ಗೂಡಂಗಡಿಯ ತಿರುವು

ಬದುಕು ಎನ್ನುವುದು ಕುದಿಯುತ್ತಿರುವ ಹಾಲಿನಂತೆ. ಚೆಲ್ಲಿಹೋಗದಂತೆ ಕಾಪಾಡುವುದು ಬೆಂಕಿಯ ಕರ್ತವ್ಯವೋ, ಪಾತ್ರೆಯ ಜವಾಬ್ದಾರಿಯೋ ಅಥವಾ ಮನೆಯೊಡತಿಯ ಉಸ್ತುವಾರಿಯೋ ಎಂದು ಯೋಚಿಸುವುದು ನಿರರ್ಥಕವಾದೀತು! ಕುದಿಯುವುದು ಹಾಲಿನ ಕರ್ತವ್ಯವಾದರೆ, ಆ ಕ್ರಿಯೆ ಅಪೂರ್ಣವಾಗದಂತೆ ಮುತುವರ್ಜಿ ವಹಿಸುವುದು ಮಹತ್ತರವೆನ್ನಬಹುದಾದಂತಹ ಕೆಲಸ. ಬದುಕು ಎನ್ನುವ ಕಾಯಕ ಪರಿಪೂರ್ಣವಾಗುವುದೇ ಅದಕ್ಕೆ ಸಂಬಂಧಪಟ್ಟ ಕ್ರಿಯೆ-ಪ್ರಕ್ರಿಯೆಗಳ ನಿರಂತರತೆಯಲ್ಲಿ. ಮಣ್ಣಿನ ಒಡಲಿನಲ್ಲಿ ಬೇರು ಬಿಡುವ ಬೀಜ ಬೆಳಕಿನಾಶ್ರಯದಲ್ಲಿ ಕುಡಿಯೊಡೆವ ಕ್ಷಣದಲ್ಲಿ ಸದ್ದಿಲ್ಲದೆ ಬಿದ್ದ ಮಳೆಹನಿಯೊಂದು ಜೀವಜಲವಾಗಿ ಹರಿದು ಚಂದದ ಹೂವನ್ನರಳಿಸುತ್ತದೆ; ಎಲ್ಲಿಂದಲೋ ಹಾರಿಬಂದ ಬಣ್ಣದ ರೆಕ್ಕೆಗಳ ಪಾತರಗಿತ್ತಿಯೊಂದು ಅರಳಿದ ಹೂವಿನ ಮೇಲೆ ಕುಳಿತು ಬಿಸಿಲುಕಾಯಿಸುತ್ತದೆ. ಹೀಗೆ ಬದುಕು ಎನ್ನುವುದು ಒಮ್ಮೆ ಕುದಿಯುತ್ತ, ಮರುಕ್ಷಣ ಚಿಗುರುತ್ತ, ಮತ್ತೊಮ್ಮೆ ಮುಕ್ತ ಛಂದಸ್ಸಿನ ಕವಿತೆಯಾಗಿ ನಮ್ಮೆದುರು ತೆರೆದುಕೊಳ್ಳುತ್ತದೆ.

          ಬದುಕು ಚಿಗುರೊಡೆಯುವುದೇ ಅದು ಕಟ್ಟಿಕೊಡುತ್ತ ಹೋಗುವ ಚಿಕ್ಕಪುಟ್ಟ ಖುಷಿ-ನೆಮ್ಮದಿಗಳ ಕಾಂಪೌಂಡಿನ ಸಹಯೋಗದಲ್ಲಿ. ಬೆಳಗ್ಗೆ ಕಣ್ಣುಬಿಟ್ಟಾಗ ಅಡುಗೆಮನೆಯ ಪುಟ್ಟ ಡಬ್ಬದಲ್ಲಿ ಬೆಚ್ಚಗೆ ಕುಳಿತಿರುವ ಕಾಫಿಪುಡಿ-ಸಕ್ಕರೆಗಳೇ ಇಡೀದಿನದ ಸಂತೋಷವನ್ನು ಸಲಹಲು ಸಾಕಾಗಬಹುದು; ಮಧ್ಯಾಹ್ನದ ಬಿಸಿಲಿಗೊಂದು ತಣ್ಣನೆಯ ತಿಳಿಮಜ್ಜಿಗೆಯ ಗ್ಲಾಸು ದೊರಕಿ ನೆಮ್ಮದಿಯ ನಗುವನ್ನು ಅರಳಿಸಬಹುದು; ರಸ್ತೆಯಂಚಿನ ಹೊಂಗೆಮರದಲ್ಲೊಂದು ಹಕ್ಕಿ ಅದ್ಯಾವುದೋ ಅಪರಿಚಿತ ರಾಗದಲ್ಲಿ ಹಾಡುತ್ತ ಹೃದಯದಲ್ಲೊಂದು ಪ್ರೇಮರಾಗವನ್ನು ಹುಟ್ಟಿಸಿ ಮುದ ನೀಡಬಹುದು; ಪಕ್ಕದ ಮನೆಯ ಟೆರೇಸಿನಲ್ಲೊಬ್ಬಳು ಪುಟ್ಟ ಪೋರಿ ಕಷ್ಟಪಟ್ಟು ಗಾಳಿಪಟವನ್ನು ಹಾರಿಸುತ್ತ ಬಾಲ್ಯದ ನೆನಪುಗಳಿಗೊಂದು ರೆಕ್ಕೆ ಕಟ್ಟಿಕೊಡಬಹುದು; ಶಾಲೆ ಮುಗಿಯುತ್ತಿದ್ದಂತೆಯೇ  ತಳ್ಳುಗಾಡಿಯಲ್ಲಿ ನಗುನಗುತ್ತ ಕೊತ್ತಂಬರಿಸೊಪ್ಪು ಮಾರುವ ಪುಟ್ಟ ಹುಡುಗ ಸುಖ-ನೆಮ್ಮದಿಗಳ ಪರಿಕಲ್ಪನೆಯನ್ನೇ ಬದಲಾಯಿಸಬಹುದು. ಹೀಗೆ ನೋಟಕ್ಕೆ ದಕ್ಕುವ, ದಕ್ಕದೆಯೂ ತಾಕುವ ಸರಳವೆನ್ನಿಸುವ ಸಂಗತಿಗಳೇ ಒಟ್ಟಾಗಿ ಬದುಕು ಎನ್ನುವ ಬಹುದೊಡ್ಡ ಭಾರವನ್ನು ಹಗುರಗೊಳಿಸುತ್ತ, ಸಹ್ಯವಾಗಿಸುತ್ತ ಸಾಗುತ್ತವೆ.

          ಬದುಕಿನ ಭಾರವನ್ನು ಇಳಿಸುತ್ತ ಹೋಗುವ ಕ್ರಿಯೆಯಲ್ಲಿ ಹುಟ್ಟಿಕೊಳ್ಳುವ ಅನುಭವಗಳೆಲ್ಲವೂ ಸುಂದರವೆನ್ನಿಸುವುದು ಅವು ನಮ್ಮದಾಗುತ್ತ ಹೋಗುವ ಗಳಿಗೆಗಳಲ್ಲಿ. ಚಳಿಗಾಲದ ಮುಂಜಾವಿನಲ್ಲಿ ರಸ್ತೆಬದಿಯ ಚಹದಂಗಡಿಯ ಎದುರು ನಿಂತು ಅಂಗೈಗಳನ್ನು ಉಜ್ಜಿಕೊಳ್ಳುತ್ತ, ಉಸಿರು ಬಿಗಿಹಿಡಿದು ಚಹಕ್ಕಾಗಿ ಕಾದು ನಿಂತವರನ್ನು ನೋಡುವುದೇ ಒಂದು ಸುಂದರವಾದ ಅನುಭವ. ಆ ಕ್ಷಣದ ಅವರೆಲ್ಲರ ಬದುಕು ಒಲೆಯ ಮೇಲಿನ ನೀರಿನ ಪಾತ್ರೆಯಲ್ಲಿ ಕುದಿಯುತ್ತಿರುವ ಟೀ ಪೌಡರಿನಂತೆ ಚಡಪಡಿಸುತ್ತದೆ. ರಾತ್ರಿ ಬಿದ್ದ ಕೆಟ್ಟ ಕನಸಾಗಲೀ, ಕ್ಲೈಂಟ್ ಮೀಟಿಂಗ್ ಶುರುವಾಗುವುದರೊಳಗೆ ಆಫೀಸು ಸೇರಬೇಕಾದ ಗಡಿಬಿಡಿಯಾಗಲೀ, ತಪ್ಪದೇ ತಪಾಸಣೆ ಬಯಸುವ ಸಕ್ಕರೆ ಕಾಯಿಲೆಯಾಗಲೀ, ಮಗನನ್ನು ಟ್ಯೂಷನ್ ಕ್ಲಾಸಿಗೆ ಮುಟ್ಟಿಸುವ ಧಾವಂತವಾಗಲೀ ಯಾವುದೂ ಅವರ ಆ ಕ್ಷಣದ ಬದುಕನ್ನು ಬಾಧಿಸುವುದಿಲ್ಲ. ಕದ್ದು ಸಿಗರೇಟು ಸೇದಲು ಕಲಿತ ಕಾಲೇಜು ಓದುತ್ತಿರುವ ಹುಡುಗನಿಂದ ಹಿಡಿದು ರಿಟೈರಮೆಂಟಿನ ಸುಖವನ್ನು ಅನುಭವಿಸುತ್ತಿರುವ ಗೆಳೆಯರ ಗುಂಪಿನವರೆಗೆ ಎಲ್ಲರ ದೃಷ್ಟಿಯೂ ಒಲೆಯ ಮೇಲಿನ ಪಾತ್ರೆಯ ಮೇಲೆ ಕೇಂದ್ರೀಕೃತವಾಗಿ, ಅವರೆಲ್ಲರ ಬದುಕು ಒಂದೇ ಆಗಿಬಿಡುವ ಅನುಭವವನ್ನು ಚಹಾದ ಪಾತ್ರೆ ಒದಗಿಸುತ್ತದೆ. ಆ ಗೂಡಂಗಡಿಯ ಬದುಕಿನ ವ್ಯಾಪಾರದಲ್ಲಿ ಅಪ್ಪ ಕೊಟ್ಟ ಪಾಕೆಟ್ ಮನಿಗೂ, ದಿನಗೂಲಿಯ ಮುದ್ದೆಯಾದ ನೋಟಿಗೂ, ನಾಲ್ಕಂತಸ್ತಿನ ಮನೆಯ ನೆಮ್ಮದಿಯ ಹಣಕಾಸಿನ ವ್ಯವಹಾರಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ; ಕಾದು ನಿಂತವರೆಲ್ಲರಿಗೂ ಒಂದೇ ಬಣ್ಣ-ರುಚಿಗಳ ಚಹಾದ ಪೂರೈಕೆಯಾಗುತ್ತದೆ.

          ಬದುಕಿನ ವ್ಯಾಪಾರಗಳೆಲ್ಲವೂ ಹಾಗೆಯೇ! ಬೆಳಗಾಗುತ್ತಿದ್ದಂತೆಯೇ ಬಾಗಿಲು ತೆರೆವ ಹೂವಿನಂಗಡಿಯ ಮಲ್ಲಿಗೆ ಮಾಲೆಯೊಂದು ಪಕ್ಕದಲ್ಲಿಯೇ ಇರುವ ದೇವರ ಮೂರ್ತಿಯ ಮುಡಿಗೇರಬಹುದು; ದೊಡ್ಡದೊಂದು ಪ್ಲಾಸ್ಟಿಕ್ ಕವರಿನಲ್ಲಿ ರಾಶಿಬಿದ್ದ ಸಂಪಿಗೆಹೂಗಳು ಮುಷ್ಟಿ ತುಂಬಿ ಕಾಗದದ ಪೊಟ್ಟಣದಲ್ಲಿ ಸ್ಕೂಟರನ್ನೇರಬಹುದು; ಕೆಂಪು ಗುಲಾಬಿಗಳ ಗುಚ್ಛವೊಂದು ಐಟಿ ಪಾರ್ಕಿನ ಹೂದಾನಿಯಲ್ಲಿ ಕುಳಿತು ಒಳಗೆ ಬಂದವರನ್ನು ಸ್ವಾಗತಿಸಬಹುದು; ರಾತ್ರಿಯಾಗುತ್ತಿದ್ದಂತೆ ಅಂಗಡಿಯಲ್ಲೇ ಉಳಿದುಹೋದ ಹೂಗಳೆಲ್ಲ ಮುಚ್ಚಿದ ಬಾಗಿಲುಗಳ ಹಿಂದೆ ಬಾಡಿಹೋಗುವ ಭಯದಲ್ಲಿ ಬದುಕಬಹುದು. ಒಮ್ಮೊಮ್ಮೆ ಎಲ್ಲವೂ ಪೂರ್ವನಿಶ್ಚಯವಾದಂತೆ ಭಾಸವಾಗಿ, ಮರುಕ್ಷಣವೇ ಎಲ್ಲ ಅನಿಶ್ಚಿತತೆಗಳ ಅಸ್ಪಷ್ಟ ನೆರಳುಗಳಂತೆ ಜಾಗ ಬದಲಾಯಿಸುವ ಬದುಕು ತನ್ನದೇ ಮಾರ್ಗ ಹಿಡಿದು ಮನಬಂದಂತೆ ಚಲಿಸುತ್ತದೆ. ಆ ಚಲನೆಯಲ್ಲೊಂದು ಹವಾಯಿ ಚಪ್ಪಲಿ ಸೂರ್ಯಾಸ್ತ ನೋಡಲೆಂದು ಬೆಟ್ಟದ ತುದಿಯನ್ನೇರಿ ಕುಳಿತಿರಬಹುದು; ಒಣಗಿದ ಎಲೆಯೊಂದು ಹೊಳೆಯ ಹರಿವಿನಲ್ಲಿ ಒಂದಾಗಿ ಇಳಿಜಾರಿನೆಡೆಗೆ ಚಲಿಸುತ್ತಿರಬಹುದು; ಸೈಕಲ್ಲಿನಲ್ಲೊಬ್ಬ ಐಸ್ ಕ್ರೀಮು ಮಾರುವವ ಬಾಲ್ಯದ ನೆನಪುಗಳಿಗೆ ತಣ್ಣನೆಯ ಸ್ಪರ್ಶ ನೀಡಬಹುದು; ಮುಗಿದುಹೋದ ಪ್ರೇಮದ ಹಾದಿಯ ಕವಲುದಾರಿಗಳುದ್ದಕ್ಕೂ ಗುಲ್ ಮೊಹರ್ ಗಿಡಗಳು ಮೈತುಂಬ ಹೂವರಳಿಸಿ ನಿಂತಿರಬಹುದು. ಹೀಗೆ ಎಲ್ಲ ಚಲನೆಗಳಿಗೂ ಹೊಸದೊಂದು ನೋಟವನ್ನು, ತಿರುವುಗಳನ್ನು ಒದಗಿಸುತ್ತ ಮುಂದೋಡುವ ಬದುಕು ನಿಂತಿದ್ದನ್ನು ಕಂಡವರಿಲ್ಲ.

          ನೋಡುವ ಕಣ್ಣುಗಳಲ್ಲಿ ಹೊಸತನ-ಭರವಸೆಗಳನ್ನು ತುಂಬಿಕೊಳ್ಳಲು ಸಾಧ್ಯವಾದಾಗಲೆಲ್ಲ ಬದುಕು ಹೊಸಹೊಸ ನೋಟಗಳನ್ನು ಒದಗಿಸುತ್ತಲೇ ಇರುತ್ತದೆ. ಸಗಣಿ, ಒಣಹುಲ್ಲು, ತ್ಯಾಜ್ಯಗಳೇ ತುಂಬಿರುವ ಗೊಬ್ಬರಗುಂಡಿಯ ಅಂಚಿನಲ್ಲೊಂದು ಸೀತಾಫಲದ ಗಿಡ ಚಿಗುರುತ್ತಿರಬಹುದು; ಕಸದ ಗಾಡಿಯ ಹಸಿತ್ಯಾಜ್ಯಗಳ ರಾಶಿಯ ಮೇಲೊಂದು ಕಾಗೆ ಅನ್ನದ ಅಗುಳನ್ನು ಹೆಕ್ಕುತ್ತಿರಬಹುದು; ಪಾತ್ರೆಯ ತಳದಲ್ಲುಳಿದ ಚಹಾದ ಪುಡಿ ಗುಲಾಬಿ ಗಿಡದ ಬುಡವನ್ನು ಸೇರಿ ಹೊಸ ಹೂಗಳನ್ನರಳಿಸಬಹುದು; ಆಕ್ಸಿಡೆಂಟಿನಲ್ಲಿ ಮಗನನ್ನು ಕಳೆದುಕೊಂಡ ತಾಯಿಯೊಬ್ಬಳು ಸಾವಿನ ನೋವನ್ನು ಸಹಿಸಿಕೊಂಡು ನೈವೇದ್ಯಕ್ಕೆಂದು ಚಕ್ಕುಲಿ ಸುತ್ತುತ್ತಿರಬಹುದು. ಹೀಗೆ ಕುದಿವ ನೋವುಗಳು, ಒಣಗಿಹೋದ ಇರವುಗಳಿಗೆಲ್ಲ ಹೊಸ ಹೊಳಹುಗಳನ್ನು ಕರುಣಿಸುತ್ತ ಸಾಗುವ ಬದುಕಿನ ಪೆಟ್ಟಿಗೆಯಲ್ಲಿ ನೆನಪಿನ ಸುರುಳಿಯ ಕ್ಯಾಸೆಟ್ಟುಗಳು, ಸಂಬಂಧಗಳನ್ನು ಹಿಡಿದಿಟ್ಟ ಆಲ್ಬಮ್ಮುಗಳು, ಇತಿಹಾಸವನ್ನೇ ಕಟ್ಟಿಹಾಕುವಂತೆ ಕುಳಿತ ನಾಣ್ಯಗಳು ಎಲ್ಲವೂ ಸದ್ದುಮಾಡದೇ ಸ್ನೇಹ ಬೆಳಸಿಕೊಳ್ಳುತ್ತವೆ; ಗೋಡೆಯ ಮೇಲೊಂದು ಹಳೆಯ ಗಡಿಯಾರ ಸದ್ದುಮಾಡುತ್ತ ಚಲಿಸುತ್ತಿರುತ್ತದೆ.

          ಹೀಗೆ ಬದುಕಿನ ಚಲನೆಗಳೆಲ್ಲವೂ ಒಮ್ಮೆ ಶಬ್ದ ಮಾಡುತ್ತ, ಮನಬಂದಾಗ ಮೌನವಾಗುತ್ತ, ನಗುನಗುತ್ತ ಹೆಜ್ಜೆಯಿಟ್ಟು ದಾರಿ ಸವೆಸುತ್ತವೆ. ಆ ದಾರಿಯ ಶುರುವಿನಲ್ಲೊಂದು ಬಾಣದ ಗುರುತಿನ ಬೋರ್ಡು ಎತ್ತಿಡುವ ಪ್ರತಿ ಹೆಜ್ಜೆಯನ್ನೂ ನಿರ್ಧರಿಸಬಹುದು; ದಾರಿಯ ಮಧ್ಯದಲ್ಲೊಂದು ತಿರುವು ಕಾಣಿಸಿಕೊಂಡು ಪೂರ್ವನಿಶ್ಚಿತ ಪಯಣವನ್ನೇ ಪ್ರಶ್ನಿಸಿಬಿಡಬಹುದು; ಇದ್ದಕ್ಕಿದ್ದಂತೆ ಎದುರಾದ ದಾರಿಹೋಕನೊಬ್ಬ ಆ ಕ್ಷಣದ ಎಲ್ಲ ಪ್ರಶ್ನೆಗಳ ಉತ್ತರವಾಗಿಬಿಡಬಹುದು; ಜೊತೆಗೆ ನಡೆದವರಲ್ಲೊಬ್ಬಿಬ್ಬರು ಮನಸಾರೆ ನಕ್ಕು ಕೈಹಿಡಿಯಬಹುದು; ಹಿಂತಿರುಗಿ ನೋಡಿದರೆ ಹಾದುಬಂದ ತಿರುವು ದೂರದಿಂದ ಕೈಬೀಸಿ ಬೀಳ್ಕೊಡಬಹುದು; ದಣಿವಾರಿಸಿಕೊಳ್ಳಲು ಕೊಂಚಹೊತ್ತು ಕಾಲುಚಾಚಿ ವಿರಮಿಸುವ ಹೊತ್ತು ಹಾದಿಬದಿಯ ಮರದ ಮೇಲೊಂದು ಮರಿಹಕ್ಕಿ ರೆಕ್ಕೆ ಬಲಿವ ಗಳಿಗೆಗಾಗಿ ಕಾಯುತ್ತಿರಬಹುದು; ಮುಂದಿನ ತಿರುವಿನಲ್ಲೊಂದು ಗೂಡಂಗಡಿಯ ಒಲೆಯ ಮೇಲೆ ಹಾಲು ಕುದಿಯುತ್ತಿರಬಹುದು!

****************************

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಚಿತ್ರಕೃಪೆ: ಶ್ರೀನಿಧಿ ಡಿ.ಎಸ್.

6 thoughts on “

  1. ಅದ್ಭುತ…… ಮೇಡಂ…… ನಿಮ್ಮ obseration ಅನೂಹ್ಯಾ ವಾದದ್ದು.ನೀವು ಕೊಡುವ ವಿವರಣೆ ಗಳನ್ನು ಓದುವುದೇ ಒಂದು ಹಬ್ಬದೂಟ ಸವಿದಂತೆ…..

    1. ತುಂಬಾ ಖುಷಿಯಾಯಿತು ವಿದ್ಯಾ ಅವರೇ. ಥ್ಯಾಂಕ್ಯೂ !!

    2. ಚೆನ್ನಾಗಿದೆ ಲೇಖನ. ಕೆಲವೊಂದು ಕ್ಷಣಗಳು ಎಲ್ಲವನ್ನೂ ಮರೆಸಿ ನೆಮ್ಮದಿ ಕೊಡುವ ” ಆ ಕ್ಷಣ ” ವಾಗಿ ಉಳಿದುಕೊಳ್ಳುತ್ತವೆ.

  2. ಕಣ್ಣಿಗೆ ಕಟ್ಟುವಂತೆ ಪದಗಳಲ್ಲಿ ಹಿಡಿದಿಟ್ಟ ಅತಿ ಚೆಂದದ
    ಮನೋಲ್ಲಾಸದ ಬರಹ

  3. ತುಂಬಾ ಚೆನ್ನಾಗಿ ಬರೆಯುತ್ತೀರಿ/ಬರೆಯುತ್ತಿರಿ.
    ನೆನಪುಗಳನ್ನೆಲ್ಲ ನೆನಪಿಟ್ಟುಗೊಂಡು ಅದಕ್ಕೆ ಮತ್ತಷ್ಟು ಕಲ್ಪನೆಗಳ ಮೆರಗು ನೀಡುವ ನಿಮ್ಮ ಬರಹಗಳು ತುಂಬ ಇಷ್ಟ

  4. ಆಹಾ! ಚಂದ… btw, ಅಡಕಳ್ಳಿ ಕತ್ರಿಯ ಫೋಟೊ ಇಡೀ ಬರಹವನ್ನೂ ಅದರ ಆಶಯವನ್ನೂ ಅನಾಮತ್ ಮೇಲೆತ್ತಿಬಿಟ್ಟಿದೆ!

Leave a Reply

Back To Top