ಅಂಕಣ ಬರಹ
ಜ್ಞಾನವೆಂಬ ತಿಜೋರಿಯ ಕೀಲಿಕೈ…
ಪುಸ್ತಕಗಳ ರಾಶಿಯನ್ನು ತಡವುವಾಗೆಲ್ಲಾ ಎಂಥದೋ ಆಪ್ತಭಾವ. ಗುಪ್ತಗೆಳೆಯನೊಬ್ಬ ಮನಕ್ಕೆ ಆಗಮಿಸಿದಂತೆ ಪ್ರತಿ ಪುಸ್ತಕವೂ ನಮ್ಮ ಅತಿ ಖಾಸಗೀತನವನ್ನು ಕೊಳ್ಳೆ ಹೊಡೆಯುತ್ತಿರುತ್ತದೆ. ನನಗೆ ಪುಸ್ತಕದ ರುಚಿ ಹತ್ತಿದ್ದು ಬಹುಶಃ ಮೂರೋ ನಾಲ್ಕನೆಯದೋ ತರಗತಿಯಲ್ಲಿದ್ದಾಗ. ಆಗ ನನ್ನ ಮನೆಗೆ ಬರುತ್ತಿದ್ದದ್ದು ದಿಕ್ಸೂಚಿ ಮಾತ್ರ. ಅದು ಖಂಡಿತ ದಿಕ್ಸೂಚಿ ಆಕರ್ಷಕವಾಗಿ ಕಾಣಿಸಬಹುದಾದ ವಯಸ್ಸು ಆಗಿರಲಿಲ್ಲ. ಆದರೆ ಒಂದು ಪುಸ್ತಕದ ಸ್ಪರ್ಶದ ಅನುಭೂತಿ ಹೇಗಿರುತ್ತದೆಂದು ತಿಳಿದದ್ದು ಮಾತ್ರ ದಿಕ್ಸೂಚಿಯಿಂದಲೇ. ಶಾಲೆಯ ಪಠ್ಯ ಪುಸ್ತಕಗಳು ಸದಾ ನಮ್ಮೊಂದಿಗಿರುತ್ತಿದ್ದವಾದರೂ ಯಾವತ್ತಿಗೂ ಅವು ನಮಗೆ ಆತ್ಮೀಯವಾಗಿ ಕಾಣಿಸುತ್ತಿರಲಿಲ್ಲ. ಅವನ್ನು ಎಷ್ಟು ಬೇಗ ಹೊರತೆಗೆಯುತ್ತಿದ್ದೆವೋ ಅಷ್ಟೇ ಬೇಗ ಒಳ ಹಾಕಿ ಮುಚ್ಚಿಟ್ಟು ಎದ್ದರೇ ಸಮಾಧಾನ. ಆದರೆ ಕತೆಗಳ ಲೋಕ ಪರಿಚಯವಾಯ್ತು ನೋಡಿ ಪುಸ್ತಕಗಳ ರುಚಿಯೂ ಸಿಕ್ಕಿಬಿಟ್ಟಿತು. ಕತೆಗಳು ಹತ್ತಿರವಾದ ನಂತರ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯ ಪಾಠಗಳು ಪಾಠವಾಗಲ್ಲದೇ ಕಥೆಗಳಾಗಿಯೂ ಇಷ್ಟವಾಗತೊಡಗಿದವು. ಕವಿತೆಗಳು ಆಪ್ತ ಹಾಡಾದವು. ಇದು ಓದಿನ ರುಚಿ ಹತ್ತಿಸಿದ ಕತೆಗಳಿಂದ ಆದ ಬಹುದೊಡ್ಡ ಲಾಭ.
ಆದರೆ ಚಿಕ್ಕಂದಿನಲ್ಲಿ ಬಾಲಮಂಗಳ, ಚಂದಾಮಾಮ, ಚಂಪಕದಂತಹ ಪುಸ್ತಕಗಳ ಬಗ್ಗೆ ಇರುತ್ತಿದ್ದ ಆಕರ್ಷಣೆಯ ಮಟ್ಟ ಎಷ್ಟಿರುತ್ತಿತ್ತೆಂದರೆ ಎಲ್ಲಿಯಾದರೂ ಸಿಕ್ಕರೆ ಸಾಕು ಲಪಟಾಯಿಸಿಬಿಡಬೇಕು ಎನ್ನುವಷ್ಟು. ಆದರೆ ಲಪಟಾಯಿಸುವ ಅವಕಾಶ ಸಿಗಲಿಲ್ಲ ಅದು ಬೇರೆ ಮಾತು. ಮನೆಯಲ್ಲಿ ಕೊಡಿಸಿ ಎಂದು ದುಂಬಾಲುಬಿದ್ದರೆ ದಿಕ್ಸೂಚಿ ಓದು ಎನ್ನುವ ಉತ್ತರ ಬರುತ್ತಿತ್ತು. ದಿಕ್ಸೂಚಿಯ ಪುಟ ತಿರುವುವಾಗ ಎಂಥದೋ ನಿರಾಸೆ… ಅಲ್ಲಿ ಎಲ್ಲಿಯಾದರೂ ಇತಿಹಾಸದ ರಾಜರ ಕತೆಗಳಿದ್ದರೆ ಕಣ್ಣುಗಳು ಕೊಂಚ ಮಿಂಚುತ್ತಿದ್ದವು. ಒಂದಷ್ಟು ವರ್ಷ ದಿಕ್ಸೂಚಿಯಲ್ಲಿ ನಾಗರೀಕತೆಗಳ ಬಗ್ಗೆ ಸಚಿತ್ರ ವಿವರಣೆ ಬರುತ್ತಿತ್ತು. ಅದು ಸ್ವಲ್ಪ ಆಸಕ್ತಿ ಹುಟ್ಟಿಸುತ್ತಿತ್ತು. ಆದರೆ ಬಾಲಮಂಗಳದ ಕತೆಗಳ ಮುಂದೆ ಮೃಷ್ಟಾನ್ನದ ಮುಂದೆ ಇಟ್ಟ ಮುದ್ದೆಯ ಹಾಗೆ ಸಪ್ಪೆ ಸಪ್ಪೆ… ನನ್ನ ಗೆಳತಿಯೊಬ್ಬಳು ತನ್ನಲ್ಲಿರುತ್ತಿದ್ದ ಬಾಲಮಂಗಳ ಪುಸ್ತಕವನ್ನು ಆಗಾಗ ಶಾಲೆಗೆ ತರುತ್ತಿದ್ದಳು. ಅದನ್ನು ನೋಡುವಾಗೆಲ್ಲಾ ಇವಳೆಷ್ಟು ಅದೃಷ್ಟವಂತಳು, ಇವಳ ಅಮ್ಮ ಇವಳಿಗೆ ಓದಲು ಕತೆ ಪುಸ್ತಕ ಕೊಡಿಸುತ್ತಾರಲ್ಲಾ ಎಂದು ಕರುಬುತ್ತಿದ್ದೆ. ರಜೆ ಸಿಕ್ಕಾಗ ಅವಳ ಮನೆಗೆ ಬಾಲ ಮಂಗಳವನ್ನು ನೋಡಲಿಕ್ಕೆಂದೇ ಹೋದದ್ದಿದೆ. ಆದರೆ ಅವನ್ನು ದೂರದಿಂದ ನೋಡಬಹುದಿತ್ತಷ್ಟೇ, ಮುಟ್ಟುವಂತಿರಲಿಲ್ಲ. ಇರಲಿ ಆ ಗೆಳತಿ ಕನಿಷ್ಟ ನೋಡಲು ಬಿಟ್ಟಿದ್ದಳಲ್ಲಾ… ಅದೇ ಸಮಾಧಾನ.
ಈ ಪರಿಸ್ಥಿತಿಯನ್ನು ದಾಟುತ್ತಿರುವಾಗ ಅಚಾನಕ್ ನನಗೆ ಸಿಕ್ಕ ದೊಡ್ಡ ನಿಧಿ ಎಂದರೆ ಲೈಬ್ರರಿ ಕಾರ್ಡ್. ನಾನು ಐದನೇ ತರಗತಿಯಲ್ಲಿದ್ದಾಗ ಬಹುಶಃ ನನ್ನಪ್ಪ ನನಗದನ್ನು ಮಾಡಿಸಿಕೊಟ್ಟದ್ದು. ನಂತರ ಅಲ್ಲಿದ್ದ ಪಂಚತಂತ್ರದ ಕತೆಗಳಿಂದ ಹಿಡಿದು ಎಲ್ಲಾ ರೀತಿಯ ಕತೆಗಳನ್ನೂ ಒಂದು ಕಡೇಯಿಂದ ಓದಿ ಮುಗಿಸಿದ್ದೆ. ಪರೀಕ್ಷೆಗಳಿದ್ದಾಗಲೂ ಕತೆ ಪುಸ್ತಕಗಳನ್ನು, ಪಠ್ಯಪುಸ್ತಕದ ನಡುವೆ ಬಚ್ಚಿಟ್ಟುಕೊಂಡು ಓದಲು ಹೋಗಿ ಅಪ್ಪನ ಕೈಗೆ ಸಿಕ್ಕುಬಿದ್ದು ಬೈಸಿಕೊಂಡದ್ದೂ ಇದೆ. ಹೈಸ್ಕೂಲು ಮುಗಿದು ಕಾಲೇಜು ಮೆಟ್ಟಿಲು ಹತ್ತಿದಾಗ ನಾನು ನನ್ನ ಜೀವನದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ ಓದಿದ್ದು. ನಾನು ಓದಿದ ಮೊದಲ ಕಾದಂಬರಿ ಉಷಾನವರತ್ನರಾಮರ ಬಿರುಕು. ಆ ಕತೆಯ ಧರಣಿ, ಚಾರುದಾಸ್, ಅವರ ಮುದ್ದಾದ ಮಗಳು ಈಶಾನ್ಯ… ಪ್ರತಿ ಪಾತ್ರವೂ ಇಂದಿಗೂ ಮನಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದೆಷ್ಟೋ ಬಾರಿ ಆ ಪಾತ್ರಗಳು ನನ್ನನ್ನು ವಿಪರೀತ ಕಾಡಿವೆ. ಆ ವಯಸ್ಸೇ ಅಂಥದ್ದು. ಕಾದಂಬರಿಯ ಪಾತ್ರವನ್ನೇ ಆವಾಹಿಸಿಕೊಂಡು ಅನುಭವಿಸುವಂತಹ ವಯಸ್ಸು.
ನಂತರ ಓದಿನ ಸಲುವಾಗಿ ನಗರದ ಹಾಸ್ಟೆಲ್ಲಿಗೆ ಬಂದೆ. ಅಲ್ಲಿ ನಮ್ಮ ಹಾಸ್ಟೆಲ್ ಎದುರಿಗೆ ಒಂದು ಸಣ್ಣ ಹೋಟೆಲ್ ಇತ್ತು. ಅದರ ಮುಂಭಾಗದ ಶೋಕೇಸಿನಲ್ಲಿ ಕುವೆಂಪುರವರು ಬರೆದ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಜೀವನ ಚರಿತ್ರೆಗಳನ್ನು ಇಟ್ಟಿರುತ್ತಿದ್ದರು. ದಿನಾ ಅವನ್ನು ಗಮನಿಸುತ್ತಿದ್ದ ನಾನು ಒಮ್ಮೆ ತಡೆಯಲಾಗದೆ ಆ ಪುಸ್ತಕವನ್ನು ಕೊಡುತ್ತೀರಾ ಓದಿ ತಂದುಕೊಡುವೆ ಎಂದು ಕೇಳಿಯೇಬಿಟ್ಟಿದ್ದೆ. ಒಂದೆರೆಡು ದಿನ ಇಲ್ಲ ಎನ್ನುತ್ತಾ ಸತಾಯಿಸಿದ ಹೋಟೇಲಿನ ಮಾಲೀಕರು, ಕೊನೆಗೆ ನಾ ಯಕೋ ಬಿಡೋ ಗಿರಾಕಿ ಅಲ್ಲ ಅನಿಸಿ ಒಂದಿನ ವಿವೇಕಾನಂದರ ಜೀವನ ಚರಿತ್ರೆಯನ್ನು ಮಾತ್ರ ಕೊಟ್ಟರು. ಅವತ್ತು ಆ ಪುಸ್ತಕವನ್ನು ಕೈಯಲ್ಲಿ ಹಿಡಿದದ್ದೇ ಒಂದು ರೋಮಾಂಚನ. ಅದರ ಓದು ನನ್ನಲ್ಲಿ ತಂದ ಬದಲಾವಣೆಯೂ ಒಂದು ಅದ್ಭುತವೇ ಸರಿ. ಆ ಅದ್ಭುತವೇ ಮೂರು ವರ್ಷಗಳ ಕಾಲ ಹಾಸ್ಟೆಲ್ಲಿನಲ್ಲಿದ್ದಾಗ ನನ್ನನ್ನು ತಿದ್ದಿದೆ, ಬುದ್ಧಿ ಹೇಳಿದೆ, ಸಮಾಧಾನಿಸಿದೆ, ಸರಿ ದಾರಿಯಲ್ಲಿ ನಡೆಸಿದೆ. ಆ ಪುಸ್ತಕವನ್ನು ವಾರಕ್ಕೆ ಮುಂಚೆಯೇ ಒಂದು ಮುಕ್ಕು ಬಾರದಂತೆ ಜೋಪಾನವಾಗಿಟ್ಟುಕೊಂಡು, ಓದಿ ಮುಗಿಸಿ ಹೋಟೇಲಿನ ಅಂಕಲ್ (ಇಷ್ಟು ದಿನಗಳಲ್ಲಿ ಅವರೀಗ ಅಂಕಲ್ ಆಗಿ ಬದಲಾಗಿದ್ದದ್ದೂ ಸೋಜಿಗ…) ಗೆ ಮರಳಿ ತಂದು ಕೊಟ್ಟಾಗ ಅವರ ಮುಖದಲ್ಲಿ ಒಂದು ಸಣ್ಣ ಸಂತೋಷ ಮತ್ತು ಮೆಚ್ಚುಗೆ ಇತ್ತು. ಮರಳಿ ಪಡೆದ ಪುಸ್ತಕವನ್ನು ಅದಿದ್ದ ಜಾಗದಲ್ಲೇ ಇಟ್ಟು, ಸದ್ದಿಲ್ಲದೇ ನಾ ಕೇಳದೆಯೇ ರಾಮಕೃಷ್ಣರ ಪುಸ್ತಕವನ್ನು ತಂದು ನನ್ನ ಕೈಗೆ ಇತ್ತಿದ್ದರು. ನನ್ನ ಕಣ್ಣಲ್ಲಿ ಕೃತಜ್ಞತೆಯ ಮಹಾಪೂರ… ಖುಷಿಯ ಉತ್ತುಂಗದಲಿ ನಾನಿದ್ದೆ. ಮತ್ತೊಂದು ವಾರದ ನನ್ನ ಓದು ಸಂಪನ್ನವಾಗಿತ್ತು.
ಅಲ್ಲಿಂದ ಮುಂದಕ್ಕೆ ಪುಸ್ತಕಗಳನ್ನು ನಾನು ಹುಡುಕಿ ಹೊರಡಲು ಶುರುಮಾಡಿದೆ. ಎಲ್ಲೇ ಪುಸ್ತಕ ಕಾಣಲಿ ಅದು ನನಗೆ ಬೇಕು ಅನಿಸುತ್ತಿತ್ತು. ನನ್ನ ಪಾಕೆಟ್ ಮನಿಯ ಬಹುಭಾಗ ಪುಸ್ತಕಗಳಿಗೇ ಖರ್ಚಾಗುತ್ತಿತ್ತು. ಇನ್ನು ನಾನು ಯಾವ ಯಾವ ಊರಿನಲ್ಲಿರುತ್ತಿದ್ದೆನೋ ಅಲ್ಲೆಲ್ಲಾ ಒಂದೊಂದು ಲೈಬ್ರರಿ ಕಾರ್ಡ್ ಇರುತ್ತಿತ್ತು ನನ್ನ ಬಳಿ. ಇನ್ನು ನೌಕರಿ ಸಿಕ್ಕಾಗ ಆದ ಮೊದಲ ಆನಂದವೆ ಇನ್ನು ಮುಂದೆ ಸ್ವಂತ ಖರ್ಚಿನಲ್ಲಿ ಪುಸ್ತಕ ಕೊಳ್ಳಬಹುದು ಎಂಬುದು. ಅದು ಮತ್ತೊಂದೇ ಮಟ್ಟಿಗಿನ ಖುಷಿ. ನನ್ನ ಆಸಕ್ತಿ ಎಷ್ಟು ವೈವೀಧ್ಯವಿರುತ್ತಿತ್ತೋ ಅಷ್ಟೇ ರೀತಿಯ ಪುಸ್ತಕಗಳನ್ನು ನಾನು ಓದುತ್ತಿದ್ದದ್ದು. ಸಾಹಿತ್ಯ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಸಂಗೀತ, ಜ್ಯೋಯಿಷ್ಯ, ಸಂಖ್ಯಾಶಾಸ್ತ್ರ… ಹೀಗೆ ನಾನಾ ಬಗೆಯ ಪುಸ್ತಕಗಳಿರುತ್ತಿದ್ದವು ನನ್ನ ಬಳಿ. ನನ್ನ ಗೆಳತಿಯರು ಕೆಲವೊಮ್ಮೆ ಶಾಸ್ತ್ರ ಕೇಳಲು ಬರುತ್ತಿದ್ದರು ನನ್ನ ರೂಮಿಗೆ. ಈಗ ನೆನೆದರೆ ನಗು ಬರುತ್ತದೆ. ಈಗಲೂ ಆ ಎಲ್ಲ ಪುಸ್ತಕಗಳೂ ಇವೆ… ಎಲ್ಲೋ ಮೂಲೆಯಲ್ಲಿ. ಅಪ್ಪ ಒಮ್ಮೆ ತಮಾಷೆಗೆ, “ಸುಮ್ನೆ ಒಂದು ಬೋರ್ಡ್ ಹಾಕ್ಕೊಂಡು, ಪಂಚಾಂಗ ಇಟ್ಕೊಂಡು ಕೂತುಬಿಡು ಹೋಗ್ಲಿ, ಒಂಚೂರು ಸಂಪಾದನೆಯಾದ್ರೂ ಆಗುತ್ತೆ…” ಅಂತ ಹೇಳಿ ಹೇಳಿ ನಗಾಡಿದ್ರು. ಆದ್ರೆ ಯಾರೇನೇ ಹೇಳಲಿ, ನನಗೆ ಆಸಕ್ತಿ ಹುಟ್ಟಿದ್ದನ್ನೆಲ್ಲಾ ನಾ ಓದಿದ್ದೇ ಸೈ ಎನ್ನುವಂತೆ ಓದುತ್ತಿದ್ದೆ ಆಗ. ತುಷಾರ, ಮಯೂರ, ಓ ಮನಸೇ, ಸುಧಾ, ತರಂಗ… ತಪ್ಪದೇ ನನ್ನ ಕೋಣೆ ಸೇರುತ್ತಿದ್ದವು. ನಾನಾಲ್ಕು ನ್ಯೂಸ್ ಪೇಪರ್ ಹಾಕಿಸಿಕೊಳ್ತಿದ್ದೆ ಮನೆಗೆ. ಅಕ್ಕಪಕ್ಕದವರು ಒಂದು ರೀತಿ ಹುಚ್ಚರನ್ನು ನೋಡುವ ಹಾಗೆ ನೋಡುತ್ತಿದ್ದರು. ಒಂದೆರೆಡು ಮಂದಿ ತಮ್ಮ ಮನೆಗೆ ನ್ಯೂಸ್ ಪೇಪರ್ ಹಾಕಿಸಿಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದರು. ಇಲ್ಲಿಯೇ ಬಂದು ಓದಿ ಹೋದರಾಯಿತು ಎಂದುಕೊಂಡು. ಅವರು ಬಂದು ಕೇಳಿದಾಗ ನನಗೂ ಇಲ್ಲ ಎನ್ನಲು ಸಾಧ್ಯವಿರುತ್ತಿರಲಿಲ್ಲ.
ವಾರವಿಡೀ ಕೆಲಸಕ್ಕೆ ಹೋಗುವ ತರಾತುರಿ. ಸಿಗುತ್ತಿದ್ದ ಒಂದೇ ಒಂದು ದಿನದ ಬಿಡುವು ಭಾನುವಾರ. ಭಾನುವಾರದಂದು ನಾ ಮಾಡುತ್ತಿದ್ದ ಮೊಟ್ಟ ಮೊದಲ ಕೆಲಸವೇ ಲೈಬ್ರರಿಗೆ ಹೋಗಿ ಅಲ್ಲೊಂದಿಷ್ಟು ಹೊತ್ತು ಪುಸ್ತಕಗಳನ್ನು, ನೋಡಿ, ಮುಟ್ಟಿ, ತಡವಿ ಕೊನೇಗೆ ಯಾವುದೋ ತುಂಬಾ ಬಿಡಲಾಗದ ಮೂರು ಪುಸ್ತಕಗಳಿಗೆ ಡೇಟ್ ಹಾಕಿಸಿಕೊಂಡು ತರುತ್ತಿದ್ದದ್ದು. ಅಷ್ಟಕ್ಕೂ ಡೇಟ್ ಹಾಕಿಸಿಕೊಂಡು ಬರುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಕಾರಣ ನಾಲ್ಕೈದು ದಿನಗಳೊಳಗಾಗಿಯೇ ಅವು ಲೈಬ್ರರಿಗೆ ಮರಳಿಬಿಡುತ್ತಿದ್ದವು. ಮತ್ತೆ ಹೊಸಪುಸ್ತಕಗಳು ಮನೆ ಸೇರುತ್ತಿದ್ದವು. ಇದೊಂದು ಮಾತ್ರ ಯಾವಾಗಲೂ ಹೀಗೆ ನಡೆಯುತ್ತಿತ್ತು. ಹಾಗಾಗಿ ಲೈಬ್ರೇರಿಯನ್ನೂ ಮೂರು ಕೊಡೋ ಜಾಗದಲ್ಲಿ ನಾಲ್ಕು, ಐದು ಪುಸ್ತಕಗಳನ್ನೂ ಕೊಟ್ಟು ಕಳಿಸಿಬಿಡುತ್ತಿದ್ದ. ಭಾನುವಾರ ಬಂತೆಂದರೆ ಪೂರ್ತಿ ಎಲ್ಲ ಪೇಪರ್ರುಗಳ ಅಡಿಶನಲ್ಸ್ ಗಳನ್ನು ಓದುವುದರಲ್ಲೇ ಮುಗಿಯುತ್ತಿತ್ತು. ಯಾವುದನ್ನು ಬೇಕಾದರೂ ತಪ್ಪಿಸಿ ಬಿಡುತ್ತಿದ್ದೆನೇನೋ ಆದರೆ ಇದನ್ನು ಬಿಡುವುದು ಸಾಧ್ಯವಿರುತ್ತಿರಲಿಲ್ಲ. ಹಾಗೆ ಲೋಕದ ಅರಿವಿಲ್ಲದೆ ಓದುತ್ತಾ ಕಾಲ ಕಳೆದುಬಿಡುವುದೂ ಒಂಥರಾ ಸುಖ.
ಈಗ ಇವೆಲ್ಲಾ ನೆನಪುಗಳೂ ನನಗೇ ಒಂದು ನಮೂನಿ ದಂತಕಥೆಗಳಂತೆ ಕಾಣಿಸುತ್ತವೆ. ಕಾರಣ ಮದುವೆ, ಸಂಸಾರ, ಮಕ್ಕಳು, ಕೆಲಸ… ಒಟ್ಟಾರೆ ಧಾವಂತದ ಈ ಬದುಕಿನ ನಡುವೆ ಓದುವ ಸುಖ ಕಳೆದುಹೋಗಿದೆ. ಸಿಗುವ ಸಣ್ಣ ಸಣ್ಣ ಸಮಯದ ತುಣುಕುಗಳನ್ನು ಜೋಡಿಸಿಕೊಂಡು ಒಂದೊಂದೇ ಪುಸ್ತಕವನ್ನು ಪ್ರೀತಿಯಿಂದ ಮುಗಿಸಬೇಕಾಗಿ ಬರುತ್ತದೆ. ಆದರೆ ಓದುವ ಪ್ರೀತಿ ಇನ್ನೂ ಬತ್ತಿಲ್ಲ, ಸ್ವಲ್ಪವೂ ಸೊರಗಿಲ್ಲ, ಬದಲಿಗೆ ದುಪ್ಪಟ್ಟಾಗಿದೆ ಎನ್ನುವುದೇ ಖುಷಿಯ ವಿಚಾರ.
ನಾವೆಲ್ಲಾ ಓದಿನ ಬಗ್ಗೆ ಚರ್ಚಿಸುತ್ತಾ, ಓದಿನ ಸುಖಕ್ಕಾಗಿ ಪುಸ್ತಕಗಳ ಕನಸುತ್ತಾ ಕೂತಿರುವಾಗ ನಮ್ಮ ಮಕ್ಕಳು ಅದಕ್ಕಿಂತ ಭಿನ್ನವಾಗಿ ಬೆಳೆಯುತ್ತಿದ್ದಾರೆ. ಆದರೆ ಆ ಭಿನ್ನತೆ ನಮ್ಮಲ್ಲಿ ಆತಂಕ ಹುಟ್ಟಿಸುತ್ತಿದೆ. ಮಕ್ಕಳಿಗೀಗ ಪುಸ್ತಕಗಳು ಬೇಕಿಲ್ಲ. ದೃಷ್ಯ ಮಾಧ್ಯಮದ ಎದುರು ಸಪ್ಪಗೆ ಕಾಣುವ ಪುಸ್ತಕಗಳನ್ನು ಅವರು ಮೂಸುವುದೇ ಇಲ್ಲ. ಡಿಜಿಟಲ್ ಲೈಬ್ರರಿ, ಇ ಬುಕ್ಸ್… ಹೀಗೆ ಎಲ್ಲವೂ ಮೊಬೈಲು, ಕಂಪ್ಯೂಟರಿನ ಮುಂದೆಯೇ ನಡೆಯಬೇಕು. ಅವರಿಗಾಗಿ ಕೂಡಿಟ್ಟ ಪುಸ್ತಕಗಳು, ಇಟ್ಟಲ್ಲೇ ಮುಲುಗುತ್ತವೆ. ಆದರೆ ಬುದ್ಧಿ ಮತ್ತು ಮೆದುಳಿಗೆ ಪುಸ್ತಕಕ್ಕಿಂತ ದೊಡ್ಡ ಆಹಾರವಿಲ್ಲ ಮತ್ತು ಕಣ್ಣಿಗೂ ಒಳ್ಳೆಯದು. ಇದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎನ್ನುವುದೇ ಚಿಂತೆ.
ಆದರೆ ನನ್ನ ತರಗತಿಯಲ್ಲಿ ಒಬ್ಬ ಹುಡುಗನಿದ್ದಾನೆ. ಬಹಳಾ ಚೂಟಿ, ತರಲೆ, ಕಿತಾಪತಿ, ತುಂಬಾ ಬುದ್ಧಿವಂತ ಮೇಲಾಗಿ ಕವಿ ಕತೆಗಾರ. ತುಂಬಾ ಬಡತನವಿರುವ ಮನೆಯಿಂದ ಅವ ಶಾಲೆಗೆ ಬರುತ್ತಾನೆ. ಆದರೆ ಪುಸ್ತಗಳ ಬಗ್ಗೆ ಅವನಿಗೆ ಅಪಾರ ಪ್ರೀತಿ. ಎಲ್ಲೇ ಪುಸ್ತಕ ಸಿಕ್ಕರೂ ಅವನಿಗದು ಬೇಕು. ತನ್ನ ಓರಗೆಯವರಿಗಿಂತಲೂ ಹೆಚ್ಚಿನ ಜ್ಞಾನ ಅವನದು. ಅವನಿಗೆ ಆಗಾಗ ಒಂದಷ್ಟು ಪುಸ್ತಕಗಳನ್ನು ಕೊಡುತ್ತಿರುತ್ತೇನೆ. ಕಳೆದ ಬಾರಿ The magic of the lost temple ಎನ್ನುವ ಸುಧಾಮೂರ್ತಿಯವರ ಒಂದು ಪುಸ್ತಕ ಕೊಟ್ಟಿದ್ದೆ. ಅವನಿನ್ನೂ ನನಗೆ ಮರಳಿಸಿಲ್ಲ. ಒಂದುವೇಳೆ ಕೊಡದಿದ್ದರೂ ತೊಂದರೆ ಏನಿಲ್ಲ. ನನಗೆ ಗೊತ್ತು ಅದನ್ನವನು ಜೀವನಪರ್ಯಂತ ನನಗಿಂತಲೂ ಜೋಪಾನವಾಗಿ ಇಟ್ಟುಕೊಂಡಿರುತ್ತಾನೆ ಎಂದು.
*************************************************************
–ಆಶಾಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ರುಚಿ ಕಟ್ಟಿದ ಅಂಕಣ, ಓದು ಜಗತ್ತಿನ ಅನುಭವದ ನಡುವೆ ನಮಗೂ ಅಡ್ಡಾಡಿದ ಹಾಗಾಯ್ತು.
ಅಭಿನಂದನೆಗಳು ಆಶಾ ಅವರೇ.
ಆಶಾ…ಯಾವುದೇ ವಿಷಯವನ್ನು ಸರಾಗವಾಗಿ ಬರೆಯುವ ನಿನ್ನ ಪ್ರತಿಭೆಗೆ ಶರಣು. ಬರೆಯುತ್ತಿ ರು
ಥ್ಯಾಂಕ್ಯೂ ಅಕ್ಕ…
ಆಶಾ..ಬಹಳ ಆಪ್ತ ಬರಹ. ನೀವು ಯಾವುದೇ ವಿಷಯವನ್ನೂ ಸುಂದರವಾಗಿ ಅಕ್ಷರದ ಕುಸುರಿಯಲ್ಲಿ ತಂದಿಡಬಲ್ಲಿರಿ.
ಥ್ಯಾಂಕ್ಯೂ ಪೂರ್ಣಿಮಾ
ಚಂದದ ಬರಹ ಆಶಾ ಜೀ
ಚೆನ್ನಾಗಿದೆ ಆಶಾ… ಬಾಲ್ಯವ ಸವಿದಂತೆ ಮತ್ತೆ..
ಎಲ್ಲರಿಗೂ ಧನ್ಯವಾದಗಳು