ಇತರೆ

ಎಚ್ ಎನ್ ರವರ ಸರಳತೆ ಮತ್ತು ಸಾಮಾಜಿಕ ಚಿಂತನೆ.

ನಾಡು ಕಂಡ ಅಪರೂಪದ ಧೀಮಂತ ಸಜ್ಜನ ವ್ಯಕ್ತಿ,
ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ಪ್ರಗತಿಪರವಿಚಾರವಾದಿ, ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವ,ರಾಷ್ಟ್ರೀಯವಾದಿ,ಖಾದಿ ಬಟ್ಟೆಯನ್ನೇ ಕೊನೆಯವರೆಗೂ ಧರಿಸುತ್ತಿದ ಮೇಧಾವಿ,
ಬದುಕಿನೂದ್ದಕ್ಕೂ ಸರಳತೆ ಜೀವನ
ಸಾಗಿಸಿದ ಸಾಧಕ. ಕಡು ಬಡತನದ ನಡುವೆಯೂ ಬದುಕನ್ನು ತಮ್ಮ ಇಷ್ಟದಂತೆ ಕಟ್ಟಿಕೊಂಡು ಬೆಳೆದ
ಕರುಣಾಮೂರ್ತಿ ಡಾ.ಎಚ್.ನರಸಿಂಹಯ್ಯನವರು. ದಟ್ಟ ದಾರಿದ್ರ್ಯದ ಮಧ್ಯೆಯೂ ತನ್ನಲ್ಲಿ ಅಂತರ್ಗತವಾಗಿದ್ದ ಪ್ರತಿಭೆಯ ಮೂಲಕ ವ್ಯಕ್ತಿಯೋರ್ವ ಎಂಥ ಎತ್ತರಕ್ಕೆ ಬೆಳೆದು ನಿಲ್ಲಬಹುದೆನ್ನುವುದನ್ನು ಜಾಗತಿಕ ಪ್ರಪಂಚಕ್ಕೆ ತೋರಿಸಿಕೊಟ್ಟ ಮಾಹಾಪುರುಷ.ಹಾಗಾಗಿ
ಶಿಸ್ತು ಮತ್ತು ಸರಳತೆಗೆ ಎಚ್ಚೆನ್ ರವರು ಹೆಚ್ಚು ಆದ್ಯತೆ ನೀಡಿದವರು.ಜೊತೆಗೆ ಕರ್ನಾಟಕದ ಮೂಡಲಸೀಮೆಯ ಹುಡುಗನೊಬ್ಬ ಅಮೆರಿಕ್ಕೆ ಹೋದರೂ ಉಪ್ಪಿಟ್ಟು ತಿನ್ನುವ, ಗಾಂಧಿಟೊಪ್ಪಿಯನ್ನೇ ತೊಡುವ ಮೂಲಕ ಭಾರತದ ಹಿರಿಮೆಯನ್ನು ಕಾಪಾಡಿಕೊಂಡು ಬಂದ ಶಿಕ್ಷಣಪ್ರೇಮಿ ಎನ್ನುವುದು ನಾವ್ಯಾರು ಮರೆಯುವಂತಿಲ್ಲ.
ಸರಳತೆ, ಪ್ರಾಮಾಣಿಕತೆ, ಸಮಾಜಿಕ ಚಿಂತನೆ, ಪರಿಶುದ್ಧತೆಯನ್ನು ತಮ್ಮ ಬಾಳಿನುದ್ದಕ್ಕೂ ಒಂದು ವ್ರತದಂತೆ ಕಾಯ್ದುಕೊಂಡು ಬಂದ ಎಚ್ಚೆನ್‍ರ ಬದುಕು ಇಂದಿನ ಸಮಾಜಕ್ಕೆ ಆದರ್ಶ ಮತ್ತು ಮಾರ್ಗದರ್ಶನ ಎಂಬುವುದರಲ್ಲಿ ಎರಡು ಮಾತಿಲ್ಲ ಬಂಧುಗಳೆ.

ಡಾ.ಎಚ್ ಎನ್ ರವರ ಸರಳತೆ:
ಡಾ.ಎಚ್ ಎನ್ ರವರ ಬದುಕಿನಲ್ಲಿ ಅವರು ಕಂಡ ನೋವು, ಸಂಕಟ, ಅನುಭವಿಸಿದ ಬಡತನ, ತಂದೆಯ ಸಾವು, ಓದಿಗಾಗಿ ಊರೂರು ಅಲೆದದ್ದು, ಬರಿಗಾಲಿನಲ್ಲಿ ನಡೆದುಕೊಂಡೆ ಬೆಂಗಳೂರು ತಲುಪಿದ್ದು, ಬದುಕಿಗೊಂದು ಹೊಸ ತಿರುವು ನೀಡಿದ ನ್ಯಾಷನಲ್ ಹೈಸ್ಕೂಲು, ಉಚಿತ ಪ್ರಸಾದ ನಿಲಯದಲ್ಲಿ ಪ್ರವೇಶ ಪಡೆಯಲು ಮಾಡಿದ ಹೋರಾಟ, ಬರೀ ನೀರು ಕುಡಿದೇ ದಿನಗಳನ್ನು ನೂಕಿದ್ದು, ಫೇಲಾದರೆ ಮತ್ತೆ ಮರಳಿ ಊರಿಗೆ ಹೋಗಬೇಕಲ್ಲ ಎನ್ನುವ ಭೀತಿಯಿಂದ ಓದಿದ್ದು, ಪ್ರತಿ ತರಗತಿಯಲ್ಲೂ ಪಟ್ಟಣದ ಹುಡುಗರಿಗೆ ಸ್ಪರ್ಧೆ ಒಡಿದ್ದು ಹೀಗೆ ಹತ್ತು ಹಲವು ಸಂಗತಿಗಳು ಅವರ ಸರಳತೆಗೆ ಸಾಕ್ಷಿಯಾಗಿದೆ. ಅವರು ಬಾಲ್ಯದಲ್ಲಿ ಅನುಭವಿಸಿದ ಕಡು ಬಡತನ ಮತ್ತು ವಿದ್ಯಾಭ್ಯಾಸಕ್ಕಾಗಿ ಮಾಡಿದ ಹೋರಾಟ ನಂತರದ ಪ್ರಾಮಾಣಿಕ ಸರಳತೆಯ ಬದುಕಿಗೆ ಗಟ್ಟಿ ಅಡಿಪಾಯ ಒದಗಿಸಿತು ಎನ್ನುವುದು ಸುಳ್ಳಲ್ಲ.ನಂತರದ ಭಾಗ ಶಿಕ್ಷಕರಾಗಿ ಎಚ್.ನರಸಿಂಹಯ್ಯನವರು ಮಾಡಿದ ಸಾಧನೆಗಳು ಅದ್ಭುತ. ತಮ್ಮ ಇಡೀ ಬದುಕನ್ನು ಶಿಕ್ಷಕ ವೃತ್ತಿಗಾಗಿ ಮುಡಿಪಾಗಿಟ್ಟ ನರಸಿಂಹಯ್ಯನವರ ಸರಳ ಬದುಕು ಇಂದಿನ ಜನರಿಗೆ ಪ್ರೇರಣೆ ನೀಡುತ್ತದೆ. ಅಮೇರಿಕಾದಂಥ ಆಕರ್ಷಕ ರಾಷ್ಟ್ರದಲ್ಲಿ ಅಧ್ಯಯನ ಮಾಡಿಯೂ ತಾಯ್ನಾಡಿನಲ್ಲಿ ಸೇವೆ ಸಲ್ಲಿಸಬೇಕೆನ್ನುವ ಅವರ ಹಂಬಲ, ವಿದ್ಯೆ ಕೊಟ್ಟು ಬದುಕು ರೂಪಿಸಿದ ನ್ಯಾಷನಲ್ ಶಿಕ್ಷಣ ಸಂಸ್ಥೆಯಲ್ಲೆ ಕೆಲಸ ಮಾಡಬೇಕೆನ್ನುವ ಅವರ ತುಡಿತ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತಿಯ ನಂತರ ನ್ಯಾಷನಲ್ ಕಾಲೇಜಿಗೆ ಮರಳಿ ಬಂದ ಅವರ ಸರಳತೆಯ ನಿಷ್ಠೆ, ದೊಡ್ಡ ಹುದ್ಧೆಯಲ್ಲಿದ್ದೂ ವಿದ್ಯಾರ್ಥಿಗಳ ವಸತಿ ಗೃಹದ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದ ಅವರ ಸರಳತೆ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ್ದು, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆಗಳು, ಪವಾಡಗಳ ದುರುಪಯೋಗವನ್ನು ವಿರೋಧಿಸಿದ ಅವರ ವೈಚಾರಿಕ ಕ್ರಾಂತಿ, ತಮ್ಮ ಅಂತ್ಯಕ್ರಿಯೆಯನ್ನು ಅತ್ಯಂತ ಸರಳವಾಗಿ ಮಾಡಬೇಕೆಂದು ಅವರು ಬರೆದಿಟ್ಟ ಉಯಿಲು ಹೀಗೆ ಅನೇಕ ಸಂಗತಿಗಳ ಮೂಲಕ ಎಚ್ಚೆನ್ ಅವರ ಅಗಾಧ ಸರಳ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ ಎನ್ನಬಹುದು. ಅತ್ಯಂತ ಪ್ರಜ್ಞಾಪೂರ್ವಕವಾಗಿ ಅವರು ರೂಢಿಸಿಕೊಂಡಿದ್ದ ಸರಳ ಬದುಕು ಎಚ್ಚೆನ್ ಯವರು ಇಂದಿನ ಆಧುನಿಕ ಸಮಾಜಕ್ಕೆ ಇಷ್ಟವಾಗಲು ಮುಖ್ಯಕಾರಣವಾಗುತ್ತದೆ. ಸರಳತೆಗೆ ಇನ್ನೊಂದು ಹೆಸರೇ ಎಚ್.ನರಸಿಂಹಯ್ಯನವರು ಎನ್ನುವಂತೆ ಅವರು ಬದುಕಿ ಬಾಳಿದರು. ಧರಿಸುವ ಬಟ್ಟೆ, ಸೇವಿಸುವ ಆಹಾರ, ವಾಸಿಸುವ ಕೋಣೆ ಹೀಗೆ ಪ್ರತಿಯೊಂದು ಅವರ ಸರಳ ಬದುಕಿಗೆ ಸಾಕ್ಷಿಯಾಗಿದ್ದವು. ಸರಳತೆಗೂ ಮತ್ತು ಅವರ ಬದುಕಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದಾಗಲೂ ಅವರು ತಮ್ಮ ವೇಶ ಭೂಷಣಗಳಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ಒಂದು ಹಂತದಲ್ಲಿ ಅಂಥದ್ದೊಂದು ಒತ್ತಡ ಬಂದಾಗ ಹುದ್ದೆಯನ್ನು ತ್ಯಜಿಸಲು ಮುಂದಾದರೆ ವಿನಹ ಸರಳತೆಯನ್ನು ಬಿಟ್ಟುಕೊಡಲು ಸ್ವಲ್ಪವೂ ಯೋಚಿಸಲಿಲ್ಲ. ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯೋರ್ವ ತನ್ನ ಬದುಕಿನುದ್ದಕ್ಕೂ ವಿದ್ಯಾರ್ಥಿಗಳ ವಸತಿ ನಿಲಯದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದರೆನ್ನುವುದು ಕಲ್ಪನೆಗೂ ನಿಲುಕದ ಸಂಗತಿ. ಆ ಕೋಣೆಯಲ್ಲಾದರೂ ಏನಿತ್ತು ಮಲಗಲು ಒಂದೆರಡು ಹಾಸಿಗೆಗಳು, ಬರೆಯಲು ಸಣ್ಣ ಮೇಜು, ಅತಿಥಿಗಳಿಗಾಗಿ ಕೂಡಲು ಎರಡು ಕುರ್ಚಿಗಳು. ವಿಲಾಸಿ ಜೀವನವನ್ನು ನಡೆಸುತ್ತ ಸರಳತೆಯನ್ನು ಕೇವಲ ಉಪದೇಶವಾಗಿಟ್ಟುಕೊಂಡವರಿಗೆ ಎಚ್ಚೆನ್ ಅವರ ಸರಳ ಬದುಕು ಒಂದು ನೀತಿ ಪಾಠವಾಗುತ್ತದೆ.

ಡಾ.ಎಚ್ ಎನ್ ರವರ ಸಮಾಜಿಕ ಚಿಂತನೆ :
ಏನನ್ನೂ ಪ್ರಶ್ನಿಸದೇ
ಒಪ್ಪದಿರು ಎಂದು ಘಂಟಾ ಘೋಷವಾಗಿ ಹೇಳುತ್ತಿದ್ದರು ಹಾಗೆ ಮಾತನಾಡುತ್ತಿದ್ದರು ವಿಚಾರವಾದಿ,ಸಮಾಜಿಕ ಚಿಂತನೆಯ ಹರಿಕಾರ ಶಿಕ್ಷಣ ತಜ್ಞ ಎಚ್‌. ನರಸಿಂಹಯ್ಯನವರು. ವೈಜ್ಞಾನಿಕ ಮನೋಧರ್ಮ, ಜೀವಪರತೆ, ಜಾತ್ಯತೀತತೆ ಸಮಾಜಸೇವೆಯಂತಹ ಅನೇಕ ಸಮಾಜಿಕ ಸೇವೆಗಳನ್ನು ಈ ನಾಡಿಗಾಗಿ ಮಾಡಿದ್ದಾರೆ.ನಿಖರತೆ, ನಿಷ್ಠುರತೆಯಿಂದ ವೈಚಾರಿಕತೆಯ ಸಮಾಜಿಕ ಚಿಂತನೆಗಳನ್ನು ಈ ಸಮಾಜದಲ್ಲಿ ಬಿತ್ತಿರುವುದು ಇವರ ಬಹುದೊಡ್ಡ ಗುಣ.ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಕ್ರಾಂತಿ ಕಾರಿ ಸಮಾಜಿಕ ಚಿಂತನೆಗಳಿಗೆ ಆದ್ಯತೆ ನೀಡಿದ್ದಾರೆ. ಇದರ ಜೊತೆಗೆ ಇವರಿಗೆ ವಿಜ್ಞಾನದಲ್ಲಿ ಅಚಲವಾದ ನಂಬಿಕೆ ಇತ್ತು. ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಮೌಢ್ಯದ ವಿರುದ್ಧ ಸತತ ಹೋರಾಟ ಅಗತ್ಯ. ಜನರ ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಶೋಷಣೆ ಮಾಡುವವರ ವಿರುದ್ಧ ಹೋರಾಟ ಮಾತ್ರವಲ್ಲ ಅಂಥವರ ಪೊಳ್ಳುತನವನ್ನು ಬಯಲಿಗೆಳೆಯಬೇಕು ಹಾಗೂ ಅವರ ಹಿಡಿತದಿಂದ ಮುಗ್ಧ ಜನತೆಯನ್ನು ರಕ್ಷಿಸಬೇಕೆಂದು ಯಾವಾಗಲೂ ಹೇಳುತ್ತಿದ್ದರು. ಅಂದರಂತೆ ಚಾಚೂ ತಪ್ಪದೇ ನಡೆದುಕೊಂಡು ಹೋಗಿದ್ದಾರೆ. ಸ್ವಾತಂತ್ಯ್ರ ಹೋರಾಟಗಾರ ಎಚ್. ನರಸಿಂಹಯ್ಯ ಅವರು ನಂಬಿದ ತತ್ವಕ್ಕಾಗಿ ಕುಲಪತಿ ಹುದ್ದೆಯನ್ನೇ ಬಿಟ್ಟು ನ್ಯಾಷನಲ್ ಕಾಲೇಜಿಗೆ ಹಿಂದಿರುಗಿದ ಧೀರೋದಾತ್ತ ವ್ಯಕ್ತಿತ್ವ ಹೊಂದಿದ್ದವರು. ತಮ್ಮ ಬದುಕಿನಲ್ಲಿ ನ್ಯಾಯವಾದ ಆಯ್ಕೆಯ ಪ್ರಶ್ನೆ ಎದುರಾದಾಗಲೂ ಅಂಜದೆ ಅಳುಕದೆ ಸ್ಪಷ್ಟ ದಾರಿಯಲ್ಲಿ ನಡೆಯಬಲ್ಲ ದೃಢವಾದ ಮನಸ್ಸು ಅವರಿಗಿತ್ತು. ಅವರು ದೇವರ ಇರುವಿಕೆಯ ಬಗೆಗೆ ನಂಬಿಕೆ ಕಳೆದುಕೊಂಡಿರಲಿಲ್ಲ. ಆದರೆ ಸಾಂಸ್ಥಿಕವಾಗಿರುವ ಧರ್ಮ, ಜಾತಿಗಳ ಬಗೆಗೆ ಅವರಿಗೆ ಸಂದೇಹವಿತ್ತು. ಜಾತಿ, ಧರ್ಮಗಳು ಬದುಕನ್ನು ಸ್ಥಗಿತಗೊಳಿಸುತ್ತಿವೆಯೆಂಬ ನೋವು ಅವರಲ್ಲಿ ಕಾಣುತ್ತಿತ್ತು.ಹಾಗೂ ಜಾತೀಯತೆ ಇದ್ದ ಕಡೆ ಧರ್ಮವಿಲ್ಲ. ಪೂಜಾರಿಯಿದ್ದ ಕಡೆ ದೇವರಿಲ್ಲ, ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಧರ್ಮವು ನಿಂತ ನೀರಾಗಿದ್ದರೆ, ವಿಜ್ಞಾನ ಹರಿಯುವ ನದಿ ಎಂದು ತಿಳಿದಿದ್ದರು. ಮೂಢನಂಬಿಕೆ, ಕಂಧಾಚಾರ, ಬೃಷ್ಟಚಾರ ಹಾಗೂ ನೈತಿಕ ವಲ್ಲದ ವಿಚಾರಗಳಿಗೆ ಎಂದು ಅವರು ಆಸ್ವದ ಕೊಡಲಿಲ್ಲ. ಸ್ವತಃ ಗಾಂಧಿವಾದಿಯಾಗಿದ್ದ ಅವರು ಸಮಾಜಿಕ ವಿಚಾರವಾದಕ್ಕೆ ಅಡ್ಡಿಯಾಗುವುದಿದ್ದರೆ, ಗಾಂಧೀಜಿಯವರ ಸಿದ್ದಾಂತ್ ವನ್ನು ಬದಿಗೆ ಸರಿಸಿ ಮುನ್ನಡೆಯುವ ಬದ್ಧತೆ ತೋರಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು ಎಂದು ತಿಳುವಳಿಕ ನೀಡುತ್ತಿದರು.


ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆಂದು ಎಚ್
ಎನ್ ರವರು ಯಾವಾಗಲೂ ಹೇಳುತ್ತಿದ್ದರು .1980 ರಿಂದ 1986 ರವರಿಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ( ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ) ನಾಮಕರಣ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಹೀಗೆ ವಿವಿಧ ಹಂತಗಳಲ್ಲಿ ಸಮಾಜಿಕ ಚಿಂತನೆಯನ್ನು ಜನಸಾಮಾನ್ಯರ ಜೀವನದಲ್ಲಿ ಬಿತ್ತುವ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಾ ,ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ.

ಡಾ.ಎಚ್ ಎನ್ ರವರಿಗೆ ಸಂಧ
ಪ್ರಶಸ್ತಿ/ಗೌರವಗಳು:
ಅವರ ಸರಳತೇಯ ಹೋರಾಟ, ಸಮಾಜಿಕ ಚಿಂತನೆಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1968),
ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ನೀಡಿದ ತಾಮ್ರಪತ್ರ ಪ್ರಶಸ್ತಿ (1973), ಭಾರತ ಸರ್ಕಾರದ
ಪದ್ಮಭೂಷಣ ಪ್ರಶಸ್ತಿ (1984),
ಕಲ್ಬುರ್ಗಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ(1988), ದೇವರಾಜ ಅರಸು ಪ್ರಶಸ್ತಿ (1994) ಗಳು ದೊರೆಕಿವೆ. ಮತ್ತು
ಫೆಲೋಗಳಾಗಿರುವ ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` ( Committee for Scientific Investigation of the claims of the Paranomal) ಸಂಸ್ಥೆಯು ಭಾರತದ ಏಕೈಕ ಫೆಲೋ ಎಂಬ ಗೌರವಕ್ಕೆ ಎಚ್ ಎನ್ ರವರು ಪಾತ್ರರಾಗಿದ್ದಾರೆ. 2004ರ ದಸರಾ ಮಹೋತ್ಸವದ ಉದ್ಘಾಟನೆ ಮಾಡುವ ಹಿರಿಮೆಗೆ ಭಾಜನರಾಗಿದ್ದಾರೆ . ಹೀಗೆ ಹತ್ತು ಹಲವು ಪ್ರಶಸ್ತಿ, ಗೌರವ, ಸನ್ಮಾನಗಳು ಸಂಧಿವೆ.

ಕೊನೆಯ ಮಾತು: ಎಚ್ಚೆನ್ ರವರ ನಿರ್ಮಲ ವ್ಯಕ್ತಿತ್ವ ಅದ್ಭುತ ಗುಣಗಳ ಒಂದು ಗಣಿ. ಕುಗ್ರಾಮವೊಂದರ ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿ ಬಂದ ಹಳ್ಳಿಯ ಹುಡುಗನೊಬ್ಬ ನಿರಂತರವಾದ ಸರಳತೆಯ,ಸಮಾಜಿಕ ಚಿಂತನೆಯ ಶ್ರಮದಿಂದ ಜೊತೆಗೆ ಅಚಲವಾದ ವಿಶ್ವಾಸದಿಂದ, ತನ್ನ ವೈಚಾರಿಕ ಮನೋಭಾವದಿಂದ ಅತ್ಯಂತ ಪ್ರತಿಭಾವಂತನಾಗಿ ಬೆಳೆದು ನಿಂತು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಅಪ್ರತಿಮ ಸಾಧನೆ ನಮ್ಮಗೆಲ್ಲರಿಗೂ ಬೆರಗು ಹುಟ್ಟಿಸುತ್ತದೆ. ಜೊತೆಗೆ ಅವರ ಸರಳತೆಯ ಬದುಕು ಅನೇಕರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ. ಮನುಷ್ಯ ಹೇಗೆ ಬದುಕಬೇಕೆನ್ನುವುದಕ್ಕೆ ಎಚ್ಚೆನ್ ಸದಾಕಾಲ ಮಾದರಿಯಾಗಿ ನಿಲ್ಲುತ್ತಾರೆ. ಎಚ್ಚೆನ್ ನಮಗೆಲ್ಲ ಇಷ್ಟವಾಗಲು ಅನೇಕ ಸಂಗತಿಗಳು ಕಾರಣವಾಗುತ್ತವೆ. ಅವರ ಸರಳ ಜೀವನ ಶೈಲಿ, ಅನನ್ಯ ರಾಷ್ಟ್ರ ಪ್ರೇಮ, ಬದುಕು ರೂಪಿಸಿದ ಶಿಕ್ಷಣ ಸಂಸ್ಥೆಯ ಮೇಲಿನ ನಿಷ್ಠೆ, ಕಡು ಬಡತನದ ಬದುಕಿನೊಂದಿಗಿನ ಹೋರಾಟ, ಅವರಲ್ಲಿನ ಅಚಲವಾದ ಆತ್ಮವಿಶ್ವಾಸ, ವೈಚಾರಿಕ ಮನೋಭಾವ, ಬದುಕಿನ ಒಂದು ಭಾಗ ಎನ್ನುವಂತೆ ಬೆಳೆಸಿಕೊಂಡು ಬಂದ ನಿಷ್ಟೂರತೆ ಹೀಗೆ ಅನೇಕ ಕಾರಣಗಳಿಂದ ನರಸಿಂಹಯ್ಯನವರ ವ್ಯಕ್ತಿತ್ವ ನಮಗೆ ಆಪ್ತವಾಗುತ್ತದೆ.ಹಳ್ಳಿಯಿಂದ ಬಂದ ಅನಾಥ ಬಾಲಕ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರವೇಶ ಪಡೆದು ತನ್ನ ಸ್ವಂತ ಪರಿಶ್ರಮದಿಂದ ಆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆರಿದ್ದು ಅವರ ಬದುಕಿನ ಮಹತ್ವದ ಸಾಧನೆಗಳಲ್ಲೊಂದು. ವಿಶ್ವವಿದ್ಯಾಲಯದ ಉಪಕುಲಪತಿ, ಮೇಲ್ಮನೆಯ ಶಾಸಕ ಸ್ಥಾನ, ಕನ್ನಡ ಪ್ರಾಧಿಕಾರದ ಅಧ್ಯಕ್ಷತೆ, ಪದ್ಮಭೂಷಣ ಪ್ರಶಸ್ತಿ, ಗೌರವ ಡಾಕ್ಟರೇಟ್ ಈ ಎಲ್ಲವು ಎಚ್ಚೆನ್ ಅವರ ಪ್ರತಿಭೆಗೆ ಸಂದ ಗೌರವಗಳು. ಯಾವುದನ್ನೂ ಅವರು ಅಪೇಕ್ಷಿಸಿದವರಲ್ಲ. ಯಾವ ಪ್ರಶಸ್ತಿ, ಗೌರವಗಳ ಹಿಂದೆ ಬಿದ್ದವರಲ್ಲ. ಒಂದು ಪ್ರಶಸ್ತಿ, ಉನ್ನತ ಹುದ್ದೆ ದೊರೆತಾಗಲೂ ಅವರದು ನಿರ್ವಿಕಾರ ಭಾವ. ತನ್ನದು ಎನ್ನುವ ಒಂದು ಕೌಟಂಬಿಕ ಚೌಕಟ್ಟನ್ನೂ ಕಟ್ಟಿ ಕೊಳ್ಳದ ವ್ಯಕ್ತಿಗೆ ಅನೇಕ ಸ್ಥಾನ ಮಾನಗಳು ಹುಡುಕಿಕೊಂಡು ಬಂದವು. ಪ್ರತಿಭೆ, ನಿರಂತರ ಪರಿಶ್ರಮ, ಪ್ರಾಮಾಣಿಕತೆ ಈ ಗುಣಗಳಿಂದ ಮನುಷ್ಯನೋರ್ವನ ಜೀವನದಲ್ಲಿ ಏನೆಲ್ಲ ಪವಾಡಗಳಾಗಬಹುದೆನ್ನುವುದಕ್ಕೆ ಎಚ್.ನರಸಿಂಹಯ್ಯನವರ ಸರಳತೆ ಬದುಕು, ಸಮಾಜಿಕ ಚಿಂತನೆಗಳು ಸಾಕ್ಷಿ ಹಾಗೂ ನಮಗೆಲ್ಲರಿಗೂ ಪ್ರೇರಣೆಯಾಗಿವೆ.


ಸಂಗಮೇಶ ಎನ್ ಜವಾದಿ,

One thought on “ಇತರೆ

  1. ಎಚ್ ಎನ್ ಕುರಿತ ಬರಹ ಚೆನ್ನಾಗಿದೆ. ಅವರು ನಮಗೆ ಮಾದರಿಯಾಗಬೇಕು.

Leave a Reply

Back To Top