ಕಥೆ
ವಿಜಯಶ್ರೀ ಹಾಲಾಡಿಯವರ ಹೊಸ ಕತೆ
ಬದಲಾವಣೆ
ಕುದಿಸಿ ಆರಿಸಿದ ನೀರಿಗೆ ತಂಪಿನ ಬೀಜವನ್ನು ಹಾಕಿ ರುಚಿಗೊಂಚೂರು ಬೆಲ್ಲ ಸೇರಿಸಿ ಚಮಚದಲ್ಲಿ ಕಲಕುತ್ತ ಕುಳಿತಿದ್ದಾಳೆ ಜುಬೇದಾ. ಫ್ಯಾನ್ ತಿರುಗುತ್ತಿದ್ದರೂ ಸೆಖೆಯೇನೂ ಕಮ್ಮಿಯಿಲ್ಲ, ಅಲ್ಲದೇ ಫ್ಯಾನಿಂದ ಬರುವುದೂ ಬಿಸಿಗಾಳಿಯೇ: ಏನೂ ಸುಖವಿಲ್ಲ. “ನೀನು ಕೆಲಸ ಎಂತ ಮಾಡುವುದು ಬೇಡ, ಸುಮ್ಮನೇ ರೆಸ್ಟ್ ತಕೋ. ಹೊತ್ತುಹೊತ್ತಿಗೆ ಸರಿಯಾಗಿ ತಿನ್ನು. ಪುನಃ ಆಸ್ಪತ್ರೆ ಸೇರಿದರೆ ನನ್ನಿಂದಾಗಲಿಕ್ಕಿಲ್ಲ” ಬೆಳಿಗ್ಗೆ ಅಂಗಡಿಗೆ ಹೋಗುವ ಮುಂಚೆ ಎಚ್ಚರಿಸಿ ಹೋಗಿದ್ದಾನೆ ರಹೀಮ. ಅದಲ್ಲದೆ “ಉಮ್ಮ, ನೀವು ಪೂರ್ತಿ ಗುಣವಾಗುವವರೆಗೆ ನಾನು ಕಾಲೇಜಿಂದ ಇಲ್ಲಿಗೇ ಬರುತ್ತೇನೆ. ಮತ್ತೆ ಅಕ್ಷಯನ ಹತ್ತಿರ ಹೋಗಬೇಕು ನಾನು. ಪಾಪ ಅಲ್ಲಿ ಅವನು ಒಬ್ಬನೇ ಆಗಿದ್ದಾನೆ” ಅನ್ವರ ಹೇಳಿದ್ದು ನೆನಪಾದಾಗ ಕಣ್ಣೀರು ಬರುವಂತಾಗಿ ತಟಕ್ಕನೇ ತಡೆಯಲು ಯತ್ನಿಸಿದಳು. “ಆಗದ್ದು ಹೋಗದ್ದು ಎಲ್ಲ ಯೋಚನೆ ಮಾಡುತ್ತ ಕುಳಿತದ್ದಕ್ಕೇ ಹುಷಾರಿಲ್ಲದೆ ಆಗುವುದು ನಿನಗೆ. ಸ್ವಲ್ಪ ನೆಮ್ಮದಿಯಾಗಿ ಇರು ನೋಡುವಾ ಮನೆಯಲ್ಲಿ” ಮೂರು ದಿನ ಆಸ್ಪತ್ರೆಯಲ್ಲಿದ್ದು ಡಿಸ್ಚರ್ಜ್ ಆಗಿ ಮನೆಗೆ ಬಂದ ಕೂಡಲೇ ರಹೀಮ ಹೇಳಿದ ಮಾತು. ತಾನೇನು ಬೇಕಂತ ಮಾಡಿಕೊಂಡಿದ್ದೇನ ಇದೆಲ್ಲ: ಹುಷಾರಿಲ್ಲದೆ ಹಾಸಿಗೆ ಹಿಡಿಯುವುದು ಯಾರಿಗಾದರೂ ಆಸೆಯಾ? “ಕರಾವಳಿಯ ಹವೆ ನಿಮಗೆ ಹಿಡಿಯುವುದಿಲ್ಲ ಅಮ್ಮ” ಅಂತ ಡಾಕ್ಟರ್ ಹೇಳಲಿಲ್ಲವಾ? ಮೊನ್ನೆ ಸ್ವಲ್ಪ ಟೆನ್ಷನ್ ಮಾಡಿಕೊಂಡದ್ದು ಹೌದು. ನಿಂತ ನೆಲವೇ ಕುಸಿದು ಬೀಳುತ್ತದೆ ಅನ್ನುವಾಗ ಯಾರಿಗಾದರೂ ಯೋಚನೆಯಾಗುವುದಿಲ್ಲವಾ? ಅನ್ವರ ಕೂಡಾ ಮನೆಬಿಟ್ಟು ಹೋಗಿದ್ದಾನೆ. ಹೊರಗಡೆ ಒಂದು ತರಕಾರಿ ತಕೊಳ್ಳುವ ಅಂತ ಹೋದರೂ ನಮ್ಮಂತವರ ಕಿವಿಗೆ ಬೀಳಬೇಕೆಂದೇ ಕೆಲವು ನಂಜಿನ ನಾಲಗೆಯವರು ಹೇಳುವುದು ಕೇಳುತ್ತದೆ. “ಈ ಸಾಯ್ಬರನ್ನೆಲ್ಲ ಪಾಕಿಸ್ತಾನಕ್ಕೆ ಓಡಿಸಬೇಕು ಮೊದಲು. ಆಗ ಎಲ್ಲವೂ ಸರಿಯಾಗುತ್ತದೆ” ಯಾ ಅಲ್ಲಾಹ್! ಎಂತಾ ಮಾತು! ನಾವು ಹೋಗುವುದಾದರೂ ಎಲ್ಲಿಗಂತ ಬೇಕಲ್ಲಾ. ಯಾವ ಕಾಲದಿಂದಲೂ ಇಲ್ಲಿಯೇ ಇದ್ದವರಲ್ವಾ ನಾವು…. ಈಗ ಹೋಗಿ, ಹೋಗಿ ಅಂತ ಹಂಗಿಸಿದರೆ….ಅದೂ ಅಲ್ಲದೆ ಆರಕ್ಕೇರದ ಮೂರಕ್ಕಿಳಿಯದ ನಮ್ಮಂತವರೆಲ್ಲ ಎಲ್ಲಿಗೋ ಹೋಗಿ ಹೇಗೆ ಬದುಕುವುದು? ದೊಡ್ಡ ದೊಡ್ಡ ದುಡ್ಡಿನವರಾದರೂ ಎದ್ದುಕೊಂಡು ಎಲ್ಲಿಗಾದರೂ ಹೋಗಿ ಜೀವನ ತೆಗೆದಾರು. ಛೇ, ಮೊದಲೆಲ್ಲ ಹೀಗಿರಲಿಲ್ಲಪ್ಪ. ನಾವೇ ಎಲ್ಲದರಲ್ಲೂ ತಗ್ಗಿ ನಡೆಯುತ್ತಿದ್ದುದು ಹೌದು: ಆದರೆ ಇಷ್ಟೆಲ್ಲ ಭಂಗ ಇರಲಿಲ್ಲ. ಈಗ ಸುಮಾರು ಆರೇಳು ವರ್ಷದಿಂದ ನಿಧಾನಕ್ಕೆ ಕುದಿಯುತ್ತಾ ಬಂದಿದೆ ವಾತಾವರಣ: ಈಗಂತೂ ಸಿಡಿದೇ ಬಿಟ್ಟಿದೆ. ಮುಂದೆ ಹೇಗೋ ಏನೋ… ಯಾರಿಗೆ ಗೊತ್ತು!
ಒಂದೆರಡು ಹಣ್ಣಿನ ಹೋಳು, ಹಿಡಿ ಗಂಜಿ ತಿಂದು ರೂಮಿಗೆ ಬಂದು ಕುಳಿತಳು ಜುಬೇದಾ. ನಿಶ್ಶಕ್ತಿ ಕಮ್ಮಿಯಾಗಲು ಇನ್ನೊಂದು ವಾರವಾದರೂ ಬೇಕು. ಅದಲ್ಲದೆ ತಲೆತಿರುಗಿ ಬಿದ್ದು ಮಂಡೆ ಮಂಚಕ್ಕೆ ಜಪ್ಪಿ ಆದ ಗಾಯದ ನೋವು ಬೇರೆ. ಇತ್ತೀಚೆಗೆ ಸುಮಾರು ಸಮಯವಾಗಿತ್ತು ಸರಿಯಾಗಿ ಊಟವೇ ಸೇರದೆ. ಯಾವುದೂ ಬೇಡ ಅಂತಾಗಿದೆ ಅವಳಿಗೆ. ಟಿ.ವಿಯಲ್ಲಿ ತೋರಿಸುವ ವಿಧ ವಿಧ ವಾರ್ತೆಗಳು ಸುಮ್ಮನೇ ತಲೆಬಿಸಿ ಮಾಡುತ್ತವೆ. ‘ಪೌರತ್ವ ತಿದ್ದುಪಡಿ ಕಾಯ್ದೆ ಬರುತ್ತದೆ’ ಅಂತ ಆವತ್ತಿಂದ ಹೇಳುತ್ತಲೇ ಇದ್ದಾರೆ. ಅನ್ವರ, ಅಕ್ಷಯ ಕೂಡಾ ಇದನ್ನು ಮಾತಾಡುತ್ತಿದ್ದರು. ಆದರೆ ಟಿ.ವಿಯವರ ಬೊಬ್ಬೆ ಯಾವಾಗಲೂ ಇದ್ದದ್ದೇ. ಸತ್ಯ ಹೇಳುತ್ತಾರ, ಸುಳ್ಳು ಹೇಳುತ್ತಾರ ಒಂದೂ ತಿಳಿಯುವುದಿಲ್ಲ. ಈಗೀಗ ಅವರು ಸತ್ಯವೇ ತೋರಿಸಿದರೂ ನಮಗೆ ಸಂಶಯ ಬರುತ್ತದೆ. ಮನೆಕೆಲಸ ಮುಗಿದ ನಂತರ ವಾಟ್ಸಪ್ ನೋಡುವುದುಂಟು ಅವಳು. ಆದರೆ “ಅದರಲ್ಲಿ ಬರುವುದನ್ನೆಲ್ಲ ನಂಬಬೇಡಿ ಉಮ್ಮಾ, ಅಲ್ಲೂ ಹೆಚ್ಚಿನವೆಲ್ಲ ಸುಳ್ಳೇ ಇರುವುದು” ಅಂತ ಪದೇ ಪದೇ ಎಚ್ಚರಿಸುತ್ತಾನೆ ಅನ್ವರ. ಅದೂ ನಿಜವೇ, ಈಗೀಗಂತೂ ಅವರನ್ನು ಇವರು ಬಯ್ಯುವುದು, ಇವರನ್ನು ಅವರು ಬಯ್ಯುವುದು…ಇದೇ ಆಯಿತು ಜನಗಳದ್ದು. ಮೊನ್ನೆ ಒಂದು ಮೆಸೆಜ್ ಹಾಕಿದ್ದರು ಯಾರೋ “ಮುಸ್ಲಿಮರು ಜಾತ್ರೆಯಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಿದ್ದಾರೆ, ಅದನ್ನು ಕುಡಿಯಬೇಡಿ. ಮಕ್ಕಳಾಗದ ಹಾಗೆ ಔಷಧ ಹಾಕಿರುತ್ತಾರೆ ಅದರಲ್ಲಿ. ಅವರು ಕೊಟ್ಟದ್ದು ಏನೂ ತಿನ್ನಬೇಡಿ”. ಯಾ ಅಲ್ಲಾ! ಒಂದು ಒಳ್ಳೆಯ ಕೆಲಸವನ್ನೂ ಜನರು ಹೀಗೆ ಮಾತಾಡುತ್ತಾರೆಂದರೆ! ಇನ್ನೊಬ್ಬರು ವಾಟ್ಸಪ್ಪಲ್ಲಿ ಬಣ್ಣ ಬಣ್ಣ ಚಿತ್ರದೊಟ್ಟಿಗೆ ಹಾಕುವುದು…” ಮುಸ್ಲಿಮರ ಅಂಗಡಿಗಳಿಗೆ ಹೋಗಬೇಡಿ. ಅವರಿಗೆ ಯಾಕೆ ವ್ಯಾಪಾರ ಮಾಡಿಕೊಡುತ್ತೀರಿ? ಹಿಂದೂಗಳ ಅಂಗಡಿಯಲ್ಲೇ ಎಲ್ಲವನ್ನೂ ಖರೀದಿಸಿ. ಯಾರ್ಯಾರದ್ದೋ ಹೊಟ್ಟೆ ತುಂಬಿಸಿದ್ದು ಸಾಕು ನಾವು”. ಇಷ್ಟು ದ್ವೇಷ ಯಾಕೆ ಜನರಿಗೆ ಅಂತ ಅರ್ಥ ಆಗುವುದಿಲ್ಲ. ರಹೀಮನೂ ಹೇಳುತ್ತಿರುತ್ತಾನೆ “ಈಗ ವ್ಯಾಪಾರ ಪೂರಾ ಡಲ್” ಅಂತ. ಹೋಗಲಿ, ವ್ಯಾಪಾರದ ಮನೆ ಹಾಳಾಗಿ ಹೋಗಲಿ ಅನ್ನುವ ಅಂದರೆ ನೆರೆಕರೆ ಮನುಷ್ಯರ ಪ್ರೀತಿ, ವಿಶ್ವಾಸವೂ ರಂಪವಾಗಿ ಹೋಯಿತಲ್ಲ..ಜಾಹ್ನವಿ ಸರಿಯಾಗಿ ಮುಖ ನೋಡಿ ಮಾತಾಡಿ ಯಾವ ಕಾಲವಾಯಿತು!
ಎರಡು ತಿಂಗಳ ಹಿಂದೆ ನಡೆದದ್ದು ಈಗ ಎಣಿಸಿದರೂ ಮೈ ಕೊಡಕುತ್ತದೆ ಜುಬೇದಾಳಿಗೆ. ‘ಪೌರತ್ವ ತಿದ್ದುಪಡಿ ಕಾಯ್ದೆ’ ಬಂದರೆ ಭಾರೀ ಕಷ್ಟವಾಗುತ್ತದೆ. ತುಂಬಾ ದಾಖಲೆ ಕೇಳುತ್ತಾರೆ. ನಾವು ಹುಟ್ಟಿದ ಪ್ರಮಾಣ ಪತ್ರದಿಂದ ಹಿಡಿದು ನಮ್ಮ ಅಪ್ಪ ಅಮ್ಮನ ಹುಟ್ಟಿನ ದಾಖಲೆಯೂ ಬೇಕಾಗುತ್ತದೆ, ಆ ಸರ್ಟಿಫಿಕೇಟ್ ಎಲ್ಲ ಎಲ್ಲಿದೆ ನಮ್ಮ ಹತ್ತಿರ? ತೊಂದರೆಯಾಗಲಿಕ್ಕುಂಟು ಮುಂದೆ” ಎಂಬಂತಹ ಭಾಷಣಗಳು ಕಾಯ್ದೆಯ ವಿರುದ್ದ ಪ್ರತಿಭಟನೆಗಳು ಎಲ್ಲ ಆಯಿತು. ಆವತ್ತು ಭಾಬಿ ದೂರದ ದೆಹಲಿಯಿಂದ ಫೋನ್ ಮಾಡಿದ್ದರು. “ಜುಬೇದಾ, ಇಲ್ಲಿ ಬೆಳಗಾದರೆ ಹೇಗೋ ಏನೋ ಅಂಬಂತಹಾ ದಿನಗಳು ಬಂದಿವೆ. ಯೂನಿವರ್ಸಿಟಿಯಲ್ಲಿ ಓದುವ ಪಾಪದ ವಿದ್ಯಾರ್ಥಿಗಳಿಗೂ ಬಡಿದಿದ್ದಾರೆ. ನಿಮ್ಮಲ್ಲೂ ಶುರುವಾಗಬಹುದು, ನೀವಿರುವ ಪ್ರದೇಶ ಭಾರಿ ಸೂಕ್ಷ್ಮ ಅಲ್ಲವಾ..ಜಾಗ್ರತೆಯಾಗಿರಿ”. ಆದರೆ ಕಡೆಗೆ ಅದದ್ದೇನು? ಇಷ್ಟೆಲ್ಲ ಹೇಳಿದ ಬಾಬಿಯ ಕಾಕನ ಮಗ ಅಶ್ರಫನೇ ಗೋಲಿಬಾರಿನಲ್ಲಿ ಪೋಲೀಸರ ಗುಂಡಿಗೆ ಸತ್ತುಹೋದ. ಜಿಲ್ಲಾ ಕೇಂದ್ರ ಇರುವುದು ನಮ್ಮಲ್ಲಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ. ಮೊದಲೇ ಕೋಮುಗಲಭೆಯ ಬಿಸಿಯಲ್ಲೇ ಇರುವ ಜಾಗ. ಈಗಂತೂ ಕೆಂಜಿರುವೆ ಕೊಟ್ಟೆಗೆ ಕಲ್ಲು ಹಾಕಿದ ಹಾಗಾಯ್ತು. ಬಾಬಿ ಫೋನ್ ಮಾಡಿದ ವಾರದೊಳಗೇ ಹೀಗೆಲ್ಲ ಆಯ್ತು. ಇಡೀ ಪೇಟೆಯೇ ಒಂದು ವಾರ ಬಂದಾಗಿ ಹೋಯ್ತು. ಜನರು ಹೆದರಿ ಮನೆ ಹೊರಗೆ ಕಾಲು ಹಾಕಲಿಲ್ಲ. ಅಶ್ರಫ್ ಮೂರು ಜನ ತಂಗಿಯರ ಮದುವೆ ಜವಾಬ್ದಾರಿ ಹೊತ್ತಿದ್ದ ಬೇಟಾ. ಅವನ ಉಮ್ಮ, ಬಾಪ್ಪರಿಗೆ ಪ್ರಾಯ ಆಗಿದೆ, ಆರೋಗ್ಯವೂ ಒಳ್ಳೆದಿಲ್ಲ…ಯಾವ ಕೆಲಸವೂ ಅವರಿಂದ ಸಾಗುವುದಿಲ್ಲ. ವಿಷಯ ಕೇಳಿದ ದಿನ ಬಾಬಿ ತುಂಬಾ ಅತ್ತರು. “ಎಳೆಮಕ್ಕಳು ಹೀಗೆ ಸತ್ತರೆ ನೋಡಿಕೊಂಡು ಇರುವುದು ಹೇಗೆ ನಾವು, ಇದು ದೊಡ್ಡ ಅನ್ಯಾಯ. ಪಾಪದವರನ್ನು ಕೇಳುವವರು ಯಾರೂ ಇಲ್ಲವಾ ಹಾಗಾದರೆ” ಅಂತ. ಅಶ್ರಫನ ಅಪ್ಪ ಅಮ್ಮನಂತೂ ಹೆದರಿಹೋಗಿದ್ದರಂತೆ. ” ಇನ್ನು ನಾವಿಲ್ಲಿ ಇರುವುದಿಲ್ಲ, ನೀನೇ ಕರೆದುಕೊಂಡು ಹೋಗು. ಅಲ್ಲೇ ದೆಹಲಿಯಲ್ಲೇ ರಸ್ತೆ ಬದಿ ಯಾವುದಾದರೂ ವ್ಯಾಪಾರ ಮಾಡಿಕೊಂಡು ಗಂಜಿಯಾದರೂ ತಿನ್ನುತ್ತೇವೆ. ನಮ್ಮ ಬೇಟನನ್ನು ಕೊಂದ ಈ ಊರು ನಮಗೆ ಬೇಡ” ಎಂದು ಹಟ ಹಿಡಿದು ಕೂತರಂತೆ. ಕಡೆಗೆ ಬಾಬ್ಬಿಯೇ ಅವರ ಸಂಸಾರವನ್ನು ದಿಲ್ಲಿಗೆ ಕರೆದೊಯ್ದರು….ಛೇ ಮೂರ್ನಾಲ್ಕು ತಿಂಗಳಲ್ಲಿ ಪರಿಸ್ಥಿತಿಯೇ ಬದಲಾಗಿಹೋಯಿತು. ಆ ದಿನ ಅನ್ವರ, ಅಕ್ಷಯ ಇಬ್ಬರೂ ಹೊರಟಿದ್ದರು ಅಶ್ರಫನ ಕೊನೆ ಮುಖ ನೋಡಲಿಕ್ಕೆ. ಆದರೆ ಅಕ್ಷಯನ ಅಮ್ಮ ಜಾಹ್ನವಿ ಅವನು ಹೋಗುವುದು ಬೇಡ ಎಂದು ತಡೆದರಂತೆ. “ಆಂಟೀ ಮೊದಲಾಗಿದ್ದರೆ ನೀವಾದರೂ ಒಂದು ಮಾತು ಹೇಳಿ ಅನ್ನಬಹುದಿತ್ತು. ಈಗ ನಿಮ್ಮಲ್ಲಿ ಮಾತೇ ಆಡುವುದಿಲ್ಲವಲ್ಲ ಅಮ್ಮ, ಏನಾಗಿದೆಯೋ ಗೊತ್ತಾಗುತ್ತಿಲ್ಲ ಅವರಿಗೆ. ಹೇಳಿಕೊಟ್ಟವರ ಮಾತು ಕೇಳಿ ಹೀಗಾದದ್ದು ನನ್ನಮ್ಮ” ಅಕ್ಷಯ ಸಿಟ್ಟಿನಲ್ಲಿ ಹೇಳಿದ್ದ. ಹೌದು, ಜಾಹ್ನವಿ ಯಾಕೆ ಹೀಗಾದರು? ಮೊದಲೆಲ್ಲ ಎರಡು ಮನೆಗಳ ನಡುವೆ ಕಂಪೌಂಡೇ ಇಲ್ಲ ಎಂಬ ಭಾವನೆ ಬರುತ್ತಿತ್ತು. ಈಗ ತಲೆಯೆತ್ತಿ ಅವರ ಮನೆ ಬಾಗಿಲು ದಿಟ್ಟಿಸಲೂ ಒಂತರಾ ಆಗುತ್ತದೆ. ಮನಸ್ಸಲ್ಲಿ ಇಷ್ಟೆಲ್ಲ ಯೋಚನೆಯಾದರೂ “ಹೋಗಲಿ ಮಗಾ, ಪಾಪ ಜಾಹ್ನವಿಯಕ್ಕ ಕೆಟ್ಟವರೇನಲ್ಲ, ಯಾಕೊ ಈಗೀಗ ನಮ್ಮನ್ನು ಕಂಡರೆ ಬೇಸರ ಅವರಿಗೆ. ನಾವು ಯಾರಿಗೂ ಬೇಡದವರಲ್ವಾ, ಅದಕ್ಕೇ ಹಾಗೆ” ಅಂದಿದ್ದಳು. “ನೀವು ತಲೆಬಿಸಿ ಮಾಡಬೇಡಿ ಆಂಟಿ. ಅಮ್ಮನನ್ನು ನಾನು ಸರಿಮಾಡುತ್ತೇನೆ. ನೀವು ಆರಾಮಿರಿ” ಎಷ್ಟು ಒಳ್ಳೆಯ ಹುಡುಗ ಅಕ್ಷಯ! ಅನ್ವರನ ಹಾಗೇ ಅವನನ್ನೂ ಮಗನಂತೆಯೇ ನೋಡಿಕೊಂಡದ್ದಲ್ವಾ ಸಣ್ಣದಿರುವಾಗ..ಆಗ ಕಾಲವೇ ಬೇರೆಯಿತ್ತು. ಜಾಹ್ನವಿಯಾಗಲಿ, ಅವರ ಗಂಡ ಸುರೇಶಣ್ಣನಾಗಲೀ ‘ಇವರು ಯಾರೋ ಮೂರನೆಯವರು’ ಅಂತ ತಮ್ಮನ್ನು ಕಂಡದ್ದೇ ಇಲ್ಲ. ನಮ್ಮ ಜುಬೇದಾ, ನಮ್ಮ ರಹೀಮ, ನಮ್ಮ ಅನ್ವರ್ ಎಂಬ ಮಾತೇ ಬರುತ್ತಿದ್ದುದು ಅವರ ಬಾಯಿಂದ. ಸುರೇಶಣ್ಣ ಹೆಚ್ಚುಕಮ್ಮಿ ಮೊದಲಿನ ಹಾಗೇ ಇದ್ದಾರೆ. ಆದರೆ ಹೆಂಡತಿಯ ಮಾತು ಮೀರಲು ಆಗುವುದಿಲ್ಲ ಕಾಣುತ್ತದೆ ಅವರಿಗೆ. ಜಾಹ್ನವಿ ದೀದಿಗೆ ಬ್ಯಾಂಕಿನಲ್ಲಿ ಕೆಲಸವಾದರೆ, ಸುರೇಶಣ್ಣಂಗೆ ಎಲ್ ಐ ಸಿಯಲ್ಲಿ. ಅಕ್ಷಯನಿಗೆ ಐದು ವರ್ಷವಾಗುವವರೆಗೆ ಸುರೇಶಣ್ಣನ ಅಮ್ಮ ಇದ್ದರು ಮಗನ ಜೊತೆಗೆ.. ಕಡೆಗೆ ” ಮಗು ಶಾಲೆಗೆ ಹೋಗಲು ಸುರುಮಾಡಿತಲ್ಲ, ನಾನು ಊರಿಗೆ ಹೋಗುತ್ತೇನೆ” ಎಂದು ಅವರು ಹೊರಟುಹೋದ ನಂತರ ಅಷ್ಟು ಸಣ್ಣ ಮಗುವನ್ನು ನೋಡಿಕೊಳ್ಳುವವರಿಲ್ಲದೆ ಜಾಹ್ನವಿ ಭಂಗ ಬರುತ್ತಿರುವಾಗ “ನೀವೇನೂ ಯೋಚನೆ ಮಾಡಬೇಡಿ ದೀದಿ, ನಾನು ನೋಡಿಕೊಳ್ಳುತ್ತೇನೆ” ಅಂದದ್ದು ತಾನು. ಹಾಗೆ ಅಕ್ಷಯ ಮತ್ತು ಅನ್ವರ ಒಟ್ಟಿಗೆ ಆಟವಾಡುತ್ತಾ ದೊಡ್ಡದಾದದ್ದಲ್ವಾ…ಪ್ರಾಯವೂ ಹೆಚ್ಚು ಕಮ್ಮಿ ಒಂದೇ. ಅಕ್ಷಯ ಒಂದು ವರ್ಷಕ್ಕೆ ದೊಡ್ಡವನು ಅಷ್ಟೇ. ಮಕ್ಕಳಿಗೆ ಹಗಲುಹೊತ್ತಿನ ಊಟ ತಿಂಡಿ ಎಲ್ಲ ತಮ್ಮ ಮನೆಯಲ್ಲೇ ಆಗುತ್ತಿತ್ತು. ರಾತ್ರಿ ಮಾತ್ರ ಬಿಸಿಬಿಸಿಯಾಗಿ ಮಾಡಿದ ಅಡುಗೆಯನ್ನು ಬುತ್ತಿಪಾತ್ರದಲ್ಲಿ ಹಾಕಿ ತಮಗೂ ತಂದುಕೊಟ್ಟರೇ ಸಮಾಧಾನ ಆಗುತ್ತಿದ್ದುದು ಜಾಹ್ನವಿಗೆ. “ಆ ಜಾತಿ ಈ ಜಾತಿ ಮಣ್ಣು ಮಸಿ ಎಲ್ಲ ಸುಮ್ಮನೇ ಜುಬೇದಕ್ಕಾ, ಮುಖ್ಯ ನಮ್ಮ ನೀತಿ ಸರಿಯಿರಬೇಕು’ ಎನ್ನುತ್ತಿದ್ದರಲ್ಲ ಜಾಹ್ನವಿ. ಸುರೇಶಣ್ಣನಂತೂ “ಜನಿವಾರ ಒಂದು ಎಲ್ಲೋ ಕಪಾಟಿನ ಮೂಲೆಯಲ್ಲಿರಬೇಕು. ಅಮ್ಮ ಬಂದಾಗ ಹಾಕಿಕೊಳ್ಳುವುದು: ಪಾಪ ಅವರಿಗೆ ಬೇಸರ ಆಗಬಾರದಲ್ವಾ. ಅವರು ಅತ್ತಮುಖ ಹೋದಕೂಡಲೇ ನನ್ನ ಜನಿವಾರದ ಸವಾರಿ ಕಪಾಟಿಗೆ ಓಡುತ್ತದೆ” ಹೇಳಿ ನಗಾಡಿದ್ದೆಷ್ಟು ಸಲ! ಹೀಗೇ ನಡೆಯುತ್ತಿತ್ತು ಎಲ್ಲ…ಆದರೆ ಇದೆಲ್ಲ ಹೇಗಾಯ್ತೋ ಗೊತ್ತಾಗುತ್ತಿಲ್ಲ. ಮೊದಮೊದಲು ಜಾಹ್ನವಿ ವ್ಯಂಗ್ಯ ಮಾಡುವುದು, ಸಿಟ್ಟು ತೋರಿಸುವುದು ಮಾಡತೊಡಗಿದರು. ಆಮೇಲಾಮೇಲೆ ಅವರ ಮನೆಗೆ ನಾವೆಲ್ಲ ಹೋಗುವುದೇ ಇಷ್ಟವಿಲ್ಲವೆಂಬಂತೆ ವರ್ತನೆ ಶುರುವಾಯಿತು. ಅವರಂತೂ ಈಚೆ ಬರುವುದೇ ನಿಂತುಹೋಯಿತು. ಈಗ ಸುಮಾರು ಒಂದು ವರ್ಷವೇ ಕಳೆಯಿತು: ತಾನಾಗಲೀ, ರಹೀಮನಾಗಲೀ ಆ ಮನೆಗೆ ಕಾಲಿಡದೆ. ಮಕ್ಕಳಿಬ್ಬರು ಮಾತ್ರ ಒಟ್ಟಿಗೇ ಕಾಲೇಜಿಗೆ ಹೋಗಿ ಬರುತ್ತವೆ. ಅವುಗಳನ್ನು ನೋಡಿದರೆ ಮುದ್ದು ಉಕ್ಕಿಬರುತ್ತದೆ. ಅಣ್ಣತಮ್ಮಂದಿರಾದರೂ ಇಷ್ಟು ಹಚ್ಚಿಕೊಳ್ಳಲಿಕ್ಕಿಲ್ಲ. ಅವುಗಳಾದರೂ ತಣ್ಣಗಿರಲಿ, ಈ ದ್ವೇಷದ ಉರಿ ಅವುಗಳಿಗೆ ಬೇಡ ಎಂದರೆ ಈಗೀಗ ಅದಕ್ಕೂ ಬಂದೋಬಸ್ತು ಸುರುವಾಗಿ ಅದೇ ವಿಕೋಪಕ್ಕೆ ಹೋಗಿ ಅಕ್ಷಯ, ಅನ್ವರ ಇಬ್ಬರೂ ಮನೆಬಿಟ್ಟು ಹೋಗಿದ್ದಾರೆ. ಕಂಡವರೆಲ್ಲ ಕೇಳುತ್ತಾರೆ “ನಿಮ್ಮ ಮಗ ಏನು ಬೇರೆ ಹೋಗಿ ಕೂತದ್ದು? ನಿಮ್ಮಲ್ಲಿ ಕೋಪ ಮಾಡಿ ಹೋದದ್ದಾ!” ಏನಂತ ಉತ್ತರ ಕೊಡುವುದೆಂದು ಅರ್ಥವಾಗುವುದಿಲ್ಲ ಜುಬೇದಾಳಿಗೆ.
***
ನಡುರಾತ್ರಿ ಮೀರುತ್ತಿದೆ: ಗಾಢಕತ್ತಲು. ಅಲ್ಲೆಲ್ಲೋ ಮರಗಳೆಡೆಯಲ್ಲಿ ಜೀರುಂಡೆ ನಾದ. ರೂಮಿನ ಬಾಗಿಲು ತೆಗೆದು ಹೊರಗಿನ ದಂಡೆಯಲ್ಲಿ ಬಂದು ಕುಳಿತಿದ್ದಾನೆ ಅಕ್ಷಯ. ಓದಬೇಕೆಂದು ಪುಸ್ತಕ ಹಿಡಿದರೆ ಓದಲಾಗದೆ, ನಿದ್ದೆಮಾಡುವ ಅಂದುಕೊಂಡು ಅದೂ ಸಾಧ್ಯವಾಗದೆ ಎದ್ದುಬಂದಿದ್ದಾನೆ. ಕಾಲೇಜಿನಲ್ಲೂ ಆವತ್ತು ಯಾವುದರ ಮೇಲೂ ಗಮನ ಕೇಂದ್ರೀಕರಿಸಲಾಗಲಿಲ್ಲ. ಅನ್ವರ್ ಆಗಲೇ ಮಲಗಿಯಾಗಿದೆ. ಜುಬೇದಾ ಆಂಟಿಗೆ ಹುಷಾರಿಲ್ಲವೆಂದು ಮನೆಗೆ ಹೋಗಿದ್ದವನು ನಿನ್ನೆ ತಾನೇ ಬಂದಿದ್ದಾನೆ. ಪಾಪ, ನಿನ್ನೆ ರಾತ್ರಿ “ಉಮ್ಮ ಉಮ್ಮ” ಎಂದು ಕನವರಿಸುತ್ತಿದ್ದ. ಅವನನ್ನು ಕಂಡರೆ ಅದೇಕೋ ಮನಸ್ಸು ದ್ರವಿಸುತ್ತದೆ ಅಕ್ಷಯನಿಗೆ. ಮನೆಮುಂದಿನ ಮರಳ ರಾಶಿಯಲ್ಲಿ ಬಿದ್ದು ಹೊರಳಾಡುತ್ತ ಆಟವಾಡಿದ ದಿನಗಳಿಂದ ಹಿಡಿದು ಇವತ್ತಿನವರೆಗೂ ಎಷ್ಟು ಸಲೀಸು ತಮ್ಮಿಬ್ಬರ ಪ್ರಪಂಚ! ಆದರೆ ಅಮ್ಮ ಹಿಂದಿನದ್ದೆಲ್ಲ ಮರೆತೇಬಿಟ್ಟಿರುವಂತೆ ವರ್ತಿಸುತ್ತಿದ್ದಾಳಲ್ಲ, ಏನಾಗಿದೆ ಅವಳಿಗೆ! ತನಗೂ ಅನ್ವರನಿಗೂ ಇಷ್ಟು ಪ್ರೀತಿಯೆಂದು ಗೊತ್ತಿದ್ದೂ ಅವನನ್ನು, ಅವನ ಮನೆಯವರನ್ನು ದೂರವಿಡಬೇಕೆಂದು ಒತ್ತಾಯಿಸುತ್ತಿದ್ದಾಳೆ. ಆವತ್ತು “ಅನ್ವರನ ಮನೆಯವರಲ್ಲಿ ನಿನಗೆಂತಾ ಮಾತು? ಈಗ ಯಾರೂ ಮಾತಾಡುವುದಿಲ್ಲ ಅವರಲ್ಲಿ, ಸ್ವಲ್ಪ ಕಣ್ಣು ಬಿಟ್ಟು ನೋಡು. ಇವರೆಲ್ಲ ದೇಶ ಹಾಳುಮಾಡಲು ಬಂದು ಕೂತದ್ದು ಇಲ್ಲಿ ಅಷ್ಟೇ”. ಅವಳು ಪಿರಿಪಿರಿ ಮಾಡುವಾಗ ಎಂತಾ ಕೋಪ ಬಂದಿತ್ತು ತನಗೆ. “ಅಮ್ಮ, ಸಾಕು ಬಾಯಿಮುಚ್ಚು. ಮನಸ್ಸಿಗೆ ಬಂದದ್ದೆಲ್ಲ ಹೇಳಬೇಡ” ಮೊದಲ ಸಲ ಆ ತರ ಮಾತಾಡಿದ್ದು ತಾನು! ” ಹೌದು. ನಾನು ಸತ್ಯ ಹೇಳಿದರೆ ಆಗುವುದಿಲ್ಲ ನಿನಗೆ. ಹೋಗು ಆ ಅನ್ವರನ ಜೊತೆಗೇ ಇರು. ಬರಬೇಡ ಮನೆಗೆ”. ಛೇ, ಕೊನೆಗೂ ಅಮ್ಮ ಹೇಳಿದಂತೆಯೇ ಆಗಿಬಿಟ್ಟಿತು! “ಅಲ್ಲಮ್ಮಾ, ಮೊನ್ನೆ ಗೋಲಿಬಾರ್ ಮಾಡಿ ಇಬ್ಬರನ್ನು ಕೊಂದೇತೆಗೆದರಲ್ಲ, ಪ್ರತಿಭಟಿಸಿದ್ದಕ್ಕೇ ಗೋಲಿಬಾರಾ? ಇದು ಯಾವ ನ್ಯಾಯ? ಆ ಇಬ್ಬರಲ್ಲಿ ಒಬ್ಬ ಹುಡುಗ ಅನ್ವರನ ಹತ್ತಿರದ ಸಂಬಂಧಿಕ, ನನಗಿಂತ ನಾಲ್ಕು ವರ್ಷ ದೊಡ್ಡವನಿರಬೇಕು ಅಷ್ಡೇ. ಪಾಪ, ಅವರೆಲ್ಲ ಎಷ್ಟು ನೋವಿನಲ್ಲಿದ್ದಾರಂತ ಅಂದಾಜಿದೆಯ ನಿನಗೆ? ” ತನ್ನ ಮಾತು ಮುಗಿಯುವುದಕ್ಕಿಲ್ಲ, ಆಗಲೇ “ಅಯ್ಯೋ, ಸತ್ತರೆ ಸಾಯಲಿ. ನಿನಗ್ಯಾಕೆ ಇದೆಲ್ಲ ಇಲ್ಲದ ಕಾರುಬಾರು? ಅವರವರು ಮಾಡಿದ್ದು ಅವರವರು ತಿನ್ನುತ್ತಾರೆ, ಮತ್ತೇನಲ್ಲ ಇದು” ಎಂದಿದ್ದಳು. “ಅಮ್ಮಾ ಇನ್ನೊಂದು ಶಬ್ದ ಕೂಡಾ ಆಡಬೇಡ. ಇಷ್ಟು ಕ್ರೂರತನ ನಿನ್ನಲ್ಲಿದೆ ಅಂತ ಗೊತ್ತೇ ಇರಲಿಲ್ಲ” ಎಂದವನೇ ರಪ್ಪನೆ ರೂಮಿಗೆ ಹೋಗಿ ಬಾಗಿಲು ಹಾಕಿ ಕುಳಿತಿದ್ದೆ ತಾನು. ಛೇ! ಅಮ್ಮ ಹೇಗಿಷ್ಟು ಬದಲಾದಳು! ಮೊದಲೆಲ್ಲ ” ನಮ್ಮ ಅಕ್ಷಯನಿಗೆ ಇಬ್ಬರು ಅಮ್ಮಂದಿರು. ನಾನು ಹೆತ್ತಮ್ಮ ಅಷ್ಟೇ. ಸಾಕಿದ್ದೆಲ್ಲ ಜುಬೇದಕ್ಕ. ಹಾಗಾಗಿ ಅವರಿಗೇ ಜಾಸ್ತಿ ಹಕ್ಕು ಅವನ ಮೇಲೆ” ಅಂತೆಲ್ಲ ಹೇಳುತ್ತಿದ್ದಳಲ್ಲ. ಮನೆಯಲ್ಲಿ ತಿಂಡಿ ಮಾಡಿದಾಗ ಅಥವಾ ಪೇಟೆಯಿಂದ ತಂದಾಗ “ಇದು ಅನ್ವರನಿಗೆ” ಅಂತ ಒಂದು ಪಾಲು ತೆಗೆದಿಡುತ್ತಿದ್ದಳು. ಅನ್ವರನ ಮನೆಯವರೂ ಹೀಗೇ ಪ್ರೀತಿಯಿಂದ ಇದ್ದರು. ಆದರೆ ಇತ್ತೀಚೆಗೆ ಆ ಸಂಘ ಈ ಸಂಘ ಅಂತೆಲ್ಲ ಸೇರಿಕೊಂಡು ಅಮ್ಮನ ಯೋಚನೆಗಳೇ ಬದಲಾಗಿವೆ. “ನೀನು ಅನ್ವರನ ಮನೆಗೆ ಹೋಗುವುದೂ ಬೇಡ, ಅಲ್ಲೆಂತದೂ ತಿನ್ನುವುದೂ ಬೇಡ. ನಮ್ಮ ಜಾತಿಯವರೆಲ್ಲ ಆಡಿಕೊಳ್ಳುತ್ತಾರೆ. ಇನ್ನು ನೀವೂ ತಲೆಗೊಂದು ಬಟ್ಟೆ ಕಟ್ಟಿಕೊಳ್ಳಿ ಜಾಹ್ನವಿ, ಆಮೇಲೆ ಸೊಸೆಯೂ ಅಲ್ಲಿಂದಲೇ ಬರಬಹುದು…ಅಂತೆಲ್ಲ ಹಿಲಾಲು ಹಿಡಿಯುತ್ತಾರೆ” ಅಮ್ಮನೆಂದಾಗ ಅಪ್ಪನೂ “ಏನು ಜಾನು, ನಿನ್ನ ಆಲೋಚನೆಗಳೇ ಬದಲಾಯಿತಲ್ಲ?” ಎಂದು ಕೇಳಿದ್ದರು. ಆದರೆ ಅಪ್ಪನದ್ದು ಮೃದು ಸ್ವಭಾವ, ಯಾರನ್ನೂ ನೋಯಿಸುವವರಲ್ಲ. ತನಗೆ ಮಾತ್ರ ಇದನ್ನೆಲ್ಲ ಸಹಿಸುವುದು ಸಾಧ್ಯವಿಲ್ಲ…..ತುಂಬ ಯೋಚಿಸಿದ ಅಕ್ಷಯ ಕಾಗದವೊಂದನ್ನು ಅಮ್ಮನ ಮೇಜಿನ ಮೇಲಿಟ್ಟು ಎರಡು ಡ್ರೆಸ್ ಹಿಡಿದುಕೊಂಡು ಬಂದುಬಿಟ್ಟಿದ್ದ. ಮರುದಿನ ಎಷ್ಟು ಬೇಡವೆಂದರೂ ಕೇಳದೆ ಅನ್ವರನೂ ಚಿಕ್ಕ ಬ್ಯಾಗ್ ಹಿಡಿದು ಕೆಳಪೇಟೆಯ ರೂಮಿಗೆ ಬಂದು “ನಾನೂ ನಿನ್ನ ಜೊತೆ ಇರುತ್ತೇನೆ, ಇದೆಲ್ಲ ಆದದ್ದು ನನ್ನಿಂದಲೇ” ಎಂದಾಗ ಮನೆಗೆ ಹೋಗೆಂದು ಎಷ್ಟು ಹೇಳಿದರೂ ಕೇಳದೆ “ನೀನಿರುವಲ್ಲೇ ನಾನಿರುವುದು” ಅಂತ ಹಟ ಮಾಡಿ ಕೂತಿದ್ದ. ಹೀಗೇ ದಿನಗಳು ಕಳೆಯುತ್ತಿವೆ. ಇದನ್ನೆಲ್ಲ ಯೋಚಿಸಿ ತಲೆಬಿಸಿ ಮಾಡಿಕೊಂಡು ಬಿಪಿ ಜಾಸ್ತಿಯಾಗಿ ಜುಬೇದಾ ಆಂಟಿಯ ಆರೋಗ್ಯ ಕೆಟ್ಟಿದೆ. “ನಾವು ಹೊರಗಿನವರಾದೆವು ಈ ದೇಶದಲ್ಲಿ. ಇನ್ನು ನಮಗೆ ಯಾರಿದ್ದಾರೆ…ನಮ್ಮನ್ನು ಗುಂಡು ಹಾಕಿ ಕೊಂದರೂ ಕೇಳುವವರು ಯಾರಿಲ್ಲ ಅಂತಾಯಿತಲ್ಲ; ಇನ್ನೆಂತದು ಉಳಿದಿದೆ?” ಅಂತೆಲ್ಲ ಪದೇ ಪದೇ ಹೇಳುತ್ತಾ ಡಿಪ್ರೆಶನ್ ಶುರುವಾಗಿ ಮದ್ದು ತಿನ್ನುತ್ತಿದ್ದಾರೆ…
ಅಕ್ಷಯನ ಕಣ್ಣು ತುಂಬಿಕೊಂಡವು. ಅಮ್ಮನಿಗೆ ಬರೆದ ಕಾಗದದಲ್ಲಿ ತನ್ನ ಮನಸ್ಥಿತಿಯನ್ನು ಪೂರ್ತಿಯಾಗಿ ಹೇಳಿಬಿಟ್ಟಿದ್ದ. “ಅಮ್ಮ, ನಿನಗೆ ಇನ್ನೂ ಅರ್ಥವೇ ಆಗದ ಹಲವು ಸಂಗತಿಗಳಿವೆ. ನಾನು ಸಣ್ಣದಿರುವಾಗ ಆಡಲೊಂದು ಜೊತೆಯಿಲ್ಲದೆ ಬೇಸರದಲ್ಲಿದ್ದಾಗ ಸಿಕ್ಕವನು ಅನ್ವರ. ಹಾಗೆ ಆಡುತ್ತ ಆಡುತ್ತ ಅವನು ತಮ್ಮನೂ, ಗೆಳೆಯನೂ ಆಗಿಬಿಟ್ಟ. ಕಾಲೇಜಿನಲ್ಲೂ ನನ್ನ ಜೊತೆ ಅವನಿದ್ದುದರಿಂದ ಎಷ್ಟು ಧೈರ್ಯವಾಯಿತು ನನಗೆ! ನಿನಗೇ ಗೊತ್ತಿರುವಂತೆ ನಾಲ್ಕನೇ ಕ್ಲಾಸಿನವರೆಗೂ ನಾವಿಬ್ಬರು ಬೇರೆ ಬೇರೆ ಶಾಲೆಗೆ ಹೋದದ್ದು. ಆಗ ತೊದಲು ಶುರುವಾಗಿತ್ತು ನನಗೆ. ಆಮೇಲೆ ಡಾಕ್ಟರ್ ಸಲಹೆ ಕೊಟ್ಟಂತೆ ಇಬ್ಬರನ್ನೂ ಒಂದೇ ಶಾಲೆಗೆ ಕಳಿಸಿದಿರಿ. ಮತ್ತೆ ಎಷ್ಟು ಬೇಗ ನನ್ನೆಲ್ಲ ಹಿಂಜರಿಕೆ ಕಮ್ಮಿಯಾಯಿತು! ನನ್ನ ಮಾತುಗಳು ಸ್ಪಷ್ಟವಾದವು! ಅದಕ್ಕೆ ಕಾರಣ ಅನ್ವರನ ಪ್ರೀತಿ, ಕಾಳಜಿ. ಅಮ್ಮಾ, ಅನ್ವರ್ ಒಳ್ಳೇ ಮನಸ್ಸಿನ ಹುಡುಗ, ನನ್ನ ಗೆಳೆಯ. ಇಂತಹಾ ಅವನನ್ನು ದೂರಮಾಡು ಅನ್ನುತ್ತೀಯಲ್ಲ! ನೋಡಮ್ಮಾ, ನನಗೆ ಮೊದಲಿನ ಅಮ್ಮ ಬೇಕು. ಸದ್ಯಕ್ಕೆ ಕೆಳಪೇಟೆಯ ಒಂದು ಮನೆಯಲ್ಲಿರುತ್ತೇನೆ….ನೀನು ನಿನ್ನ ಹಟ ಬಿಟ್ಟೊಡನೆ ನಾನೂ ಮರಳುತ್ತೇನೆ. ನಿನ್ನ ಕರೆಗಾಗಿ ಕಾಯುತ್ತೇನೆ”. ಕಾಗದ ಓದಿ ಅಮ್ಮ ಸಿಟ್ಟಾದಳಂತೆ. ಅಪ್ಪ ನಿನ್ನೆ ಫೋನ್ ಮಾಡಿ “ನಾಲ್ಕು ತಿಂಗಳಾಯಿತಲ್ಲ ಅಕ್ಷಯ ನೀನು ಮನೆ ಬಿಟ್ಟು. ಅಮ್ಮ ಬೇಜಾರಲ್ಲಿದ್ದಾಳೆ. ಯಾವಾಗ ಬರುತ್ತೀ? ಅನ್ವರ ಹೇಗಿದ್ದಾನೆ?” ಎಂದಿದ್ದರು. ಮೊಬೈಲ್ ಕೈಗೆತ್ತಿಕೊಂಡ ಅಕ್ಷಯ “ಅಮ್ಮಾ” ಎಂದಷ್ಟೇ ಮೆಸೇಜ್ ಹಾಕಿ ಸುಮ್ಮನೇ ಕುಳಿತ. ಆಗ ಫಕ್ಕನೇ ಕತ್ತಲು ಆವರಿಸಿಕೊಂಡ ಬಯಲು, ಕಾಡುಗಳ ಅಂಚಿನಿಂದ ಕೇಳಿಬಂದ ನರಿಹಿಂಡಿನ ಕೂಗು, ಹಿಂದೆಯೇ ನಾಯಿಗಳ ಬೊಗಳು ಅವನ ದುಗುಡವನ್ನು ತೊಡೆದು ಹಾಕಿದವು. “ಈ ಮಗನ ಮೇಲಿನ ಪ್ರೀತಿಗಾದರೂ ಅಮ್ಮ ಮೊದಲಿನಂತಾಗುತ್ತಾಳೆ” ಎಂದುಕೊಳ್ಳುತ್ತ ಒಳಹೋಗಿ ಮಲಗುವ ಸಿದ್ಧತೆ ನಡೆಸತೊಡಗಿದ.
*****************************************************************************