ಮುಖಾಮುಖಿ

ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ”

ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ”

ನಾಗರೇಖಾ ಗಾಂವಕರ್

ನಾಗರೇಖಾ ಗಾಂವ್ಕರ್ ಅಂಕೋಲಾ ತಾಲೂಕಿನ ಆಡ್ಲೂರು ಗ್ರಾಮದವರು. ನಾಗರೇಖಾ ಅವರು ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಾಭಾಷಾ ಉಪನ್ಯಾಸಕಿ. ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧,೨ ನ್ನು ಸಹ ಪ್ರಕಟಿಸಿದ್ದಾರೆ. ಕತೆಗಳನ್ನು ಸಹ ಬರೆಯುವ ಇವರು, ಕೆಲ ಕತಗಳಿಗೆ ಬಹುಮಾನ ಸಹ ಪಡೆದಿದ್ದಾರೆ. ಕನ್ನಡ ಕವಿಗಳ ಕವಿತೆಗಳನ್ನು ಆಂಗ್ಲಭಾಷೆಗೆ ತರ್ಜಿಮೆ ಮಾಡುವಲ್ಲಿ ಸಹ ಈಚೆಗೆ ತೊಡಗಿಕೊಂಡಿದ್ದಾರೆ. ಕನ್ನಡ ಕಾವ್ಯ ಜನಪರವಾಗಿ, ಮಹಿಳಾ ಜಗತ್ತಿನ ಕುರಿತು ಸ್ಪಂದಿಸುತ್ತಲೇ ಬಂದಿದೆ. ಸಮಾಜದ ಪ್ರತಿಬಿಂಬವೇ ಆಗಿರುವ ಸಾಹಿತ್ಯ, ನೋವಿಗೆ ಸಾಂತ್ವಾನ ಹೇಳಿದೆ. ದುಃಖಕ್ಕೆ ಮಿಡಿದಿದೆ. ಅನ್ಯಾಯವನ್ನು ಪ್ರತಿಭಟಿಸಿದೆ. ತಾಯಿಯಂತೆ ಪ್ರೀತಿ,ವಾತ್ಯಲ್ಯಗಳನ್ನು ನೀಡಿದೆ. ಕಾವ್ಯ ಅಮೃತಕ್ಕೆ ಹಾರುವ ಗರುಡ ಎಂಬ ಮಾತಿದೆ. ಕಾವ್ಯದ ದಿಕ್ಕು ದಿಶೆಗಳನ್ನು ಕನ್ನಡ ಕಾವ್ಯ ಜಗತ್ತು ನಿರಂತರವಾಗಿ ತನ್ನ ದಾರಿಯನ್ನು ಹುಡುಕುತ್ತಾ ಸಾಗಿದೆ.


ಈ ಸಲ ಸಂಗಾತಿ ವೆಬ್ ನೊಂದಿಗೆ ನಾಗರಾಜ್ ಹರಪನಹಳ್ಳಿ ಅವರ ಜೊತೆ ಮುಖಾಮುಖಿಯಾಗಿದ್ದಾರೆ ಕವಯಿತ್ರಿ ನಾಗರೇಖಾ ಗಾಂವ್ಕರ್.


……

ಪ್ರಶ್ನೆ : ಕವಿತೆ ಏಕೆ ಬರೆಯುತ್ತೀರಿ?

ಉತ್ತರ : ಬದುಕಿಗೆ ಜೀವಂತಿಕೆಯನ್ನು ತುಂಬುವಂತಹ ಎಷ್ಟೆಷ್ಟೋ ಪ್ರಯತ್ನಗಳಿವೆ. ಭಾವ ಜೀವಿಯಾದವ ಸಂವೇದನೆಗಳ ತಾಕಲಾಟದಲ್ಲಿ ವೈಯಕ್ತಿಕ ದರ್ಶನಗಳ ಕಂಡುಕೊಳ್ಳುವತ್ತ ಹಾಗೂ ಅದನ್ನು ಒಡಮೂಡಿಸುವಲ್ಲಿ ಇದೊಂದು ಮಾರ್ಗ ಹಿಡಿಯುವುದಿದೆ. ಹಾಗಾಗಿ ಕವಿತೆ ನನ್ನನ್ನು ಜೀವಂತವಾಗಿಡುವಲ್ಲಿ ಸಹಕರಿಸುತ್ತದೆ. ಯಾಂತ್ರಿಕ ಬದುಕಿನ ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ. ನಾನು ಯಾರಿಗಾಗಿ ಬರೆಯುತ್ತೇನೆ ಅಂತಾ ಟಾಲಸ್ಟಾಯ್ ಬಹಳ ವಿಷಾದದಿಂದ ಕೇಳಿಕೊಂಡಿದ್ದನಂತೆ. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ನಾನು ಹೇಳಬಯಸುವುದಿಷ್ಟೇ! ದ್ವಂದ್ವಗಳನ್ನು ಮೀರಲು, ನನ್ನ ನಾನು ಕಳೆದುಕೊಳ್ಳಲು, ನಿರಾಳವಾಗಲು ಕವಿತೆಗಳನ್ನು ಬರೆದದ್ದು ಇದೆ. ಬರೆಯುತ್ತಿರುವೆ.

  • ಕವಿತೆ ಹುಟ್ಟುವ ಕ್ಷಣ ಯಾವುದು?

ಕವಿತೆ ಹುಟ್ಟುವುದು ಕೂಡಾ ಅತೀವ ವಿಷಾದದ ನೆರಳಲ್ಲಿ, ದುಃಖದ ಪರಮಾವಧಿಯಲ್ಲಿ ಇಲ್ಲವೇ ಸಂತೋಷದ ಉತ್ತುಂಗದಲ್ಲಿ. ಅದು ವೈಯಕ್ತಿಕ ಸಂದರ್ಭವೇ ಆಗಿರಬಹುದು ಇಲ್ಲ ಸಾಮಾಜಿಕ ಸಾಂಸ್ಕೃತಿಕ ನೆಲೆಗಳಲ್ಲಿ ಉಂಟಾದ ವಿಪ್ಲವದ ಸಂದರ್ಭವೇ ಆಗಿರಬಹುದು. ಪ್ರಕೃತಿಯಲ್ಲಿ ಮೈ ಮರೆತಾಗ,ಅನ್ಯಾಯ ಕಂಡಾಗ, ಅಸಹಾಯಕತೆ ಉಂಟಾದಾಗ, ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ, ಕವಿತೆ ಹುಟ್ಟುತ್ತದೆ.

  • ಕವಿತೆಗಳ ವಸ್ತು, ವ್ಯಾಪ್ತಿ, ಹೆಚ್ಚಾಗಿ ಯಾವುದು? ಕವಿತೆ ಆ ಸಮಯದ ಫಲ. ಆದರೂ ಬಾಲ್ಯದ ನೆನಪುಗಳು ನನ್ನ ಬಹಳ ಕಾಡಿವೆ. ಸಮೃದ್ಧವಾದ ಜೀವನಾನುಭವ ಕೊಟ್ಟ ದಿನಗಳವು ಅವು. ಹಾಗಾಗಿ ಆ ನೆನಪುಗಳು ಮಧ್ಯ ವಯಸ್ಸಿನಲ್ಲಿ ನಿಂತು ನೋಡಿದಾಗ ಅಲ್ಲಿಗೂ ಇಲ್ಲಿಗೂ ಇರುವ ಅಗಾಧ ವ್ಯತ್ಯಾಸ, ದೃಷ್ಟಿಕೋನಗಳ ವೈರುಧ್ಯಗಳು ಅನುಭವಗಳು ಎಲ್ಲ ಭಿನ್ನ ವಿಭಿನ್ನವಾಗಿ ಕವಿತೆಗಳಲ್ಲಿ ಮೂಡಿದ್ದಿದೆ. ಹಾಗೇ ಸುತ್ತಲಿನ ಸಮಾಜದ ಓರೆಕೋರೆಗಳು ಅನ್ಯಾಯದ ನಡೆಗಳು, ಬಂಡಾಯವನ್ನು ಮನದಲ್ಲಿ ಮೂಡಿಸಿದಾಗ, ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆ ಸಂಗತಿಗಳು ಕವಿತೆಯ ವಸ್ತುವಾಗಿವೆ. ಸಮಕಾಲೀನ ಜೀವನದಲ್ಲಿ ದೌರ್ಜನ್ಯವನ್ನು, ನೋವನ್ನು ವ್ಯಕ್ತಪಡಿಸುವುದು ಮಹಿಳಾ ಕವಿತೆಗಳ ಗುರಿಯಾಗಿರದೇ ಸಮಾನ ಗುಣಮಟ್ಟದ ಕಾವ್ಯ ಕಟ್ಟುವ ದಿಶೆಯಲ್ಲಿ ನನ್ನ ಒಲವಿದೆ. ಪ್ರೀತಿಯ ಕವಿತೆಗಳು, ಪ್ರಕೃತಿಯ ಕುರಿತಾದ ಕವಿತೆಗಳು, ಸಾಮಾಜಿಕ ಅಸಮಾನತೆಯ ಕುರಿತಾಗಿ ಕೆಲವು ಕವಿತೆಗಳ ಬರೆದಿರುವೆ.

  • ಕವಿತೆಗಳಲ್ಲಿ ಬಾಲ್ಯ ಇಣುಕಿದೆಯಾ?

ಬಾಲ್ಯದ ನೆನೆಪುಗಳು, ಅದು ಎದೆಯೊಳಗೆ ಎಂದೂ ಮಾಸದ ನೆನೆಪುಗಳ ಮಾಲೆಯಾಗಿ ಇದ್ದದ್ದು, ಕಳೆದುಕೊಂಡ ಹೆತ್ತವರ ನೆನೆಪು, ಅವರುಂಡ ನೋವಿನ ದಿನಗಳ ನೆನಪು ನನ್ನ ಕವಿತೆಗಳಿಗೆ ವಸ್ತುವಾಗಿದೆ. ಆದರೆ ಬದುಕನ್ನು ಒಳಗೊಳ್ಳುವ ಸಾರ್ವಕಾಲಿಕ ಜೀವನ ಸತ್ಯಗಳ ಬಿಂಬಿಸುವ ಕವಿತೆಗಳ ಹುಟ್ಟಿಗೂ, ತುರ್ತು ಕಾಲಕ್ಕೆ, ಆ ಕ್ಷಣದ ತೀವ್ರತೆಗೆ ಹುಟ್ಟುವ ಕವಿತೆಗಳಿಗೂ ಒಂದು ಅವ್ಯಕ್ತ ಭಾವದ ತುಡಿತ ಇದ್ದೇ ಇರುತ್ತದೆ. ಹಾಗಾಗಿ ನನ್ನ ಕವಿತೆಗಳು ನಿರ್ದಿಷ್ಟ ಪ್ರಕಾರದಲ್ಲಿ ಗುರುತಿಸಿಕೊಳ್ಳುವಲ್ಲಿ ಸೋತಿವೆ ಎಂಬ ಬೇಸರವಿದೆ ನನಗೆ. ಆದರೂ ಬದುಕು ಎಲ್ಲ ಅನುಭವಗಳ ಮೂಲಕವೇ ಸಾಗುವುದರಿಂದ ಅನುಭವ ಜನ್ಯ ಅಭಿವ್ಯಕ್ತಿಯಾಗಿ ಕವಿತೆ ಹುಟ್ಟಿದೆ. ಆದರೆ ಅದು ಕೇವಲ ಅನುಭವವನ್ನು ಮಾತ್ರ ಕಡೆಯುವ ಕೋಲಲ್ಲ. ಅದರೊಳಗೆ ನಿಗೂಢತೆಗೆ ತೆರೆದುಕೊಳ್ಳಬೇಕು. ವಸ್ತು, ಅರ್ಥವನ್ನು ದಾಟಿ ಅಗಮ್ಯದೆಡೆಗೆ ಸಾಗಬೇಕು. ಅಂತಹ ಕೆಲವೇ ಕೆಲವು ಕ್ಷಣಗಳ ನಾನು ಅನುಭವಿಸಿದ್ದೇನೆ. ಮತ್ತು ಏಲಿಯಟ್ ಹೇಳುವ “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ಈ ಮಾತನ್ನು ನಾನು ಬಹಳವಾಗಿ ಒಪ್ಪುವೆ. ಎಲ್ಲ ಕವಿತೆಗಳ ವಸ್ತುವು ನನ್ನ ಅನುಭವವೇ ಆಗಬೇಕೆಂದಿಲ್ಲ.

  • ಪ್ರಸ್ತುತ ರಾಜಕಾರಣದ ಬಗ್ಗೆ ?

ನೋಡಿ ರಾಜಕಾರಣ ಪದಕ್ಕೆ ಎಷ್ಟು ಅನರ್ಥ ಬಂದಿದೆ, ಅದು ಅಪಭ್ರಂéಶಕ್ಕೆ ಒಳಗಾಗಿದೆ. ಇವತ್ತು ಸಾಮಾನ್ಯ ಭಾಷೆಯಲ್ಲಿ ಅವನು ಬಹಳ ರಾಜಕಾರಣ ಮಾಡುತ್ತಾನೆ ಎಂದು ಯಾರಾದರೂ ಹೇಳಿದರೆ ಅವನೇನೋ ಕುತಂತ್ರ ಮಾಡುತ್ತಿದ್ದಾನೆ ಎಂದು ಅರ್ಥೈಸಿಕೊಳ್ಳಲಾಗುತ್ತದೆ.. ಹಾಗಾಗಿ ನನಗೆ ರಾಜಕೀಯ ಅದರ ದೊಂಬರಾಟಗಳ ಬಗ್ಗೆ ತೀವ್ರ ನಿರಾಸಕ್ತಿ, ಅಷ್ಟೇ ಅಲ್ಲ ಜಿಗುಪ್ಸೆ ಕೂಡಾ. ದೇಶದ ಒಳಿತನ್ನು ಉದ್ಧಾರವನ್ನು ಮೂಲಧ್ಯೇಯವಾಗಿಸಿಕೊಂಡ ರಾಜಕೀಯ ನಾಯಕರು ಇಂದು ವಿರಳಾತೀವಿರಳ. ಭಾರತದಲ್ಲಿ ಸ್ವಜನ ಹಿತಾಸಕ್ತಿಯೇ ನಾಯಕರ ಮುಖ್ಯ ಧ್ಯೇಯ. ಅದೂ ಪಕ್ಷಾತೀತವಾದ ಪರಂಪರೆಯಾಗಿ ನಮ್ಮಲ್ಲಿದೆ. ಕೊಳೆತು ನಾರುತ್ತಿರುವ ರಾಜಕಾರಣದ ಬಗ್ಗೆ ಕವಿತೆ ಕಟ್ಟಿ ಅದನ್ನು ವಿಡಂಬಿಸುವ ಕವಿತೆಗಳು ಪುಂಖಾನುಪುಂಖವಾಗಿ ಬರುತ್ತಿವೆ. ಆದರೂ ಪದಗಳು ಸೋತಿವೆ. ಹಾಗಿದ್ದೂ ಅಂತಹ ಕವಿತೆಗಳು ತುತರ್ುಕಾಲದ ಕವಿತೆಗಳಾಗಿ ನಾನೂ ಬರೆದಿದ್ದಿದೆ,

  • ಧರ್ಮ ದೇವರು ವಿಚಾರದಲ್ಲಿ ನಿಲುವು ?

ವಿಗ್ರಹ ಆರಾಧನೆ, ನಂಬಿಕೆ, ನಾಮಸ್ಮರಣೆ, ಭಯ ಇವು ಯಾವುದೂ ಇಲ್ಲದಂತೆ ಮನಸ್ಸು ಸ್ವಚ್ಛವಾಗಿದ್ದಾಗ ಕಾಲಾತೀತವಾದ, ಶಾಶ್ವತವಾದ ದೇವರೆಂದು ಕರೆಯಬಹುದಾದ ಸತ್ಯ ಕಾಣಿಸುತ್ತದೆ. ಇದನ್ನು ಕಾಣಲು ಅಪಾರವಾದ ಒಳನೋಟ, ತಿಳುವಳಿಕೆ, ತಾಳ್ಮೆ ಬೇಕು. ಧರ್ಮವೆಂದರೆ ಏನು ಎಂದು ಅನ್ವೇಷಿಸುವವರು ದಿನದಿನವೂ ಅನ್ವೇಷಿಸುತ್ತಲೇ ಇರುವವರು ಮಾತ್ರ ನಿಜದ ಧರ್ಮ ಅರಿಯಬಲ್ಲರು ಎಂದು ಜಿಡ್ಡು ಕೃಷ್ಣಮೂರ್ತಿ ಹೇಳುತ್ತಾರೆ. ಆದರೆ ಅಂತಹ ಒಳನೋಟ ಇನ್ನು ಪಡೆಯದ ನಾನು ಆಸ್ತಿಕ ಮನಸ್ಥಿತಿಯಲ್ಲಿ ಸಂಸ್ಕೃತಿಯ ನೆರಳಲ್ಲಿ ಇದ್ದು, ಸಾರ್ಥಕ ಬದುಕಿಗೆ ಬೇಕಾದ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವಂತಹ ಆಚರಣೆಗಳಲ್ಲಿ ಒಲವಳ್ಳವಳು. ಅಲ್ಲದೇ ನಮ್ಮದೇ ಆದ ಒಂದು ಸಂಸ್ಕೃತಿಯ ಉಳಿವು ಬೇಕೆನ್ನುವ ನಿಟ್ಟಿನಲ್ಲಿ ಪರಂಪರೆಯನ್ನು ಬೆಳೆಸಿಕೊಂಡು ಹೋಗುವುದು ಉತ್ತಮ. ನಕಾರಾತ್ಮಕ ಧೋರಣೆ ವೈಚಾರಿಕತೆ ಆಗುವುದಿಲ್ಲ. ಆದರೆ ಮೌಢ್ಯದಿಂದ ಕೂಡಿದ ಸಂಪ್ರದಾಯಗಳಿಗೆ ನನ್ನ ವಿರೋಧವಿದೆ. ಇಂತಹುಗಳೆಲ್ಲ ಹೆಚ್ಚಾಗಿ ರೂಢಿಗತವಾಗಿ ಬಂದ ಸಂಪ್ರದಾಯಗಳು. ಪರಂಪರೆಗೂ ಸಂಪ್ರದಾಯಕ್ಕೂ ವ್ಯತ್ಯಾಸಗಳು ಬಹಳ ಇವೆ.

  • ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ?

ನಮ್ಮಲ್ಲಿ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಇದೆ. ನಮ್ಮದೇ ಆದ ಜೀವನ ವಿಧಾನವಿದೆ. ಆದರೂ ಇನ್ನೊಂದು ಬಗೆಯಲ್ಲಿ ಪ್ರಕ್ಷುಬ್ಧ ಸಾಂಸ್ಕೃತಿಕ ವಾತಾವರಣವನ್ನು ಅನುಭವಿಸುತ್ತಿದ್ದೇವೆ. ಆದರೂ ವಿವಿಧತೆ ಇದ್ದಲ್ಲಿ ಸಹಜವಾದ ಭಿನ್ನತೆ ಇದು. ಏಕಮುಖ ಸಂಚಲನೆಯನ್ನು ಕಂಡುಕೊಳ್ಳಲಾಗದ, ಭಿನ್ನತೆಯಲ್ಲಿಯೇ ಏಕತೆಯನ್ನು ಹೊಂದಬೇಕಾದ ರೀತಿಯನ್ನ ಪ್ರತಿಪಾದಿಸುವತ್ತ ನಾವೆಲ್ಲ ಮನಸ್ಸು ಮಾಡಬೇಕಾಗಿದೆ.

  • ಸಾಹಿತ್ಯ ವಲಯದ ರಾಜಕಾರಣ ಹೇಗಿದೆ?

ಇತ್ತೀಚೆಗೆ ಸಾಹಿತ್ಯ ವಲಯದ ರಾಜಕಾರಣ ರಾಜಕೀಯದ ರಾಜಕಾರಣಕ್ಕಿಂತ ತೀರಾ ಕೆಳಮಟ್ಟದ್ದು ಮತ್ತು ಅಪಾಯಕಾರಿ ನಿಲುವಿನದು. ಸಮಾನತೆ ಸಹಬಾಳ್ವೆಯ ಸ್ವಸ್ಥ ಸಮಾಜ ನಿಮರ್ಾಣ ಮಾಡಬೇಕಾದ ಜವಾಬ್ದಾರಿ ಮರೆತು ಪಂಥಗಳಲ್ಲಿ ಮೈಮರೆತು, ಪರಸ್ಪರ ಕೆರಚಾಟ, ಕೆಸರಾಟದಲ್ಲಿ ತೊಡಗಿದಂತಿದೆ. ಜಾತಿ ಪಂಥಗಳ ಮೇಲಾಟ ಇಲ್ಲೂ ಢಾಳಾಗಿ ಕಾಣುತ್ತಿದೆ.

  • ದೇಶದ ಚಲನೆಯ ಬಗ್ಗೆ ಏನನಿಸುತ್ತದೆ…?

ಈ ದೇಶ ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಆದರೆ ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ಸದೃಢ ಸಮಾಜವನ್ನು, ಪ್ರಜಾಪ್ರಭುತ್ವದ ಬುನಾದಿ ಮೇಲೆ ನಿಂತ ಆಡಳಿತ ವ್ಯವಸ್ಥೆಯನ್ನು ಪೋಷಿಸುವ ಅಗತ್ಯವಿದೆ.

  • ನೆಚ್ಚಿನ ಕವಿಗಳು ಕನ್ನಡ ಮತ್ತು ಇಂಗ್ಲೀಷನಲ್ಲಿ?

ನನ್ನ ಇಷ್ಟದ ಕವಿ ಕುವೆಂಪು, ನವೋದಯದ ಕಾಲದಲ್ಲೂ ಬಂಡಾಯದ ದನಿ, ಹಾಗೇ ಕವಿ ಸುಬ್ರಾಯ ಚೊಕ್ಕಾಡಿಯವರು, ಮಹಿಳಾ ಕವಯತ್ರಿಯರಲ್ಲಿ ಮಾಲತಿ ಪಟ್ಟಣಶೆಟ್ಟಿ, ವೈದೇಹಿ, ಲಲಿತಾ ಸಿದ್ದಬಸವಯ್ಯ ಇವರೆಲ್ಲರ ಕವಿತೆಗಳು ಇಷ್ಟ.
ಇಂಗ್ಲೀಷ ಸಾಹಿತ್ಯದಲ್ಲಿ ನನ್ನ ಮೆಚ್ಚಿನ ಕವಯತ್ರಿ ಎಮಿಲಿ ಡಿಕನ್ಸನ್- ಬದುಕಿನುದ್ದಕ್ಕೂ ಮುಂಚೂಣಿಗೆ ಬರೆದೇ ಎಲೆಮರೆಯ ಕಾಯಾಗಿಯೇ ಕಾವ್ಯ ಕಟ್ಟಿದ ಆಕೆ ಸತ್ತ ನಂತರ ಇಂದಿನ ಬಹುತೇಕ ಯುವ ಮನಸ್ಸುಗಳ ಮನಸ್ಸನ್ನು ಸೆರೆಹಿಡಿದದ್ದು. ಸಾವನ್ನು ಸಂಭ್ರಮಿಸಿದವಳು ಆಕೆ. ಹಾಗೇ ಜಾನ್ ಕೀಟ್ಸ್, ಡಿ ಎಚ್ ಲಾರೆನ್ಸ್ ಮತ್ತು ಡಬ್ಲೂ ಬಿ ಯೇಟ್ಸ್ ಕೂಡಾ ನೆಚ್ಚಿನ ಕವಿಗಳು

  • ಸಾಹಿತ್ಯದ ಬಗ್ಗೆ ಕನಸುಗಳೇನು?

ಸಾಹಿತ್ಯ ಬದುಕಿನ ಹಾದಿಗೆ ಒಂದಿಷ್ಟು ಬಲವನ್ನು ನೀಡುವಂತದ್ದು, ಶೋಷಿತ ವರ್ಗದ ದನಿ ಹಾಗೂ ಮಹಿಳಾ ದನಿ ಸಾಹಿತ್ಯದಲ್ಲಿ ಗಟ್ಟಿಯಾಗಲಿ, ಅದಕ್ಕೆ ತಕ್ಕ ಬೆಂಬಲ ಸಿಗಲಿ. ಇನ್ನು ನನ್ನ ಮಟ್ಟಿಗೆ ಅಂತರಂಗದ ತುಮುಲಗಳ ಇಡಿಯಾಗಿ ತೆರೆದುಕೊಳ್ಳಲು, ನಿಸೂರಾಗಲು ಇರುವ ಸಾಧನವಾಗಿ, ಸ್ನೇಹಿತೆಯಾಗಿ, ಕವಿತೆ ಕೈಹಿಡಿದಿದೆ. ಬರೆದದ್ದೆಲ್ಲ ಬೆಲ್ಲವೇ ಆಗಿಲ್ಲ. ಆದರೆ ಬದುಕನ್ನು ವಿಕಸನಗೊಳಿಸಿದೆ. ಜೀವನವನ್ನು ಸಂಭ್ರಮಿಸಲು ಕಲಿಸಿದೆ. ನೋವಿಗೆ ಮುಲಾಮಾಗಿದೆ. ಕನಸಿಗೆ ತೈಲವನ್ನೆರೆದಿದೆ. ರಾಗದ್ವೇಷಗಳಿಗೆ ಶಾಯಿಯಾಗಿದೆ.ಕವಿತೆಯಲ್ಲಿ ನನಗೆ ವಿಶ್ವಾಸವಿದೆ.

  • ಈಚೆಗೆ ಓದಿದ ಕೃತಿಗಳ ಬಗ್ಗೆ ಹೇಳಿ

ಎಚ್ ಎಸ್ ರಾಘವೇಂದ್ರರಾವ್ ಅನುವಾದಿಸಿರುವ ಜಿಡ್ಡು ಕೃಷ್ಣಮೂರ್ತಿಯ ಸಂಸ್ಕೃತಿ ಸಂಗತಿ. ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಕನ್ನಡಕ್ಕೆ ಅನುವಾದಿಸಿರುವ ಮರಾಠಿ ಸಾಹಿತಿ ವಿ.ಸ ಖಾಂಡೇಕರರ ಆತ್ಮಕಥನ ಒಂದು ಪುಟದ ಕಥೆ ಹಾಗೂ ಪ್ರತಿಭಾ ನಂದಕುಮಾರರ ಅನುದಿನದ ಅಂತರಗಂಗೆ ಇದಿಷ್ಟು ಇತ್ತೀಚೆಗೆ ಓದಿದ ಕೃತಿಗಳು.

  • ನಿಮಗೆ ಇಷ್ಟದ ಕೆಲಸ

  • ಓದು ಬರಹದ ಜೊತೆಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವುದು, ಬಾಲ್ಯದಲ್ಲಿ ತೋಟ ಗದ್ದೆ ಹಳ್ಳ ಕೊಳ್ಳ ಇಲ್ಲಿಯೇ ನನ್ನ ಬದುಕಿನ ಕನಸುಗಳು ಚಿಗುರಿದ್ದು. ಹಾಗೇ ಅಡುಗೆ ಮಾಡುವುದು, ಮನೆಯನ್ನು ಒಪ್ಪ ಓರಣಗೊಳಿಸುವುದು.

  • ನಿಮ್ಮ ಇಷ್ಟದ ಸಿನೇಮಾ ?

ಇದೇ ಅಂತ ಹೇಗೆ ಹೇಳಲಿ. ಕುಬಿ ಮತ್ತು ಇಯಾಲ್, ಸರಕಾರಿ ಪ್ರಾಥಮಿಕ ಶಾಲೆ ಕಾಸರಗೋಡು, ಹೀಗೇ ಸುಮಾರು ಇವೆ.

  • ಮರೆಯಲಾಗದ ಘಟನೆ

ಮೊದಲ ಬಾರಿ ಊರು ಬಿಟ್ಟು ನೌಕರಿಗೆ ಹೋದಾಗ ಹೊಸ ಸ್ಥಳದಲ್ಲಿ ಕಂಡ ಕಸದ ತೊಟ್ಟಿಯಲ್ಲಿ ಎಸೆದ ನವಜಾತ ಹೆಣ್ಣು ಶಿಶುವನ್ನು ನೋಡಿದ್ದು, ಸುತ್ತಮುತ್ತ ಹತ್ತಾರು ದೌರ್ಜನ್ಯಗಳ ಕಂಡಿದ್ದಿದೆ. ಹೆತ್ತವರ ಸಾವನ್ನು ನೋಡಿದ್ದಿದೆ. ಸಂಬಂಧಿಗಳ ಅಕಾಲ ಮರಣ ನೆನಪಾದರೆ ನೋವು ಮಡುಗಟ್ಟುತ್ತದೆ ಇವೆಲ್ಲ ಸದಾ ನೆನಪಿನಲ್ಲಿ ಉಳಿಯುವಂತಹವು.

*******************************************

*********************************************

ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

One thought on “ಮುಖಾಮುಖಿ

  1. ನಾಗರೇಖಾ ಬಹಳ ಉತ್ತಮವಾಗಿ ಸಂದರ್ಶನವನ್ನು ಎದುರಿಸಿದ್ದೀರಿ. ನಿಮ್ಮ ಉತ್ತರಗಳ ಪ್ರಮಾಣಿಕತೆ ನನಗೆ ಬಹಳ ಹಿಡಿಸಿತು.

Leave a Reply

Back To Top