ಲಹರಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
“ಜಿನು ಜಿನುಗು ಒಲವಿನಲೇ ಜಿನು ಜಿನುಗು”
ನಿನ್ನನ್ನು ನನ್ನಿಂದ ಯಾರೂ ದೂರ ಮಾಡಲು ಸಾಧ್ಯವಿಲ್ಲ ನೀನು ಕೂಡ. ನನಗಂತಲೇ ಆ ಬ್ರಹ್ಮ ಪುರುಸೊತ್ತು ಮಾಡಿಕೊಂಡು ತಯಾರು ಮಾಡಿದ ಶಿಲಾಬಾಲಿಕೆ. ಸೋದರ ಸೊಸೆಯಾದ ನಿನ್ನನ್ನು ಹೀಗೆ ಹುಚ್ಚನ ತರಹ ಪ್ರೀತಸ್ತಿನಿ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಚಿಕ್ಕವರಿದ್ದಾಗ ಮನೆಯಲ್ಲಿ ಎಲ್ಲರೂ ನನಗೆ ನಿನ್ನನ್ನು ಕೊಟ್ಟು ಮದುವೆ ಮಾಡೋದು ಅಂದಾಗ ಕೋಪದಲ್ಲಿ ಅವರಿಗೆ ಬೈಯುತ್ತಿದ್ದೆ. ಆದರೆ ಈಗ ಪ್ರೀತಿಗೂ ಪ್ರೀತಿ ಬರುವ ತರಹ ಹುಚ್ಚುಚ್ಚಾಗಿ ಹೆಚ್ಚೆಚ್ಚು ನಿನ್ನನ್ನೇ ಪ್ರೀತಸ್ತಿದಿನಿ ಅನ್ನೋ ವಿಷಯ ನಿನಗೆ ತಿಳಿದಿಲ್ಲ ಅಂತೇನಿಲ್ಲ. ನಿನ್ನ ನೆನಸಿಕೊಳ್ಳುತ್ತ ಸದಾ ಸುಂದರ ಸ್ವರ್ಗ ಲೋಕದಲ್ಲಿ ತೇಲ್ತಾ ಇರ‍್ತಿನಿ.
ನಿನ್ನೊಂದಿಗೆ ಕಳೆದ ಸವಿಕ್ಷಣಗಳನ್ನು ನೆನೆದರೆ ಸಾಕು ಗಾಳಿಯಲ್ಲಿ ತೇಲಿದಂತಹ ಅನುಭವ ಆಗುತ್ತದೆ. ಕಿಶೋರಾವಸ್ಥೆಯವರೆಗೂ ಹಳ್ಳಿಯಲ್ಲಿ ನಿನ್ನೊಂದಿಗಿದ್ದ ನಾನು ಕಾಲೇಜಿನ ಶಿಕ್ಷಣಕ್ಕೆಂದು ನಗರಕ್ಕೆ ಬಂದೆ. ಶಿಕ್ಷಣ ಮುಗಿಸಿಕೊಂಡು ಮರಳಿ ಬರುವಷ್ಟರಲ್ಲಿ ದೊಡ್ಡ ಅಚ್ಚರಿಯೇ ಕಾದಿತ್ತು.
ಹಳ್ಳಿಗೆ ಕಾಲಿಟ್ಟಾಗ ನಿನ್ನ ಹರೆಯ ಉಕ್ಕುತ್ತಿತ್ತು. ಮೂವತ್ತಾರು ಇಪ್ಪತ್ನಾಲ್ಕು ಮೂವತ್ತಾರು ಡೈಮನ್ಷನ್ ಇರುವ ಅತಿ ಸೌಂದರ್ಯವತಿ ಆಗಿದ್ದೆ. ಹಾಲಿನಲ್ಲಿ ಅದ್ದಿ ತೆಗೆದಂತಿರುವ ಮೈ ಬಣ್ಣ, ತಿದ್ದಿ ತೀಡಿದ ಹಣೆ, ಹುಬ್ಬು, ಮೊನಲಿಸಾಳ ನಗುವನ್ನು ಮೀರಿಸುವ ನಗು. ಸಾಕ್ಷಾತ್ ಸಂಪಿಗೆ ಮೂಗು, ದಟ್ಟವಾದ ಕಪ್ಪು ಕೇಶ ರಾಶಿ, ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಚೆಂದದ ಚಂದನದ ಗೊಂಬೆಯೂ ನಾಚುವಂತೆ ಆಗಿದ್ದೆ.
ನನ್ನ ಮೆಚ್ಚಿನ ಅಚ್ಚುಮೆಚ್ಚಿನ, ಈ ಮನ್ಮಥನ ಏಕೈಕ ರತಿಯಂತೆ, ಮಿಂಚಿನ ಹೊಳಪಿನಂತೆ ಹೊಳೆಯುತ್ತಿದ್ದೆ. ನಿನ್ನ ನೋಡುವವರ ವಯಸ್ಸು ಎಷ್ಟೇ ಇದ್ದರೂ ನೋಡಿದ ಕೂಡಲೆ ಇಷ್ಟವಾಗಿ, ಎದೆಯಲ್ಲಿ ಪ್ರೀತಿ ಜಿನುಗುವಂತಿದ್ದೆ. ಪ್ರೀತಿಯ ಹಾಡು ಗುನುಗುವಂತಿದ್ದೆ. ಎಂದು ಪ್ರಣಯಪೂರ್ಣವಾಗಿ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ.
ಸೌಂದರ್ಯ ಸಿರಿಯನ್ನು ಹೊಗಳಲು ಪದಗಳು ಸಾಲದಂತಾಗಿದ್ದವು.
ಅದೊಂದು ಮುಸ್ಸಂಜೆ ನಿಮ್ಮ ಮನೆಯಲ್ಲಿ ನಿಮ್ಮಣ್ಣನ ನಿಶ್ಚಿತಾರ್ಥದಲ್ಲ್ಲಿ ತಿಳುವಾದ ಬ್ಲ್ಯಾಕ್
ಪೀಚ್ ಸೀರೆಯಲ್ಲಿ ಮಿಂಚುತ್ತಿದ್ದೆ. ಮನೋಹರವಾಗಿ ಕಾಣುತ್ತಿದ್ದೆ. ಅಣ್ಣನಿಗೆ ಅತ್ತರ್ ಬೇಕೆಂದು ಕೇಳಲು ನನ್ನ ಕೋಣೆಯ ಹತ್ತಿರ ಬಂದಿದ್ದೆ. ಕಣ್ರೆಪ್ಪೆ ಮುಚ್ಚದೇ ತೃಪ್ತಿಯಾಗುವವರೆಗೂ ನೋಡುತ್ತಲೇ ನಿಂತಿದ್ದೆ. ನನ್ನ ದೃಷ್ಟಿ ಎದುರಿಸಲಾರದೇ ನೀನು ನಾಚಿ ಮುದ್ದೆಯಾಗಿದ್ದೆ. ನಿಧಾನವಾಗಿ ನಿನ್ನ ಹತ್ತಿರಕ್ಕೆ ಬಂದಿದ್ದು ನಿನ್ನಲ್ಲಿ ಆತಂಕ ಹೆಚ್ಚಿಸಿತು. ಪಕ್ಕಕ್ಕೆ ನಿಂತ ನಿನ್ನ ಬಿಸಿ ಉಸಿರು ತಾಕಿದಾಗ ತಡೆಯಲಾರದೆ ಕೈ ಸೋಕಿದೆ. ನೀನು ನನ್ನನ್ನು ತಳ್ಳಲು ಪ್ರಯತ್ನಪಟ್ಟೆ ಆದರೆ ನಿನ್ನ ಕೈಗಳು ನಿನಗೆ ಸಹಾಯ ಮಾಡಲಿಲ್ಲ. ಹಿಡಿದ ಕೈಯನ್ನು ನಾನೂ ಬಿಡಲಿಲ್ಲ. ಮೃದುವಾದ ಸ್ಪರ್ಶಕೆ ಮನಸೋತು ಮತ್ತಷ್ಟು ನಿಯಂತ್ರಣ ಕಳೆದುಕೊಂಡೆ. ಸೊಗಸಾದ ಗಾಳಿ ಕಿಟಕಿಯ ಮೂಲಕ ಒಳ ನುಗ್ಗಿತು. ಮೈಗೆಲ್ಲ ತೀಡುತ್ತಿದ್ದ ತಂಗಾಳಿಗೆ ಉನ್ಮತ್ತಗೊಂಡವನಂತೆ ನಿನ್ನ ಕೂದಲನ್ನು ಮೃದುವಾಗಿ ಸವರಿದೆ.
ನಾನು ಮುಂದಕ್ಕೆ ಬಂದೆ ನೀನು ಮುಖ ತಿರುಗಿಸಿ ಹಿಂದಕ್ಕೆ ಸರಿದೆ ಆಗ ನನ್ನ ಬೆನ್ನಿಗೆ ನಿನ್ನೆದೆ ತಾಗಿತು. ಮೈಯಲ್ಲಿ ನೂರಾರು ವೀಣೆಗಳು ಒಮ್ಮೆಲೇ ಮೀಟಿದಂತಾಯಿತು.
ಅಷ್ಟರಲ್ಲಿ ನಿನ್ನ ಬರಸೆಳೆದೆ. ಸ್ಟೀಲ್ ರಾಡ್‌ನಂತಹ ನನ್ನ ಬಾಹುಗಳ ಬಂಧನದಲ್ಲಿ ನೀನು ಸಿಲುಕಿದ್ದೆ. ತೆಳುವಾದ ಅಂಗಿಯಲ್ಲಿ ಎದ್ದು ಕಾಣುವ ನನ್ನ ಸಿಕ್ಸ್ ಪ್ಯಾಕ್ ಉಬ್ಬಿದ ಎದೆ ಇದೆಲ್ಲ ಕಂಡು ಎಷ್ಟೋ ಸುಂದರಿಯರು ನನ್ನ ದುಂಬಾಲು ಬಿದ್ದಿದ್ದರೂ ನಾನು ಕ್ಯಾರೆ ಅಂದಿರಲಿಲ್ಲ. ಗಿರಿಜಾ ಮೀಸೆ ಕುರುಚಲು ಗಡ್ಡ ನಿನ್ನ ಸಪೂರ ಕೆನ್ನೆಗೆ ತಾಕಿತೆನಿಸುತ್ತೆ. ಆಗ ನೀನು ಅಕ್ಷರಶಃ ಹೆದರಿದ ಹರಿಣಿ ಆಗಿದ್ದೆ. ನಿನ್ನ ರಂಗೇರಿದ ಕೆನ್ನೆ ಕಂಡು ಕೋಮಲವಾದ ಅಂಗೈಗಳನ್ನು ಅಮುಕಿದ್ದೆ. ಅದ್ಯಾವಾಗ ನಮ್ಮಿಬ್ಬರ ತುಟಿಗಳ ನಡುವೆ ಅಂತರವೇ ಇಲ್ಲದಂತಾಯಿತೋ ಗೊತ್ತೇ ಆಗಲಿಲ್ಲ. ಸಿಹಿ ಚುಂಬನದಲ್ಲಿ ಕಳೆದುಹೋಗಿದ್ದು ತಿಳಿಯಲಿಲ್ಲ. ದುಂಬಿ ಹೂವಿನ ಮಕರಂದ ಹೀರುವಂತೆ ಹೀರಿ ನಿಧಾನವಾಗಿ ಅದರಗಳನ್ನು ಬಿಡುಗಡೆ ಮಾಡಿದೆ. ನೀನು ಸಹ ನಿಧಾನವಾಗಿ ಕಣ್ಣು ಬಿಟ್ಟೆ. ಮೊದಲ ಸಲದ ಆ ಮಧುರ ಚುಂಬನದ ಸವಿ ಸವಿದ ಈರ್ವರ ಅದರಗಳು ಕಂಪಿಸುತ್ತಿದ್ದವು. ಎಸಿ ರೂಮಿನಲ್ಲೂ ಬೆವರುತ್ತಿದ್ದೆವು.
ಸ್ವಲ್ಪ ಸ್ವಲ್ಪವೇ ಸಾವರಿಸಿಕೊಂಡೆ. ಮದುವೆಗೂ ಮುಂಚೆ ಈ ರೀತಿ ವರ್ತಿಸುವುದು ಸರಿಯಲ್ಲ ಅನ್ನುವುದು ನಿನ್ನ ವಿಚಾರವಾಗಿತ್ತು. ಈ ಹಿಂದೆ ಹೀಗೆ ನಡೆದುಕೊಂಡವನಲ್ಲ ಇವತ್ತು ಏನಾಯ್ತು? ನೀನು ನನ್ನ ಕಾಪಾಡುವವನಾಗಬೇಕೆ ಹೊರತು ಕಾಡುವವನು ಆಗಬಾರದೆಂದೆ. ಹೀಗೆಲ್ಲ ಮಾಡುವುದು ತಪ್ಪು ಅಂತ ನಿನಗೆ ಗೊತ್ತತಿಲ್ಲವೇ? ಎಂದು ನನ್ನನ್ನು ತರಾಟೆಗೂ ತೆಗೆದುಕೊಂಡೆ. ಜೀವನದ ಕೊನೆಯವರೆಗೂ ಜೊತೆ ಇರುವುದಾದರೆ ಇದಕ್ಕೇನು ಅವಸರ ಎಂದೆ. ಪುಟ್ಟ ಮಗುವಿನಂತೆ ಹಟ ಮಾಡುತ್ತ ಕೇಳಿದೆ. ವರ್ತನೆ ಒರಟಾಗಿದ್ದರೂ ಮಾತುಗಳು ಹೃದಯಕ್ಕೆ ಹಿತವಾಗಿದ್ದವು. ಯಾವಾಗಲೂ ನಿನ್ನವಳು ಎಂದು ಮುದ್ದು ಮುದ್ದಾಗಿ ಮುಗ್ದೆಯಂತೆ ನುಡಿದು ಓಡಿದೆ.
ನಡತೆಯಲ್ಲಿ ಸಂಯಮಿಯಾದರೂ ಅಂದು ನೀನಾಡಿದ ಮಾತು ಗಂಭೀರವಾಗಿದ್ದವು.
ಈಗಿನ ಕಾಲದಲ್ಲಿ ಬೆರಳಿನ ತುದಿಯಲ್ಲಿ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುವ ಶಕ್ತಿ ನಮಗಿದೆ. ಬೇಕು ಅನಿಸಿದ್ದನ್ನು ಅನುಭವಿಸುವುದು ಗೊತ್ತಿದೆ. ಹೀಗಿದ್ದಾಗ್ಯೂ ಪ್ರೀತಿ ಅಂದರೆ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಪ್ರೀತಿ ಅಂದರೆ ಎರಡು ಅಲುಗಿನ ಕತ್ತಿ ಅಲ್ಲವೇ ಪ್ರಿಯಾ? ಹೋಗೋವಾಗಲೂ ಕುಯ್ಯುತ್ತೆ ಬರೋವಾಗಲೂ ಕುಯ್ಯುತ್ತೆ. ಅದು ಒಂದು ತರಹ ಸಕಲ ಕಲಾ ವಲ್ಲಭ. ಅಳಸುತ್ತೆ, ನಗಿಸುತ್ತೆ, ಕುಣಿಯುತ್ತೆ, ಕುಣಿಸುತ್ತೆ. ಹೀಗೇ ಯದ್ವಾ ತದ್ವಾ ಏನೇನೋ ಮಾಡಿಸುತ್ತೆ. ಖುಷಿ ಖುಷಿಯಿಂದ ಇರುವಾಗ ಇನ್ನೇನು ಲಡ್ಡು ಬಂದು ಬಾಯಿಗೆ ಬಿತ್ತು ಅನ್ನೋವಾಗಲೇ ಮೇಲಿನಿಂದ ದೊಪ್ಪಂತ ಕೆಳಕ್ಕೆ ಬೀಳಿಸುತ್ತೆ ಜೋರಾಗಿ ನಗುತ್ತೆ. ಅದು ಯಾವಾಗ ಯಾವ ರೀತಿ ತಿರುವು ತರುತ್ತೆ ಅಂತ ಊಹೆ ಮಾಡೋಕೆ ಆಗೋದೇ ಇಲ್ಲ. ಏನೇ ಹೇಳು ಜಾನು ಪ್ರೀತಿ ಕೊಡೋ ಕಿಕ್ ಮಾತ್ರ ಯಾವ ಗುಂಡಿನಲ್ಲೂ ಇಲ್ಲ. ಅದರ ಅಮಲು ಘಮಲು ಅನುಭವಿಸಿದವರಿಗೆ ಮಾತ್ರ ಗೊತ್ತು.
ನೀ ನನ್ನಿಂದ ದೂರವಾದ ದಿನದಿಂದ ನೋವು ಅಡಿಯಿಂದ ಮುಡಿಯವರೆಗೆ ಬಾದಿಸುತ್ತಿದೆ. ಕ್ಷಣ ಕ್ಷಣ ತುಮುಲ ತಳವಳ ಹೆಚ್ಚಾಗುತ್ತಿದೆ. ಹೃದಯದ ಬಡಿತ ಏರುತ್ತಿದೆ. ಇದುವರೆಗೂ ಯಾರನ್ನೂ ಪ್ರೀತಿಸದೇ ನೀನೇ ನನ್ನ ಬಾಳಿನ ಬೆಳಕು ಅಂತ ಮೊದಲ ರಾತ್ರಿಯ ಮೊದಲ ಶುಭದೊಸುಗೆಗೆ ಕತ್ತಲು ಕೋಣೆಯಲ್ಲಿ ಹೂಗಳಿಂದ ಸಿಂಗರಿಸಿಕೊಂಡ ಮಂಚದಲ್ಲಿ ಮೆತ್ತನೆಯ ಹಾಸಿಗೆಯಲ್ಲಿ ಮೆಲ್ಲನೆ ಕುಳಿತಿರುವೆ. ದ್ರಾಕ್ಷಿ ಗೊಡಂಬಿ ಸೇಬು ದಾಳಿಂಬೆ ನಿನಗಾಗಿ ಕಾಯುತಿವೆ ನನ್ನಂತೆ. ಬಿಸಿ ಬಿಸಿ ಹಾಲನ್ನು ಸ್ಟ್ರಾ ಹಾಕಿ ಕುಡಿದು ಮುಗಿಸುವ ಆಸೆ ಬಲವಾಗುತ್ತಿದೆ.
ಮೊದಲೇ ರತಿ ನೀನು. ನಿನ್ನ ಗೆಜ್ಜೆ ಸದ್ದು ಕೇಳಿ ರೊಮಾಂಚಿತನಾಗಲು ತುದಿಗಾಲಲ್ಲಿ ನಿಂತಿದ್ದೀನಿ. ಜಿಂಕೆ ಮೇಲೆ ಹಾರುವ ಚಿರತೆಯಾಗಿ ನಿನಗಾಗಿ. ಈಗ ಅವಸರವೇನು ಇಲ್ಲ ನೀ ಒಪ್ಪಿಗೆ ಕೊಟ್ಟ ಮೇಲೆ ಇದುವರೆಗೂ ಬಚ್ಚಿಟ್ಟಿರುವ ತುಟಿಯ ಸಿಹಿಯನು ಬಿಚ್ಚಿಡುವೆ. ಜಿನುಜಿನುಗುವ ಪ್ರೀತಿಯ ಸವಿ ಜೇನನು ಜಿನುಗಿಸುವೆ. ಪ್ರೀತಿಯೆಂಬ ನಿನ್ನ ತುಟಿಯ ಸಿಹಿ ಕದ್ದು ಮುತ್ತಿನ ತೇರಲ್ಲಿ ಮುತ್ತಾಗಿಸುವೆ. ನನ್ನ ಮುದ್ದಿನ ಕಂದಮ್ಮನ ಅಮ್ಮನಾಗಿಸುವೆ.
———————————————————————–
ಜಯಶ್ರೀ ಅಬ್ಬಿಗೇರಿ
“