ಕಾಡುವ ವಿಚಾರ…

ಕಾಡುವ ವಿಚಾರ...

ವಸುಂಧರಾ ಕದಲೂರು

              ಆ ದಿನ ನಿಜಕ್ಕೂ ಬಹಳ ಕಳವಳಪಟ್ಟಿದ್ದೆ. ಏನು ಮಾಡಿದರೂ ನನಗೆ ನಂಬಿಕೆ ಮೂಡುತ್ತಿರಲಿಲ್ಲ. ಏಕೋ ಎದೆಯಾಳದಲಿ ತೀವ್ರ ನೋವಾಗುತ್ತಿರುವ ಅನುಭವ. ಆ ಕ್ಷಣಕ್ಕೆ ಆಶಾಭಂಗದ ಅರ್ಥವೂ, ದಿಗ್ಭ್ರಮೆ ಎಂಬುದರ ಪರಿಚಯವೂ ಆಗಿಹೋಯಿತು. ಎಳೆ ಮನದ ಭಿತ್ತಿಯಲಿ  ಉದಿಸಿದ ದುಃಖ ಹಸಿ ನೆಲದಲ್ಲಿ ಬೇರೂರಿದ ಬೀಜದಂತಾಯ್ತು. 

     ಹೌದು, ಮೊದಲ ಬಾರಿಗೆ ಪ್ರೀತಿಯ ‘ಗಾಂಧಿ’ ಅವರ ಸಾವು ಹೇಗಾಯಿತೆಂದು ತಿಳಿದಾಗ ನನಗಾದ ಅನುಭವವೇ ಈ ಮೇಲಿನದ್ದು. ‘ಮಹಾತ್ಮ ಗಾಂಧೀಜೀ’ ಅಂತಹವರನ್ನೂ ಹೇಗೆ ಕೊಲ್ಲುವುದಕ್ಕೆ ಸಾಧ್ಯ? ಅದೂ ನಾವು ಭಾರತದವರೇ!ಬೆಚ್ಚಿ ಬಿದ್ದಿದ್ದೆ.

 

    ದಿನಗಳು ಉರುಳುರುಳಿ ಸಾವಕಾಶದ ಪರದೆ ಸರಿದು ಅಗೋಚರ ಸಟೆಗಳೂ, ಉಳಿದ ಹಲವು ಸತ್ಯಗಳೂ ದೃಗ್ಗೋಚರವಾಗುತ್ತಾ ಆಗುತ್ತಾ ನನ್ನನ್ನು ಕಂಗೆಡಿಸಿದವು. ಸಮಾಧಾನ ಪಡೆಯುವ ಹಂಬಲಕೆ ಯಾರೂ ದಾರಿ ತೋರುತ್ತಿಲ್ಲ. ಹತಾಶೆ ಗೊಂದಲದ ಗೊಂಡಾರಣ್ಯ ಹೊಕ್ಕು ಸಿಕ್ಕ ಸಿಕ್ಕ ಸಿಕ್ಕುಗಳನು ಬಿಡಿಸುತ್ತಾ ಮತ್ತೆ ಹೆಣೆಯುತ್ತಾ ಅಬ್ಬೇಪಾರಿಯಾಗಿ ನಿಂತ ಭಾವ ನನ್ನದಾಗಿತ್ತು. 

    ಗಾಂಧಿ ಮಾತ್ರವೇ ಅಲ್ಲ, ಕೃಷ್ಣ(?), ಕ್ರಿಸ್ತ, ಬಸವಣ್ಣ…..!!

ಏಕೆ ಈ ಜಗತ್ತು ನ್ಯಾಯಪರವಾಗಿರುವುದಿಲ್ಲ? ಬೆಳಕನ್ನು ಕಾಣಬಯಸದೇ ಕತ್ತಲಿನಲ್ಲಿ  ಕಡಲ ದಡದ ಬಂಡೆಗೆ ಅದೆಷ್ಟು ನಿರಂತರದ ಅಲೆಗಳ ಬಡಿದಂತೆ. ಕಣ್ಣ ಮುಂದೆಯೇ ಒಂದು ಸೊಗಸಾದ ಚಿತ್ರವನು ತಿರುಚಿ ಮುರುಟಿ ತಿಪ್ಪೆಗೆಸೆದಂತೆ.

ಆಗ ತಿಳಿದ ಸತ್ಯಗಳೂ… ಆಮೇಲಿನ ದೊಂದಿ ಹಚ್ಚಿ ಕಾಣಿಸುವ ಸುಳ್ಳುಗಳೂ… ಈಗಲೂ ನನ್ನನ್ನು ಕಾಡುತ್ತಲೇ ಇವೆ. ಇದಾವುದರ ಗೊಡವೆಗೆ ಹೋಗದೇ ನಿರಾಳದಲ್ಲಿ ಸಮಾಧಿ ಆಗಿಹೋದ ನನ್ನ ಹಿರೀಕರು ನೆನಪಾಗುತ್ತಾರೆ. ಎಂಥಾ ನೆಮ್ಮದಿಯ ಬದುಕು ಅವರದ್ದಿತ್ತೆಂದು ಯಾವಾಗಲೂ ಅನಿಸುತ್ತದೆ. ಆದರೆ, ಬೆಳಕ ಕಿಡಿ ಕಂಡ ಮೇಲೂ ಅದಕ್ಕೆ ಬೆನ್ನು ತಿರುಗಿಸಿ ಪಾತಾಳದ ಆಳದಲಿ ಬದುಕುವುದು ನನಗೆ ಸಾಧ್ಯವಾದೀತೆ!? 

          ಸತ್ಯವು ತಿಳಿಯಲಾರದೆಂದಲ್ಲ, ತಿಳಿಯಾಗಲಾರದ ರಾಡಿಯಲ್ಲೇ ಈಗ ಬದುಕುತ್ತಿರುವಾಗ ಕನಸು ಹುಟ್ಟದ 

ಕತ್ತಲಲ್ಲಿ ಸೊಗಸಾದ ನಿದ್ರೆಗಳನು ಕಾಣುವುದು ಹೇಗೆ? 

ಅಪಾರ ನೆಮ್ಮದಿಯ ರಾತ್ರಿಗಳನ್ನು ಕಂಡಿದ್ದ ಪೂರ್ವಿಕರು 

ಹೆಚ್ಚು ಒಳ್ಳೆಯ ಅಭಿರುಚಿ ಇದ್ದವರೆಂದೂ, ಸುಖಿಗಳೆಂದೂ, ಸಿರಿವಂತರೆಂದೂ ನಾನು ಗಟ್ಟಿಯಾಗಿ ನಂಬುತ್ತೇನೆ.

      ನನ್ನನ್ನು ಕಾಡುವ ಇತಿಹಾಸಗಳು ನನ್ನ ಕನಸಿಗೂ ಕನ್ನ ಹಾಕುತ್ತಿವೆ. ಹಾಗಾದರೆ ಇತಿಹಾಸ ಓದಲೇ ಬಾರದೆ? 

ಅಥವಾ ಓದಬಾರದ ಚರಿತ್ರೆಗಳೂ ಇವೆಯೇ?! ಗೊತ್ತಿಲ್ಲ.

ಏಕೆಂದರೆ ಗಾಂಧಿ, ಬಸವಣ್ಣ ಅಂತಹವರ ಸಾವು ಹಾಗೂ ಅದರ ಕಾರಣಗಳು ಆಗ ನಾನು ಪಾಠ ಓದುವ ಹುಡುಗಿಯಾಗಿದ್ದಾಗ ಅಪಾರ ವೇದನೆಯೊಡನೆ ದಿಗ್ಭ್ರಮೆ ತಂದಿದ್ದರೆ, ಈಗ ಈ ನೆಲದ ಮೇಲೆ ಜವಾಬ್ದಾರಿಯುಳ್ಳ ಪ್ರಜೆಯಾಗಿ ಬದುಕಬೇಕೆಂದು ನಿಶ್ಚಯಿಸಿರುವಾಗ, ಇಲ್ಲಿ ಕಂಡುಬರುತ್ತಿರುವ ಹಲವು ಸಾಮಾಜಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಹೆಚ್ಚು ಕಾಡುತ್ತಿವೆ.

***********************************

4 thoughts on “ಕಾಡುವ ವಿಚಾರ…

  1. ನಿಮ್ಮ ಈ ಕಾಡುವ ವಿಚಾರ ಸತ್ ದರ್ಶನಪರವಾ
    ದುದು. ನಮಗೆ ಓದಿಸಿದ ಇತಿಹಾಸದಾಚೆಗೆ ಅದರ ಪೂರ್ಣಪಾಠವಿದೆ. ಆ ಚರಿತ್ರೆ ಮನುಷ್ಯ ಸಂಬಂಧಿತವೇ ಅದ್ದರಿಂದ ಆ ಓದೂ ಅತ್ಯಗತ್ಯವೆ. ಗಾಂಧಿಯನ್ನು ಕೊಂದದ್ದು ಒಂದು ಕ್ಷಣದ ಘಟನೆಯಲ್ಲ, ಅದೊಂದು ವಿಚಾರಧಾರೆಯ ಕ್ರೂರತ್ವ; ಬುದ್ಧ, ಜೈನ, ಬಸವಾದಿ ವಚನಕಾರರು, ವಿವೇಕನಂದ, ಫುಲೆ ದಂಪತಿಗಳು, ಅಂಬೇಡ್ಕರ, ನಾರಾಯಣ ಗುರು..ಹೀಗೆ ಅನೇಕ ಮಹಾಚೇತನಗಳ ಜೀವಪರವಾದ, ಮಾನವೀಯ ಕಾಳಜಿ.. ಇವರ ಬದುಕನ್ನು ಆಯಾ ಕಾಲಘಟ್ಟದ ಹಿನ್ನೆಲೆಯಲಿ ‘ಅರ್ಥ’ ಮಾಡಿಕೊಳ್ಳುವುದು ನಮ್ಮ ಅರಿವಿನ ಪರೀಧಿಯನ್ನು ವಿಸ್ತ್ರತಿಗೊಳ್ಳಿಸುವುದೇ ಆಗಿದೆ.
    ಸಮಕಾಲೀನ ಸಮಾಜೋರಾಜಕೀಯ ಸ್ಥಿತಿಯನ್ನು
    ಈ ಬೆಳಕಿಂಡಿಯ ಮೂಲಕ ಕಾಣುವುದು, ಸಮಷ್ಟಿಯ ಕುರಿತು ಕಾಳಜಿ ಇರುವ ಮನಸ್ಸುಗಳ ಸವಾಲೂ ಹೌದು.
    ವಂದನೆಗಳು.

    1. ನಿಮ್ಮ ಕಾಳಜಿ ತುಂಬಿದ ಕಳಕಳಿಯ ಮಾತುಗಳಿಗೆ ಧನ್ಯವಾದಗಳು

  2. ಮಹಾತ್ಮರ ಅಂತ್ಯ ಈಗಲೂ ಕಾಡುವ ಪ್ರಶ್ನೆ,
    ಕಾರಣ ಮಾತ್ರ ಅಸಮಂಜಸ.

Leave a Reply

Back To Top