ಪ್ರಸ್ತುತ

ಹರಪ್ಪ – ಡಿಎನ್ಎ ನುಡಿದ ಸತ್ಯ

ನೂತನ ದೋಶೆಟ್ಟಿ

ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು  ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ  2018ರಲ್ಲಿ  ಇದರ ದ್ವಿತೀಯ ಆವೃತ್ತಿ ಮಾಡಿದೆ.ಮೊದಲ ಮುದ್ರಣದ ಎಲ್ಲ ಪ್ರತಿಗಳು ಎರಡೇ ದಿನಗಳಲ್ಲಿ  ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 76 ಪುಟಗಳ ಈ ಕೃತಿಯಲ್ಲಿ  ಇರುವ ಎರಡು ಲೇಖನಗಳಲ್ಲಿ  ಅತ್ಯಂತ ಕುತೂಹಲಕಾರಿ ಸಂಶೋಧನೆಗಳ ಮಾಹಿತಿ ಇದೆ.

ವಂಶವಾಹಿಗಳ ಕುರಿತ ಜ್ಞಾನವನ್ನು ಮನುಕುಲದ ಇತಿಹಾಸ ಸಂಶೋಧನೆಗೆ ಬಳಸುವ ಪ್ರಕ್ರಿಯೆ ಎರಡು ದಶಕಗಳಿಂದ ಈಚೆಗೆ ಶುರುವಾದದ್ದು. ಓದು ಬಳಗ ತನ್ನ ಮುನ್ನುಡಿಯಲ್ಲಿ ಹೇಳಿದಂತೆ,                “2001ರಲ್ಲಿ ವಿಜ್ಞಾನಿಗಳು ಮಾನವ ಜಿನೋಂ ಯೋಜನೆಯ ಮೂಲಕ ಅಧ್ಯಯನ ನಡೆಸಲು ತೊಡಗಿ ನಂತರದ ಎರಡು ದಶಕಗಳಲ್ಲಿ ಅಗಾಧ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕಳೆದ 7-8 ವರ್ಷಗಳಲ್ಲಿ  ಪ್ರಪಂಚದ ಬಹುತೇಕ ಎಲ್ಲಾ ಜನಾಂಗೀಯ ಹಾಗೂ ಪ್ರಾದೇಶಿಕ ಭಿನ್ನತೆಗಳ ಜನರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ  ಒಳಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಮನುಷ್ಯನ ಚರಿತ್ರೆಯಲ್ಲಿ ನಡೆದಿರುವ ಎಲ್ಲಾ ವಲಸೆಗಳ ಇತಿಹಾಸವನ್ನು, ವಲಸೆಗಳ ಸ್ವರೂಪಗಳನ್ನು, ಜನಾಂಗೀಯ ಸಂಬಂಧಗಳನ್ನು ಸ್ಪಷ್ಟ ರೂಪದಲ್ಲಿ ಮುಂದಿಡಲು ಡಿಎನ್ಎ ಯಶಸ್ವಿಯಾಗಿದೆ ಎನ್ನಬಹುದು.”

ನಾನು ಯಾರು? – ಈ ಪ್ರಶ್ನೆ ಅಧ್ಯಾತ್ಮಿಕವಾಗಿಯೂ, ಸಾಮಾಜಿಕವಾಗಿಯೂ ಸತತವಾಗಿ ಕಾಡುವಂಥದ್ದು. ಇದುವರೆಗೂ ಮನುಷ್ಯನಿಗೆ ತನ್ನ ಚರಿತ್ರೆಯ ಕುರಿತು ಇರುವ ನಂಬಿಕೆಯನ್ನು, ಅಹಂ ಅನ್ನು ಈ ಸಂಶೋಧನೆ ಬುಡಮೇಲು ಮಾಡಬಲ್ಲದು. ಜೊತೆಗೆ ವೈಜ್ಞಾನಿಕ ಆಧಾರವನ್ನೂ ಅದು ಒದಗಿಸುವುದರಿಂದ ಮಾಹಿತಿಗೆ ಅಧಿಕೃತತೆಯೂ ಬರುವುದು. ಮನುಷ್ಯನ ಚರಿತ್ರೆಯ ಸತ್ಯದ ಬಗ್ಗೆ ಕರಾರುವಾಕ್ಕಾದ ತಿಳಿವನ್ನೂ ಸಹ ಅದು ನೀಡಬಲ್ಲದು. 

ಹರಪ್ಪ, ಮೊಹೆಂಜೊದಾರೊ, ಧೊಲವೀರ, ಇತ್ತೀಚೆಗೆ ಹರಿಯಾಣಾದ ರಾಖಿಗರಿಯ ಉತ್ಖನನದಲ್ಲಿ ದೊರೆತ ಮನುಷ್ಯರ ಪಳೆಯುಳಿಕೆಗಳ ಡಿಎನ್ಎ ಸಂಶೋಧನೆ ನಮ್ಮ ದೇಶದ ಚರಿತ್ರೆಯ ಕುರಿತೂ ಹೊಸ ಹೊಳಹುಗಳನ್ನು ನೀಡಬಲ್ಲದು. 

ಕೃತಿಯ ಮೊದಲ ಲೇಖನ — ರಾಖಿಗರಿ ಪಳೆಯುಳಿಕೆಯ ಡಿಎನ್ಎ ನುಡಿದ ಸತ್ಯವೇನು?

ಈ ಶೀರ್ಷಿಕೆಯಲ್ಲೇ ಕುತೂಹಲವಿದೆ. ಹರಪ್ಪ-ಮೊಹೆಂಜೊದಾರೋ ಉತ್ಖನನದಲ್ಲಿ ದೊರೆತ ಪಳೆಯುಳಿಕೆಗಳು ಭಾರತ ಉಪಖಂಡದ ಪ್ರಾಚೀನ ನಾಗರಿಕತೆಗೆ ತಳುಕು ಹಾಕಿಕೊಂಡಿದ್ದು ತಿಳಿದಿದೆ. ಆದರೆ ಇಲ್ಲಿಯ ನಿವಾಸಿಗಳ ಕುರಿತು ಎದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ರಾಖಿಗರಿಯಲ್ಲಿ ಸಿಕ್ಕಿರುವ 4500ವರ್ಷಗಳ ಹಿಂದಿನ ಅಸ್ಥಿಪಂಜರ ಈ ಜನ ಯಾರು ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಬಲ್ಲುದಾಗಿದೆ. 

ಈ ಸಂಶೋಧನೆಗಳಲ್ಲಿ ಸಿಂಧೂ ನಾಗರಿಕತೆಯ ಜನ ವಿಕಾಸಗೊಂಡಿರುವುದು ಇರಾನಿನ ಬೇಸಾಯಗಾರರು ಮತ್ತು ಪ್ರಾಚೀನ ಆದಿಯ ದಕ್ಷಿಣ ಭಾರತೀಯರ ಕೂಡುವಿಕೆಯಿಂದ , ಆದಿಯ ಉತ್ತರ ಭಾರತೀಯ ಜನವರ್ಗದ ವಿಕಾಸ, ಆದಿಯ ಉತ್ತರ ಭಾರತೀಯ ಹಾಗೂ ಆದಿಯ ದಕ್ಷಿಣ ಭಾರತೀಯರ ಸಮ್ಮಿಶ್ರಣದ ಫಲವಾಗಿ ಬಹುತೇಕ ಜನವರ್ಗಗಳ ವಿಕಸನ ಮೊದಲಾದ ಅತ್ಯಂತ ರೋಚಕ ವಿಷಯಗಳನ್ನು ಹೇಳುತ್ತ ಇದುವರೆಗೆ ಪ್ರಚಲಿತದಲ್ಲಿದ್ದ ಆರ್ಯ ಸಂಸ್ಕೃತಿಯ ಮೂಲ  ಭಾರತ ಎಂಬ ವಾದವನ್ನೂ ಅಲ್ಲಗಳೆಯುತ್ತದೆ. ರಾಖಿಗರಿ ಸಂಶೋಧನೆ, ಹರಪ್ಪ/ಸಿಂಧೂ ನಾಗರಿಕತೆಯ ಜನರು ಮತ್ತು ಇಂದು ಪಶ್ಚಿಮ ಘಟ್ಟಗಳ ದಕ್ಷಿಣ ತಮಿಳು ನಾಡಿನ ನೀಲಗಿರಿ ಅರಣ್ಯ ಬೆಟ್ಟದಲ್ಲಿ ನೆಲೆಸಿರುವ ಆದಿವಾಸಿ ಇರುಳರು ಮೂಲತಃ ಒಂದೇ ವಂಶದವರು ಎಂದು ಹೇಳುತ್ತದೆ. ಆಧುನಿಕ ಭಾರತೀಯ ಒಂದು ಮಿಶ್ರಣ ತಳಿಯಾಗಿದ್ದು ಅದರಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುವುದು ಹರಪ್ಪ ನಾಗರಿಕತೆಯ ಜನರು ಅಂದರೆ ಆದಿಯ ದಕ್ಷಿಣ ಭಾರತೀಯರ ವಂಶವಾಹಿಗಳು.

ಇನ್ನು ವಲಸೆ ಬಗ್ಗೆ ಇವರು ಹೇಳಿರುವುದು-ಆಧುನಿಕ ಲಕ್ಷಣಗಳಿರುವ ಮಾನವರು  ಸುಮಾರು 70000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಹೊರಟು ವಿಶ್ವದ ಬೇರೆ ಬೇರೆ ಭಾಗಗಳಿಗೆ ಚದುರಿ ಹೋದರು.ಅವರಲ್ಲಿ ಒಂದು ಗುಂಪು ಸುಮಾರು 50000 ವರ್ಷಗಳ ಹಿಂದೆ ಭಾರತಕ್ಕೆ ಬಂದಿಳಿದಿದೆ.  ಡಿಎನ್ಎ ಅಧ್ಯಯನಗಳೂ ಇದನ್ನು ದೃಢಪಡಿಸಿವೆ.ಮತ್ತೊಂದು ದೊಡ್ಡ ವಲಸೆ 10000 ವರ್ಷಗಳ ಹಿಂದೆ ಪಶ್ಚಿಮ ಏಷಿಯಾದಿಂದ ಕೆಲವು ಗುಂಪು ಯುರೋಪ್ ಕಡೆಗೂ ಕೆಲವು ಇರಾನ್ ಮೂಲಕ ಭಾರತ ಹಾಗೂ ಇತರ ಭಾಗಗಳಲ್ಲೂ ನೆಲೆಸಿದವು. ಇಂಥ ಹಲವಾರು ಆಸಕ್ತಿದಾಯಕ ವಿಷಯಗಳು ಇಲ್ಲಿವೆ.  ಕೆಲವು ನಿಂದನೆಗಳಿವೆ. ಇಂಥ ಪ್ರಯತ್ನಗಳು ಕೂಡ ಇತಿಹಾಸದಲ್ಲಿ ತಮ್ಮ ಮೇಲ್ಲ್ಮೆಯನ್ನು ಸ್ಥಾಪಿಸಿಕೊಳ್ಳುವ ಭಾಗವೇ ಆಗಿರುವುದರಿಂದ ಅವುಗಳನ್ನು ಬಿಟ್ಟು ಮನುಕುಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಂಶೋಧನೆಗಳ ಬಗ್ಗೆ ಕೇಂದ್ರೀಕರಿಸಿ ಓದುವುದು ಒಳ್ಳೆಯದು.

ಎರಡನೇಯ ಲೇಖನ ಲಕ್ಷ್ಮೀಪತಿಯವರದು. ಶೀರ್ಷಿಕೆ–ಸಂಸ್ಕ್ರತಿ  ಇತಿಹಾಸದ ಮಹಾಮರೆವು      ( ರಾಖಿಗರಿ ಡಿಎನ್ಎ ಫಲಿತಾಂಶದ ಜಾಡಿನಲ್ಲಿ).  ಕೆಲ ವರ್ಷಗಳ ಹಿಂದೆ ಇಂಥ ಒಂದು ಮಾಹಿತಿ ಸಂಗ್ರಹಣೆಯನ್ನು ಕಳೆದ 20 ವರ್ಷಗಳಿಂದ  ಮಾಡುತ್ತಿದ್ದೇನೆ ಎಂದು ಅವರು ನನಗೆ ಹೇಳಿದ್ದರು. ಅದರ ಬಗ್ಗೆ 3 ಚಿಂತನಗಳನ್ನು ಅವರ ಹತ್ತಿರ ಬೆಂಗಳೂರು ಆಕಾಶವಾಣಿಗೆ ಆಗ ಮಾಡಿಸಿದ್ದೆ. 

8 ವರ್ಷಗಳ ಹಿಂದೆ ನಾನು ಧೊಲವಿರಾಕ್ಕೆ ಹೋದಾಗ ಅಲ್ಲಿಯ ಗೈಡುಗಳು ಬಹಳ ಅಲವತ್ತುಕೊಂಡು ಒಂದು ಮಾತು ಹೇಳಿದ್ದರು. ಒಬ್ಬ ಇತಿಹಾಸಜ್ಞ ಆ ಸ್ಥಳದ ಬಗ್ಗೆ ಸಾಕಷ್ಟು ಹೊಸ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಸರ್ಕಾರಕ್ಕೆ ಅದನ್ನು  ಸಲ್ಲಿಸುತ್ತಿಲ್ಲ ಎಂದು. ಆಗ ನನಗೇಕೊ ಅನುಮಾನವಾಗಿತ್ತು. ಈಗ ರಾಖಿಗರಿಯ ಸಂಶೋಧನೆಗಳು ಬಂದ ಮೇಲೆ ಅದಕ್ಕೆ ತಾಳೆಯಾಗುತ್ತಿದೆ.

ಇಂದು ಭಾರತವೊಂದೇ ಅಲ್ಲ. ಇಡೀ ಜಗತ್ತೇ ಕಕೇಷಿಯನ್ ಜನಾಂಗವಾದಿಗಳ ವಸಾಹತಾಗಿ ಮಾರ್ಪಟ್ಟಿದೆ ಎಂಬ ಅಚ್ಚರಿ ಹುಟ್ಟಿಸುವ ಮಾಹಿತಿಯೊಂದಿಗೆ ಲೇಖನ ಆರಂಭವಾಗುತ್ತದೆ. ಯುರೇಷಿಯಾದ ದಕ್ಷಿಣಕ್ಕಿರುವ ಕಾಕಸಸ್ ಪರ್ವತಾವಳಿಗಳಲ್ಲಿ ವಾಸಿಸುತ್ತಿದ್ದ ಜನರು ಕಕೇಷಿಯನ್ನರು. ಇದರ ಬಗ್ಗೆ ಆಗಿರುವ ನಿಖರ ಸಂಶೋಧನೆಗಳ ಮಾಹಿತಿಯನ್ನು ಇಲ್ಲಿ ಅವರು ಕೊಡುತ್ತಾರೆ. ಮಾನವ ಕುಲದ ಪೂರ್ವಿಕ ಪಿತೃವಿನ ಬಗೆಗಿನ ಜಿಜ್ಞಾಸೆ ಹೊಸ ಹೊಸ ಸಿದ್ಧಾಂತಗಳನ್ನು ರೂಪಿಸಿದೆ. ಆಫ್ರಿಕಾದ ಮೂಲವನ್ನು ಒಪ್ಪಿಕೊಳ್ಳಲಾಗದೆ ಪ್ರತಿಷ್ಠಿತ ಯುರೋಪ್ ತನ್ನದೇ ಸಿದ್ಧಾಂತಗಳನ್ನು ರೂಪಿಸಿಕೊಂಡಿದೆ. ‘ಆರ್ಯ ‘ ಮೂಲದ ಬಗೆಗಿನ ಚರ್ಚೆಗಳನ್ನು ಇಲ್ಲಿ ನೆನಪಿಸಿಕೊಳ್ಳುತ್ತ ಹಿಟ್ಲರ್ ಕೂಡ ‘ತಾನು ಆರ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ‘ಎಂಬ ಮಾತೂ ಇಲ್ಲಿ ಸ್ಮರಣೀಯ.

ಬಹುತೇಕ ಅನುವಂಶಿಕ ವಿಜ್ಞಾನಿಗಳು ತಾಯಿಯಿಂದ ಮಕ್ಕಳಿಗೆ ಹರಿದು ಬರುವ X ವರ್ಣತಂತುವಿನ ಮೂಲಕ ವಿಶ್ಲೇಷಣೆಗಳನ್ನು ನಡೆಸಿ ಮಾನವನ ಪೂರ್ವಿಕ ಪಿತೃಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಿ ವಿಫಲರಾಗಿದ್ದರು.ಆದರೆ ಲಂಡನ್ ಮೂಲದ ವಂಶವಾಹಿ ವಿಜ್ಞಾನಿ ಡಾ. ಸ್ಪೆನ್ಸರ್ ವೆಲ್ಸ್ ತಂದೆಯಿಂದ ಗಂಡು ಮಕ್ಕಳಿಗೆ ಮಾತ್ರವೇ ಹರಿದು ಬರುವ Y ವರ್ಣತಂತುವಿನ ಡಿಎನ್ಎ ವಿಶ್ಲೇಷಣೆಯನ್ನು ನಡೆಸಿದರು. ಒಟ್ಟು22 ಭಿನ್ನ ಭೌಗೋಳಿಕ ಪ್ರದೇಶಗಳ 1062 ಪುರುಷರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ 8 ದೇಶಗಳ ವಿಜ್ಞಾನಿಗಳ ತಂಡದೊಂದಿಗೆ ನಡೆಸಿದ ಅಧ್ಯಯನದ ನಂತರ ಅವರು ನೀಡಿದ ವಿವರ ಅತ್ಯಂತ ಕುತೂಹಲಕಾರಿಯಾದದ್ದು. ನಮೀಬಿಯಾದ ಸ್ಯಾನ್ ಬುಷ್ ಬುಡಕಟ್ಟಿನ Y ವರ್ಣತಂತುವಿನಲ್ಲಿ ದೊರೆತ ಗುರುತು 6000೦ ವರ್ಷಗಳಿಗೂ ಹಿಂದಿನದ್ದು. ಇದೇ ಗುರುತು ಭಾರತದ ಸೌರಾಷ್ಟ್ರ, ಮಧುರೈ, ಮಲೇಷಿಯಾ, ನ್ಯೂಗಿನಿ ಹಾಗೂ ಆಸ್ಟ್ರೇಲಿಯಾ ಮೂಲದ ನಿವಾಸಿಗಳಲ್ಲೂ ಕಂಡು ಬಂದಿದ್ದರಿಂದ ಆಧುನಿಕ ಮಾನವನ ಪೂರ್ವಿಕರ ಮೊದಲ ವಲಸೆಯ ಮಾರ್ಗ ಆಫ್ರಿಕಾದಿಂದ ಭಾರತದ ಕರಾವಳಿ ಮಾರ್ಗವನ್ನೊಳಗೊಂಡಂತೆ ಇಂಡೋನೆಷಿಯಾ, ಮಲೇಷಿಯಾ, ಆಸ್ಟ್ರೇಲಿಯಾದ ವರೆಗೂ ಗುರುತಿಸಲಾಯಿತು. ಈ ಪ್ರಯಾಣದ  ಅವಧಿ 300೦ ವರ್ಷಗಳು ಎಂದು ಅವರು ಅಂದಾಜಿಸುತ್ತಾರೆ. ಎರಡನೆಯ ವಲಸೆಯಲ್ಲಿ 4500೦ ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟ ತಂಡ ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಚೀನಾ, ಯುರೋಪ್ ಹಾಗೂ ದಕ್ಷಿಣ ಏಷ್ಯಾಗಳಲ್ಲಿ ಸಂತತಿ ಹಬ್ಬಿಸಿತು. ಹೀಗೆ ಮೆಡಿಟರೇನಿಯನ್ ಭಾಗದಿಂದ ಭಾರತದ ವಾಯುವ್ಯವನ್ನು ತಲುಪಿದವರೇ ಭಾರತದ ಇಂದಿನ ದ್ರಾವಿಡ ಭಾಷಿಕರು. ಹಾಗೆ ಯುರೇಷಿಯಾದಲ್ಲಿ ನೆಲೆಸಿದವರೇ ಕಕೇಷಿಯನ್ನರು! 

ವೆಲ್ಸ್  ನಿಷ್ಕರ್ಷಿಸಿದ ಸಮಯಕ್ಕಿಂತ ಹಿಂದೆಯೇ ಮಾನವ ವಂಶಾವಳಿಗಳು ಚೀನಾ ಹಾಗೂ ಯುರೋಪಿನಲ್ಲಿ ಇದ್ದವು. ಆದರೆ ನೈಸರ್ಗಿಕ ವಿಕೋಪಕ್ಕೆ, ಇನ್ನಿತರ ಕಾರಣಗಳಿಗೆ  ತುತ್ತಾಗಿ  ಅವರೆಲ್ಲ  ನಾಮಾವಶೇಷವಾಗಿರಬೇಕು. 

ವೆಲ್ಸ್ ಅವರ ಪ್ರಕಾರ ಇವತ್ತು ಭೂಮಿಯ ಮೇಲಿರುವ ಸಂತತಿಯಲ್ಲಿ ಇನ್ನೂರು ಜನರಲ್ಲಿ ಒಬ್ಬ ನಿಸ್ಸಂಶಯವಾಗಿ ಚೆಂಗೀಸ್ ಖಾನ್ ವಂಶದವನು! ಇಂಥ ಅನೇಕ ಕೌತುಕದ ವಿಷಯಗಳು ಈ ಲೇಖನದಲ್ಲಿವೆ.

ಲಕ್ಷ್ಮೀಪತಿಯವರು ರಾಖಿಗರಿಯ ಬಗ್ಗೆ, ಅಲ್ಲಿಯ ಸಂಶೋಧನೆಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡುತ್ತಾರೆ. 

ಇಡೀ ಜಗತ್ತಿನ ಇಂದಿನ ಜನಸಮುದಾಯಗಳು ವಲಸೆ, ಪಲ್ಲಟಗಳ ಕಾರಣದಿಂದ ಹಲವಾರು ಧಾರೆಗಳ ಮಿಶ್ರಣ ಹೊಂದಿರುವುದರ ಬಗ್ಗೆಯೂ ಅಧ್ಯಯನಗಳು ದೃಢಪಡಿಸಿವೆ. ವೈಜ್ಞಾನಿಕ ತಿಳಿವಿನ ಆಧಾರದ ಮೇಲೆ ಆದಿಪೂರ್ವಿಕ ದಕ್ಷಿಣ ಭಾರತೀಯರು, ಪೂರ್ವಿಕ ದಕ್ಷಿಣ ಭಾರತೀಯರು, ಪೂರ್ವಿಕ ಉತ್ತರ ಭಾರತೀಯರು ಎಂಬ ವಿಂಗಡಣನೆಯನ್ನು ವಿದ್ವಾಂಸರು ಗುರುತಿಸಿಟ್ಟಿದ್ದಾರೆ. ಲೈಂಗಿಕ ಪಕ್ಷಪಾತದಿಂದ ಆದ ಉತ್ಪರಿವರ್ತನೆಗಳನ್ನೂ ಗುರುತಿಸಿದ್ದಾರೆ. 

ಲಕ್ಷ್ಮೀಪತಿಯವರು ವೇದಕಾಲವನ್ನೂ ತರ್ಕಿಸಿದ್ದಾರೆ. ಯುರೇಷಿಯಾದ ಯುದ್ಧೋನ್ಮಾದಿಗಳು ಭಾರತಕ್ಕೆ ಬಂದು ಇಲ್ಲಿನ ಉಪ್ಪನ್ನೇ ಉಂಡು …ಛೇ! ಈ ನೆಲದ ಇತಿಹಾಸ ಏಕೆ ವಕ್ರಗತಿ  ಹಿಡಿಯಿತೋ ಎಂದು ಬೇಸರಿಸಿದ್ದಾರೆ. ಕಾಲಕಾಲಕ್ಕೆ ಜರುಗಿದ ಸಾಂಸ್ಕ್ರತಿಕ ರಾಜಕಾರಣದ ಬಗ್ಗೆಯೂ ದೀರ್ಘವಾಗಿ ಹೇಳಿದ್ದಾರೆ.

ನಾನು ಕಾಕತಾಳೀಯವೆಂಬಂತೆ  ಈ ಪುಸ್ತಕ, ರವಿ ಹಂಜ್ ಅವರ ಹ್ಯೂಎನ್ ತ್ಸಾಂಗನ ಮಹಾಪಯಣ, ನೇಮಿಚಂದ್ರರ ಯಾದ್ ವಶೇಮ್ ಇವುಗಳನ್ನು ಒಂದರ ಹಿಂದೆ ಒಂದು ಓದಿದೆ. ಮೂರರಲ್ಲೂ ಅದೆಷ್ಟು ಒಂದೇ ಬಗೆಯ ಹೊಳಹುಗಳು ಕಂಡವು ನನಗೆ.

ವಸುಧೈವ ಕುಟುಂಬಕಂ- ಎಂಬ ಮಾತಿದೆಯಲ್ಲ. ಇಂಥ ಸಂಶೋಧನೆಗಳು ಹೆಚ್ಚು ನಡೆದು, ಜಗವೆಲ್ಲ ಒಂದೇ ಎಂಬ ಸಿದ್ಧಾಂತ ನಮ್ಮ ಕಾಲದಲ್ಲಿ ಸಿದ್ಧವಾಗದಿದ್ದರೂ ಆ ದಿಸೆಯ ಆಲೋಚನೆ ಆರಂಭವಾಗಿ ಜಗತ್ತಿನಲ್ಲಿ ಜಾತಿ, ಮಾತು, ಪಂಥ, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಯುದ್ಧಗಳು ಕಡಿಮೆಯಾಗಲಿ. ಲಕ್ಷ್ಮೀಪತಿಯಾವರ  ಸತತ ಅಧ್ಯಯನ, ಸುವಿಸ್ತಾರ ಓದಿಗೆ ಶರಣು.

ಇತಿಹಾಸ ಎಂದರೆ ಮೂಗು ಮುರಿಯುವವರು ತಿಳಿಯಲೇಬೇಕಾದ ಸತ್ಯವೆಂದರೆ ಅದನ್ನು ಓದದಿದ್ದರೆ ‘ ನಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಈ ಜಗತ್ತು ಒಂದು ದಿನ ಕೊನೆಯಾಗುತ್ತದೆ ಎಂಬುದು. ಈ ಹಿನ್ನೆಲೆಯಲ್ಲಿ  ಎಲ್ಲರೂ ಓದಲೇಬೇಕಾದ ಪುಸ್ತಕ ಇದು.

( ಪ್ರಕಾಶಕರು- Harshakumar KSKugwe Post, Sagar Taluk, Shimoga District- 577401Rs 50.ಪುಸ್ತಕಗಳಿಗಾಗಿ – 7353712715, 9844252648)*****

****************************************

Leave a Reply

Back To Top