ಕವಿತೆ
ಕಾದಿಹೆ ಬಂದುಬಿಡು
ಪ್ರೇಮಾ ಟಿ.ಎಂ. ಆರ್
ನಡೆದಿದ್ದೇನೆ ದಂಡೆಯುದ್ದಕ್ಕೆ
ಹೆದ್ದೆರೆಗಳಬ್ಬರದ ಭಯ ಬಂದುಬಿಡು
ಸೊಕ್ಕಿದಲೆ ನನ್ನ ಕೊಚ್ಚಿಕೊಂಡೊಯ್ಯುವ ಮೊದಲೇ ಬಂದುಬಿಡು
ಮೋಡ ಮುಕ್ಕಿದ ತುಂಡು ಸೂರ್ಯ
ದ್ವಾದಶಿಯ ಮುರುಕು ಚಂದ್ರ
ಎದುರುಬದುರು ನಿಂತಿರುವಾಗಲೇ
ಬಂದುಬಿಡು
ನನ್ನಹೆಜ್ಜೆಯ ಹೊಂಡದೊಳಗೆ
ಉಪ್ಪುನೀರು ನೆಲೆನಿಂತಿದೆ
ಅಲೆಯೊಳಗೆ ನಾಸುಳಿದು ಹೋಗುವ ಮುನ್ನ
ಬಂದುಬಿಡು
ಪಶ್ಚಿಮದಂಚಿಗೆ ಕೆನ್ನೆತ್ತರದ ಹಸೆ
ಮುಗಿಲು ಹಾಡು ಹರಿಯುತಿದೆ
ಕನಸು ಕೆನೆಗಟ್ಟುವದಕ್ಕೂ ಮೊದಲೇ
ಬಂದುಬಿಡು
ಸೂರ್ಯ ತಲೆಮರೆಸಿಕೊಳ್ಳುತ್ತಿದ್ದಾನೆ
ತಾರೆಗಳೆದೆಗೆ ಸೊಕ್ಕು ಹೊಕ್ಕಿದೆ
ದಂಡೆ ಮೌನವ ಹೊದ್ದು ಮಲಗುವ ಮುಂಚೆ
ಬಂದುಬಿಡು
ಇರುಳು ಜಾರುತಿದೆ ಮುಷ್ಠಿಯೊಳಗಿನ ಮರಳಂತೆ ಸುಳುಸುಳು
ಕನಸು ಕರಗುವ ಮೊದಲೇ ಮಧುಶಾಲೆಬಿಟ್ಟು
ಬಂದುಬಿಡು
ಎಲ್ಲೋ ಗಾಳಿ ಮರದಮೇಲೆ
ಒಂಟಿಹಕ್ಕಿಯ ಎದೆಕೊರೆವ ಹಾಡು
ತಟ್ಟಿ ಮಲಗಿಸುತ್ತದೆ ಕಡಲು ದಂಡೆಯ
ಪಮ್ಮಿ ಕಾದು ಕೂತಿದ್ದಾಳೆ ಬಂದುಬಿಡಿ
**************************
ಚೆನ್ನಾಗಿದೆ.ನೀವು ಮತ್ತೊಬ್ಬ ಪ್ರೇಮ ಮತ್ತು ಪಮ್ಮಿ!
ಹಾಂ…ಧನ್ಯವಾದಗಳು