ಹಾಸ್ಯ ಸಂಗಾತಿ
ಎಚ್. ಗೋಪಾಲಕೃಷ್ಣ
ಅವರ ವಿಡಂಬನಾ ಲೇಖನ
“ದೇವರ ಬಳಿ ಸುಳ್ಳೇ “
ಹನುಮಜ್ಜ ಬಂದಿದೆಯಂತೆ ಊರಿಗೆ. ನಿನ್ನನ್ನ ನೋಡಬೇಕು ನೋಡಬೇಕು ಅಂತ ಕನವರಿಸುತ್ತಾ ಇದೆಯಂತೆ. ಹೋಗಿ ನೋಡಬಾರದೇ… ಅಂತ ನನ್ನ ಇನ್ನೊಬ್ಬ ಕಜಿನ್ ಪ್ರಾಣೇಶಿ ಹೇಳಿದನಾ.. ಸರಿ ಹೋಗಿ ಮಾತಾಡಿಸಿಕೊಂಡು ಬರ್ತೀನಿ ಬಿಡು ಅಂದೆ. ಕಳೆದ ವರ್ಷ ಊರಿಗೆ ಹೋಗಿದ್ದವನು ಬಂದಿದ್ದ.ಹನುಮು,ಪ್ರಾಣೇಶಿ ಇನ್ನೂ ಏಳೆಂಟು ಜನ ನಾವೆಲ್ಲಾ ಕಜಿನ್ಸು. ಹಾಗೆ ನೋಡಿದರೆ ಈ ಕಥೆಯ ನಾಯಕ ಹನುಮು ನನಗಿಂತ ತುಂಬಾ ಅಂದರೆ ತುಂಬಾ ನೇ ಚಿಕ್ಕವನು.ಚಿಕ್ಕಂದಿನಿಂದಲೇ ಮುದುಕನ ಹಾಗೆ ಮಾತಾಡ್ತಾನೆ ಎಂದು ಅವನನ್ನು ಅಜ್ಜ ಅಂತ ಕರೀತಿ ದ್ದೆವು. ಅವನ ಒಂದು ಡೈಲಾಗ್ ಅವನು ಆರು ವರ್ಷ ಇದ್ದಾಗ ಹೊಡೆದದ್ದು…..ಭಗವಂತ ಮನಸು ಮಾಡಿದ್ರೆ ಇರುವೆ ಹೊಟ್ಟೆಯಲ್ಲಿ ಆನೆಯಾಗಿ ಬರ್ತಾನೆ…. ನಂತರ ಈ ರೀತಿಯ ಡಯಲೋಗುಗಳನ್ನು ಎಷ್ಟು ಉದುರಿಸಿದ್ದಾನೋ. ಇವನ ಈ ರೀತಿಯ ಮಾತುಗಳನ್ನು ಆಗಲಿಂದಲೇ ಯಾರಾದರೂ ಬರೆದು ಕೊಳ್ತಾ ಇದ್ದಿದ್ದರೆ ಇಷ್ಟು ಹೊತ್ತಿಗೆ ಲಕ್ಷ ಅಲ್ಲ ಕೋಟಿ ಪುಟಗಳನ್ನು ಮೀರಿದ ದೊಡ್ಡ ಗ್ರಂಥ ಆಗುತ್ತಿತ್ತು.ಯಾರೂ ಇದರ ಬಗ್ಗೆ ಚಿಂತೆ ಮಾಡದೇ ಇದ್ದದ್ದರಿಂದ ಜಗತ್ತು ಒಂದು ಅತ್ಯಪೂರ್ವ ದಾರ್ಶನಿಕ ಗ್ರಂಥ ಕಳೆದುಕೊಂಡಿತು ಎಂದು ನನ್ನ ಖಚಿತ ಅಭಿಮತ.ಈ ಅಜ್ಜ ಅನ್ನುವ ಅಡ್ಜೆಕ್ಟಿವ್ ಅವನ ಹೆಸರಿಗೆ ಅಂಟಿಕೊಂಡು ಈಗ ಹನುಮಜ್ಜ ಆಗಿಬಿಟ್ಟಿದ್ದ. ಇದು ನಮ್ಮ ಕತೆಗೆ ಒಂದು ಪೂರಕ ಸಂಗತಿ. ಇನ್ನೊಂದು ಹೇಳೋದು ಮರೆತೆ. ಒಂದು ವಿಶೇಷ ನಿಮ್ಮ ವಂಶದಲ್ಲಿ ಗಮನಿಸಿದ್ದೀರಾ? ಏನು ವಿಶೇಷ ಅಂದ್ರಾ.. ಅದಕ್ಕೇ ಬಂದೆ. ಎಲ್ಲಾ ಸಂಸಾರಗಳಲ್ಲಿ ಸೀಬೈಟೂ ಗಳು ಇರ್ತಾವೆ. ಇದು ಹೆಚ್ಚಾಗಿ ತಾಯಿಮನೆ ಕಡೆ ಹೆಚ್ಚಂತೆ. ಅಪವಾದ ಅನ್ನುವ ಹಾಗೆ ಸಾವಿರಕ್ಕೆ ಲಕ್ಷಕ್ಕೆ ಒಂದು ಅಪ್ಪನ ಕಡೆ ಸಹ ಇರುತ್ತವಂತೆ. ನಮ್ಮ ವಂಶದಲ್ಲಿ ಇದು ಸ್ವಲ್ಪ ತಾಯಿ ಕಡೆ. ಅಂದಹಾಗೆ ನಮ್ಮ ಕಸಿನ್ಸ್ ಗುಂಪು ಅಮ್ಮನ ಕಡೆವು. ಅಪ್ಪ ಪಾಪ ಒಬ್ಬಂಟಿ ಹುಟ್ಟಿದ್ದು, ಒಂಟಿ ಬಡುಕ! ಅದರಿಂದ ಅಪ್ಪನ ಕಡೆ ಸೀಬೈಟೂ ಗಳು ಇಲ್ಲ! ಇದು ಯಾಕೆ ಹೇಳಿದೆ ಅಂದರೆ ಕೊನೆ ತನಕ ನನ್ನ ಜತೆ ಇರಿ!
ನನ್ನನ್ನ ನೋಡಬೇಕು ನೋಡಬೇಕು ಅಂತ ಯಾರಾದರೂ ಅವಲತ್ತು ಕೊಂಡರೆ ನನಗೆ ಹೃದಯ ಕರಗಿ ನಿರಾಗಿಬಿಡುತ್ತೆ, ನನ್ನನ್ನು ನೆನೆಸಿಕೊಳ್ಳುವ ಒಂದಾದರೂ ನರಪ್ರಾಣಿ ಈ ಜಗತ್ತಿನಲ್ಲಿ ಇದೆಯಲ್ಲಾ ಅಂತ. ಸರಿ ಇಂತಹ ಸಮಯದಲ್ಲಿ ನೀವೇನು ಮಾಡ್ತೀರಿ? ನಾನೂ ಅದನ್ನೇ ಮಾಡಿದೆ. ಕೊನೆ ಉಸಿರು ಎಳೆಯುವ ಮುನ್ನ ಅವನನ್ನು ಭೇಟಿಸಬೇಕು ಅಂತ ನಿರ್ಧರಿಸಿಬಿಟ್ಟೆ ಮತ್ತು ಅವನ ಮನೆಗೆ ಕ್ಯಾಬ್ ಬುಕ್ ಮಾಡಿದೆ. ಹತ್ತುವರ್ಷ ಹಿಂದೆ ನನ್ನ ಕೋಲೀಗೂ ನನ್ನನ್ನ ನೋಡಬೇಕು ಅಂತ ಯಾರ ಬಳಿಯೋ ಹೇಳಿದ್ದ. ಅವನ ಜತೆ ಜಗಳ ಆಡಿದ್ದೆ ಮತ್ತು ಮಾತು ಅವನು ಬಿಟ್ಟಿದ್ದ ಎರಡೂವರೆ ವರ್ಷದ ಹಿಂದೆ. ಅವನನ್ನು ಹೋಗಿ ನೋಡೋಣ ಇವತ್ತು ನಾಳೆ ಅಂತ ಕಾಲ ತಳ್ಳಿದೆನಾ..? ಅವನು ದೇವರ ಪಾದ ಸೇರಿಕೊಂಡ ಅನ್ನೋ ಸುದ್ದಿ ಬಂತು…! ಅವತ್ತಿಂದ ಯಾರನ್ನಾದರೂ ನೋಡಬೇಕು ಅನಿಸಿದರೆ ಅಥವಾ ಯಾರಾದರೂ ನನ್ನ ನೋಡಬೇಕು ಅಂದರೆ ಕೂಡಲೇ ಹೋಗಿ ನೋಡಿಬಿಡಬೇಕು ಅಂತ ಸೆಲ್ಫ್ ರೂಲು ಮಾಡಿಕೊಂಡಿದ್ದೀನಿ. ದಿನ ತಳ್ಳಿದರೆ, ಅಕಸ್ಮಾತ್ ದೇವರ ಪಾದ ಸೇರಿದರೆ ಬದುಕಿರುವ ಪಾಮರನಲ್ಲಿ ಒಂದು ಕೊರಗು ಉಳಿಯುತ್ತೆ. ದೇವರ ಪಾದ ಸೇರಿದವನು ಈ ಆಸೆ ತೀರಿಸಿಕೊಳ್ಳಲು ಮತ್ತೆ ಒಂದು ಜನ್ಮ ತಳೆಯ ಬೇಕಾಗುತ್ತದೆ! ಈ ಲಾಜಿಕ್ ನನ್ನದು, ಪುರಾಣ ಪ್ರವಚನ ಗಳಿಗೆ ಈಗೊಂದು ವರ್ಷದಿಂದ ಹೋಗ್ತಾ ಇದೀನಿ ನೋಡಿ, ಆಲ್ಲಿ ಈ ಹೊಸ ಆಲೋಚನೆಗಳು ಮತ್ತು ಥಿಂಕಿಂಗ್ ನ ಜ್ಞಾನಾರ್ಜನೆ ಮಾಡಿಕೊಂಡದ್ದು!
ಹನುಮಜ್ಜನ ಮನೆಗೆ ಬಂದು ಸೇರಿದೆ. ಅವನದ್ದು ಒಟ್ಟಾರೆ ಕುಟುಂಬ.ಇವನ ಮಗ ಸೊಸೆ ಇವನ ಜತೆ.ಇವನ ಹೆಂಡತಿ , ಅವಳ ನಾಲ್ಕು ಜನ ತಂಗಿರೂ ಇವನ ಮನೆ ಹತ್ತಿರಾನೆ ಮನೆ ಮಾಡ್ಕೊಂಡು ಇದ್ದಾರೆ.ಯಾವಾಗಲೂ ಇವನ ಮನೇಲೇ ಅವರ ಟಿಕಾಣಿ.ಇವರ ಮನೆ ಅವರ ಅಡ್ಡ!ಇದು ಹಾಗಿರಲಿ.
ಅವನ ಮಗ ಸೊಸೆ ಉಪಚಾರ ಮಾಡಿ ಅಜ್ಜನ ರೂಮಿಗೆ ಬಿಟ್ಟರು. ಹನುಮಜ್ಜ ತೇಲು ಗಣ್ಣು ಮಾಡಿಕೊಂಡು ಮಂಚದ ಮೇಲೆ ಅಂಗಾತ ಮಲಗಿ ಸೂರು ನೋಡುತ್ತಿದ್ದ.ಅವನಿಗೆ ಮರೆವೆ ರೋಗ ಅಮರಿದೆ ಅಂತ ಕಸಿನ್ಸ್ ಹೇಳಿದ್ದರು.ಅವನು ಸೂರು ನೋಡಬೇಕಾದರೆ ನಾನು ಅವನನ್ನ ಗಮನಿ ಸಿದೇನಾ… ಅಯ್ಯೋ ಅನಿಸಿತು. ಮುಖದ ಮೇಲೆ ಒಂದು ವಾರದ ಗಡ್ಡ, ಗುಳಿ ಬಿದ್ದ ಕಾಂತಿ ರಹಿತ ಕಣ್ಣು, ಭಾವನೆ ರಹಿತ ಮುಖ… ಅಯ್ಯೋ ಅನಿಸುವುದು ಹೆಚ್ಚಾಯಿತು.
“ಸ್ವಲ್ಪ ತಿಂಡಿ ತರ್ತೀನಿ “ಅಂತ ಸೊಸೆ ಒಳಗೆ ಹೋದಳು, ಮಗ ಅವಳ ಹಿಂದೆ ಹೋದ.
“ಏನೋ ಹನುಮ….”ಅಂದೆ.
ಕೈ ಅಡ್ಡ ಮಾಡಿ ಮಾತು ತಡೆದ
“…. ಅರಚ ಬೇಡ, ಕಿವಿ ಕೇಳುತ್ತೆ,”ಅಂದ!
ನಾನೇನೂ ಅರಚಿರಲಿಲ್ಲ. ಇವನಿಗೆ ಅರಚಿದ ಹಾಗೆ ಆಗಿದೆ ಅಂದರೆ… ತಲೆ ಸ್ಕ್ರೂ ಲೂಸ್ ಆಗಿದೆಯಾ…..
ಹನುಮಜ್ಜನ ಹೆಂಡತಿ ವೆಂಕಟ ಲಕ್ಷ್ಮಿ ಎರಡು ತಟ್ಟೆ ಹಿಡಕೊಂಡು ಒಳಗೆ ಬಂದಳು.
“ಏನೋ ಗೋಪಾಲಿ ಹೇಗಿದ್ದಿಯೋ..”ಅಂತ ವಿಚಾರಿಸಿದಳು. ಇವಳೂ ನನಗೆ ಸೋದರಿಕೆ ಸಂಬಂಧ. ಹಾಗಾಗಿ ಸಲುಗೆ ಹೆಚ್ಚು. ಸ್ಟೂಲ್ ಹತ್ತಿರ ಎಳೆದು ಅದರ ಮೇಲೆ ತಟ್ಟೆ ಇಟ್ಟಳು.
ಹನುಮಜ್ಜ “ಇದೇನು….”ಅಂದ.
“ಉಪ್ಪಿಟ್ಟು ನಿಮಗೆ ಇಷ್ಟ ಅಂತ ಮಾಡಿದೆ…”ಅಂದಳು.
“ಏನು ಹಾಕಿದೆ…?”ಅಂದ.
“ರವೆ ಉಪ್ಪಿಟ್ಟು ರೀ….”ಅಂದಳು.
“ತಗೊಳ್ಳೋ, ನೀರು ತರ್ತಿನಿ. ನೀವೂ ತಗೊಳ್ಳಿ..”ಅಂತ ಗಂಡನಿಗೆ ಹೇಳಿ ಒಳಗೆ ಹೋದಳು.
ಹನುಮಜ್ಜ ಇನ್ನೂ ಒಂದು ರೀತಿ ಮಬ್ಬಿನಲ್ಲಿದ್ದ.
“ಎದ್ದೇಳು, ಎಬ್ಬಿಸಲಾ…..”ಅಂದೆ.
“ತೆಪ್ಪಗೆ ಕುಕ್ಕರಿಸ್ಕೋ…..”ಅಂದ. ಒಳ್ಳೇ ಲೂಸ್ ಬಡ್ಡಿ ಮಗನ್ನ ನೋಡೋಕ್ಕೆ ಬಂದೆ ಅನಿಸಿತು.ಮಂಚದಿಂದ ಮೇಲೆದ್ದ. ತಟ್ಟೆ ಕೈ ಗೆ ತಗೊಂಡ. ಕೆಕ್ಕರಿಸಿ ನನ್ನನ್ನ ನೋಡಿದ.
ನಾನೂ ತಟ್ಟೆ ತಗೊಂಡೆ. ಸ್ಪೂನ್ ನಿಂದ ಮೊದಲನೇ ತುತ್ತು ಇಟ್ಕೋ ಬೇಕು..
“ಏ ಬಕಾಸುರ, ತಡ್ಕೋ ನೀರು ಬರ್ಲಿ…”ಅಂದ. ಪೆಚ್ಚಾಗಿ ಕೂತೆ.
ವೆಂಕಟಲಕ್ಷ್ಮಿ ತಂಗೀ ಅನಂತಲಕ್ಷ್ಮಿ ನೀರು ತಂದಳು. ಏನೋ ಗೋಪಚ್ಚಿ ಹೇಗಿದೀಯೋ ಅಂತ ಮಾತಾಡಿಸಿದಳು. ಅಕ್ಕ ತಂಗಿ ನನಗೆ ಕಜಿನ್ಸು, ಇವರ ಮಧ್ಯದವಳು ಒಬ್ಬಳು ಇದಾಳೆ, ಸುಬ್ಬುಲಕ್ಷ್ಮಿ, ಕೊನೆಯವಳು ಇರೋದು ಸಹ ಇವರ ಮನೆ ಹತ್ತಿರವೇ, ಅವಳ ಹೆಸರೂ ಅದೇನೋ ಲಕ್ಷ್ಮಿ ಅಂತ. ಸಂಕಟ ಲಕ್ಷ್ಮಿ ಇರಬಹುದಾ ಅಲ್ಲ, ಅವಳ ಹೆಸರು ಈಗ ನೆನಪಾಯ್ತು, ಸಂತಾನ ಲಕ್ಷ್ಮಿ ಅಂತ! ಅವರೆಲ್ಲರೂ ಹೀಗೇ ನನ್ನ ಅತಿ ಆಪ್ತತೆಯಿಂದ ಮಾತಾಡಿಸೋದು. ಹೆಣ್ಣು ಕಸಿನ್ಸ್ ಹೆಚ್ಚಿಗೆ ಇದ್ದರೆ ಅದೇನು ಮಜಾ ಅನಿಸಿತು. ಎಷ್ಟೊಂದು ಪ್ರೀತಿ ತುಂಬಿದ ಹೆಸರುಗಳಿಂದ ಕರೆಸ್ಕೋಬಹುದು…
ಅನಂತಲಕ್ಷ್ಮಿ ನೀರು ಟಿಪಾಯ್ ಮೇಲೆ ಇಟ್ಟಳು .
ಏನಿದು…? ಅಂದ ಹನುಮಜ್ಜ.
ಅದಾ ಅದು ಲೋಟ..ಅಂದಳು,ಅನಂತಲಕ್ಷ್ಮಿ. ಅವಳ ದನಿಯಲ್ಲಿ ಕೀಟಲೆ ಇತ್ತಾ..
ಹನುಮಜ್ಜ ಸಿಡುಕಿದ. ಲೋಟ ಅಂತ ಕಾಣುತ್ತೆ, ಅದರಲ್ಲಿ ಏನಿದೆ……
ಭಾವಾ ಅದರಲ್ಲಿ ಕಾವೇರಿ ಇದಾಳೆ ಅಂತ ಅನಂತಲಕ್ಷ್ಮಿ ಕಿಸಕ್ ಅಂದಳು!
ಹನುಮಜ್ಜ ನನ್ನ ಕಡೆ ತಿರುಗಿ ಬಾ ಕುಕ್ಕರಿಸ್ಕೋ, ಬಕ್ಕರಿಸಿ ವಂತೆ…. ಅಂದ. ಎದುರು ಬದುರು ಕೂತು ಉಪ್ಪಿಟ್ಟು ತಿಂದವಾ. ಏನು ಮಾತಾಡಿದರೆ ಹೆಚ್ಚು, ಏನು ಮಾತಾಡಿದರೆ ಕಮ್ಮಿ ಅಂತ ತಟ್ಟೆ ಖಾಲಿ ಮಾಡಿದೆ.
ವೆಂಕಟ ಲಕ್ಷ್ಮಿ ಕೈಯಲ್ಲಿ ಒಂದು ಲೋಟ ಹಿಡಿದು ಬಂದಳು ನಿಮಗೆ ಕಾಫಿ ಅಂತ ಅವನಿಗೆ ಲೋಟ ಇಟ್ಟಳು.
ಎಲ್ಲಿ ಆ ಶನಿ? ಅಂದ!
“….ಅವಳಿಗೆ ಶನಿ ಗಿನಿ ಅಂದರೆ ನಿಮ್ಹಾನ್ಸ್ ಗೆ ಸೇರಿಸಿ ಬಿಡ್ತೀನಿ, ಹುಷಾರ್…” ಅಂತ ನನ್ನ ಕಡೆ ತಿರುಗಿದಳು. “ಅನಂತು ನ ನೋಡಿದರೆ ಸಾಕು ಶನಿ ಅಂತ ಶುರು ಮಾಡ್ತಾರೆ. ಅವಳು ನಮಗೆ ಎಷ್ಟು ಸಹಾಯ ಮಾಡಿದಾಳೆ, ಒಂಚೂರೂ ಕೃತಜ್ಞತೆ ಇಲ್ಲ ಇದಕ್ಕೆ….” ಸಿಡುಕು ಮೂತಿ ಮಾಡಿದಳು.
ಘಟೋತ್ಕಚ ನಿಗೆಲ್ಲಿ ಕಾಫಿ… ಅಂದ.ಘಟೋತ್ಕಚ ಅಂದರೆ ನಾನು ಅಂತ ಅರ್ಥ ಮಾಡಿಕೊಂಡೇ..,!
“ನಿನಗೆ ಸಕ್ರೆ ಇರ್ಲೋ ಬೇಡ್ವೋ..”
“ಬೇಡಮ್ಮ ಸಕ್ರೇ ಬೇಡ…. ‘ಅಂದೆ.
“ಯಾಕೋ ಘಟೋತ್ಕಚ, ಅವಳನ್ನ ಅಮ್ಮ ಅಂತಿಯಾ.. “ಅಂತ ರೇಗಿದ! “ನಿನ್ನ ಮಗಳ ವಯಸ್ಸು ಅವಳಿಗೆ….”
ತೆಪ್ಪಗೆ ಕೂತೆ. ತಲೆ ಗಿರ್ ಅನ್ನಲು ಶುರು ಆಗಿತ್ತು.
ನನ್ಮಗ ಮಾತಾಡೋ ರೀತಿ ನೋಡಿದ್ರೆ ಪೂರ್ತಿ ಮರೆವು ಬಂದಹಾಗಿಲ್ಲ ಅನಿಸಿತು .
ತಿಂಡಿ ಕಾಫಿ ಆಗಿತ್ತಾ.. ಊಟ ಬರೋವರೆಗೂ ಏನು ಮಾಡೋದು? ಅವನನ್ನ ಮಾತಿಗೆ ಎಳೆದರೆ ಹೇಗೆ?
ಇರುವೆ ಹೊಟ್ಟೆಯಲ್ಲಿ ಆನೆ ಹೋಗುವ ಪಾರಮಾರ್ಥಿಕ ಜಿಜ್ಞಾಸೆ ಶುರು ಮಾಡಿದರೆ ಹೇಗೆ..?
“ಅಜ್ಜ ಒಂದು ಡೌಟು..” ಅಂದೆ
“ಅದೇನು ಬೊಗಳು…” ಅಂದ.
“ಆನೆ ಹೊಟ್ಟೇಲಿ ಇರುವೆ ಹೋದರೆ ಹೇಗೆ..” ಅಂದೆ.
ಎರಡು ಸೆಕೆಂಡ್ ಸೂರು ನೋಡಿದ.
“ಆನೆ ಹೊಟ್ಟೇಲಿ ಇರುವೆ ಹೋದರೆ ಅದಕ್ಕೆ ಸ್ವರ್ಗ..’ ಅಂದ.
“ಯಾವುದಕ್ಕೆ ಸ್ವರ್ಗ..? “ಅಂದೆ.
“ಲೂಸ್ ಮುಂಡೇ ದೇ ಯಾವ್ ದಕ್ಕೆ ಅಂದರೆ ಇರುವೆಗೆ…” ಅಂದ!”ವಿಶಾಲವಾಗಿರೋ ಪ್ರಪಂಚದಲ್ಲಿ ಅದು ಒಂದೇ ಓಡಾಡೋದು ಅಂದರೆ….”
ಮೆಮರಿ ಪೂರ್ತಿ ಹೋಗಿಲ್ಲ, ವಂಶದ ಬಳುವಳಿ ಇನ್ನೂ ಇದೆ ಅನಿಸ್ತಾ… ಮುಂದಿನ ಪ್ರಶ್ನೆ ಎಸೆದೆ. “ಇರುವೆ ಹೊಟ್ಟೇಲಿ ಆನೆ ಹೋದರೆ…..” ಅಂತ ಹೇಳಿ ಅವನ ಮುಖ ನೋಡಿದೆ.
“ಹುಚ್ಛ ನೀನು… “ಅಂದ. ಮತ್ತೆ ಕಿಟಕಿಯಿಂದ ಹೊರಗೆ ಶೂನ್ಯ ನೋಟ ಬೀರಿದ.
“ಅದಕ್ಕೆ ನರಕದ ಅನುಭವ…. “ಅಂದ.
“ಆನೆ ಗೋ ಇರುವೆಗೋ….. “ಅಂತ ಸಪ್ಲಿಮೆಂಟರಿ ಎಸೆದೆ.
“ಇನ್ಯಾವುದಕ್ಕೆ ಆನೆಗೆ…..’ ಅಂದ.
“ಸೋಲ್ಪ ಎಕ್ಸ್ ಪ್ಲೈನ್ ಮಾಡ್ತೀಯಾ…”ಅಂತ ರೀಕ್ವೆಸ್ಟ್ ಮಾಡಿದೆ.
“ಆನೆಗೆ ಮೈಕೈ ಎಲ್ಲಾ ತರುಚಿ ನುಗ್ಗು ಮುಗ್ಗು ಆಗಿ ನೋವು ಆಗುತ್ತೆ, ಯಾಕೆ ಹೇಳು? “ಅಂದ!
“ತೆರಿಯಾದಪ್ಪಾ …’ಅಂದೆ. ಅವಾಗವಾಗ ನಾನೂ ಕ್ರಾಕ್ ತರಹ ಆಡ್ತೀನಿ ಅಂತ ನನ್ನನ್ನು ಬಲ್ಲವರು ಹೇಳುವುದುಂಟು. ಈಗ ಅಂತಹ ಒಂದು ಸನ್ನಿವೇಶ..
“ಆನೆ ದಪ್ಪ ಅಲ್ಲವಾ? ಇರುವೆ ಒಳಗೆ ಹೋದಾಗ ಅದರ ಮೈಕೈ ಇರುವೆ ಗೋಡೆಗೆ ಉಜ್ಜಿಕೊಂಡು ಹೋಗಬೇಕು ತಾನೇ….
ಅಂದಹಾಗೆ ನೀನು ಚಿಕ್ಕವನು ಇದ್ದಾಗ ಹೇಗಿದ್ದೆಯೋ ಹಾಗೇ ಇದ್ದಿ… “ಅಂದ!
ಹಳೇ ನೆನಪು ಇವನಿಗೆ ಇದೆ ಅನ್ನಿಸ್ತಾ…
“ಚಿಕ್ಕವನು ಇದ್ದಾಗ ಹೇಗಿದ್ದೆ ನಾನು…? “ಅಂತ ಕೇಳಿದೆ,ಕೇಳಬಾರದಾಗಿತ್ತು ಅಂತ ಅವನ ಉತ್ತರದ ನಂತರ ಅನಿಸಿತು. ಸದ್ಯ ನನ್ನಾಕೆ ನನ್ನ ಸಂಗಡ ಬಂದಿರಲಿಲ್ಲ. ಅವನು ಒಂದು ಒಂದೂವರೆ ಅಥವಾ ಎರಡು ಗಂಟೆ ವಿವರಿಸಿದ ನನ್ನ ಬಾಲ್ಯದ ಜಿಸ್ಟ್ ಅಂದರೆ ನಾನು ದೊಡ್ಡ ಸೆಮಿ ಕ್ರಾಕು, ಇಡೀ ವಂಶದವರ ಎಲ್ಲಾ ಹುಚ್ಚು ಕಾನ್ಸಂಟ್ರೇಷನ್ ಆಗಿ ನನಗೆ ಇದೆ, ನನ್ನ ಮೆದುಳು ಓತಿಕ್ಯಾತ ದ ಮೆದುಳಿನಷ್ಟೇ ಚುರುಕು, ಹುಡುಗಿರು ಅಂದರೆ ಅವರ ಹಿಂದೇನೆ ಇರ್ತೀನಿ, ಇದು ನರ್ಸರಿ ಇಂದ ಬಂದಿರೋ ಅಭ್ಯಾಸ…… ಹೀಗೆ ಹತ್ತು ಹಲವು ಪ್ರಸಂಗ ಪೋಣಿಸಿ ಪೋಣಿಸಿ ದೊಡ್ಡ ಹಾರ ಮಾಡಿಬಿಟ್ಟ..
ತೆಪ್ಪಗೆ ಕಣ್ಣು ಮುಚ್ಚಿ ಕೂತೆ. ಅವನೂ ಬಾಯಿ ಅಗಲಿಸಿ ಸೂರು ನೋಡುತ್ತಾ ಗೊರಕೆ ಹೊಡೆದ.
‘ಗೋಪಾಲೀ ಏಳೋ ಊಟಕ್ಕೆ ….”ಅಂತ ವೆಂಕಟ ಲಕ್ಷ್ಮಿ ಭುಜ ಅಲ್ಲಾಡಿಸಿ ಎಬ್ಬಿಸಿದಳು.
“ಎಲ್ಲಿ ಇವನು ನಿನ್ನ ಗಂಡ….” ಅಂದೆ.
“ಅವರಾಗಲೇ ಕೂತಿದ್ದಾರೆ. ನಿನ್ನ ಗೋಪಾಲೀ
ಹೆಣ ಬಿದ್ಧಹಾಗೆ ಹಾಗೆ ಬಿದ್ದಿದ್ದಾನೆ, ಉಸಿರು ಇದೆಯೋ ಇಲ್ಲವೋ ನೋಡು… ಅವನ ಚಿಕ್ಕಂದಿನ ಅವತಾರ ಅವನಿಗೆ ಹೇಳಿದ್ದೀನಿ ಅಂದರು …”ಅಂತ ನಕ್ಕಳು.
“ನೋಡು ನೀನು ಬಂದಮೇಲೆ ಜಾಸ್ತಿ ಚುರುಕು ಆಗಿ ಬಿಟ್ಟರು . ಇಲ್ಲೇ ಒಂದು ತಿಂಗಳು ಇದ್ ಬಿಡು. ನಿನ್ನ ಹೆಂಡ್ತಿಗೆ ನಾನು ಹೇಳ್ತೀನಿ.. “ಅಂದಳು. ಒಂದು ತಿಂಗಳು ಈ ಕ್ರಾಕಿನ ಜತೆ ಇರೋದು.. ಮೈ ಬೆವತು ಹೋಯ್ತು. “ಅಚ್ಚಿ (ವೆಂಕಟ ಲಕ್ಷ್ಮಿ, ನಮ್ಮ ಬಂಧುಗಳ ಸರ್ಕಲ್ ನಲ್ಲಿ ಅಚ್ಚಿ)ಬಟ್ಟೆ ತಂದಿಲ್ಲ. ಮನೇಲಿ ಸಲ್ಪ ರಿಪೇರಿ ಕೆಲಸ ಬೇರೆ ಇದೆ. ಅದು ಮುಗಿಸಿ ಒಂದು ಲಾರಿ ತುಂಬಾ ಬಟ್ಟೆ ಹೇರಿಕೊಂಡು ಬರ್ತೀನಿ, ಒಂದು ವರ್ಷ ಇಲ್ಲೇ ಟಿಕಾಣಿ.. “ಅಂದೆ. ಮತ್ತೆ ನಕ್ಕಳು.
“ಹೀಗೆ ನಕ್ಕು ಎಷ್ಟೋ ತಿಂಗಳು ಅಲ್ಲ ವರ್ಷವೇ ಆಗಿತ್ತು ಕಣೋ ಗೋಪಾಲೀ ..ಇವತ್ತು ಅದು ನಿನ್ನ ಹತ್ರ ಅಷ್ಟು ಹೊತ್ತು ಮಾತಾಡ್ತಲ್ಲ ಅದರ ಖುಷಿ….” ಅಂದಳು! ಅದು ಅಂದರೆ ಅವಳ ಗಂಡ ಹನುಮ.
“ನಮ್ಮ ಮನೆ ಮತ್ತೆ ಮೊದಲಿನ ಹಾಗೆ ಆದರೆ ನಿನ್ನ ದೊಡ್ಡ ಕಲರ್ ಪೋಟೋ ಹಾಲಿನಲ್ಲಿ ಹಾಕ್ತೀನಿ ಕಣೋ.. “ಅಂದಳು.
“ನನ್ನ ಫೋಟೋ ಯಾಕೆ ನಿನ್ನ ಗಂಡ ಆ ಸುಡುಗಾಡು ಹನುಮಂದು ಹಾಕ್ಕೋ… “ಅಂತ ಮನಸಿನಲ್ಲೇ ಅಂದುಕೊಂಡೆ, ಗಟ್ಟಿಯಾಗಿ ಹೇಳಲು ಬಡ್ಡಿ ಮಗಂದು ಆ ಹಾಳಾದ್ದು ಸೌಜನ್ಯ ಅನ್ನೋದು ಅಡ್ಡ ಬಂತಲ್ಲಾ.
ಆಗಲೇ ಊಟದ ಟೇಬಲ್ಲಿನ ಮುಂದೆ ಕೂತಿದ್ದ. ಎದುರಿಗೇ ತಟ್ಟೆ ಇತ್ತಾ.
“ಬಾ ಕುಕ್ಕರಿಸ್ಕೋ.. “ಅಂದ.
ಕುಕ್ಕರಿಸಿಕೊಂಡೆ.
ಮೊದಲು ಅನ್ನ ಬಡಿಸಿದಳು, ವೆಂಕಟ ಲಕ್ಷ್ಮಿ.
“ಇದೇನು ” ಹನುಮ.
“ಇದು ಅನ್ನ, ಸೋನಾ ಮಸೂರಿ ಅಕ್ಕಿದು ತೊಂಬತ್ತು ಕೇಜಿ…..”ಇದು ವೆಂಕಟ ಲಕ್ಷ್ಮಿ
ಸ್ಟೀಲ್ ಡಬರಿ ಯಲ್ಲಿ ಹುಳಿ, ಅದರಲ್ಲಿ ಸೌಟು ಇಟ್ಟುಕೊಂಡು ಅನಂತಲಕ್ಷ್ಮಿ ಬಂದಳು.
“ಇದೇನು..”ಹನುಮ
“ಇದು ಸ್ಟೀಲ್ ಡಬರಿ,ಅದರಲ್ಲಿ ಹುಳಿ, ಅದನ್ನ ಬಡಿಸೋ ಕ್ಕೆ ಸೌಟು, ಇದೂ ಸ್ಟೀಲ್ ದು….”ಇದು ಅನಂತಲಕ್ಷ್ಮಿ. ಅವಳ ಮುಖದಲ್ಲಿ ನಗು ಇತ್ತು. ಮಾತಿನಲ್ಲಿ ಲೇವಡಿ ಛಾಯೆ, ಅದೂ ಇತ್ತು.
“ಹೂಂ ಒಟ್ಟು, ಅನ್ನದ ಮೇಲೆ. ತಟ್ಟೆಯಿಂದ ಆಚೆ ಸುರಿಬೇಡ….”ಹನುಮ.
ಅನಂತಲಕ್ಷ್ಮಿ “ಆಗಲಿ ಭಾವ. ನಿಮಗೆ ಹೇಗೆ ಬೇಕೋ ಹಾಗೇ ಬಡಿಸ್ತಿನಿ…”ಮಾತಿನಲ್ಲಿ ಲೇವಡಿ ಛಾಯೆ, ಇತ್ತು. ಅನ್ನ ಪಾತಿ ಮಾಡಿಕೊಂಡ, ನಾಲ್ಕು ಸೌಟು ಹಾಕಿದರಾ…
“ಏನು ಹಾಕಿ ಬೇಸಿದ್ರಿ…”ಅಂದ.
“ಹುರುಳಿಕಾಯಿ, ಹಾಪ್ ಕಾಮ್ ಅಂಗಡಿದು, ಗೋರಿಕಾಯಿ ಮುನಿಯಮ್ಮ ಅಂಗಡಿದು, ಆಲೂಗೆಡ್ಡೆ ಭಾಷಾ ಕೈಗಾಡಿದು. ಕಾವೇರಿ ನೀರಲ್ಲಿ ಬೇಯಿ ಸಿದ್ದು, ಹುಳಿ ಪುಡಿ ಸುಬ್ಬಮ್ಮನ ಅಂಗಡಿ, ಒಗ್ಗರಣೆ ಸಾಸಿವೆ ಸುಲೇಮಾನ್ ಅಂಗಡಿದು……”ಇದು ಅನಂತಲಕ್ಷ್ಮಿ.ಮಾತಿನಲ್ಲಿ ಲೇವಡಿ ಛಾಯೆ, ಅದೂ ಇತ್ತು.
“ಸಾಕು, ಹರಿಕತೆ ಕೇಳಲಿಲ್ಲ.. ನಾನು..”ಹನುಮ.
“ಅವಳೂ ಏನು ಹರಿಕತೆ ಮಾಡ್ತಿಲ್ಲ….”ಇದು ವೆಂಕಟ ಲಕ್ಷ್ಮಿ.
ನನಗೋ ಮಾತಾಡಲೋ ಬೇಡವೋ ಎನ್ನುವ ಸಂದಿಗ್ಧ! ತೆಪ್ಪಗೆ ಕೂತೆ. ಹಾಕಿದ್ದನ್ನು ತಿಂದೆ. ಪಾಪ ಹನುಮ ಅನಿಸಿತು. ಒಂದು ಕಡೆ ಹೆಂಡತಿ, ಮತ್ತೊಂದು ಕಡೆ ನಾದಿನಿ ಅವನ ಪ್ರಾಣ ತೆಗೀತಾ ಇದಾರೆ ಅನಿಸಬೇಕೆ… ಇನ್ನೂ ಇಬ್ಬರು ಸೇರಿಬಿಟ್ರೆ ಇವನಿಗೆ ನರಕ ಅಂತ ಅನಿಸಿತು.
ಸಾರು, ಮೊಸರು, ಉಪ್ಪಿನ ಕಾಯಿ ತಿನ್ನಬೇಕಾದರೂ ಮೇಲಿನ ಎಲ್ಲಾ ಪ್ರಕ್ರಿಯೆ ರಿಪೀಟ್ ಆದವು. ಇದು ಏನು ಅಂತ ಪ್ರಶ್ನೆ, ಅದು ಏನು ಮತ್ತು ಎಲ್ಲೆಲ್ಲಿಂದ ತಂದರು ಎನ್ನುವ ಉತ್ತರ.ತಲೆ ಬಗ್ಗಿಸಿ ಮೊಸರನ್ನ ಒಂದು ತುತ್ತು ತಿಂದಿದ್ದೇನಾ.. ಬೆನ್ನ ಮೇಲೆ ಯಾರೋ ಬಾರಿಸಿದ ಹಾಗೆ ಆಯಿತು.
“ಏನೋ ಗೋಪೂ, ಎಷ್ಟು ದಿವಸ ಆಯ್ತೋ ನಿನ್ನೋಡಿ… ಭಾವನ್ನ ನೋಡಕ್ಕೆ ಬಂದ್ಯಾ. ಅದಕ್ಕೇ ಭಾವ ಇವತ್ತೇನು ಮೋಡದ ಮೇಲೆ ತೇಲಾಡ್ತಾ ಕೂತಿದೆಯಂತೆ….”ಗಂಟಲಿಗೆ ಅನ್ನ ಸಿಕ್ಕಿಕೊಂಡು ನೆತ್ತಿ ಹತ್ತಿತು. ನೀರು ಕುಡಿದು ಬೆನ್ನಿಗೆ ಬಾರಿಸಿದವರು ಯಾರು ಅಂತ ನೋಡಿದರೆ ಸುಬ್ಬುಲಕ್ಷ್ಮಿ.ಅಕ್ಕ ತಂಗಿ ನನಗೆ ಕಜಿನ್ಸು, ಇವರ ಮಧ್ಯದವಳು ಒಬ್ಬಳು ಇದಾಳೆ, ಸುಬ್ಬುಲಕ್ಷ್ಮಿ, ಅಂತ ಅವಳ ಹೆಸರು ಅಂತ ಹೇಳಿದ್ದೆ ತಾನೇ? ಅವಳೇ ಇವಳು!
“….ನೀನು ಭಾವ ಮಾತಾಡಿದ್ದು ಎಲ್ಲಾನೂ ವೆಂಕಿ, ಅನಂತಿ ಕೇಳಿಸಿಕೊಂಡಿದ್ದಾರೆ ಕಣೋ. ಎಂತಹ ಕಲರ್ ಫುಲ್ ಲೈಪೋ ನಿಂದು… ಇನ್ನೊಂದು ಸಲ ಫುಲ್ ಫ್ರೀ ಮಾಡಿಕೊಂಡು ಕೇಳಬೇಕು ಅನಿಸ್ತಾ ಇದೆ. ನಿನ್ನ ಹೆಂಡತಿನೂ ಕರ್ಕೊಂಡು ಬಾ.ನಿನ್ನ ಪ್ರಿ ವೆಡಿಂಗ್ ಹಿಸ್ಟರಿ ತುಂಬಾ ಅಂದರೆ ತುಂಬಾ ಇಂಟರೆಸ್ಟಿಂಗ್ ಕೇಳೋಣ…. “ಅಂತ ಬಾಯಿ ಅಗಲ ಮಾಡಿ ನಲವತ್ತು ಹಲ್ಲೂ ಕಾಣಿಸೋ ಹಾಗೆ ಸುಬ್ಬಿ ನಕ್ಕಳು. ಸುಬ್ಬಲಕ್ಷ್ಮಿ ಈಗ ಸುಬ್ಬಿ ಆದಳು , ನನ್ನ ತಂಟೆಗೆ ಬಂದರೆ ಬಿಡ್ತೀನಾ?
“ಅಂದಹಾಗೆ ಗೋಪು, ಚಂಪಕ ಯಾರೋ…”
ಹನುಮ ಬೆಳಿಗ್ಗೆ ತಿಂಡಿ ಆದ ಮೇಲೆ ಎರಡು ಗಂಟೆ ನನ್ನ ಬಾಲ ವಿನೋದ ವರ್ಣಿಸಿದ ಅಂತ ಹೇಳಿದ್ದೆ ಅಲ್ವಾ? ಆ ವಿನೋದದಲ್ಲಿ ಈ ಚಂಪಕ ಒಂದು ಕ್ಯಾ ರಕ್ಟರು. ನನ್ನ ಅಂದಿನ ಜೀವನದ ಒಂದು ಲೇಡಿ ಕ್ಯಾರಕ್ಟರು. ಆಗಿನ ಹಲವು ಒನ್ ವೆ ಲೋವ್ ಗಳಲ್ಲಿ ಚಂಪಕ ಸಹ ಒಬ್ಬಳು. ಇಂತಹ ಹಲವು ಹತ್ತು ಊಹೂಂ ನೂರು ಚಂಪಕಗಳು ನನ್ನ ಹಿಸ್ಟರಿಯಲ್ಲಿ ಬರುತ್ತವೆ…!
ಹನುಮಂಗೆ ಶೂಟ್ ಮಾಡಬೇಕು ಅನಿಸ್ತು. ಪೆಚ್ಚು ಪೆಚ್ಚಾಗಿ ನಕ್ಕೆ. ಇನ್ನೊಂದೆರಡು ದಿವಸ ಇಲ್ಲಿದ್ದರೆ ಅದೆಷ್ಟು ನನ್ನ ರಹಸ್ಯ ಆಚೆ ಬರುತ್ತೋ ಅದೆಷ್ಟು ನನ್ನ ಸಂಸಾರದಲ್ಲಿ ಧೂಳೀಪಟ ಮಾಡುತ್ತೋ ಎನ್ನುವ ಅವ್ಯಕ್ತ ಭಯ ಶುರುವಾಗಬೇಕೇ…! ಕೈ ತೊಳೆದು ವಾಶ್ ಬೇಸಿನ್ ನಿಂದ ಇತ್ತ ಬಂದೆ.
“ಶೂರ್ಪನಖಿ ಯಾವಾಗ ಬಂದಳು, ಇಷ್ಟು ಹೊತ್ತೂ ಅವಳ ಸುದ್ದಿ ಇರಲಿಲ್ಲ…..”ಹನುಮನ ದನಿ!
“ನೋಡಿ ನನ್ನ ತಂಗೀರ್ನ ಶೂರ್ಪನಖಿ, ಹಿಡಿಂಬೆ ಅಂತೆಲ್ಲಾ ಕರೆದರೆ ನಾನು ಸುಮ್ನಿರೋಲ್ಲ…. ನಾಲಿಗೆ ಬಿದ್ದೋಗುತ್ತೆ ಅಷ್ಟೇ. ನೀವು ಅವಾಗವಾಗ ಸಾಲ ಮಾಡಿಕೊಂಡು ಬಂದಾಗಲೆಲ್ಲ ಗಂಡಂಗೆ ಹೇಳಿ ನಮ್ಮ ಸುಬ್ಬಿ ದುಡ್ಡು ಕೊಡಿಸಿರಲಿಲ್ಲ ಅಂದರೆ ನೀವು ಜೈಲಲ್ಲಿ ರಾಗಿ ಬೀಸ್ತಾ ಬಿದ್ದಿರಬೇಕಿತ್ತು…..”ಇದು ವೆಂಕಿ..!
“ಹೋಗಿ ಸ್ವಲ್ಪ ಹೊತ್ತು ಮಲಕ್ಕೊಳ್ಳೋ ಗೋಪಾಲೀ. ಅದೂ ಹಂಗೇ ಬಿದ್ದಿರುತ್ತೆ. ಕಾಫಿ ಮಾಡಿ ಎಬ್ಬಿಸ್ತಿ ನಿ….”
ಮೂರೂ ಜನ ಊಟಕ್ಕೆ ಕೂತರು. ಇನ್ನೊಬ್ಬಳು ಬಂದಿಲ್ಲ, ಅವಳೇ ಹಿಡಿಂಬೆ ಇರಬೇಕು! ಹನುಮ ರೂಮು ಸೇರಿದ ಹದಿನೈದು ನಿಮಿಷಕ್ಕೆ ನಾನೂ ರೂಮು ಹೊಕ್ಕೆ. ಕತ್ತೆ ಭಡವ ಮಲಗಿರುತ್ತಾನೆ ಅಂದು ಕೊಂಡೆ.
ಕತ್ತೆ ಭಡವ ಕುರ್ಚಿ ಮೇಲೆ ಕೂತಿತ್ತು! ನನ್ನನ್ನೇ ಕಾಯುತ್ತಿತ್ತಾ..
ಮಂಚದ ಮೇಲೆ ಬೆನ್ನು ಒರಗಿಸಿದೆ.
“ಗಡವಾ, ಎದ್ದಿರು. ಮಲಗ ಬೇಡ…”ಅಂದ.
“ನೀನೂ ಮಲಗು, ತಲೆ ಬಿಸಿಯಾಗಿದೆ….”ಅಂದೆ.
“ತಲೆ ಬಿಸಿ ನನಗಾ? ಆಟ ಆಟ ಆಡಿಸಿ ಬಿಸಾಕ್ತಿನಿ….”ಅಂದ.
ಹನುಮ ನಾರ್ಮಲ್ ಆದ ಅನ್ನುವ ಭಾವನೆ ಬಂತು.
“ಒಂದು ದೊಡ್ಡ ಪಾರಮಾರ್ಥಿಕ ಜಿಜ್ಞಾಸೆ ಶುರು ಆಗಿದೆ ಕಣೋ ಗೋಪಿ. ಐ ಆಮ್ ಪಾಸಿಂಗ್ ತ್ರೂ ಎ ಟಾರ್ಮಆಯಲ್(Turmoil…)”ಅಂದ, ಕಣ್ಣಲ್ಲಿ ಎರಡು ಹನಿ ಉದುರಿದ ಹಾಗೆ ಕಂಡಿತು.
ಕೋತಿ ನನ್ಮಗ ನಾರ್ಮಲ್ ಕಂಡೀಶನ್ ನಲ್ಲಿ ಅಂದರೆ ಈ ಮರವೇ ರೋಗ ಅಮರಿಕೊಳ್ಳುವ ಮೊದಲು ಹೀಗೇ ನನ್ನ ಹತ್ತಿರ ಕೊರೆತ ಶುರು ಮಾಡ್ತಾ ಇದ್ದದ್ದು. ಒಟ್ಟೊಟ್ಟಿಗೆ ಒಂದು ವಾರ ಕೊರೆದು ಕೊರೆದೂ ಬಿಸಾಕಿ ಬಿಡ್ತಾ ಇದ್ದ.ನಂತರ ಅವನ ತಲೆ ಕಸ ನನಗೆ ಟ್ರಾನ್ಸ್ಫರ್ ಮಾಡಿ ಅವನು ನಿರಾಳ ಆಗಿ ಬಿಡ್ತಿದ್ದ. ಈಗ ಅವನ ರೋಗ ನನಗೆ ಟ್ರಾನ್ಸ್ಫರ್ ಮಾಡಿಬಿಡ್ತಾನಾ?
“”ಸರಿ ಸರಿ ಈಗ ಮಲಕ್ಕೋ ಹನುಮು . ಇನ್ನೂ ಇರ್ತಿನಲ್ಲಾ ಆಗ ಇದೆಲ್ಲಾ ಮಾತಾಡಿದ್ರೆ ಆಯ್ತು….”ಅಂದೆ.
“ಇಲ್ಲ, ಗೋಪಿ ಈಗಲೇ ಅದನ್ನ ಮಾತಾಡಿ ಬಿಡೋಣ… ಎಷ್ಟು ವರ್ಷ ಇದನ್ನು ತಲೇಲಿ ಇಟ್ಕೊಂಡು ಕೊರಗ್ಲಿ……”ಕಣ್ಣಿನಿಂದ ನೀರು ಬಳ ಬಳ ಸುರಿಯಿತು.
ಕಣ್ಣಿನಿಂದ ನೀರು ಬಳ ಬಳ ಸುರಿಯಬೇಕಾದರೆ ಎಂತಹ ಕಲ್ಲು ಹೃದಯವೂ ಸಹ ಕರಗಿ ನೀ ರಾಗಬೇಕು ತಾನೇ? ನನಗೂ ಅದೇ ಆಗಿದ್ದು. ಇಬ್ಬರೂ ಎದುರು ಬದುರು ಕುರ್ಚಿ ಹಾಕಿಕೊಂಡು ಕೂತೆವು. ಹಿಂದೆ ಹೀಗೆ ಕೂತ ಸಂದರ್ಭದಲ್ಲಿ ಮಧ್ಯೆ ಒಂದು ಟೇಬಲ್ಲು ಬಾಟಲಿ ಚಿಪ್ಸ್ ಇರುತ್ತಿತ್ತು. ಈಗ ಬದಲಾದ ಪರಿಸ್ಥಿತಿ. ಹಳೇದು ಬರೀ ನೆನಪು ತಾನೇ?
ಹನುಮು ಮಾತು ಶುರು ಮಾಡಿದ..
” ಸತ್ತ ಮೇಲೆ ನಾವು ಏನಾಗ್ತೀವಿ…”, ಇದು ಹನುಮ
“ನಾವು ಹೆಣ ಆಗ್ತೀವಿ, ನಮ್ಮ ಪಂಗಡದಲ್ಲಿ ನಮ್ಮನ್ನು ಸುಡು ತ್ತಾರೆ….”ಇದು ನಾನು
“ನಾನು ನಮ್ಮ ಆತ್ಮದ ವಿಷಯ ಮಾತಾಡ್ತಾ ಇರೋದು..”ಇದು ಹನುಮ
ಮುಂಡೆದಕ್ಕೆ ಕ್ರಾ ಕ್ ತನ ಇನ್ನೂ ಹಾಗೇ ಇದೆ ಅನ್ನಿಸ್ತಾ…
“ಆತ್ಮದ ಕಾನ್ಸೆಪ್ಟ್ ಒಂದೊಂದು ಧರ್ಮದಲ್ಲಿ ಒಂದೊಂದು ರೀತಿ….”ಇದು ನಾನು
“ತೆಪ್ಪಗೆ ಬಾಯಿ ಮುಚ್ಚಿಕೊಂಡು ಕುಕ್ಕರಿಸ್ಕೂ ತೀಯ? ನಾನು ಹೇಳೋದು ಕೇಳಿಸ್ಕೋ ಮೊದ್ಲು…..”ಅಂದ.
ಸರಿ ಅಂತ ತಲೆ ಆಡಿಸಿದೆ. ಹುಚ್ಚು ಮುಂಡೇದು ತಲೆ ಗಿಲೆ ಒಡೆದು ಹಾಕಿ ಬಿಟ್ಟರೆ….!
“ನಾವು ಸತ್ತಮೇಲೆ ದೇವರ ಹತ್ರ ಹೋಗ್ತೀವಿ… ಬಾಯಿ ಮುಚ್ಚಿಕೊಂಡು ಹೇಳಿದ್ದು ಕೇಳಿಸ್ಕೋ……”
ನಾನು ಎಲ್ಲರೂ ದೇವರ ಹತ್ತಿರ ಹೋಗಲ್ಲ, ಅದರಲ್ಲೂ ನೀನು ಹೋಗೋದೆ ಇಲ್ಲ ಅಂತ ಹೇಳಲು ಬಾಯಿ ತೆಗೆದಿದ್ದೆ, ತಡೆದ ಮತ್ತು ನಾನೂ ತಡಕೊಂಡೆ.
ಅವನು ಮುಂದುವರೆಸಿದ “ನಾವು ಸತ್ತಮೇಲೆ ದೇವರ ಹತ್ರ ಹೋಗ್ತೀವಿ. ಮೊದಲು ಯಮರಾಜ ನ ಹತ್ತಿರ ನಾವು ಹೋಗೋದು. ಆಲ್ಲಿ ಎಲ್ಲಾ ಪರೀಕ್ಷೆ ಪಾಸ್ ಆದರೆ ನೆಕ್ಸ್ಟು ದೇವೇಂದ್ರ ನ ಹತ್ರ….ಬಾಯಿ ಮುಚ್ಚಿಕೊಂಡು ಹೇಳಿದ್ದು ಕೇಳಿ ಸ್ಕೋ…..”ಈಗಲೂ ಬಾಯಿ ತೆಗೆದಿದ್ದೆ. ಅವನ ತಿಳುವಳಿಕೆ ತಪ್ಪು ಅಂತ ಹೇಳ ಬೇಕಿತ್ತು.
ಮತ್ತೆ ಅವನು ಶುರು ಮಾಡಿದ..”ಆಲ್ಲಿ ಎಲ್ಲಾ ಪರೀಕ್ಷೆ ಪಾಸ್ ಆದರೆ ನೆಕ್ಸ್ಟು ದೇವೇಂದ್ರ ನ ಹತ್ರ ಕಳಿಸ್ತಾರೆ. ಯಮರಾಜ ನಮ್ಮ ಒಂದೊಂದು ನಡೆನೂ ಸ್ಕ್ಯಾನ್ ಮಾಡ್ತಾನೆ. ಹೆಂಡತಿಗೆ ಒಬಿಡಿಯೆಂಟ್ ಆಗಿದ್ನಾ?
ಆಗಿದ್ದ ಅಂತ ಟಿಕ್ ಮಾಡ್ತಾನೆ…
“ಹೆಂಡತಿ ತಂಗಿಯರನ್ನು ಸರಿಯಾಗಿ ಮರ್ಯಾದೆಯಿಂದ ನೋಡಿಕೊಂಡನಾ… ನೋಡಿಕೊಂಡ ಅಂತ ಟಿಕ್ ಮಾಡ್ತಾನೆ…
ತೆಪ್ಪಗೆ ಕೂತ್ಕೋ ಅಂತ ಹೇಳಿದೆ ತಾನೇ? ತೆಪ್ಪಗೆ ಕೂತ್ಕೋ…..”
ಯಮರಾಜನಿಗೆ ಇದಕ್ಕಿನ್ನ ಬೇರೆ ಕೆಲಸ ಇದೆ ಕಣೋ ಹನುಮ ಅಂತ ಹೇಳಕ್ಕೆ ಹೊರಟಿದ್ದೆ. ಸರಿ ಅವನ ಆರ್ಡರ್ ಆಯ್ತಲ್ಲಾ, ಸುಮ್ನೆ ಕೂತೆ. ಅವನು ಮುಂದಕ್ಕೆ ಹೊರಟ
“ಏನು ಹೇಳ್ತಾ ಇದ್ದೆ?ಹೆಂಡತಿ ತಂಗಿಯರನ್ನು ಸರಿಯಾಗಿ ಮರ್ಯಾದೆಯಿಂದ ನೋಡಿಕೊಂಡನಾ… ನೋಡಿಕೊಂಡ ಅಂತ ಟಿಕ್ ಮಾಡ್ತಾನೆ… ಅಂತ ಹೇಳಿದೆ ತಾನೇ? ಹೀಗೇ ಕೆಲವು ಚೆಕ್ ಪಾಯಿಂಟ್ಸು ಇರ್ತಾವೆ. ಮಾಡಿ ಹಾಕಿದ್ದು ತೆಪ್ಪಗೆ ತಿಂದನಾ, ಹೆಂಡತಿನ ಶಾಪಿಂಗ್ ಕರಕೊಂಡು ಹೋಗ್ತಾ ಇದ್ದನಾ, ಅತ್ತೆ ಮಾವನ ತೀರ್ಥ ಯಾತ್ರೆ ಮಾಡಿಸಿದ್ನಾ… ಹೀಗೆ ಕಣಯ್ಯಾ ಚೆಕ್ ಪಾಯಿಂಟ್ಸು …..
“ಎಲ್ಲಾ ದರಲ್ಲೂ ಪಾಸ್ ಆಗಿಬಿಡ್ತಿವಿ, ಆಮೇಲೆ ದೇವೇಂದ್ರನ ಹತ್ತಿರ ಫೈನಲ್ ವೈವಾ ವೋಸಿ ಇರುತ್ತೆ. ಅವನು ಏನು ಮಾಡ್ತಾನೆ ಅಂದ್ರೆ…… ತೆಪ್ಪಗೆ ಕುಕ್ಕರಿಸ್ಕೋ ಅಂತ ಹೇಳಿದೆ ತಾನೇ? ತೆಪ್ಪಗಿರು……”ಅಂದ. ಹಾಗೆ ನೋಡಿದರೆ ನಾನು ನಗು ತಡೆದು ಕೊಳ್ಳಲು ಹೋಗಿ ಗಂಟಲು ಹತ್ತಿಕೊಂಡು ಕೆಮ್ಮು ಶುರು ಆಗಿತ್ತು..
ಅವನು ಮುಂದುವರೆಸಿದ”….. ದೇವೇಂದ್ರ ಸುಮ್ಮನೆ ಹಾಗೇ ಒಳಗೆ ಬಿಟ್ಟರೆ ಅವನ ಪೊಸಿಷನ್ ವೀಕ್ ಆಗುತ್ತೆ ತಾನೇ? ಅವನೂ ಯಮರಾಜ ಕೇಳದೆ ಇರೋ ಪ್ರಶ್ನೆ ಕೇಳ್ತಾನೆ…….”
ತಲೆ ಪೂರ್ತಿ ಗಿರ್ ಗಿರ್ ಅಂದು ಮೆದುಳು ಒಳಗೇ ತಿರುಗುತ್ತಾ ಇತ್ತು…. ರೂಮಿನಿಂದ ಆಚೆ ಓಡಿ ಹೋದರೆ ಹೇಗೆ ಅನಿಸಿತು. ಕುರ್ಚಿಯಿಂದ ಮೇಲೆ ಏಳುವ ಪ್ರಯತ್ನ ಪಟ್ಟೆ..
“ತೆಪ್ಪಗೆ ಕುಕ್ಕರ್ಷಿಕೊಂಡು ಬೊಗಳೊದ ನ್ನು ಕೇಳು ಅಂದೆ. ಇಲ್ಲಾಂದರೆ ಸೊಂಟ ಮುರಿದು ಕೂಡಿಸ್ತೇನೆ…”ಅಂದ.
ಈ ಕತೆಯ ಬಿಗಿನಿಂಗ್ ನಲ್ಲಿ ನಿಮಗೆ ಒಂದು ಮಾತು ಹೇಳಿದ್ದೆ, ನೆನಪಿದೆ ತಾನೇ?ಎಲ್ಲಾ ಸಂಸಾರಗಳಲ್ಲಿ ಸೀಬೈಟೂ ಗಳು ಇರ್ತಾವೆ ಅಂತ ಹೇಳಿದ್ದೆ ತಾನೇ? ಅವನು ತಿಕ್ಕಲು ತಿರುಗಿ ಸೊಂಟ ಮುರಿಯೋದು, ನಾನು ಇವನ ಪಕ್ಕ ಮಲಗಿ ಅದೆಷ್ಟೋ ತಿಂಗಳು ಕೊರೆತಕ್ಕೆ ಒಳಗಾಗೋದು ಬೇಡ ಅನಿಸಿತು. ಕ್ರ್ಯಾಕ್ ಮುಂಡೇದು ಅದೇನು ಹೇಳುತ್ತೋ ಬೊಗಳಲಿ ಅಂತ ನಿರ್ಧರಿಸಿದೆ.
“ಹೇಳು ಹನುಮ, ನಿದ್ದೆ ಬರೋ ಹಂಗೇ ಆಯ್ತು ಅದಕ್ಕೆ ಮೈಕೈ ಸಡಿಲ ಮಾಡಿದೆ ಅಷ್ಟೇ…….”ಅಂದೆ.
“ಯಮರಾಜ ಕೇಳದೆ ಇರೋ ಪ್ರಶ್ನೆ ದೇವೇಂದ್ರ ಕೇಳ್ತಾನೆ ಅಂತ ಹೇಳಿದೆ ತಾನೇ? ಅಂತಹ ಒಂದು ಕ್ವೇಶ್ಚನ್ ಬುಕ್ಕು ಅವನ ಹತ್ರ ಇರುತ್ತೆ. ಬೆಳಿಗ್ಗೆ ಏನು ತಿಂಡಿ ತಿಂದೆ ಅಂತ ಕೇಳ್ತಾನೆ. ಮನೇಲಿ ನಿನಗೆ ತಿಂಡಿ ಕೊಟ್ಟವರು ಉಪ್ಪಿಟ್ಟು ಮಾಡಿ ಮಸಾಲೆ ದೋಸೆ ಅಂತ ನಿನಗೆ ಕೊಟ್ಟು ಬಿಟ್ಟಿದ್ದರೆ ಆಗ ನೀನು ಉಪ್ಪಿಟ್ಟು ತಿಂದೆ ಅಂದರೆ ಅದು ಸುಳ್ಳಾಗಿ ಬಿಡುತ್ತೆ.ದೇವರ ಬಳಿ ಸುಳ್ಳೇ ? ದೇವೇಂದ್ರ ಪರೀಕ್ಷೇಲಿ ಫೈಲ್ ಮಾಡಿ ಬಿಡ್ತಾನೆ. ಹೌದೋ ಅಲ್ಲವೋ?…’
“ಹೌದು….”ಅಂದೆ.
“ಹೂಂ ಗೊತ್ತಾಯ್ತಾ? ನೀನು ಏನೇ ತಿಂದರೂ ಅದು ಏನು ಅಂತ ಕೊಡ್ತಾ ಇದ್ದಾರೆ ಅಂತ ಕನ್ಫರ್ಮ್ ಮಾಡಿಕೋ ಬೇಕು…..”
ರೂಮಿನ ಆಚೆಯಿಂದ ಒಂದು ಕೋರಸ್ ನಗು ಶಬ್ದ ಕೇಳಬೇಕೇ? ಅದರ ಹಿಂದೆಯೇ ಆನಂತಲಕ್ಷ್ಮಿ, ಶನಿ, ಶೂರ್ಪನಖಿ, ಹಿಡಿಂಬೆ ಯರು ಹೊಟ್ಟೆ ಹಿಡಕೊಂಡು ನಗು ತಡೆದು ಕೊಳ್ತಾ ಒಳ ಬರಬೇಕೇ…?
“ಬಾಗಿಲು ಮುಚ್ಚಿ ಚಿಲಕ ಹಾಕು ಅಂತ ಹೇಳಿದ್ದೆ ತಾನೇ ನಿನಗೆ?…….”ಅಂತ ಹನುಮ ಮಂಚದ ಪಕ್ಕ ಇದ್ದ ಚೊಂಬು ಕೈಗೆ ತೆಗೆದುಕೊಳ್ಳಲು ಕೈ ಚಾಚಿದ. ಹಿಡಿಂಬೆ ಅವನ ಕೈ ಗಟ್ಟಿಯಾಗಿ ಹಿಡಿದಳು……
ನಾನು ಅದು ಹೇಗೋ ರೂಮಿನಿಂದ ಆಚೆ ಬಂದು ಓಡಿ ಓಡಿ ಬಸ್ ಸ್ಟಾಪ್ ಗೆ ಬಂದೆ…..!
ಮುಂದಿನ ಸಲ ಮುಂದೇನಾಯ್ತು ಅಂತ ವರದಿ ಒಪ್ಪಿಸ್ತೇನೆ.
ಎಚ್. ಗೋಪಾಲಕೃಷ್ಣ
ಸೊಗಸಾಗಿದೆ ಮತ್ತು ಆಕರ್ಷಕವಾಗಿದೆ.
ಧನ್ಯವಾದಗಳು
ಪ್ರಸನ್ನ ಕುಮಾರ್
ಧನ್ಯವಾದಗಳು, ಪ್ರಸನ್ನ ಕುಮಾರ್