ಕವಿತೆ
ಡಾ.ಪ್ರೇಮಲತ ಬಿ
ಕೆಲವರಿಗೆ ಸಮಯವಿರುವುದಿಲ್ಲ
ಸಮಯ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲ
ನನ್ನ ಬಳಿ ಬಹಳ ಸಮಯವಿದೆ
ಆಳ ಗೆರೆಗಳ ನನ್ನ ಕೈ ಖಾಲಿಯಿದೆ
ಹಾಗೆಂದೇ ಸಮಯವನ್ನು ಕೊಲ್ಲಲು ನನ್ನ ಬಳಿ
ಅಸಾಧ್ಯ ಸಾಧ್ಯತೆಗಳಿವೆ ಆದರೆ
ಹಾಗೊಮ್ಮೆ, ಹೀಗೊಮ್ಮೆ ತೂಗುವ ಲೋಲಕದ
ನನ್ನ ಗಡಿಯಾರಕ್ಕೆ ಮುಳ್ಳುಗಳಿಲ್ಲ
ಅನಂತ ಚಲನೆಗಳ ಸಂವೇದನೆಯಿಲ್ಲ
ಕೊಂದದ್ದೇನು ತಿಳಿಯುವುದಿಲ್ಲ
ಟಿಕ್-ಟಿಕ ನೆಂದು ಉಲಿದು ಹೇಳಲು
ನನ್ನೆದೆ ಗಡಿಯಾರಕ್ಕೆ ಧ್ವನಿಯಿಲ್ಲ
ರಸ್ತೆಯಲಿ ನಿಂತ ಒಂಟಿ ಜೀವ
ಸಂತೆಯಲ್ಲಿದ್ದರೂ ಕೇಳುವ ನಿರಂತರ ಮೌನ
ಸಮಯದ್ದೇನು ನನಗೆ ಮುಲಾಜು
ಸಮಯ ಪ್ರಜ್ಞೆಆಳುವುದಿಲ್ಲ
ಅವಸರ ಬದುಕ ಕಾಡುವುದಿಲ್ಲ
ಸಮಯ ಕೊಂದ ಪಾಪಪ್ರಜ್ಞೆಯಿಲ್ಲ
ಅರ್ಥಗಳ ಟೈಂ ಮುಗಿಸಿದ ಸಮಯ
ನನ್ನೆದುರು ಈಗ ಸತ್ತು ಬಿದ್ದಿದೆಯಲ್ಲ !
**************************************
ಸಮಯ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲ
ಬಹಳ ಗಹನವಾದ ಸಾಲುಗಳು, ಸಮಯ ಮಾಡಿಕೊಂಡು ಆಗಾಗ ಈ ಕವನ ಓದಬೇಕು
ಧನ್ಯವಾದಗಳು ವಿಜಯ್ ಅವರೇ…