ಮರಳಿನ ಕಥೆ
ರಮೇಶ್ ನೆಲ್ಲಿಸರ
ತುಂಗಾನದಿಯ ನೀರನ್ನು ಕುಡಿದೊ ಅಥವಾ ಬೆಳೆಗಳಿಗೆ ಹಾಯಿಸಿ ಬದುಕು ಕಟ್ಟಿಕೊಂಡವರು ಹಲವರಾದರೆ ತುಂಗೆಯ ಒಡಲ ಬಗೆದು ಮರಳು ತೆಗೆಯುವುದರ ಮೂಲಕ ಸಿರಿತನದ ಸುಪ್ಪತ್ತಿಗೆಯನ್ನು ಅನುಭವಿಸುತ್ತಿರುವವರು ಕೆಲವೇ ಕೆಲವರು, ರಾಜಕೀಯದ ವಾಸನೆ ತುಂಗೆಯ ಎಡಬಲದ ಮರಳು ಕ್ವಾರಿಗಳ ಪ್ರತಿ ಮರಳಿನ ಕಣದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ.
ಅಂದ ಹಾಗೆ ನಾನು ಹೇಳ ಹೊರಟಿದ್ದು ಈ ಮರಳು ಮಾಫಿಯಾದ ಕುರಿತು ಅಲ್ಲ!, ಈ ಮರಳು ದಂಧೆಗೆ ಅಂಟಿಕೊಂಡಿರುವ ಕೆಲಸಗಾರರ ಕುರಿತು, ಆಗ 2002-03 ರ ಸಮಯ ತೀರ್ಥಹಳ್ಳಿಯಿಂದ ಗಾಜನೂರು ಡ್ಯಾಮಿನ ಇಕ್ಕೆಲಗಳಲ್ಲಿಯೂ ಮರಳು ಕ್ವಾರಿಗಳ ಗಿಜಿಗಿಜಿ, ಪ್ರತಿ ಮರಳು ಕ್ವಾರಿಗಳಲ್ಲೂ ನೂರಾರು ಲಾರಿಗಳ ಸಾಲು, ಮರಳಿನ ಧೂಳಿಗೆ ಹಸಿರು ಬಿದಿರುಗಳ ಬಣ್ಣ ಮುಚ್ಚಿಹೋಗಿತ್ತು, ಪ್ರತಿ ಕ್ವಾರಿಯಲ್ಲೂ ಒಂದು ಟೀ- ಕಾಫಿ ಹಾಗೂ ಮೀನಿನ ಊಟದ ಹೋಟೆಲ್ಲುಗಳು.
ಡ್ರೈವರ್ರುಗಳು ಲಾರಿಗಳನ್ನು ಲೋಡಿಗೆ ಬಿಟ್ಟು ಅರ್ಧರ್ಧ ಎಣ್ಣೆಯನ್ನು ಏರಿಸಿ ನೆರಳಿನ ಮರದ ಕೆಳಗೆ ಇಸ್ಪೀಟು ಎಲೆಗಳ ಆಟದಲ್ಲಿ ಮಗ್ನರಾಗುತ್ತಿದ್ದದ್ದು ಮಾಮೂಲು ನೋಟವಾಗಿತ್ತು, ಆಟದ ಮಧ್ಯಕ್ಕೆ ಜಗಳಗಳು ಎದ್ದು ಮಾರಿಮಾರಿಯಂತು ಸಾಮಾನ್ಯದ ದೃಶ್ಯ, ಮರಳು ಕ್ವಾರಿಯ ಮಾಲಿಕ ಯಾರೋ ಒಂದಿಷ್ಟು ಓದಿರುವ ಇಬ್ಬರು ಹುಡುಗರನ್ನು ಬಿಟ್ಟು ಮರಳಿನ ರಾಯಾಲ್ಟಿ ವಸೂಲಿ ಮಾಡುಸುತ್ತಿದ್ದರು. ಮರಳು ಕ್ವಾರಿಯ ಮಾಲಿಕರಿಗೂ ಲಾರಿಗಳ ಮಾಲಿಕರ ಒಳ ಒಪ್ಪಂದದಿಂದಾಗಿ ಸರ್ಕಾರದ ಪಾಲು ಸರ್ಕಾರಕ್ಕೆ ಮುಟ್ಟುವುದು ಅಷ್ಟಕಷ್ಟೆ!. ರಾತ್ರಿಹಗಲು ಮರಳು ನಗರಗಳ ಹೊಟ್ಟೆಯನ್ನು ಅನಾಮತ್ತಾಗಿ ಸೇರುತ್ತಲೇ ಇತ್ತು.
ಮಂಡಗದ್ದೆಯ ನೆಲ್ಲಿಸರದ ಹದ್ದುಬಂಡೆಯ ಬಳಿ ಹೊಳೆಯ ಆಚೆ ಒಂದು ಮರಳು ಕ್ವಾರಿಯಿತ್ತು, ಅದು ಚಿಕ್ಕಮಗಳೂರಿಗೆ ಸೇರುತ್ತದೆಯಾದರೂ ಮರಳು ತುಂಬುವ ಲಾರಿಗಳು ಮತ್ತು ಅದರ ಮರಳು ಮಾತ್ರ ಶಿವಮೊಗ್ಗ ನಗರದ ಹೊಟ್ಟೆಗೆ ದಕ್ಕುತ್ತಿತ್ತು.
ನಾವು ನೆಲ್ಲಿಸರದ ಮೀನುಗಾರಿಗೆ ಮರಳುಕ್ವಾರಿಯಿಂದ ಒಂದಿಷ್ಟು ಅನುಕೂಲವೇ ಇತ್ತು, ನಾವು ಹಿಡಿಯುವ ಮೀನಿಗೆ ಅರ್ಧ ನಶೆಯೇರಿದ ಡ್ರೈವರ್ರುಗಳು ಮತ್ತು ಮರಳು ಹೊರುವವರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಿದ್ದರಿಂದ ನಮಗೆ ಊರೂರು ತಿರುಗಿ ಮೀನು ಮಾರುವ ತಾಪತ್ರಯ ತಪ್ಪಿಹೋಗಿತ್ತು. ನಾನಾಗ ಪಿಯುಸಿ ಓದುತ್ತಿದ್ದೆ ಆಗಾಗ ಅಣ್ಣನ ಜೊತೆಗೆ ಕುಲಕಸುಬಾದ ಮೀನುಗಾರಿಕೆಗೆ ಹೋಗುತ್ತಿದ್ದೆ, ಆಗ ಮೀನು ಹಿಡಿದು ತೆಪ್ಪವನ್ನು ಮರಳಿನ ಮೇಲೆ ಎಳೆದು ಅಲ್ಲೆ ಕ್ವಾರಿಯಲ್ಲಿದ್ದ ಹೋಟೆಲ್ ನ ಬಳಿ ಹೋದರೆ ಸಾಕು ಮೀನಿಗಾಗಿ ಜನ ಮುತ್ತಿಕೊಳ್ಳುತ್ತಿದ್ದರು , ಆದರೆ ಮೀನೊ ಒಂದೋ ಎರಡೋ ಕೆಜಿ ಇರುತ್ತಿದ್ದವು,ಹೆಚ್ಚಿನ ಬೆಲೆಗೆ ಅವನು ಕೊಟ್ಟು ಹೋಟೆಲ್ಲಿನಲ್ಲಿ ತಿಂಡಿ ಕಾಫಿ ಮುಗಿಸುತ್ತಿದ್ದೆವು.
ಅಣ್ಣ ಕೆಲವೊಮ್ಮೆ ಪರಿಚಯದ ಡ್ರೈವರ್ರುಗಳ ಜೊತೆ ಯಾವುದಾದರೂ ಲಾರಿಯನ್ನು ಹತ್ತಿಕೊಂಡು ಶಿವಮೊಗ್ಗಕ್ಕೆ ಹೋಗುತ್ತಿದ್ದ, ಮರಳು ಅನ್‍ಲೋಡ್ ಮಾಡಿ ಬರುವ ಬಾ ಎಂದು ಅವನನ್ನು ಕರೆಯುತ್ತಿದ್ದರು ನಾನು ಅವನು ಬರುವವರೆಗೆ ಅಲ್ಲೇ ಹೋಟೆಲ್‍ನಲ್ಲಿ ಕೂತಿರುತ್ತಿದ್ದೆ. ಹೀಗೆ ಹೀಗೆ ಕೂತಿರುವಾಗ ಹಲವು ಜನರು ಮಾತನಾಡಿಸುತ್ತಿದ್ದರು, ಅಣ್ಣನ ಪರಿಚಯದ ಡ್ರೈವರ್ರುಗಳು ಏನಾದರು ತಿಂಡಿ ಕೊಡಿಸುತ್ತಿದ್ದರು, ಹೀಗೆ ಬೇಸಿಗೆ ರಜೆಯಲ್ಲಿ ನನಗೂ ಹಲವರು ಪರಿಚಯವಾದರು ಅವರಲ್ಲಿ ರಾಜಣ್ಣ ಕೂಡ ಒಬ್ಬರು ಮಧ್ಯವಯಸ್ಕರಾದ ಅವರು ನನ್ನನ್ನು ಮಗನಂತೆಯೇ ಕಾಣುತ್ತಿದ್ದರು, ನನಗೋ ಅವರಿವರ ಕಥೆಗಳನ್ನು ಕೇಳುವುದು ಎಂದರೆ ಇಷ್ಟ. ಅವರ ಊರಿನ ಬಗ್ಗೆ ಹಾಗೂ ಮನೆಯವರ ಕುರಿತು ಕೇಳುತ್ತಿದ್ದೆ, ಪ್ರಾರಂಭದಲ್ಲಿ ಏನನ್ನೂ ಹೇಳದಿದ್ದರೂ ನಂತರ ಅವರಾಗೆ ಮಾತನಾಡುತ್ತಿದ್ದರು.
ರಾಜಣ್ಣನ ಊರು ಗದಗದ ಬಳಿಯ ರೋಣದ ಬಳಿಯ ಯಾವುದೋ ಹಳ್ಳಿ, ಹದಿನಾರು ತುಂಬುವಾಗಲೇ ಅವರಿಗೆ ಮೊದಲನೇ ಮದುವೆಯಾಯ್ತಂತೆ, ಗಂಡ- ಹೆಂಡತಿ ಇಬ್ಬರೂ ಸಣ್ಣವರು ತಾಯಿ ಇರುವವರೆಗೆ ಎಲ್ಲವೂ ಸರಿಯಿತ್ತು , ಅಬ್ಬೇಪಾರಿ ತಿರುಗುತ್ತಿದ್ದ ಇವರು, ತಾಯಿ ಸತ್ತಾಗ ದುಡಿಯಲು ಹೋಗಲೇ ಬೇಕಾಯ್ತು! ಆದರೆ ಹೊಲದಲ್ಲಿ ಗೇಯಲು ಬರದು ಹಲವು ತಿಂಗಳುಗಳು ಹೀಗೆ ಕಳೆದವು ಹೆಂಡತಿಗೆ ಅದೇನು ಅನಿಸಿತೋ ಏನೋ ಗಾರೆ ಕೆಲಸದವನ ಜೊತೆ ಓಡಿ ಹೋದವಳ ಸುಳಿವೇ ಸಿಗಲಿಲ್ಲ, ಮರ್ಯಾದೆಗೆ ಅಂಜಿ ಸಿಕ್ಕಿದ ಲಾರಿಯನ್ನು ಹತ್ತಿ ಶಿವಮೊಗ್ಗಕ್ಕೆ ರಾಜಣ್ಣ ತಲುಪಿದ, ಅದೇ ಲಾರಿಯ ಕ್ಲೀನರ್ ಆಗಿ ಸೇರಿಕೊಂಡ ,ಮಂಡಿಗೆ ಅಡಿಕೆ ಸಾಗಿಸುವ ಲಾರಿ ಅದು ,ಅವನಿಂದಲೇ ರಾಜಣ್ಣ ಡ್ರೈವಿಂಗ್ ಮಾಡುವುದನ್ನೂ ಕಲಿತ.
ಲಾರಿಯ ಮಾಲಿಕ ಅಲ್ಲಿಲ್ಲಿ ಸಾಲಮಾಡಿಕೊಂಡು ಫೈನಾನ್ಸ್ ನಿಂದ ಹಣ ಪಡೆದು ಲಾರಿ ಕೊಂಡಿದ್ದ, ಸರಿಯಾಗಿ ಲಾರಿಯ ಸಾಲದ ಕಂತನ್ನೂ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದ, “ಇಂದು ಒಮ್ಮೆಗೆ ಎಲ್ಲ ಸಾಲವನ್ನು ತೀರಿಸುತ್ತೇನೆ” ಎಂದು ಹೋದವನು ಹೆಣವಾಗಿಯೇ ಹಿಂದಿರುಗಿದ್ದು. ಶಿವಮೊಗ್ಗದ ತುಂಗಾ ಸೇತುವೆಯ ಮೇಲಿಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಪಾಪ ಆತ.
ಹೇಗೂ ಲಾರಿಯನ್ನು ಓಡಿಸಿ ಮಾಲಿಕರ ಮನೆಗೆ ಹಣ ಕೂಡಿಸಿಕೊಡುವುದು ಎಂದು ರಾತ್ರಿ – ಹಗಲು ದುಡಿಯುತ್ತಿದ್ದವನಿಗೆ ಮಾಲಿಕನ ಹೆಂಡತಿಯ ಜೊತೆಗೆ ಸಂಬಂಧವೂ ಬೆಳೆದೋಯ್ತು!, ಎಲ್ಲರಿಗೂ ವಿಷಯ ತಿಳಿದು ರಾಜಣ್ಣನನ್ನು ಓಡಿಸಿದರು.
ಅದಾಗಲೇ ಶಿವಮೊಗ್ಗ ಬೆಳೆಯುತ್ತಿತ್ತು ಮರಳು ಲಾರಿಗಳು ಎಗ್ಗಿಲ್ಲದೆ ಓಡಾಡುವುದಕ್ಕೆ ಪ್ರಾರಂಭ ಮಾಡಿದವು, ರಾಜಣ್ಣ ಮಂಡ್ಲಿಯ ಹುಸೇನ್ ಸಾಬರ ಬಳಿ ಕೆಲಸಕ್ಕೆಂದು ಸೇರಿದನಂತೆ , ಒಂದೆರಡು ವರ್ಷದ ಬಳಿಕ ಸಾಬರೆ ಒಂದು ಹುಡುಗಿಯನ್ನು ಇವನಿಗೆ ಕಟ್ಟಿ ಸಕ್ರೆಬೈಲಿನಲ್ಲಿ ಒಂದು ಬಾಡಿಗೆ ಮನೆ ಗೊತ್ತುಮಾಡಿ ಬಿಟ್ಟರು, ರಾಜಣ್ಣ ಆಗಲೇ ಕುಡಿತದ ದಾಸನಾಗಿದ್ದ ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ ಈ ನಡುವೆ ಒಂದು ಹೆಣ್ಣು ಮಗವೂ ಆಯಿತು, ಆದರೂ ರಾಜಣ್ಣ ಬದಲಾಗಲಿಲ್ಲ, ಈ ವಿಷಯ ಅದು ಹೇಗೋ ಹುಸೇನ್ ಸಾಬರಿಗೆ ತಿಳಿದು ಇವನಿಗೆ ನಾಲ್ಕು ಬಾರಿಸಿ ಬುಧ್ದಿ ಹೇಳಿ ಹೋದರು. ರಾಜಣ್ಣನಿಗೆ ಅವಮರ್ಯಾದೆ ಆದಂತಾಗಿ ಹೆಂಡತಿಗೂ ಮಗುವಿಗೂ ಕೂಡಿ ಹಾಕಿ ಮನಸೊ ಇಚ್ಚೆ ಹೊಡೆದ, ರಾತ್ರಿ ಬೆಳಗಾಗುವ ವರೆಗೆ ಇವನ ಹೆಂಡತಿ ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು.
ಪೋಲಿಸರು ರಾಜಣ್ಣನಿಗೆ ಒದ್ದು ನಾಲ್ಕಾರು ನಾಲ್ಕಾರು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದವನಿಗೆ ಹುಸೇನ್ ಸಾಬರು ಕೈಬಿಡಲಿಲ್ಲ, ಡ್ರೈವರ್‍ಗಳು ಸಿಗುವುದೇ ಅಪರೂಪವಾಗಿದ್ದರಿಂದ ಮತ್ತೆ ಮರಳುಲಾರಿಯ ಪಯಣವೂ ಆರಂಭವಾಯಿತು, ಹೆಂಡತಿ-ಮಗುವನ್ನು ನೆನೆದು ಈಗಲೂ ಕಣ್ಣೀರಾಗುತ್ತಾರೆ.
ದುಡಿದ್ದದ್ದು ಏನು ಮಾಡುತ್ತೀರಿ ಕೇಳಿದೆ?
ಕುಡಿಯುವುದು, ತಿನ್ನುವುದು ಸಾಯಲೂ ಆಗದೆ ಬದುಕಲೂ ಆಗದೆ ಇದ್ದೇನೆ ಎಂದು ನಿಟ್ಟುಸಿರು ಬಿಟ್ಟರು.
ರಾಜಣ್ಣನ ಹಾಗೆ ಕ್ವಾರಿಯ ಪ್ರತಿಯೊಬ್ಬರದು ಒಂದೊಂದು ಕಥೆ ಸಿಗಬಹುದು, ರಾತ್ರಿ- ಹಗಲು ಕೆಲಸ ಹಲವರು ಮನಗೇ ಹೋಗುತ್ತಿರಲಿಲ್ಲ, ಕ್ವಾರಿಯಲಿ ರಾತ್ರಿ ಕೈಬಳೆಗಳ ಸದ್ದು ಸಾಮಾನ್ಯವಾಯಿತು! , ಅಕ್ರಮ ಮರಳುಗಾರಿಕೆ ಆರಂಭವಾಗಿ ನದಿಯ ಒಡಲಿನಿಂದಲೇ ಮೋಟಾರುಗಳ ಮೂಲಕ ಮರಳು ತೆಗೆಯುವುದು ಆರಂಭವಾಯಿತು, ವರುಷಗಳು ಕಳೆದವು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರೋ ಹೇಳಿದರು, ಏಕೆ? ಹೇಗೆ? ಯಾರ ಬಳಿಯೂ ಉತ್ತರವಿರಲಿಲ್ಲ, ಖಿನ್ನತೆಯೆಂಬ ಖಾಯಿಲೆ ರಾಜಣ್ಣನ ಅಂಗಾಂಗವೆಲ್ಲ ವ್ಯಾಪಿಸಿತ್ತು!
ಈಗಲೂ ಮರಳು ಮಾಫಿಯಾದ ಸುದ್ಧಿಗಳು ಪೇಪರ್‍ನಲ್ಲಿ ಕಂಡಾಗ ಹಳೆಯ ನೆನಪುಗಳು ಒತ್ತರಿಸಿ ಬರುತ್ತದೆ. ತುಂಗೆಯ ಒಡಲ ಮರಳ ಬಗೆದು ಶ್ರೀಮಂತರಾಗುತ್ತಿರುವ ಜನರ ನಡುವೆ ಅವರಿಗಾಗಿಯೇ ಹಗಲಿರುಳು ದುಡಿದು ಅಳಿದು ಹೋಗುವವರು ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ, ಅಂದ ಹಾಗೆ ಇವರ ಲೆಕ್ಕ ಯಾರಿಗೂ ಬೇಕಾಗಿಯೂ ಇಲ್ಲ…
************
Super
Tq 🙂
‘Kateyadanu rajanna’ nice
Heart touching….
ಧನ್ಯವಾದಗಳು
ರಮೇಶ್ ನೆಲ್ಲಿಸರ
Super