ಮುನಿಸೇತಕೆ ಈ ಬಗೆ
ಸ್ಮಿತಾ ರಾಘವೇಂದ್ರ
ಮಳೆ ಇಲ್ಲದೇ ಬದುಕು ಸಾಗುತ್ತದಾ ಜೀವ ಉಳಿಯುತ್ತದಾ, ಬೆಳೆ ಬೆಳೆಯುತ್ತದಾ?
ಇವೆಲ್ಲ ಕಾಲ ಕಾಲಕ್ಕೆ ತಕ್ಕಂತೆ ಆಗುತ್ತಿದ್ದರೇ ಚಂದ.
ಕೋಪ ಯಾಕೆ ಬರುತ್ತದೆ ಹೇಳು ತಪ್ಪು ಮಾಡಿದಾಗ ತಾನೇ.
ಪ್ರಕೃತಿ ಕೋಪಿಸಿಕೊಳ್ಳಲೂ ಸಕಾರಣವಿರುತ್ತದೆ.
ನೀರು, ವಾಯು,ಅಗ್ನಿ,
ಶಿವನ ಮೂರು ಕಣ್ಣುಗಳು.
ಎಲ್ಲಿ ಯಾವುದು ಬೇಕು ಹೇಗೆ ತರೆದು ಕೊಳ್ಳಬೇಕು ಎಂಬುದು ಆ ಶಿವನೇ ನಿರ್ಧರಿಸುತ್ತಾನೆ.
ಪ್ರಕೃತಿ ಮಾತೆ ಎಷ್ಟೊಂದು ನೋವಿಗೆ ಒಳಗಾಗಿದ್ದಾಳೆ. ಕ್ರೂರ ಕೈಗಳ ನಡುವೆ ನುಲುಗಿ ಹೋಗಿದ್ದಾಳೆ. ಕಿತ್ತು ತಿನ್ನುವ ದುರುಳರು ಇಂಚಿಚೂ ಬಿಡೆದೇ ಕಬಳಿಸಿ ಬಿಟ್ಟಿದ್ದಾರೆ.
ನಮ್ಮದಲ್ಲದ ಭೂಮಿಯಲ್ಲಿ ನಮ್ಮದೇ ಮಹಲು ಕಟ್ಟಿ ಬೀಗುವಾಗ, ಸಾಕು ಸಹನೆ ಎಂದು ಸ್ವಲ್ಪವೇ ಸ್ವಲ್ಪ ಕೊಸರಾಡುತ್ತಾಳೆ ಭೂಮಿ ತಾಯಿ ಅಷ್ಟೇ..
ಪ್ರಕೃತಿ ಮಾತೆಗೆ ನಿನ್ನ ಸಮತೋಲನವನ್ನು ನೀನೇ ಕಾಪಾಡಿಕೋ ಎಂದು ಆ ಶಿವ ಸೃಷ್ಟಿಯ ಆರಂಭದಲ್ಲೇ ಹೇಳಿಬಿಟ್ಟಿದ್ದಾನೆ,
ಹೆಣ್ಣಿಗೂ ಅಷ್ಟೇ…
ನಿನ್ನಿಂದಲೂ ಅಗದೇ ಹೋದಾಗ ನಾನು ನಿನ್ನ ಸಹಾಯಕನಾಗಿ ಬರುತ್ತೇನೆ ಯಾವುದಾದರೂ ರೂಪದಲ್ಲಿ ಎಂದಿದ್ದಾನೆ.
ಇವೆಲ್ಲ ದೈವ ಸೃಷ್ಟಿಯ ಗುಟ್ಟು.
ಎಂದು ತಾತ ತನ್ನ ಪುಟ್ಟ ಮೊಮ್ಮಗಳನ್ನು ಎದುರು ಕುಳ್ಳಿರಿಸಿಕೊಂಡು ಪಾಠದಂತೆ ಹೇಳುತ್ತಿದ್ದರು.
ಅವಳಿಗೆ ಎಷ್ಟು ಅರ್ಥವಾಯಿತೋ ಬಿಟ್ಟಿತೋ,
ತನ್ನ ಪುಟಾಣಿ ತಲೆಯಲ್ಲಿ ಕಟ್ಟಿದ ಎರಡು ಚೋಟು ಜಡೆಗಳನ್ನು ಅಲ್ಲಾಡಿಸುತ್ತಾ ಹೌದಾ ತಾತಾ,,,ಮಳೆ ನನ್ನ ಪ್ರೀತಿಯ ಗೆಳತಿ
ಎನ್ನುತ್ತ ಛಂಗನೇ ಜಿಗಿದು ತನ್ನ ಆಟದ ಮೈದಾನದತ್ತ ಸಾಗಿಯೇ ಬಿಟ್ಟಳು.
ಆಗಷ್ಟೇ ದೊಡ್ಡ ಪ್ರವಾಹ ವೊಂದರಲಿ ಮಿಂದೆದ್ದ ನನಗೆ ಅವರ ಮಾತು ಬಹಳವೇ ಕಾಡ ತೊಡಗಿತು.
ಎಷ್ಟು ಚಂದಗೆ ಹಾಸಿಕೊಂಡ ಹಚ್ಚ ಹಸಿರಿನ ಊರು ಮೈದುಂಬಿ ನಿಂತ ಇಳೆಯೊಡಲ ಬೆಳೆಗಳು.
ಪ್ರಕೃತಿಯೇ ದೇವರೆಂದು ಪೂಜಿಸುವ ಮುಗ್ಧ ಜನರು.
ಭೂಮಿ ತಾಯಿಯ ಸೇವೆಯಲ್ಲಿ ಸದಾ ಸನ್ನದ್ದರು.
ಆಧುನಿಕ ಬದುಕಿನ ಗೊಡವೆಯೇ ಬೇಡವೆಂದು ತಮ್ಮದೇ ಗೂಡಿನ ಬೆಚ್ಚಗಿನ ಭಾವದಲಿ ಜೀವಿಸುತ್ತ ಕಾಯಕವೇ ಕೈಲಾಸವೆಂದವರು.
ಆ ಒಂದು ದಿನ ಬಾರದೇ ಹೋಗಿದ್ದರೆ,? ಇಂದು ಆ ಕೈಗಳಿಂದ ಸಾವಿರಾರು ಜನರ ತಟ್ಟೆ ತುಂಬುತಿತ್ತಲ್ಲ, ಯಾರದ್ದು ವಿಕೃತಿ ಯಾರದ್ದು ಸಂಸ್ಕೃತಿ ,ಯಾವುದು ಪಾಪ ಯಾವುದು ಪುಣ್ಯ.
ಆದಿನಗಳು ನನ್ನ ಮನದೊಳಗೆ ಮೆಲ್ಲನೇ ಚಲಿಸ ತೊಡಗಿದವು.
ದಿನದಿನಕ್ಕೂ ಧಾರಾಕಾರವಾಗಿ ಸುರಿದ ಮಳೆ ಜನ ಜೀವನವನ್ನು ಅಸ್ತವ್ಯಸ್ತ ಗೊಳಿಸುವಲ್ಲಿ ದಾಪುಗಾಲಿಡುತ್ತ ಸಾಗಿತ್ತು. ಊರು ಅಕ್ಷರಶಃ ಜಲಸಮಾಧಿ ಸ್ಥಿತಿಯಲ್ಲಿ ಇತ್ತು.
ಯಾವಾಗ ಏನು ಸಂಭವಿಸಬಹುದು ಎಂಬ ಭಯ, ಜೀವ ಉಳಿಸಿಕೊಳ್ಳುವ ಬಗೆ ಹೇಗೆಂಬುದೇ ಯೋಚನೆ.
ಸಹಾಯ ಹಸ್ತ ಎಲ್ಲರಿಗೂ ಬೇಕು.
ಕೈ ಚಾಚುವವರು ಯಾರು!?
ಎಲ್ಲೆಲ್ಲಿಂದಲೋ ಚಾಚಿದ ಕೈಗಳು ಕೈ ಕೈ ಸೇರಿ ಒಂದು ಸಂಕವಾಗಿ ಮಾನವೀಯತೆ ಮೆರೆಯುತ್ತಿದ್ದರೆ.
ಜನ ಮಾನಸದಲ್ಲಿ ಕಲ್ಪಿಸದ ಪ್ರವಾಹವೊಂದು ಅಗಾಧ ಗುರುತು ಉಳಿಸಿ ನಡೆದೇ ಬಿಟ್ಟಿತ್ತು .
ರಾತ್ರಿ ಬೆಳಗಾಗುವದರೊಳಗೆ ತನ್ನ ಕದಂಬಬಾಹುವನ್ನು ಚಾಚಿ ತನ್ನ ಕಾರ್ಯವ್ಯಾಪ್ತಿಯ ಪ್ರದೇಶಗಳನ್ನು ಪ್ರತೀ ನದಿಗಳೂ ತೋರಿಸಿದ್ದು ನಿಜ.
ಆವತ್ತು ಬೆಳಕು ಹರಿಯುವ ಹೊತ್ತಿಗೆ ಬದುಕು ಮೂರಾಬಟ್ಟೆಯಾಗಿದ್ದೂ ನಿಜ.
ಹರಗಿಕೊಂಡ ಬೆಳೆಗಳು ಪೇರಿಸಿಟ್ಟ ಬದುಕಿನ ಉಳಿಕೆಗಳು,ಕ್ಷಣ ಮಾತ್ರದಲ್ಲಿ ಪಳೆಯುಳಿಕೆಗಳಾಗಿದ್ದವು.
ಅಲ್ಲೆಲ್ಲೋ ಸಿಕ್ಕಿ ಕೊಂಡ ನಾಯಿ ಮರಿಯೊಂದು ತನ್ನ ಒಡೆಯನಿಗಾಗಿ ಆಕ್ರಂದಿಸುತ್ತಲೇ ಇತ್ತು. ಯಾವುದೋ ಮರವೇರಿ ಕುಳಿತ ಬೆಕ್ಕು ಕಕ್ಕಾಬಿಕ್ಕಿಯಾಗಿತ್ತು.
ಹಾಲನಿತ್ತು ಸಲಹಿದ ಹಸುಗಳಿಗೆ ಹಾಲಾಹಲವನೇ ಇತ್ತ ನೋವು.
ಏನು ಅಂತ ಬಾಚಿ ಕೊಳ್ಳುವದು.
ಇಷ್ಟು ದಿನದ ಬದುಕಿಗೆ ಜೊತೆಯಾದ ಒಂದೇ ಒಂದು ವಸ್ತುವನ್ನೂ ನಾನು ಬಿಟ್ಟು ಬರಲಾರೆ ಎಂದು ಎಪ್ಪತ್ತರ ಹರೆಯದ ವ್ಯಕ್ತಿಯೊಬ್ಬ ಮನೆಯ ಬಿಟ್ಟು ಕದಲದೇ ಕುಳಿತು ಕೊಂಡಿದ್ದನೆಂದರೆ ಅವನೊಳಗಿನ ವೇದನೆ ಊಹಿಸಲಾಗಲಿ ಧಾಖಲಿಸಲಾಗಲೀ ಆದೀತೆ?
ಪುಟ್ಟ ಮಗುವೊಂದು ತನ್ನ ಆಟಿಕೆಯನ್ನು ತನ್ನ ಮನೆಯಿರುವ ಜಾಗಕ್ಕೆ ಹೋಗಿ ಮಣ್ಣಿನಲ್ಲಿ ಕೆದರಿ ಕೆದರಿ ಹುಡುಕುತ್ತಿತ್ತು.
ಶಾಲೆಯ ಅಳಿಸಿಹೋದ ಅಕ್ಷರಗಳ ಪುಸ್ತಕ ಎತ್ತಿಕೊಂಡ ಎಳೆಯ ಮುಖದೊಳಗೆ ಬದುಕೇ ಅಳಿಸಿ ಹೋದ ವೇದನೆ.
ಯುದ್ದ ಮುಗಿದ ಸ್ಮಶಾನ ಮೌನ.
ನದಿ ಹೊತ್ತುತಂದ ರಾಶಿ ರಾಶಿ ಕಸಗಳು, ಸೇಡು ತೀರಿಸಿಕೊಳ್ಳಲು, ಮುರಿ ತೀರಿಸಲು ಮನೆ ಬಾಗಿಲಿಗೇ ಬಂದು ಸುಂಕ ಕೇಳಿ ಹೋದಂತೆ ಭಾಸವಾಗುತ್ತಿತ್ತು.
ಅದೊಂದು ದಟ್ಟವಾದ ಕಾಡು ಯಾವ ರಸ್ತೆಯೂ ಇಲ್ಲದ ನಡೆದು ನಡೆದೇ ಸವೆದ ಕಾಲುದಾರಿ.ಪ್ರಮುಖ ರಸ್ತೆಯಿಂದ ಸುಮಾರು ನಾಲ್ಕೈದು ಕಿಲೋಮೀಟರ್ ಚಲಿಸಿದ ನಂತರ ಮೂರು ನಾಲ್ಕು ಗುಡಿಸಲು ಅವರು ಆದುನಿಕ ಪ್ರಪಂಚದಿಂದ ಬಹಳ ದೂರ.
ಕಾಡೇ ಅವರ ಜೀವನಾಧಾರ ಕಾಡೇ ಭಕ್ತಿ,ಕಾಡೇ ಪ್ರೀತಿ,ಭೂತಾಯಿಗಾಗಲೀ ಪ್ರಕೃತಿ ಮಾತೆಗಾಗಲೀ ನೋವು ಮಾಡುವದು ಅಂದರೆ ಅವರಿಗೆ ಗೊತ್ತೇ ಇಲ್ಲ,ಭೂತಾಯಿಯನ್ನು ದೇವರಂತೆ ಮಕ್ಕಳಂತೆ ಸಲಹುವ ನಿರ್ಮೋಹ ಮನಸಿನವರು.
ಪಕ್ಕದಲ್ಲೇ ಹರಿಯುವ ತೊರೆ ಇತ್ತು.
ಇದ್ದಕ್ಕಿದ್ದಂತೆ ಬಂದ ಮಳೆಯ ಆರ್ಭಟ ಪ್ರವಾಹದಿಂದ ಎಲ್ಲ ಮನೆಗಳೂ ಜಲಸಮಾಧಿ ಯಾಗತೊಡಗಿತ್ತು. ಜೀವ ಉಳುಸಿಕೊಳ್ಳಲು ಎಲ್ಲೆಲ್ಲಿಯೋ ಬೆಟ್ಟ ಗುಡ್ಡಗಳನ್ನು ಅಲೆದು ಒಂದೆರಡು ದಿನಗಳ ನಂತರ ಒಂದು ಆಶ್ರಯಕೇಂದ್ರಕ್ಕೆ ಬಂದು ಸೇರಿಕೊಂಡರು.
ಅದರಲ್ಲೊಂದು ಕುಟುಂಬ.
ಮೂರು ಮಕ್ಕಳು, ತಂದೆ,ತಾಯಿ.
ಸುಮಾರು ತಿಂಗಳಿಗೂ ಹೆಚ್ಚುಕಾಲ ಆಶ್ರಯ ಕೇಂದ್ರದಲ್ಲೇ ಇರಬೇಕಾಗಿ ಬಂತು.
ಒಂದೇ ಸಮನೆ ಸುರಿವ ಮಳೆ ಯಾರ ಕಣ್ಣೀರಿಗೂ ನಿಲ್ಲಲೇ ಇಲ್ಲ.
ಕಣ್ಣೀರು ಸುರಿಸುತ್ತ, ಪ್ರವಾಹ ತಗ್ಗಿದ ಮೇಲೆ ಮನೆಯ ಅವಶೇಷಗಳತ್ತ ಸಾಗಿದ ಆ ಮೂರು ಮಕ್ಕಳ ಅಸಹಾಯಕ ತಂದೆ.
ತನ್ನ ಧರ್ಪ ನಿನ್ನ ಮೇಲಿನ ಪ್ರಹಾರ ಇನ್ನೂ ಮುಗಿದಿಲ್ಲವೆಂದು,ಯುದ್ಧ ಭೂಮಿಯಲ್ಲಿ ಸೋತು ಶರಣಾಗಿ ಶಸ್ತ್ರಾಸ್ತ್ರ ತ್ಯಜಿಸಿದ ಮೇಲೂ ಹಿಂದಿನಿಂದ ಬಂದು ಆಕ್ರಮಣ ಮಾಡಿದ ದ್ರುಷ್ಟದ್ಯುಮ್ನ ನಂತೆ, ಮನೆಯ ಉಳಿದ ಅರ್ಧ ಗೋಡೆ ಅವನ ಮೈ ಮೇಲೆ ದೊಪ್ಪನೇ ಬಿತ್ತು. ಅಷ್ಟೇ ಮತ್ತೆ ಅವನು ಕಣ್ಣೀರು ಹಾಕಲೇ ಇಲ್ಲ.
ಆ ಮಕ್ಕಳು ತಮ್ಮ ಅಪ್ಪನ ಹೊರಗೆ ತನ್ನಿ ಬದುಕಿಸಿ ಕೊಡಿ ಎಂದು ಕಂಡ ಕಂಡವರ ಹತ್ತಿರ ಮೌನ ಭಾಷೆಯಲ್ಲಿ
ಅಂಗಲಾಚುತ್ತಿದ್ದರು.
ಆಗಲೇ ಗೊತ್ತಾಗಿದ್ದು ಆ ಮಕ್ಕಳಿಗೆ ಮಾತು ಬಾರದು ಎಂದು. ಈ ದೃಷ್ಯವನ್ನು ನೋಡಲಾಗದೇ ನಾನು ಅಲ್ಲಿಂದ ಹೊರಟೇ ಹೋದೆ.
ಒಂದಿನ ಪೇಪರ್ ನಲ್ಲಿ ಸುದ್ದಿ ಪ್ರಕಟವಾಗಿತ್ತು ಆಶ್ರಯ ಕೇಂದ್ರದಲ್ಲಿ ವಾಸವಾಗಿದ್ದ ಮಾತು ಬಾರದ ಮಕ್ಕಳ ತಾಯಿ ಕಾಯಿಲೆಗೆ ತುತ್ತಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೇ ಸಾವನ್ನಪ್ಪಿದಳು ಎಂದು .ತಕ್ಷಣ ಆ ಊರಿನ ನನ್ನ ಪರಿಚಯದವರಿಗೆ ಪೋನಾಯಿಸಿ ಕೇಳಿದೆ . ಹೌದು ತಂದೆ ಕಳೆದು ಕೊಂಡ ಅದೇ ಕುಟುಂಬ.
ಮಕ್ಕಳು!?? ಎಂದೆ.
ಮಿಡಿಯಾದವರು ಊರ ಜನ ಎಲ್ಲ ಬಹಳ ಮಂದಿ ಬಂದಿದ್ರು,ಯಾರೋ ಕರ್ಕೊಂಡು ಹೋದರು.
ಮಕ್ಕಳನ್ನು ನಾವು ನೋಡಿಕೊಳ್ತೀವಿ ಅಂತ ಅಂದರು.
ಏನು ಮಾಡ್ತಾರೋ ಗೊತ್ತಿಲ್ಲ ಪಾಪ,, ಅವನ ಮಾತಲ್ಲಿ ದುಗುಡವಿತ್ತು.ಮಾತು ಒಬ್ಬರಿಗೂ ಬರಲ್ಲ ಮೆಡಮ್ ಅನ್ನುತ್ತಿದ್ದರೆ,
ಭಾರವಾದ ಮನಸಿಂದ ಪೋನ್ ಇಟ್ಟೆ,
ಯಾರ ಪಾಪಕ್ಕೆ ಯಾರಿಗೆ ಶಿಕ್ಷೆ.
ನೇರವಾಗಿ ತಪ್ಪಿತಸ್ತನಿಗೇ ಶಿಕ್ಷೆ ಕೊಡುವ, ಅಧರ್ಮ ಸಂಭವಿಸುವಲ್ಲೇ ಧರ್ಮ ಎತ್ತಿಹಿಡಿಯುವ ಕೆಲಸ ಆ ದೇವರು ಎಂದು ಮಾಡುತ್ತಾನೋ.
ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ ನೀಡುವುದು ದೇವರ ಕಟಕಟೆಯಲ್ಲೂ ಮುಗಿದು ಹೋಗಲಿ.
ಮತ್ತೆ ಆ ದೇವರಲ್ಲೇ ಪ್ರಾರ್ಥಿಸಿದೆ..
ಯಾಕೋ ಆ ಪುಟ್ಟ ಮಗುವಿಗೆ ತಾತ ಹೇಳುತ್ತಿದ್ದ ವೇದಾಂತ ಬರೀ ವೇದಾಂತವಾಗಿಯೇ ಕಂಡಿತು.
ಆ ಕ್ಷಣಕ್ಕೆ..