ಮುಖಾಮುಖಿ

ಅಂಕಣ ಬರಹ

ಮುಖಾಮುಖಿಯಲ್ಲಿ ರೇಖಾಭಟ್

ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು

ರೇಖಾ ಗಜಾನನ ಭಟ್ಟ ವಜ್ರಳ್ಳಿ ಹತ್ತಿರದ ಹೊನ್ನಗದ್ದೆಯವರು. ಯಲ್ಲಾಪುರದ ಕುಂದೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರ ಪತಿ ಹೈಸ್ಕೂಲ್ ಶಿಕ್ಷಕರು. ಗಾಯನ ಮತ್ತು ಬರವಣಿಗೆ ಇವರ ಹವ್ಯಾಸಗಳು. ಗಜಲ್ ಬರೆಯುವುದರ ಮೂಲಕ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದಾರೆ. ಇವರ ಚೊಚ್ಚಿಲ ಕೃತಿಯನ್ನು ಮಡಿಲ ನಕ್ಷತ್ರವನ್ನು ಅದಿತಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಪ್ರಕಟಣೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಧನ ಸಹಾಯ ಮಾಡಿದೆ. ಕನ್ನಡದಲ್ಲಿ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಪರಂಪರೆ ಇದೆ. ಆ ಸಾಲಿನಲ್ಲಿ ಈ ವರ್ಷ ಉತ್ತರ ಕನ್ನಡದಿಂದ ಆಯ್ಕೆಯಾದವರು ರೇಖಾ ಭಟ್ಟ. ವಚನಗಳನ್ನು, ದಾಸ ಸಾಹಿತ್ಯವನ್ನು ಇಷ್ಟಪಟ್ಟು ಓದುವ ರೇಖಾ ಭಟ್ಟ ಕನ್ನಡದ ಬೇಂದ್ರೆ ಮತ್ತು ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಕವಿತೆಗಳನ್ನು ಇಷ್ಟಪಡುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಾನಿನ್ನು ಎಳಸು ಎಂಬ ವಿನಯ ಸಹ ಅವರಲ್ಲಿದೆ. ವೈಚಾರಿಕ ಸಾಹಿತ್ಯ ಮತ್ತು ಪ್ರಗತಿಪರ ಧೋರಣೆಗಳನ್ನು ಗ್ರಹಿಸುವ ಮನಸ್ಸು ಸಹ ಅವರಲ್ಲಿದೆ. `ನಿನ್ನ ಮಾತುಗಳ ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ, ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದು ಕೊಂಡೆ’ ಎನ್ನುವ ರೇಖಾ ಅವರ ಗಜಲ್ ಗಳಲ್ಲಿ ಹೊಸತನದ ಹುಟುಕಾಟವೂ ಇದೆ. ಬಿಡುಗಡೆಯ ಹಂಬಲವೂ ಇದೆ.

`ನಿನ್ನ ನೆನಪುಗಳ ಹೊರತಾಗಿ ಬೇರೇನೂ ಉಳಿದಿಲ್ಲ ಗೆಳೆಯಾ

ದಹಿಸುತಿರುವ ವಿರಹದುರಿಯು ಏನನ್ನೂ ಉಳಿಸಿಲ್ಲ ಗೆಳೆಯಾ ‘

ಹೂಬನದಲಿ ಬರೀ ಮುಳ್ಳುಗಳೇ ಕಣ್ಣುಗಳ ಇರಿಯುತಿವೆ ಯಾಕೆ

ವಿಷಾದದಲಿ ಬೆಂದ ಮನದಂತೆ ನೆಟ್ಟ ನೋಟವೂ ನೆಟ್ಟಗಿಲ್ಲ ಗೆಳೆಯಾ

ಗಜಲ್ ಪ್ರಕಾರ ವಿರಹವನ್ನು ಪ್ರೇಮದ ಉತ್ಕಟತೆಯನ್ನು ಹೇಳಲು ಸಮರ್ಥವಾದ ಅಭಿವ್ಯಕ್ತಿಯ ಒಂದು ಪ್ರಕಾರ. ಈಚೆಗೆ ಗಜಲ್‌ನಲ್ಲಿ ವಿರಹ ಮತ್ತು ಪ್ರೇಮವೈಫಲ್ಯವನ್ನು ಮೀರಿ ಬದುಕಿನ ನಾನಾ ಬವಣೆಗಳನ್ನು, ಖುಷಿಯನ್ನು ಸಹ ಹೇಳಲು ಬಳಕೆಯಾಗುತ್ತಿದೆ. ರೇಖಾ ಅವರ ಮಡಿಲ ನಕ್ಷತ್ರದಲ್ಲಿ ಗಜಲ್ ಪ್ರಕಾರ ಹಳೆಯ ನೆನಪುಗಳ ಜೊತೆಗೆ ಸಮಾಜದ ಅನೇಕ ಸಂಗತಿಗಳ ವಿಮರ್ಶೆಯ ಒಳನೋಟವೂ ಇದೆ. ನನ್ನ ಗೆಳೆಯರಾದ ಕೋಲಾರದ  ದೊಡ್ಡಕಲ್ಲಹಳ್ಳಿ ನಾರಾಯಣಪ್ಪ , ಶಿರಸಿ ತಾಲೂಕು ಹೊಸ್ಮನೆ ಗ್ರಾಮದ ಗಣೇಶ್ ಹೆಗಡೆ ಹೊಸ್ಮನೆ ಸಹ ಗಜಲ್ ಗಳನ್ನು ಬರೆಯುವಾಗ ಭಿನ್ನ ಧೋರಣೆ ತಾಳಿ ಅದ್ಭುತ ಪ್ರತಿಮೆಗಳನ್ನು ಗಜಲ್ ಪ್ರಕಾರದಲ್ಲಿ ತಂದರು ಎಂಬುದು ಇಲ್ಲಿ ಸ್ಮರಣೀಯ. ಚೊಚ್ಚಲ ಕೃತಿಯಲ್ಲಿ ರೇಖಾ ಅವರು ಒಂದು ಸರಳ ರೇಖೆ ಎಳೆದಿದ್ದಾರೆ. ಅವರ ಬರಹ ಚೆಂದದ ರಂಗೋಲಿಯಾಗಲಿ ಎಂದು ಹಾರೈಸೋಣ. ನ.೧೪ ರಂದು ಅವರ ಮಡಿಲ ನಕ್ಷತ್ರ ಬೆಂಗಳೂರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಿಡುಗಡೆ ಸಹ ಆಗಿದೆ. ಕನ್ನಡದ ೨೩ ಜನ ಯುವ ಬರಹಗಾರರ ಸಾಲಿನಲ್ಲಿ ನಮ್ಮ ಜಿಲ್ಲೆಯ ರೇಖಾ ಭಟ್ ಸಹ ಸೇರಿರುವುದು ನಮಗೆ ಸಂತೋಷ ತಂದಿದೆ.

…………………………………………………………………………………………………………………………..

ಪ್ರಶ್ನೆ : ಕವಿತೆಗಳನ್ನು ಯಾಕೆ ಬರೆಯುತ್ತೀರಿ ?

ಉತ್ತರ : ನನ್ನೊಳಗಿನ ನನ್ನ ಹಗುರಾಗಿಸಿಕೊಳ್ಳಲು ನಾ ಕವಿತೆ ಬರೆಯುತ್ತೇನೆ

ಪ್ರಶ್ನೆ : ಕವಿತೆ ಹುಟ್ಟುವ ಕ್ಷಣ ಯಾವುದು ?

ಉತ್ತರ : ಆ ಕ್ಷಣವನ್ನು ಕವಿಸಮಯ ಎಂದಿದ್ದಾರೆ ಹಿರಿಯರು

ಪ್ರಶ್ನೆ : ನಿಮ್ಮ ಕವಿತೆಗಳ ವಸ್ತು ಯಾವುದು ,ಈ ವರೆಗೆ  ಬರೆದ ಕವಿತೆಗಳ ದೃಷ್ಟಿಯಿಂದ ?

 ಉತ್ತರ : ಅದಮ್ಯ ಸ್ಪೂರ್ತಿ, ನವಿರಾದ  ಪ್ರೀತಿ,  ಹೊರ ಭರವಸೆಗಳಿಂದ, ನೋವುಗಳ ಸರಿಸಿ , ನೆಮ್ಮದಿಯ ಅರಸಿ, ಹೊಸ ಆಶಯಗಳನ್ನು ಹೊತ್ತು, ಹೊಸಬೆಳಕಿನತ್ತ ಪಯಣ,

ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ?

ಉತ್ತರ : ನಾನು ಬರೆದ ಗಜಲ್ ಗಳಲ್ಲಿ ಬಾಲ್ಯದ ಛಾಯೆ ಅಷ್ಟಾಗಿ ಇಣುಕಿಲ್ಲ.

ಮಕ್ಕಳಿಗೆಂದೇ ಬರೆದ ಪದ್ಯಗಳಲ್ಲಿ ನನ್ನ ಬಾಲ್ಯದ ಅನುಭವಗಳನ್ನು ಬಿಂಬಿಸುವ ಯತ್ನ ಮಾಡಿದ್ದೇನೆ

ಪ್ರಶ್ನೆ : ಕಾವ್ಯದ ಬಗ್ಗೆ ನಿಮ್ಮ ಕನಸುಗಳೇನು ?

ಉತ್ತರ : ಕಾವ್ಯ ವ್ಯೆಯಕ್ತಿಕವಾಗಿ ಬಿಂಬಿಸಲ್ಪಟ್ಟು ಓದುಗನ ಮನಸ್ಸಿನಲ್ಲಿ ಬೇರೂರಿದರೂ , ಅದು ಸಮಾಜಮುಖಿಯಾಗಬೇಕು. ಕಾವ್ಯ  ಓದುಗನಲ್ಲಿ  ಹೊಸ ಚಿಂತನೆಯ ಬೀಜವನ್ನು ಬಿತ್ತಬೇಕು

ಪ್ರಶ್ನೆ :  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ಉತ್ತರ : ರಾಜಕೀಯದಲ್ಲಿ ದಕ್ಷ ನಾಯಕರು ಇರುತ್ತಾರೆ. ಅಸಮರ್ಥ ನಾಯಕರು ಇರುತ್ತಾರೆ .. ಜನನಾಯಕರು

ಜನರಿಗಾಗಿ, ರಾಜ್ಯಕ್ಕಾಗಿ,ದೇಶಕ್ಕಾಗಿ ಶ್ರಮಿಸಬೇಕೆ ವಿನಹ ಸ್ವಲಾಭಕ್ಕಾಗಿ ರಾಜಕಾರಣ ಮಾಡಬಾರದು.

ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ಉತ್ತರ : ಮಾನವೀಯತೆಯೇ ಧರ್ಮ.. ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು..

ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

ಉತ್ತರ : ಸಾಂಸ್ಕೃತಿಕವಾಗಿ ಬೆಳೆಯಲು ಬೆರೆಯಲು ಈಗ ಸಾಕಷ್ಟು ವಿಪುಲ ಅವಕಾಶಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕೃತಿಯನ್ನು ಎತ್ತಿ ಹಿಡಿದು ನಮ್ಮ ಮೂಲ ಪರಂಪರೆಗಳನ್ನು ಮುನ್ನೆಡಸಬೇಕು…

ಪ್ರಶ್ನೆ :  ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? .

ಉತ್ತರ : ನಾನಿನ್ನು ಸಾಹಿತ್ಯ ಕ್ಷೇತ್ರದಲ್ಲಿ ಎಳಸು ಎಂಬ ಭಾವ ನನ್ನದು. ಬರೆಹ ನನಗೆ ಮತ್ತು ಓದುಗರಿಗೆ ಸಮಾಧಾನ ನೀಡಿದರೆ ಸಾಕಲ್ಲವೇ…  ಹಿರಿಯರ ಬರೆಹಗಳನ್ನು ಆಸಕ್ತಿಯಿಂದ ಓದುತ್ತೇನೆ. ಗೌರವಿಸುತ್ತೇನೆ.  ಇಲ್ಲಿನ ರಾಜಕೀಯದಿಂದ ದೂರವೇ ಉಳಿದಿದ್ದೇನೆ..ಈಗ ತ.ರಾ.ಸು. ಅವರ ದುರ್ಗಾಸ್ತಮಾನ ಓದುತ್ತಿದ್ದೆನೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ನನ್ನ ಮುಂದಿನ ಓದು.

ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ಉತ್ತರ : ಕಾಲಕ್ಕೆ ತಕ್ಕಂತೆ ಬದಲಾಗುವುದು ಜಗದ ನಿಯಮ. ಅಂತೆಯೇ ನಮ್ಮ ದೇಶವು ಪ್ರಗತಿಯತ್ತ ಮುನ್ನೆಡೆಯುತ್ತಿದೆ. ಸಾಕಷ್ಟು ಅಭಿವೃದ್ಧಿಗಳಾಗುತ್ತಿವೆ. ಈ ಜಾತ್ಯಾತೀತ ರಾಷ್ಟ್ರದ ಒಳಬಾಂಧವ್ಯ ಇನ್ನಷ್ಟು ಗಟ್ಟಿ ಮಾಡುವ ಕೆಲಸಗಳು ಈಗಿನ ಬರೆಹಗಾರದಿಂದಲೂ ಆಗುತ್ತಿದೆ ಹಾಗೂ ಆಗಬೇಕಾಗಿದೆ. 

ಪ್ರಶ್ನೆ :  ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ?

ಉತ್ತರ : ನಾನೂ ಮೊದಲು ಸಾಕಷ್ಟು ಓದಬೇಕಿದೆ .. ಸಾಹಿತ್ಯವೆಂಬ ಸಾಗರದ ಗುಟುಕು ಕುಡಿದು, ನಂತರ ಹೊಸಹೊಸ ಬೀಜಗಳನ್ನು ಬಿತ್ತನೆ ಮಾಡಿ, ಸಾಹಿತ್ಯ ಕೃಷಿಯನ್ನು ಶ್ರೀಮಂತಗೊಳಿಸುವ ಕನಸು ನನ್ನದು.. ನನ್ನ ಶಾಲೆಯ ಮಕ್ಕಳಲ್ಲೂ ಸಾಹಿತ್ಯ ಪ್ರೀತಿ ಹೆಚ್ಚಿಸಿ, ಕನ್ನಡ ಸಾಹಿತ್ಯದೆಡೆಗೆ ಅವರಲ್ಲಿ ಒಲವು ಮೂಡಿಸುವ ಹಂಬಲವಿದೆ.

ಪ್ರಶ್ನೆ : ಕನ್ನಡ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು ?

ಉತ್ತರ : ದ.ರಾ. ಬೇಂದ್ರೆ. ಹಾಗೂ ಎಚ್ ಎಸ್,ವೆಂಕಟೇಶ ಮೂರ್ತಿಯವರ ಭಾವಗೀತೆಗಳು.

………

2 thoughts on “ಮುಖಾಮುಖಿ

  1. ಪ್ರೀತಿ ವಿಶ್ವಾಸ, ಮಮತೆಗಳೇ ದೇವರು ಎನ್ನುವ ರೇಖಾ ಗಜಾನನ ಭಟ್ ಅವರ ಸಂದರ್ಶನ ವನ್ನು ಹಿರಿಯ ಪತ್ರಕರ್ತ ನಾಗರಾಜ್ ಹರಪನಹಳ್ಳಿ ಅವರು ಆಪ್ತ ವಾಗಿ ಕಟ್ಟಿ ಕೊಟ್ಟಿದ್ದಾರೆ.
    ರೇಖಾ ಅವರ ಪ್ರಾಮಾಣಿಕತನ ಮುಗ್ಧತೆ ವಿನಯವೇ ಇನ್ನೂ ಎತ್ತರ ಎತ್ತರಕ್ಕೆ ಬೆಳೆಸುತ್ತದೆ. ಸಾಹಿತ್ಯ ರಂಗ ದಲ್ಲಿ ಉಜ್ವಲ ಭವಿಷ್ಯವಿದೆ.
    ಸಂಗಾತಿ ಮುಖಾ ಮುಖಿ ಬಳಗಕ್ಕೆ, ನಾಗರಾಜ್ ಅವರಿಗೆ ರೇಖಾ ಅವರಿಗೆ ಶುಭಾಶಯಗಳು

Leave a Reply

Back To Top