ಪುಸ್ತಕಸಂಗಾತಿ

ಹೋಗಿ ಬಾ ಮಗಳೆ.

ಹೋಗಿ ಬಾ ಮಗಳೇ

ಲೇಖಕರು: ಡಾ||ವಿರೂಪಾಕ್ಷ ದೇವರಮನೆ
ಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್
ಪುಸ್ತಕದ ಬೆಲೆ: ೧೫೦.೦೦ರೂ

ಡಾ||ವಿರೂಪಾಕ್ಷ ದೇವರಮನೆಯವರಿಂದ ರಚಿತವಾದ “ಹೋಗಿ ಬಾ ಮಗಳೇ” ಜವಾಬ್ದಾರಿಯುತ ಅಪ್ಪನೊಬ್ಬ ತನ್ನ ಮಗಳಿಗೆ ವೈವಾಹಿಕ ಜೀವನದ ಅನೇಕ ಆಗು ಹೋಗುಗಳ ಬಗ್ಗೆ ಹಿತವಾಗಿ ಮುಖಾಮುಖಿ ಮಾತನಾಡಿದಂತೆ ತೋರುವ ಪುಸ್ತಕ ರೂಪದ ಕೈಗನ್ನಡಿ.

ಮದುವೆ ಎನ್ನುವ ಮೂರಕ್ಷರಗಳೊಂದಿಗೆ ಆರಂಭವಾಗುವ ಎರಡು ವಿಭಿನ್ನ ಕುಟುಂಬಗಳ ನಡುವಿನ ಸೇತುವೆ.

ಯಾವುದೇ ಮದುವೆಯ ಸಂದರ್ಭದಲ್ಲಿ ಎರಡೂ ಕಡೆ ಕೊಂಚವಾದರೂ ತಕರಾರಿಲ್ಲದೇ ಕಾರ್ಯಕ್ರಮ ನೆರವೇರದು. ಮದುವೆ ಗಂಡು ಹೆಣ್ಣಿನ ನಡುವೆ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಆತಂಕದ ವಿಷಯವೇ. ಸಂಭ್ರಮದ ಜೊತೆಗೆ ಭವಿಷ್ಯದ ಕಾತರವು ಬೆರೆತಿರುತ್ತದೆ. ಪ್ರಸ್ತುತ ಪುಸ್ತಕದ ಲೇಖಕರು ತಮ್ಮ ಬಳಿ ಬರುವ ಬಹಳಷ್ಟು ಪಾತ್ರಗಳ ಮೂಲಕ ಜೀವನದ ವಿವಿಧ ಮಜಲುಗಳಲ್ಲಿ ಎದುರಾಗಬಹುದಾದ ಘಟನೆಗಳ ಸವಿಸ್ತಾರ ವಿವರಣೆ ಹಾಗೂ ಸೂಕ್ತ ಪರಿಹಾರವನ್ನು ನೀಡಿದ್ದಾರೆ.

ಹೆಣ್ಣಾಗಿ ನಾನೂ ಕೂಡಾ ಮತ್ತೊಂದು ಮನೆಗೆ ಬಂದವಳು ಹಾಗೂ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪರದಾಡಿದವಳು. ಅಪ್ಪ -ಅಮ್ಮನ ಮನೆಗೆ ವಿಭಿನ್ನವಾದ ವಾತಾವರಣ , ಒಂದು ರೀತಿಯ ಅಳುಕು . ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಇದೇ ರೀತಿ. ಸೊಸೆ ಗಂಡನ ಮನೆಯಲ್ಲಿ  ಮದುವೆಯ ಮೊದಲಿನಿಂದಲೂ ಸೊಸೆಯೇ ಆಗಿರುತ್ತಾಳೆ. ಆದರೆ ಅಳಿಯನೆಂದರೆ ಹೆಂಡತಿಯ ಮನೆಯಲ್ಲಿ ವಿಶೇಷ ಗೌರವ, ಆದರಾತಿಥ್ಯ. ಬೇರೊಂದು ಮನೆಗೆ ಹೊಂದಿಕೊಳ್ಳುವಾಗ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ ಯಾರೂ ಸಮಯದ ಅವಕಾಶವೇ ಕೊಡುವುದಿಲ್ಲ.  ಲೇಖಕರು ಈಗಿನ ಸಮಾಜದಲ್ಲಿ ಮುರಿದುಬೀಳುವ ಅನೇಕ ವಿವಾಹ ಹಾಗೂ ಅವುಗಳ ತೊಳಲಾಟಗಳ ಮೂಲಕ ಮದುವೆ ಎಂದರೆ ಸಮಸ್ಯೆಯಲ್ಲ,‌ ಅದನ್ನು ನಿಭಾಯಿಸಲು ಒಂದಷ್ಟು ತಯಾರಿ ಮಾಡಿಸುವುದು ಹೆತ್ತವರಿಗೂ, ಗಂಡಿನ ಕಡೆಯವರಿಗೂ ಸೇರಿರುತ್ತದೆ.

ಲೇಖಕರು ತಮ್ಮ ಈ ಪುಸ್ತಕ ರೂಪದ ದಾರಿದೀಪವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ೨೫ ಘಟಕಗಳು ಇದರಲ್ಲಿ ಸೇರಿದ್ದು , ನಮ್ಮನ್ನು ಓದಿಸಿಕೊಂಡು ಹೋಗುವ ಮಾರ್ಗದಲ್ಲಿ ಸ್ವ ಅನುಭವಗಳು , ಬೇಸರಿಕೆಗಳು, ಸಂಕಟಗಳು ಇಣುಕುತ್ತವೆ.

ಮದುವೆಯ ವಯಸ್ಸಿನ ಕನಸಿನಿಂದ ಹಿಡಿದು ಮಕ್ಕಳ ಜವಾಬ್ದಾರಿ, ಮನೆಯವರೊಂದಿಗೆ ಹೊಂದಾಣಿಕೆ ಹೀಗೆ ಎಲ್ಲವನ್ನೂ ಸಾದೃಶ್ಯಗೊಳಿಸಿದ್ದಾರೆ.

ಪತಿ ಹಾಗೂ ಪತ್ನಿ ಯಾರೂ ಹೆಚ್ಚು ಕಡಿಮೆ ಎಂಬ ತರ್ಕ ಕ್ಕೆ ಹೋಗಲೇಬಾರದೆಂಬ ಕಿವಿಮಾತು, ದಂಪತಿಗಳ ನಡುವೆ ಅನ್ಯರ ಪ್ರವೇಶ ಎಂದಿಗೂ ನಿಷಿದ್ಧ , ಅಪಾರ್ಥ ತರುವ ಮೌನಗಳಿಗಿಂತ ಅರ್ಥ ವಿರದ ಜಗಳಗಳೇ ವಾಸಿ, ಕ್ಷಮಿಸುವ ಮರೆಯುವ ಗುಣಗಳನ್ನು ಹೊಂದುವ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ಕಟ್ಟಲು ಅಪ್ಪನಂಥ ಗೆಳೆಯನಿಂದ ಸಲಹೆ ಈ ಪುಸ್ತಕ ಎನಿಸಿತು.

ಇಂಥ ಘಟನೆಗಳು ಸಾಮಾನ್ಯವಾಗಿ ಎನಿಸಿದರೂ ನಮಗೆ ಕಲಿಯುವ ಪಾಠ ಇದರಲ್ಲಿ ಅಡಗಿದೆ.

ಅವಳಿಗೆ… ಅವನಿಗಿರದ ಪ್ರಾಕೃತಿಕ ಸವಾಲುಗಳು!

ಅವನಿಗೆ .. ಅವಳಿಗಿರದ ಜವಾಬ್ದಾರಿಗಳು!

ಎಂಥಾ ಅದ್ಭುತ ಅಲ್ಲವೇ  ಡಾಕ್ಟರ್ ಅವರ ಈ ನುಡಿಗಳು.

ಹೆಣ್ಣು ಹಾಗೂ ಗಂಡು ವಿಭಿನ್ನ ದೈಹಿಕ, ಮಾನಸಿಕ ಕ್ಷಮತೆಯನ್ನು ಪಡೆದವರು. ಅವಳಿರಲಿ, ಅವನಿರಲಿ ಇಬ್ಬರೂ ಒಂದೇ ಆದರೂ ಭಿನ್ನ.

ಆರೋಪಗಳ ಸರಮಾಲೆಯ ಮತ್ತೊಬ್ಬರಿಗೆ ಹಾಕುವ ಮುನ್ನ ಸ್ವ ವಿಮರ್ಶೆಗೆ ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಮನವ ತಟ್ಟಿದ ಪುಸ್ತಕ. ಥ್ಯಾಂಕ್ಯೂ ಡಾಕ್ಟರ್.

******************************************

ಸರಿತಾ ಮಧು

3 thoughts on “ಪುಸ್ತಕಸಂಗಾತಿ

  1. Thank you very much for your time, reading and kind words madam. Am indebdtful to you. It increases my responsibility as a writer.

  2. ಇಂಥ ಪುಸ್ತಕ ಬರೆಯುವ ತಂದೆಯ ಭಾವಕ್ಕೆ ನಮನಗಳು.

Leave a Reply

Back To Top