ಕಥೆ
ಒಂದು ಲೋಟ ಗಂಜಿ
ಟಿ.ಎಸ್.ಶ್ರವಣಕುಮಾರಿ
ಶುರುವಾಗಿದ್ದು ಹೀಗೆ… ಸಾವಿತ್ರಿಯ ಮಗಳು ಜಯಲಕ್ಷ್ಮಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಯನ್ನು ಸೇರಿ ಎರಡು ದಿನವಾಗಿತ್ತು. ಹೆದರುವಂತದೇನಲ್ಲ, ಚೊಚ್ಚಲ ಹೆರಿಗೆ. ಆದರೆ ಸ್ವಲ್ಪವೇನೂ, ಸ್ವಲ್ಪ ಜಾಸ್ತಿಯೇ ನೋವು ತಿನ್ನುತ್ತಿದ್ದರೂ ಇನ್ನೂ ಹೆರಿಗೆಯಾಗಿರಲಿಲ್ಲ. ಸಾವಿತ್ರಿ, ಮೊನ್ನೆ ಬೆಳಗ್ಗೆ ಬಂದಿದ್ದವಳು ರಾತ್ರಿಯೆಲ್ಲಾ ಆಸ್ಪತ್ರೆಯ ಕಾರಿಡಾರಿನಲ್ಲೇ ತೂಕಡಿಸುತ್ತಾ ಕಾಯುತ್ತಾ ಕುಳಿತಿದ್ದಳು. ಆಸ್ಪತ್ರೆಗೆ ಮನೆ ಸ್ವಲ್ಪ ದೂರವೇ. ಗಂಡನಿಗೆ ಆಗುಂಬೆಯ ಟೋಲ್ಗೇಟಿನಲ್ಲಿ ಕೆಲಸ. ಬರುವುದು ವಾರಕ್ಕೊಂದು ಬಾರಿಯೇ. ನಿನ್ನೆ ಮತ್ತು ಇಂದು ಬೆಳಗ್ಗೆ ಒಂದು ಘಳಿಗೆ ಮನೆಗೆ ಹೋಗಿ ಸ್ನಾನ ಮಾಡಿ, ಹೊಟ್ಟೆಗಿಷ್ಟು ಹಾಕಿಕೊಂಡು ಜಯಲಕ್ಷ್ಮಿಗಿಷ್ಟು ಬಿಸಿನೀರು, ಜೀರಿಗೆ ಕಷಾಯವನ್ನು, ಉಳಿದಿದ್ದ ರಾತ್ರಿಯ ಹಾಲನ್ನೇ ಹಾಕಿ ಒಂದು ಲೋಟ ಗಂಜಿಯನ್ನು ಕಾಸಿಕೊಂಡಿದ್ದಳು. ಮಧ್ಯಾಹ್ನಕ್ಕೂ ಹುರಿಟ್ಟನ್ನೇ ತಿನ್ನುವಂತೆ ಮಕ್ಕಳಿಗೆ ಹೇಳಿ ಬಂದಿದ್ದಳು. ನೋವಿನಿಂದ ನರಳುತ್ತಿದ್ದ ಜಯಲಕ್ಷ್ಮಿಗೂ, ಆತಂಕದಿಂದ ಕಾಯುತ್ತಲೇ ಕುಳಿತಿದ್ದ ಸಾವಿತ್ರಿಗೂ ಹೆರಿಗೆಯಾಗಿ ಮಗು ಹೊರಬಂದರೆ ಸಾಕೆನ್ನಿಸಿತ್ತು. ಇವತ್ತಂತೂ ಜಯಲಕ್ಷ್ಮಿಗೆ ಹೊಟ್ಟೆಗೇನೂ ಸೇರದೆ ಅವಳು ಗಂಜಿಯನ್ನೂ ಕುಡಿಯಲಿಲ್ಲ. ಕಷ್ಟಪಟ್ಟು ಒಂದಿಷ್ಟು ಜೀರಿಗೆ ಕಷಾಯವನ್ನು ಕುಡಿಸಿದ್ದಾಯಿತು. ಮನೆಯಲ್ಲೇ ಐದು ಹೆರಿಗೆ, ಅದರಲ್ಲೆರಡು ಸಾವು ಕಂಡಿದ್ದ ಸಾವಿತ್ರಿಗೆ ಈಗ ಮಗಳನ್ನು ಮನೆಯಲ್ಲಿಟ್ಟುಕೊಂಡು ಹೆರಿಗೆ ಮಾಡಿಸುವಷ್ಟು ಧೈರ್ಯವಿಲ್ಲ. ಆಗ ಸಿಗುತ್ತಿದ್ದ ಮಿಡ್‌ವೈಫ್ ಗಂಗಮ್ಮನಿಗೂ ಈಗ ವಿಪರೀತ ವಯಸ್ಸಾಗಿ ಅವಳು ಹೆರಿಗೆ ಮಾಡಿಸುವುದನ್ನು ಬಿಟ್ಟು ಏಳೆಂಟು ವರ್ಷಗಳೇ ಆಗಿವೆ. ಇನ್ಯಾರ ಮೇಲೂ ಸಾವಿತ್ರಿಗೆ ನಂಬಿಕೆಯಿಲ್ಲ. ವಿಧಿಯಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದಾಗಿದೆ.
ದೇವರಾದರೂ ಪ್ರತ್ಯಕ್ಷವಾಗಬಹುದೇನೋ, ಡಾಕ್ಟರ ಮುಖವಂತೂ ಎರಡು ದಿನದಿಂದಲೂ ಕಂಡಿರಲಿಲ್ಲ. ರಜೆಯ ಮೇಲಿದ್ದಾರಂತೆ. ಇರುವ ಇನ್ನೊಬ್ಬ ಡಾಕ್ಟರಿಗೆ ಪುರಸೊತ್ತೇ ಇಲ್ಲ. ಲೇಬರ್ ವಾರ್ಡಿಗಷ್ಟೇ ಹೋಗುತ್ತಿದ್ದಾರೆ. ಮಿಕ್ಕ ಕಾರುಬಾರೆಲ್ಲಾ ದಾದಿಯರದೇ. ಯಾವಾಗಲೋ ಇಣುಕಿ ಹೋಗುವ ಈ ದಾದಿಯರು ಬಂದು ನೋಡಿದಂತೆ ಮಾಡಿ ಹೋಗುತ್ತಿದ್ದಾರೆಯೇ ವಿನಃ ಯಾವ ವಿವರವನ್ನೂ ಹೇಳುತ್ತಿಲ್ಲ. ಮಗುವಿಗೆ ಹೊಟ್ಟೆಯಲ್ಲೇ ಏನಾದರೂ ಆಗಿಬಿಟ್ಟರೆ ಎನ್ನುವ ಆತಂಕ ಸಾವಿತ್ರಿಗೆ. ಏನಾದರೂ ಹೆಚ್ಚು ಕಡಿಮೆಯಾದರೆ ಬೀಗಿತ್ತಿ ತನ್ನನ್ನು ಸಂತೆಯಲ್ಲಿಟ್ಟು ಹರಾಜು ಹಾಕಿಬಿಡುತ್ತಾಳೆ ಎನ್ನುವ ಭಯದಲ್ಲಿ ವಾರ್ಡಿನಲ್ಲಿ ಓಡಾಡುತ್ತಿದ್ದ ದಾದಿಯರನ್ನೆಲ್ಲಾ ವಿಚಾರಿಸುತ್ತಿದ್ದರೂ ಇವಳಿಗಿರುವ ಆತಂಕ ಅವರಿಗೇಕೆ?! ʻಇನ್ನೂ ತಡ ಆಗ್ಬಹುದು, ಡಾಕ್ಟರು ಬಂದು ನೋಡಿ ಹೇಳ್ತಾರೆʼ ಎನ್ನುತ್ತಾ ಇವಳ ಮುಖವನ್ನೂ ನೇರವಾಗಿ ನೋಡದೆ ಮರದ ಬೊಂಬೆಗಳಂತೆ ಓಡಾಡುತ್ತಿದ್ದಾರೆ. ಇವಳ ನಂತರ ಬಂದು ಅಕ್ಕ ಪಕ್ಕದ ಹಾಸಿಗೆಯಲ್ಲಿ ಮಲಗಿದವರಿಗೂ ಹೆರಿಗೆಗಳಾಗಿ ಒಂದಿಬ್ಬರು ಮನೆಗೂ ಹೋಗಿಯಾಗಿದೆ. ಇಂದು ಬೆಳಗ್ಗೆ ಪಕ್ಕದ ಬೆಡ್ಡಿಗೆ ಆಯನೂರಿನ ಕಡೆಯ ರೈತ ದಂಪತಿಗಳು ತಮ್ಮ ಮಗಳು ಮಾದೇವಿಯನ್ನು ಸೇರಿಸಿದ್ದಾರೆ. ಅವಳದ್ದೂ ಚೊಚ್ಚಲ ಹೆರಿಗೆಯೇ. ದಿನವಾಗಿದೆ, ನೋವು ಶುರುವಾಗಿಲ್ಲ; ಇಬ್ಬರೂ ಕೂತು ಒಂದಷ್ಟು ಕಷ್ಟ ಸುಖ ಹಂಚಿಕೊಂಡಿದ್ದಾಯಿತು.
ಅಂತೂ ಇಂತೂ ರಜೆಯಿಂದ ವಾಪಸ್ಸು ಬಂದ ಡಾಕ್ಟರು ಮಧ್ಯಾಹ್ನ ಎರಡು ಗಂಟೆಗೆ ಊಟ ಮುಗಿಸಿ ಆರಾಮದಲ್ಲಿ ಬಂದು ಕೇಸ್ ಶೀಟನ್ನು ನೋಡಿ ಮೊನ್ನೆ ಬೆಳಗ್ಗೆಯಿಂದ ನೋವು ಬರುತ್ತಿದ್ದರೂ ಯಾಕೆ ಹೆರಿಗೆಯಾಗಿಲ್ಲ ಎನ್ನುವ ಸಂಶಯದಲ್ಲಿ ಕೇಸ್ ಶೀಟನ್ನು ಬರೆದ ದಾದಿಯನ್ನು ಕೇಳೋಣವೆಂದರೆ ಅವಳು ನಾಪತ್ತೆ. ಪರೀಕ್ಷಿಸಿದವರೇ ಸ್ವಲ್ಪ ಆತಂಕದಿಂದಲೇ ಪಕ್ಕದಲ್ಲಿದ್ದ ದಾದಿಗೆ ಕೂಡಲೇ ಲೇಬರ್ ವಾರ್ಡಿಗೆ ಶಿಫ್ಟ್ ಮಾಡಲು ಹೇಳಿ ಸಾವಿತ್ರಿಯ ಕಡೆ ತಿರುಗಿ ಕೂಡಾ ನೋಡದೆ ಹೊರಟುಹೋದರು. ಅವರು ಹೋದ ರೀತಿಯಿಂದಲೇ ಅವಳಿಗೆ ಆತಂಕ ಶುರುವಾಯಿತು. ಹಿಡಿದು ನಿಲ್ಲಿಸಿ ಕೇಳಲು ಅವಳಿಂದ ಸಾಧ್ಯವೇ! ಮಗಳ ಹಿಂದೆಯೇ ಲೇಬರ್ ವಾರ್ಡಿನ ತನಕ ಹಿಂಬಾಲಿಸಿ, ಅವಳ ಮುಖಕ್ಕೇ ಬಾಗಿಲು ಹಾಕಿ ಒಳಸೇರಿದ ಮೇಲೆ ಕಾಯುವುದು ಬಿಟ್ಟು ಬೇರೆ ದಾರಿಯಿಲ್ಲದೆ ಮುಚ್ಚಿದ ಬಾಗಿಲನ್ನೇ ನೋಡುತ್ತಾ ಕಾರಿಡಾರಿನಲ್ಲೇ ನಿಂತಳು.
ಕಾಯುತ್ತಾ ನಿಂತವಳಿಗೆ ನಿಮಿಷಗಳು ಗಂಟೆಗಳಾಗುತ್ತಿವೆ. ಎಷ್ಟೋ ಹೊತ್ತಿನ ಮೇಲೆ ಹೊರಬಂದ ದಾದಿ ಒಂದು ಹಾಳೆಯನ್ನು ತಂದು ಅದರ ಮೇಲೆ ಸಹಿಹಾಕುವಂತೆ ಸಾವಿತ್ರಿಯ ಮುಖಕ್ಕೆ ಹಿಡಿದಳು. ಭಯದಿಂದಲೇ “ಏನಾಗಿದ್ಯಮ್ಮಾ? ಹೇಗಿದಾಳೆ ಮಗಳು” ಎಂದರೆ ಆ ದಾದಿಗೆ ಇಂತವರೆಷ್ಟೋ… “ಸರೀಗೆ ಗೊತ್ತಿಲ್ಲ, ಆಪರೇಶನ್ ಮಾಡ್ಬೇಕಾಗ್ಬೋದು ಅಂತಿದ್ರು ಡಾಕ್ಟ್ರು. ನೀನಿಲ್ಲಿ ರುಜು ಹಾಕಮ್ಮ” ಎನ್ನುತ್ತಾ ಪೆನ್ನನ್ನು ಕೊಟ್ಟಳು. “ಯಾಕಿದು? ನಂಗೆ ರುಜು ಹಾಕಕ್ಕೆ ಬರಲ್ಲ, ಬರೀ ಹೆಸರು ಬರೆಯಕ್ಕೆ ಬರತ್ತೆ” ಅಂದಳು ಸಾವಿತ್ರಿ. “ಅದನ್ನೇ ಬರಿ. ಆಪರೇಶನ್ ಮಾಡಕ್ಕೆ ಒಪ್ಗೆ ಇದೆ ಅಂತ ಬರ‍್ದಿದೆ ಇದ್ರಲ್ಲಿ” ಎನ್ನುತ್ತಾ ನಿರ್ಲಿಪ್ತಳಾಗಿ ಆ ಹಾಳೆಯನ್ನು ತೆಗೆದುಕೊಂಡು ಒಳಹೋದಳು. ಇತ್ತ ಸಾವಿತ್ರಿಗೆ ಇನ್ನಷ್ಟು ಹೆದರಿಕೆ, ಚಿಂತೆ ಶುರುವಾಗಿ ಕೈಕಾಲು ನಡುಗತೊಡಗಿತು. ಎಷ್ಟೋ ಹೊತ್ತಾಯಿತು… ಕಾದು ಕಾದು ಕಣ್ಣು ಸೋಲುವಾಗ ಮಗುವನ್ನೆತ್ತಿಕೊಂಡು ಹೊರಬಂದ ದಾದಿ “ಗಂಡು ಮಗು. ಐವತ್ರೂಪಾಯ್ ತತ್ತಾ, ತೋರಿಸ್ತೀನಿ” ಕೈಚಾಚಿದಳು. ಅರ್ಥವಾಗದೆ ಕಣ್ಕಣ್ಣು ಬಿಟ್ಟ ಸಾವಿತ್ರಿಯ ಸೀರೆಯ ಗಂಟಿನಲ್ಲಿಟ್ಟುಕೊಂಡಿದ್ದ ಐದು, ಹತ್ತು ರೂಪಾಯಿಗಳನ್ನು ಸೇರಿಸಿದರೆ ಬರೀ ನಲವತ್ತು ರೂಪಾಯಿ ಆಯಿತು. “ಏನು ದರ್ವೇಸಿಗಳೋ. ಹೆರಿಗೆಗೆ ಅಂತ ಬಂದವ್ರಿಗೆ ಒಂದಿಷ್ಟು ದುಡ್ಡಿಟ್ಕಂಡು ಬರಕ್ಕೆ ಗೊತ್ತಾಗಲ್ವಾ. ಏನು ಅಪ್ಪನ ಮನೆ, ಈಗ ಡಾಕ್ಟ್ರಿಗೆ ಐನೂರು ರೂಪಾಯಾದ್ರೂ ಕೊಡ್ಬೇಕು, ಆಪ್ರೇಶನ್ ಕೇಸ್ ಬೇರೆ. ಅಲ್ಲಿ ಓಟಿನಲ್ಲಿ ಇದ್ದವ್ರಿಗೆಲ್ಲಾ ಇಪ್ಪತ್ತು, ಮೂವತ್ತು ಕೊಡ್ಬೇಕು. ಅದ್ಹೆಂಗೆ ಮಾಡ್ತೀಯೋ ನೋಡು. ಸರಿ, ಈಗ ನಂಗೆ ನಲ್ವತ್ತನ್ನೇ ಕೊಡು ಹೋಗ್ಲಿ. ಮಿಕ್ಕವ್ರಿಗೆ ಕೊಡಕ್ಕೆ ಎಲ್ಲಾದ್ರೂ ಹೋಗಿ ದುಡ್ಡು ತಗೊಂಡು ಬಂದ್ಬಿಡು. ಆಯಾನೂ ಸೇರಿ ಇನ್ನೂ ಮೂರು ಜನ ಇದಾರೆ” ಎನ್ನುತ್ತಾ ದುಡ್ಡು ತೆಗೆದುಕೊಂಡು ಮಗುವಿನ ಮುಖವನ್ನು ತೋರಿಸಿದಳು. ಮೊಮ್ಮಗುವಿನ ಮುಖ ನೋಡಿದ ತಕ್ಷಣ ಎಲ್ಲಾ ಮರೆತ ಸಾವಿತ್ರಿಯ ಮುಖವರಳಿತು. ಎತ್ತಿಕೊಳ್ಳಲು ಕೈಚಾಚಿದರೆ ಮುಟ್ಟಕ್ಕೂ ಬಿಡದೆ “ದುಡ್ಡು ತೊಗೊಂಡು ಬಾ ಅಂದ್ನಲ್ಲಾ” ಎನ್ನುತ್ತಾ ಒಳಹೊರಟಳು. “ಅಮ್ಮಾ… ಮಗಳು ಹೇಗಿದಾಳಮ್ಮಾ?” ಕರೆದು ಕೇಳಿದಳು. “ಹುಷಾರಾಗಿದಾಳೆ. ಅವ್ಳಿಗೆ ಕೊಡಕ್ಕೆ ಗಂಜೀನೋ, ಕಾಫೀನೋ ತೊಗೊಂಡ್ಬಾ. ಇನ್ನೊಂದು ಗಂಟೇಲಿ ಬೆಡ್ಡಿಗೆ ಹಾಕ್ತಾರೆ” ಎಂದವಳು ಮುಂದಿನ ಮಾತಿಗೆ ಅವಕಾಶವಿಲ್ಲದ ಹಾಗೆ ಒಳಹೋಗಿ ಬಾಗಿಲೆಳೆದುಕೊಂಡಳು.
ಏನು ಮಾಡಬೇಕೆಂದು ತೋಚದೆ ಯೋಚಿಸುತ್ತಾ ಐದು ನಿಮಿಷ ಸುಮ್ಮನೆ ಅಲ್ಲಿದ್ದ ಬೆಂಚಿನ ಮೇಲೆ ಕುಳಿತಳು. ʻಬೆಳಗ್ಗೆ ತಂದಿದ್ದ ಗಂಜಿ ಹಳಸಿ ವಾಸನೆ ಬಂದಿದೆ, ಬಾಣಂತಿಗೆ ಅದನ್ನು ಕೊಡಲು ಸಾಧ್ಯವೇ ಇಲ್ಲ. ನಡೆದುಕೊಂಡು, ಮನೆಗೆ ಹೋಗಿ, ಗಂಜಿ ಮಾಡಿಕೊಂಡು ತರಲು ಕಡೇ ಪಕ್ಷ ಎರಡು ಗಂಟೆಯಾದರೂ ಬೇಕು. ಅಷ್ಟರೊಳಗೆ ಬೆಡ್‌ಗೆ ಹಾಕಿಬಿಟ್ಟರೆ! ಅವ್ಳು ಬರೋ ಹೊತ್ತಿಗೆ ನಾನಿಲ್ದೇ ಹೋದ್ರೆ! ಪಾಪ, ಜಯ ಹೊಟ್ಟೆಗೇನಾದರೂ ಹಾಕಿಕೊಂಡು ಎರಡು ದಿನವೇ ಆಗಿದೆ. ʻಹಡ್ದ ಹೊಟ್ಟೆಗೆ ಹೇಲು ತಿನ್ನೋಷ್ಟು ಹಸ್ವುʼ ಅಂತಾರೆ. ಮೊದ್ಲು ಅವ್ಳಿಗೆ ಗಂಜಿ ತಂದುಕೊಡ್ಬೇಕಲ್ಲʼ ಎಂದುಕೊಳ್ಳುತ್ತಿರುವಾಗ, ದಿನವೂ ಅಡುಗೆ ಕೆಲಸಕ್ಕೆ ಹೋಗುತ್ತಿರುವ ಪದ್ದಮ್ಮನ ಮನೆ ಇಲ್ಲಿಗೆ ಹತ್ತು ನಿಮಿಷದ ದಾರಿ. ಹೋಗಿ ವಿಷಯ ಹೇಳಿ ಅಲ್ಲೇ ಒಂದು ಲೋಟ ಗಂಜಿ ಮಾಡಿಕೊಂಡು, ಸ್ವಲ್ಪ ದುಡ್ಡನ್ನೂ ಕೇಳಿ ತೆಗೆದುಕೊಂಡು ಬರಬಹುದೇನೋ ಅನ್ನಿಸಿತು. ʻಅದೇ ಸರಿʼ ಅನ್ನಿಸಿ ಇನ್ನು ತಡಮಾಡದೆ ಸರಸರನೆ ಪದ್ದಮ್ಮನ ಮನೆಕಡೆ ಹೆಜ್ಜೆ ಹಾಕಿದಳು. ಇವಳದೃಷ್ಟಕ್ಕೆ ಪದ್ದಮ್ಮ, ಡೆಲ್ಲಿಯಿಂದ ಬಂದಿದ್ದ ಅವರ ನಾದಿನಿ ಸೀತಮ್ಮನೊಂದಿಗೆ ಬೆಳಗ್ಗೆಯೇ ಯಾರದೋ ಮನೆಗೆ ಊಟಕ್ಕೆ ಹೋಗಿದ್ದರಂತೆ, ಇನ್ನೂ ಬಂದಿರಲಿಲ್ಲ. ಅಲ್ಲಿ ಸುತ್ತುಕೆಲಸಕ್ಕಿದ್ದ ನಟರಾಜ ಹಾಗಂದ. ನಟರಾಜನ ಹತ್ತಿರ ಎಲ್ಲವನ್ನೂ ಹೇಳಿ, “ಒಂದು ಲೋಟ ಗಂಜಿ ಮಾಡ್ಕಂಡು ಹೋಗ್ತಿನಿ. ಪದ್ದಮ್ಮ ಬಂದ್ಮೇಲೆ ಹಿಂಗಾಯ್ತು ಅಂತ್ಹೇಳ್ಬಿಡೋ. ದುಡ್ಡಿಗೇನ್ಮಾಡೋದೋ” ಎಂದು ಹೇಳುತ್ತಲೇ ಒಲೆಹೊತ್ತಿಸಿ ಗಂಜಿಯನ್ನು ಕಾಸಿಕೊಂಡು ತನ್ನೊಂದಿಗೆ ತಂದಿದ್ದ ಟಿಫಿನ್ ಕ್ಯಾರಿಯರನ್ನು ತೊಳೆದು ಅದರಲ್ಲಿ ಗಂಜಿಯನ್ನು, ಕಾಸಿದ ನೀರನ್ನು ತಿರುಪಿನ ಚಂಬಿನಲ್ಲೂ ತುಂಬಿಕೊಂಡಳು.
ಹೊರಗೆ ಪದ್ದಮ್ಮನ ಮಾತು ಕೇಳಿಸಿತು. ʻಸಧ್ಯ! ಬಂದ್ರಲ್ಲ, ದುಡ್ನೂ ಕೇಳಬಹುದುʼ ಅನ್ನಿಸಿ ಸ್ವಲ್ಪ ನಿರಾಳವಾಯಿತು. ನಟರಾಜ ಹೊರಗೆ ಹೇಳಿದನೇನೋ, “ಹೌದಾ, ಎಂಥಾ ಮಗ್ವಾಯ್ತೇ, ಮಗೂ, ಬಾಣಂತಿ ಚೆನ್ನಾಗಿದಾರೇನೇ” ಎಂದು ಕೇಳುತ್ತಾ ಪದ್ದಮ್ಮ ಅಡುಗೆಮನೆಗೇ ಬಂದಳು. ಹಿಂದೆಯೇ ಕಾಳಿಯಂತೆ ಬಂದ ಸೀತಮ್ಮ “ನಿಂಗ್ಯಾರೆ ಇಷ್ಟು ಪಾರುಪತ್ಯ ಕೊಟ್ಟೋರು? ಏನು, ನಿನ್ನ ಮನಿ ಅನ್ನೋಂಗೆ ಬಂದು ಇಲ್ಲಿ ಗಂಜಿ ಕಾಯಿಸ್ಕತಿದೀಯಲ್ಲ. ಅದೆಷ್ಟು ಸ್ವತಂತ್ರ ನಿಂಗೆ” ಎನ್ನುತ್ತಾ ಸಾವಿತ್ರಿಯ ಮೇಲೆ ವಡವಡ ಬೈಗಳ ಪ್ರಹಾರವನ್ನೇ ಶುರುಮಾಡಿದಳು. ಜೊತೆಗೆ ವಯಸ್ಸಿನಲ್ಲಿ ತನಗಿಂತ ಚಿಕ್ಕವಳಾಗಿದ್ದ ಅತ್ತಿಗೆಯನ್ನೂ ಅಟಕಾಯಿಸಿಕೊಂಡು “ಏನ್ ಪದ್ದಾ, ಕೆಲಸದವ್ರಿಗೆ ಇಷ್ಟು ಸದ್ರ ಕೊಟ್ಟಿದೀಯಾ. ನೀನ್ ಮನೇಲಿ ಇಲ್ದಿರೋವಾಗ ಹಾಯಾಗ್ಬಂದು ಯಾರೇನು ಬೇಕಾರೂ ಮಾಡ್ಕಂಡು ಹೋಗ್ಬೋದಾ? ನಿಂಗೂ ಬುದ್ಧಿ ಇಲ್ಲ, ನಿನ್ಗಂಡಂಗೂ ಇಲ್ಲ. ಮನೇವ್ರಿಲ್ದಿದ್ದಾಗ ಹೇಳ್ದೆ, ಕೇಳ್ದೆ ಮನೇ ಸಾಮಾನು, ಸರಂಜಾಮು ಮುಟ್ಟೂದೂಂದ್ರೇನು? ಇಬ್ರೂ ಕೂಲಿಯವ್ರನ್ನ ತಲೆ ಮೇಲೆ ಕೂರಿಸ್ಕಂತೀರಿ. ಯಾರ‍್ಯಾರನ್ನ ಎಲ್ಲಿಟ್ಟಿರ‍್ಬೇಕೋ ಅಲ್ಲೇ ಇಟ್ಟಿರ‍್ಬೆಕು. ಇದು ತೀರಾ ಅತ್ಯಾಯ್ತು” ಇಬ್ಬರನ್ನೂ ವಾಚಾಮಗೋಚರ ಬೈಯುತ್ತಾ ನಿಂತಳು. ಪದ್ದಮ್ಮ ಸ್ವಭಾವತಃ ಸರಳ ಮನಸ್ಸಿನವಳು. ಅಪರೂಪಕ್ಕೆ ಡೆಲ್ಲಿಯಿಂದ ಬಂದಿರುವ ನಾದಿನಿಯನ್ನು ಬಿಟ್ಟುಕೊಡಲಾರಳು, ಇತ್ತ ದಿನವೂ ಅಡುಗೆಗೆ ಬರುವ ಸಾವಿತ್ರಿಯನ್ನೂ ಏನೂ ಅನ್ನಲಾರಳು. ಅವಳೂ ಪೆಚ್ಚಾಗಿ ನಿಂತಳು. ಸಾವಿತ್ರಿಗಂತೂ ಎರಡು ದಿನದಿಂದ ಕಟ್ಟಿಕೊಂಡಿದ್ದ ಭಯ, ಆತಂಕ, ದುಃಖ ಎಲ್ಲವೂ ಒಟ್ಟಿಗೆ ನುಗ್ಗಿ ಕಣ್ಣಲ್ಲಿ ನೀರಾಡತೊಡಗಿತು. ಇದು ಇಷ್ಟೊಂದು ದೊಡ್ಡ ಪ್ರಮಾದವಾಗಬಹುದೆಂಬ ಅರಿವಿದ್ದರೆ ಅವಳು ತಡವಾದರೂ ಮನೆಗೇ ಹೋಗಿ ಬಂದುಬಿಡುತ್ತಿದ್ದಳೇನೋ… ಈಗೇನು ಮಾಡಲೂ ತೋಚದೆ ಎರಡು ನಿಮಿಷ ತಲೆಕೆಳಗೆ ಹಾಕಿ ಮೌನವಾಗಿ ನಿಂತಳು. ಸೀತಮ್ಮನ ಕೋಪ ಇನ್ನೂ ಇಳಿದಿರಲಿಲ್ಲ, “ಮಾಡೋದ್ ಮಾಡಿ ಹೇಗ್ ನಿಂತಿದೀಯ ನೋಡು, ಏನೂ ಗೊತ್ತಿಲ್ದೇ ಇರೋವ್ರ ಥರ, ಎಲ್ಲಿ ಹೇಗಿರ‍್ಬೇಕೋ ಅದ್ನ ಮದ್ಲು ಕಲ್ತ್ಕಾ. ನೀನಾದ್ರೂ ಪದ್ದಾ, ಈ ಥರ ಸದರ ಕೊಟ್ಯೋ ಒಳ್ಳೇದಲ್ಲ ತಿಳ್ಕಾ. ಅಮ್ಮಾ ಇರ‍್ಬೇಕಿತ್ತು, ಗೊತ್ತಾಗ್ತಿತ್ತು. ಅವ್ಳು ಅಷ್ಟು ಜತನ್ವಾಗಿ ನೋಡ್ಕಂಡಿದ್ ಮನೇನ ನೀನು ಗುಡಿಸಿಬಿಡ್ತಿದೀಯ…. ಈ ಮನೇಲಿ ಹೆಣ್ಮಕ್ಳಿಗೂ ಇಲ್ದಿರೋ ಗೌರವ ಕೂಲಿಯಾಳುಗಳ್ಗಿದೆ” ನಿಲ್ಲುತ್ತಲೇ ಇಲ್ಲ ಬೈಗಳ ಮಳೆ. ಇನ್ನೂ ಏನೇನು ಅನ್ನುತ್ತಿದ್ದಳೋ, ಅಷ್ಟರಲ್ಲಿ ಬಚ್ಚಲಿಗೆ ಹೋಗಬೇಕೆನ್ನಿಸಿತೇನೋ ಬೈದುಕೊಂಡೇ ಹಿತ್ತಲಿಗೆ ಹೋದಳು. ತಕ್ಷಣವೇ ಪದ್ದಮ್ಮ “ಅವ್ಳು ಬರೋದ್ರೊಳ್ಗೆ ಇದ್ನ ತಗಂಡು ಈಗ್ಲೇ ಜಾಗ ಖಾಲಿ ಮಾಡೆ” ಎಂದು ಸಾವಿತ್ರಿಯನ್ನು ಹೆಚ್ಚುಕಡಿಮೆ ಓಡಿಸಿದಳು. ಸಾವಿತ್ರಿಗೆ ದುಡ್ಡು ಕೇಳಲು ಅವಕಾಶವಾಗಲೇ ಇಲ್ಲ. ದಾರಿಯುದ್ದಕ್ಕೂ ಕಣ್ಣೀರಿಡುತ್ತಲೇ ʻಇಷ್ಟೊತ್ತಿಗೆ ವಾರ್ಡಿಗೆ ಹಾಕೇಬಿಟ್ಟಿರ‍್ತಾರೇನೋʼ ಎನ್ನುವ ಅತಂಕದಲ್ಲೇ ಆಸ್ಪತ್ರೆಯನ್ನು ಸೇರಿದಳು.
ಅವಳಂದುಕೊಂಡ ಹಾಗೇ ಜಯಲಕ್ಷ್ಮಿಯನ್ನು ವಾರ್ಡಿಗೆ ಹಾಕಿದ್ದರು. ಮಗುವನ್ನಿನ್ನೂ ಕರೆತಂದಿರಲಿಲ್ಲ. ತುಂಬಾ ಸುಸ್ತಾಗಿದ್ದವಳನ್ನು ನೋಡಿದ ಸಾವಿತ್ರಿಗೆ ದುಃಖ ಇಮ್ಮಡಿಸಿತು. ಗಂಜಿಯನ್ನು ಟೇಬಲ್ಲಿನ ಮೇಲಿಟ್ಟು, ಜಯಳ ತಲೆಯನ್ನು ಸವರಿ “ಹೇಗಿದೀಯೆ” ಅನ್ನುವಷ್ಟರಲ್ಲಿ ಬಂದ ನರ್ಸನ್ನು “ಮಗುವೆಲ್ಲಿ?” ಎಂದು ಕೇಳಿದಳು. “ಮಿಕ್ಕವ್ರಿಗೆ ದುಡ್ಕೊಟ್ಮೇಲೆ ಸ್ನಾನ ಮಾಡ್ಸಿ ತಂಕೊಡ್ತಾರೆ, ಅಲ್ಲೇ ಲೇಬರ್ ವಾರ್ಡಲ್ಲೇ ಅಳ್ತಾ ಇದೆ” ಎಂದು ಗಂಜಿಯನ್ನು ಕೊಡಲೂ ಬಿಡದೆ “ಡಾಕ್ಟ್ರು ಕರೀತಿದಾರೆ, ಬಾಯಿಲ್ಲಿ” ಎಂದು ಹೆಚ್ಚುಕಡಿಮೆ ಎಳೆದುಕೊಂಡಂತೇ ಹೋದಳು. ರಿಜಿಸ್ಟರಿನಲ್ಲಿ ಏನೋ ಬರೆಯುತ್ತಿದ್ದ ಡಾಕ್ಟ್ರಮ್ಮ ತಲೆಯೆತ್ತಿ “ನೀವೇ ಏನ್ರಿ ಜಯಲಕ್ಷ್ಮಿ ಕಡೇವ್ರು” ಎಂದರು ಉರಿಯುವ ಮುಖದಲ್ಲಿ “ಹೌದು ಡಾಕ್ಟ್ರೇ, ನಾನವಳ ತಾಯಿ” ಅಂದಳು ಸಾವಿತ್ರಿ. “ಅಲ್ರೀ, ಡೆಲಿವರಿ ಆಗ್ತಿದ್ದಂಗೆ ಕಣ್ತಪ್ಸಿ ಓಡೇಬಿಡೋದಾ. ಮಗು ಮಾಲೆ ಹಾಕ್ಕೊಂಡ್ಬಿಟ್ಟಿತ್ತು. ಇನ್ನು ಹತ್ನಿಮಿಷ ತಡ್ವಾಗಿದ್ರೆ ಉಸಿರುಕಟ್ಟಿ ಸತ್ತೋಗಿರೋದು. ಆಪರೇಶನ್ ಮಾಡಿ ಇಬ್ರ ಜೀವಾನೂ ಉಳ್ಸಿದೀವಿ. ಅಂತಾದ್ರಲ್ಲಿ ನಿಮ್ಗೆ ಸ್ವಲ್ಪಾನೂ ಕೃತಜ್ಞತೆ ಅನ್ನೋದಿಲ್ವಾ. ಪ್ರೈವೇಟ್ ಆಸ್ಪತ್ರೆಗೋಗಿದ್ರೆ ಐವತ್ತು-ಅರವತ್ತು ಸಾವಿರ ಆಗಿರೋದು, ಹೋಗ್ಲಿ, ನನ್ನ ಫೀಸು ಸಾವಿರ ರೂಪಾಯಿ ಕೊಡಿ” ಎಂದರು ವ್ಯಾಪಾರಸ್ತರ ಧೋರಣೆಯಲ್ಲಿ. ಕೈಮುಗಿದು ಬಿಟ್ಟಳು ಸಾವಿತ್ರಿ. “ಇದು ಗೌರ್ಮೆಂಟ್ ಆಸ್ಪತ್ರೆ, ಇಲ್ಲಿ ದುಡ್ಡು ಕೊಡ್ಬೇಕು ಅಂತ ಗೊತ್ತಿರ‍್ಲಿಲ್ಲ. ನೂರೋ, ಇನ್ನೂರೋ ಮಾಡ್ಕಳಿ, ಇವತ್ತು ದುಡ್ತಂದಿಲ್ಲ, ನಾಳೆ ಬೆಳಗ್ಗೆ ಹೆಂಗಾರ ಮಾಡಿ ಹೊಂದ್ಸಿ ತಂದ್ಕೊಡ್ತಿನಿ” ಎಂದು ಅಕ್ಷರಶಃ ಬೇಡಿಕೊಂಡಳು. “ಏನಮ್ಮಾ, ಇದೇನು ತರ‍್ಕಾರಿ ವ್ಯಾಪಾರಾನ. ಹೀಗ್ ಕೇಳ್ತೀಯಲ್ಲ” ಜೋರುಮಾಡಿದಳು ಡಾಕ್ಟ್ರಮ್ಮ. “ಇಲ್ಲ ಡಾಕ್ಟ್ರೆ, ನಾನ್ ನಾಕ್ ಮನೇಲಿ ಅಡುಗೆ ಕೆಲಸ ಮಾಡೋಳು. ಅಷ್ಟೊಂದು ದುಡ್ಡು ಎಲ್ಬರ‍್ಬೇಕು” ಮತ್ತೆ ಅಂಗಲಾಚಿದಳು. ಅಂತೂ ಇಂತೂ ಕೊಸರಿ ಕಡೆಗೆ ಡಾಕ್ಟ್ರಮ್ಮ “ಈಗ್ಲೇ ತಂಕೊಟ್ರೆ ಆರುನೂರು ರೂಪಾಯಿ, ನಾಳೆ ಬೆಳಗ್ಗೆ ಆದ್ರೆ ಏಳ್ನೂರೈವತ್ತು ತಂದ್ಕೊಡು. ಎಷ್ಟು ಕಷ್ಟ ಪಟ್ಟಿದೀನಿ ಅಂತ ನನಗ್ಗೊತ್ತು” ಎಂದು ಕಡ್ಡಿ ತುಂಡುಮಾಡಿದಳು. ಮತ್ತೇನೂ ತೋಚದೆ ಕೈಮುಗಿದು ಸಾವಿತ್ರಿ ಹೊರಬಂದಳು. ಗೊಣಗೊಣ ಎಂದುಕೊಳ್ಳುತ್ತಲೇ “ಮಾದೇವಿ ಕಡೇವ್ರು ಯಾರ್ರಿ?” ಎನ್ನುತ್ತಾ ಡಾಕ್ಟ್ರಮ್ಮ ಬಾಗಿಲ ಕಡೆ ತಿರುಗಿದಳು. ಮಾದೇವಿಯ ತಂದೆ “ಇಲ್ಲೇ ಇದೀನಿ ಡಾಕ್ಟ್ರಮ್ಮಾವ್ರೆ” ಎನ್ನುತ್ತಾ ಒಳಬಂದರು.
ವಾರ್ಡಿನ ಒಳಗೆ ಬರುವಷ್ಟರೊಳಗೆ ಇನ್ನೊಂದು ಅಧ್ವಾನವಾಗಿಹೋಗಿತ್ತು. ಡ್ರಿಪ್ಪಿನ ಕಂಬವನ್ನು ಸರಿಸುವಾಗ ದಾದಿ ಮಾಡಿದ ಅಚಾತುರ್ಯದಿಂದ ಪಕ್ಕದ ಮೇಜಿನ ಮೇಲಿಟ್ಟಿದ್ದ ಗಂಜಿಯ ಡಬ್ಬಿಗೆ ತಗುಲಿ, ಕೆಳಗೆ ಬಿದ್ದು ತಂದಿದ್ದ ಗಂಜಿಯೆಲ್ಲಾ ನೆಲದ ಮೇಲೆ ಚೆಲ್ಲಿಹೋಗಿತ್ತು. ಆಯಾಮ್ಮ ಬೈದುಕೊಳ್ಳುತ್ತಾ ನೆಲ ಒರಸುವ ಬಟ್ಟೆಯನ್ನು ಕೈಲಿಟ್ಟುಕೊಂಡು ಕಾಳಿಯಂತೆ ನಿಂತಿದ್ದಳು. ಬೀಳಿಸಿದ್ದ ದಾದಿಗೂ, ಅವಳಿಗೂ ಜಗಳ ಹತ್ತಿಕೊಂಡಿತ್ತು. ದಾದಿಗೆ ನಲವತ್ತು ರೂಪಾಯಿ ಸಿಕ್ಕಿರುವುದು ಆಯಾನಿಗೆ ಗೊತ್ತಾಗಿತ್ತು; ತನ್ನ ಪಾಲಿನ ಇಪ್ಪತ್ತೋ, ಮೂವತ್ತೋ ಇನ್ನೂ ಬಂದಿಲ್ಲದಿದ್ದುದರಿಂದ ಅವಳಿಗೆ ಮೈಯೆಲ್ಲಾ ಉರಿದುಹೋಗಿತ್ತು. ಇಬ್ಬರೂ ಚೆಲ್ಲಿಹೋದ ಗಂಜಿಯ ಬಗ್ಗೆ ಚಿಂತೆಯಿಲ್ಲದೆ ತಮ್ಮದೇ ಇನ್ಯಾವ್ಯಾವುದೋ ಕಾರಣಗಳಿಗಾಗಿ ಕೂಗಾಡಿಕೊಳ್ಳುತ್ತಾ ದೊಡ್ಡ ಜಗಳವನ್ನೇ ತೆಗೆದಿದ್ದರು. ಸಾವಿತ್ರಿಗೆ ತಲೆತಲೆ ಚಚ್ಚಿಕೊಳ್ಳುವಷ್ಟು ದುಃಖವಾಯಿತು. ತಾನು ಅಷ್ಟೆಲ್ಲಾ ಮಾತು ತಿಂದು ತಂದಿದ್ದ ಗಂಜಿ ನೆಲದ ಪಾಲಾಗಿತ್ತು ʻಈಗ ಬಾಣಂತಿಗೆ ಏನು ಕೊಡಲಿʼ ಎನ್ನುವ ಯೋಚನೆಯಲ್ಲಿ ನೆಲದ ಮೇಲೆ ಬಿದ್ದು ಹರಿಯುತ್ತಿದ್ದ ಗಂಜಿಯನ್ನೇ ನೋಡತೊಡಗಿದಾಗ ಅವಳಿಗರಿವಿಲ್ಲದಂತೆ ಮತ್ತೆ ಕಣ್ತುಂಬಿಕೊಳ್ಳತೊಡಗಿತು. ಜಯಲಕ್ಷ್ಮಿಗೆ ಕಣ್ಣು ಬಿಡಲೂ ಆಗದಷ್ಟು ಸುಸ್ತು, ನರಳುತ್ತಿದ್ದಳು.
ಅಷ್ಟರಲ್ಲಿ “ಅದ್ಯಾಕ್ರವ್ವ ಇಬ್ರೂ ಜಗ್ಳಾಡ್ತಿದೀರ. ಈಗಿನ್ನಾ ಆ ಮಗಾ ಸತ್ತು ಸತ್ತು ಬದುಕ್ಬಂದದೆ. ಅದ್ರ ಮುಂದೆ ಇದೇನವ್ವಾ ನಿಮ್ ಕೂಗಾಟ” ಎನ್ನುತ್ತಾ ಮಾದೇವಿಯ ಅಪ್ಪ ಒಳಬಂದ. “ಅಣ್ಣೋ ನೀನೀ ವಿಸ್ಯಕ್ಕೆ ಬರ‍್ಬೇಡ. ಈಯಮ್ಮ ಬರೀ ಕೂಸು ತೋರ‍್ಸಿದ್ದಕ್ಕೆ ಆಯಮ್ಮನತ್ರ ನಲ್ವತ್ತು ರೂಪಾಯಿ ಕಿತ್ಕಂಡವ್ಳೆ; ಬಾಣಂತಿ ಕಸಾ ಎತ್ತಿ ಕಿಲೀನ್ ಮಾಡಿ ಬಂದಿದ್ಕೆ ನಂಗಿಷ್ಟು ಕೊಡ್ಬ್ಯಾಡ್ದ. ಅದ್ರ ಮ್ಯಾಕೆ ಡ್ರಿಪ್ಪಿನ ಕಂಬ ಸರ‍್ಸಕ್ಕೋಗಿ ಗಂಜಿ ಡಬ್ಬಿ ಬೀಳ್ಸವ್ಳೆ ಬೇರೆ. ಇದ್ನೂ ಕಿಲೀನ್ ಮಾಡೋ ಕರ‍್ಮ ಬೇರೇಯಾ ನಂಗೆ” ಎನ್ನುತ್ತಾ ಕೂಗಾಡಿದಳು. “ಏನವ್ವಾ ಎಲ್ಡ್ ಜಿನಿಂದ ಉಪಾಸ್ ಬಿದ್ದು ಈಗಿನ್ನಾ ಹಡ್ದು ಬಂದಿರಾ ಮಗಾ ಕುಡ್ಯಕ್ಕೆ ತಂದಿರೋ ಗಂಜಿನೂ ಬೀಳ್ಸಿದಲ್ದೆ ಇಂಗ್ ಕೂಗಾಡ್ತಿದೀರಲ್ಲವ್ವಾ, ನೀವು ಮನ್ಸರೇನವ್ವಾ. ಏನೀಗ, ನಿಂಗ್ ಇಪ್ಪತ್ತು ರುಪಾಯ ಕೊಡ್ಬೇಕಿತ್ತೇ, ತಗಾ, ಮಾತಾಡ್ದೆ ಎಲ್ಲಾ ಕಿಲೀನ್ ಮಾಡು. ದುಡ್ಡೇನೋ ನಾ ಕೊಡ್ತಿನಿ, ಗಂಜಿ ತಂಕೊಡಕಾಯ್ತದಾ ನಿಂಗೆ” ಎನ್ನುತ್ತಾ ತನ್ನ ಚೆಡ್ಡಿಯ ಜೇಬಿನಿಂದ ದುಡ್ಡು ತೆಗೆದುಕೊಟ್ಟು ಅವಳ ಮುಖ ನೋಡಿದ. “ಇಗಾ, ಇನ್ನಿಬ್ರವ್ರಲ್ಲ, ಅವ್ರಿಗೆ ಸ್ನಾನ ಮಾಡ್ಸಿ ಮಗಾನ ತಂಕೊಡಕ್ಕೆ ಹೇಳು. ಮಗಾ ಇಲ್ಲಿಗ್ಬಂದ್ಮೇಲೆ ದುಡ್ಡು ಕೊಟ್ಟೀನಂತೆ” ಎಂದ. ಮಾತಿಲ್ಲದೆ ದಾದಿ ಅಲ್ಲಿಂದ ಹೊರಟಳು, ಆಯಮ್ಮ ಬಟ್ಟೆ ನೆಲಕ್ಕೆ ಹಾಕಿ ಒರೆಸತೊಡಗಿದಳು.
ಧಿಗ್ಭ್ರಾಂತಿಯಿಂದ ನಿಂತಿದ್ದ ಸಾವಿತ್ರಿಯನ್ನು ನೋಡಿದ ಮುದುಕ, “ಈಗೇನ್ಮಾಡ್ತೀಯವ್ವಾ, ತಿರ‍್ಗಾ ಓಗಿ ಗಂಜಿ ಕಾಸ್ಕಂಡ್ ತಂದೀಯೇ” ಎಂದ. ತಲೆಯೆಲ್ಲಾ ಖಾಲಿಯಾದಂತೆ ಸಾವಿತ್ರಿ ಅವನನ್ನೇ ನೋಡಿದಳು. “ನೋಡವ್ವಾ, ಈಗ ನನ್ ಮಗ್ಳಿಗೆ ಕೊಡಾಕೇಂತ ಕ್ಯಾಂಟೀನಲ್ಲಿ ಇಡ್ಲಿ ಕಟ್ಟಿಸ್ಕಂಡು ಬಂದೆ, ಜತೆಗೇ ನಾವೂ ತಿಂದ್ರಾತು ಅಂತ ಇನ್ನೆರ‍್ಡು ಪಟ್ಣ ತಂದೆ. ಪರ‍್ವಾಯಿಲ್ಲ ಅನ್ಸಿರೆ ಒಂದು ಪಟ್ನ ಕೊಡ್ತಿನಿ, ಚೂರು ತಿನ್ಸವ್ವ, ನಾನು ಅಂಗೇ ಓಗಿ ಅಲ್ಲೇ ತಿನ್ಕಬತ್ತೀನಿ. ಅಂಗೇ ಬತ್ತಾ ಕಾಫಿ ತತ್ತಿನಿ” ಎನ್ನುತ್ತಾ ಫ್ಲಾಸ್ಕನ್ನೆತ್ತಿಕೊಂಡು ಹೊರಟ. ಮರುಮಾತಿಗೆ ಅವಕಾಶವೇನಿತ್ತು?! ಸಾವಿತ್ರಿ ಕೈಮುಗಿದು ಇಡ್ಲಿಯ ಪೊಟ್ಟಣವನ್ನು ತೆಗೆದುಕೊಂಡಳು. ಒತ್ತೊತ್ತಿಕೊಂಡು ಬಂದ ದುಃಖವನ್ನು ತಡೆದುಕೊಂಡು, ಜಯಲಕ್ಷ್ಮಿಯ ಒಣಗಿದ ತುಟಿಯನ್ನು ತೇವದ ಬಟ್ಟೆಯಿಂದ ಒರೆಸಿ, ಮೊದಲು ಸ್ವಲ್ಪ ನೀರು ಕುಡಿಸಿ, ಇಡ್ಲಿ ತಿನ್ನಿಸಿದಳು. ಸ್ನಾನ ಮಾಡಿಸಿದ ಮಗುವನ್ನು ಕರೆತಂದು ಪಕ್ಕದಲ್ಲಿದ್ದ ತೊಟ್ಟಿಲಲ್ಲಿ ಮಲಗಿಸಿದ ದಾದಿಯರು “ದುಡ್ ಕೊಡ್ತೀನಿ ಅಂದಣ್ಣ ಎಲ್ಲಿ?” ಎಂದು ಸೊಂಟಕ್ಕೆ ಕೈಯಿಟ್ಟುಕೊಂಡು ನಿಂತರು. “ಇಂಕ್ರ ಇರು ಕ್ಯಾಂಟೀನಿಗೋಗವ್ರೆ, ಬತ್ತರೆ” ಎಂದ ಮಾದೇವಿ ಮತ್ತು ಅವಳಮ್ಮ ಮಗುವನ್ನು ನೋಡುತ್ತಾ “ಮಗಾ ಬಲ್ ಜೋಕಾಗವ್ನೆ” ಎನ್ನುತ್ತಾ ಖುಷಿಪಟ್ಟರು. ಸುಸ್ತಾಗಿದ್ದ ಜಯಲಕ್ಷ್ಮಿ ಮಗುವಿನೆಡೆಗೆ ನಡುಗುತ್ತಿದ್ದ ಕೈಚಾಚಿದಳು.
ʻಡಾಕ್ಟ್ರಿಗೆ ಕೊಡಾ ದುಡ್ಡಿಗೆ ಈಗೇನ್ಮಾಡದು, ಎಲ್ಲಿಂದ ಹೊಂಚ್ಕಂಡು ತರದುʼ ಎಂದು ಯೋಚಿಸುತ್ತಾ ಸಾವಿತ್ರಿ ಮನೆಯ ಸಂದಿ, ಮೂಲೆಗಳಲ್ಲಿ ಅಡಗಿಸಿಟ್ಟಿದ್ದ ದುಡ್ಡಿನ ಲೆಕ್ಕ ಹಾಕಿದಳು. ಮುನ್ನೂರು ದಾಟಲಿಲ್ಲ; “ಇದ್ದಷ್ಟು ಕೊಟ್ಟು ಕೈಮುಗಿದ್ಬಿಡೋದಷ್ಟೆ, ಇಲ್ದಿರೋದನ್ನ ಎಲ್ಲಿಂದ ತರ‍್ಲಿ” ಎಂದುಕೊಂಡಳು. ಮುಸ್ಸಂಜೆಯಿಂದ ಕತ್ತಲಿಗೆ ತಿರುಗುತ್ತಿತ್ತು…
******************************************
ʻ
ಧನ್ಯವಾದಗಳು ಸಂಗಾತಿ
ಮನ ಕಲಕುವ ಬಡತನದ ದಾರುಣ ಚಿತ್ರಣ
ಪ್ರತ್ಯಕ್ಷ ಕಣ್ಣ ಮುಂದೆ ನಡೆಯುತ್ತಿರುವಂಹ ನಿರೂಪಣೆ.!ಬಡತನದ ಸಂಕಟ .ಯಾರದೋ ಸಹಾಯ ದೊರಕುವ ಪರಿ…ಕೊನೆಗೊಂದು ನಿಟ್ಟುಸಿರು ತರುತ್ತದೆ
ಸಮಾಜದ ಉಳ್ಳವರ ಹೃದಯಹೀನತೆ , ಲಂಚಗುಳಿತನ, ಬಡವರ ಹೃದಯ ಶ್ರೀಮಂತಿಕೆಯ ಸಹಜ ಚಿತ್ರಣ. ನಿಮ್ಮ ಸರಳ ಕಥನ ಶೈಲಿಗೆ ನನ್ನ ಸಲಾಮು.
ಕಣ್ಣಿಗೆ ಕಟ್ಟುವ ಹಾಗೆ ಬರೆಯೋದು ನಿಮ್ಮ ಶಕ್ತಿ.. ಹಿಡಿದು ಅಲುಗಾಡಿಸುವಂತಹ ಕಥೆ