ಇತರೆ

ರೈತರ ಆಪತ್ಭಾಂದವ ಜೋಕಪ್ಪನೂ..!


ಮಳೆ ತರುವ ದೇವರು ಜೋಕುಮಾರಸ್ವಾಮಿ.

ಗಣೇಶ ಶಿಷ್ಟ ಪರಂಪರೆಯ ದೇವರು. ಅಲ್ಲದೇ ಜಾನಪದರ ದೇವರು ಜೋಕುಮಾರಸ್ವಾಮಿ.
ಗಣೇಶ ಹೊಟ್ಟೆ ತುಂಬ ಉಂಡು ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆತಾಯಿಗಳಾದ ಶಿವ-ಪಾರ್ವತಿಯರಿಗೆ ವರದಿ ಒಪ್ಪಿಸಿದರೆ, ಜಾನಪದರ ದೇವರು ಜೋಕುಮಾರಸ್ವಾಮಿ ಇಲ್ಲಿ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ಜನತೆಯ ಕಷ್ಟ ಕಾರ್ಪಣ್ಯಗಳ ವರದಿ ನೀಡಿ ಮಳೆ ಸುರಿಸಲು ವಿನಂತಿಸಿಕೊಳ್ಳುತ್ತಾನೆ.

ಹೀಗಾಗಿಯೇ ಜೋಕುಮಾರಸ್ವಾಮಿ ಒಕ್ಕಲಿಗರಿಗೆ ಮಳೆ ತರುವ ನಂಬಿಗಸ್ತ ದೇವರು. ‘ಜೋಕುಮಾರಸ್ವಾಮಿ ಮಳಿ ಕೊಡಾವ ನೋಡ್ರೀ’ ಎಂದು ರೈತರು ಎದೆ ತಟ್ಟಿ ಹೇಳುತ್ತಾರೆ.

ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ ‘ಜೋಕಪ್ಪ’ ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ.

ಜೋಕುಮಾರನನ್ನು ಹೊತ್ತು ತರುವ ಬುಟ್ಟಿಯಲ್ಲಿ ಯಥೇಚ್ಛವಾಗಿ ಬೇವಿನ ಸೊಪ್ಪನ್ನಿಟ್ಟಿರುತ್ತಾರೆ. ಹಾಗಾಗಿಯೇ ದುರ್ಮರಣಕ್ಕೀಡಾದವರನ್ನು ಬೇವಿನ ಸೊಪ್ಪು ಮುಚ್ಚಿ ಶವ ಸಾಗಿಸಲಾಗುತ್ತದೆ. ಆ ಕಾರಣವಿಟ್ಟುಕೊಂಡೇ ಹಳ್ಳಿಯಲ್ಲಿ ತಮ್ಮೂರಿನ ಉಡಾಳರಿಗೆ, ಗೂಂಡಾಗಳಿಗೆ, ಫಟಿಂಗರಿಗೆ ‘ಅಂವಾ ಹೊಕ್ಕಾನಳ ಬೇವಿನ ತೊಪ್ಪಲ ದೊಳ್ಗ’ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿರುತ್ತಾರೆ.

ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ. ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.

ವಾಲ್ಮೆಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ ‘ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ’ ಎಲ್ಲವೂ ಆ ಹಾಡಿನಲ್ಲಿ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ ಎಂಬ ನಮ್ಮ ‘ಜನಪದ’ರದು. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.

ಬೇವಿನ ಸೊಪ್ಪು ಕಹಿಯಾದ ಹಾಗೂ ಔಷಧೀಯ ಗುಣವಿರುವ ಸೊಪ್ಪು.
ಊರಲ್ಲಿ ಹೀಗೆಯೇ ಏಳು ದಿನ ತಿರುಗಾಡಿದನಂತರ ತಳವಾರರ ಮನೆಯಲ್ಲಿ ಬುಟ್ಟಿ ತುಂಬುವಷ್ಟು ಜೋಳದ ಕಡುಬು ಮಾಡಿ ಜೋಕುಮಾರನ ಮೈ ಮೇಲಿನ ವಸ್ತುಗಳನ್ನು ತೆಗೆದು ಆತನ ಕುತ್ತಿಗೆ ಮುಚ್ಚುವವರೆಗೆ ಕಡುಬುಗಳನ್ನು ಪೇರಿಸಿ ಇಡಲಾಗುತ್ತದೆ.
ಒಂದು ಕೈಯ್ಯಲ್ಲಿ ಕೊಬ್ಬರಿ ಬಟ್ಟಲನ್ನು, ಇನ್ನೊಂದು ಕೈಯ್ಯಲ್ಲಿ ದೀಪ ಹಚ್ಚಿದ ಪರಟೆಯನ್ನು ಕೊಟ್ಟಿರುತ್ತಾರೆ. ಆ ನಂತರದಲ್ಲಿ ಗಂಡಸೊಬ್ಬನು ಜೋಕುಮಾರನನ್ನು ಕುಳ್ಳಿರಿಸಿದ ಬುಟ್ಟಿಯನ್ನು ಹೊತ್ತು ನಡೆಯುತ್ತಾನೆ. ಹೀಗೆ ಕತ್ತಲಲ್ಲಿ ಸಾಗಿದ ಜೋಕುಮಾರನನ್ನಾಗಲೀ, ಆತನ ಕೈಯ್ಯಲ್ಲಿಯ ದೀಪವನ್ನಾಗಲೀ ಯಾರೂ ನೋಡುವಂತಿಲ್ಲ. ನೋಡಿದರೆ ಅಪಶಕುನವಷ್ಟೇ ಅಲ್ಲ, ವರ್ಷ ತುಂಬುವದರೊಳಗಾಗಿ ನೋಡಿದಾತ ಲೈಂಗಿಕ ಹಗರಣದಲ್ಲಿ ಸಿಲುಕಿ ಅಪಮಾನವಾಗಿ ಇಲ್ಲವೇ ಪ್ರಾಣ ಕಳೆದುಕೊಳ್ಳುವ ಅಪಾಯವೂ ಉಂಟೆಂದು ಹೇಳಲಾಗುತ್ತದೆ ‘ಜನಪದ’ದಲ್ಲಿ.

ಜೋಕುಮಾರನ ಹತ್ಯೆಯಾಗುವ ದಿನ ಆತ ಹಾಯ್ದು ಹೋಗುವ ದಾರಿಯುದ್ದಕ್ಕೂ ಮೊದಲೇ ಒಬ್ಬಾತ ‘ಜೋಕುಮಾರ ಬರ್ತಾನ, ಲಗೂ ಬಾಗ್ಲಾ ಮುಚ್ಚ್ರೀ’ ಎಂದು ಹೇಳುತ್ತಾ ಹೋಗುತ್ತಾನೆ.

ಮಧ್ಯರಾತ್ರಿಯ ನಂತರವೇ ಜೋಕುಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ.

ವೇಶ್ಯೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ ‘ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ’ ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ. ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ.

ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ ‘ದಿನ’ ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ..!

ಇದು ಜೋಕುರಸ್ವಾಮಿಯ ಜಾನಪದ ಕತೆ…

ನಿಜಕ್ಕೂ ಜೊಕುಮಾರಸ್ವಾಮಿ ರೈತರ ದೇವರು. ಏಕೆಂದರೆ ರೈತರ ಪೀಕು-ಪೈರಿನ ಹುಲುಸುವಿಕೆ ಬಯಸುವ ದೇವರು ಜೋಕುಮಾರಸ್ವಾಮಿ. ಮಳೆಗಾಗಿ ಶಿವ-ಪಾರ್ವತಿಯರನ್ನು ಅಂಗಲಾಚಿ ಮಳೆ ತರಿಸುವ ದೇವರು.
ಜೊಕುಮಾರಸ್ವಾಮಿಗಿಂತಲೂ ಮೊದಲು ಬಂದು ಹೋಗುವ ದೇವರು ಗಣೇಶ ಉಂಡಿ-ಕಡಬು ತಿಂದು ಸಂಪಲೇಪರಾಕೆನ್ನುತ್ತಾ ರೈತರ ಕಷ್ಟ-ಕಾರ್ಪಣ್ಯದತ್ತ ಗಮನ ಕೊಡದ ದೇವರು..!

ಹೀಗಾಗಿಯೇ ಜೊಕಪ್ಪ ಅಥವಾ ಜೋಕುಮಾರಸ್ವಾಮಿ ರೈತರಿಗೆ ಆಪದ್ಭಾಂವ ಅನ್ನಲೇನೂ ಅಡ್ಡಿಯಿಲ್ಲ…

***********************

ಕೆ.ಶಿವು.ಲಕ್ಕಣ್ಣವರ

Leave a Reply

Back To Top