಿತ್ತ! ಗೆದ್ದಿಲು ಪರಿತ್ಯಕ್ತ ಜಾಗ?

ಎದೆಬಗೆದುಕೊಳ್ಳದೆ ಕಾಣಬಹುದೇ

ಪ್ರಜಾವತ್ಸಲ ಬಾಪೂರಾಮನ ಆ ಅಂಥ ರೂಪ?

೬.

ಎರಡು ಶಬ್ದಗಳನ್ನು ಹಿಡಿದುಕೊಂಡು

ಕವಿತೆ ಬರೆಯಬೇಕೆಂದು ಹೊರಟೆ!

ಕೇವಲ ಎರಡೇ ಶಬ್ದ!

ಎರಡೇ ಕಣ್ಣಿಂದ ಏನೆಲ್ಲ ನೋಡುತ್ತೇವೆ;

ಎರಡೇ ಕಿವಿಗಳಿಂದ ಏನೆಲ್ಲ ಕೇಳುತ್ತೇವೆ;

ಎರಡೇ ಕಾಲಿನಿಂದ ಎಲ್ಲೆಲ್ಲೋ ಅಲೆಯುತ್ತೇವೆ;

ಎರಡೇ ಕೈಗಳಿಂದ ಏನೆಲ್ಲ ಮಾಡುತ್ತೇವೆ;

ಆದರೆ, ಒಂದೇ ಹೃದಯದಿಂದ ಉಸಿರುತ್ತೇವೆ…

ಆ ಉಸಿರು ಎಷ್ಟೊಂದು ಶಬ್ದಗಳನ್ನು ಉದ್ದೀಪಿಸಿದೆ..

ಒಂದೇ ಬಾಯಿ, ಒಂದೇ ನಾಲಿಗೆ ಉಸಿರಿನೊಡನಾಟದಲ್ಲಿ ಹುಟ್ಟಿದ ಶಬ್ದಗಳೆಲ್ಲವೂ ಈಗ ಸೋತು ಸುಣ್ಣವಾಗಿವೆ! ಈ ಶಬ್ದಗಳಾಡಂಬರಕೆ ಬೇಸತ್ತು ಬವಳಿ ಬಿದ್ದಿತ್ತು ಕವಿತೆ!

ಈ ಎರಡು ಶಬ್ದಗಳು ಸಾಮಾನ್ಯವಾದವುಗಳಲ್ಲ!

ಒಂದು ಸಂತನಂತೆ ಸದಾ ಮೌನಿ;

ಮತ್ತೊಂದು ರಾಜಕಾರಣಿಯಂತೆ ಪ್ರಖರ ವಾಗ್ಮಿ.

ಬದುಕಿನ ಅನ್ವೇಷಣೆಗೆ ಇವೆರಡೇ ಸಾಕೆಂದುಕೊಂಡೆ.

ಊರಾಚೆ ತೆರಳಿ ಅಲ್ಲೆಲ್ಲೋ ಮರವೊಂದರ ಬುಡದಲ್ಲಿ

ಪ್ರಶಾಂತ ಸನ್ನಿವೇಶದಲ್ಲಿ

ಈ ಎರಡೂ ಶಬ್ದಗಳ ಜೊತೆಗೆ ಮಾತಿಗಿಳಿಯಬೇಕೆಂದಿದ್ದೆ.

ಅದೇ ಲಗುಬಗೆಯಲ್ಲಿ ಹೆಜ್ಜೆ ಹಾಕಿದ್ದೆ.

ಇನ್ನೂ ಪೇಟೆ ದಾಟಿರಲಿಲ್ಲ. ಜನರ ಗದ್ದಲ ಕಿವಿಗಡಚಿಕ್ಕುತಿತ್ತು! ಸ್ವಲ್ಪ ಮೈಮರೆತೇನೇನೋ..

ಎರಡೂ ಶಬ್ದಗಳು ಕೈಜಾರಿ ಬಿದ್ದು ಬಿಟ್ಟವು!

ಅದರಲ್ಲೊಂದು ಚಿಟ್ಟನೆ ಚೀರಿಬಿಟ್ಟಿತು.

ಇದ್ದಕ್ಕಿದ್ದಂತೆ ಜನ ಗುಂಪು ಸೇರಿತು.

ಜಂಗುಳಿಯ ಮಧ್ಯೆ ಇದು ಅದೇನೇನೋ ಕಥೆ ಕಟ್ಟಿ ಹೇಳತೊಡಗಿತು. ಜನ ಅದರ ಮಾತುಗಳನೆಲ್ಲ ಹೌದೆಂಬಂತೆ ಕೇಳಿದರು, ಅದನ್ನೇ ನಂಬಿಬಿಟ್ಟರು!

ನನ್ನನ್ನೇ ಅನುಮಾನದಿಂದ ನೋಡಿ ಕಣ್ಣು ಕಿಸಿದರು. ಸಧ್ಯ ನಾನು ಅಲ್ಲಿಂದ ಪಾರಾಗಬೇಕಿತ್ತು!

ಈ ಗದ್ದಲದಲ್ಲಿ ಆ ಇನ್ನೊಂದು ಶಬ್ದ ಎಲ್ಲಿ ಹೋಯಿತೋ…..

ಪಾಪ! ಕಾಲ್ತುಳಿತಕ್ಕೆ ಸಿಕ್ಕಿ ಸತ್ತು ಹೋಯಿತೇನೋ!

ಹಾಗೇನೂ ಆಗಿರಲಿಕ್ಕಿಲ್ಲ ಎಂದು ನನ್ನನ್ನೇ ಸಮಾಧಾನಿಸಿಕೊಂಡೆ.

ಸ್ವಲ್ಪ ಹೊತ್ತು ಬಿಟ್ಟು ಗುಂಪು ಕರಗಿದ ಮೇಲೆ

ಮತ್ತೆ ಅಲ್ಲಿಗೆ ಧಾವಿಸಿದೆ….

ಧ್ಯಾನಸ್ಥ ತಪಸ್ವಿಯಂತೆ ಅದು ಹಾಗೆ ಕೂತಿರುವುದನ್ನು ಕಂಡು ಅಚ್ಚರಿಗೊಂಡೆ!

ಅದೇ ನನ್ನ ಕವಿತೆ ಎಂದು ಎತ್ತಿಕೊಂಡೆ;

ಎದೆಗೊತ್ತಿಕೊಂಡೆ!

*********************************

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ

4 thoughts on “

  1. ಸರ್,ಚಂಸು ಪಾಟೀಲರು ನನ್ನ ನೆಚ್ಚಿನ ಕವಿ.
    ಅವರ ಕುರಿತು,ಅವರ ಕವಿತೆಗಳ ಕುರಿತು
    ವಿಮರ್ಶಾತ್ಮಕ ಬರಹ ಚೆನ್ನಾಗಿದೆ.ಕವಿ, ಮತ್ತು
    ಕ್ರತಿಗಳ ಅಂತರಂಗ ದರ್ಶನಮಾಡಿಸಿದ್ದೀರಿ.

  2. ಚಂ ಸು ಪಾಟೀಲರದು ನಿಷ್ಕಲ್ಮಶ ಬರಹ, ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯಶಾಲಿ ಅನ್ನದಾತ ಎನಿಸುತ್ತಾರೆ. ಅಭಿನಂದನೆಗಳು ಸರ್ ತಮ್ಮ ವಿಮರ್ಶೆಯೂ ಕೂಡ ಚೆನ್ನಾಗಿದೆ. ತಮಗೂ ಅಭಿನಂದನೆಗಳು

Leave a Reply

Back To Top