ತುಂ ತುಂ ಚಬೂರ್(ಮಕ್ಕಳ ಕಥೆ ) ಕಂಚುಗಾರನಹಳ್ಳಿ ಸತೀಶ್
ಮಕ್ಕಳ ಸಂಗಾತಿ ಕಂಚುಗಾರನಹಳ್ಳಿ ಸತೀಶ್ ತುಂ ತುಂ ಚಬೂರ್(ಮಕ್ಕಳ ಕಥೆ ) ಭೀಮನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ರಾಮಪ್ಪ ಎಂಬ ರೈತ ವಾಸವಾಗಿದ್ದನು. ಅವನಿಗೆ ಧನಪಾಲ ಮತ್ತು ಲೋಕಪಾಲನೆಂಬ ಇಬ್ಬರು ಗಂಡು ಮಕ್ಕಳಿದ್ದರು. ಧನಪಾಲ ವಿದ್ಯಾವಂತ ಹಾಗೂ ಬುದ್ಧಿವಂತನಾಗಿದ್ದ. ಆದರೆ ಲೋಕಪಾಲ ವಿದ್ಯೆ ತಲೆಗೆ ಹತ್ತದೆ, ಇತ್ತ ವಿದ್ಯಾವಂತನೂ ಆಗದೆ ಅತ್ತ ಬುದ್ಧಿವಂತನೂ ಆಗದೆ ಸೋಮಾರಿತನ ಮೈಗೂಡಿಸಿಕೊಂಡಿದ್ದ. ಆದರ್ಶ ರೈತನಾಗಿದ್ದ ರಾಮಪ್ಪ ತನ್ನ ಇಳಿವಯಸ್ಸಿನಲ್ಲಿ ವ್ಯವಸಾಯ ಮಾಡಲಾಗದೆ, ತನ್ನ ಇಬ್ಬರು ಮಕ್ಕಳಿಗೆ ಅಂದದ ಹೆಣ್ಣನ್ನು ಹುಡುಕಿ ಮದುವೆ ಮಾಡಿದ, ಇದ್ದ ಹತ್ತು ಎಕರೆ ಜಮೀನನ್ನು ಮಕ್ಕಳಿಗೆ ಸಮನಾಗಿ ಹಂಚಿ, ಶ್ರಮವಹಿಸಿ ದುಡಿದು ಬದುಕಿ ಎಂದು ಹೇಳಿ ಕೆಲವೇ ದಿನಗಳಲ್ಲಿ ಮರಣವನ್ನು ಹೊಂದಿದ.ವಿದ್ಯಾವಂತ, ಬುದ್ಧಿವಂತನಾದ ಧನಪಾಲ ತಂದೆ ನೀಡಿದ ಐದು ಎಕರೆ ಜಮೀನಿನಲ್ಲಿ ತಾನು ಕಲಿತ ಅಲ್ಪ ಸ್ವಲ್ಪ ವಿದ್ಯೆಯಿಂದ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡ. ಆಧುನಿಕ ಕೃಷಿ ಉಪಕರಣಗಳನ್ನು ಬಳಸಿ, ಹೊಸ ಬಗೆಯ ಬೀಜ, ಗೊಬ್ಬರಗಳನ್ನು ಬಳಸಿ, ಬೆಳೆ ಬೆಳೆಯಲು ಪ್ರಾರಂಭಿಸಿದ. ಇದರ ಪರಿಣಾಮ ಸಹಜವಾಗಿ ಹೆಚ್ಚು ಇಳುವರಿ ಪಡೆದು ಉತ್ತಮ ಲಾಭ ಗಳಿಸಿದ. ಬಂದ ಲಾಭವನ್ನು ದುಂದು ವೆಚ್ಚ ಮಾಡದೆ ಕೂಡಿಡುತ್ತಾ ಹೋದ. ಕೂಡಿಟ್ಟ ಹಣದಲ್ಲಿ ಪ್ರತಿವರ್ಷ ಒಂದೊಂದು ಎಕರೆ ಜಮೀನು ಖರೀದಿಸುತ್ತಾ 5 ರಿಂದ 10 ಎಕರೆ, 10 ರಿಂದ 20 ಎಕರೆ ಹೀಗೆ ಖರೀದಿಸುತ್ತಾ ಧನಪಾಲ ಭಾರೀ ಶ್ರೀಮಂತನಾದ. ಆದರೆ ಹುಟ್ಟಿನಿಂದಲೇ ಸೋಮಾರಿಯಾಗಿದ್ದ ಲೋಕಪಾಲ, ತಂದೆ ಕೊಟ್ಟಿದ್ದ 5 ಎಕರೆ ಜಮೀನಿನಲ್ಲಿ ಶ್ರಮಪಟ್ಟು ದುಡಿಯದೇ ದುಂದು ವೆಚ್ಚ ಮಾಡುತ್ತಾ ಪ್ರತಿವರ್ಷ ಒಂದೊಂದೇ ಎಕರೆ ಜಮೀನು ಮಾರಿ ಜೀವನ ಸಾಗಿಸುತ್ತಾ ಬಂದ. ಇದರ ಪರಿಣಾಮ ಕೆಲವೇ ವರ್ಷಗಳಲ್ಲಿ ಇದ್ದ 5 ಎಕರೆ ಜಮೀನನ್ನು ಕಳೆದುಕೊಂಡು ತುತ್ತು ಕೂಳಿಗೂ ಸಂಚಕಾರ ತಂದುಕೊಂಡ. ಅಣ್ಣ ಧನಪಾಲನ ಶ್ರೀಮಂತಿಕೆ, ವೈಭವದ ಜೀವನ ನೋಡಿ ಲೋಕಪಾಲ ಮತ್ತು ಅವನ ಹೆಂಡತಿಗೆ ಸಹಿಸಲಾಗದಷ್ಟು ಅಸೂಯೆ ಮೂಡತೊಡಗಿತು. ಆದರೆ ಅಣ್ಣ ಧನಪಾಲ ಶ್ರಮಪಟ್ಟು ಬೆವರು ಸುರಿಸಿ ದುಡಿಯುತ್ತಾ ಹೊಸ ಮನೆ, ಕಾರು, ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡ. ಬುದ್ಧಿವಂತನಾಗಿದ್ದ ಧನಪಾಲ ಬಂದ ಲಾಭವನ್ನೆಲ್ಲ ಕೂಡಿಡಲು ಆಧುನಿಕ ಶೈಲಿಯ ತಿಜೋರಿ ತರಲು ನಿರ್ಧರಿಸಿದ. ಕಳ್ಳ ಕಾಕರ ಭಯದಿಂದ ವಿಶೇಷ ರೀತಿಯ ಸೀಕ್ರೆಟ್ ಸೌಂಡ್ ಲಾಕರ್ ಇರುವ ತಿಜೋರಿ ತಂದು ತುಂ ತುಂ ಚಬೂರ್ ಎನ್ನುವ ಸೌಂಡ್ ಅನ್ನು ಸೀಕ್ರೆಟ್ ಲಾಕ್ ಗೆ ಅಳವಡಿಸಿದ. ಬಾಗಿಲು ತೆರೆಯುವ ಮುನ್ನ ತುಂ ತುಂ ಚಬೂರ್ ಎಂದರೆ ಬಾಗಿಲು ತೆರೆಯುತ್ತಿತ್ತು. ಬಾಗಿಲು ಮುಚ್ಚಲು ಪುನಃ ತುಂ ತುಂ ಚಬೂರ್ ಎಂದರೆ ಬಾಗಿಲು ಮುಚ್ಚುತ್ತಿತ್ತು.ತಿಜೋರಿ ತಂದ ಧನಪಾಲ ಸಂಪಾದಿಸಿದ ಹಣವನ್ನೆಲ್ಲ ಇಟ್ಟು ತುಂ ತುಂ ಚಬೂರ್ ಎಂದು ಪರೀಕ್ಷಿಸಿದ. ಆಗ ತಿಜೋರಿಯ ಬಾಗಿಲುಗಳು ಮುಚ್ಚಿದವು. ಪುನಃ ತುಂ ತುಂ ಚಬೂರ್ ಎಂದಾಗ ಬಾಗಿಲುಗಳು ತೆರೆದವು. ಮತ್ತೊಮ್ಮೆ ತುಂ ತುಂ ಚಬೂರ್ ಎಂದ ಬಾಗಿಲು ಮುಚ್ಚಿದವು ಆಗ ನೆಮ್ಮದಿಯ ನಿದ್ರೆಗೆ ಜಾರಿದನು.ಕೆಲವೇ ದಿನಗಳಲ್ಲಿ ತಿಜೋರಿಯ ವಿಷಯ ಲೋಕಪಾಲನ ಹೆಂಡತಿಗೆ ತಲುಪಿತು. ಅಸೂಯೆಯಿಂದ ಹೊಂಚು ಹಾಕುತ್ತಿದ್ದ ಅವಳು ಗಂಡನ ತಲೆಯಲ್ಲಿ ವಿಷ ಬೀಜ ಬಿತ್ತಿ, ಹೇಗಾದರೂ ಮಾಡಿ ತಿಜೋರಿಯಲ್ಲಿರುವ ಹಣವನ್ನು ಕಳ್ಳತನ ಮಾಡುವಂತೆ ದಿನೇ ದಿನೇ ಗಂಡನನ್ನು ಪೀಡಿಸುತ್ತಿದ್ದಳು. ಹೆಂಡತಿಯ ಮಾತು ಕೇಳಿ ಅಣ್ಣನ ಮನೆಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದನು. ಎಳ್ಳಷ್ಟು ಕೆಟ್ಟದ್ದನ್ನು ಬಯಸದ ಧನಪಾಲನ ಮನೆಗೆ ಕುಂಟು ನೆಪವೊಡ್ಡಿ ಮನೆಯ ಕಷ್ಟವನ್ನೆಲ್ಲ ಹೇಳಿ ಸಾಲ ಕೇಳಿದ. ಏನು ಅರಿಯದ ಧನಪಾಲ ತಮ್ಮನ ಹೀನಾಯ ಸ್ಥಿತಿಗೆ ಮರುಗಿ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದ ತಮ್ಮನನ್ನು ಮಂಚದ ಮೇಲೆ ಕೂರಿಸಿದ. ತಿಜೋರಿ ಬಳಿ ಹೋಗಿ ತುಂ ತುಂ ಚಬೂರ್ ಎಂದು ಹೇಳಿದ. ತುಂ ತುಂ ಚಬೂರ್ ಎಂದ ತಕ್ಷಣ ತಿಜೋರಿಯ ಬಾಗಿಲುಗಳು ತೆರೆದವು. ದೂರದಿಂದಲೇ ಇಣುಕಿ ನೋಡಿದ ಲೋಕಪಾಲನಿಗೆ ತಿಜೋರಿಯಲ್ಲಿನ ಹಣ, ಬೆಳ್ಳಿ, ಬಂಗಾರ ನೋಡಿ ಮತ್ತಷ್ಟು ಆಸೆ ಹೆಚ್ಚಾಯಿತು. ಬಿಟ್ಟ ಕಣ್ಣು ಬಿಟ್ಟಂತೆ ನೋಡತೊಡಗಿದ. ಅಣ್ಣ ಹತ್ತು ಸಾವಿರದ ಒಂದು ಕಂತೆಯನ್ನು ತೆಗೆದುಕೊಂಡು ತುಂ ತುಂ ಚಬೂರ್ ಎಂದ, ಪುನಃ ಬಾಗಿಲು ಮುಚ್ಚಿದವು. ಇದನ್ನು ಗಮನಿಸುತ್ತಿದ್ದ ಲೋಕಪಾಲ ಮನಸ್ಸಿನಲ್ಲಿಯೇ ಎರಡು ಮೂರು ಸಲ ತುಂ ತುಂ ಚಬೂರ್ ಎಂದು ಹೇಳಿಕೊಂಡು ಅಣ್ಣ ಕೊಟ್ಟ ಹತ್ತು ಸಾವಿರ ರೂಪಾಯಿ ಕಂತೆಯನ್ನು ತೆಗೆದುಕೊಂಡು ಮನೆಗೆ ಬಂದ. ಬಕಪಕ್ಷಿಯಂತೆ ಕಾಯುತ್ತಿದ್ದ ಹೆಂಡತಿಗೆ ಹಣದ ಕಂತೆಯನ್ನು ಕೊಟ್ಟು ನಡೆದ ಘಟನೆಯನ್ನು ವಿವರಿಸಿದ. ನಾಳೆ ಮಧ್ಯಾಹ್ನ ಅಣ್ಣ-ಅತ್ತಿಗೆ ಹೊಲಕ್ಕೆ ಹೋದಾಗ ತಿಜೋರಿ ಕಳ್ಳತನ ಮಾಡುವುದಾಗಿ ತಿಳಿಸಿದ. ಅದೇ ಗುಂಗಿನಲ್ಲಿ ಗಂಡ-ಹೆಂಡತಿ ಪಿಸುಗುಡುತ್ತಾ ನಿದ್ರೆಗೆ ಜಾರಿದರು. ಬೆಳಗಾಗುತ್ತಲೇ ಅಣ್ಣ-ಅತ್ತಿಗೆ ಎಂದಿನಂತೆ ಕೃಷಿ ಕೆಲಸದಲ್ಲಿ ತೊಡಗಲು ಹೊರಟರು. ಹೊಲಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಲೋಕಪಾಲ, ಅಕ್ಕಪಕ್ಕದ ಮನೆಯವರು ಯಾರು ಇಲ್ಲದ ಸಮಯ ನೋಡಿ ಮನೆಯ ಬೀಗ ಮುರಿದು ಕಳ್ಳ ಬೆಕ್ಕಿನಂತೆ ನಿಧಾನವಾಗಿ ಒಳಗೆ ಹೋಗಿ ತಿಜೋರಿ ಮುಂದೆ ನಿಂತು ತುಂ ತುಂ ಢಮಾರ್ ಎನ್ನುವನು. ಬಾಗಿಲು ತೆರೆಯಲೇ ಇಲ್ಲ ಮತ್ತೆ ತುಂ ತುಂ ಡಿಮೀರ್ ಎನ್ನುವನು. ಆಗಲು ತಿಜೋರಿಯ ಬಾಗಿಲು ತೆರೆಯಲೇ ಇಲ್ಲ. ಗಲಿಬಿಲಿಗೊಂಡ ಲೋಕಪಾಲ ಮತ್ತೊಮ್ಮೆ ತುಂ ತುಂ ಘಮಾರ್ ಎಂದ ಬಾಗಿಲು ತೆಗೆಯಲೇ ಇಲ್ಲ. ಅಯ್ಯೋ! ಅಣ್ಣ ಹೇಳಿದ ಸೀಕ್ರೆಟ್ ಕೋಡ್ ಮರೆತೇ ಹೋಗಿದೆ ಎಂದು ನಿರಾಸೆಯಾಗಿ ಮನೆಗೆ ಹೋದನು. ಹಣ ತರುತ್ತಾನೆ ಎಂದು ಕಾಯುತ್ತಿದ್ದ ಹೆಂಡತಿಗೆ ಪಿತ್ತ ನೆತ್ತಿಗೇರಿ ಒಂದು ಹೆಸರು ನೆನಪಿಡೋಕೆ ಆಗಲ್ವಾ? ಎಂದು ಕೆನ್ನೆಗೆ ತಿವಿಯುತ್ತಾಳೆ. ಆಗ ಅಯ್ಯೋ! ನಾನೇನು ಮಾಡಲಿ? ಅದೇನೋ ತುಂ ತುಂ ಢಮಾರ್ ಎಂದು ಅಣ್ಣ ಹೇಳಿದ್ದ. ನಾನು ಅದನ್ನೇ ಹೇಳಿದೆ ಆದರೆ ತೆರೆಯಲಿಲ್ಲ ಅಣ್ಣ ಹೇಳಿದ ಮಂತ್ರ ಮರತೇ ಹೋಯಿತು ಎಂದನು. ಕೋಪಗೊಂಡ ಹೆಂಡತಿ ಅದೆಲ್ಲ ನಂಗೆ ಗೊತ್ತಿಲ್ಲ. ನಿಮ್ಮ ಅಣ್ಣನಿಗಿಂತ ನಾವು ಶ್ರೀಮಂತರಾಗಬೇಕು ಎಂದು ಹಠ ಮಾಡುತ್ತಾಳೆ. ಹೆಂಡತಿಯ ಹಠಕ್ಕೆ ಕಟ್ಟುಬಿದ್ದು ತಮ್ಮ ಊರಲ್ಲೇ ಇದ್ದ ದೊಡ್ಡ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ. ಅವತ್ತು ರಾತ್ರಿ ಒಂದು ದೊಡ್ಡ ಚೀಲದೊಂದಿಗೆ ಚಿನ್ನದ ಅಂಗಡಿಗೆ ಹೋಗಿ ಬೀಗ ಮುರಿದು ಚಿನ್ನದ ಆಭರಣಗಳನ್ನು ಚೀಲದಲ್ಲಿ ತುಂಬಿಕೊಳ್ಳುತ್ತಿರುವಾಗ ಗಡಿಬಿಡಿಯಲ್ಲಿ ಆಭರಣದ ಪೆಟ್ಟಿಗೆ ಜಾರಿ ನೆಲಕ್ಕೆ ಬಿದ್ದುಬಿಡುತ್ತದೆ. ನಿಶ್ಯಬ್ದವಾದ ರಾತ್ರಿಯಲ್ಲಿ ಆಭರಣದ ಸದ್ದಿಗೆ ಬೀದಿ ನಾಯಿಯೊಂದು ಒಂದೇ ಸಮನೆ ಬೊಗಳುತ್ತದೆ. ನಾಯಿ ಬೊಗಳುವ ಶಬ್ದಕ್ಕೆ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದು ಆಭರಣ ಕದಿಯುತ್ತಿದ್ದ ಲೋಕಪಾಲನನ್ನು ಹಿಡಿದು ಪೋಲೀಸರಿಗೆ ಒಪ್ಪಿಸುತ್ತಾರೆ. ಬೆಳಗಾಗುತ್ತಿದ್ದಂತೆ ವಿಷಯ ತಿಳಿದ ಲೋಕಪಾಲನ ಹೆಂಡತಿ ಧನಪಾಲನ ಬಳಿ ಹೋಗಿ ಅಂಗಲಾಚಿ ಗಂಡನನ್ನು ಬಿಡಿಸುವಂತೆ ಕೇಳಿಕೊಳ್ಳುತ್ತಾಳೆ. ಮೃದು ಹೃದಯಿ ಧನಪಾಲ ತಮ್ಮನ ತಪ್ಪನ್ನು ಮನ್ನಿಸಿ ಜಾಮೀನು ಕೊಟ್ಟು ಬಿಡಿಸುತ್ತಾನೆ. ಹೆಂಡತಿ ಮಾತು ಕೇಳಿ ನಿನಗಿಂತ ಶ್ರೀಮಂತನಾಗಲು ನಿನ್ನ ಮನೆಗೂ ಕಳ್ಳತನ ಮಾಡಲು ಬಂದಿದ್ದೆ. ಆದರೆ ತಿಜೋರಿಯ ಸೀಕ್ರೆಟ್ ಕೋಡ್ ಮರೆತು ಹೋಗಿ ಬಾಗಿಲು ತೆರೆಯಲಿಲ್ಲ. ನನ್ನ ಹೆಂಡತಿ ನಾವು ನಿಮ್ಮ ಅಣ್ಣನಿಗಿಂತ ಹೆಚ್ಚು ಶ್ರೀಮಂತರಾಗಬೇಕು ಎಂದು ದುಂಬಾಲು ಬಿದ್ದಿದ್ದಳು. ಅವಳ ಒತ್ತಾಯಕ್ಕೆ ಮಣಿದು ಕೆಟ್ಟದಾರಿ ಹಿಡಿದು ಅವತ್ತೇ ರಾತ್ರಿ ನಮ್ಮೂರಿನ ಚಿನ್ನದ ಅಂಗಡಿಗೆ ಕಳ್ಳತನ ಮಾಡಲು ಬಂದೆ. ನಮ್ಮ ಅತಿಯಾಸೆಯಿಂದಾಗಿ ಜೈಲು ಸೇರುವಂತಾಯಿತು. ಪರರ ಸ್ವತ್ತು ಎಂದೂ ದಕ್ಕದು. ನನ್ನದು ತಪ್ಪಾಯಿತು ಅಣ್ಣ ಎಂದು ಅಣ್ಣ ಧನಪಾಲನ ಕಾಲಿಗೆ ಬೀಳುವನು. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಬಾ ಇಬ್ಬರೂ ಸೇರಿ ಒಟ್ಟಿಗೆ ದುಡಿಯೋಣ ಎಂದ ಅಣ್ಣ ತನ್ನ ತಮ್ಮ ಲೋಕಪಾಲನನ್ನು ಕರೆದುಕೊಂಡು ಹೋಗುವನು. ಹಳೆಯ ಕಹಿ ನೆನಪುಗಳನ್ನು ಮರೆತು ಅಂದಿನಿಂದ ಇಬ್ಬರೂ ಒಟ್ಟಾಗಿ ಶ್ರಮವಹಿಸಿ ದುಡಿಯುವರು. ಸುತ್ತಮುತ್ತಲಿನ ಹಳ್ಳಿಗಳಿಗೆಲ್ಲ ಮಾದರಿ ರೈತರಾಗುವರು. ಕಂಸ( ಕಂಚುಗಾರನಹಳ್ಳಿ ಸತೀಶ್ )
ತುಂ ತುಂ ಚಬೂರ್(ಮಕ್ಕಳ ಕಥೆ ) ಕಂಚುಗಾರನಹಳ್ಳಿ ಸತೀಶ್ Read Post »









