ನಮ್ಮ ಕವಿ
ಸ್ಮಿತಾ ಅಮೃತರಾಜ್
ಕವಿಪರಿಚಯ–ಸಂದರ್ಶನ–ಕವಿತೆಗಳು
ಪರಿಚಯ
ಸ್ಮಿತಾ, ಕವಿ, ಲೇಖಕಿ, ಅಂಕಣಕಾರ್ತಿ,
ಇವೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಮಾನವೀಯ ಅಂತಃಕರಣದ, ಎಲ್ಲದರಲ್ಲೂ,ಎಲ್ಲರಲ್ಲೂ ಒಳಿತನ್ನೇ ಕಾಣುವ ಮೃದು ಹೃದಯಿ.
“ಪ್ರಪಂಚ ಬಹಳ ಕೆಟ್ಟದು”ಅನ್ನುವ ಸಿನಿಕತನ ನನ್ನನ್ನು ಕಾಡಿದಾಗೆಲ್ಲ ಅದಕ್ಕೆ ಅಪವಾದವೆಂಬಂತೆ ನನ್ನ ಮನಸ್ಸಿಗೆ ಬರುವ ನನ್ನ ಜೀವದ ಗೆಳತಿ ಸ್ಮಿತಾ ಬಗ್ಗೆ ಹೇಳಿದಷ್ಟು ಕಡಿಮೆಯೇ.
ಸ್ಮಿತಾ ಅವರ ಜನ್ಮಸ್ಥಳ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ . ಜನನ 8 ನೆ ಜನವರಿ 1978, ತಂದೆ ಶ್ರೀಯುತ.ವೆಂಕಟ್ರಮಣ ಪಳಂಗಾಯ
ಮತ್ತು ತಾಯಿ ಶ್ರೀಮತಿ.ಮೀನಾಕ್ಷಿ ಪಳಂಗಾಯ.
ಓರ್ವ ಸಹೋದರಿ ಹಾಗೂ ಓರ್ವ ಸಹೋದರ ರಿದ್ದಾರೆ.
ಶಿಕ್ಷಣ: ಅಜ್ಜಿ ಮನೆಯಾದ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ಇದ್ದು ಪ್ರಾಥಮಿಕ ಶಿಕ್ಷಣವನ್ನ ಮಡಿಕೇರಿಯ ಮೇಕೇರಿ ಶಾಲೆ, ಪ್ರೌಡ ಶಿಕ್ಷಣ ಜೂನಿಯರ್ ಕಾಲೇಜು,ಮಡಿಕೇರಿ ಯಲ್ಲಿ ಪಡೆದು,ಬಳಿಕ ಪಿ.ಯು.ಸಿ.ಸಂತ ಫಿಲೋಮಿನ ಕಾಲೇಜು,ಪುತ್ತೂರು, ಪದವಿ – ನೆಹರು ಮೆಮೋರಿಯಲ್ ಕಾಲೇಜು.ಸುಳ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ – ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯ ದಿಂದ ಪಡೆದಿದ್ದಾರೆ.
1998 ರಲ್ಲಿ ಅಮೃತ ರಾಜ್ ಅವರೊಂದಿಗೆ ವಿವಾಹದ ಬಳಿಕ, ಕೊಡಗಿನ ಮಡಿಕೇರಿ ತಾಲೂಕಿನ ಚಂಬು ಗ್ರಾಮದಲ್ಲಿ ವಾಸ.ಮಗಳು ಮನಾಲಿ,ಮಗ ಆಷಯ್,ಅತ್ತೆ ಮತ್ತು ಮಾವಂದಿರೊಂದಿಗೆ ತುಂಬು ಕುಟುಂಬದಲ್ಲಿ ಜೀವನ.
ತನ್ನನ್ನು ಕವಿ,ಲೇಖಕಿ ಎಂದು ಪರಿಚಯಿಸಿ ಕೊಳ್ಳುವುದಕ್ಕಿಂತ ಹೆಚ್ಚಾಗಿ “ಕೃಷಿಕ ಮಹಿಳೆ”ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಅವರಿಗೆ ಹೆಚ್ಚು ಖುಷಿ ಕೊಡುತ್ತದೆ.
ಸ್ಮಿತಾರ ಮೊದಲ ಕವನ ಸಂಕಲನ “ಕಾಲ ಕಾಯುವುದಿಲ್ಲ”,(2008) ಬಳಿಕ ಬಂದ ಕವನ ಸಂಕಲನ “ತುಟಿಯಂಚಲಿ ಉಲಿದ ಕವಿತೆಗಳು”(2014),ನಂತರ ಬಂದದ್ದು ಪ್ರಬಂಧ ಸಂಕಲನ “ಆಂಗಳದಂಚಿನ ಕನವರಿಕೆಗಳು”(2015). ವಿಜಯವಾಣಿ ಪತ್ರಿಕೆಯಲ್ಲಿ ಅಂಕಣಕಾರ್ತಿಯಾಗಿ “ಲೇಡಿಸ್ ಡೈರಿ” ಶೀರ್ಷಿಕೆಯ ಅಂಕಣದಲ್ಲಿ ಹಲವಾರು ಲೇಖನಗಳನ್ನೂ ಬರೆದಿರುವ ಅನುಭವವಿದೆ.ಒಂದು ಕವನ ಸಂಕಲನ ಒಂದು ಪ್ರಬಂಧ ಸಂಕಲನ , ಅಚ್ಚಿನಲ್ಲಿವೆ.
ಹಲವಾರು ಪತ್ರಿಕೆಗಳ,ಸಂಘ ಸಂಸ್ಥೆಗಳ ಕವನ ಸ್ಪರ್ಧೆ,ಪ್ರಬಂಧ ಸ್ಪರ್ಧೆ ಗಳಲ್ಲಿ ಬಹುಮಾನಗಳು ದೊರೆತಿವೆ.ಆಕಾಶವಾಣಿ ಮಡಿಕೇರಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ.
ಸ್ಮಿತಾರಿಗೆ ದೊರಕಿರುವ ಪ್ರಶಸ್ತಿ ,ಪುರಸ್ಕಾರಗಳಲ್ಲಿ
ಕೊಡಗಿನ ಗೌರಮ್ಮ ಪ್ರಶಸ್ತಿ, ಬಿ,ಎಂ,ಶ್ರೀ ಪ್ರಶಸ್ತಿ, ಶ್ರೀಮತಿ,ಸುಶೀಲ ಶೆಟ್ಟಿ ಸ್ಮಾರಕ ಪ್ರಶಸ್ತಿ,ಸುಳ್ಯ ತಾಲೂಕಿನ ಸಾಹಿತ್ಯರತ್ನ,ದಾರಿ ದೀಪ ಪತ್ರಿಕೆಯ ಕಾಯಕರತ್ನ ,ಪ್ರಮುಖವಾದವುಗಳು.
ಅಪಾರ ಪ್ರತಿಭೆಯುಳ್ಳ ಸ್ಮಿತಾ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಸಂದರ್ಶನ
ನೀವು ಕವಿತೆ ಬರೆಯಲು ಪ್ರಾರಂಭಿಸಿದ್ದು ಯಾವಾಗ?
ನಾನು ಕವಿತೆ ಬರೆಯಲು ತೊಡಗಿದ್ದು ತೀರಾ ತಡವಾಗಿ, ಎರಡನೇ ವಾಣಿಜ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ .ನನಗಾಗ ಹತ್ತೊಂಬತ್ತು ವಯಸ್ಸಿರಬಹುದು. ಆಗ ಯಾವುದೋ ಹುಕಿಯಲ್ಲಿ ಒಂದಷ್ಟು ಆರಂಭಿಕ ಕವಿತೆಗಳನ್ನು ಬರೆದದ್ದು ಬಿಟ್ಟರೆ, ನಂತರ ಮದುವೆಯಾಗಿ ಎಷ್ಟೋ ವರ್ಷಗಳ ಬಳಿಕ ಕವಿತೆಯತ್ತ ವಾಲಿಕೊಂಡೆ.
ಕವಿತೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?
ಮೊದಲನೆಯದಾಗಿ, ಕವಿತೆ ಬಗ್ಗೆ ಏನೊಂದೂ ತಿಳುವಳಿಕೆ ಇಲ್ಲದಿದ್ದರೂ ಕಾಲೇಜಿನಲ್ಲಿರುವಾಗ ಉಪನ್ಯಾಕರ ಪ್ರೇರಣೆಯಿಂದ, ಅವರ ಬಳಿ ಒಳ್ಳೆ ವಿದ್ಯಾರ್ಥಿ ಅನ್ನಿಸಿಕೊಳ್ಳ ಬೇಕು ಅನ್ನುವ ನಿಟ್ಟಿನಲ್ಲಿ ಒಂದಷ್ಟು ಕವಿತೆ ಗೀಚಿದ್ದು ಬಿಟ್ಟರೆ, ನಂತರ ನನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕಾಗಿ, ಹಳ್ಳಿ ಮೂಲೆಯೊಂದರಲ್ಲಿ ವಾಸ ಮಾಡುವ ನಾನು ಲೋಕಕ್ಕೆ ತೆರೆದುಕೊಳ್ಳುವುದ್ದಕ್ಕಾಗಿ ಕವಿತೆ ಬರೆಯಲು ತೊಡಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅನಿಸಿಕೆಯನ್ನು ಅಭಿವ್ಯಕ್ತಿ ಪಡಿಸಲು ಕವಿತೆ ಒಂದು ನಿರಾಪಯಕಾರಿ ಮಾಧ್ಯಮ ಅಂತ ಅನ್ನಿಸಿ ಕವಿತೆಯ ತೆಕ್ಕೆಗೆ ಬಿದ್ದೆ.
ನಿಮ್ಮ ಕವಿತೆಗಳ ಬಗ್ಗೆ ನಿಮಗೆ ಏನನಿಸುತ್ತದೆ
ನನ್ನ ಬರಹಗಳ ಮೌಲ್ಯ ಮಾಪನ ಮಾಡಿಕೊಳ್ಳುವುದಕ್ಕಾಗಿ ನಾನು ಪತ್ರಿಕೆಗಳಿಗೆ ಬರೆಯುವೆ. ಪ್ರಕಟಗೊಂಡಾಗ ಸಹಜವಾಗಿ ಖುಷಿಯಾಗುತ್ತದೆ. ಅದು ಮತ್ತಷ್ಟು ಬರೆಯಲು ಪ್ರೇರೇಪಿಸುವಂತೆ ಮಾಡುತ್ತದೆ.ಆದರೆ ಉತ್ತಮ ಕವಿತೆ ಬರೆಯಲು ಸಾಧ್ಯವಾಗಲಿಲ್ಲ ಅನ್ನುವ ಅತೃಪ್ತಿ ಮತ್ತು ಹೇಗೆ ಕವಿತೆಯನ್ನು ಒಲಿಸಿಕೊಳ್ಳುವುದು ಎನ್ನುವ ಕೊರಗು ಸದಾ ಇದೆ.
ನಿಮ್ಮ ಸಾಹಿತ್ಯ ಕೃಷಿಯಬಗ್ಗೆ ನಿಮ್ಮ ಕುಟುಂಬದವರ ಅನಿಸಿಕೆಯೇನು?
ನಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಸಾಹಿತ್ಯಿಕ ವಾತಾವರಣ ಇದೆ. ಹಾಗಾಗಿ ನನ್ನ ಬರವಣಿಗೆಯ ಕುರಿತು ಯಾರಿಗೂ ವಿಶೇಷತೆ ಅನ್ನಿಸದಿದ್ದರೂ, ನನ್ನ ಪಾಡಿಗೆ ನಾನು ಇವುಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾರ ಅಡ್ಡಿ ಇಲ್ಲ. ಯಾರಾದರೂ ನನ್ನನ್ನು ಗುರುತಿಸಿದರೆ, ಪ್ರಶಂಸಿದರೆ ಸಹಜವಾಗಿ ಮನೆಯಲ್ಲಿ ಖುಷಿ ಪಡುತ್ತಾರೆ
ನಿಮ್ಮ ಓದಿನ ಬಗ್ಗೆ ಹೇಳಿ?
ಸಾಧ್ಯವಾದಷ್ಟು ಮಟ್ಟಿಗೆ ನಾನು ಹಿರಿಯ ಕವಿಗಳ ಕವಿತೆಯನ್ನು ಓದಲು,ಅವುಗಳನ್ನು ಗ್ರಹಿಸಲು ಪ್ರಯತ್ನ ಪಡುವೆ . ಎಮ್. ಆರ್. ಕಮಲ ಮೇಡಂ, ಚೊಕ್ಕಾಡಿ ಸರ್, ಎಚ್.ಎಸ್.ವೆಂಕಟೇಶ್ ಮೂರ್ತಿ ಸರ್ ಮತ್ತು ಬಿ.ಆರ್.ಲಕ್ಷ್ಮಣ್ ರಾವ್ ಸರ್ ನನ್ನ ಇಷ್ಟದ ಕವಿಗಳು.
ಕವಿತೆಯ ಹೊರತಾಗಿ ಬೇರೇನು ಬರೆದಿದ್ದೀರಿ
ಕವಿತೆಯ ಜೊತೆಗೆ ನಾನು ಲಲಿತ ಪ್ರಬಂಧಗಳನ್ನ ಬರೆಯುತ್ತೇನೆ. ಆದರೆ ಕತೆ ಬರೆಯಬೇಕೆಂಬ ತುಡಿತ ಬಹಳ ಇದೆ. ಪ್ರಯತ್ನ ಜಾರಿಗೊಳಿಸಬೇಕಿದೆ ಅಷ್ಟೇ.
ನಿಮ್ಮ ಇತರೇ ಹವ್ಯಾಸಗಳೇನು
ನಾನೊಬ್ಬಳು ಕೃಷಿಕ ಮಹಿಳೆಯಾದ ಕಾರಣ, ಹಟ್ಟಿ, ತೋಟ, ಮನೆಕೆಲಸದಲ್ಲೇ ಸಮಯ ವ್ಯಯವಾಗುತ್ತದೆ. ಹಾಗಾಗಿ ಆಸಕ್ತಿ ಇದ್ದರೂ ಇತರ ಹವ್ಯಾಸಗಳತ್ತ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಆದ ಕಾರಣ ಬಿಡುವಿನ ವೇಳೆಯಲ್ಲಿ ಓದು ಮತ್ತು ಬರಹವಷ್ಟೇ ಸುಲಭಕ್ಕೆ ತೊಡಗಿಸಿಕೊಳ್ಳಬಹುದಾದ ಹವ್ಯಾಸ ನನಗೆ.
ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆಯಲ್ಲ-ಏನು ಹೇಳುತ್ತೀರಿ ಈ ಬಗ್ಗೆ
ನಿಜ, ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಯುವ ತಲೆಮಾರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಪ್ರಸ್ತುತ ವಿದ್ಯಮಾನಕ್ಕೆ ಪೂರಕವಾಗಿ ಬರವಣಿಗೆಯ ಮೂಲಕ ಸ್ಪಂದಿಸುತ್ತಿರುವುದು ಖುಷಿಯೆನ್ನಿಸುತ್ತದೆ. ಬರೆಹ ಹೇಗೇ ಇರಲಿ, ಬರವಣಿಗೆಯ ತುಡಿತ ಮತ್ತು ಪ್ರಯತ್ನ ಮುಖ್ಯ ಅನ್ನಿಸುತ್ತದೆ. ಇತರರನ್ನು ಓದುತ್ತಾ ಓದುತ್ತಾ ತಮ್ಮ ಬರವಣಿಯ ದಿಕ್ಕನ್ನು ರೂಪಿಸಿಕೊಳ್ಳಬಲ್ಲರು.
ಸ್ಮಾರ್ಟಪೋನ್ ಮತ್ತು ಇಂಟರ್ ನೆಟ್ ಗಳು ಮಹಿಳೆಯರು ಹೆಚ್ಚೀನ ಸಂಖ್ಯೆ ಯಲ್ಲಿ ಸಾಹಿತ್ಯ ಕೃಷಿಯಲ್ಲಿ ಕಾರಣವಾಗಿವೆ ಎಂಬ ಮಾತನ್ನುನೀವು ಒಪ್ಪುವಿರಾ?ಇದರ ಬಗ್ಗೆ ಏನು ಹೇಳುವಿರಿ
ಇದು ನಿಜ. ಸ್ಮಾರ್ಟ್ ಫೋನ್,ಇಂಟರ್ನೆಟ್ ಬಂದ ಕಾರಣವೇ ನಾ ಇಷ್ಟರ ಮಟ್ಟಿಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡೆ ಅಂತ ಗೆಳತಿಯೊಬ್ಬಳು ಹೇಳುತ್ತಾಳೆ. ಅಂಗೈಯೊಳಗೆ ಫೋನ್ ಇರುವ ಕಾರಣ ಸಿಕ್ಕ ಸಮಯದಲ್ಲಿ ತತ್ಕ್ಷಣಕ್ಕೆ ಓದು , ಬರವಣಿಗೆಯತ್ತ ವಾಲಿಕೊಳ್ಳಲು ಸಹಕಾರಿ. ನನ್ನ ಮಟ್ಟಿಗೆ ಹೇಳುವುದಾದರೆ ನನಗೆ ಇಂಟರ್ನೆಟ್ ಸೌಲಭ್ಯ ದಕ್ಕಿದ ಮೇಲೆಯೇ ಬರವಣಿಗೆ ಸಲೀಸು ಅನ್ನಿಸ ತೊಡಗಿದ್ದು
ಸ್ಮಿತಾರವರ ಎರಡು ಕವಿತೆಗಳು
–
ಶಹರು ನಿದ್ರಿಸುವ ಚಿತ್ರ
ಅನವರತ ಕರುಬಿದ್ದಕ್ಕೋ
ಹಲುಬಿದ್ದಕ್ಕೋ
ಅಚಾನಕ್ ಮಹಾನಗರದ ನಡುವಿಗೆ
ಪಾದವಿಡುವಾಗ ಮೈಯೆಲ್ಲ ಪುಳಕ.
ದುಡು ದುಡು ರೈಲು ಹತ್ತಿ
ದಡ ದಡನೆ ಇಳಿಯುವಾಗ
ಕಣ್ಣು ಬಾಡುವ ಹೊತ್ತಲ್ಲಿ
ನಗರ ಪಿಳಿ ಪಿಳಿ ನೋಡುತ್ತಿದೆ.
ಬಹುಷ; ನನ್ನನ್ನೇ ಕಾಯುತ್ತಿದ್ದಿರಬೇಕು
ಅಂದುಕೊಂಡೆ.
ಇನ್ನು ಅದೆಷ್ಟು ನನ್ನಂತವರೋ..?!.
ನೋಟವನ್ನು ಶೂನ್ಯಕ್ಕೆ ನೆಟ್ಟು
ದೌಡಾಯಿಸುತ್ತಲೇ ಇದ್ದಾರೆ
ಚೋದ್ಯವಲ್ಲ ತಾನೇ? ಮತ್ತೊಮ್ಮೆ
ಚಿವುಟಿಕೊಂಡೆ.
ನನಗೋ ಗಂಟು ನೋವು ಪಾದಕ್ಕಿಳಿದು
ಕುಳಿತುಕೊಳ್ಳುವ ಕಾತರ
ಅವರಿಗೋ ಅದೆಂಥಾ ಆತುರ?
ತಳ್ಳಿಸಿಕೊಂಡ ರಭಸಕ್ಕೆ ಜೋಲು
ಹೊಡೆದಿದ್ದೆ ಅಷ್ಟೆ.
ತೆಕ್ಕೆಗೆ ಬಿದ್ದವರನ್ನ ನಗರ ಕೆಳಕ್ಕೆ
ಬೀಳಿಸುವುದಿಲ್ಲವಂತೆ
ಹೌದೆಂಬುದ ಖಾತ್ರಿ ಪಡಿಸಿಕೊಂಡೆ.
ಬಿಡುವಿಲ್ಲದ ಯಂತ್ರದ ರೆಕ್ಕೆ
ನೆತ್ತಿ ಸವರುವಾಗ
ದಡಲ್ ದಡಲ್ ಸದ್ದು ಎದೆಯ
ನಡುವಿನಿಂದ ಹಾಯುವಾಗ
ನಿದ್ರೆ ಮರೆತ ಶಹರು ಝಗಮಗಿಸುವಾಗ
ನಾನೋ ಜಾತ್ರೆಯಿರಬೇಕೆಂದುಕೊಂಡೆ.
ಅಬ್ಭಾ! ಓಡಿ ಓಡಿ ಸುಸ್ತಾಗಿ
ನನ್ನೂರಿಗೆ ಸಾವಕಾಶವಾಗಿ ಕಾಲಿಳಿಸಿ
ದಣಿವು ನೀಗಿಸಿಕೊಳ್ಳುತ್ತಿದ್ದೇನೆ.
ಶ್..! ಊರೀಗ ಸಕ್ಕರೆ ನಿದ್ರೆಯಲ್ಲಿದೆ.
ಪ್ರಭುವೇ..
ಇನ್ನೇನು ಬೇಡಲಾರೆ ಹೆಚ್ಚಿಗೆ.
ಸಾಕ್ಷಾತ್ಕಾರವೆನ್ನಲೇ?, ಸತ್ಯದರ್ಶನವೆನ್ನಲೇ?
ಊಹೆ ಕೆಲವೊಮ್ಮೆ ಮಾಯೆಯೇ ದಿಟ
ದೂರದಿಂದ ನುಣ್ಣಗೆಯೇ ಬೆಟ್ಟ
ನನ್ನ ನಿದ್ರೆಯಲ್ಲೂ, ಎಚ್ಚರದಲ್ಲೂ
ಕನಸಿನಲ್ಲೂ, ಪ್ರಾರ್ಥನೆಯಲ್ಲೂ ಈಗ
ಶಹರು ನಿದ್ರಿಸುವ ಚಿತ್ರ.
###########################
ಕಾಡು ಹೂವುಗಳು
ಅವೇನು ಕೇಳಲಿಲ್ಲ ತಾವು
ಅರಳಿಕೊಳ್ಳಲು ಇಂತದೇ
ತಾವು ಬೇಕೆಂದು
ಆದರೂ ಅವರವರ ಇಷ್ಟಕ್ಕೆ ತಕ್ಕ
ಸಾಮರ್ಥ್ಯಕ್ಕೆ ತಕ್ಕಂತೆ..
ಕೆಲವು ಕುಂಡದಲ್ಲಿ ಅರಳಿಕೊಂಡವು
ಇನ್ನು ಕೆಲವು ಪಾತಿಯಲ್ಲಿ
ಹಸಿವೆಯೆಂಬುದು ಗೊತ್ತೇ ಆಗದಂತೆ
ನೀರು ಗೊಬ್ಬರ ಹದವರಿತು ದಕ್ಕಿಸಿಕೊಂಡವು.
ತುಟಿ ತುಂಬ ನಗು ತುಳುಕಿಸಿಕೊಂಡು
ಒಡಲ ತುಂಬ ಕಂಪು ತುಂಬಿಕೊಂಡು
ಬಣ್ಣ ಬಣ್ಣದ ಪಕಳೆಗಳು
ಬಿರಿದದ್ದೊಂದೇ ತಡ..
ದೂರದ ಮಾರುಕಟ್ಟೆಯಲ್ಲಿ
ಬೆಲೆ ನಿಗದಿಯಾಯಿತು
ಪಾಪಕ್ಕೋ,ಪುಣ್ಯಕ್ಕೋ,ಶಾಪಗ್ರಸ್ಥರಂತೆ
ಕೆಲವು ಹಿತ್ತಲಿನಲ್ಲಿಯೇ ಉಳಿದುಕೊಂಡವು.
ಸAಭ್ರಮದ ಸಡಗರದ ನಗು
ತುರುಬಿನಲ್ಲಿ,ಉದ್ದಜಡೆಯಲ್ಲಿ
ಮಂಟಪದಲ್ಲಿ,ವೇದಿಕೆಯಲ್ಲಿ
ಹಾರ ತುರಾಯಿಗಳಲ್ಲಿ
ಅಕಾಲಿಕ ಅವಸಾನ
ಪೈಪೋಟಿಯ ಜಿದ್ದಿನಲ್ಲಿ.
ಅಲ್ಲಿ ಬೆಟ್ಟದಿರುಕಲಿನಲ್ಲಿ
ಯಾರ ದೇಖರೇಖಿಯೂ ಇಲ್ಲದೆ
ಹೆಸರಿಲ್ಲದ ಕೆಂಪು,ಹಳದಿ,ಕಡುನೀಲಿ
ಬಣ್ಣನೆಗೂ ಸಿಗದ ಬಣ್ಣಗಳು
ಊರಿನೊಳಗೆ ಬೇರನ್ನೂರಲು
ಸುತರಾಂ ಒಪ್ಪುತ್ತಲೇ ಇಲ್ಲ
ಬಣ್ಣದೊಳಗಿನ ಸಹಜ ನಗು
ಮಾಸಬಹುದೆಂಬ ದಿಗಿಲಿವೆಯೆಂಬಂತೆ.
****************************************
ಕವಿ ಪರಿಚಯ
ಸಮತಾ ಆರ್.
ನನ್ನ ಗೆಳತಿ ಸ್ಮಿತಾ ಅಮೃತರಾಜ್ ಬಾಹ್ಯರೂಪಕ್ಕಷ್ಟೇ ಅಲ್ಲ ಅಂತರಂಗದಲ್ಲೂ ಅಪ್ಪಟ ಸುಂದರಿ. ಅತ್ಯಂತ ವಿನೀತ ಭಾವವುಳ್ಳ ಸೌಮ್ಯ ಜೀವಿ. ತುಸು ಹೆಚ್ಚೇ ಭಾವುಕರು. ಸ್ಮಿತಾ ಅವರ ಬರಹಗಳಲ್ಲಿನ ಭಾಷೆಯ ಬಳಕೆ, ಭಾವದ ಗ್ರಹಿಕೆ ನೋಡಿದರೇ ಸಾಕು ಅವರೆಷ್ಟು ಸೂಕ್ಷ್ಮರೂಪಿ ಎಂಬುದನ್ನು ತಿಳಿಯಲು. ಅವರನ್ನು ಕುರಿತು ಪರಿಚಯಿಸಿದ ‘ಸಂಗಾತಿ’ಯ ಪ್ರಯತ್ನಕ್ಕೆ ಖುಷಿಯಾಗುತ್ತಿದೆ. ಅಭಿನಂದನೆಗಳು ಸ್ಮಿತಾ. ಚೆಂದ ಬರೆದಿರುವ ಸಮತಾ ಅವರಿಗೂ ಧನ್ಯವಾದಗಳು.
ಸ್ಮಿತಾರವರ ಹೆಸರು ಕೇಳಿದೊಡನೆಯೇ ಅವರ ಸ್ಮಿತವದನ ಕಣ್ಣೆದುರು ನಿಲ್ಲುತ್ತದೆ. ಅವರ ಪ್ರಬಂಧ, ಕವನಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತವೆ. ಅವರ ಬರಹಗಳಲ್ಲಿ ಜಾದೂ ಇದೆ.
ಸ್ಮಿತಾಳಷ್ಟೇ ಚೆಂದದ ಪರಿಚಯ ಸಮತಾ..ಖುಷಿ ತುಂಬಾ..ಪ್ರೀತಿ ರಾಶಿ ಇಬ್ಬರಿಗೂ..
ಕಣ ಕಣಗಳಿಗೂ ಜೀವ, ಭಾವ ತುಂಬಿ, ಅನುಭವಿಸಿ ನಲಿವ ನೆಚ್ಚಿನ ಲೇಖಕಿ ಸ್ಮಿತಾರ ಅಕ್ಷರಗಳು ಬಹಳ ಆಪ್ತ.
ಚೆಂದದ ಪರಿಚಯ. ಶುಭಾಶಯ..
ಬದುಕನ್ನು ಅದಮ್ಯವಾಗಿ ಪ್ರೀತಿಸುವ ಸ್ಮೀತಾ ಅವರು ಪುಟ್ಟ ಹಳ್ಳಿಯಿಂದಲೇ ಲೋಕ ಪರಿಚಿತಳಾಗುವ ಪರಿ ನನಗೆ ಇಷ್ಟವಾಯಿತು. ಅಭಿನಂದನೆಗಳು ಭೂಮಿಒಡತಿಗೆ….
ಸರಳ ಸಜ್ಜನಿಕೆಯ ಮಂದಸ್ಮಿತದ ಅಮೃತಪಾನ ಸ್ಮಿತಾ ಹಳ್ಳಿಯ ಅಪ್ಪಟ ಸೊಗಡಿನ ಸಾಕಾರಮೂರ್ತಿ. ..ಯಾವುದೇ ಕವಿಮನಸಿನ ತಲ್ಲಣಗಳನ್ನು ಅರ್ಥೈಸುವ ..ಬರೆಯುವ.. ಅಸಕ್ತಿ ಉಳ್ಳ ಇವರ ಗುಣ ಎಲ್ಲರಿಗೂ ಮಾದರಿ… ಹಾಗೂ ಅನುಕರಣೀಯ..ಅಭಿನಂದನೆಗಳು ಗೆಳತಿ
Though I am very poor in Kannada I enjoyed reading Kavita written by Smitha daughter of my very very close friend Late P.G.venkataraman.God bless you Smitha.
ಸ್ಮಿತಾ ಅಮೃತರಾಜ ಕವಿತೆಗಳು ಕಣ್ಣು ಹಾಯಿಸುವಷ್ಟರಲ್ಲಿ ನಮ್ಮನ್ನು ಸೆಳೆದುಕೊಂಡು ಬಿಡುತ್ತವೆ. ಶಬ್ದಗಳ ಹೆಣಿಕೆಯಲ್ಲಿ ಕುಸುರಿದೆ. ಕಸುವೂ ಇದೆ. ನೋವಿನ ಅಲೆಗಳಲೂ ನಲಿವಿನ ಜೀಕಿದೆ.ತಳಸ್ಪರ್ಶಿಯಾದ ಇವರ ಕವಿತೆಗಳು ನೈಜತೆಯ ಅರಿವು ಮೂಡಿಸಿ ವಾಸ್ತವಿಕತೆಯ ದಡಕ್ಕೆ ತಂದು ಮುಟ್ಟಿಸುತ್ತವೆ. ಸದಾ ಹಸನ್ಮುಖಿ,ಸ್ನೇಹ ಜೀವಿ ಸ್ಮಿತಾರಿಗೆ ಅಭಿನಂದನೆಗಳು
ಸ್ಮಿತಾ ನನ್ನ ಚಿಕ್ಕಪ್ಪನ ಮಗಳು. ಅವಳ ತವರು ಮನೆಯಾದ ಪಳಂಗಾಯವು ಬಂಟಮಲೆ ಕಾಡೊಳಗಿರುವ ನಾಲ್ಕಾರು ಮನೆಗಳ ಪುಟ್ಟ ಊರು. ಸುಸಂಸ್ಕೃತ ಮನೆಯಾದರೂ ಅಲ್ಲಿ ಸಾಹಿತ್ಯದ ತಿಳುವಳಿಕೆ ಇರುವವರು ಇಲ್ಲ. ಅಂತ ಕಡೆ ಹುಟ್ಟಿ ಬೆಳೆದ ಸ್ಮಿತಾ ತನ್ನ ಸ್ವಂತ ಪ್ರಯತ್ನ ಮತ್ತು ಸಾಹಿತ್ಯದ ಬಗೆಗಣ ಅದಮ್ಯ ಮೋಹದಿಂದ ಬೆಳೆದು ಈ ಹಂತ ತಲುಪಿದ್ದಕ್ಕೆ ತುಂಬ ಸಂತೋಷ ಮತ್ತು ಅಭಿಮಾನವೆನಿಸುತ್ತದೆ. ಆಕೆಯೊಂದು ಕಾದಂಬರಿ ಬರೆಯಬೇಕು
ಸಂಗಾತಿ ಪತ್ರಿಕೆಯ ನಿರಂತರ ಪ್ರೋತ್ಸಾಹಕ್ಕೆ ಶರಣು. ನೀವು ಬರಹಗಾರರನ್ನು ಬೆಳೆಸುವ ಪರಿ ಅನನ್ಯ.ಪ್ರತಿಕ್ರಿಯಿಸಿದ ನಿಮ್ಮೆಲ್ಲರ ಪ್ರೀತಿಗೆ ವಂದನೆ ಅನ್ನುವುದು ಸಣ್ಣ ಪದ.ಥಾಂಕ್ಸ್ ಸಂಗಾತಿ ಮತ್ತು ನಿಮಗೆಲ್ಲ
ಸ್ಮಿತಾ ಅವರ ಬರವಣಿಗೆಯಲ್ಲಿ ಆಪ್ತತೆಯ ಸೊಗಸಿದೆ.ನವಿರಾದ ಅವರ ಬರಹ ಹೀಗೇ ಮುಂದುವರೆಯಲಿ. ಅವರಲ್ಲಿ ಸಲಹೆ ಕೊಟ್ಟು ಸಲಹುವ ಗುಣವಿದೆ.ಶುಭಾಶಯಗಳು
ಗೀತಾ ಮೋಂಟಡ್ಕ
ಸಂಗಾತಿ ಪತ್ರಿಕೆ ಹಾಗೂ ಅವರನ್ನು ಆತ್ಮೀಯವಾಗಿ ಪರಿಚಯಿಸಿದ ಸಮತಾ ಅವರಿಗೆ ಮೊದಲ ನಮನ.
ಸ್ಮಿತಾ ನನ್ನ ಸಂಬಂಧಿ. ನನ್ನ ಮುದ್ದಿನ ತಂಗಿ. ಅವಳ ಕವಿತೆ ಲಲಿತ ಪ್ರಬಂಧಗಳನ್ನು ಓದುವುದೆಂದರೆ ಒಂಥರಾ ಖುಷಿ, ಸಂಭ್ರಮ. ಬದುಕಿಗೆ ತೀರಾ ಹತ್ತಿರವಾಗುತ್ತೆ ಇವಳ ಬರಹ. ನೀವೂ ಬರೆಯಿರಿ ಅಂತ ಪ್ರೋತ್ಸಾಹಿಸುತ್ತ ತಾನು ಬೆಳೆಯುತ್ತ ಇತರರನ್ನೂ ಬೆಳೆಸುವ ಗುಣ ತುಂಬಾ ಶ್ರೀಮಂತವಾಧ್ದು. ಸಾಹಿತ್ಯ ಕ್ಷೇತ್ರದಲ್ಲಿ ಉತ್ತುಂಗ ಶಿಖರವನ್ನೇರುವುದನ್ನು ಕಾಯುತ್ತಾ ಇರುವೆ.
ಶುಭವಾಗಲಿ
ಸ್ಮಿತಾ ಅವರದ್ದು ಅಪ್ಪಟ ಕಾವ್ಯ ಪ್ರತಿಭೆ. ಗದ್ಯದಲ್ಲೂ ಪದ್ಯದ ಲಯವಿರುವುದು. ಅಭಿನಂದನೆಗಳು.
ಲೋಕನಾಥ್ ಅಮಚೂರು
ಪರಿಚಯಿಸಿದವರ ಅಭಿಪ್ರಾಯ ದಂತೆ ಖಂಡಿತವಾಗಿಯೂ ಸ್ಮಿತಾ ರವರ ಆತ್ಮ ಪರಿಶುದ್ಧವಾದುದು. ಎಲ್ಲಿ ಒಳ್ಳೆಯ ಮನಸ್ಸು, ಒಳ್ಳೆಯ ಭಾವನೆ ಇರುತ್ತದೊ ಅಲ್ಲಿ ಒಳ್ಳೆಯ ಕವಿತೆ, ಒಳ್ಳೆಯ ಲೇಖನ ಗಳು ಬರುತ್ತದೆ. ಅನುಭವದ ಮೂಸೆಯಿಂದ ಬರುವ ಸಾಹಿತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಈರ್ವರೀಗೂ ವಂದನೆಗಳು.
ಸ್ಮಿತಾ ಅವರ ಬದುಕು ಬರಹ, ಸಂದರ್ಶನ ಎಲ್ಲವೂ
“ಸತ್ಯಂ ಶಿವಂ ಸುಂದರಂ”
ಸಾಹಿತ್ಯ ಲೋಕಕ್ಕೆ ಸ್ಮಿತಾ ಅವರದ್ದು ಗಟ್ಟಿ ಹೆಜ್ಜೆ..,ಹೃದಯ ತಟ್ಟುವ ಶಕ್ತಿ ಅವರ ಬರವಣಿಗೆಯಲ್ಲಿದೆ.ಆಲೋಚನೆ ವಸ್ತು ಇದೆ.ಹಾಗಾಗಿ ಅವರು ಕನ್ನಡಕ್ಕೆ ಅಸ್ತಿ.ಅಭಿನಂದನೆಗಳು.