ಸಂಕ್ರಾಂತಿ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಮಕರ ಸಂಕ್ರಮಣ
ಕ್ಯಾಲೆಂಡರ್ ವರ್ಷದ
ಮೊದಲ ಹಬ್ಬ”
ಭಾರತ ದೇಶ ಹಲವು ಭಾಷೆಗಳ ಹಲವು ಜಾತಿಗಳ ನೂರಾರು ಸಂಸ್ಕೃತಿಗಳ ನೆಲೆವೀಡು. ಒಂದು ಮಾಹಿತಿಯ ಪ್ರಕಾರ ಪ್ರತಿ ೪೦ ಕಿಲೋಮೀಟರಿಗೆ ಒಮ್ಮೆ ಈ ದೇಶದ ಜನರು ಮಾತನಾಡುವ ಭಾಷೆ, ಸಂಸ್ಕೃತಿ, ನೆಲ,ಜಲ, ರೀತಿ ನೀತಿಗಳು ಬದಲಾಗುತ್ತದೆ. ಭಾವನೆಗಳು, ಬಣ್ಣಗಳು, ಭಾಷೆಗಳು, ಜಾತಿ ಧರ್ಮಗಳು ಬದಲಾದರೂ ಬಹುತೇಕ ಎಲ್ಲ ಸಂಪ್ರದಾಯಗಳ ಹೂರಣವು ಒಂದೇ ಅದು ಭಾವೈಕ್ಯತೆ. ಇಲ್ಲಿ ಹಿಂದೂ ದೇವರನ್ನು ಪೂಜಿಸುವ, ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಮುಸಲ್ಮಾನರಿದ್ದಾರೆ. ದರ್ಗಗಳಿಗೆ ಹೋಗುವ, ಸಕ್ಕರೆ ಓದಿಸುವ, ಮೊಹರಂ ಹಬ್ಬದ ಕುಣಿತಗಳಲ್ಲಿ ಮಕ್ಕಳನ್ನು ತೊಡಗಿಸುವ, ಫಕೀರರನ್ನಾಗಿಸುವ ಹಿಂದುಗಳಿದ್ದಾರೆ. ನಾವು ದೇವಸ್ಥಾನಗಳಿಗೆ ಹೋಗುವಷ್ಟೇ ಸಲೀಸಾಗಿ ದರ್ಗಗಳಿಗೂ ಹೋಗುತ್ತೇವೆ ಚರ್ಚುಗಳಿಗೂ ಹೋಗುತ್ತೇವೆ. ಇದು ಭವ್ಯ ಭಾರತದ ಪರಂಪರೆ ಸಾವಿರಾರು ವರ್ಷಗಳಿಂದಲೂ ಇದು ನಡೆದು ಬಂದಿದೆ.
ಭಾರತದಲ್ಲಿ ಅಮಾವಾಸ್ಯೆಗೊಂದು ಹುಣ್ಣಿಮೆ ಗೊಂದು ಹಬ್ಬಗಳು ಬರುತ್ತವೆ. ಹಬ್ಬಗಳು ನಮ್ಮ ಸಂಸ್ಕೃತಿಯ, ನೆಲದ ಪ್ರತೀಕ. ಯುಗಾದಿ ನಮ್ಮ ಹೊಸ ವರ್ಷವಾದರೆ ಶಿವರಾತ್ರಿ ನಮ್ಮ ವರ್ಷದ ಕೊನೆಯ ಹಬ್ಬ. ಎಳ್ಳ ಅಮವಾಸೆ, ಶೀಗಿ ಹುಣ್ಣಿಮೆ, ಸಂಕ್ರಾಂತಿಗಳು ನಮ್ಮ ರೈತರ ಮುಖ್ಯ ಹಬ್ಬಗಳು. ಅದರಲ್ಲೂ ಸಂಕ್ರಾಂತಿ ಹಬ್ಬ ರೈತ ತಾನು ಬೆಳೆದ ಬೆಳೆಯನ್ನು ಕೊಯ್ದು ಒಕ್ಕಲು ಮಾಡುವ, ರಾಶಿ ಮಾಡುವ ಹಬ್ಬ.
ಹಿಂದೂ ಪಂಚಾಂಗದ ಪ್ರಕಾರ ಜೂನ್ 22 ರಂದು ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯಣದ ಕಡೆಗೆ ಪಥವನ್ನು ಬದಲಿಸಿದರೆ ಜನವರಿ 14ರಂದು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪಥವನ್ನು ಬದಲಾಯಿಸುತ್ತಾನೆ. ಅದು ಮಕರ ರಾಶಿಯ ದಿನ. ಈ ಜನವರಿ ತಿಂಗಳಲ್ಲಿ 14 ಇಲ್ಲವೇ 15ನೇ ತಾರೀಕಿನಂದು ಬರುವ ಈ ದಿನವನ್ನು ಸಂಕ್ರಾಂತಿ, ಸಂಕ್ರಮಣ, ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ.ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಆಚರಿಸುತ್ತಾರೆ. ಮಕರ ಸಂಕ್ರಮಣದ ದಿನದಂದು ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಸಂಜೆ ಮಕರ ಜ್ಯೋತಿ ದರ್ಶನ ಹಿನ್ನೆಲೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಜ್ಯೋತಿ ದರ್ಶನ ಪಡೆಯುವುದು ವಾಡಿಕೆ.
ಈ ದಿನದಂದು ಬೆಳಿಗ್ಗೆ ಬೇಗನೆ ಏಳುವ ಮನೆಯ ಕಿರಿಕಿರಿಯ ಸದಸ್ಯರೆಲ್ಲ ತಲೆಗೆ ಎಣ್ಣೆಯನ್ನು ಹಚ್ಚಿ ಸಾಬೂನಿನ ಬದಲು ಎಳ್ಳು ಪುಡಿಯನ್ನು ಹಚ್ಚಿ ಸ್ನಾನ ಮಾಡುತ್ತಾರೆ. ವೈಜ್ಞಾನಿಕವಾಗಿ ಹೇಮಂತ ಋತುವಿನ ಕುಳಿರ್ಗಾಳಿಗೆ ಮೈಯಲ್ಲಿನ ಎಣ್ಣೆಯ ಅಂಶ ಮಾಯವಾಗಿ ಚರ್ಮ ವಿಪರೀತ ಶುಷ್ಕವಾಗಿರುತ್ತದೆ. ಹೀಗೆ ಶುಷ್ಕವಾದ ಚರ್ಮಕ್ಕೆ ಕಾಲಕಾಲಕ್ಕೆ ಹಬ್ಬದ ನೆಪದಲ್ಲಿ ಎಳ್ಳಿನ ಸೇವನೆ, ಎಣ್ಣೆಯ ಲೇಪನ ಮಾಡುವ ಮೂಲಕ ಚರ್ಮದ ಮೃದುತ್ವಕ್ಕೆ ಕಾರಣವಾಗುತ್ತವೆ ನಮ್ಮ ಸಂಪ್ರದಾಯಗಳು. ಆಹಾರದಲ್ಲಿಯೂ ಅಷ್ಟೇ ಹುರಿದ ಎಳ್ಳು ಮತ್ತು ಹುರಿದ ಕಡಲೆ ಬೀಜ ಇಂದಿನ ಪ್ರಮುಖ ಆಹಾರವಾಗಿ ಬಳಸಲ್ಪಡುತ್ತದೆ.ಎಳ್ಳಮಾವಾಸೆಯಿಂದ ಹಿಡಿದು ಸಂಕ್ರಮಣದವರೆಗೆ ಒಂದಲ್ಲ ಒಂದು ಕಾರಣದಿಂದ ಎಳ್ಳು ಮತ್ತು ಶೇಂಗಾ (ನೆಲಗಡಲೆ) ಬಳಸುತ್ತ ದೇಹದಲ್ಲಿ ಜಿಡ್ಡಿನ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಬ್ಬಗಳ ಹೆಸರಿನಲ್ಲಿ ಕಡ್ಡಾಯವಾಗಿ ನಾವು ಈ ಸಂಪ್ರದಾಯವನ್ನು ಪಾಲಿಸುತ್ತೇವೆ.
ಉತ್ತರ ಭಾರತದಲ್ಲಿ ನದಿಗಳು ಮತ್ತು ಸಮುದ್ರಗಳಲ್ಲಿ ಸ್ನಾನ, ಸೂರ್ಯದೇವನಿಗೆ ಪೂಜೆ, ಗಾಳಿಪಟಗಳನ್ನು ಹಾರಿಸುವ ಮೂಲಕ ಈ ಹಬ್ಬವನ್ನು ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಸುಗ್ಗಿಯಾಗಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಮನೆ ಮನೆಗಳಲ್ಲಿ ಕಬ್ಬು, ಜೋಳದ ದಂಟುಗಳನ್ನು ತಲೆಬಾಗಿಲಿಗೆ ಕಟ್ಟಿ ಶೃಂಗರಿಸಿ ದನಗಳಿಗೆ ಸ್ನಾನ ಮಾಡಿಸಿ ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಮನೆ ಮಂದಿಯೆಲ್ಲ ಎಳ್ಳು ಹಚ್ಚಿ ಅಭ್ಯಂಗಸ್ನಾನ ಮಾಡುತ್ತಾರೆ. ಮನೆಯ ದೇವರಿಗೆ ಮತ್ತು ಸೂರ್ಯದೇವನಿಗೆ ಪೂಜಿಸಿ ಹೊಸ ಅಕ್ಕಿಯಿಂದ ತಯಾರಿಸಿದ ಪೊಂಗಲ್, ಅಕ್ಕಿ ಪಾಯಸ ಮುಂತಾದ ವಿಶೇಷ ಅಡುಗೆಗಳನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ವಿಧ ವಿಧ ತರಕಾರಿಗಳ ಅಡುಗೆ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಸಿಹಿ ಪೊಂಗಲ್, ಖಾರದ ಪೊಂಗಲ್, ಚಿತ್ರಾನ್ನ ಮೊಸರನ್ನ ಜೊತೆಗೆ ಹಬ್ಬದ ವೈಶಿಷ್ಟ್ಯವೆಂಬಂತೆ (ಕೆಲವೆಡೆ ಎಲ್ಲಾ ರೀತಿಯ ಸೊಪ್ಪುಗಳನ್ನು ಹಾಕಿ) ಗೆಣಸು, ಗಜ್ಜರಿ, ಬದನೆಕಾಯಿ, ಚಳ್ಳವರೆ ಮತ್ತು ಕುಂಬಳಕಾಯಿಯನ್ನು ಚೆನ್ನಾಗಿ ಕುದಿಸಿ ಅದನ್ನು ನುಣ್ಣಗೆ ಅರೆದು ಹಸಿಮೆಣಸಿನಕಾಯಿ ಹಾಕಿ ಉಪ್ಪು ಬೆಲ್ಲ ಮತ್ತು ಎಳ್ಳಿನ ಪುಡಿಯನ್ನು ಹಾಕಿ ಕುದಿಸಿದ ಬರ್ಥವನ್ನು ತಯಾರು ಮಾಡುತ್ತಾರೆ ಇದು ಆರೋಗ್ಯಕ್ಕೆ ಪುಷ್ಟಿದಾಯಕವೂ ಹಿತಕರವೂ ಹೌದು. ಇದನ್ನು ಚಪಾತಿ, ತೆಳ್ಳಗೆ ಎಳ್ಳು ಮೆಣಸಿನ ಬೀಜ ಹಾಕಿ ಬಡಿದು ತಯಾರಿಸಿದ ಜೋಳದ ಮತ್ತು ಸಜ್ಜೆಯ ರೊಟ್ಟಿಗಳ ಜೊತೆಗೆ ತಿನ್ನಬಹುದು.
ಇನ್ನು ಕೆಲವರು ಮನೆಯಲ್ಲಿ ಅಡುಗೆ ಮಾಡಿಕೊಂಡು ಹತ್ತಿರದ ನದಿ ತೀರಗಳಿಗೆ ಹೋಗಿ ಅಲ್ಲಿಯೇ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತೆಯನ್ನು, ಸೂರ್ಯ ದೇವರನ್ನು ಪೂಜಿಸಿ, ತಾವು ಮನೆಯಲ್ಲಿ ತಯಾರಿಸಿ ತಂದ ನೈವೇದ್ಯವನ್ನು ಅರ್ಪಿಸಿ ಬಂದು ಬಾಂಧವರೊಂದಿಗೆ ನದಿ ತೀರದಲ್ಲಿಯೇ ಊಟ ಮಾಡಿ ಸಂತಸ ಪಡುತ್ತಾರೆ. ಪುಣ್ಯಕ್ಷೇತ್ರ ದರ್ಶನದ ಜೊತೆ ಒಂದು ಸಂತಸದ ವನವಿಹಾರವು ನಡೆದು ಹೋಗುತ್ತದೆ. ನಂತರ ಸಾಯಂಕಾಲದ ಸಮಯದಲ್ಲಿ ಹುರಿದ ಎಳ್ಳು, ಹುರಿದ ಕಡಲೆ ಬೀಜ, ಕೊಬ್ಬರಿ, ಬೆಲ್ಲದ ಅತ್ಯಂತ ಚಿಕ್ಕ ತುಂಡುಗಳು ಇಲ್ಲವೇ ಸಕ್ಕರೆಯ ಪುಡಿ, ಏಲಕ್ಕಿ ಪುಡಿ ಹಾಗೂ ಬಣ್ಣ ಬಣ್ಣದ ಕುಸುರೆಳ್ಳು (ಎಳ್ಳು ಸಕ್ಕರೆಯ ಪಾಕದಿಂದ ತಯಾರಿಸಿದ ಮಿಶ್ರಣ) ಸೇರಿಸಿದ ಮಿಶ್ರಣವನ್ನು ಈಗಾಗಲೇ ದೇವರಿಗೆ ನೈವೇದ್ಯ ಮಾಡಿರುವುದರಿಂದ ಸಂಜೆ ಮನೆಮನೆಗೂ ತೆರಳಿ ಒಬ್ಬರಿಗೊಬ್ಬರು ಪರಸ್ಪರ ಕೊಟ್ಟು ಕೊಂಡು ಎಳ್ಳು ಬೆಲ್ಲ ತಗೊಂಡು ಒಳ್ಳೆದನ್ನೇ ಮಾತಾಡೋಣ ಎಂದು ಹೇಳಿಕೊಳ್ಳುತ್ತಾರೆ. ಇಲ್ಲಿಯೂ ಕೂಡ ಕಹಿಯಾದ ಎಳ್ಳು ಮತ್ತು ಸಿಹಿಯಾದ ಬೆಲ್ಲ ನಮ್ಮ ಬದುಕಿನ ನೋವು ನಲಿವಿನ ದೃಷ್ಟಾಂತಗಳು. ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಎಷ್ಟೇ ಸುಖ ಬಂದರೂ ತಗ್ಗದೆ ಎಳ್ಳು ಬೆಲ್ಲದ ಮಿಶ್ರಣದಂತೆ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಈ ಹಬ್ಬ ನಮಗೆ ನೀಡುತ್ತದೆ.
ಮೈಸೂರು ಭಾಗದಲ್ಲಿ ಕಬ್ಬಿನ ತುಂಡುಗಳನ್ನು, ಬೆಲ್ಲದ ಅಚ್ಚು ಸಕ್ಕರೆಯ ಅಚ್ಚು ಕುಸುರೆಳ್ಳು ಕೊಬ್ಬರಿಯ ಬಾಗಿನವನ್ನು ಚಿಕ್ಕ ಮಕ್ಕಳು ಮನೆ ಮನೆಗೆ ಹೋಗಿ ಕೊಟ್ಟು ಬರುತ್ತಾರೆ.
ಇನ್ನು ಕೆಲವು ಕಡೆ ಚಿಕ್ಕ ಮಕ್ಕಳನ್ನು ಮನೆಯ ಮುಖ್ಯ ಹೊಸ್ತಿಲಿನ ಮೇಲೆ ಕೂಡಿಸಿ ಚಿನ್ನದ ಸರ ಉಂಗುರ ಹವಳ ಮುತ್ತು ಹುಳಿ ಕಡಲೆಕಾಯಿ, ಮಂಡಕ್ಕಿ ಬೆಂಡು ಬೆತ್ತಾಸಗಳ ಮತ್ತಿತರ ವಿವಿಧ ಬಗೆಯ ಹಣ್ಣುಗಳನ್ನು ಒಂದು ಸೇರಿನಲ್ಲಿ ತುಂಬಿ ಮಗುವಿನ ತಲೆಯ ಮೇಲೆ ಸುರಿದು ಆರತಿ ಮಾಡುತ್ತಾರೆ. ಇದನ್ನು ಹಣ್ಣೆರೆಯುವುದು ಎಂದು ಕರೆಯುತ್ತಾರೆ. ಇದು ಮಕ್ಕಳ ವಿಶೇಷ ಆರೋಗ್ಯ, ಆಯುಸ್ಸು ಮತ್ತು ಶ್ರೇಯೋಭಿವೃದ್ಧಿಗಾಗಿ ಮಾಡುವ ಹಬ್ಬ.
ಇಂಗ್ಲಿಷ್ ಕ್ಯಾಲೆಂಡರ್ ತಿಂಗಳ ಮೊದಲ ಹಬ್ಬ
ಸಂಕ್ರಾಂತಿಯ ಶುಭಾಶಯಗಳು…..ಬನ್ನಿ ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನೆ ಮಾತನಾಡೋಣ.
ವೀಣಾ ಹೇಮಂತ್ ಗೌಡ ಪಾಟೀಲ್