ಅನುಭವ ಸಂಗಾತಿ
ಸುಧಾ ಭಂಡಾರಿ ಹಡಿನಬಾಳ
“ಅಂತರಂಗವನ್ನು ಅರಳಿಸಿದ ‘
ʼಭಾವಾಂತರಂಗ’
ವಿನೂತನ ಕಾರ್ಯಾಗಾರ”

ಅದೊಂದು ಹೊಸ ಭಾವ ಪ್ರಪಂಚ! ಔಪಚಾರಿಕ ಶಿಕ್ಷಣದ ಜೊತೆಗೆ ಬದುಕಿನ ಎಲ್ಲ ಬಗೆಯ ಕೌಶಲ್ಯಗಳನ್ನು ಎಳೆಯ ಚಿಗುರುಗಳಿಗೆ ಧಾರೆ ಎರೆದು ಪೋಷಿಸುವ ವಿನೂತನ ಕಾರ್ಯಗಾರ… ಅಲ್ಲಿ ಎಲ್ಲವೂ ಸೃಜನಾತ್ಮಕ ,ಕೌಶಲ್ಯಾತ್ಮಕ ! ಅಂತರಂಗವನ್ನು ಅರಳಿಸುವ ಕಲೆ, ಸಾಹಿತ್ಯ, ಸಂಗೀತ ,ನೃತ್ಯ, ಕರಕುಶಲ ವ್ಯಕ್ತಿತ್ವ ವಿಕಸನ ಹೀಗೆ ಎಲ್ಲ ಬಗೆಯ ಸೂಕ್ತ ಪ್ರತಿಭೆಗಳಿಗೆ ಆಸಕ್ತಿಗನುಗುಣವಾಗಿ ತರಬೇತುಗೊಳಿಸುವ ನವ ನವೀನ ಕಾರ್ಯಾಗಾರ ಇದು. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವೇ ಹೊಸ ಕಲಿಕೆ ಆಗಿರದೆ ಕಾರ್ಯಾಗಾರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸಂಪನ್ಮೂಲ ವ್ಯಕ್ತಿಗಳಿಗೂ ಇದೊಂದು ಅಂತರಂಗವನ್ನು ಅರಳಿಸಿದ ವಿನೂತನ ಕಾರ್ಯಾಗಾರ. ಇಂತಹ ಅಪರೂಪದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ನನ್ನಲ್ಲಿ ಧನ್ಯತೆ . ನನ್ನೆದುರಿಗೆ ಶಿಕ್ಷಣದ ಎಲ್ಲಾ ಮಜಲುಗಳು ಏಕಕಾಲದಲ್ಲಿ , ಒಂದೇ ಸೂರಿನಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ಹೇಗೆ ತೆರೆದುಕೊಳ್ಳಬಹುದು ಎಂಬುದರ ಒಂದು ಹೊಸ ಅನುಭೂತಿಯನ್ನು ತೆರೆದಿಟ್ಟ ಭಾವ ಪ್ರಪಂಚ ಅದು. ನನ್ನ ಅನುಭವದ ಸಂತಸವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಕಾತುರ…
2024ರ ವರ್ಷಾಂತ್ಯದಲ್ಲಿ ನನ್ನ ಬಹು ವರ್ಷಗಳ ಕನಸಿನ ‘ಕವಿಶೈಲ’ ಕ್ಕೆ ಭೇಟಿ ನೀಡಿ ದಟ್ಟ ಕಾನನದ ನಡುವೆ ಕನ್ನಡದ ದೈತ್ಯ ಪ್ರತಿಭೆಯಾಗಿ ಬೆಳೆದ ಕುವೆಂಪು ಅವರ ‘ಉದಯರವಿ’, ‘ ಕವಿಶೈಲ’ದ ನೆನಪುಗಳ ಸುಳಿಯಿಂದ ಇನ್ನೂ ಹೊರಬಂದಿರಲಿಲ್ಲ.. ಅದಾಗಲೇ ಒಂದು ದಿನ ವರ್ಗ ಕೋಣೆಯಲ್ಲಿರುವಾಗ ಅಪರಿಚಿತ ಕರೆಯೊಂದು ಬಂತು. ಮುಖ್ಯಾಧ್ಯಾಪಕಿಯಾದ ಮೇಲೆ ವರ್ಗ ಕೋಣೆಗೂ ಮೊಬೈಲ್ ತೆಗೆದುಕೊಂಡು ಹೋಗುವುದು ಅನಿವಾರ್ಯ; ಆದರೆ ಒಂದೆರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಲು ಮನಸ್ಸಿರುವುದಿಲ್ಲ. ಆ ಕಡೆಯಿಂದ ಬಂದ ಹೊಸ ಕರೆ ನನ್ನ ಬಾಲ್ಯದ ಸಹಪಾಠಿ ಸವಿತಾ ಎಂಬಾಕೆಯದಾಗಿತ್ತು. ತಮ್ಮ ಶಾಲೆಯಲ್ಲಿ ‘ ಭಾವಾಂತರಂಗ’ ಎಂಬ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ; ಸಂಪನ್ಮೂಲ ವ್ಯಕ್ತಿಯಾಗಿ ಬರುತ್ತೀಯಾ ಎಂದು ಪ್ರಶ್ನಿಸಿದಳು. ಒಮ್ಮೆಲೇ ಯಾವ ಸವಿತಾ? ಯಾವ ರೀತಿಯ ಕಾರ್ಯಗಾರ ಎಂಬುದರ ಬಗೆಗೆ ಗೊಂದಲಗಳು ಹುಟ್ಟಿಕೊಂಡಿದ್ದರಿಂದ ಸಂಜೆ ಮನೆಗೆ ಹೋಗಿ ತಿಳಿಸುವೆನೆಂದೆ.
ಈ ಕಾರ್ಯಗಾರಕ್ಕೆ ಕಳೆದ ಏಳೆಂಟು ವರ್ಷಗಳಿಂದ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ಬರುತ್ತಿದ್ದ ನಮ್ಮ ನಡುವಿನ ಯುವ ಬರಹಗಾರ, ವಾಗ್ಮಿ ಸಂದೀಪ್ ಭಟ್ ನನಗೆ ಆತ್ಮೀಯರು. ಅವರ ಬಗೆಗೆ ನನಗೆ ತುಂಬಾ ಅಭಿಮಾನ ಕೂಡ. ಸಂಜೆ ಸಂದೀಪ್ ಭಟ್ ಅವರನ್ನು ಸಂಪರ್ಕಿಸಿದಾಗ ‘ಇದೊಂದು ವಿನೂತನ ಭಾವ ಪ್ರಪಂಚ! ಅವಕಾಶ ಬಂದಿದೆ ಎಂದಾದರೆ ಖಂಡಿತ ಕಳೆದುಕೊಳ್ಳಬೇಡಿ, ತುಂಬಾ ಒಳ್ಳೆಯ ಅವಕಾಶ ಬನ್ನಿ ಹೋಗೋಣ’ ಎಂಬ ಆತ್ಮೀಯ ಮಾತುಗಳು. ಮರುಕ್ಷಣ ಸವಿತಾಳಿಗೆ ಕರೆ ಮಾಡಿ ಬರುವುದಾಗಿ ತಿಳಿಸಿದೆ.

ಆನಂತರದ ಒಂದೆರಡು ದಿನದಲ್ಲಿ ಹಟ್ಟಿ ಅಂಗಡಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ಮತ್ತೊರ್ವ ಶಿಕ್ಷಕರು ನನಗೆ ಕಾರ್ಯಾಗಾರದಲ್ಲಿ ಮಕ್ಕಳಿಗೆ ಕವನ ರಚನೆ ತರಬೇತಿ ನೀಡುವ ಒಂದು ಜವಾಬ್ದಾರಿಯನ್ನು ವಹಿಸಿ ಆ ಕಾರ್ಯಗಾರದ ರೂಪುರೇಷೆ ಬಗೆಗೆ ತಿಳಿಸಿದರು. ಈ ತರದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಮಾಡುತ್ತೇನೆ ಎಂಬ ಭರವಸೆ ನನ್ನಲ್ಲಿತ್ತು. ಒಂದು ವಾರದೊಳಗೆ ಅಲ್ಲಿನ ಶಿಕ್ಷಕರು ಮೆತ್ತೆ ಮತ್ತೆ ಕರೆ ಮಾಡಿ ಸಂಪೂರ್ಣ ಮಾಹಿತಿ ನೀಡಿ,ನಾವು ನಡೆಸಬಹುದಾದ ಕಾರ್ಯಾಗಾರಕ್ಕೆ ನಮಗೆ ಬೇಕಾದ ಪೂರ್ವ ತಯಾರಿ, ಸಾಮಗ್ರಿ ವ್ಯವಸ್ಥೆ ಮಾಡುತ್ತೇವೆ ಎಂದು ಮಾಹಿತಿ ಪಡೆದುಕೊಂಡರು. ಅಂತೆಯೇ ಕೆಲವೊಂದು ಚಟುವಟಿಕೆಗಳು, ಕವನಗಳು, ಭಾವಚಿತ್ರಗಳನ್ನು ಆಯ್ದು ಕಳುಹಿಸಿದೆ. ಈ ರೀತಿ ಅಲ್ಲಿನ ಶಿಕ್ಷಕರು ಕಾರ್ಯಾಗಾರಕ್ಕೆ ಹೋಗುವ ಸಂಪನ್ಮೂಲ ವ್ಯಕ್ತಿಗಳ ನಿರಂತರ ಸಂಪರ್ಕದಲ್ಲಿದ್ದು ಬೆಂಬಲವಾಗಿ ನಿಂತಿದ್ದು ವಿಶೇಷವಾಗಿತ್ತು . ಎರಡು ದಿನ ಮೊದಲು ಆಮಂತ್ರಣ ಪತ್ರಿಕೆ ಬಂದಾಗ ಅಚ್ಚರಿ ಕಾದಿತ್ತು!! .. ಒಂದು ದಿನದ ಕಾರ್ಯಾಗಾರದಲ್ಲಿ ಚೆನ್ನಪಟ್ಟಣದ ಗೊಂಬೆ ತಯಾರಿ, ಬೆಂಕಿ ಇಲ್ಲದೆ ಅಡುಗೆ ತಯಾರಿ, ಸಾಂಪ್ರದಾಯಿಕ ಹಾಡು, ಕಸೂತಿ ಹೀಗೆ 46 ವಿವಿಧ ಬಗೆಯ ಬದುಕಿನ ಎಲ್ಲಾ ಸೌಂದರ್ಯವನ್ನು ಕೌಶಲ್ಯವನ್ನು ಒದಗಿಸಬಹುದಾದ ರಾಜ್ಯದ ಮೂಲೆ ಮೂಲೆಗಳಿಂದ ವಿವಿಧ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಮಕ್ಕಳ ಆಸಕ್ತಿಗನುಗುಣವಾಗಿ ಗುಂಪು ಮಾಡಿ ಸಾವಿರದ ಮೂರು ನೂರು ವಿದ್ಯಾರ್ಥಿಗಳಿಗೆ ಉಣಬಡಿಸುವ ವಿಶೇಷ ಕಾರ್ಯಗಾರ ಅದಾಗಿತ್ತು !! ಹೀಗೆ ಅಪರಿಚಿತ ಮಕ್ಕಳು, ಸಂಪನ್ಮೂಲ ವ್ಯಕ್ತಿಗಳ ಒಡನಾಟದಿಂದ ನಾನೊಂದಿಷ್ಟನ್ನು ಕಲಿಯಬಹುದೆಂಬ ಕುತೂಹಲ ನನ್ನೊಳಗೆ !
ವರ್ಷಾರಂಭದಲ್ಲಿ ವಿನೂತನವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಸಂತಸ ಜೊತೆಗೆ ತಾಲೂಕು ,ಜಿಲ್ಲೆಯನ್ನು ಬಿಟ್ಟು ಹೊರಗಡೆ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಪಾಲ್ಗೊಳ್ಳುವ ಉಮೇದು! ಮುನ್ನಾದಿನ ಸಂಜೆ ಹೊನ್ನಾವರದಿಂದ ಸಂದೀಪ್ ಭಟ್, ಶ್ರೀ ಎಲ್ ಎನ್ ಶಾಸ್ತ್ರಿ ಮತ್ತು ನಾನು ಜೊತೆಗೂಡಿ ಕಾರಿನಲ್ಲಿ ಹಟ್ಟಿ ಅಂಗಡಿಯತ್ತ ಪಯಣ ಬೆಳೆಸಿದೆವು.. ಸಂದೀಪ್ ಮತ್ತು ಶಾಸ್ತ್ರೀಯವರ ಯಕ್ಷಗಾನ ,ಕಲೆ ಸಾಹಿತ್ಯದ ಕುರಿತಾದ ಚರ್ಚೆಯಲ್ಲಿ ದಾರಿ ಸಾಗಿದ್ದು ತಿಳಿಯಲಿಲ್ಲ ಸಂಜೆ ಎಂಟು ಗಂಟೆಯ ಹೊತ್ತಿಗೆ ಹಟ್ಟಿ ಅಂಗಡಿಯನ್ನು ತಲುಪಿ ವಿಶಾಲವಾದ ಕಾಲೇಜು ಕ್ಯಾಂಪಸ್ ನಲ್ಲಿ ಕಾಲಿರಿಸುತ್ತಿದ್ದಂತೆ . ನನಗೆ ಸಂದೀಪ್ ಅವರು ಹೇಳಿದ ಮಾತುಗಳು ಅಕ್ಷರಶಹ ನಿಜ ಎನ್ನಿಸಿತು. ವಿಶಾಲವಾದ ಕ್ಯಾಂಪಸ್ ನಲ್ಲಿ ಬಹು ಮಹಡಿಯ ಸಂಸ್ಥೆಯ ಪ್ರವೇಶ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಸಂಸ್ಥೆಯ ಹಿರಿ ಕಿರಿಯ ಶಿಕ್ಷಕರುಗಳು ಬಂದು ನಮ್ಮ ಉಭಯ ಕುಶಲೋಪರಿ ವಿಚಾರಿಸಿ ಒಳಗೆ ಕರೆಸಿಕೊಂಡರು. ಪ್ರತಿಷ್ಠಿತ ಸಂಸ್ಥೆಯ ಪ್ರಾಚಾರ್ಯರಾದ ಶರಣ್ ಕುಮಾರ್ ಸರ್ ಅಷ್ಟೇ ನಗುಮುಖದಿಂದ ಬಂದು ಕೈ ಕುಲುಕಿ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು..

ಬಹುಶಃ ಕಾರ್ಯಗಾರಕ್ಕೆ ಮೊಟ್ಟಮೊದಲಿಗೆ ತಲುಪಿದ ತಂಡ ನಮ್ಮದೇ ಆದ್ದರಿಂದ ಒಂದಿಷ್ಟು ಸಮಯ ,ಸ್ವಾತಂತ್ರ್ಯ ಎಲ್ಲವೂ ದೊರೆತವು .ಸಂಸ್ಥೆಯ ಹಿರಿಯ ಶಿಕ್ಷಕಿ ನನ್ನ ಸ್ನೇಹಿತೆ ಸವಿತಾ ,ಶ್ರೀ ಮಧು ಸರ್ ಇವರೆಲ್ಲಾ ನಮ್ಮೊಟ್ಟಿಗೆ ಇದ್ದು ತಮ್ಮ ಸಂಸ್ಥೆಯ ಬಗೆಗೆ ಹೊಸದಾಗಿ ಹೋದ ನಾನು ಮತ್ತು ಶಾಸ್ತ್ರೀಯವರಿಗೆ ಪರಿಚಯಿಸಿದರು; ನಿಜಕ್ಕೂ ನಾನು ಬೆಕ್ಕಸ ಬೆರಗಾಗಿದ್ದೆ! ಅದೇನು ಸಣ್ಣ ಸಂಸ್ಥೆಯಾಗಿರಲಿಲ್ಲ! 40 ಎಕರೆ ಕಂಪೌಂಡಿನಲ್ಲಿ ತಲೆಯೆತ್ತಿ ನಿಂತ ವಿಶಾಲ ಮೂರಂತಸ್ಥಿನ ಕಟ್ಟಡದಲ್ಲಿ ಎಲ್ಲಿ ನೋಡಿದರೂ ಸೃಜನಶೀಲ ಕಲಿಕೆಯ ವಾತಾವರಣ ತೆರೆದುಕೊಂಡಿತ್ತು ಶಿಕ್ಷಕರ ಸ್ಟಾಫ್ ರೂಮ್, ವಸತಿ ನಿಲಯ , ಭಜನಾ ಮಂದಿರ, ಸುತ್ತಮುತ್ತಲಿನ ಹಸಿರು, ವಿಶಾಲವಾದ ಚೌಕಾಕಾರದ ಕಟ್ಟಡದ ನಡುವೆ ಸಾವಿರಾರು ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ದೊಡ್ಡ ಸಭಾಂಗಣ, ಯಾವ ಕಾರ್ಪೊರೇಟ್ ವಲಯದ ಕಚೇರಿಗಳಿಗೂ ಕಡಿಮೆ ಇಲ್ಲದ ಸ್ಟಾಪ್ ರೂಮ್ಗಳು , ಅಲ್ಲಿನ ಸಿಟ್ಟಿಂಗ್ ಅರೇಂಜ್ಮೆಂಟ್ ಕಣ್ಣಿಗೊಂದು ಹಬ್ಬ; ಅದ್ಭುತ ರೋಮಾಂಚಕಾರಿ ಅನುಭವ. ಅಲ್ಲಿನ ಸ್ವಚ್ಛತೆ ,ಶಿಸ್ತು ಎದ್ದು ಕಾಣುತ್ತಿದ್ದ ಕಲಾಂವಂತಿಕೆ ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋದಂತಿತ್ತು… ಶಿಕ್ಷಕರ ಆತ್ಮೀಯತೆ , ಸೌಜನ್ಯ ಮನಸೂರೆಗೊಂಡಿತು .ಸಂಜೆ ಹೊತ್ತಿನ ಕಷಾಯ ಕುಡಿದು ಕಾಲೇಜು ಕ್ಯಾಂಪಸ್ ನಲ್ಲಿ ಒಂದು ಸುತ್ತು ಹೊಡೆಯುವುದರೊಳಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಖ್ಯಾತ ಪರಿಸರ ತಜ್ಞ ಶ್ರೀ ಶಿವಾನಂದ ಕಳವೆ ಮತ್ತು ಇನ್ನಿತರ ಐವರನ್ನೊಳಗೊಂಡ ಸಂಪನ್ಮೂಲ ವ್ಯಕ್ತಿಗಳ ತಂಡ ಬಂದು ನಮ್ಮನ್ನು ಕೂಡಿಕೊಂಡಿತು ಎಲ್ಲರೂ ನಮ್ಮಂತೆ ಪ್ರೀತಿ ಆತ್ಮೀಯತೆಯಿಂದ ಜೊತೆಗೂಡಿ ಚಪಾತಿ ಊಟ ಸವಿದು ನಮಗಾಗಿಯೇ ವ್ಯವಸ್ಥೆ ಮಾಡಿದ್ದ ಸಿದ್ಧಿವಿನಾಯಕ ದೇವಸ್ಥಾನದ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯಕ್ಕೆಂದು ಬಂದೆವು. ಹೋದ ಕ್ಷಣದಿಂದ ಗೆಸ್ಟ್ ಹೌಸ್ ತಲುಪುವವರೆಗೂ ನಮ್ಮೊಟ್ಟಿಗೆ ಇದ್ದು ನಮ್ಮ ಬೇಕು ಬೇಡಗಳನ್ನು ವಿಚಾರಿಸಿಕೊಳ್ಳುತ್ತಿದ್ದ ಅಲ್ಲಿನ ಶಿಕ್ಷಕರ ಸೌಜನ್ಯ ಅಪರೂಪ!

ಮಾರನೇ ದಿನ ಮುಂಜಾನೆ ನಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಕಾರ್ಯಾಗಾರಕ್ಕೆ ಸಜ್ಜುಗೊಂಡು ಅಲ್ಲಿಯೇ ಪಕ್ಕದಲ್ಲಿದ್ದ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿಕೊಟ್ಟು ಮತ್ತೆ ಪುನಃ ಕಾಲೇಜ್ ಕ್ಯಾಂಪಸ್ಸಿಗೆ ಬರುವುದರೊಳಗೆ ಎಲ್ಲವೂ ಪೂರ್ಣ ಪ್ರಮಾಣದಲ್ಲಿ ತಯಾರಿಗೊಂಡಿತ್ತು ಯಾವ ಶಿಕ್ಷಕರ ಮುಖದಲ್ಲೂ ತರಾತುರಿ, ಒತ್ತಡ ,ಎದ್ದು ಕಾಣುತ್ತಿರಲಿಲ್ಲ ನೇರವಾಗಿ ಪ್ರಾಚಾರ್ಯರ ಕಚೇರಿಗೆ ನಮ್ಮನ್ನು ಕರೆದುಕೊಂಡು ಹೋಗಿ ಕೂರುಸಿದರು . ಸಾವಿರದೆಂಟುನೂರು ವಿದ್ಯಾರ್ಥಿಗಳನ್ನು ಒಳಗೊಂಡ ಪ್ರತಿಷ್ಠಿತ ಸಂಸ್ಥೆಯ ಮುಖಂಡ, ಒಂದು ದೊಡ್ಡ ಕಾರ್ಯಗಾರದ ಜವಾಬ್ದಾರಿಯನ್ನು ಹೊತ್ತು ನಿಭಾಯಿಸುತ್ತಿರುವ ನೇತಾರ ಶರಣ್ ಕುಮಾರ್ ಅವರು ಅತ್ಯಂತ ಪ್ರಶಾಂತವಾಗಿ ತಂಡದಲ್ಲಿದ್ದ ಶಿವಾನಂದ ಕಳವೆ ಅವರೊಂದಿಗೆ ಅನೇಕ ವಿಷಯಗಳ ಕುರಿತಾಗಿ ಚರ್ಚಿಸುತ್ತಾ ಮುಕ್ತವಾಗಿ ಮಾತುಕತೆಯಲ್ಲಿ ತಲ್ಲೀನರಾಗಿದ್ದರು. 10-15 ನಿಮಿಷದೊಳಗೆ ಜೇನುಗೂಡಿಗೆ ಬಂದು ಸೇರುವ ಜೇನ್ನೊಣಗಳಂತೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಬಂದ ಸಂಪನ್ಮೂಲ ವ್ಯಕ್ತಿಗಳು ಸೇರತೊಡಗಿದರು. ಎಂಟು ಹದಿನೈದರ ಸುಮಾರಿಗೆ ಬಂದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೂ ವಿಶೇಷವಾದ ಸಿಟ್ಟಿಂಗ್ ಅರೇಂಜ್ಮೆಂಟ್ ಹೊಂದಿದ ಸ್ಟಾಫ್ ರೂಂನಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು ಶಿಸ್ತಿನ ಸಿಪಾಯಿಗಳಂತೆ ಸಮವಸ್ತ್ರದಲ್ಲಿ ನಿಂತು ಬಂದ ಅತಿಥಿಗಳಿಗೆ ಉಣಬಡಿಸುತ್ತಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ …ಅದರ ಮೇಲ್ವಿಚಾರಣೆಯನ್ನು ನಡೆಸಲು ಶಿಕ್ಷಕ ಸಮೂಹ, ಪ್ರಾಂಶುಪಾಲರು ಎಲ್ಲರೂ ಸಜ್ಜಾಗಿದ್ದರು ಬೆಳಗಿನ ತಿಂಡಿಯಲ್ಲಿ ಅನೇಕ ಪೌಷ್ಟಿಕಾಂಶಗಳನ್ನು ಒಳಗೊಂಡ ಸ್ವಾದಿಷ್ಟ ತಿಂಡಿ ,ಟೀ ಕಾಫಿ ಬಾಳೆಹಣ್ಣು ಹೀಗೆ ಹೊಟ್ಟೆ ತುಂಬುವಷ್ಟು ಪ್ರೀತಿಯಿಂದ ಉಣಬಡಿಸಿದರು .ಎಲ್ಲರ ಉಪಹಾರ ಮುಗಿಯುತ್ತಿದ್ದಂತೆ ಅದು ಯಾವ ಮಾಯೆಯಲ್ಲಿ ಒಂದು ಸಣ್ಣ ಸದ್ದು ಗದ್ದಲವಿಲ್ಲದೆ ಕೆಳಮಹಡಿಯ ಸಭಾಂಗಣದಲ್ಲಿ ಸಾವಿರದ ಮುನ್ನೂರು ವಿದ್ಯಾರ್ಥಿಗಳು ಬಂದು ಜಮಾಯಿಸಿದ್ದರೂ ಗೊತ್ತಾಗಲಿಲ್ಲ! ನಾವು ಶಾಲೆಯಲ್ಲಿ 50- 60 ಮಕ್ಕಳನ್ನು ನಿಭಾಯಿಸುವಲ್ಲಿ ಹೈರಾಣಾಗುತ್ತೇವೆ ಆದರೆ ಸಾವಿರಾರು ವಿದ್ಯಾರ್ಥಿಗಳು ಒಂದೇ ಸೂರಿನಲ್ಲಿ ಯಾವ ಸದ್ದು ಗದ್ದಲವಿಲ್ಲದೆ ಕುಳಿತ ರೀತಿ ನೋಡುವುದೇ ಕಣ್ಣಿಗಳಿಗೆ ಸಂಭ್ರಮ … ನಲವತ್ತೊಂಬತ್ತು ಸಂಪನ್ಮೂಲ ವ್ಯಕ್ತಿಗಳನ್ನು ವೇದಿಕೆಯ ಮುಂಭಾಗಕ್ಕೆ ಕರೆತರುವಾಗ ನಮ್ಮ ಕಿವಿಗೆ ಕೇಳಿಸುತ್ತಿದ್ದುದು ಕೇವಲ ಓಂಕಾರ ಮಾತ್ರ !! ಅದೊಂದು ದಿವ್ಯ ಸಾನಿಧ್ಯದಂತೆ ಅನ್ನಿಸುತ್ತಿತ್ತು.
ಇನ್ನೇನು ಕಾರ್ಯಕ್ರಮ ಆರಂಭವಾಗುವುದೊಂದೇ ಬಾಕಿ ವೇದಿಕೆಯ ಮೇಲೆ ಕುರ್ಚಿಗಳ ಉದ್ದ ಸಾಲುಗಳಿಲ್ಲ; ಕೊರೆಯುವ ಬುದ್ಧಿಜೀವಿಗಳಿಲ್ಲ; ಕಾಯಿಸುವ ರಾಜಕಾರಣಿಗಳಿರಲಿಲ್ಲ.ಅತ್ಯಂತ ವಿನೂತನವಾಗಿ ಪ್ರತಿವರ್ಷ ಒಂದೊಂದು ಹೊಸ ಬಗೆಯ ಉದ್ಘಾಟನೆಯೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮ ಅಲ್ಲಿಯ ಇಂಗ್ಲಿಷ್ ಶಿಕ್ಷಕರಾಗಿದ್ದ ಶ್ರೀ ಮಧು ಸರ್ ಅವರ ಅತ್ಯಂತ ಸುಮಧುರ ಕಂಠದಿಂದ ಬಂದ ಭಾವಾಂತರಂಗ ಶೀರ್ಷಿಕೆ ಗೀತೆಯೊಂದಿಗೆ ಚಾಲನೆ ಪಡೆದಿದ್ದರೆ ಎಲ್ಲ ಸಂಪನ್ಮೂಲ ವ್ಯಕ್ತಿಗಳ ಕೈಗೆ ಕಲೆಯಲ್ಲಿ ಅರಳಿದ ಮರಿ ದುಂಬಿಗಳನ್ನು ಕೊಟ್ಟು ಅವುಗಳನ್ನು ವೇದಿಕೆಯ ಮೇಲೆ ಕಲಾತ್ಮಕವಾಗಿ ನಿಲ್ಲಿಸಿದ್ದ ಹಸಿರಿನ ಮರದಲ್ಲಿ ಕಟ್ಟಿದ್ದ ಜೇನುಗೂಡಿಗೆ ಸೇರಿಸುವ ಕೆಲಸ ಸಂಪನ್ಮೂಲ ವ್ಯಕ್ತಿಗಳದ್ದಾಗಿತ್ತು ಈ ರೀತಿ 49 ಸಂಪನ್ಮೂಲ ವ್ಯಕ್ತಿಗಳು, ಸಂಸ್ಥೆಯ ಸುಮಾರು 50ರಷ್ಟು ಶಿಕ್ಷಕರು ಮರಿ ದುಂಬಿಗಳನ್ನು ಜೇನುಗೂಡಿಗೆ ಸೇರಿಸುವ ಮೂಲಕ ಕಾರ್ಯಕ್ರಮ ವಿನೂತನವಾಗಿ ಉದ್ಘಾಟನೆಗೊಂಡಿತು ! ಈ ರೀತಿ ಸಂಪನ್ಮೂಲ ವ್ಯಕ್ತಿಗಳನ್ನು ವೇದಿಕೆಗೆ ಆಹ್ವಾನಿಸಿ ಉದ್ಘಾಟನೆಗೊಂಡ 15 ನಿಮಿಷಗಳಲ್ಲಿ ಸಭಾ ಕಾರ್ಯಕ್ರಮ ಕೂಡ ಮುಗಿದಿತ್ತು! ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತು ಮತ್ತು ಪ್ರಾಚಾರ್ಯರ ಆಶಯ ನುಡಿಯೊಂದಿಗೆ ಇಡೀ ಶಾಲೆಯ ಸಿಬ್ಬಂದಿಗಳು, ಶಿಕ್ಷಕ ಸಮುದಾಯ ಮತ್ತು ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ಒಂದು ಫೋಟೋ ಶೂಟ್ ಕೊನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಜೊತೆಗೂಡಿ ರಾಷ್ಟ್ರ ಗೀತೆ ಹಾಡುವುದರೊಂದಿಗೆ ಕೇವಲ 15 ರಿಂದ 20 ನಿಮಿಷದೊಳಗೆ ವೇದಿಕೆ ಕಾರ್ಯಕ್ರಮ ಸಂಪನ್ನಗೊಂಡಿತು. ವಿದ್ಯಾರ್ಥಿ ಸಮೂಹವನ್ನು ಸುತ್ತುವರಿದು ನಿಂತಿದ್ದ ಶಿಕ್ಷಕ ಸಮುದಾಯ, ವೇದಿಕೆಯಲ್ಲಿ ನಿಂತೆ ಕಾರ್ಯಕ್ರಮವನ್ನು ನೆರವೇರಿಸಿದ ಹೊಸ ಪರಿ, ಸಮಯ ಪ್ರಜ್ಞೆ , ಎಲ್ಲವೂ ಒಂದು ಹೊಸತನದಿಂದ ಕೂಡಿದ ತಾಜಾ ಅನುಭವ ನನಲ್ಲಿ! ಅಲ್ಲಿನ ಶಿಕ್ಷಕರುಗಳು, ಸಂಪನ್ಮೂಲ ವ್ಯಕ್ತಿಗಳಿಗೆ ನೀಡಲಾದ ಬ್ಯಾಚಿನಿಂದ ಹಿಡಿದು ಎಲ್ಲೆಡೆ ಕಲೆಯಲ್ಲಿ ಅರಳಿದ ಕಲಾವಿದರ ಕೈಚಳಕ ಎದ್ದು ಕಾಣುತ್ತಿತ್ತು ಕೆಲವೇ ನಿಮಿಷಗಳಲ್ಲಿ ಸಾವಿರಕ್ಕೂ ಮಿಕ್ಕು ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಕಾರ್ಯಗಾರಗಳಿಗೆ ಹೋಗಿ ಶಿಸ್ತು ಬದ್ಧವಾಗಿ ಕುಳಿತು ಬರುವ ಸಂಪನ್ಮೂಲ ವ್ಯಕ್ತಿಗಳಿಗಾಗಿ ಕಾಯುತ್ತಿದ್ದರು. ನಮ್ಮೊಟ್ಟಿಗೆ ಇಬ್ಬರು ಸಹಾಯಕ ಶಿಕ್ಷಕರನ್ನು ನೇಮಿಸಿದ್ದು ನಮ್ಮ ಬೇಕು ಬೇಡಗಳನ್ನು, ಕೊಂದು ಕೊರತೆಗಳನ್ನು ವಿಚಾರಿಸಿಕೊಳ್ಳುವ ನಗು ಮೊಗದ ಶಿಕ್ಷಕರು ನಮ್ಮ ನಮ್ಮ ಕಾರ್ಯಾಗಾರದ ಕೊಠಡಿಗಳಿಗೆ ನಮ್ಮನ್ನು ಕರೆದೊಯ್ದರು .ಮುಂದಿನ ಸಂಪೂರ್ಣ ಅವಧಿ ನಾವು ಮತ್ತು ನಮಗೆ ಪೂರ್ಣ ಪ್ರಮಾಣದಲ್ಲಿ ಅಪರಿಚಿತರಾದ 30 ರಿಂದ 35 ವಿದ್ಯಾರ್ಥಿಗಳ ಎರಡು ತಂಡದೊಂದಿಗೆ…

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದ 12.30 ವರೆಗೆ ಒಂದು ಬ್ಯಾಚ್; 12:30 ರಿಂದ 1-30 ರತನಕ ಊಟದ ವಿರಾಮ ಮತ್ತೆ 1-30 ರಿಂದ 4-00 ರೆಗೆ ಕಾರ್ಯಾಗಾರದ ಅವಧಿ. ಈ ಅವಧಿ ಸಂಪೂರ್ಣ ಮಕ್ಕಳಿಗೆ ಮೀಸಲು.. ವಿವಿಧ ಕೊಠಡಿಗಳಲ್ಲಿ ಬಗೆ ಬಗೆಯ ಬದುಕಿನ ಕೌಶಲಗಳನ್ನು ಕಲಿಸುವ ನುರಿತ ಸಂಪನ್ಮೂಲ ವ್ಯಕ್ತಿಗಳು ತಮ್ಮ ತಮ್ಮ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಲುಪಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ತಲ್ಲಿನರಾಗಿದ್ದರು ; ಇದನ್ನು ಮೇಲುಸ್ತುವಾರಿ ಮಾಡುತ್ತಿದ್ದ ಸಂಸ್ಥೆಯ ಶಿಕ್ಷಕರು, ಕುಳಿತು ವೀಕ್ಷಿಸುತ್ತಿದ್ದ ಇಬ್ಬರು ಶಿಕ್ಷಕರು ಆಗಾಗ ಕಾರ್ಯಗಾರಕ್ಕೆ ಬಂದು ಫೋಟೋಶೂಟ್ ,ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ಛಾಯಾಗ್ರಾಹಕರು ಮಧ್ಯದಲ್ಲಿ ತಂಪು ಪಾನೀಯ, ಕಾಫಿ ಟೀ ವ್ಯವಸ್ಥೆ ಕೂಡ
ಅದೊಂದು ಐಸಿಎಸ್ ಪಠ್ಯಕ್ರಮವನ್ನು ಒಳಗೊಂಡ ಇಡೀ ಕರಾವಳಿಯ ಒಂದು ಪ್ರತಿಷ್ಠಿತ ವಿದ್ಯಾಕೇಂದ್ರ; ಬಹುತೇಕ ಸಮಾಜದ ಉನ್ನತ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳೆಲ್ಲ ರಾಜ್ಯದ ಹೊರತಾಗಿ ವಿವಿಧಡೆಗಳಿಂದ ಬಂದು ನೆಲೆ ನಿಂತಿದ್ದರು. ಆದರೂ ಆ ವಿದ್ಯಾರ್ಥಿಗಳಿಗಿದ್ದ ಸಂಸ್ಕಾರ, ವಿಧೇಯತೆ ಅಪರೂಪ ಅನನ್ಯವಾಗಿತ್ತು.ನನ್ನ ಪಾಲಿಗೆ ಬಂದಿದ್ದು ಕವನ ರಚನೆಯ ತರಬೇತಿ ನೀಡುವುದು ; ಮಕ್ಕಳಿಗೆ ಕವನ ರಚನೆ ,ಕವನ ವಾಚನದವರೆಗೆ ಒಂದಿಷ್ಟು ಚಟುವಟಿಕೆಗಳನ್ನು ರೂಢಿಸಿಕೊಂಡು ಸಮಯದ ಪರಿಮಿತಿಯಲ್ಲಿ ಮಕ್ಕಳಿಂದ ನಾಲ್ಕು ಸಾಲುಗಳನ್ನು ಬರೆಯಿಸುವಲ್ಲಿ ಸಫಲನಾದೆ ಎಂಬ ತೃಪ್ತಿ ನನಗಿದೆ ; ಅಷ್ಟೇ ಅಲ್ಲದೆ ಮಧ್ಯಾಹ್ನದ ಒಂದು ಬ್ಯಾಚ್ ಮುಗಿಯುತ್ತಿದ್ದಂತೆ ನನಗೆ ಸಹಾಯಕಿಯರಾಗಿದ್ದ ಅಲ್ಲಿನ ಶಿಕ್ಷಕರು ಆಡಿದ ಮಾತುಗಳು ನನ್ನಲ್ಲಿ ಒಂದು ಸಂತೃಪ್ತಿಯನ್ನು ಕೂಡ ಹುಟ್ಟು ಹಾಕಿತ್ತು ‘ ಮೇಡಂ ಕವನ ರಚನೆ ಎಂದರೆ ಬೋರಿಂಗ್ ಟಾಪಿಕ್ ಯಾಕಾದರೂ ನಮಗೆ ಈ ವರ್ಕಶಾಪ್ ಗೆ ಹಾಕಿದ್ದಾರೋ ಬೇಸರದ ಸಂಗತಿ ಎಂದುಕೊಂಡಿದ್ದೆವು, ಆದರೆ ನೀವು ನಡೆಸಿದ ಚಟುವಟಿಕೆ, ವಿಷಯ ಮಂಡನೆ ರೀತಿ ನೋಡಿದರೆ ಇನ್ನೆರಡು ಗಂಟೆ ಇದ್ದರೂ ಕೇಳಬಹುದಿತ್ತು. ನಮ್ಮ ತಲೆಯಲ್ಲಿ ಕುಳಿತ ಧೂಳು ಕೊಡವಿದೆ .ನೀವು ಯಾಕೆ ನಮ್ಮ ಸ್ಕೂಲಿಗೆ ನಮ್ಮ ಪ್ರಾಥಮಿಕ ಹಂತದ ಶಿಕ್ಷಕರುಗಳಿಗೆ ತರಬೇತಿ ನೀಡಲು ಬರಬಾರದು? ಬನ್ನಿ ಮೇಡಂ, ನಮಗೆ ತುಂಬಾ ಉಪಯುಕ್ತವಾಗಿದೆ ‘ ಎಂಬ ಮಾತುಗಳು ನನ್ನಲ್ಲಿ ಧನ್ಯತೆ ಉಂಟು ಮಾಡಿತ್ತು .
ಮಧ್ಯಾಹ್ನದ ಊಟದ ವಿರಾಮದಲ್ಲಿ ಮತ್ತದೇ ಶಿಸ್ತಿನ ಸಿಪಾಯಿಗಳಾಗಿ ನಮಗೆ ಪ್ರೀತಿಯಿಂದ ಉಣ ಬಡಿಸಲು ಸಜ್ಜಾಗಿದ್ದ ವಿದ್ಯಾರ್ಥಿ ವೃಂದ ಅದರ ಮೇಲ್ವಿಚಾರಣೆ ನಡೆಸುತ್ತಿದ್ದ ಶಿಕ್ಷಕರು ಮತ್ತು ಪ್ರಾಂಶುಪಾಲರು; ಊಟದಲ್ಲಿ ಸಿಹಿ, ಖಾರ ತಂಪು ಮಜ್ಜಿಗೆ ಎಲ್ಲವನ್ನು ಒಳಗೊಂಡ ರುಚಿಕಟ್ಟಾದ ಕರಾವಳಿಯ ಊಟ ಸವಿದು ರಾಜ್ಯದ ಮೂಲೆ ಮೂಲೆಗಳಿಂದ ಬಂದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಒಂದಿಷ್ಟು ಕಲೆತು ಬೆರೆತು ವಿವಿಧ ಕಾರ್ಯಗಾರಗಳನ್ನು ಒಮ್ಮೆ ಸುತ್ತಾಡಿ ಮತ್ತೆ ಒಂದು ಗಂಟೆ ಮುಗಿಯುವುದರೊಳಗೆ ನಮ್ಮ ನಮ್ಮ ಕೊಠಡಿಗಳಿಗೆ ನಮ್ಮನ್ನು ಕರೆತಂದರು. ಸಮಯಕ್ಕೆ ಸರಿಯಾಗಿ ಮಧ್ಯಾಹ್ನದ ಕಾರ್ಯಾಗಾರ ಪ್ರಾರಂಭವಾಗಿದ್ದರೆ ಅಲ್ಲಿ ಬಂದವರು ಹೊಸ ಮುಖಗಳು ; ಮಧ್ಯಾಹ್ನದ ಅವಧಿ ಕವನ ರಚನೆಯಂತಹ ಒಂದು ತರಬೇತಿ ತುಸು ಕಠಿಣ ಸವಾಲು, ಆದರೂ ನಿಭಾಯಿಸುವುದು ಕಷ್ಟವೇನೂ ಆಗಲಿಲ್ಲ ಸಮಯ ಸರಿದದ್ದೇ ತಿಳಿಯಲಿಲ್ಲ. ಮಕ್ಕಳು ತುಂಬಾ ವಿಷಯವನ್ನು ಅರಿತುಕೊಂಡಿದ್ದು ಇಡೀ ಕಾರ್ಯಗಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಕೊನೆಯಲ್ಲಿ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಂದ ಮುಂದಿನ ದಿನಗಳಲ್ಲಿ ನಡೆಸುವ ಕಾರ್ಯಾಗಾರಗಳಿಗಾಗಿ ಸಲಹೆ ಸೂಚನೆ ,ಕುಂದು ಕೊರತೆಗಳನ್ನು ಒಳಗೊಂಡ ಫೀಡ್ಬ್ಯಾಕ್ ಜೊತೆಗೆ ವಿದ್ಯಾರ್ಥಿಗಳಿಂದಲೂ ತಾವು ಪಡೆದುಕೊಂಡ ತರಬೇತಿಯ ಬಗೆಗೆ .. ಅಲ್ಲಿಯೆ ಮುಂಜಾನೆ ವೇದಿಕೆಯಲ್ಲಿ ಸೇರಿದ್ದ ಸಮಸ್ತ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳ ಸುಂದರ ಪೋಟೊ ಪ್ರೇಮ್ ನೆನಪಿನ ಕಾಣಿಕೆಯೊಂದಿಗೆ ಗೌರವಧನ ನೀಡಲಾಗಿತ್ತು.ಅದಕ್ಕಾಗಿ ಮತ್ತೆ ಸಮಯ ವ್ಯಯ ಇರಲಿಲ್ಲ…
ಕಾರ್ಯಾಗಾರ ಮುಗಿಯುತ್ತಿದ್ದಂತೆ ನಮ್ಮನ್ನೆಲ್ಲ ಸಂಜೆಯ ಚಹಾ ಕೂಟಕ್ಕೆ ಆಹ್ವಾನಿಸಲಾಯಿತು. ಇನ್ನೇನು ಸಮೋಸ ಟಿ ಕಾಫಿ ಯೊಂದಿಗೆ ಸಂಪನ್ಮೂಲ ವ್ಯಕ್ತಿಗಳ ಅನ್ನಿಸಿಕೆಗಳನ್ನು ಹಂಚಿಕೊಂಡು ಅರ್ಧ ಗಂಟೆ ಮುಗಿಸಿ ಬರುವುದರೊಳಗೆ ‘ ಮಾತಂಗವನ’ದಲ್ಲಿ ಅಂದು ಭವಾಂತರಂಗ ಕಾರ್ಯಕ್ರಮದಲ್ಲಿ ಅನಾವರಣಗೊಂಡ ವಿವಿಧ ಬಗೆಯ ಕಲಾ ಮಾದರಿಗಳು ಅಲಂಕಾರಿಕವಾಗಿ ಜೋಡಿಸಲ್ಪಟ್ಟು ಪ್ರದರ್ಶನಕ್ಕಾಗಿ ಕಾದು ಕುಳಿತಿದ್ದವು! ಅದಾವ ಮಾಯೆಯಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಅಷ್ಟು ಅಚ್ಚುಕಟ್ಟಾಗಿ ಎಲ್ಲಾ ಮಾದರಿಗಳನ್ನು ತಂದು ಜೋಡಿಸಿದ್ದರೊ ಗೊತ್ತಿಲ್ಲ; ನೋಡುವ ನಮ್ಮ ಕಣ್ಣುಗಳೇ ಧನ್ಯ …ಒಟ್ಟಾರೆ ಅದೊಂದು ಅಪರೂಪದ ಸದವಕಾಶ…
ಶಿಕ್ಷಣದ ಜೊತೆಗೆ ಸುಪ್ತ ಪ್ರತಿಭೆಗಳನ್ನು ಬಡಿದೆಬ್ಬಿಸುವ ಇಂತಹ ಕಾರ್ಯಾಗಾರಗಳು, ತರಬೇತಿಗಳು ಎಳವೆಯಲ್ಲಿಯೇ ದೊರೆಕುತ್ತಿರುವ ಆ ಮಕ್ಕಳೇ ನಿಜಕ್ಕೂ ಸೌಭಾಗ್ಯವಂತರು. ಎಲ್ಲ ಬಗೆಯ ಕಲಾ ಕೃತಿಗಳನ್ನು ನೋಡಿ ಆನಂದಿಸಿ ಪುಳಕಗೊಂಡು ಮತ್ತೆ ಹೊರಳಿ ನಮ್ಮ ಗೂಡಿನತ್ತ ತೆರಳುವಾಗ ಒಂದು ಸಣ್ಣ ಬೇಸರವೂ ಉಂಟಾಗಿತ್ತು: ಇಂತಹ ಕಾರ್ಯಾಗಾರದಲ್ಲಿ ನಾವೂ ವಿದ್ಯಾರ್ಥಿಗಳಾಗಿ ಬಂದು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕಲಿತುಕೊಳ್ಳುವ ಅವಕಾಶ ದೊರೆತಿದ್ದರೆ ಎಂಬ ಪ್ರಶ್ನಾರ್ಥಕ ಭಾವ.! ಕಲಿಕೆಗೆ ವಯಸ್ಸಿನ ಮಿತಿ ಇಲ್ಲವಲ್ಲ!
ಕರಾವಳಿ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಬುದ್ಧಿವಂತರ ಜಿಲ್ಲೆಗಳೆಂದೇ ಖ್ಯಾತಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿ ಅಂಗಡಿಯ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಅತ್ಯುತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ , ಸಾಂಸ್ಕೃತಿಕ ಮೌಲ್ಯಗಳನ್ನು , ನಮ್ಮ ಪ್ರಾಚೀನ ಪರಂಪರೆಗಳನ್ನು ಸಾವಿರಾರು ವಿದ್ಯಾರ್ಥಿಗಳಲ್ಲಿ ಉತ್ತಿ ಬಿತ್ತುವ ಕೈಂಕರ್ಯ ನಡೆಸುತ್ತಿದೆ. 650 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ಇಡೀ 40 ಎಕರೆಯ ಕಂಪೌಂಡನ್ನು ಪೂರ್ಣ ಪ್ರಮಾಣದಲ್ಲಿ ನೋಡಲಾಗದಿದ್ದರೂ ಕಾಲೇಜಿನ ಸುತ್ತಮುತ್ತ ಹಸಿರಿನ ವನಸಿರಿ ಪ್ರತಿಯೊಂದು ಉದ್ಯಾನವನ ಮೈದಾನಕ್ಕೂ ನಮ್ಮ ಪ್ರಾಚೀನ ಋಷಿಮುನಿಗಳ ಮಾತಂಗವನ, ವ್ಯಾಸ ಕುಟಿರ ,ಈ ಬಗೆಯ ನಮ್ಮತನವನ್ನು ಎಲ್ಲೆಡೆ ಕಾಯ್ದುಕೊಳ್ಳುವ ಪರಿ ಎದ್ದು ಕಾಣುತ್ತಿತ್ತು ವಸತಿ ನಿಲಯದ ಪಕ್ಕದಲ್ಲಿಯೇ ಪ್ರತಿದಿನವೂ ವಿದ್ಯಾರ್ಥಿಗಳು ಭಜನೆ ನಡೆಸುವ ವಿಶಾಲ ಭಜನಾ ಮಂದಿರ ,ಸೈನ್ಸ್ ಪಾರ್ಕ್ ಎಲ್ಲವೂ ತುಂಬಾ ಪ್ರಾಯೋಗಿಕ ಕಲಿಕೆ….ಜೊತೆಗೆ ಇಂತಹ ದೊಡ್ಡ ಸಂಸ್ಥೆಯ ಪ್ರಾಚಾರ್ಯರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಶ್ರೀ ಶರಣ್ ಕುಮಾರ್ ಅವರ ಸರಳತೆ, ಸೌಜನ್ಯ , ಶಿಕ್ಷಕರುಗಳ ಶ್ರದ್ಧೆ, ನಿಷ್ಠೆ ದಣಿವರಿಯದ ಕಾರ್ಯ ತತ್ಪರತೆ ಎಲ್ಲರಲ್ಲೂ ಎದ್ದು ಕಾಣುತ್ತಿತ್ತು .ರಾತ್ರಿ 8:30 ರ ಹೊತ್ತಿಗೆ ಕಾಲೇಜು ಆವರಣವನ್ನು ಸುತ್ತು ಹಾಕುವಾಗ ಒಂದು ಕೊಠಡಿಯಲ್ಲಿ ಅಲ್ಲಿನ ಕಲಾ ಶಿಕ್ಷಕಿಯೊಬ್ಬರು ಒಂಟಿಯಾಗಿ ಮಾರನೇ ದಿನದ ಕಾರ್ಯಾಗಾರಕ್ಕೆ ತಯಾರಿ ನಡೆಸುತ್ತಿದ್ದುದ ನೋಡಿ ಬೆರಗಾದೆ . ನಿಜಕ್ಕೂ ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಒಂದು ಸಂದರ್ಭವಿದು ಎಂದು ದು ನನಗೆ ಎನ್ನಿಸದೇ ಇರಲಿಲ್ಲ . ವರ್ಷಕ್ಕೆ ಒಂದೆರಡು ಕಾರ್ಯಕ್ರಮ ಸಂಘಟಿಸುವಾಗ ನಾವು ಹೈರಾಣಾಗುತ್ತೇವೆ ಆತಂಕಗೊಳ್ಳುತ್ತೇವೆ ಒತ್ತಡಕ್ಕೆ ಒಳಗಾಗುತ್ತೇವೆ ಆದರೆ ವರ್ಷ ಪೂರ್ತಿ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸುವುದರ ಜೊತೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುತ್ತಮ ಟಾಪ್ ಒನ್ ರಾಂಕ್ ನಲ್ಲಿರುವ, ಇತ್ತೀಚೆಗೆ ರೂಬಿಕ್ಸ್ ಕ್ಯೂಬ್ ಕಲೆಯಲ್ಲಿ ಗಿನ್ನಿಸ್ ದಾಖಲೆ ಬರೆದ ಸಂಸ್ಥೆಯ ಸಾಧನೆ ಬೆರಗುಗೊಳಿಸಿತ್ತು.ಒಂದು ಯಶಸ್ವಿ ಕಾರ್ಯಕ್ರಮ ಸಂಘಟನೆ ಎಂಬುದು ಓರ್ವ ಕನಸುಗಾರ ಕ್ರಿಯಾಶೀಲ ಸರಳ ಸಜ್ಜನಿಕೆಯ ನೇತಾರನ ಚಾಣಾಕ್ಷತೆ ಜೊತೆಗೆ ಕೈ ಜೋಡಿಸಿ ಶ್ರದ್ಧೆ ನಿಷ್ಠೆಯಿಂದ ಕೆಲಸ ಮಾಡುವ ಸಹೋದ್ಯೋಗಿಗಳಿಂದ ಮಾತ್ರವೇ ಇಂತಹ ಒಂದಲ್ಲ ಹತ್ತಾರು ಕಾರ್ಯಕ್ರಮಗಳ ಸಂಘಟನೆ ಸಾಧ್ಯ ಎಂಬುದಕ್ಕೆ ಈ’ ಭಾವಾಂತರಂಗ’ ಕಾರ್ಯಕ್ರಮ ನಿದರ್ಶನವಾಗಿತ್ತು. ಕಳೆದ 12 ವರ್ಷಗಳಿಂದ ನಿರಂತರವಾಗಿ ವಿನೂತನ ರೀತಿಯಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಬಂದಿರುವ ಭಾವಾಂತರಂಗ ಕಾರ್ಯಕ್ರಮ ನನ್ನಲ್ಲಿ ಸಾರ್ಥಕತೆ , ಹೊಸ ಕಲಿಕೆ ಯನ್ನು ಹುಟ್ಟು ಹಾಕಿದ್ದು ಸುಳ್ಳಲ್ಲ.ಇಂತಹ ಅಪರೂಪದ ಕಾರ್ಯಗಾರವನ್ನು ನಡೆಸುತ್ತಿರುವ ಶ್ರೀ ಶರಣ್ ಕುಮಾರ್ ಪ್ರಾಚಾರ್ಯರು ಸಿದ್ಧಿ ವಿನಾಯಕ ಪ್ರತಿಷ್ಠಾನ ಮತ್ತು ಅವರ ಸಮಸ್ತ ತಂಡಕ್ಕೆ ಶರಣು ಶರಣಾರ್ಥಿ….
ಸುಧಾ ಭಂಡಾರಿ

ಮೇಡಂ… ನಮಸ್ತೆ.
ಎಷ್ಟು ಸವಿಸ್ತಾರವಾಗಿ ಭಾವಾಂತರಂಗದ ವಿಮರ್ಶೆಯ ಜೊತೆಗೆ ಶಾಲೆಯ ಸಮಗ್ರ ನೋಟ, ಅಲ್ಕಿನ ಶಿಕ್ಷಕರ ತಂಡದ ಕ್ರಿಯಾಶೀಲತೆ,ಸೃಜನಾತ್ಮಕ ತೆ ಮತ್ತು ವಿದ್ಯಾರ್ಥಿಗಳ ಕಲಿಕೆಯ ದಾಹ, ಶಿಸ್ತು ಸಂಸ್ಕಾರ, ಊಟೋಪಚಾರದ ಕುರಿತು, ಕ್ಯಾಂಪಸ್ ನ ಸೌಙದರ್ಯದ ಕುರಿತು ವಿವರಿಸಿದ್ದೀರಿ.
ತುಂಬಾ ಖುಷಿಯಾಯ್ತು ನೀವು ನಮ್ಮೂರಿನ ಪ್ರತಿಷ್ಠಿತ ಸಂಸ್ಥೆಗೆ ಬಂದು ,ಇಲ್ಲಿನ ವಾಸ್ತವವನ್ನು ನವಿರಾಗಿ ಹೆಣೆದ ಪರಿ ಓದಿ.
ಸಂತೋಷ ಸರ್. ಇಂದು ನನ್ನ ಖುಷಿ. ಧನ್ಯವಾದಗಳು
ಭಾವಾಂತರಂಗ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಅನುಭವ ನಿವೇದಿಸಿರುವದು ಪ್ರೇರಣಾತ್ಮಕವೂ & ಪ್ರಶಂಸಾತ್ಮಕವಾ ಆಗಿದೆ… ನಿಮಗೊಂದು ಅಭಿನಂದನೆಯ ಸಲಾಮುಗಳು
ಧನ್ಯವಾದಗಳು ಸರ್
ಹಟ್ಟಿ ಅಂಗಡಿಯ ಈ ಅದ್ಭುತ ಶಾಲೆಗೆ ನಾನೇ ಹೋಗಿ ಬಂದಂತಾಯಿತು… ಅಷ್ಟು ನೈಜವಾಗಿ ಅನುಭವ ಲೇಖನ ಮೂಡಿಬಂದಿದೆ
ಸೊಗಸಾಗಿ ಚಿತ್ರಿಸಿದ್ದಿರಿ. ನಮಗೂ ಹೋಗಿ ಬಂದ ಅನುಭವವಾಯಿತು.ಧನ್ಯವಾದಗಳು.
ತುಂಬಾ ಖುಷಿಪಟ್ಟಿದ್ದೆ. ಹೀಗಾಗಿ ನೈಜವಾಗಿ ಅಂತರಾಳದಿಂದ ಬಂದಿದೆ..