ಡಾ.ಕಾತ್ಯಾಯಿನಿ ಕುಂಜಿಬೆಟ್ಟು
ಕವಿತೆಗಳು
ಏಕಾಂತ
ನೇಸರ ಮೋಡಗಳ ಹಾಸಿಗೆಯಿಂದ ಎದ್ದು
ಮೈಮುರಿಯುತ್ತ
ಆಕಾಶದಗಲಕ್ಕೆ ಬಾಯಿ ಆಕಳಿಸುತ್ತ
ಬೆಳಕು ಮೈಯಲ್ಲಿ ನಿಲ್ಲುತ್ತಾನೆ
ತುಂಬಿದ ಬೆಳಕಿನ ಅಕ್ಷಯ ಕೊಡ
ಅವನ ಕಾಯ
ಬೆಳಕು ಹರಿಸುತ್ತಲೇ ಇರುತ್ತಾನೆ
ಸಂಜೆಯವರೆಗೂ…
ಮಾತಿಲ್ಲ
ಬರೀ ಮೌನ!
ಹೂವುಗಳು ಅರಳುತ್ತವೆ
ಕೆಂಪು ನೀಲಿ ಹಳದಿ
ತುಟಿ ಎಸಳುಗಳಲ್ಲಿ ಬೆಳಕು ಹೀರುತ್ತ
ಮೌನವಾಗಿ ಕಂಪು ಬೀರುತ್ತ
ಜೇನುಗಳು ಮಕರಂಧ ಹೀರಿ ಮಧು ಸಂಗ್ರಹಿಸುತ್ತವೆ
ಮೌನವಾಗಿ
ಬೀಜಗಳಲ್ಲಿ ಮೊಳಕೆಯ ತಲೆ ಬೆಳೆದು
ತೆನೆತೆನೆಗಳಲ್ಲಿ ಹಾಲು ಉಕ್ಕಿಸುತ್ತವೆ
ಇರುವೆಗಳು ಸಾಲು ಸಾಲು ಸರದಿಯಲ್ಲಿ
ಸೂರ್ಯನನ್ನೇ ಹೊತ್ತು ಸಾಗುತ್ತವೆ
ಮೌನವಾಗಿ
ಈ ಎರಡು ಕಾಲ ಜೀವಿಗಳಿಗೆ ಮಾತ್ರ ಬರಿದೇ
ಮೂರು ಕಾಲಗಳ ಮಾತು ಮಾತು ಮಾತು
ಬಾಯಿ ಬ್ರಹ್ಮಾಂಡ!
ಎಲ್ಲಿದೆ ಏಕಾಂತ?
ಮಾರುದ್ದ ನಾಲಗೆ ಮೈತುಂಬ
ಈ ಮಾತುಗಳ ಸಂತೆಯಲ್ಲಿ
ಓಡಾಡುತ್ತಿವೆ ಒಡಕು ಕೊಡಗಳು
ಕತ್ತಲನ್ನೇ ಚೆಲ್ಲುತ್ತ!
ಕಾಡುವ ಜೀರುಂಡೆಗಳು
ಜೀರ್ ಜೀರ್ ಜೀರ್ಕರಿಸುವ
ಹರಿತವಾದ ತಂತಿಕೊರಳುಗಳು
ಕತ್ತಿ ಬಾಯ ಠೇಂಕಾರ
ಓ..ವ್! ಜೀರ್ ಜೀರ್ ಜೀರ್ ಜೀರೋಗುಟ್ಟುತ್ತ
ಚೀತ್ಕಾರವನ್ನೇ
ಓಂಕಾರ ಎಂದುಕೊಳ್ಳುತ್ತ
ಮೈ ಒಡೆದು
ಜೀವ ರುಂಡದಿಂದ ಬೇರಾಗಿ ಸಾಯುತ್ತವೆ.
ಜೀರುಂಡೆ!
ಜೀವರುಂಡೆ! ರುಂಡದಲ್ಲೇ ಜೀವ!
ಜೀರ್ ಉಂಡೆ! ಜೀರಲ್ಲೇ ಜೀವದುಂಡೆ!
ಛೆ! ಇಷ್ಟು ಚಿಕ್ಕ ಜೀವಗಳ ಒಳಗೆ
ಎಲ್ಲಿಟ್ಟುಕೊಂಡಿದ್ದವೋ ಈ ಅಪಸ್ವರ!
ಈ ಹಾಂಕಾರ ಹೂಂಕಾರ ಹೇಂಕಾರ!
ಕಟ್ಟಕಡೆಗೆ ಅಹಂಕಾರದ ಅಹಂ ಒಡೆದು ಹಾಹಾಕಾರ!
ಸಾವಿನ ಗುಮ್ಮನಲ್ಲೇ ಸಾಕ್ಷಾತ್ಕಾರ!
ಹೌದು! ಏಕಾಂತದಲ್ಲಿ ನಿದ್ದೆಯಲ್ಲೇ ಮುಳುಗಿ ತೇಲಿ
ಸಾಯಬೇಕು ಒಬ್ಬಳೇ!
ಛೆ! ಎಲ್ಲಿ ನೋಡಿದರಲ್ಲಿ
ಎಲುಬಿಲ್ಲದ ಹಾವು ನಾಲಗೆಯ ಹುತ್ತ ಬಾಯಿಗಳು!
ಬಾವಿಯೊಳಗೆ ಬಾವಿ ಬಾವಿಯೊಳಗೊಳಗೆ ಬಾವಿ ಬಾವಿ
ಬಾಯಿಯೊಳಗೇ ಹೂತು ಹೋದ
ಕಾಯ ಕೊಡವ ಮೇಲಕ್ಕೆತ್ತುವವರಾರು?…
ಚೆನ್ನಪ್ಪ ಚೆನ್ನೇಗೌಡ ಕುಂಬಾರ ಮಾಡಿದ ಕೊಡನವ್ವಾ!
ಆ ಕುಂಬಾರ ಈ ಕೊಡಗಳಿಗೆಲ್ಲ ಕಿವಿಯಗಲ ದಳಬಾಯಿ ಇಟ್ಟ! ಹಹ್ಹ!
ಮೊದಲು… ನನ್ನ ವಾಚಾಳಿ ಮನಸ್ಸಿನ ಹಳವಂಡದ
ಹಂಡೆ ಬಾಯಿಗೊಂದು ಮುಚ್ಚಳ ಹುಡುಕಬೇಕು!
ಮೌನಮುಚ್ಚಳ!
ಅಂದುಕೊಂಡಿದ್ದೆ
ಇವನು
ಟೊಂಗೆ ಟೊಂಗೆಗಳಲ್ಲಿ ಮೊಗ್ಗುಗಳ
ಅದುಮಿಟ್ಟುಕೊಂಡ ಮಂದ್ರ ಮಾಮರ
ಕೊರಳೊಳಗೆ ಸ್ವರಗಳನ್ನು
ಅದುಮಿಟ್ಟುಕೊಂಡ ಕೊಳಲು
ಅಂದುಕೊಂಡಿದ್ದೆ!
ಋತುವಿನ ಕೈಹಿಡಿದಾಗ ಮೈತುಂಬ
ಜೊಂಪೆ ಜೊಂಪೆ ಗೊಂಚಲು ಹೂಬಿಟ್ಟು
ಕೋಕಿಲದ ಕುಹೂ ಮೊಗೆಮೊಗೆದು ತುಂಬಿ
ಮಿಡಿ ಕಾಯಿ ಹಣ್ಣು ರಸ ಬಾಳು
ಅಂದುಕೊಂಡೂ ಇದ್ದೆ!
ನಾನೋ ಋತು!
ಮಿಠಾಯಿ ಲಂಗಧಾವಣಿ
ಕುಪ್ಪಸದಿಂದೆದ್ದ ಗುಲಾಬಿ ಯವ್ವನವು
ಮದರಂಗಿ ದುಪ್ಪಟ ಹೊದ್ದು
ಕಪ್ಪು ದ್ರಾಕ್ಷಿ ಕಂಗಳ ಕಣ್ಣಿಂದ ಉದುರಿದ
ನಕ್ಷತ್ರಗಳನ್ನು
ಕನಸು ಮೈಯ ಜೋಳಿಗೆಯಲ್ಲಿ ತುಂಬಿ
ಎದೆಯ ಬುಲ್ಬುಲ್ ದಿಲ್ತರಂಗವನ್ನು
ಒಳಗೊಳಗೇ ನುಡಿಸುತ್ತ
ನನ್ನೆದೆಯ ಪುಟಗಳಲ್ಲಿ ಪಿಸುಗುಡುವ
ಪ್ರೇಮಪಾದಗಳಿಗೆ ಗೆಜ್ಜೆಕಟ್ಟುತ್ತ
ಮಳೆಬಿಲ್ಲಿನ ಅರ್ಧ ವೃತ್ತದಂತೆ ಮತ್ತೆ ಮತ್ತೆ
ಅವನ ಹಿಂದೆ ಮುಂದೆ ಕುಣಿಯುತ್ತಲೇ
ಬಣ್ಣಗಳ ಮಿಂಚುಗಳ ಮೈಯೊಳಗೇ
ಜುಂಜುಂ ಜುಮುಗುಡುತ್ತ
ಬಿಸಿಲು ಮಳೆಯಲಿ ಕ್ಷಣಗಣನೆ ಮಾಡುತ್ತ
ಬಹುಕಾಲ… ಅಂದುಕೊಂಡಿದ್ದೆ …ಅಂದುಕೊಳ್ಳುತ್ತಲೇ ಇದ್ದೆ
ಆದರೆ ಅವನು ಚಲಿಸಲೇ ಇಲ್ಲ
ಸೋತು ಅವನೊಳಗೆ ಒಂದು ದಿನ
ನಾನೇ ಪ್ರವೇಶಿಸಿದೆ
ಪರಕಾಯ ಪ್ರವೇಶವಾಯಿತದು
ಅರಿತೆ…
ಋತು ಋತುಗಳು ನನ್ನೊಳಗೆ ಪ್ರವೇಶಿಸಿ
ಹೊರಹೊರಟರೂ
ಅವನು ಹಾಗೆಯೇ
ಹೂಬಿಡದ ಮಾಮರ
ಉಲಿಯದ ಕೊಳಲು
ಭುಸುಗುಡುವ ನಾಗರ ಹಾವನ್ನು
ಎದೆಯೊಳಗೇ ಸುರುಳಿ ಸುತ್ತಿಟ್ಟುಕೊಂಡ ಹುತ್ತ
ಬಿರುಸು ಬಾಣಗಳ ತೊಡದೆ ಬತ್ತಳಿಕೆಯಲ್ಲೇ
ಮುಚ್ಚಿಟ್ಟುಕೊಂಡ ಯೋಧ
ಅರಿತೆ… ಅರಿತವಳೇ ಅವನೊಳಗಿಂದ ಹೊರಬಂದೆ
ನನ್ನೊಳಗಿಂದ ಅವನ ಹೊರದೂಡಿದೆ
ಆ ಕ್ಷಣದಿಂದ
ಕಂಗಳ ಬಿಲ್ಲಿನಲ್ಲೇ ಗುರಿಯಿಟ್ಟು ಎಸೆಯುತ್ತಿದ್ದಾನೆ
ಹಿಂದೆ ನಾನಂದುಕೊಂಡ
ಕೋಮಲವಾದ ಹೂವುಗಳನ್ನಲ್ಲ
ಮೈತುಂಬ ಮುತ್ತಿಕ್ಕುತ್ತಿವೆ ಕೆಂಪು ಕೆಂಪು ಕೆಂಡ
ಚೂಪು ತುಟಿಯಲ್ಲಿ
ಕೆಂಡಸಂಪಗೆಯಲ್ಲ
ಮೈ ನಿಗಿನಿಗಿ ಉರಿವ ಬೆಂಕಿಕೊಳ್ಳಿ
ಮನಸ್ಸಿಗೆ ಬೆಂಕಿ ಹಿಡಿಯಿತು
ಗಾಳಿಗೆ ತೆರೆದುಕೊಂಡಿತು ಹಾಳೆಯಂತೆ ಮನ
ಬಹುಕಾಲದಿಂದ ಎಡೆಬಿಡದೆ ಬಚ್ಚಿಟ್ಟ ಪ್ರೇಮ ಕವನಗಳು
ಹತ್ತಿಕೊಂಡು ಧಗಧಗನೆ ಉರಿಉರಿದು
ಈಗ
ಉಳಿದದ್ದು ಬರೇ ಬೂದಿ
ನಾನೀಗ
ಅನಂಗಿ!
ನಿರಾತ್ಮ!
ನೀರ ಗುಳ್ಳೆ
ಬದುಕು ಪಾತ್ರೆಯೊಳಗಿನ ನೀರು
ನಾನೊಂದು ಹೊಳೆಯುವ ಗುಳ್ಳೆ
ಗುಳ್ಳೆಯಾಗಿಯೇ ಉಳಿಯುವ ಹಾಗಿಲ್ಲ
ಒಡೆದು ನೀರಾಗಲೇಬೇಕು!
ಅವನ ನದಿಯಲ್ಲಿ
ಕೋಟಿ ಮಿಲಿಯ ಲೆಕ್ಕವಿಲ್ಲದಷ್ಟು
ಗುಳ್ಳೆಗಳು ಗುಳುಗುಳು ಹುಟ್ಟಿ
ಒಡೆಒಡೆದು ಒಂದಾಗುತ್ತಲೇ ಇವೆ ಕ್ಷಣಕ್ಷಣವೂ
ನಾನೂ ಹಾಗಾಗಲೇಬೇಕು ಬೇಡವೆಂದರೂ ಬೇಕೆಂದರೂ…
ನಶ್ವರವು ಶಾಶ್ವತದಲ್ಲಿ ಒಂದಾಗಲೇಬೇಕು!
ನೀರ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ
ಎಂದು ದಾಸರು ಹಾಡಿದ್ದು
ಹುಟ್ಟಿನ ಜಾತ್ರೆ ಸಾವಿನ ಯಾತ್ರೆಗಳನ್ನು ನೋಡಿಯೇ
ಅವರ ಯಾತ್ರೆಯೂ ಮುಗಿದಾಗಿದೆ!
ನನ್ನ ಉಸಿರು ಒಡೆದು
ಲೀನವಾಗಲಿ ಆ ಗಾಳಿಯಲಿ
ಅಂದು ನನಗೆ ಸಾವು
ನಿನಗೆ ಬದುಕು
ನಿನ್ನ ಸಾವಲ್ಲಿ ನಾನೂ ಸಾಯುತ್ತೇನೆ ನಿನಗೆ!
ನಿನ್ನ ಬದುಕಲ್ಲಿ ನಾನೂ ಬದುಕುತ್ತೇನೆ ನನಗೆ!
ನಾನು ಬದುಕಿರುವಾಗ ನನಗಿರುತ್ತಾನೆ ನನ್ನ ದೇವರು!
ನನ್ನ ಸತ್ತಾಗ ನನ್ನೊಡನೇ ಸಾಯುತ್ತಾನೆ ನನ್ನ ದೇವರು!
ಏಕಕಾಲದಲ್ಲೇ… ಬದುಕಿ ಉಳಿದವರಿಗೆ
ಅವನೂ ಬದುಕಿರುತ್ತಾನೆ
ಅವರು ಸತ್ತಾಗ ಅವರಿಗೆ ಇಲ್ಲವಾಗುತ್ತಾನೆ
ನಾನು ಹುಟ್ಟುವಾಗ ಹೊತ್ತು ತರುವುದು ಅವನನ್ನು ಮಾತ್ರ!
ಸಾಯುವಾಗ ಕೊಂಡೊಯ್ಯುವುದೂ ಅವನನ್ನು ಮಾತ್ರ!
ಬದುಕು ಪಾತ್ರೆಯ ನೀರಲ್ಲಿ
ಹೊಳೆಯುವ ಗುಳ್ಳೆ
ಸೂರ್ಯ ನೆತ್ತಿಗೇರುತ್ತ
ಬೆಳಕು ಬಿಸಿಲಾಗಿ ಬಿಸಿಗೆ ಒಡೆದು ಅಸ್ತ
ಕಡಲ ಪಾತ್ರೆಯೊಳಗೆ ಒಡಲ ಯಾತ್ರೆ!
ಕ್ಷಣ ಬಾಳಾದರೂ
ಈ ಗುಳ್ಳೆಗೆ ಹೊಳೆಯುವ ತ್ರಾಣ
ಬಂದುದಾದರೂ ಎಲ್ಲಿಂದ?
ನಿನ್ನ ನುಡಿ
ನೀನು ನುಡಿಯುವ ಪ್ರತಿಯೊಂದು ಪದವೂ
ನನ್ನ ಇರವನ್ನೇ ಇರಿಯುತ್ತಿದೆ
ಜೀವದ ಕಣಕಣದಲ್ಲು
ನೆತ್ತರಿನ ಹನಿ ಬಿಕ್ಕುತ್ತಿದೆ
ನೀನು ನುಡಿಯುವ ಪ್ರತಿಯೊಂದು ಪದವೂ
ಬೂಟುಪಾದಗಳಾಗಿ ನನ್ನ ತುಳಿಯುತ್ತಿವೆ
ಮಾತು ಮಾತುಗಳೂ
ಲಾಠಿ ಏಟುಗಳಾಗಿ ನನ್ನ ಅಳಿಸುತ್ತಿವೆ
ನಿನ್ನ ದಿಟ್ಟಿಯ ಮೊನಚು
ಸೂಜಿಸೂಜಿಗಳಾಗಿ
ನನ್ನ ಹೃದಯದ ಕಣ್ಣ ಚುಚ್ಚುತ್ತಿವೆ
ನನ್ನ ಆಳಕೆ ನಾನೇ ಇಳಿದು
ಹುಡುಕುವಾಗ ನನ್ನದೇ ಕರಿಛಾಯೆ
ಕುರಿಯಾಗಿ ಅಣಕಿಸುತ್ತಿದೆ
ನನ್ನದೇ ನನ್ನದಲ್ಲವೇ?
ಎಂಬ ಶೋಧದಲ್ಲೇ ಕ್ಷಣಗಳು
ಕೊಲೆಯಾಗುತ್ತಿವೆ
ನೀನು ನನ್ನೆಡೆಗೆ ಬೆಟ್ಟು ತೋರಿದಾಗೆಲ್ಲ
ಬೆಟ್ಟದಿಂದ ಶತಂಪಾತಾಳದಾಳಕ್ಕೆ
ಯಾರೋ ದೂಡಿದಂತಾಗಿ
ಹೊಟ್ಟೆಯಾಳದಲ್ಲಿ ತಳಮಳವಾಗಿ
ಬೆಚ್ಚಿ ಬಿದ್ದಿದ್ದೇನೆ
ಕೊಳದೊಳಗೆ ಕಲ್ಲೆಸೆದಂತೆ
ಮನದ ತಿಳಿಕೊಳ ಕಲಡಿ ಹೋಗಿದೆ
ನಿನ್ನ ತಕ್ಕಡಿಯಲ್ಲಿ ಕುಳಿತು ಕುಳಿತು
ಅವಮಾನಗಳಿಂದ ಮಾನದ ಬೆಲೆ ಕುಸಿದು
ಹೃದಯ ಭಾರವಾಗಿ ಬಿಟ್ಟಿದೆ
ಅದಕೆ ಸರಿತೂಗುವ ಮಾಪನದ ಅಳತೆಗಲ್ಲು
ಇಲ್ಲವಾಗಿಬಿಟ್ಟಿದೆ
ತುಳಸಿದಳವೊಂದು ಒಣಗಿ
ಕೃಷ್ಣನ ಪಾದದಲ್ಲಿ ನನ್ನನ್ನೇ ನೋಡುತ್ತಿದೆ
ಒಗ್ಗರಣೆಗೆ ಪರಿಮಳ ತಂದ ಕರಿಬೇವು ಎಲೆಯೊಂದು
ನಿನ್ನ ತಾತ್ಸಾರಕ್ಕೆ
ತಟ್ಟೆಯ ಪಕ್ಕವೇ ಬಿದ್ದು ನರಳಿದೆ
ಅವನ ನೀಲ ಎದೆಯಲ್ಲಿದ್ದರೂ
ತುಳಸಿದಳವೊಂದು
ನನ್ನನ್ನೇ ನೋಡುತ್ತ ನಿಟ್ಟುಸಿರಲ್ಲಿ
ಒಣಗುತ್ತಿದೆ!
ಅಂತರಂಗದಲ್ಲಿ ಹಂತಕನೊಬ್ಬ ಅಕ್ರಮ
ಮನೆಕಟ್ಟಿಕೊಂಡಿದ್ದಾನೆ
ನನ್ನ ಕತ್ತನ್ನು ನಾನೇ ಕತ್ತರಿಸಿ
ನಿತ್ಯ ಸಾಯುತ್ತಿದ್ದೇನೆ
ಕ್ಷಣ ಕ್ಷಣದ ವಿಲಿವಿಲಿ ಯಾತನೆಯಲ್ಲೇ
ರುಂಡವು ಗಡಿಯಾರವಾಗಿ
ಕಣ್ಣು ಕಿವಿ ಮೂಗು ಮುಳ್ಳುಗಳಾಗಿ
ನಾಲಗೆಯು ನಿನಗೀಗ ತಲೆಯಿಲ್ಲ!
ಎಂದು ಕಿರುಚುತ್ತದೆ
ಹೃದಯವು ಆಘಾತದಲ್ಲಿ ರಿಂಗಣಿಸಿದಾಗ
ಧಿಡ್ಕ ಎದ್ದು
ಮುಂಡದ ಕತ್ತಿಗೆ ಜೋಡಿಸಲು
ತಲೆಯನ್ನು ಹುಡುಕತೊಡಗುತ್ತೇನೆ!
ಹುಡುಕುತ್ತ ಹುಡುಕುತ್ತಲೇ ಸೋತು
ಇಂದು
ಜವಳಿ ಅಂಗಡಿಯ
ತಲೆಯಿಲ್ಲದ ಗೊಂಬೆಯ ಬಳಿ
ನಿಂತು ಗೊಂಬೆಯಾಗಿದ್ದೇನೆ
ಹಳೆಯಂಗಿ ಕಳಚಿ
ಹೊಸ ಅಂಗಿ ತೊಡಿಸಲಾಗಿದೆ
ತಲೆಯಿಲ್ಲದ ಅಂಗಿಯೊಳಗೆ
ತಲೆಯಿಲ್ಲದ ಮೈ!
ಈಗ ಕಿವಿಯೇ ಇಲ್ಲ ನನಗೆ!
ಆದರೂ…
ನಿನ್ನ ನುಡಿ ಚೂಪು ಚೂರಿ!
**************************************************************