ಗಾಂಧಿ ವಿಶೇಷ
ಗಾಂಧಿ ಎಂಬ ಶಕ್ತಿ!
ಗಾಂಧೀಜಿ ‘ – ಎಂಬುದು ಒಂದು ವ್ಯಕ್ತಿಯೇ, ಒಂದು ಸಂಸ್ಥೆಯೇ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ನೈತಿಕ ಚಿಂತನೆಗಳ ಮೊತ್ತವೇ? ಹೇಗೆ ಅರ್ಥೈಸಬೇಕು ?
ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲಿ ಹೋದರೂ ಜನರನ್ನು ಆಯಸ್ಕಾಂತದಂತೆ ಸೆಳೆಯುತ್ತಿದ್ದರು. ನಿಸ್ವಾರ್ಥ, ನಿರ್ಭೀತಿ, ಆಧುನಿಕ ಮನೋಭಾವ ಹಾಗೂ ಪಾರಂಪರಿಕ ನಿಷ್ಠೆ, ಸಮುದಾಯ ನಿಷ್ಠೆ, ಸರಳತೆ ಮೊದಲಾದವನ್ನು ಉಸಿರಾಡುತ್ತ ಜಾತಿ-ಮತಗಳಲ್ಲಿ ಸಮಭಾವ ಕಂಡವರು. ಗೀತೆ ಮತ್ತು ಉಪನಿಷತ್ತಿನ ಆರಾಧಕರು. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು.
ಇಂದಿನ ಧಾವಂತದ, ನೆಮ್ಮದಿಯಿರದ, ಹಣವೇ ಮುಖ್ಯವಾಗಿರುವ, ಅಪನಂಬಿಕೆ, ಅಸಹಿಷ್ಣುತೆ ಗಳು ಆಳವಾಗಿ ಬೇರು ಬಿಡುತ್ತಿರುವ ಈ ಕಾಲದಲ್ಲಿ ಗಾಂಧೀಜಿಯವರ ಆದರ್ಶಗಳು, ಜೀವನ ವಿಧಾನ ಪರಿಹಾರೋಪಾಯಗಳಾಗಿವೆ.
ಮೋಹನ ದಾಸ್ ಕರಮಚಂದ ಗಾಂಧಿ 1915ರಲ್ಲಿ ಗಾಂಧೀಜಿಯಾಗಿ ಭಾರತಕ್ಕೆ ಬಂದಿಳಿಯುವ ಮೊದಲೇ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಳಿತದ ದೌರ್ಜನ್ಯದ ವಿರುದ್ಧ ಸೆಣೆಸಾಡಿ ಅದನ್ನು ಮಣಿಸಿದ ಅನುಭವವಿತ್ತು. ಅವರು ಅಲ್ಲಿನ ಕಾರ್ಮಿಕ ವರ್ಗದವರ ಬೆಂಬಲಕ್ಕೆ ನಿಂತು ಅವರಿಗೆ ಸಿಗಬೇಕಾದ ಗೌರವ ಹಾಗೂ ಸ್ಥಾನ-ಮಾನವನ್ನು ದೊರಕಿಸಿಕೊಟ್ಟು ಭಾರತಕ್ಕೆ ಹಿಂದಿರುಗಿದ್ದರು. ಆಗ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚುತ್ತಿತ್ತು. ಮೊದಲೇ ಮಹಾಯುದ್ದದ ಸಂದರ್ಭದಲ್ಲಿ ಸ್ವಾತಂತ್ರ್ಯವನ್ನು ಭಾರತಕ್ಕೆ ನೀಡಬಹುದೆಂಬ ಆಸೆಯಿಂದ ಬ್ರಿಟಿಷರ ಪರ ಹೋರಾಡಿದ ಭಾರತೀಯರಿಗೆ ನಿರಾಸೆ ಕಾದಿತ್ತು. ಗಾಂಧೀಜಿಯವರ ರಾಜಕೀಯ ಗುರುಗಳಾಗಿದ್ದ ರಾಜಾಜಿಯವರು ದಕ್ಷಿಣ ಆಫ್ರಿಕಾದಲ್ಲಿ ಅವರ ಹೋರಾಟವನ್ನು ಗಮನಿಸಿ ಭಾರತದಲ್ಲಿ ಅವರ ಅವಶ್ಯಕತೆಯನ್ನು ಮನಗಂಡರು. ಗಾಂಧೀಜಿಯವರ ಸತ್ಯಾಗ್ರಹ, ಸ್ವರಾಜ್ಯದ ಕಲ್ಪನೆ ಮೊದಲದ ವಿಶಿಷ್ಟ ಅಸ್ತ್ರಗಳು, ಸಿದ್ಧಾಂತಗಳಾಗಲೇ ವಿಶ್ವದಲ್ಲಿ ಜನಪ್ರಿಯವಾಗಿದ್ದವು. ಅವರ ಅಹಿಂಸೆಯ ಹಾದಿಗೆ ವಿಶ್ವವೇ ಬೆರಗಾಗಿತ್ತು. ಅದೇ ಹೊತ್ತಿಗೆ ಭಾರತದಲ್ಲಿ ಹೋರಾಟದ ಚುಕ್ಕಾಣಿ ಹಿಡಿಯಬಲ್ಲ ನಾಯಕನ ಅವಶ್ಯಕತೆ ಇತ್ತು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಯಶಸ್ಸು ಭಾರತದಲ್ಲಿ ವರದಾನವಾಯ್ತು. ಅದಾಗಲೇ ಭಾರತದಲ್ಲಿ ಘಟಾನುಘಟಿ ನಾಯಕರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದರು.ಲಾಲ್,ಬಾಲ್, ಪಾಲ್, ರಾಜಾಜಿ, ಭಗತ್ ಸಿಂಗ್, ಅರುಣಾ ಅಸಫ್ ಅಲಿ, ಪಂತುಲು, ಚಂದ್ರಶೇಖರ ಆಜಾದ್, ಚಿತ್ತರಂಜನ್ ದಾಸ್, ಬಟುಕೇಶ್ವರ ದತ್, ಸುಖದೇವ್, ಅಲ್ಲೂರಿ ಸೀತಾರಾಮ ರಾಜು, ಶ್ರೀ ಅರಬಿಂದೋ, ರಾಸ್ ಬೆಹಾರಿ ಬೋಸ್, ಸುರೇಂದ್ರನಾಥ್ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್, ಲಿಯಾಕತ್ ಅಲಿ, ಅಸಫ್ ಅಲಿ, ಸರ್ದಾರ್ ಪಟೇಲ್, ಜವಾಹರಲಾಲ್ ನೆಹರು, ಶೌಕತ್ ಅಲಿ, ಸರೋಜಿನಿ ನಾಯ್ಡು ಮೊದಲಾದ ಅನೇಕಾನೇಕ ಹಿರಿಕಿರಿಯ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತಮ್ಮ ಮಾರ್ಗಗಳಲ್ಲಿ ಇದ್ದರು. ಇವರನ್ನೆಲ್ಲ ಮೀರಿ ಆಗ ತಾನೇ ಭಾರತಕ್ಕೆ ಬಂದಿಳಿದ ಗಾಂಧೀಜಿ ಕೆಲವೇ ವರ್ಷಗಳಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿಯನ್ನು ಹಿಡಿಯುವಂತಾದದ್ದು ‘ ಮಹಾತ್ಮ’ ಎಂದು ರವೀಂದ್ರನಾಥ ಟ್ಯಾಗೋರರಂಥ ಧೀಮಂತರಿಂದ ಕರೆಸಿಕೊಂಡಿದ್ದು ಒಂದು ಅನನ್ಯ ಕಥೆ. ಅವರು ಈ ಬೆಳವಣಿಗೆಗೆ ಬಹುಮುಖ್ಯ ಕಾರಣ ಬಡವರ, ಕೆಳವರ್ಗದವರ, ಕಾರ್ಮಿಕರ ಬಗೆಗೆ ಇದ್ದ ಅವರ ಮಾನವೀಯ ಧೋರಣೆಗಳು, ಸಮಾನತೆಯ ದೃಷ್ಟಿಕೋನ, ಅಪಾರ ಸಹನೆ, ಶಾಂತಿ, ತ್ಯಾಗದ ಮನೋಭಾವ ಎಂತಲೇ ಹೇಳಬಹುದು. ಅದುವರೆಗೆ ನಾಯಕರು ಜನರ ಮಧ್ಯೆ ಜನರಿಗಾಗಿ ತಮ್ಮನ್ನು ಗುರುತಿಸಿಕೊಂಡಿದ್ದು ಕಡಿಮೆ, ತಿಲಕರಂಥ ಕೆಲವರನ್ನು ಹೊರತುಪಡಿಸಿ. ಹಾಗಾಗಿ ಗಾಂಧೀಜಿ ಜನನಾಯಕರಾದರು. ಅವರನ್ನು ಹಿಂಬಾಲಿಸಲು ಜನಸಾಗರವೇ ಕಾದು ನಿಲ್ಲುತ್ತಿತ್ತು. ಅವರ ಒಂದು ಹೇಳಿಕೆಯಿಂದ ಸತ್ಯಾಗ್ರಹ ಆರಂಭವಾಗುತ್ತಿತ್ತು ಅಥವಾ ನಿಲ್ಲುತ್ತಿತ್ತು!! ಇದು ಗಾಂಧೀಜಿಯವರ ಆಂತರಿಕ ಶಕ್ತಿ. ಅದು ಜನರ ಮನೋಬಲವನ್ನು ಹೆಚ್ಚಿಸಬಲ್ಲ ನೈತಿಕ ಶಕ್ತಿಯಾಗಿ ಇಡೀ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮಗೆ ಕಂಡುಬರುತ್ತದೆ.
ಇಂದು ನಾವು ‘ ಜನಾಭಿಪ್ರಾಯ’ ಎಂಬ ಪದವನ್ನು ಆಗಾಗ ಬಳಸುತ್ತೇವೆ. ಇದನ್ನು ಮೊದಲು ನೀಡಿದವರು ಗಾಂಧೀಜಿ. ಅದನ್ನು ಅವರು ‘ public opinion’ ಎಂದು ಕರೆದರು ಹಾಗೂ ಆ ಜನಾಭಿಪ್ರಾಯವೇ ಮುಖ್ಯ ಎಂಬುದನ್ನು ಅವರು ಪ್ರತಿಪಾದಿಸಿದರು. ತಮ್ಮ ಅಭಿಪ್ರಾಯವನ್ನು ಎಂದೂ ಯಾರ ಮೇಲೂ ಅವರು ಹೇರಲಿಲ್ಲ. ಹಾಗೆಂದು ತಾವು ನಂಬಿದ, ನಿರ್ಧರಿಸಿದ ಹೆಜ್ಜೆಗಳಿಂದ ಅವರೆಂದೂ ಹಿಂದೆ ಸರಿಯಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಪದೇ ಪದೇ ಅವಮಾನಿತರಾದ ಸಂದರ್ಭವೇ ಇರಲಿ, ಅಲ್ಲಿನ ಭಾರತೇತರು ಅವರ ಮೇಲೆ ಮಾರಣಾಂತಿಕ ಪ್ರಹಾರ ಮಾಡಿದಾಗಲೇ ಇರಲಿ ಅಥವಾ ಭಾರತದಲ್ಲಿ ಅವರಿಗೆ ನೆಹರು, ಪಟೇಲ್, ಬೋಸ್ ಮೊದಲಾದವರೊಂದಿಗೆ ಭಿನ್ನಾಭಿಪ್ರಾಯಗಳಿದ್ದಾಗಲೂ ಅವರು ತಮ್ಮ ಹೆಜ್ಜೆಯಿಂದ, ನಿರ್ಧಾರದಿಂದ ಹಿಂದೆ ಸರಿದದ್ದಿಲ್ಲ. ಅವರ ಸತ್ಯಾಗ್ರಹ ತಂತ್ರ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾದಂತೆ ಭಾರತದಲ್ಲೂ ಆಯಿತು.ಅವರು ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತಾರೆಂದರೆ ಬ್ರಿಟಿಷರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರೂ ಹೆದರುತ್ತಿದ್ದರು. ಇಂಥ ಅಹಿಂಸೆಯ ಹೋರಾಟ ಮಾರ್ಗವನ್ನು ಅದುವರೆಗೂ ಜಗತ್ತು ಕಂಡಿರಲಿಲ್ಲವಾದ್ದರಿಂದ ಅದನ್ನು ಎದುರಿಸುವ ಮಾರ್ಗವೇ ಇರಲಿಲ್ಲ. ಅದಕ್ಕೆ ತಲೆಬಾಗುವುದೊಂದೇ ಆಗಿದ್ದ ಮಾರ್ಗ!!
ಈ ಸತ್ಯಾಗ್ರಹಕ್ಕೆ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ್ದ ಆಹಾರದ ಪ್ರಯೋಗವೇ ಪ್ರೇರಣೆಯೂ ಹಾಗೂ ಯಶಸ್ಸಿನ ಗುಟ್ಟೂ ಆಯಿತು ಎನ್ನಬಹುದು. ಅವರು ಅನ್ನಾಹಾರಗಳನ್ನು ಮಿತಿಗೊಳಿಸುವುದು, ಆಗಾಗ ತ್ಯಜಿಸುವುದರ ಮೂಲಕ ದೈಹಿಕ, ಮಾನಸಿಕ ಹಾಗೂ ನೈತಿಕ ಶಕ್ತಿಯನ್ನು ವರ್ಧಿಸಿಕೊಳ್ಳುವ ವಿನೂತನ ಪ್ರಯೋಗವನ್ನು ಅಲ್ಲಿ ಮಾಡಿದ್ದರು. ಅಲ್ಲದೇ ಅಲ್ಲಿ ತಮ್ಮ ಮನೆಯಿಂದ 6-7ಮೈಲು ದೂರದಲ್ಲಿರುತ್ತಿದ್ದ ಕಛೇರಿಗೆ, ಇತರ ಸ್ಥಳಗಳಿಗೆ ನಡೆದೇ ಹೋಗುತ್ತಿದ್ದುದು ಮುಂದೆ ಭಾರತದಲ್ಲಿ ದಂಡಿ ಮೊದಲಾದ ಸತ್ಯಾಗ್ರಹಗಳನ್ನು ಕಾಲ್ನಡಿಗೆಯಲ್ಲಿ ಮಾಡಲು ಸಾಧ್ಯವಾಯಿತು. ಇಂಥ ಅವರು ಕಾಣ್ಕೆ ಬಹಳ ಹಿರಿದು. ಅವರೊಬ್ಬ ದೂದದರ್ಶಿ. ಅವರ ಅನನ್ಯ ಸಂಗ್ರಾಮ ಮಾರ್ಗದಿಂದಲೇ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ದಿಕ್ಕು ದೊರೆಯಿತು. ಅವರ ಈ ಮಾರ್ಗವನ್ನು ವಿಶ್ವದ ಇತರ ರಾಷ್ಟ್ರಗಳ ನಾಯಕರು ತಮ್ಮ ನೆಲದ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಂಡರು. ಅಮೇರಿಕಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಆಫ್ರಿಕಾದ ನೆಲ್ಸನ್ ಮಂಡೇಲಾ, ಮ್ಯಾನ್ಮಾರ್ ನ ಆಂಗ್ ಸಾನ್ ಸೂಕಿ ಮೊದಲಾದವರು ಗಾಂಧೀಜಿಯವರ ಮಾರ್ಗವನ್ನೇ ತಾವು ಆಯ್ದುಕೊಂಡಿದ್ದಾಗಿ ಹೇಳಿದ್ದಾರೆ.
ಅವರದು ನಿರ್ಮೋಹಿ ಬಿಡುವಿಲ್ಲದ ದುಡಿತ. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಅವರು ವಿರಮಿಸಲಿಲ್ಲ. ಪಂಜಾಬಿನ ಗಡಿ ಭಾಗದಲ್ಲಿ ನಡೆಯುತ್ತಿದ್ದ ದಂಗೆಯ ನಿರಾಶ್ರಿತರನ್ನು ಕುರಿತು ಭಾಷಣ ಮಾಡಲು ಹೋಗಿದ್ದರು. ಅವರು ಪ್ರತಿಪಾದಿಸಿಕೊಂಡು ಬಂದಿದ್ದ ಅವರ ಕನಸಿನ ಕೂಸಾದ ‘ ಗ್ರಾಮ ಸ್ವರಾಜ್ಯ’ ಅನುಷ್ಠಾನಕ್ಕೆ ಬರಲಿಲ್ಲ. ಒಬ್ಬ ಪತ್ರಕರ್ತ ಅವರನ್ನು ಈ ಬಗ್ಗೆ ಕೇಳಿದಾಗ ಅವರು, ‘ ಈಗ ನಾನೇನು ಮಾಡಲಿ? ಅದಕ್ಕೆ ಆ ಶಕ್ತಿಯಿದ್ದರೆ ಅದು ಉಳಿದುಕೊಳ್ಳುತ್ತದೆ ‘ ಎಂದು ವಿರಾಗಿಯಂತೆ ಮಾತನಾಡಿದ್ದರು. ಸುಮಾರು 75 ವರ್ಷಗಳ ನಂತರ ಅದಕ್ಕೆ ಆ ಶಕ್ತಿ ಇದೆ ಎಂದು ಮತ್ತೆ ಸಾಬೀತಾಗಿದೆ. ಇಂದು ಜಗತ್ತೇ ಗಾಂಧೀಜಿಯವರ ತತ್ವಗಳಿಗೆ ಮನಸೋಲುತ್ತಿದೆ. ಅಮೇರಿಕಾದ ಟ್ರಂಪ್, ಇಂಗ್ಲೆಂಡಿನ ಪ್ರಧಾನಿ ಗಾಂಧೀಜಿಯನ್ನು ಸ್ಮರಿಸುತ್ತಾರೆ. ಅವರನ್ನು ‘ ನೇಕೆಡ್ ಫಕೀರ್’ ಎಂದು ಕರೆದ ಜನರೇ ಅವರನ್ನು ಆರಾಧಿಸುತ್ತಿದ್ದಾರೆ. ಇದೇ ಕಾಲಚಕ್ರ.
ಗಾಂಧಿ ಕೇವಲ ಒಂದು ಚಿಂತನೆಯಲ್ಲ. ಅದೊಂದು ಜೀವನ ವಿಧಾನ. ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಆಹಾರ, ನಿದ್ರೆ, ವ್ಯಾಯಾಮ, ಔಷಧಿ, ಸಂಯಮ ಮೊದಲಾದ ಎಲ್ಲ ಪ್ರಯೋಗಗಳು ಅವರ ನಿರಂತರ ಹೋರಾಟದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನೆರವಾಗಿವೆ. ಅವರ ಈ ಯಶಸ್ವಿ ಪ್ರಯೋಗಗಳೇ ಸತ್ಯಾಗ್ರಹ, ಗುಡಿಕೈಗಾರಿಕೆ, ಸರ್ವೋದಯ, ಸ್ವದೇಶಿ ಮೊದಲಾದ ಅಸ್ತ್ರಗಳಾದವು, ಮಾರ್ಗಗಳಾದವು.
ಕಳೆದೆರಡು ದಶಕಗಳಿಂದ ಭಾರತದಲ್ಲಿ ಮತ್ತೆ ಗಾಂಧಿ ಮಂತ್ರ ಅನುರಣಿಸುತ್ತಿರುವ ಒಳ್ಳೆಯ ಬೆಳವಣಿಗೆ ನಡೆದಿದೆ. ಜಾಗತೀಕರಣದ ಹೊಡೆತಕ್ಕೆ ನಲುಗಿದ ಭಾರತಕ್ಕೆ ಗಾಂಧೀಜಿಯವರ ಹಳ್ಳಿಗಳನ್ನು ಉದ್ಧರಿಸುವ ಸ್ವರಾಜ್ಯದ ಹಾದಿ ಬೇಕೆನ್ನಿಸುತ್ತಿದೆ. ಸಧ್ಯದ ಕೊರೊನಾ ಆಘಾತದಲ್ಲಂತೂ ವಿಶ್ವವೇ ಗಾಂಧಿಯುಗಕ್ಕೆ ತೆರೆದುಕೊಳ್ಳುವ ಹಾಗೆ ಕಾಣಿಸುತ್ತಿದೆ. 1885ರ ಹೊತ್ತಿಗೇ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಕಾರ್ಮಿಕರ ವಲಸೆಯನ್ನು ವಿರೋಧಿಸಿ ಮಾತನಾಡಿದ್ದರು. ನಾವು ವಾಸಿಸುವ ಸ್ಥಳದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕೆಂದು ಹೇಳುತ್ತ ಸಮುದಾಯ, ಆಶ್ರಮ ಪದ್ಧತಿಯ ವಾಸಕ್ಕೆ ತಮ್ಮವರನ್ನು ಅಣಿಗೊಳಿಸಿದ್ದರು. ಅದನ್ನೇ ಭಾರತದಲ್ಲಿ ಅವರು ಸಬರಮತಿ ಮೊದಲಾದ ಆಶ್ರಮಗಳನ್ನು ಸ್ಥಾಪಿಸಿ ಮುಂದುವರೆಸಿದ್ದರು. ಸರಳ ಜೀವನ ನಡೆಸುವುದು ಬಹಳ ಕಷ್ಟ. ಹಾಗಾಗಿಯೇ ಗಾಂಧೀಜಿ ಸಾಮಾನ್ಯರಿಗೆ ನಿಲುಕಿದಂತೆ ಆಳರಸರಿಗೆ ನಿಲುಕಲಿಲ್ಲ. ಇಂದು ಗಾಂಧೀಜಿಯ ಮಾರ್ಗ ಜಗತ್ತಿಗೆ ಉಳಿದ ಏಕೈಕ ಮಾರ್ಗವಾಗಿದೆ. ಅದರಲ್ಲಿ ಭಯೋತ್ಪಾದನೆ, ಬಡತನ, ಅಹಿಂಸೆ, ಅಶಾಂತಿ ಮೊದಲಾದ ಜಾಗತಿಕ ಪಿಡುಗುಗಳಿಗೆ ಮದ್ದಿದೆ. ಅವರೊಂದು ವ್ಯಕ್ತಿಯಲ್ಲಿ, ಶಕ್ತಿಯೂ ಅಲ್ಲ. ಅವರೊಂದು ಜೀವನ ಪದ್ಧತಿ, ಚಿಂತನಾ ಕ್ರಮ. ಕೊಂಡು ಉಣ್ಣುವುದು ಸುಲಭ. ಬೆಳೆದು ಉಣ್ಣುವುದು ಕಷ್ಟ. ಅವರು ಬೆಳೆದು ಉಂಡರು, ಉಟ್ಟರು, ಉಣ್ಣಿಸಿದರು. ಅದಕ್ಕೆ ಹಣಕ್ಕಿಂತ ಸಹನೆ, ಕರ್ತೃತ್ವ ಶಕ್ತಿ, ಪರಿಶ್ರಮ ಅಗತ್ಯ. ಇವ್ಯಾವೂ ಬೇಡವಾದ 20ನೇ ಶತಮಾನದ ಕೊನೆಯ ಹಾಗೂ 21ನೇ ಶತಮಾನದ ಆದಿಯ ಭಾರತಕ್ಕೆ ಈಗ ಗಾಂಧಿ ಬೇಕಾಗಿದ್ದಾರೆ ; ತಡವಾಗಿಯಾದರೂ.
ಗಾಂಧೀಜಿಯವರನ್ನು ಭಾರತದಲ್ಲಿ ರಾಜಕೀಯ ನೆಲೆಯಲ್ಲಿ ಮಾತ್ರ ನೋಡಲಾಗುತ್ತದೆ. ಆದರೆ ಇಂದಿನ ಸಾಂಸ್ಕೃತಿಕ, ಸಾಹಿತ್ಯಕ ರಾಜಕೀಯಕ್ಕೂ ಅವರು ಪ್ರಸ್ತುತರಾಗುತ್ತಾರೆ. ಮಾಧ್ಯಮಗಳೂ ಸೇರಿದಂತೆ ಈ ಎಲ್ಲ ಕ್ಷೇತ್ರಗಳಲ್ಲಿ ನಡೆಯುವ ಭ್ರಷ್ಟಾಚಾರ , ಪ್ರಶಸ್ತಿಗಳಿಗಾಗಿ , ಪದವಿಗಳಿಗಾಗಿ, ಬೇರೆ ಬೇರೆ ಅಕಾಡೆಮಿಗಳ ಹುದ್ದೆಗಳಿಗೆ ಬರಹಗಾರರು, ಸಾಹಿತಿಗಳು, ಮಾಧ್ಯಮಗಳ ಮಂದಿ ಮೊದಲಾದವರು ಸದಾ ಓಲೈಕೆಗಳು, ಗುಂಪುಗಾರಿಕೆ, ಲಾಬಿಯಲ್ಲಿ ನಿರತರಾಗಿರುವವರು ಗಾಂಧೀಜಿಯವರ ಬಗ್ಗೆ, ಅವರ ಚಿಂತನೆಗಳ ಬಗ್ಗೆ ಮೊದಲು ಅರಿಯಲಿ. ರಾಜಕೀಯಕ್ಕಿಂತ ಈ ಕ್ಷೇತ್ರಗಳು ಹೆಚ್ಚು ಹೊಲಸಾಗಿವೆ. ದುರಾಚಾರಗಳು ಹೆಚ್ಚು ನಡೆಯುತ್ತವೆ ಎಂಬುದು ಸೂರ್ಯ ಸತ್ಯ.
*****************************************
ನೂತನ ದೋಶೆಟ್ಟಿ
One thought on “”