“ಪುಟ್ಟ ಸಾಲುಗಳ ಜೊತೆಗೆ”-ನಾಗರಾಜ ಬಿ.ನಾಯ್ಕ ಅವರ ಬರಹ

ಕವಿತೆ ಎನ್ನುವ ಪುಟ್ಟ ಸಾಲುಗಳ ಜೊತೆಗೆ ಕುಳಿತು ಓದುವ ಖುಷಿಯೇ ಬೇರೆ. ವಿಭಿನ್ನ ಅವಕಾಶಗಳ ಸದೃಢ ಆಶಯಗಳ ಹೊತ್ತು ನಿಂತಿರುವ ಪ್ರತಿ ಕವಿತೆಯೂ ವಿಶೇಷ. ಅನಂತದ ಪರಿಚಿತ ಸನ್ನಿವೇಶಗಳಲ್ಲಿ ಓದುಗನ ಕುಳ್ಳಿರಿಸಿ ಅವನ ಭಾವಕ್ಕೊಂದು ಕನ್ನಡಿಯಿರಿಸಿ ಸಾಗುವುದು ಅದರ ಹೆಗ್ಗಳಿಕೆ. ನಿಂತ ನಿಲುವುಗಳಲ್ಲಿ ನಗು ನಲಿವಿನ ಜೊತೆ ನೋವಿನ ಬಿಂಬಗಳ ತೇಲಿಸಿ ಬದುಕ ತೋರಿಸುವ ಭಾವ ಅದರದ್ದು. ಸರಳವಾಗಿ ನಿಂತು ಮಾತನಾಡುವ ಸಾಲುಗಳಲ್ಲಿ ತುಂಬಿದ ಭಾವ ಇರುತ್ತದೆ. ಒಳಿತಿನ ನಡೆಯ ಹೊತ್ತು ಹೊಸ ಎಳೆಯ ಹುಡುಕಿ ವಿನ್ಯಾಸವಾಗುವುದು ಅದರ ಸಾರ್ಥಕತೆ. ಓದುಗನ ಮನಸ್ಸು ತುಂಬುವ ಕವಿತೆಗೆ ಜೀವಂತಿಕೆ ಇರುತ್ತದೆ. ಕವಿತೆ ಹಲವು ಭಾವಗಳ ಒಂದು ಎಳೆ. ಆ ಎಳೆಗಳ ಜೋಡಿಸಿ ಪದಗಳ ಪಲ್ಲವಿಯಾಗಿಸುವುದು ಕವಿತೆಯ ಸಾರ್ಥಕತೆ. ಪದಗಳ ಕುಣಿತವೂ ಆಪ್ತತೆಯಿಂದ ಕೂಡಿದ್ದರೆ ಮಾತ್ರ ಅದರ ಭಾವಕ್ಕೆ ಒಂದು ಬೆರಗು. ಕವಿತೆ ಹುಟ್ಟುವ ವಿಷಯಕ್ಕೆ ಪರಿಮಿತಿ ಇಲ್ಲ. ಬೆಳಗಿಂದ ಹಿಡಿದು ಬೆರಗಿನ ವರೆಗೆ ಅನೇಕ ವಿಚಾರಗಳೇ ಅದರ ತಳಹದಿ. ಭಾವ ಬಣ್ಣಗಳನ್ನ ಅರಿತು ಬಲಿವ ಕವಿತೆ ಉತ್ತಮ ಎನಿಸುತ್ತದೆ. ಕವಿತೆಯ ಒಳಮನ ಕವಿಯ ಹೃದಯದಲ್ಲಿ ಕುಳಿತು ಆರಾಧಿಸುವ ಭಾವಗಳಾಗಿರುತ್ತದೆ. ಕಂಡ ನೋಟಗಳೆಲ್ಲವೂ ಭಾವವಾಗುತ್ತದೆ. ಆ ಭಾವಗಳು ಕವಿತೆಯ ಜೊತೆಗೆ ಮಾತನಾಡುತ್ತದೆ. ಬೇಕಾದ ಏನನ್ನೋ ಒಲುಮೆಯಿಂದ ಹೇಳುತ್ತದೆ. ವಾಸ್ತವದಿ ನಿಂತು ಬದುಕು ಅರಿಯುವ ಪ್ರಯತ್ನ ಮಾಡುತ್ತದೆ. ಪ್ರಕೃತಿಯ ನಿರೂಪಣೆಗಳಲ್ಲಿ ಮಗುವಾಗುವ ಹಂಬಲ ಕವಿತೆಗಿದೆ. ನಿಂತು ನೋಡುವ ಕೌತುಕದಲ್ಲಿ ಬದುಕಾಗುವ ಸಹಜತೆ ಇದೆ. ಪೂರ್ಣತೆಯ ಆಚೆಗೆ ನಿಂತು ನೋಡಬಲ್ಲ ನಿಲುವುಗಳಿವೆ. ಕವಿತೆ ಜೀವ ಪಡೆದರೆ ಅದೊಂದು ಧನ್ಯತೆ. ಓದಿದ ಎಲ್ಲಾ ಮನಗಳಲ್ಲೂ ವಿಶಿಷ್ಟ ವಿಸ್ತಾರ ಭಾವದಿ ನಿಂತು ಮಾತನಾಡುತ್ತದೆ. ಶಬ್ದದ ಸ್ವರೂಪ ಜೀವಂತವಾಗಿ ಉಳಿದುಬಿಡುತ್ತದೆ. ಕವಿತೆ ಎಂದರೆ ಭಾವಗಳ ಮುತ್ತಿನ ತೋರಣ. ಅಸ್ವಾದನೆಯ ಓದು ಅದರ ಪ್ರೇರಣೆ. ಓದದಷ್ಟು ಧನ್ಯತೆ ಅದರ ಪೂರ್ಣತೆ.


Leave a Reply

Back To Top