ಲೇಖನ ಸಂಗಾತಿ
ಜಯಲಕ್ಷ್ಮಿ ಕೆ ಅವರಿಂದ
ಆಂತರಿಕ ಶಿಸ್ತು
ನಮ್ಮ ಬಯಕೆ =ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಸಂಯಮವನ್ನು ಸ್ವಯಂ ಶಿಸ್ತು ಎನ್ನಬಹುದು. ತನ್ನ ಮನಸ್ಸನ್ನು ನಿಗ್ರಹಿಸಿಕೊಳ್ಳಲಾಗದವನು ಯಶಸ್ಸಿನ ಒಡೆಯನಾಗಲಾರ. ಸಮಯ ಸಂದರ್ಭಗಳು ಹೇಗೇ ಬರಲಿ, ನಾನು ಹೀಗೆಯೇ ನಡೆದುಕೊಳ್ಳುತ್ತೇನೆ ಎನ್ನುವ ನಮ್ಮತನವನ್ನು ಸ್ವಯಂ ಶಿಸ್ತು ಎನ್ನುವರು. ಇದು ಬಾಹ್ಯ ಪ್ರೇರಿತವಾದದ್ದಲ್ಲ. ಒತ್ತಡ -ಒತ್ತಾಯಗಳಿಂದ ಬೆಳೆಸಿಕೊಳ್ಳುವಂಥದ್ದಲ್ಲ. ಒಂದು ಲಯಗತಿಗನುಗುಣವಾಗಿ ಬದುಕಬೇಕು ಎನ್ನುವ ಸ್ವ -ಇಚ್ಛೆಯಿಂದ ಸ್ವಯಂ ಪ್ರೇರಣೆಯಿಂದ ರೂಢಿಸಿಕೊಳ್ಳುವ ಗುಣವಿದು. ಇತರರನ್ನು ನಿಯಂತ್ರಿಸಲು ಶಕ್ತಿ ಬೇಕು, ತನ್ನನ್ನು ತಾನು ನಿಗ್ರಹಿಸಿಕೊಳ್ಳಲು ಸ್ವಯಂ ಶಿಸ್ತು ಎನ್ನುವ ಮನೋಬಲ ಬೇಕು. ಸ್ವಯಂ ಶಿಸ್ತಿನ ಕೊರತೆ ಬದುಕಿನ ವೈಫಲ್ಯಕ್ಕೆ ಕಾರಣವಾಗಬಹುದು.
ವೈಯಕ್ತಿಕ ಶಿಸ್ತನ್ನು ಪರಿಪಾಲಿಸುವ ವ್ಯಕ್ತಿ ಯಾವುದೇ ಕಾರ್ಯ ಕ್ಷೇತ್ರ ಪ್ರವೇಶಿಸಿದರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಸಮರ್ಥನಾಗಿರುತ್ತಾನೆ.ವಿದ್ಯಾರ್ಥಿಗಳ ಓದು ಬರಹ ಎಲ್ಲವೂ ಸಫಲವಾಗುವುದು ಶ್ರದ್ಧೆ ಎನ್ನುವ ಸ್ವಯಂ ಶಿಸ್ತು ಇದ್ದಾಗ ಮಾತ್ರ. ” ಶ್ರದ್ಧಾವಾನ್ ಲಭತೇ ಜ್ಞಾನಂ ” ಎನ್ನುವ ಭಗವದ್ಗೀತೆಯ ಸಾಲು ಈ ನಿಟ್ಟಿನಲ್ಲಿಯೇ ಇದೆ. ಶ್ರದ್ಧೆ, ಛಲ ಅಥವಾ ಕೆಚ್ಚನ್ನು ಹುಟ್ಟುಹಾಕುತ್ತದೆ. ಇದರಿಂದ ಎದುರಾಗುವ ಅಡ್ಡಿ ಆತಂಕಗಳನ್ನು ಎದುರಿಸಿ ಮುನ್ನಡೆಯಲು ಧೈರ್ಯ ಬರುತ್ತದೆ. ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಯಶಸ್ಸಿನ ಸೌಧಕ್ಕೆ ಶ್ರದ್ಧೆಯೇ ತಳಪಾಯ. ಈ ಶ್ರದ್ಧೆ ಆಂತರಿಕ ಶಿಸ್ತಿನ ಫಲ. ಜೀವನದ ಗುರಿಯನ್ನು ತಲುಪಲು ಬೇಕಾದ ಭೂಮಿಕೆಯನ್ನು ಸಿದ್ಧಪಡಿಸುವುದೇ ನಮ್ಮೊಳಗಿನ ಶಿಸ್ತು.
ಯಾವುದೇ ಮಕ್ಕಳಲ್ಲಿ ಸ್ವಯಂ ಶಿಸ್ತು ತಾನಾಗಿ ಹುಟ್ಟಿಕೊಳ್ಳುವುದಿಲ್ಲ. ಮನೆಯಲ್ಲಿ ಪೋಷಕರನ್ನು, ಶಾಲೆಗಳಲ್ಲಿ ಶಿಕ್ಷಕರನ್ನು ನೋಡಿ ಮಕ್ಕಳು ಮೈಗೂಡಿಸಿಕೊಳ್ಳುವ ಗುಣವಿದು. ಹಿರಿಯರ ಗುಣ ನಡತೆಗಳೇ ಮಕ್ಕಳಿಗೆ ಮಾದರಿ. ಶಿಸ್ತು ಇದ್ದರೆ ಏನನ್ನಾದರೂ ಸಾಧಿಸಬಹುದು, ಏನನ್ನಾದರೂ ಗಳಿಸಬಹುದು. ಸ್ವಯಂ ಶಿಸ್ತು ಇಲ್ಲದವನಿಗೆ ಏನೇನೂ ಸಿದ್ಧಿಸದು.
ಅಂತಃಶಿಸ್ತು ಇಲ್ಲದವನ ಮನಸ್ಸು ಗಾಳಿಗೊಡ್ಡಿದ ದೀಪದಂತೆ ಚಂಚಲವಾಗಿಯೇ ಇರುವುದು. ಅಂಥವನ ನಿರ್ಧಾರಗಳೆಲ್ಲ ಕ್ಷಣ ಕ್ಷಣಕ್ಕೂ ಬದಲಾಗಿಬಿಡುವುದು.
ಮಕ್ಕಳು ಸ್ವಯಂ ಶಿಸ್ತು ಬೆಳೆಸಿಕೊಳ್ಳಲು ಮಾತಾಪಿತರು, ಗುರು ಹಿರಿಯರು ಮಾರ್ಗದರ್ಶನ ನೀಡಬೇಕು. ಗಿಡವನ್ನು ನೆಟ್ಟು ಬೇಲಿ ಹಾಕಿ ನೀರೆರೆದು ಪೋಷಿಸುವಂತೆ ಈ ಮಹತ್ ಕಾರ್ಯ ಕೂಡಾ. ಒಮ್ಮೆ ಗಿಡ ಮರವಾದರೆ ಮತ್ತೆ ಅದಕ್ಕೆ ವಿಶೇಷವಾದ ಪೋಷಣೆ ಬೇಡ.
ಕಲಿಕಾ ಕ್ಷೇತ್ರಕ್ಕೆ ಬಂದರೆ, ಹೊರಗಿನ ಯಾವುದೇ ಸದ್ದು -ಗದ್ದಲಗಳಿಗೆ ವಿಚಲಿತನಾಗದೆ ಓದಿನಲ್ಲಿ ಏಕಾಗ್ರತೆ, ಮನೆ ಮಂದಿ ಅಥವಾ ತನ್ನ ಸುತ್ತ -ಮುತ್ತಲಿನ ಜನ ಸಮಯವನ್ನು ಹೇಗೆ ಬೇಕಾದರೂ ಅಪವ್ಯಯ ಮಾಡಲಿ, ತಾನು ಮಾತ್ರ ತನ್ನ ಯೋಜನೆಯಂತೆಯೇ ದಿನಚರಿಯಲ್ಲಿ ತೊಡಗುತ್ತೇನೆ ಎನ್ನುವ ಒಂದು ಬದ್ಧತೆ, ಅನಗತ್ಯ ಮೊಬೈಲ್ ಬಳಕೆ ಮಾಡುವುದಿಲ್ಲ ಎನ್ನುವ ಸ್ವ -ಪ್ರಮಾಣ, ಬದುಕಿನ ಗುರಿಯತ್ತ ನಿರಂತರ ಚಿಂತನೆ ಇವೆಲ್ಲ ಸ್ವಯಂ ಶಿಸ್ತನ್ನು ರೂಢಿಸಿಕೊಂಡ ವಿದ್ಯಾರ್ಥಿಗಳಿಗಷ್ಟೇ ಸಾಧ್ಯ. ಮಾಡಬೇಕಾದ ಕೆಲಸ ಕಾರ್ಯಗಳನ್ನು ಚೊಕ್ಕವಾಗಿ ಸುವ್ಯವಸ್ಥಿತ ರೀತಿಯಲ್ಲಿ ನಿಗದಿತ ಅವಧಿಯಲ್ಲಿ ಮುಗಿಸುವ ಜಾಣ್ಮೆ ಈ ಶಿಸ್ತಿನ ವಿದ್ಯಾರ್ಥಿಗಳಿಗೆ ಇರುತ್ತದೆ. ಇವರು ಪೋಷಕರ, ಶಿಕ್ಷಕರ, ನಾಳೆ ಸಮಾಜದ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ವಿದ್ಯಾರ್ಥಿಯ ಪಾಲಿಗೆ ಒಳ್ಳೆಯ ಕಾಲೇಜಿನಲ್ಲಿ ಕಲಿಯುವ ಭಾಗ್ಯ ದೊರೆತಿರಬಹುದು, ಉತ್ತಮ ಪಾಠ -ಪ್ರವಚನಗಳೂ ದಕ್ಕಿರಬಹುದು, ಮನೆಯಲ್ಲಿ ಕಲಿಕೆಗೆ ಪೂರಕವಾದ ಪರಿಸರವೂ ಇರಬಹುದು, ಆದರೆ ಕಲಿಯಬೇಕು ಎನ್ನುವ ಸ್ವ ಇಚ್ಛೆ ಇಲ್ಲದಿದ್ದರೆ…?
ಕಲಿಕೆಗೆ ಹೊರಗಿನ ಪ್ರೇರಣೆ ಪ್ರೋತ್ಸಾಹಗಳಿಗಿಂತ ಒಳಗಿನ ದೃಢತೆ, ಕಲಿಯಬೇಕು ಎನ್ನುವ ತುಡಿತ, ಅಚಲ ಶ್ರದ್ಧೆ, ಪ್ರಯತ್ನಶೀಲತೆ ಇವುಗಳೇ ಪ್ರಮುಖ ಪಾತ್ರ ವಹಿಸುವ ಅಂಶಗಳು. ಇವೆಲ್ಲ ಸ್ವಯಂ ಶಿಸ್ತಿನಿಂದ ಬೆಳೆಯುವಂತಹ ಗುಣಗಳು. ಆ ಶಿಸ್ತು ಇಲ್ಲದೇ ಹೋದರೆ ಅಪ್ಪ ಅಮ್ಮನ ಉಪದೇಶವಾಗಲೀ, ಗುರು ಹಿರಿಯರ ಮಾರ್ಗದರ್ಶನವಾಗಲೀ ಫಲ ನೀಡುವುದಿಲ್ಲ. ಬೆಳಗಿನಿಂದ ಸಂಜೆಯವರೆಗಿನ ನಮ್ಮ ದಿನಚರಿ ನಮ್ಮ ಅಂತಃ ಶಿಸ್ತಿಗೆ ಹಿಡಿದ ಕೈಗನ್ನಡಿ. ಬೆಳಗ್ಗೆ ಬೇಗನೆ ಏಳುವ ಕ್ರಮ ಶಿಸ್ತುಬದ್ಧ ದಿನಚರಿಗೆ ಅಡಿಪಾಯ. ಈ ಕುರಿತು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲಿ “ಎಷ್ಟು ಗಂಟೆಗೆ ಏಳುತ್ತೀರಿ ” ಎಂದು ಕೇಳಿದರೆ ವಿಚಿತ್ರವಾದ ಉತ್ತರಗಳು ದೊರೆಯುತ್ತವೆ. ಎಂಟು ಗಂಟೆಯಿಂದ ಆರಂಭಗೊಂಡು ಮದ್ಯಾಹ್ನ ಎರಡು ಗಂಟೆಯವರೆಗೆ ನಿದ್ದೆ ಮಾಡುವವರಿದ್ದಾರೆ.ರಜಾದಿನ ಆದರೇನಂತೆ.. ದಿನಚರಿಗೆ ಒಂದು ನಿಯಮವಿರಬೇಡವೇ? ತಮ್ಮ ಪುಸ್ತಕಗಳನ್ನು, ಕಲಿಕಾ ಸಾಮಗ್ರಿಗಳನ್ನು ಅಸ್ತವ್ಯಸ್ತವಾಗಿ ಹರಡಿ ಚೆಲ್ಲಾಡದೆ ಚೊಕ್ಕವಾಗಿ ಜೋಡಿಸಿಡುವುದು, ವಸ್ತುಗಳನ್ನು ತೆಗೆದ ಸ್ಥಳದಲ್ಲಿಯೇ ಇಡುವುದು, ದೈನಂದಿನ ಕೆಲಸ ಕಾರ್ಯಗಳಿಗೆ ತಾವೇ ವೇಳಾಪಟ್ಟಿಯನ್ನು ಹಾಕಿಕೊಳ್ಳುವುದು, ಹಿತ ಮಿತವಾಗಿ ನೀರು ಆಹಾರ ಸೇವಿಸುವುದು,ಪ್ರಾರ್ಥನೆ, ವ್ಯಾಯಾಮ ಇವೆಲ್ಲವೂ ಸ್ವಯಂ ಸ್ಫೂರ್ತಿಯಿಂದ ರೂಢಿಸಿಕೊಳ್ಳಬೇಕಾದ ಗುಣಗಳು. ಉತ್ತಮರ ಒಡನಾಟ, ಮಿತವಾದ ಮಾತು, ಆರೋಗ್ಯಕರ ಮನೋರಂಜನಾ ವಿಧಾನ ಇವೆಲ್ಲ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲ ಸ್ವಯಂ ಶಿಸ್ತಿನ ಅಂಶಗಳು. ಬಾಲ್ಯದಿಂದಲೇ ಈ ಸದ್ಗುಣಗಳು ಮೈಗೂಡುತ್ತಾ ಹೋದಾಗ ಭವಿತವ್ಯ ಉಜ್ವಲವಾಗುವುದು.
ಜಯಲಕ್ಷ್ಮಿ ಕೆ.