ಅಶ್ವತ್ಥಮರದ ಮೇಲೊಂದು ಗುಬ್ಬಿಗೂಡು
ಈ ಮರ-ಗಿಡಗಳದ್ದು ಒಂದು ವಿಸ್ಮಯದ ಲೋಕ. ಒಂದಿಂಚು ಕತ್ತರಿಸಿದರೆ ನಾಲ್ಕಾರು ಟಿಸಿಲೊಡೆದು ಚಿಗುರಿಕೊಳ್ಳುವ ಗಿಡ ಕಣ್ಣೆದುರೇ ಮರವಾಗಿ ಬೆಳೆದುಬಿಡುವ ಪ್ರಕ್ರಿಯೆಯೊಂದು ಅಚ್ಚರಿ ಮೂಡಿಸುತ್ತದೆ. ಆ ಬೆಳವಣಿಗೆಯ ಬೆರಗಿನ ಲೋಕದಲ್ಲಿ ದಿನಕ್ಕೊಂದು ಹೊಸ ನೋಟ, ನೋಟದಲೊಂದಿಷ್ಟು ಹೊಸ ಅನುಭವಗಳು ಅವಿತು ಕುಳಿತಿರುತ್ತವೆ. ಹಾಗೆ ಅಡಗಿ ಕುಳಿತ ಅನುಭವಗಳೆಲ್ಲ ಸಮಯ ಸಿಕ್ಕಾಗ ಗಾಳಿ-ಬೆಳಕು-ನೆರಳುಗಳೊಂದಿಗೆ ಮಾತುಕತೆ ನಡೆಸುತ್ತ, ಮಳೆಗೊಂದು ಕೊಡೆ ಹಿಡಿದು ಚಲಿಸುತ್ತ ತಮ್ಮ ಇರುವಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತವೆ. ಗಾಳಿಯೊಂದಿಗೆ ಹಾರಿಬಂದ ಧೂಳಿನ ಕಣವೊಂದು ಎಲೆಯನ್ನಾಶ್ರಯಿಸಿದರೆ, ಬೆಳಕಿನೊಂದಿಗೆ ಬಿಚ್ಚಿಕೊಳ್ಳುವ ಹೂವಿನ ಎಸಳುಗಳು ದುಂಬಿಯನ್ನು ಸೆಳೆಯುತ್ತವೆ; ನೆರಳ ಹುಡುಕಿ ಬಂದ ನಾಯಿಮರಿಯೊಂದು ಮರದ ಬುಡದಲ್ಲಿ ಕನಸ ಕಾಣುತ್ತ ನಿದ್ರಿಸಿದರೆ, ಎಲೆಗಳನ್ನು ತೋಯಿಸಿದ ಮಳೆ ಹನಿಗಳೆಲ್ಲ ಬೇರಿಗಿಳಿದು ನೆಮ್ಮದಿ ಕಾಣುತ್ತವೆ. ಎಲ್ಲ ಕ್ರಿಯೆಗಳನ್ನೂ ತನ್ನದಾಗಿಸಿಕೊಳ್ಳುವ ಮರದ ಆತ್ಮ ನೆಲದೊಂದಿಗೆ ನಂಟು ಬೆಳಸಿಕೊಂಡು ನಿರಾಳವಾಗಿ ಉಸಿರಾಡುತ್ತದೆ.
ಮರವೊಂದು ಬೆಳೆದುನಿಲ್ಲುವ ರೀತಿಯೇ ಹಾಗೆ! ಪ್ರಪಂಚವೇ ತನ್ನದೆನ್ನುವ ಗತ್ತಿನಲ್ಲಿ, ತುಂಡಾಗಿ ಕತ್ತರಿಸಿದರೂ ಮತ್ತೆ ಚಿಗುರುವ ಆತ್ಮವಿಶ್ವಾಸದಲ್ಲಿ, ನೀರೆರೆಯದಿದ್ದರೂ ಮಳೆಯೊಂದು ಬೀಳುವುದೆನ್ನುವ ಭರವಸೆಯಲ್ಲಿ ಬದುಕು ಕಟ್ಟಿಕೊಳ್ಳುವ ಮರ ಕಲಿಸಿಕೊಡುವ ಪಾಠಗಳು ಹಲವಾರು. ಸುತ್ತ ಬದುಕುವವರ ಉಸಿರಾಟಕ್ಕೆ ನೆರವಾಗುತ್ತ, ಕಾಲಕಾಲಕ್ಕೆ ಚಿಗುರಿ ಹೂವು-ಹಣ್ಣುಗಳಿಂದ ನಳನಳಿಸುತ್ತ, ಆಗಾಗ ಭೇಟಿ ನೀಡುವ ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುತ್ತ, ಮೊಟ್ಟೆಯೊಂದು ಕಣ್ಣುತೆರೆವ ಕ್ಷಣಕ್ಕೆ ಸಾಕ್ಷಿಯಾಗುತ್ತ ತನ್ನದೇ ಜಗತ್ತನ್ನು ಸೃಷ್ಟಿಸಿಕೊಂಡು ಬಾಳಿಬದುಕುವ ಮರ ನಿಸ್ವಾರ್ಥ ಪ್ರಜ್ಞೆಯ ದೃಷ್ಟಾಂತವಾಗಿ ನಿಲ್ಲುತ್ತದೆ. ಮರದ ಸಂವೇದನೆಗೆ ಜಾಗ ನೀಡುವ ನೆಲ ತಾಯಿ ಬೇರಿನೊಂದಿಗೆ ಮಗುವಾಗಿ, ಮಕ್ಕಳನ್ನು ಸಲಹುವ ತಾಯಿಯೂ ಆಗಿ ತನ್ನ ಕರ್ತವ್ಯವನ್ನು ಪೂರೈಸುತ್ತದೆ. ಬೇರು ತನ್ನನ್ನು ಆಶ್ರಯಿಸಿದ ಅಹಂಭಾವದ ಮದ ನೆಲದ ತಲೆಗೇರುವುದಿಲ್ಲ; ಹೂವಾಗಿ ಅರಳುವ ಮೊಗ್ಗಿನ ಕನಸನ್ನು ಬೆಳಕು ತುಂಡರಿಸುವುದಿಲ್ಲ; ಉದುರಿಬಿದ್ದ ಎಸಳುಗಳು ಗಾಳಿಯನ್ನು ಶಪಿಸುವುದಿಲ್ಲ; ಸುರಿವ ಮಳೆ ಚಿಗುರಿಸಿದ ಎಲೆಗಳ ಲೆಕ್ಕವಿಡುವುದಿಲ್ಲ. ಹೀಗೆ ಎಲ್ಲ ಭೌತಿಕ ಲೆಕ್ಕಾಚಾರ, ವ್ಯವಹಾರಗಳಾಚೆ ನಿಲ್ಲುವ ಮರ-ಗಿಡಗಳ ಅನನ್ಯ ಲೋಕ ತರ್ಕಗಳನ್ನೆಲ್ಲ ತಲೆಕೆಳಗಾಗಿಸುತ್ತ ಅನಾವರಣಗೊಳ್ಳುತ್ತದೆ.
ನಮ್ಮ ಸುತ್ತಲಿನ ಪ್ರಪಂಚ ಅನನ್ಯವೆನ್ನುವ ಭಾವನೆ ಮೂಡುವುದು ಅಲ್ಲಿನ ಚಟುವಟಿಕೆಗಳ ನಿರಂತರ ಜೀವಂತಿಕೆಯಿಂದ. ಬರಿಯ ಮಾತಿಗೆ ನಿಲುಕದ, ಒಮ್ಮೊಮ್ಮೆ ವಿವೇಚನೆಗೂ ಎಟುಕದ ಅದೆಷ್ಟೋ ಸಂಗತಿಗಳು ಆವರಣಕ್ಕೊಂದು ವಿಶಿಷ್ಟವಾದ ಸೌಂದರ್ಯವನ್ನು ಒದಗಿಸುತ್ತವೆ. ಆ ಆವರಣದೊಳಗಿನ ಮಾಧುರ್ಯ ಬದುಕಿನ ಒಂದು ಭಾಗವಾಗಿ ನಮ್ಮೊಳಗೆ ಬೇರುಬಿಟ್ಟು, ಹೊಸಹೊಸ ರಾಗಗಳಾಗಿ ಚಿಗುರೊಡೆಯುತ್ತಿರುತ್ತದೆ. ಹಾಗೆ ಗುನುಗುನಿಸುವ ಅಮೂರ್ತ ಸ್ವರಗಳಲ್ಲಿ ಅಶ್ವತ್ಥಕಟ್ಟೆಯೂ ಒಂದು. ಅಜಾನುಬಾಹು ಶರೀರದ, ದೊಡ್ಡ ಕಿರೀಟ ತೊಟ್ಟ ಮಹಾರಾಜನಂತೆ ವಿರಾಜಿಸುವ ಅಶ್ವತ್ಥಮರದ ಕಟ್ಟೆಯೆಂದರೆ ಅದೊಂದು ಸುಭಿಕ್ಷತೆ-ಸಮೃದ್ಧಿಗಳ ಅರಮನೆಯಿದ್ದಂತೆ. ಅಲ್ಲೊಂದು ಮಣ್ಣಿನ ಹಣತೆ ಲಯಬದ್ಧವಾಗಿ ಉರಿಯುತ್ತ ಕತ್ತಲೆಯ ದುಗುಡವನ್ನು ಕಡಿಮೆ ಮಾಡುತ್ತಿರುತ್ತದೆ; ಕಟ್ಟೆಯನ್ನೇರುವ ಮೆಟ್ಟಿಲುಗಳ ಆಚೀಚೆ ಬಿಡಿಸಿದ ಪುಟ್ಟ ಹೂಗಳ ರಂಗೋಲಿಯ ಮೇಲಿನ ಅರಿಸಿನ-ಕುಂಕುಮಗಳು ಬೆಳಗಿನ ಸೂರ್ಯನ ಕಿರಣಗಳಿಗೆ ಹೊಳೆದು ಬಣ್ಣದ ಲೋಕವನ್ನು ತೆರೆದಿಡುತ್ತವೆ; ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಭಕ್ತಿಯಿಂದ ಮರವನ್ನು ಸುತ್ತುವ ತಾಯಿಯ ಹಿಂದೊಂದು ಪುಟ್ಟ ಮಗು ಕಾಲ್ಗೆಜ್ಜೆಯ ಸದ್ದು ಮಾಡುತ್ತ ನೆರಳಿನೊಂದಿಗೆ ಆಟವಾಡುತ್ತದೆ; ಮಾಗಿ ಉದುರಿದ ಹಣ್ಣುಗಳೆಲ್ಲ ಆಕಾಶದಿಂದ ಬಿದ್ದ ನಕ್ಷತ್ರಗಳಂತೆ ಭಾಸವಾಗಿ ಅಶ್ವತ್ಥಕಟ್ಟೆಗೊಂದು ದಿವ್ಯವಾದ ಸೌಂದರ್ಯ ಪ್ರಾಪ್ತಿಯಾಗುತ್ತದೆ.
ಹೀಗೆ ಸೌಂದರ್ಯವೆನ್ನುವುದು ಒಮ್ಮೆ ಮರದಡಿಯ ನೆರಳಾಗಿ, ಮತ್ತೊಮ್ಮೆ ಮರದ ಮೇಲಿನ ಹಣ್ಣಾಗಿ, ಸುಶ್ರಾವ್ಯ ಸ್ವರದಂತೆ ನೆಲಕ್ಕಿಳಿವ ಎಲೆಯಾಗಿ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವವರ ಬೆಳಗಿನೊಂದಿಗೆ ಬೆರೆತು ನೆನಪಿನಲ್ಲಿ ನೆಲೆಗೊಳ್ಳುತ್ತದೆ. ಹಾಗೆ ಕಾಯುತ್ತಿರುವವರ ಪರ್ಸಿನಲ್ಲೊಂದು ಮರದ ತೊಟ್ಟಿಲಿನಲ್ಲಿ ಮಲಗಿ ಹಾಯಾಗಿ ನಿದ್ರಿಸುತ್ತಿರುವ ಪುಟ್ಟ ಮಗುವಿನ ಕಪ್ಪು-ಬಿಳುಪು ಭಾವಚಿತ್ರ ಬಣ್ಣದ ಕನಸುಗಳನ್ನು ಚಿತ್ರಿಸುತ್ತಿರಬಹುದು; ವೀಳ್ಯದೆಲೆ ಮಾರುವವನ ಗೋಣಿಚೀಲದೊಳಗೆ ಶಿಸ್ತಿನಿಂದ ಕುಳಿತ ಎಲೆಗಳು ಬಾಡಿಹೋಗುವ ಭಯವಿಲ್ಲದೇ ಒಂದಕ್ಕೊಂದು ಅಂಟಿಕೊಂಡಿರಬಹುದು; ಕಾಲೇಜು ಹುಡುಗಿಯ ಪುಸ್ತಕದೊಳಗಿನ ಒಣಗಿದ ಗುಲಾಬಿ ಎಲೆಗಳ ನೆನಪು ಸದಾ ಹಸಿರಾಗಿ ಚಿಗುರುತ್ತಿರಬಹುದು; ಹೈಸ್ಕೂಲು ಹುಡುಗನ ಡ್ರಾಯಿಂಗ್ ಹಾಳೆಯ ಮೇಲಿನ ಅಶ್ವತ್ಥಎಲೆಯೊಂದು ಬಣ್ಣ ತುಂಬುವ ಪೀರಿಯಡ್ಡಿಗಾಗಿ ಕಾಯುತ್ತಿರಬಹುದು; ಅಮ್ಮನಮನೆಯ ದೇವರಕಾರ್ಯಕ್ಕೆಂದು ಬಸ್ಸನ್ನೇರುತ್ತಿರುವ ಪ್ಲಾಸ್ಟಿಕ್ ಕವರಿನ ಮುಷ್ಟಿಮಣ್ಣಿನಲ್ಲಿ ನಾಗದಾಳಿಯ ಚಿಗುರೊಂದು ಬೇರುಬಿಡುತ್ತಿರಬಹುದು. ಹಾಗೆ ಪ್ರತಿದಿನವೂ ಚಲಿಸುವ ಬೆಳಗುಗಳಿಗೆ ಸಾಕ್ಷಿಯಾಗುವ ಬಸ್ ಸ್ಟಾಪಿನೆದುರಿಗಿನ ಮರ ಮಾತ್ರ ನಿಂತಲ್ಲಿಯೇ ಬೆಳೆಯುತ್ತ, ಹೊಸ ಗೂಡುಗಳಿಗೆ ಆಶ್ರಯ ನೀಡುತ್ತ ನೆನಪುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.
ಈ ನೆನಪುಗಳು ಬೇರುಬಿಡುವ ವಿಧಾನವೂ ವಿಶಿಷ್ಟವಾದದ್ದು. ಮನದಾಳಕ್ಕೆ ಬೇರನ್ನಿಳಿಸದ ನೆನಪುಗಳು ಮುಗುಳ್ನಗೆಯ ಖಾಸಗಿ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳಲಾರವು. ನಗಣ್ಯವೆನ್ನಿಸುವ ಎಷ್ಟೋ ಸಂಗತಿಗಳು ಕಾಲಕಳೆದಂತೆ ಅತ್ಯಮೂಲ್ಯವೆನ್ನುವಂತಹ ನೆನಪುಗಳಾಗಿ ಬದಲಾಗುವುದುಂಟು; ಅಪರೂಪದ್ದೆನ್ನುವಂತಹ ಘಟನೆಗಳೂ ಕೆಲವೊಮ್ಮೆ ಕೇವಲ ಫೋಟೋ ಆಲ್ಬಮ್ಮುಗಳಲ್ಲೋ, ಮೊಬೈಲ್ ಗ್ಯಾಲರಿಯ ಯಾವುದೋ ಮೂಲೆಯಲ್ಲೋ ಉಳಿದುಹೋಗುವುದುಂಟು. ತೋಟದಂಚಿನ ಹೊಳೆಯಲ್ಲಿ ಸ್ನಾನದ ಟವೆಲ್ಲಿನಿಂದ ಹಿಡಿದ ಮೀನಿನ ಮರಿಗಳನ್ನು ಮನೆಯ ಪಕ್ಕದ ಕೆರೆಗೆ ತಂದು ಬಿಡುತ್ತಿದ್ದ ಕಾಲಹರಣದ ಕೆಲಸವೊಂದು ಎಂದೆಂದಿಗೂ ಮರೆಯಲಾಗದ ನೆನಪುಗಳ ಸಾಲಿನಲ್ಲಿ ಸೇರಿಕೊಳ್ಳಬಹುದೆಂಬ ಯೋಚನೆ ಕೂಡಾ ಬಾಲ್ಯಕ್ಕೆ ಇರಲಿಕ್ಕಿಲ್ಲ. ಸೂರ್ಯೋದಯದ ಫೋಟೋದ ಹಿಂದೆ ಮನೆ ಮಾಡಿಕೊಂಡಿದ್ದ ಗುಬ್ಬಚ್ಚಿಯ ಸಂಸಾರವೊಂದು ದಿನ ಬೆಳಗಾಗುವಷ್ಟರಲ್ಲಿ ಜಗುಲಿಯನ್ನು ತೊರೆದು ಹಾರಿಹೋಗುವುದಕ್ಕಿಂತ ಮುಂಚೆ, ಬದುಕಿನ ಅತಿ ಸುಂದರ-ರೋಮಾಂಚಕ ದೃಶ್ಯಗಳೆಲ್ಲ ಕ್ಷಣಾರ್ಧದಲ್ಲಿ ನೆನಪುಗಳಾಗಿ ರೂಪ ಬದಲಾಯಿಸಿಬಿಡಬಹುದೆನ್ನುವ ಕಲ್ಪನೆ ಯಾರ ಕಣ್ಣಳತೆಗೂ ದಕ್ಕಿರಲಿಕ್ಕಿಲ್ಲ. ಗೇರುಮರಕ್ಕೆ ಆತುಕೂತು ಇಂಗ್ಲಿಷ್ ಪದ್ಯವನ್ನು ಬಾಯಿಪಾಠ ಮಾಡಿದ್ದು, ಅತ್ತಿಮರದ ಬೇರಿನ ಮೇಲೆ ಕುಳಿತು ಹೊಳೆಯ ನೀರಿನಲ್ಲಿ ಕಾಲುಗಳನ್ನು ಇಳಿಬಿಟ್ಟು ಡೆಬಿಟ್ಟು-ಕ್ರೆಡಿಟ್ಟುಗಳನ್ನು ಬ್ಯಾಲೆನ್ಸ್ ಮಾಡಿದ್ದು ಹೀಗೆ ಎಲ್ಲ ನೆನಪುಗಳೂ ನೆಲದಾಳಕ್ಕೆ ಬೇರುಬಿಟ್ಟು ನೆಮ್ಮದಿಯ ಬದುಕು ಕಾಣುತ್ತವೆ.
ಹಾಗೆ ಬೇರುಬಿಟ್ಟ ಬದುಕು ನೆಲದುದ್ದಕ್ಕೂ ಹರಡಿಕೊಂಡು ಗಿಡವಾಗಿ ಚಿಗುರಿ, ಮರವಾಗಿ ಬೆಳೆದು ನಿಲ್ಲುತ್ತದೆ. ಹಾಗೆ ಬೆಳೆದು ನಿಂತ ಮರದ ರೆಂಬೆಯಲ್ಲೊಂದು ಕನಸುಗಳ ಜೋಕಾಲಿ ಕುಳಿತವರನ್ನೆಲ್ಲ ಜೀಕುತ್ತಿರುತ್ತದೆ; ಪೊಟರೆಯಲ್ಲೊಂದು ಪುಟ್ಟ ಹೃದಯ ಬಚ್ಚಿಟ್ಟ ಭಾವನೆಗಳೊಂದಿಗೆ ಬೆಚ್ಚಗೆ ಕುಳಿತಿರುತ್ತದೆ; ಜಗದ ಸದ್ದಿಗೆ ತಲ್ಲಣಗೊಳ್ಳದ ಎಲೆ ಆಗಸದೆಡೆಗೆ ಮುಖ ಮಾಡಿ ಭರವಸೆಯನ್ನು ಚಿಗುರಿಸುತ್ತದೆ; ಜೀವಶಕ್ತಿಯ ಮೋಹಕ ಕುಂಚ ಒಡಮೂಡಿದ ಮೊಗ್ಗಿನ ಮೇಲೆ ಬಣ್ಣದ ಎಳೆಗಳನ್ನೆಳೆಯುತ್ತದೆ; ಅರಳಿದ ಹೂವಿನ ಗಂಧ ಗಾಳಿಯೊಂದಿಗೆ ಬೆರೆತು ಹಗುರಾಗಿ ತೇಲುತ್ತ ಮೈಮರೆಯುತ್ತದೆ; ಬಲಿತ ಬೀಜ ಬಯಲ ಸೇರುವ ಹೊತ್ತು ಜಗುಲಿಯಿಂದ ಹಾರಿಬಂದ ಗುಬ್ಬಿಯ ಗೂಡು ಮರದ ಮಡಿಲು ಸೇರುತ್ತದೆ.
********************************
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಎಳೆ ಹಿಡಿದ ಹಲವಾರು ನೆನಪುಗಳು ಎಳೆ ಎಳೆಯಾಗಿ
ಚಾಚಿಕೊಂಡವು
ಥ್ಯಾಂಕ್ಸ್ ಸ್ಮಿತಾ.
ಎದೆಯ ಭಾವವುಕ್ಕಿ, ಕಣ್ತುಂಬಿ, ಬಂತು….. ನಿಮ್ಮ ವಾಕ್ಯ ರಚನೆಯ ವೈಖರಿಗೆ…. ಹೀಗೆಯೇ ಬರೆಯುತ್ತಿರಿ..
ಖುಷಿಯಾಯಿತು ವಿದ್ಯಾ. ಥ್ಯಾಂಕ್ಯೂ
ಚಂದದ ಬರಹ.
ಹೀಗೇ ಬರೆಯುತ್ತಿರಿ
Very good Anjana Nicely written
ನಿಮ್ಮ ಬರಹವೊಂದು ಚಿತ್ರಕಾವ್ಯ
ತುಂಬ ಚೆಂದದ ಬರಹ.
ಇದೊಂದು ಗದ್ಯಕಾವ್ಯ.
ಅಭಿನಂದನೆಗಳು, ಅಂಜನಾ.
ಸೀತಣ್ಣ, ಪ್ರಜ್ಞಾ, ಸ್ಮಿತಾ, ಗೋವಿಂದಣ್ಣ ಎಲ್ಲರಿಗೂ ಧನ್ಯವಾದಗಳು. ಪ್ರೀತಿ-ವಿಶ್ವಾಸಕ್ಕೆ ಋಣಿ!!