ಪ್ರಸ್ತುತ

ಲೇಖನ

ಕೋವಿಡ್ ಬದಲಿಸಿದ ಸಾಂಸ್ಕೃತಿಕ ವೈಭವ

ಸುಮಾವೀಣಾ

ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಂಮಿನ ಕೋಟೆಯಲಿ

ಎಷ್ಟು ಕಷ್ಟವೋ  ಹೊಂದಿಕೆಯೆಂಬುದು

ನಾಲ್ಕು ದಿನದ  ಈ ಬದುಕಿನಲಿ

 ಕೋವಿಡ್ 19 ಇಂಥದ್ದೊಂದು ಜಿ.ಎಸ್. ಎಸ್. ರವರ ಪದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ನೆನಪು ಮಾಡಿಕೊಳ್ಳುವಂತೆ ಮಾಡಿದೆ.  ಈ ಮಹಾಮಾರಿ ಜಗತ್ತಿನಾದ್ಯಂತ ವ್ಯಾಪಿಸಿದ್ದು ಇನ್ನಿಲ್ಲದ ಹಾಗೆ ಮನುಕುಲವನ್ನು ಕಾಡುತ್ತಿದೆ. ಪ್ರವಾಹ, ಬಿರುಗಾಳಿ, ಭೂಕಂಪ ಯಾವುದೇ  ಬಂದರೂ ಬಂದು ಹೋಗುತ್ತದೆ ತೀವ್ರ ಪರಿಣಾಮವುಂಟು ಮಾಡಿ . ಆದರೆ ಕೋವಿಡ್ 19 ಬಂದು ನೆಲೆಯೂರಿದೆ ಎದ್ದು ಹೋಗುವ ಲಕ್ಷಣಗಳು ಗೋಚಾರವಾಗುತ್ತಿಲ್ಲ.  ಕೊರೊನಾ ವ್ಯಾಧಿ ಬಂದು ಎಲ್ಲಾ ಕ್ಷೇತ್ರಗಳಲ್ಲೂ ಕಬಂಧ ಬಾಹುಗಳನ್ನು ಚಾಚಿದೆ.

ಈ ಬರಹದಲ್ಲಿ ಸಾಹಿತ್ಯ, ಸಾಹಿತ್ಯ ಬೋಧನಾ ವಲಯದಲ್ಲಿ ಆಗಿರುವ ಬದಲಾವಣೆಗಳನ್ನು ನೋಡುವ  ಚಿಕ್ಕ ಪ್ರಯತ್ನವಿದೆ.  ಅದಕ್ಕೂ ಮೊದಲಿಗೆ ನಮ್ಮ ಜೀವನ  ಶೈಲಿ ಸಂಫೂರ್ಣವಾಗಿ ಬದಲಾಗಿದೆ   ಭಾರತದ ಮಟ್ಟಿಗೆ ಮಾರ್ಚ್ 22 ಇಂಥದ್ದೊಂದು ಪಲ್ಲಟಕ್ಕೆ ಕಾರಣವಾಯಿತು ಎನ್ನಬಹುದು. ಜನತಾ ಕರ್ಫ್ಯೂ ಬಂದಾಗ ಎಲ್ಲರೂ ಅದನ್ನು ಸ್ವಾಗತಿಸಿದರು .  ಕೋವಿಡ್ನಿಂದ ಭಾರತ ಲಾಕ್ ಡೌನ್ ಆಯಿತು  ಈಗ ಲಾಕ್ ಲಿಫ್ಟ್ ಆಗಿದೆ ಆದರೆ ಅನೇಕ ಬದಲಾವಣೆಗಳನ್ನು ಶಿಕ್ಷಣ  ಕ್ಷೇತ್ರದಲ್ಲಿ ಹಾಗು ಸಾಂಸ್ಕೃತಿಕ ವಲಯದಲ್ಲಿ   ಬಿಟ್ಟು ತೆರಳಿದೆ.

ಸಮಕಾಲೀನ ಜಗತ್ತು ಸಂಪೂರ್ಣವಾಗಿ  ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವುದು ಅಲ್ಲದೆ ಸಾಹಿತ್ಯವು   ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕಾಗಿದೆ.  ಭೌದ್ಧಿಕ ಆಲೋಚನೆಗಳಿಗಿಂತ ನಮ್ಮನ್ನು ನಾವು ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.  ಗೂಗಲ್ ತಂತ್ರಜ್ಞರೊಬ್ಬರ ಅಭಿಪ್ರಾಯದ ಪ್ರಕಾರ  ಅಂತರ್ಜಾಲ ಕ್ಷೇತ್ರದಲ್ಲಿ  ಹತ್ತು ವರ್ಷದ ಬದಲಾವಣೆ ಕೇವಲ ಮೂರು ತಿಂಗಳಲ್ಲಿ ಆಗಿದೆ ಎಂಬುದು. ಅಂತೂ ಬದಲಾವಣೆಗೆ ಎಲ್ಲರೂ ಒಗ್ಗಿಕೊಂಡಿದ್ದೇವೆ.

ಕೊರೊನಾ ಬಿಕ್ಕಟ್ಟಿನಿಂದ ಸಭೆ ಸಮಾರಂಭಗಳು ತಂತ್ರಜ್ಞಾನದಿಂದ ವಿಭಿನ್ನ ಸ್ವರೂಪವನ್ನು ಪಡೆಯುತ್ತವೆ.  ಫೇಸ್ ಬುಕ್, ಬ್ಲಾಗ್ , ಟ್ವಿಟ್ಟರ್, ವಾಟ್ಸ್ ಆ್ಯಪ್ಗಳೇ ಹೆಚ್ಚಿಗೆ ಮಹತ್ವ ಪಡೆದುಕೊಂಡಿವೆ. ಈಗ ಏನೇ ಬರಹಗಳು ಬಂದರೂ ಅವುಗಳಲ್ಲಿ  ಕೊರೊನಾ ಛಾಯೆ ಇದ್ದೇ ಇರುತ್ತದೆ. ಸಮಕಾಲೀನ ಜಗತ್ತಿನಲ್ಲಿ  ನಡೆಯುವ ಪರಿಪ್ರೇಕ್ಷಗಳು ಸಾಹಿತ್ಯದ ಮೇಲೆಯೂ ತನ್ನ ಪ್ರಭಾವವನ್ನು ಬೀರಿವೆ. . ಹತ್ತು ಹನ್ನೊಂದನೆ ಶತಮಾನದ  ಕವಿಗಳು ಬರೆಯುತ್ತಿದ್ದ ಬರಹಗಳು ಸ್ವತಂತ್ರವಾಗಿದ್ದವು ಅವರಲ್ಲಿ ಜವಾಬ್ದಾರಿ, ಅರಿವಿನ ಕ್ರಮ, ಸಾಹಿತ್ಯಕ ಜವಾಬ್ದಾರಿ ಎಲ್ಲವೂ ಇದ್ದವು. ನಮ್ಮಸಮುದಾಯದ  ಅಪೇಕ್ಷಣೀಯ ಚಿಂತನೆಗಳು  ಇದ್ದವು. ತನ್ನ ಗುಂಪನ್ನು ಹೊಗಳುವ , ಹೇಳುವ ವಿಷಯವನ್ನು ದಾಕ್ಷಿಣ್ಯಕ್ಕೆ ಒಳಗಾಗದಂತೆ ಹೇಳುತ್ತಿದ್ದರು.  ಸಾಹಿತ್ಯದ ವಸ್ತು ಸಮಾಜ ಹೇಗಿರಬೇಕೆಂದು ನಿರ್ದೇಶನ ಕೊಡುವಂತೆ ಇದ್ದದ್ದು ಈಗ   ಪರಸ್ಪರ ಓಲೈಕೆಯ ದಾಕ್ಷಿಣ್ಯಕ್ಕೆ ಬಿದ್ದ ಆಪ್ತ ಮಾತುಗಳಾಗುತ್ತಿವೆ.  ಅಂದರೆ ಬರೆಹ ಕುರಿತ ಮೊಬೈಲಿ ನಲ್ಲಿ ಕೆತ್ತಿದ ಅಕ್ಷರಗಳೇ,  ಅನಿಸಿಕೆಗಳೇ ವಿಮರ್ಶೆಗಳಾಗಿ ಬದಲಾವಣೆ ಆಗುತ್ತಿರುವುದು ದುರಂತ ಎನ್ನಬಹುದು.

ಬೋಧನೆಯಲ್ಲಿ ಬದಲಾವಣೆ

 ತಾಂತ್ರಿಕತೆಗೆ ನಾವು ಭೋದಕರು ಶರಣಾಗುತ್ತಿದ್ದೇವೆ  ತರಗತಿಗಳಲ್ಲಿ ಸ್ವತಂತ್ರವಾಗಿ ಪಾಠ ಮಾಡುವಂತೆ ಆನ್ಲೈನ್ ತರಗತಿಗಳಲ್ಲಿ ಪಾಠ ಮಾಡಲಾಗುತ್ತಿಲ್ಲ ತರಗತಿಗಳಲ್ಲಿ ಪಾಠ ಮಾಡುವಾಗ ಸೃಜನಾತ್ಮಕವಾಗಿ ಪಾಠ ಮಾಡಬಹುದಿತ್ತು ಕೆಲವು ಸಂಗತಿಗಳು ಹೊಳೆಯುತ್ತಿದ್ದವು ಅವುಗಳನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದೆವು.ಆ ಸಂದರ್ಭಕ್ಕೆ ಅಥವಾ ಆ ದಿನಕ್ಕೆ ಅಥವಾ ಪತ್ರಿಕೆಯ ಸುದ್ದಿಯೋ ಏನೋ ಹೊಸ ಹೊಳಹನ್ನು ನೀಡುತ್ತಿದ್ದವು ಅದನ್ನಿಟ್ಟುಕೊಂಡು ಪಾಠ ಹೇಳುತ್ತಿದ್ದೆವು.  ಈಗ ಎಲ್ಲವೂ ರೆಕಾರ್ಡ್  ಆಗುತ್ತದೆ! ಒಂದಕ್ಷರ ಆಚೀಚೆ ಹೇಳಿದರೆ ವಿಷಯಾಂತರವಾಗಿಬಿಡುತ್ತೇನೋ?  ಎಲ್ಲರೂ ಕೇಳಿಸಿಕೊಳ್ಳುತ್ತಾರೆ ! ತಪ್ಪಾದರೆ? ಆಭಾಸವಾದರೆ? ಸಮಯ ಹೆಚ್ಚಾದರೆ ..! ಎಂಬ ಭಯದಿಂದ ಹೇಳುವ ವಿಚಾರಗಳು ಸರಿಯಾಗಿದ್ದರೂ ಒಂದು ರೀತಿಯ ಮುಜುಗರಕ್ಕೆ ಒಳಪಟ್ಟು  ಹೇಳಬೇಕಾಗಿದೆ ಆದರೆ  ಮುಖ್ಯವಾಗಿ ಹೇಳಬೇಕಾದವು ಗಂಟಲಲ್ಲೇ ಉಳಿಯುತ್ತಿವೆ.

 ವಿದ್ಯಾರ್ಥಿಗಳ ಮನಸ್ಸಿನಲ್ಲಿ  ವಿಚಾರಗಳ ಅಲೆ ಎಬ್ಬಿಸಲು, ಅವರ ಮನಸ್ಸನ್ನು   ವಿಚಾರವಂತಿಕೆಯ ತರಂಗಗಳೆಡೆಗೆ  ಹೊರಳಿಸಲು  ನಿತ್ಯ ತರಗತಿಗಳು  ಕಾರಣವಾಗುತ್ತಿದ್ದವು. ಆದರೆ ಈಗ ಹಾಗಿಲ್ಲ  ಶುಷ್ಕ  ವಾತಾವರಣವಿದೆ. ಗುರು ಶಿಷ್ಯ ಪರಂಪರೆಯ ಪಾವಿತ್ರ್ಯತೆ ಕಡಿಮೆಯಾಗುತ್ತದೆಯೇನೋ? ಎಂಬ ಆತಂಕ ಕಾಡುತ್ತಿದೆ. “ಮಕ್ಕಿ ಕಾ ಮಕ್ಕಿ” ಎಂಬಂತೆ ಕೇವಲ ಪಠ್ಯ ಪುಸ್ತಕದಲ್ಲಿ ಇದ್ದದ್ದನ್ನು ಹೇಳಿ ಸುಮ್ಮನಾಗಬೇಕಾಗಿದೆ.ಹಲವು ವ್ಯಾಪ್ತಿ ಹೊಂದಿದ್ದ ವಿಷಯಗಳನ್ನು ಫಿಲ್ಟರ್ ಮಾಡಿ ತಂದಿಡುವ ಹಾಗಾಗಿದೆ. 

 ಸಾಹಿತ್ಯದ  ಬೋಧನೆ  ಯಾವಾಗಲೂ ವಿವರಣಾತ್ಮಕವಾಗಿರಬೇಕು, ಸಂವಾದದ ರೀತಿ, ಸಂವಹನ ಕ್ರಮದಿಂದ  ಇರಬೇಕು. ಕೋವಿಡ್ ಪೂರ್ವದ  ಪಠ್ಯ  ತರಗತಿಗಳೇ  ಚೆನ್ನಾಗಿರುತ್ತಿದ್ದವು . ಈಗ ಹಾಗಿಲ್ಲ  ತಯಾರಿ ಮಾಡಿ ಹೇಳಿ ಹೋಗುವುದು ಅಷ್ಟ ಸಪ್ಪೆ ಊಟ ಸಮಯಕ್ಕೆ ಸರಿಯಾಗಿ ಮಾಡುವಂತೆ ಆಗಿದೆ  ಬೋಧನೆ ಹಾಗು ಸಾಹಿತ್ಯ   ಡಿಸ್ಟೆನ್ಸ್  ಹಾಗು  ಡಿಜಿಟಲ್  ಆಗಿ ಬದಲಾವಣೆಯಾಗುತ್ತಿದೆ. ಪಠ್ಯ ಪುಸ್ತಕದ  ಅಕ್ಷರಗಳನ್ನು  ಸ್ಪರ್ಶಿಸಿ, ಬಿಡಿಸಿ ಓದುವ, ಅಲ್ಲಲ್ಲಿ ಗುರುತು ಹಾಕಿಸುವ ವಿದ್ಯಾರ್ಥಿಗಳಿಂದ ಪಠ್ಯ ಓದಿಸುವ ಸರಿಯಾಗಿ ಓದುವ ವಿದ್ಯಾರ್ಥಿಗಳ, ಓದಲು ಬಾರದ ಧೀರರನ್ನು ತಿದ್ದುವ ಹಿತವಾದ ವಾತಾವರಣವನ್ನು ಕೋವಿಡ್ ಕಸಿದಿದೆ. ನಮ್ಮ ತರಗತಿಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಕೇಳಿಸಿಕೊಳ್ಳುತ್ತಾರೆ ಅನ್ನುವ ಖಾತ್ರಿ ಖಂಡಿತಾ ಇಲ್ಲವಾಗಿದೆ.

ಸಾಂಸ್ಕೃತಿಕ ಜಗತ್ತನ್ನು ಬದಲಿಸಿದ ಕೋವಿಡ್

ಈಗ ಮದುವೆ ಮಂಟಪಗಳಲ್ಲಿ ಕೊರೊನಾ ದೆಸೆಯಿಂದ ಮಂಗಳವಾದ್ಯವಿಲ್ಲ, ಸತ್ತವರ ಮನೆಯಲ್ಲಿ ಅಳುವಿಲ್ಲ. ಕೋವಿಡ್ ಸಾವಾದರಂತೂ ಕಡೆ ಪಕ್ಷ  ಸತ್ತವರ ಮುಖ ನೋಡುವ ಅವಕಾಶವಿಲ್ಲ. ಅಂತಿಮ ವಿದಾಯ ಹೇಳುವಂತಿಲ್ಲ; ಹಬ್ಬಗಳಲ್ಲಿ ಕುಣಿತವಿಲ್ಲ,  ಕೋಲದ ವಾದ್ಯವಿಲ್ಲ ಜಾತ್ರೆಗಳಲ್ಲಿ ನಗಾರಿಯಿಲ್ಲ, ಸುಗ್ಗಿ ಹಬ್ಬದ ಸಂಭ್ರಮವಿಲ್ಲ.ಜಾತ್ರೆಯ ಕಾಲವನ್ನೇ ಕಾದು  ದವನ ,ಹಣ್ಣುಕಾಯಿ  ಮಾರುವ ,ಸಿಹಿ ತಿಂಡಿ , ಆಟಿಕೆಯ ವ್ಯಾಪಾರಿಗಳು ಅವುಗಳನ್ನೇ ನಂಬಿದ್ದ ಬಹುಪಾಲು ಜನರ   ಬದುಕು ಮೂರಾಬಟ್ಟೆಯಾಗಿದೆ.  ಪ್ರವಾದೋದ್ಯಮ, ಸಾಂಸ್ಕೃತಿಕ ವಿನಿಮಯಕ್ಕೆ ಹಿನ್ನಡೆಯಾಗಿದೆ. ಇದು ಇತಿಹಾಸ ಮತ್ತು ನಿಸರ್ಗದ ಮೇಲೆ  ಆಗಿರುವ   ನೇರ ಪರಿಣಾಮ . ರೂಢಿಯಿಂದ ಬಂದ ಆಚರಣೆಗಳು ನಡವಳಿಕೆಗಳು ಬದಲಾಗಿವೆ ಕೇವಲ ಸಾಂಕೇತಿಕವಾಗಿವೆ. ದೇವರು ಜಗತ್ತನ್ನು ಸೃಷ್ಠಿಸಿದರೆ ಮನುಷ್ಯ ಇತಿಹಾಸ ಸೃಷ್ಠಿಸಿದ  ಎಂಬ  ಮಾತಿದೆ.   ಆಧರೆ ನಮ್ಮ ಇತಿಹಾಸದ ಮೂಲ ನೆಲೆಯನ್ನೇ   ಅಲುಗಿಸಿರುವುದು ಕೋವಿಡ್ . ಇದರಿಂದ ಸಾಂಸ್ಕೃತಿಕ ಹೆಬ್ವಾಗಿಲು  ಮುಚ್ಚಿದೆ. 

ಸಾಮಾಜಿಕ ಅಂತರ, ದೈಹಿಕ ಅಂತರ  ಎಂದೇ ಒಂದು ರೀತಿಯ ಹತಾಶ ಭಾವನೆಗೆ ನಾವು ತಳ್ಳಲ್ಪಟ್ಟಿದ್ದೇವೇನೋ ಅನ್ನಿಸುತ್ತದೆ. ಎಲ್ಲವನ್ನೂ ಅನುಮಾನದಿಂದಲೇ ಈಕ್ಷಿಸುವ ಪರಿ ಎದುರಾಗಿದೆ. ಕೋವಿಡ್ ಎಲ್ಲವನ್ನು ಸಮಯದ ಪರಿಮಿತಿಗೆ ತಂದು ನಿಲ್ಲಿಸಿದೆ. ಸೆಮಿನಾರ್ಗಳು ಹೋಗಿ ವೆಬಿನಾರ್ಗಳು ಬಂದಿವೆ.  “ಎಲ್ಲರೂ ಮನೆಯಲ್ಲೇ  ಇರಿ ಕ್ಷೇಮವಾಗಿರಿ”.”ಕಂಪ್ಯೂಟರ್  ಪರಧೆಯ ಮೇಲೆ ಕಾಣಿಸುತ್ತಿರುವ ಕೇಳಿಸಿಕೊಳ್ಳುತ್ತಿರುವ  ಎಲ್ಲರಿಗು ನಮಸ್ಕಾರ” ,    “ಆದಷ್ಟು ಬೇಗ ಮುಖಾಮುಖಿಯಾಗೋಣ” ಎಂಬ ಮಾತುಗಳು ಕೇಳಿಬರುತ್ತಿವೆ. “ವೇದಿಕೆ ಮೇಲೆ ಆಸೀನರಾಗಿರುವಂಥ” ಎಂಬ ಪದಗಳ ಬದಲಿಗೆ  “ಮನೆಯಲ್ಲಿ ವೀಕ್ಷಿಸುತ್ತಿರುವ  ಎಲ್ಲರಿಗು ನಮಸ್ಕಾರ” ಎನ್ನುತ್ತಿರುವುದು ಒಂದು ರೀತಿಯ ನೋವೇ ಸರಿ!

 ಎಲ್ಲವನ್ನೂ ಬಲ್ಲ ಮನುಷ್ಯ ಕಣ್ಣಿಗೆ ಕಾಣದ ವೈರಾಣು ಅಂದರೆ ಹೆಸರೇ ಹೇಳುವಂತೆ ಅಣುವಿಗೆ ತಲ್ಲಣಿಸಬೇಕಾಗಿದೆ. ಮನುಷ್ಯನ  ಎಲ್ಲಾ ಬುದ್ಧಿ ಸಂಕಲ್ಪ  ಕೊರೊನಾದ ಹೆಡೆಮುರಿ  ಕಟ್ಟಲಿ!. ಮೊದಲಿನಂತೆ ಆಟ, ಪಾಠ, ಊಟ, ಕೂಟ, ನೋಟ ಕಳೆಗಟ್ಟಲಿ. ಸಾಹಿತ್ಯ, ಬೋಧನೆ, ಸಾಂಸ್ಕೃತಿಕ  ಮೊದಲಾದ  ಪರಿಪ್ರೇಕ್ಷಗಳು ಕೋವಿಡ್ ಪೂರ್ವ ದಿನಗಳಂತೆ ನಳನಳಿಸಲಿ.

****************************

Leave a Reply

Back To Top