“ಜೀವನ ಧರ್ಮ” ಜಯಲಕ್ಷ್ಮಿ ಕೆ. ಅವರ ಲೇಖನ

ಪಂಚತಂತ್ರ ಕತೆಗಳಲ್ಲಿ  ” ಧರ್ಮದಿಂ ಜೀವಿಪುದೇ ನನ್ನ ಧರ್ಮ ” ಎಂಬುದಾಗಿ ದುರ್ಗಸಿಂಹ ವನ್ಯ ಪ್ರಾಣಿಗಳ ಮುಖಾಂತರ ಹೇಳಿದ್ದಾನೆ. ಅರಣ್ಯ ವಾಸಿಗಳಾದ ಪ್ರಾಣಿಗಳಲ್ಲಿ ಕೂಡಾ ಜೀವನ ಧರ್ಮ ಎನ್ನುವ ಅಂಶ ಹಾಸುಹೊಕ್ಕಾಗಿತ್ತು ಎನ್ನುವುದನ್ನು ಪುಷ್ಟೀಕರಿಸುವ ಹಲವಾರು ಕಥೆಗಳನ್ನು ನಾವು ಓದಿದ್ದೇವೆ. ನಿದರ್ಶನಗಳನ್ನು ನೋಡಿದ್ದೇವೆ. ಧರ್ಮ ಎನ್ನುವ ಶಬ್ಧಕ್ಕೆ ವಿಶಾಲವಾದ ಅರ್ಥ ಉಂಟು. ಧರ್ಮದ ಅಡಿಗಲ್ಲಿನಲ್ಲಿಯೇ ನಾವೆಲ್ಲರೂ ಬದುಕು ಕಟ್ಟಿಕೊಂಡಿದ್ದೇವೆ.

ಧರ್ಮ ಒಂದು ಜೀವನ ಕ್ರಮ. ಮಾನವ ಜನ್ಮದ ಸಾರ್ಥಕತೆಗೆ ಇದು ಅತ್ಯಾವಶ್ಯ. ಧರ್ಮ ಎನ್ನುವ ಪದ ಎಂದಿಗೂ ನಮಗೆ ಕಿರಿಕಿರಿ ಉಂಟುಮಾಡುವುದಿಲ್ಲ. ಏಕೆಂದರೆ ಅಲ್ಲಿ ನೈತಿಕ ಭಯವಿದೆ. ಅದ್ಯಾತ್ಮ ಚಿಂತನೆಯಿದೆ. ಅದು ಲೋಕಕಲ್ಯಾಣದ ಚಾಲಕ ಶಕ್ತಿ. ಮಾನವತೆಗೆ ಆ ಪದದಲ್ಲಿ ಆದ್ಯತೆ ಹೆಚ್ಚು. ಆದರೆ ಧರ್ಮದ ಜೊತೆಗೆ ಜಾತಿ, ಮತ-ಪಂಥ, ಕೋಮು ಇತ್ಯಾದಿ ಸೇರಿದಾಗ ಆ ಪದಗಳ ಅರ್ಥ ವ್ಯತ್ಯಾಸ ತಿಳಿಯದ ಕೆಲವರು ಧರ್ಮ ಎನ್ನುವ ವಿಶಾಲವಾದ ಪದವನ್ನು ಸಂಕುಚಿತವಾಗಿ ಅರ್ಥೈಸುವುದುಂಟು. ಆಗ ಅಲ್ಲೊಂದು ಇಲ್ಲೊಂದು ಅಮಾನವೀಯ ನಡವಳಿಕೆಗಳು ಇಣುಕು ಹಾಕುತ್ತವೆ. ಪರಸ್ಪರರಲ್ಲಿ ಅಪನಂಬಿಕೆ, ಭಯ, ಕಳವಳ, ಅನಾರೋಗ್ಯಕರ ಸ್ಪರ್ಧೆಗಳು ಹುಟ್ಟಿಕೊಳ್ಳುತ್ತವೆ.’ನಾನು ‘ ಎನ್ನುವ ಅಹಂಭಾವ ತಲೆದೋರಿ ಛಲದ ಬದುಕಿಗೆ ಅದೇ ನಾಂದಿಯಾಗುತ್ತದೆ. ತಾನು ಸಮಾಜದ ಒಂದು ಅಂಗ, ತನ್ನ ವರ್ತನೆ ಇಡೀ ಸಮಾಜದ ಸ್ವಾಸ್ಥ್ಯ ವನ್ನು ಕೆಡಿಸಬಹುದು ಎನ್ನುವ ಚಿಂತನೆ ಮರೆಯಾಗುತ್ತದೆ.


ಇತ್ತೀಚೆಗೆ ಜಾತಿ ಮತ್ತು ಕೋಮು ಎನ್ನುವ ಎರಡು ಅಧರ್ಮಗಳು ‘ಧರ್ಮ ‘ ಎನ್ನುವ ಪದದ ಪಾವಿತ್ರ್ಯತೆಗೇ ಕೊಡಲಿಯೇಟು ಹಾಕುತ್ತಿವೆ. ಜೀವನ ಧರ್ಮಕ್ಕೆ ಕಳಂಕ ಹಚ್ಚುತ್ತಿವೆ. ಸ್ವಾರ್ಥ, ಜಗಳ, ರಕ್ತಪಾತ, ಸಂಬಂಧಗಳ ಬಿರುಕಿಗೂ ಕಾರಣೀಭೂತವಾಗುತ್ತಿದೆ.  ಮಾನವ ಕುಲಕ್ಕಂಟಿದ ‘ಜಾತಿ ‘ ಎನ್ನುವ ಶಾಪ ವಿಮೋಚನೆ ಆಗುವವರೆಗೂ ನಮ್ಮದು ಜಾತ್ಯತೀತ ರಾಷ್ಟ್ರ ಎನ್ನುವ ಹೆಗ್ಗಳಿಕೆಗಾಗಲೀ, ವಿವಿಧತೆಯಲ್ಲಿ ಏಕತೆ ಎನ್ನುವ ಸಂಸ್ಕೃತಿಯ ಸಾರಕ್ಕಾಗಲೀ ಅರ್ಥ ಬರುವುದಿಲ್ಲ.ನಮ್ಮದು ಬಹು ಧರ್ಮಗಳ ರಾಷ್ಟ್ರ. ಆದರೆ ಜೀವನ ಧರ್ಮ ಎನ್ನುವುದು ಎಲ್ಲರಿಗೂ ಒಂದೇ. ರಾಷ್ಟ್ರೀಯ ಹಬ್ಬಗಳನ್ನು ಜಾತಿ ಮತ ಭೇಧಗಳ ಹಂಗಿಲ್ಲದೆ ಮಂದಿರ ಮಸೀದಿ ಚರ್ಚುಗಳಲ್ಲಿ ಆಚರಿಸುವ ನಾವುಗಳು ನಾಡಹಬ್ಬಗಳನ್ನು, ಊರ ಜಾತ್ರೆ -ಉತ್ಸವಗಳನ್ನು, ಹಬ್ಬ -ಹರಿದಿನಗಳನ್ನು, ಪೂಜೆ -ಪುನಸ್ಕಾರಗಳನ್ನು ಯಾರ ಮನಸಿಗೂ ಘಾಸಿಯಾಗದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಿದೆ. ಯಾರ ಭಾವನೆಗಳೂ ಕಲುಷಿತಗೊಳ್ಳದ ರೀತಿಯಲ್ಲಿ ಎಚ್ಚರ ವಹಿಸುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನಿಗೂ ಇದೆ. ” ಒಬ್ಬ ಎಲ್ಲರಿಗಾಗಿ : ಎಲ್ಲರೂ ಒಬ್ಬರಿಗಾಗಿ ” ಎನ್ನುವ ಮಾತಿನ ಮರ್ಮವೂ ಇದೇ.

ಬಹಳ ವರ್ಷಗಳ ಹಿಂದಿನ ಮಾತು. ಅದು ನವರಾತ್ರಿ ಹಬ್ಬದ ಸಮಯ. ದುರ್ಗಾದೇವಿಯ ಆರಾಧನೆ ಮಾಡುತ್ತಿದ್ದ ನಮ್ಮ ಅಪ್ಪ ದೇವರ ಕೋಣೆಯಲ್ಲಿದ್ದ ಪೂಜಾ ಪರಿಕರಗಳನ್ನು ಒಂದು ಪುಟ್ಟಿಯಲ್ಲಿ ತುಂಬಿ ಇಟ್ಟು ಅದನ್ನು ತೊಳೆದು ಇಡುವಂತೆ ಅಮ್ಮನಿಗೆ ಹೇಳಿದರು. ಅಮ್ಮ ಅಡುಗೆ ಮನೆಯ ಕೆಲಸ ಮುಗಿಸಿ ಬರುವಷ್ಟರಲ್ಲಿ ಬುಟ್ಟಿಯಲ್ಲಿ ಇಟ್ಟಿದ್ದ ಹರಿವಾಣ, ಚೊಂಬು, ಆರತಿಗಳನ್ನೆಲ್ಲ ತೊಳೆದು ನಳನಳಿಸುವಂತೆ ಮಾಡಿಟ್ಟಿದ್ದ ನಮ್ಮ ಮನೆಯ ಕೆಲಸದಾಕೆ ” ಎಲ್ಲವನ್ನು ತೊಳೆದಿದ್ದೇನೆ, ಇನ್ನು ನಿಮ್ಮ ಶುದ್ಧಕ್ಕೆ ಬೇಕಾದರೆ ಇವೆಲ್ಲವುಗಳ ಮೇಲೆ ಒಂದೆರಡು ಚೊಂಬು ನೀರು ಸುರಿದು ಆಮೇಲೆ ಒಳಗೆ ಇಟ್ಟುಬಿಡಿ ” ಎಂದಳು. ಹಾಗೇಕೆ ಹೇಳಿದೆ ಎಂದು ಅಮ್ಮ ಕೇಳಿದಾಗ ” ನಿಮ್ಮ ಸಂಪ್ರದಾಯ, ನಿಮ್ಮ ಆಚಾರಗಳು ನಿಮಗೆ ಶ್ರೇಷ್ಠ ಅಲ್ಲವೇ? ಎಷ್ಟೋ ವರ್ಷಗಳಿಂದ ನೀವು ರೂಢಿಸಿಕೊಂಡು ಬಂದ ಮಡಿವಂತಿಕೆಗೆ ನಾನೇಕೆ ಅಡ್ಡ ಬರಲಿ? ನಮ್ಮ ಕ್ರಮ ನಮಗೆ, ನಿಮ್ಮ ಕ್ರಮ ನಿಮಗೆ ದೊಡ್ಡದಲ್ಲವೇ? ಅದಕ್ಕೇ ನಿಮ್ಮ ಕ್ರಮಾನುಸಾರ ಶುದ್ಧ ಮಾಡಿಕೊಳ್ಳಿ ಅಂದದ್ದು ” ಎಂದು ಹೇಳಿದಳು. ಆಕೆಗೆ ವಿದ್ಯಾಭ್ಯಾಸವಿರಲಿಲ್ಲ. ವಿಸ್ತಾರವಾದ ಪ್ರಪಂಚ ಜ್ಞಾನ ವಿರಲಿಲ್ಲ. ಮನಸು ವಿಶಾಲವಾಗಿತ್ತು
ಸ್ವಸ್ತ ಸಮಾಜದ ನಿರ್ಮಾಣಕ್ಕೆ ಹೇಗೆ ಬದುಕಬೇಕು ಎನ್ನುವ ಪರಿಕಲ್ಪನೆ ಆಕೆಗಿತ್ತು.

ನಾವು ವಾಸಿಸುವ ವಾತಾವರಣದಲ್ಲಿ ಶಾಂತಿ ನೆಮ್ಮದಿ ನೆಲೆಯಾಗಬೇಕಾದರೆ ಐದು ಅಂಶಗಳನ್ನು ನಾವು ರೂಢಿಸಿಕೊಳ್ಳಲೇಬೇಕು. ಮೊದಲನೆಯದು, ಚಿಕ್ಕ -ಪುಟ್ಟ ವಿಚಾರಗಳಿಗೆ ವಿಚಲಿತಗೊಳ್ಳದೆ, ತತ್ಕ್ಷಣ ಪ್ರತಿಕ್ರಿಯೆ ತೋರದೆ ತಾನು ತಾನಾಗಿ ಉಳಿಯುತ್ತೇನೆ ಎನ್ನುವ ಸಂಯಮ. ಎರಡನೆಯದ್ದು, ದೇವನೊಬ್ಬನೇ ಪರಿಪೂರ್ಣ, ಅವನು ಮೆಚ್ಚಿದರೆ ಬಾಳೆಲ್ಲ ಹಸನು, ಅದಕ್ಕನುಗುಣವಾಗಿಯೇ ಬದುಕುತ್ತೇನೆ ಎನ್ನುವ ಅಚಲ ಶ್ರದ್ಧೆ. ಮೂರನೇಯದ್ದು ಆತ್ಮಸಾಕ್ಷಿಗೆ ಅಂಜಿ ಬದುಕುವ ನೈತಿಕತೆ. ನಾಲ್ಕನೆಯದು ಸ್ಪರ್ಧೆಗಿಳಿಯದೆ ಬದುಕುವ ಕಲೆಗಾರಿಕೆ ಇನ್ನು ಐದನೆಯ ಅಂಶವೆಂದರೆ.. ಬಾನಂಗಳ ಸೂರ್ಯ ಚಂದ್ರ ನಕ್ಷತ್ರಗಳಿಗೆ ನೆಲೆ ಆದಂತೆ ನಾವು ಬದುಕುತ್ತಿರುವ ಈ ಭೂಮಿ ನಮ್ಮ ಶಾಶ್ವತ ತಾಣ ಅಲ್ಲ ಎನ್ನುವ ಸೂಕ್ಷದ ತಿಳುವಳಿಕೆ. ಇವಿಷ್ಟು ಇದ್ದರೆ ನಾವೆಲ್ಲರೂ ಆರೋಗ್ಯಕರ ಸಮಾಜದಲ್ಲಿ ಅನ್ಯೋನ್ಯವಾಗಿ ಬದುಕಬಹುದು. ಅದೇ ನಮ್ನೆಲ್ಲರ ಗುರಿಯಾಗಿರಲಿ.

Leave a Reply

Back To Top