ಅನುವಾದ ಸಂಗಾತಿ

ಸರಳವೇ ಸುಂದರ

ಇಂಗ್ಲೀಷ್ ಮೂಲ:ಮ್ಯಾಥಿವ್ ಪಿ ಥಾಮಸ್

ಕನ್ನಡಕ್ಕೆ:ಚೈತ್ರಾ ಶಿವಯೋಗಿಮಠ

ಪುಟ್ಟ ವೃಕ್ಷಮಾತೆಯೊಬ್ಬಳು ಕೈಚಾಚಿ ಕರೆದಳು,
ತನ್ನ ಪ್ರೀತಿಯ ತೆಕ್ಕೆಯಲ್ಲಿ ನನ್ನ ಎತ್ತಿ ಮೇಲಕ್ಕೆಸೆದು ಆಡಿಸಿದಳು
ಅಲ್ಲಿ ಮೇಲೆ, ಸಣ್ಣ ಬಿಳಿ ಹತ್ತಿಯಂತಹ ಮೋಡಗಳು ತೇಲುವುದ ಕಂಡೆ
ಬಾಳಿನ ಅವ್ಯಕ್ತ ಚಿತ್ರಗಳನು ತಿಳಿ ನೀಲಿ ಬಾನ ಪಟದ ಮೇಲೆ ಬಿಡಿಸಿದಂತೆ.

ಅವಳು ತನ್ನ ನೆಮ್ಮದಿಯ ನೆಳಲಿನ ಮಡಿಲಲಿ ನನ್ನ ಮಲಗಿಸಿದಳು.
ದೂರದೂರುಗಳ, ಹಚ್ಚ ಹಸಿರು ಬಯಲುಗಳ ಕನಸ ಕಂಡೆ
ಅಲ್ಲಿ, ಉಕ್ಕಿ ಹರಿಯುವ ನದಿಗಳು ಪ್ರತಿ ಕಲ್ಲುಗಳನ್ನು ನುಣುಪಾಗಿಸುವುವು
ಅಲ್ಲಿ, ನವಿಲು ತನ್ನ ನಲ್ಲೆಯ ಹೃದಯದ ತಾಳಕೆ ಹೆಜ್ಜೆ ಹಾಕುವುದು
ಅಲ್ಲಿ, ಹುಲ್ಲೆ-ಹುಲಿಗಳು ಸ್ವಚ್ಛಂದವಾಗಿ ಒಂದೇ ಕೊಳದಲಿ ನೀರು ಕುಡಿಯುವವು
ಅಲ್ಲಿ, ಮಕ್ಕಳು ಗಾಳಿಯಲ್ಲಿ ಅಚ್ಚ ಬಿಳಿ ಹೊಗೆಯುಂಗುರಗಳನು ಹಿಡಿಯಲು ಯಾವ ಅಳುಕಿಲ್ಲದೆ ಓಡುವರು.
ಅಲ್ಲಿ, ಮುಂಬೆಳಗಲಿ ಮುಗಿಲು ಬೆಟ್ಟಗಳನು ತಬ್ಬುವುದು.
ದೂರದೂರುಗಳ, ಹಚ್ಚ ಹಸಿರು ಬಯಲುಗಳ ಕನಸ ಕಂಡೆ

ವರುಷಗಳ ನಂತರ…..

ವಿಮಾನದಲ್ಲಿ ಕುಳಿತು ಮುಗಿಲ ಮೇಲೆ ಹಾರಿದೆ.
ಎತ್ತರದ ಕಾರ್ಖಾನೆ-ಕಟ್ಟಡಗಳು ಉಗುಳುವ ಹೊಗೆ-ಧೂಳುಗಳಿಂದ ಮೋಡಗಳು ಕಡುಗಪ್ಪಾಗಿ ಬಿಮ್ಮನಿಸಿದ್ದವು
ಹಾಲು-ಜೇನುಗಳ ಸಮೃದ್ಧ ನಾಡನ್ನು ಕಟ್ಟಲು,
ಕಲ್ಲಿನ ಗಣಿಗಳು, ಬೆಳ್ಳಿ-ಬಂಗಾರದ ಖನಿಗಳ ಕನಸ ಕಂಡೆ
ಆಯುಧದ ಬಲಿಪೀಠಗಳು, ಹುತಾತ್ಮರ ಪ್ರತಿಮೆಗಳ ಕನಸ ಕಂಡೆ
ಮರಮುಟ್ಟು, ಉಕ್ಕು, ಗಾರೆ, ಇಟ್ಟಿಗೆಗಳ ಕನಸ ಕಂಡೆ
ಇಷ್ಟೆಲ್ಲ ಕನಸುಗಳು
ವಿಮಾನ ಕೆಳಗಿಳಿದು, ವಿವಿಧ ಆಕಾರದ ಮುಖಗವಸುಗಳ ತೊಟ್ಟ
ಮನುಷ್ಯರು ಅಂತರ ಕಾಯ್ದುಕೊಂಡು ನನ್ನನ್ನು ಸ್ವಾಗತಿಸುವವರೆಗೆ!

ಆ ದೇವರ ಸೃಷ್ಟಿಯ ಒಂದು ಸಣ್ಣ ವೈರಾಣುವಿನಿಂದಾಗಿ
ಮತ್ತೆ ಸ್ವಚ್ಛ ಆಕಾಶ, ಸ್ವಚ್ಛ ಭೂಮಿಯ ಕನಸ ಕಂಡೆ.
ಇನ್ನಿಲ್ಲದ ಮರದ ಅಪ್ಪುಗೆ ಬಯಸಿ ಹಂಬಲಸಿದೆ!

“ಸರಳವೇ ಸುಂದರ”‌ವೆಂದು ಮಮ್ಮಲ ಮರುಗಿದೆ!

********************************

2 thoughts on “ಅನುವಾದ ಸಂಗಾತಿ

Leave a Reply

Back To Top