ಒಂದು ವೈರಸ್ ಮುಂದಿಟ್ಟು ಕೊಂಡು
ನಾಗರಾಜ ಹರಪನಹಳ್ಳಿ
ಅಬ್ಬಾ ಮೊನ್ನೆ ಸ್ವಾತಂತ್ರ್ಯ ಆಚರಸಿದೆವು
ಅದೆಷ್ಟು ಬಿಗಿ, ಅದೆಷ್ಟು ಭಯಗಳನ್ನಿಟ್ಟುಕೊಂಡು
ಎಲ್ಲಿಯ ಗಾಂಧೀ, ಎಲ್ಲಿಯ ಬ್ರಿಟಿಷರು, ಎಲ್ಲಿಯ ಸುಭಾಷ್ ಚಂದ್ರ …ಯಾರ ಹಂಗು ಇರಲಿಲ್ಲ
ಒಂದು ವೈರಸ್ ಕಾರಣವಾಗಿ
ನಗುವಿಲ್ಲ ಮೊಗವಿಲ್ಲ, ಮಕ್ಕಳಿಲ್ಲ, ಘೋಷಣೆಯಿಲ್ಲ, ಪೋಷಣೆಯಿಲ್ಲ
ಎಲ್ಲವೂ ಕಳೆದುಕೊಂಡ ಭೂಮಿ
ಮಕ್ಕಳನು ಕಳೆದು ಕೊಂಡ ತಾಯಿ
ಏನೂ ಉಸಿರೆತ್ತುವಂತಿಲ್ಲ
ವೈರಸ್ ಕಾರಣವಾಗಿ
ಏನಿತ್ತು ಅಲ್ಲಿ , ಭಯ ಬಿಟ್ಟು
ಮುಖ ಗುರುತು ಸಿಗದಂತೆ ಹಾಕಿದ ಬಾಯಿಪಟ್ಟಿ
ಉಸಿರೆತ್ತದಂತೆ ಕಾಡಿದ ವೈರಸ್
ಕಾರಣವಾಗಿ
ಹೌದು, ಈಗೀಗ ಎಲ್ಲೆಲ್ಲೂ ಫತ್ವಾಗಳ ಹೊರಡಿಸುವುದೇ ಆಗಿದೆ;
ಮನುಷ್ಯನಿಂದ ಮನುಷ್ಯನ ಇಬ್ಬಾಗವಾದರೂ
ಕಸಿದ ಸ್ವಾತಂತ್ರ್ಯ ಪಕ್ಕದಲ್ಲಿ ಇದ್ದವಗೆ ಗೊತ್ತಾಗದಂತೆ ಕಸಿದರೂ
ಮಾತಾಡುವಂತಿಲ್ಲ
ವೈರಸ್ ಕಾರಣವಾಗಿ
ಭೂಮಿಯನ್ನು ಮಾತೆ ಎನ್ನುತ್ತಲೇ , ಎದೆಯ ಮೇಲೆ ಕಾಲಿಟ್ಟು ತುಳಿದವರು
ಅವಳ ಕಾಲಿಗೆ ಕಾಲಬಂಧಿ ಹಾಕಿದರೂ ; ಮಾತಾಡುವಂತಿಲ್ಲ
ಕಾಣದ ವೈರಸ್ ಕಾರಣವಾಗಿ
ಸ್ವಾತಂತ್ರ್ಯದ ದಿನ ಸ್ವಾತಂತ್ರ್ಯ ಕಳೆದುಕೊಂಡವರು ,
ಕಸಿದುಕೊಂಡವರು, ಇನ್ನೂ ಏನೇನೋ ಬಸಿದುಕೊಂಡವರು
ಮಾತಾಡುವಂತಿಲ್ಲ
ವೈರಸ್ ಕಾರಣವಾಗಿ
ಕಾಣದ ಕೇಳದ
ಕಂಡೂ ಕಾಣದ ವೈರಸ್ ಕೊಲ್ಲಲು ಹಾಗೂ
ಜನರ ಬದುಕಿಸಲು ಕವಿ
ದಾರಿಯಿಲ್ಲದ , ಚಾವಿಯಿಲ್ಲದ
ಮನೆ ಮನದಲ್ಲಿ ಅವಿತಿರುವ ಔಷಧಿ ಹುಡುಕಲು ಹೋಗಿದ್ದಾನೆ ಕವಿ ದೇಶಾಂತರ ಅಲೆದಾಟಕೆ
************************
ಸಕಾಲಿಕ ಸನ್ನಿವೇಶವನ್ನು ಚೆನ್ನಾಗಿ ಕವಿತೆಯೊಳಗೆ ಹಿಡಿದಿಟ್ಟಿರುವಿರಿ.
ಇತಿಹಾಸ ಮರೆಯಲಾರದ ವರ್ಷದಲ್ಲಿ …..
ಸಂದರ್ಭೋಚಿತ ಕವನ
ವಾಸ್ತವ.,…. ಅರ್ಥಪೂರ್ಣ ಕವಿತೆ
ಬರೆಯಬೇಕು ದುರಿತ ಕಾಲದಲ್ಲಿ ದುರಿತ ಕಾಲದ ಕುರಿತೇ..
ಕೊರೊನ ಕಾಲದ ಕವಿತೆ. ವಾಸ್ತವವನ್ನು ಅನಾವರಣ ಗೊಳಿಸಿದೆ.
ವಾಸ್ತವ ತೆರೆದಿಟ್ಟಿದೀರಿ