ಚೈತ್ರಾ ಕಾವ್ಯಗುಚ್ಛ

ಚೈತ್ರಾ ಶಿವಯೋಗಿಮಠ

ಕಾವ್ಯಗುಚ್ಛ

Bullying, Stop, Violate, Feelings, Sad

ಕೊರೋನಾ ಖೈದಿ

Corona, Coronavirus, Virus, Covid-19

ದಿನ ರಾತ್ರಿಗಳಿಗೆ ವ್ಯತ್ಯಾಸವೇ ಇಲ್ಲ
ಉದಯಾಸ್ತಮಾನಗಳ ನಡುವೆ
ಭೂಮ್ಯಾಕಾಶದ ಅಂತರ.
ಗಡಿಯಾರದ ಮುಳ್ಳುಗಳು
ಅಪೌಷ್ಟಿಕತೆಯಿಂದ ನರಳುತ್ತಿವೆ
ಚಲನೆ ಅದೆಷ್ಟು ಕ್ಷೀಣವೆಂದರೆ
ಒಂದು ಹೆಜ್ಜೆ ಇಡಲೂ ಆಗದ,
ಕೀಲಿಲ್ಲದ ಮುದುಕಿಯ ಹಾಗೆ
ಕೈಲಾಗದಿದ್ದರೂ ಬೊಬ್ಬಿಡುವುದಕೇನೂ
ಕಡಿಮೆ ಇಲ್ಲ ‘ಟಿಕ್’ ಎಂಬ ಶಬ್ದ
ಮಾತ್ರ ಕಿವಿಯೊಳಗೆ ಕಾದ ಸೀಸ
ಹೊಯ್ದಷ್ಟು ಕಠೋರ. ಆಗೊಮ್ಮೆ-ಈಗೊಮ್ಮೆ
ನರ್ಸಗಳ ಅಡ್ಡಾಡುವಿಕೆ ಮಾತ್ರ
ನಾನಿನ್ನೂ ಮನುಷ್ಯರ ನಡುವಿರುವುದಕೆ
ಪುರಾವೆ.ಖಾನೆಯೊಳಗೆ ಖಾಲಿತನ ತುಂಬಿ
ಉಸಿರಾಟದ ಭದ್ರತೆ ಕಾಯ್ದುಕೊಂಡು ಏಳು ದಿನಗಳನ್ನ
ಏಳು ವರ್ಷಗಳಂತೆ ಕಳೆದು ಬರುವ ಖೈದಿ!


ಕಣ್ಣಾಮುಚ್ಚಾಲೆ

Coronavirus, Corona Virus, Covid-19

ತಪ್ಪಿಸಿಕೊಳ್ಳುವುದಕ್ಕೆ ಹೇಳುತ್ತಿದ್ದ ಕುಂಟು
ನೆಪಗಳಿಂದು ಬಂಧಿಸುವುದಕ್ಕೆ
ಬರುವ ಭಟನಂತೆ.
ಜ್ವರವೆಂದು ನರಳುವ ಹಾಗಿಲ್ಲ
ರಾಕ್ಷಸನಂತೆ ಹಗಲಿರುಳೆನ್ನದೆ ದುಡಿದು
ಒಂದೆರಡು ದಿನವೂ ಮೈಕೈ ನೋವೆಂದು
ಒದ್ದಾಡುವ ಹಾಗಿಲ್ಲ. ಎಲ್ಲ ರಸ್ತೆಗಳೂ
ಅಲ್ಲಿಗೆ ಎಳೆದುಕೊಂಡು ಹೋಗುತ್ತಿವೆ.
ಕಾಲು ಕಿತ್ತು ರಸ್ತೆ ಬದಲಿಸಿದರೂ ಅವು
ಒಯ್ಯುವುದು ಅಲ್ಲಿಗೇ!
ಎಲ್ಲಿಯೂ ಹೋಗದೆ ಒಳಗಿರಲು
ನನ್ನ ದಾಸ್ತಾನು ಅಕ್ಷಯಪಾತ್ರೆಯೇ?
ದುಡಿದು ತುತ್ತಿನ ಚೀಲ ತುಂಬಿಸಿಯೇನೆಂದರೆ
ಎಲ್ಲಿಂದಲೋ ಹಾರಿ ಬಂದು ಕತ್ತು
ಹಿಸುಕುವ ಅಣುರಕ್ಕಸ. ಎಷ್ಟು ದಿನ
ಈ ಕಣ್ಣಾಮುಚ್ಚಾಲೆಯೋ ?


ಕಾಲ

Allergy, Art, Crying, Drawing, Eye

ಮುಟ್ಟಿದರೆ, ಮುತ್ತಿಟ್ಟರೆ ಹೆಚ್ಚುತ್ತಿದ್ದಿದ್ದು
ಪ್ರೀತಿ ಒಲವುಗಳು ಮಾತ್ರ.
ಸುರಿವ ಕಣ್ಣೀರಿಗೆ ಅಣೆಕಟ್ಟಾಗಿದ್ದು
ನೇವರಿಕೆ, ತೆಕ್ಕೆಯ ಮೃದು ಅಪ್ಪುಗೆ
ಕಳೇಬರಕ್ಕೆ ಕೊನೆ ಪೂಜೆಯೇ
ಕಳೆಯಂತೆ, ಕೊನೆಯದಾಗಿ ತಬ್ಬಿ
ಬಿದ್ದು ಹೊರಳಾಡಿ ಅತ್ತರೂ ತೃಪ್ತಿ
ನೀಡುತ್ತಿರಲಿಲ್ಲ ಬೀಳ್ಕೊಡುಗೆ.
ತಂದೆ- ತಾಯಿ ಮಕ್ಕಳೆಲ್ಲ ಒಂದೆಡೆ
ಸೇರಿ ಸಂಭ್ರಮಿಸುತ್ತಿದ್ದಿದ್ದು ಹಬ್ಬಗಳು
ಒಬ್ಬರಿಗೊಬ್ಬರಾದಾಗ ಹರಡುತ್ತಿದ್ದಿದ್ದು
ಭ್ರಾತೃತ್ವ, ಒಂದೆಂಬ ಭಾವ
ಎಲ್ಲಿಯೋ ಏನೋ ಅವಘಡವಾದರೆ
ಮರುಗುತ್ತಿದ್ದಿದ್ದು ಮೃದು ಮನ.

ಎಲ್ಲವೂ ಗತ ವೈಭವವೀಗ
ಮುಟ್ಟುವ ಹಾಗಿಲ್ಲ ತಟ್ಟುವ ಹಾಗಿಲ್ಲ
ನೇವರಿಸಿ ಸಂತೈಸಿದರೆ ಹರಡುವುದು
ಖಾಯಿಲೆ ಮಾತ್ರ!
ಸಂಸ್ಕಾರ ಕಾಣದ ಶವಗಳ ಕನಿಷ್ಠ
ಒಮ್ಮೆ ಕಂಡರೂ ಸೌಭಾಗ್ಯ
ತಂದೆ ತಾಯಿ ಮಕ್ಕಳು ದಿಕ್ಕಿಗೊಬ್ಬರಂತೆ
ಒಬ್ಬರಿಗೊಬ್ಬರಾದರೆ ಹರಡುವುದು
ಪಿಡುಗಂತೆ
ದಿನವೂ ಒಂದೇ ರುಚಿ ನಾಲಿಗೆಯ
ದುಡ್ಡು ಬೀಳಿಸಿದಂತೆ, ಎಂತಹ ಅನಾಹುತಕ್ಕೂ
ಮನಗಳು ಈಗ ಮರಗಟ್ಟಿ ಹೋಗಿವೆ

*************************

10 thoughts on “ಚೈತ್ರಾ ಕಾವ್ಯಗುಚ್ಛ

  1. ಉತ್ತಮ ಕವಿತೆ ವಾಸ್ತವಿಕತೆಯನ್ನ ಭಾವನಾತ್ಮಕವಾಗಿ ವ್ಯಕ್ತಪಡಿಸಿದ ರೀತಿ ಅನನ್ಯ…

      1. ತುಂಬಾ ತುಂಬಾ ತುಂಬಾನೇ ಚೆನ್ನಾಗಿದೆ. ಪದಗಳ ಆಯ್ಕೆ ಜೋಡಣೆ ಎಲ್ಲಾ ಸಮರ್ಪಕ. ಅಭಿನಂದನೆಗಳು. ಹೀಗೇ ಬರೆಯುತ್ತಿರಿ

  2. ಎಲ್ಲ ಕವಿತೆಗಳೂ ತುಂಬ ಚೆನ್ನಾಗಿವೆ ಚೈತ್ರ.ಅಭಿನಂದನೆಗಳು.

  3. ನೀವು ಹಿಡಿದ ಕಾವ್ಯಗುಚ್ಚಗಳು ನಿಮ್ಮಷ್ಟೇ ಸುಂದರವಾಗಿವೆ

  4. ವಾಸ್ತವ ಸ್ಥಿತಿಯ ತುಂಬ ಪರಿಣಾಮಕಾರಿ ಅಭಿವ್ಯಕ್ತಿ!
    ಉತ್ತಮ ಕವನಗಳು.ಲೇಖಕಿಗೆ ಅಭಿನಂದನೆಗಳು

Leave a Reply

Back To Top