ವ್ಯಕ್ತಿ ಸಂಗಾತಿ
14ನೆ ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳನಾದ್ಯಕ್ಷೆ-
ಸಂಕಮ್ಮ ಗೋಣೇಶ ಸಂಕಣ್ಣನವರ
ವ್ಯಕ್ತಿಚಿತ್ರಣ-ಸುಹೇಚ ಪರವಾಡಿ
(ಎಡರು ತೊಡರುಗಳನ್ನೆ ಸೊಡರಾಗಿಸಿ ಸಮೃದ್ಧಿ ಪ್ರಕಾಶನ ಹುಟ್ಹಾಕಿ ಸಹಜ ಸಮೃದ್ಧ ಸಾಹಿತ್ಯವನ್ನು ಕೃಷಿಮಾಡುತ್ತಾ, ಮೌಲಿಕ ಸಂದೇಶವನ್ನು ನೀಡುತ್ತಿರುವ ಪ್ರತಿಭಾ ಶಿರೋಮಣಿ, ಬ್ಯಾಡಗಿ ಕೆಂಪು ಮೆಣಸಿನಕಾಯಿ ನಾಡಿನ ನಾಡರತ್ನ ಕವಯಿತ್ರಿ, ವೈಚಾರಿಕ ಪ್ರಬುದ್ಧ ಲೇಖಕಿ, ದಾಂಪತ್ಯ ಮತ್ತು ಸಮಾಜಕ್ಕೆ ನ್ಯಾಯೋಚಿತ ಕೊಡುಗೆ ನೀಡಿದ ಸಮಾಜಮುಖಿ ಚಿಂತಕಿ, ಸರಳತೆಯ ಸಾಕಾರಮೂರ್ತಿ, ಕ್ರಿಯಾಶೀಲ ಸಂಘಟಕಿ, ಮಹಿಳೆರಿಗೆಲ್ಲಾ ಮಾದರಿಯ ನಾರಿ, ಶೋಷೀತೃ ಧ್ವನಿ, ಸಾಹಿತ್ಯ ಧ್ಯೇನಿ, ಪ್ರಬುದ್ಧ ಉಪನ್ಯಾಸಕಿ, ಗೋಣೇಶ ಪ್ರಿಯೆ ವಚನಾಂಕಿತೆ, ನಾಡೋಜ ಪಾಟೀಲ ಪುಟ್ಟಪ್ಪನವರ ಮಾನಸ ಪುತ್ರಿ, ಮಾತೃಹೃದಯಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಕಮ್ಮ ಗೋಣೇಶ ಸಂಕಣ್ಣನವರು ಹಿರೇಕೆರೂರಿನ ಪೋಲಿಸ್ ಮೈದಾನದಲ್ಲಿ ೧೦ ಮತ್ತು ೧೧ ಜನವರಿ ೨೦೨೫ರ ಗುರುವಾರ ವ ಶುಕ್ರವಾರ ಎರಡುದಿನ ಆಯೋಜನೆಯಾಗಿರುವ ಹಾವೇರಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಯಾಗಿರುವ ಸನ್ಮಾನ್ಯರ ಬಹುಮುಖ ಜೀವನ ಶೋಧನಾ ಬದುಕು ಬರಹದ ಮೇಲೆ ಬೆಳಕು ಚೆಲ್ಲುವ ಕಿರು ಲೇಖನ)
ಹಾವೇರಿ ಜಿಲ್ಲೆಯ ಹೆಮ್ಮೆಯ ನಾರಿಮಣಿ ಪ್ರತಿಭಾ ಶಿರೋಮಣಿ ಲೇಖಕಿ ಸಂಕಮ್ಮ ಜಿ. ಸಂಕಮ್ಮನವರ
*(ಸಂಕಷ್ಟಗಳಿಗೆ ಎದೆಗುಂದದ ಬ್ಯಾಡಗಿಯ ಸುವರ್ಣ ಕನ್ನಡತಿ ಲೇಖಕಿ ಸಂಕಮ್ಮ ಸಂಕಣ್ಣನವರ ಜೀವನ ಚಿತ್ರಣ)
ಸಾಮರಸ್ಯದ ನಾಡಾದ ಹಾವೇರಿ ಜಿಲ್ಲೆಯ ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಿನ್ನಲೆ
ಹಾವೇರಿ ಜಿಲ್ಲೆಯ ಇತಿಹಾಸವು ಇತಿಹಾಸಪೂರ್ವ ಕಾಲಕ್ಕೆ ಸೇರಿದೆ. ತುಂಗಭದ್ರಾ ಮತ್ತು ವರದಾ ನದಿಯ ಜಲಾನಯನ ಪ್ರದೇಶಗಳಲ್ಲಿ ಇತಿಹಾಸಪೂರ್ವ ನಾಗರಿಕತೆಗಳ ಅಸ್ತಿತ್ವದ ಬಗ್ಗೆ ಪುರಾವೆಗಳು ಲಭ್ಯವಿವೆ. ಶಿಲಾಯುಗದ ನಾಗರಿಕತೆಗಳನ್ನು ಬಿಂಬಿಸುವ ಕಲ್ಲಿನ ಕೆತ್ತನೆಗಳು ಜಿಲ್ಲೆಯ ಹಲವೆಡೆ ಕಂಡುಬರುತ್ತವೆ. ಚಾಲುಕ್ಯರು, ರಾಷ್ಟ್ರಕೂಟರಂತಹ ವಿವಿಧ ಅರಸರ ಸುಮಾರು 1300 ಶಿಲಾ ಬರಹಗಳು ಜಿಲ್ಲೆಯಲ್ಲಿ ಕಂಡುಬರುತ್ತವೆ. ಕರ್ನಾಟಕದ ಯಾವುದೇ ಪ್ರಮುಖ ಸಾಮ್ರಾಜ್ಯಗಳು ಹಾವೇರಿಯಲ್ಲಿ ತಮ್ಮ ಕೇಂದ್ರ ಕಚೇರಿಯನ್ನು ಹೊಂದಿರದಿದ್ದರೂ, ಅನೇಕ ಮಾಂಡಲಿಕರು ಈ ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದರು.
ಭಾವೈಕ್ಯಕವಿ ಸಂತ ಶಿಶುನಾಳ ಶರೀಫರು, ಸಾಮರಸ್ಯ ಕವಿ ಭಕ್ತಶ್ರೇ಼ಷ್ಟ ಕನಕದಾಸರು, ಸೌಹಾರ್ದ ಕವಿ ವರಕವಿ ಸರ್ವಜ್ಞ, ಹಾನಗಲ್ ಕುಮಾರ ಶಿವಯೋಗಿಗಳು, ವಾಗೀಶ ಪಂಡಿತಾರಾಧ್ಯರು, ಕಾದಂಬರಿ ಪಿತಾಮಹ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಪಂಡಿತ ಪುಟ್ಟರಾಜ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ:ವಿನಾಯಕ ಕೃಷ್ಣ ಗೋಕಾಕರು ಮುಂತಾದ ಮಹನಿಯರುಗಳಿಗೆ ಜನ್ಮನೀಡಿದ ಹೆಮ್ಮೆಯ ಜಿಲ್ಲೆ ಹಾವೇರಿ. ದಾಸಸಾಹಿತ್ಯದ ಹೆಗ್ಗಳಿಕೆ ಹೆಳವನಕಟ್ಟೆ ಗಿರಿಯಮ್ಮ ಕ್ರಿ.ಶ.೧೭೫೦ರ ಸುಮಾರಿಗೆ ರಾಣೆಬೆನ್ನೂರಿನಲ್ಲಿ ಜೀವಿಸಿದ್ದಳು. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮ ಮೈಲಾರ ಮಹದೇವಪ್ಪನವರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನವರು. ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಹಳ್ಳಿಕೇರಿ ಗುದ್ಲೆಪ್ಪನವರು ಹಾವೇರಿ ಜಿಲ್ಲೆಯ ಹೊಸರಿತ್ತಿಯವರು.
ಮುದ್ರಣಕಾಸಿ ಗದಗ ಜಿಲ್ಲೆ ಜೊತೆಗೆ ಏಲಕ್ಕಿ ನಗರಿ ಹಾವೇರಿ ಜಿಲ್ಲೆ ಹಿಂದೆ ಅವಿಭಜಿತ ವಿದ್ಯಾಕಾಸಿ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಜನರ ಬೇಡಿಕೆಯ ಮೇರೆಗೆ ಹಾವೇರಿ ಜಿಲ್ಲೆಯನ್ನು ಹಳೆಯ ಧಾರವಾಡ ಜಿಲ್ಲೆಯಿಂದ ಬೇರ್ಪಡಿಸಿ ೨೪.೦೮.೧೯೯೭ ರಂದು ಹಾವೇರಿ ನೂತನ ಜಿಲ್ಲೆ ರಚಿಸಲಾಯಿತು. ಅಂದಿನಿಂದ ಇಂದಿನವರೆಗೆ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ೦೫ ಜನ ದಿಗ್ಗಜ ಅಧ್ಯಕ್ಷರುಗಳ ಸಾಹಿತ್ಯ ಪರಿಚಾರಿಕೆಯಲ್ಲಿ ೧೩ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು, ೦೧ ಮಹಿಳಾ ಸಾಹಿತ್ಯ ಸಮ್ಮೇಳನ ರಸ ಪೂರ್ಣವಾಗಿ ಜನಮಾನಸದಲ್ಲಿ ನಾಡು ನುಡಿ ಸಂಸ್ಕೃತಿಯ ಚಿಂತನೆ ಪ್ರವಹಿಸಿದೆ. ಅವುಗಳಲ್ಲಿ ಡಾ. ಕೆ. ಎಚ್. ಮುಕ್ಕಣ್ಣನವರ (೧೯೯೮ – ೨೦೦೧) ರವರ ಅವಧಿಯಲ್ಲಿ ಡಾ. ಬೋಜ ರಾಜ ಪಾಟೀಲ ಸರ್ವಾಧ್ಯಕ್ಷತೆಯಲ್ಲಿ ೦೧ ನೇ ಸಮ್ಮೇಳನವು ೨೧ – ೨೨ ಜನವರಿ ೨೦೦೦ರಂದು ರಾಣೇಬೆನ್ನೂರಲ್ಲಿ ನಡೆದು ಅಂದಿನಿಂದ ೧೩ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ರಾಣೇಬೆನ್ನೂರಲ್ಲಿ ನಡೆದಾಡುವ ಗ್ರಂಥಾಲಯ ಜೆ.ಎಮ್. ಮಠದರವರ ಸರ್ವಾಧ್ಯಕ್ಷತೆಯಲ್ಲಿ ೨೦೨೪ ರ ಪೆಬ್ರವರಿ ೧೧-೧೨ ರಂದು ನಡೆದು ಯಶಸ್ವಿಮಾಡಿದ್ದು
ಅವುಗಳಲ್ಲಿ ಪ್ರೊ. ಮಾರುತಿ ಶಿಡ್ಲಾಪುರ (೨೦೦೮ – ೨೦೧೧) ರವರ ಕಾಲಾವಧಿಯಲ್ಲಿ * ೦೪ ನೇ ಸಮ್ಮೇಳನವು ಡಾ. ಚನ್ನಕ್ಕ ಪಾವಟೆ ಮುಂದಾಳತ್ವದಲ್ಲಿ ಬಮ್ಮನ ಹಳ್ಳಿಯಲ್ಲಿ ೫ – ೬ ಪೆಬ್ರವರಿ ೨೦೦೯ನೇ ಇಸ್ವಿಯಲ್ಲಿ ಜರುಗಿದೆ. ಪ್ರಥಮ ಮಹಿಳಾ ಅಧ್ಯಕ್ಷತೆ ಗೌರವ ಒಲಿದಂತಾಯಿತು. ಹಾವೇರಿ ಜಿಲ್ಲಾ ಮೊದಲ ಮಹಿಳಾ ಸಾಹಿತ್ಯ ಸಮ್ಮೇಳನವು ಪ್ರೊ. ಗಿರಿಜಾದೇವಿ ದುರ್ಗದಮಠರ ಮುಖಂಡತ್ವದಲ್ಲಿ ಹಾವೇರಿಯಲ್ಲಿ ೨೪ ಪೆಬ್ರವರಿ ೨೦೧೮ನೇ ಇಸ್ವಿಯಲ್ಲಿ ಜರುಗಿದ್ದು ಐತಿಹಾಸಿಕ ದಾಖಲೆಯಾಗಿದೆ. ಪ್ರಸುತ್ತ ಹಿರೇಕೆರೂರುರಿನ ಪೋಲಿಸ್ ಮೈದಾನದಲ್ಲಿ ೧೦ ವ ೧೧ ಜನವರಿ ೨೦೨೫ರ ಶುಕ್ರವಾರ ಮತ್ತು ಶನಿವಾರ ನಡೆಯುವ ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಬ್ಯಾಡಗಿಯ ಬಹುಮುಖ ಪ್ರತಿಭಾ ಸಂಪನ್ನ ಲೇಖಕಿ ಸಂಕಮ್ಮ ಗೋಣೇಶ ಸಂಕಮ್ಮನವರಿಗೆ ಒಲಿದು ಬಂದಿರುವುದು ಮಹಿಳಾ ಸಬಲೀಕರಣಕ್ಕೆ ಹಿಡಿದ ನಿದರ್ಶನವಾಗಿದೆ. ಈ ಸಂದರ್ಭದಲ್ಲಿ ಹಾವೇರಿ ನೆಲ ಮೂಲದ ಮಹಿಳಾ ಸಾಧಕಿಯರ ಕುರಿತು ಉಲ್ಲೇಖಿಸುವುದು ಸಂದರ್ಭೋಚಿತವಾಗಿದೆ.
ಹಾವೇರಿ ಜಿಲ್ಲೆಯ ಮಹಿಳಾ ಸಾಧಕಿಯರ ಕ್ಲುಪ್ತ ಚಿತ್ರಣ
ಸ್ವಾತಂತ್ರ್ಯ ಹೊರಾಟಗಾರ್ತಿ ಸಿದ್ಧಮ್ಮ ಮೈಲಾರ ಮೋಟೆಬೆನ್ನೂರಿನವರು. ಕಾದಂಬರಿ ಪಿತಾಮಹ ಗಳಗನಾಥರ ಮೊಮ್ಮಗಳಾದ ಸುರೇಖಾ ಕುಲಕರ್ಣಿ ಅವರು ಕಾದಂಬರಿಕಾರನ ಕಾದಂಬರಿ ಕೃತಿ ಬರೆದಿದ್ದಾರೆ. ಹಾವೇರಿ ಮೂಲದ ಕುಲಶೇಖರಿ ಕಾವ್ಯನಾಮದ ಲೇಖಕಿ ಉಷಾ ಪಾಟೀಲ್ ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಕನ್ನಡದಿಂದ ಹಿಂದಿ ಭಾಷೆಗೆ ಅನುವಾದಿಸುವ ಮಹಾದೇವಿ ಕಣವಿಯವರು ಹಾವೇರಿ ನೆಲದವರು. ಕವಯತ್ರಿ ಸಿದ್ದುಮತಿ ನೆಲುಗಿ ರಾಣಿ ಚೆನ್ನಮ್ಮನ ಮೇಲೆ ಮಹಾಕಾವ್ಯವನ್ನು ರಚಿಸಿದ್ದಾರೆ. ಹಿಂದಿ ಚಲನಚಿತ್ರ ನಿರ್ದೇಶಕಿ ಅರುಣ ರಾಜ ಪಾಟೀಲ್ ಅವರು ಆರು ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಿ. ಜಿ. ಬಣಕಾರರ ಮಗಳಾದ ರೂಪಾ ತಂಬಾಕರ ಕವಿತ್ರಿಯಾಗಿದ್ದಾರೆ. ದೀಪ ಗೋನಾಳ್ ಇವರು ಕೂಡ ಕವಯಿತ್ರಿಯಾಗಿದ್ದಾರೆ. ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪುರಸ್ಕೃತೆ ಯುವ ಕವಯತ್ರಿ ಮಧು ಕಾರಗಿ ಬ್ಯಾಡಗಿಯವರು. ದಿವಂಗತ ಗಿರಿಜಾ ದುರ್ಗದಮಠ ಇವರು ಕೂಡ ಕವಯಿತ್ರಿ ಮತ್ತು ಲೇಖಕಿಯಾಗಿದ್ದರು. ಇನ್ನೂ ಹಲವು ವನಿತೆಯರು ದೇಶದಾದ್ಯಂತ ಹಾವೇರಿ ಹಿರಿಮೆಯನ್ನು ಮೆರೆಸಿದ್ದಾರೆ. ಇವರೆಲ್ಲರಲ್ಲಿ ಲೇಖಕಿ ಸಂಕಮ್ಮ ಸಂಕಮ್ಮನವರ ಬಹುಮುಖ ಸಾಹಿತ್ಯ ಸಾಧನೆ ಕರುನಾಡಿನ ಸಾರಸ್ವತ ಲೋಕಕ್ಕೆ ವಿಶಿಷ್ಟವಾದ ಕೊಡುಗೆದಾಗಿದೆ. ಈ ಪಾದರಸದಂತ ಚಲನಶೀಲ ವ್ಯಕ್ತಿತ್ವ ಹೊಂದಿರುವ ಸಂಕಮನ್ನವರಿಗೆ ೨೭ ಡಿಸೆಂಬರ್ ೨೦೧೬ರಲ್ಲಿ ನಡೆದ ಬ್ಯಾಡಗಿ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಯಾಗಿ ನೇಮಕವಾದದನ್ನು ಸ್ಮರಿಸಲು ಯೋಗ್ಯವಾದದ್ದು.
ಕೆಂಪು ಮೆಣಸಿನಕಾಯಿಗೆ ವಿಶ್ವಖ್ಯಾತಿವೆತ್ತ ಸಂಕಮ್ಮನವರ ಕಾರ್ಯಕ್ಷೇತ್ರ ಬ್ಯಾಡಗಿಯ ವಿಶೇಷತೆ
ಕರುನಾಡ ರಾಜ್ಯ ರಾಜ್ಯಧಾನಿ ಸಿಲಿಕಾನ್ ಸಿಟಿ ಬೆಂಗಳೂರು, ಸಾಂಸ್ಕೃತಿಕ ರಾಜ್ಯಧಾನಿ ಮೈಸೂರು ಮತ್ತು ವಾಣಿಜ್ಯ ರಾಜ್ಯಧಾನಿ ಹುಬ್ಬಳ್ಳಿಯಿಂದ ಬ್ಯಾಡಗಿಗೆ ರೈಲು ನಿಲ್ದಾಣವಿದ್ದು; ಮೋಟೆಬೆನ್ನೂರಿಗೆ ಹೋಗಿ ಅಲ್ಲಿಂದ ೫ ಕಿ. ಮೀ ದೂರದಲ್ಲಿ ಬ್ಯಾಡಗಿ ಪಟ್ಟಣಕ್ಕೆ ಹೋಗಲು ಸುಲಭಸಾಧ್ಯ. ಯಾಲಕ್ಕಿ ನಾಡಾದ ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿಗೆ ಒಳ್ಳೆಯ ಕೆಂಪು ಬಣ್ಣ ಇದೆ. ಹಾಗೆಯೇ ಒಳ್ಳೆಯ ರುಚಿಯೂ ಕೂಡ ಇದೆ. “ಬ್ಯಾಡಗಿ ಮೆಣಸಿನಕಾಯಿ” ವಿಶ್ವ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಸಹಿತ ಪ್ರಸಿದ್ಧಿ ಪಡೆದಿದೆ. ಹಾಗೆಯೇ ಸುತ್ತೇಳು ಹಳ್ಳಿಗಳ ಸಾವಿರಾರು ಜನರಿಗೆ ಜೀವನ ನಡೆಸಲು ಕೆಲಸ ನೀಡಿ ಜನರ ಜೀವನಾಡಿಯಾಗಿದೆ. ಇಲ್ಲಿನ ಮೆಣಸಿನಕಾಯಿ ತಳಿಗಳಾದ ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ತಮ್ಮದೇ ಆದ ಬಣ್ಣ, ರುಚಿ ಗಳಿಂದ ಪ್ರಖ್ಯಾತವಾಗಿದೆ. ಕಾಗಿನೆಲೆ ಕನಕದಾಸರ ಕರ್ಮಭೂಮಿ, ಕದರಮಂಡಲಗಿ ಕಾಂತೇಶ ಇಲ್ಲಿಯ ಮತ್ತೊಂದು ಪ್ರಸಿದ್ಧ ದೇವಸ್ಥಾನ. ಜೊತೆಗೆ, ಮಹಾತ್ಮ ಗಾಂಧೀಜಿ ಕರೆಕೊಟ್ಟಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಏಕೈಕ ಕನ್ನಡಿಗ ಮೈಲಾರ ಮಹದೇವಪ್ಪ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ಕಬ್ಬು, ಭತ್ತ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಭಾವೈಕ್ಯತಾ ನಾಡು ಹಿರೇಕೆರೂರಿನ ವಿಶೇಷತೆ
ಹಾವೇರಿ ಜಿಲ್ಲಾ ಕೇಂದ್ರದಿಂದ ೪೪ ಕಿಲೋಮೀಟರ್ ದೂರದಲ್ಲಿರುವ ಹಿರೇಕೆರೂರು ತಾಲ್ಲೂಕು ಒಂದು ಪಂಚಾಯತ್ ಪಟ್ಟಣವಾಗಿದೆ.ಭಾವೈಕ್ಯ ಕವಿ ಸರ್ವಜ್ಞನ ಜನ್ಮಸ್ಥಳ ಅಬಲೂರು ಗ್ರಾಮ ಹಿರೇಕೆರೂರು ತಾಲ್ಲೂಕಿನಲ್ಲಿ ಇದ್ದು; ಪಟ್ಟಣದದಿಂದ 12 ಕಿಮೀ ದೂರದಲ್ಲಿದೆ. ಹರಿಭಕ್ತ ದಾಸರಾದ ಸಾಮರಸ್ಯ ಕವಿ ಸಂತ ಶ್ರೀ ಕನಕದಾಸರ ಜನ್ಮಸ್ಥಳವಾದ ಕಾಗಿನೆಲೆ ಪೀಠವು ಹಿರೇಕೆರೂರಿನಿಂದ ೨೪.೫. ಕಿಮೀ ದೂರದಲ್ಲಿದೆ. “ದೊಡ್ಡ ಕೊಳದ ಗ್ರಾಮ” ಎಂಬ ಹೆಸರು (ಘಟಕಗಳಿಂದ ಬಾಡಿಗೆ “ಹಿರೆ”, ದೊಡ್ಡದು; “ಕೆರೆ”, ಕೊಳ; ಮತ್ತು ಊರು, ಗ್ರಾಮ). ಈ ಹೆಸರನ್ನು “ಹೀ ರೇ ಕೇ ರೂರ್” ಎಂದು ಉಚ್ಚರಿಸಲಾಗುತ್ತದೆ. ನಗರಕ್ಕೆ ಸಮೀಪದಲ್ಲಿರುವ ರಾಣೆಬೆನ್ನೂರು ಬೀಜಗಳು ಮತ್ತು ಸಗಟು ಬಟ್ಟೆ ಮಾರುಕಟ್ಟೆಯಲ್ಲಿ ಶ್ರೀಮಂತ ಸರಕು ಮಾರುಕಟ್ಟೆಯಾಗಿದೆ. ಹಿರೇಕೆರೂರು ತಾಲೂಕಿನ ಜನರು ಪ್ರತಿನಿತ್ಯ ೩೭ ಕಿಲೋಮೀಟರ್ ದೂರದಲ್ಲಿರುವ ರಾಣೇಬೆನ್ನೂರಿಗೆ ಖರೀದಿಗೆ ಬರುತ್ತಾರೆ.
ಲೇಖಕಿ ಸಂಕಮ್ಮ ಸಂಕಣ್ಣವರ ರವರ ಬಾಲ್ಯ, ಶಿಕ್ಷಣ ದಾಂಪತ್ಯ ಜೀವನದ ವ ವ್ಯಕ್ತಿತ್ವದ ಕಿರು ಪರಿಚಯ
ಸಮೃದ್ಧಿ ೩೭ ನಿಸರ್ಗನಗರ, ಟೀಚರ್ಸ್ ಕಾಲೋನಿ ಕದರಮಂಡಲಗಿ ರಸ್ತೆ ಬ್ಯಾಡಗಿ (ಪಿ.ಕ್ರ.೫೮೧೧೦೬) ಯಲ್ಲಿ ವಾಸವಾಗಿರುವ ಗಟ್ಟಿಗಿತ್ತಿ ಸಂಕಮ್ಮನವರು ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ೧೦ ಅಗಸ್ಟ್ ೧೯೫೬ ರಂದು ಜನಿಸಿದರು. ತಂದೆ ಪುಟ್ಟಪ್ಪ ಮೋಟೆಬೆನ್ನೂರ (ಸ್ವಾತಂತ್ರ್ಯ ಹೋರಾಟಗಾರರು, ಬಹುಭಾಷಾ ಪಂಡಿತರು, ಉತ್ತಮ ವಾಗ್ಮಿಗಳು), ತಾಯಿ- ಪಾರ್ವತಮ್ಮ (ಗೃಹಿಣಿ). ಇವರ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಬ್ಯಾಡಗಿಯಲ್ಲಿ ಸಂಪನ್ನಗೊಂಡಿತ್ತು. ಪಿ. ಯು. ಸಿ. ಶಿಕ್ಷಣ ಹಾವೇರಿಯ ಜಿ .ಹೆಚ್. ಕಾಲೇಜಿನಲ್ಲಿ, ಬಿ. ಎಸ್ಸಿ ಪದವಿ ಹಂಸಭಾವಿ ಕಾಲೇಜ್‌ನಲ್ಲಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಜಾನಪದ (ಬಾಹ್ಯ) ಪದವಿಯನ್ನು ಪಡೆದರು. ೧೯೮೦ ಮೇ ೪ ರಂದು ಮೆಣಸಿನಕಾಯಿ ವ್ಯಾರಿಗಳಾದ ಬ್ಯಾಡಗಿಯ ಶ್ರೀ ಗೋಣೇಶ ಬಿ. ಸಂಕಣ್ಣನವರ (ಬಿ.ಎಸ್ಸಿ) ಇವರೊಂದಿಗೆ ವಿವಾಹವಾದರು. ಇವರ ಉದರದಲ್ಲಿ ಜನ್ಮದಳೆದ ಎರಡು ಗಂಡು ಮಕ್ಕಳಲ್ಲಿ ಹರ್ಷ ವ್ಯಾಪಾರಮಾಡುತಿದ್ದು; ಭಾರತ ಬ್ಯಾಂಕ್ ಉದ್ಯೋಗಿಯಾಗಿ ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಅಪರಾ ಜೀವನಾನುಭವ ಪಡೆದಿರುವ ಇವರರಿಗೆ ಓದು, ಬರಹ, ಪೇಂಟಿಂಗ್ಸ್ ಮಾಡುವುದು ಮತ್ತು, ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡುವುದು, ಜಾಗೃತಿ ಶಿಬಿರ, ಉಪನ್ಯಾಸ ಮತ್ತಿತರ ಹವ್ಯಾಸಗಳಿಂದ ಬದುಕನ್ನು ಹಸನುಗಿಳಿಸಿಕೊಂಡವರು. ೧೯೯೬ರಲ್ಲಿ ಗಂಭೀರ ಅಪಘಾತಕ್ಕೀಡಾಗಿ ಆರೋಗ್ಯದಲ್ಲಿ ಏರುಪೇರಾದರು ಧೃತಿಗೆಡದೆ ಜೀವನ ಸಾರ್ಥಕ್ಯಕ್ಕಾಗಿ ಪರಿಶ್ರಮಿಸಿದವರು. ೨೦೦೪ರಲ್ಲಿ ಸಮೃದ್ಧಿ ಪ್ರಕಾಶನ ಸ್ಥಾಪನೆ ಮಾಡಿ ಹತ್ತು ಹಲವಾರು ಗ್ರಂಥಗಳನ್ನು ಪ್ರಕಟಿಸಿ, ಸಾಹಿತ್ಯ ಕೃಷಿ ಮತ್ತು ಪ್ರಕಟಣೆಯ ಆಗು ಹೋಗುಗಳ ಹೊಣೆಗಾರಿಕೆಯ ಬಗ್ಗೆ ಆಳವಾಗಿ ಬಲ್ಲವರ ಮುಂದೆ ಸೈ ಎನಿಸಿಕೊಂಡಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಅಚ್ಚೊತ್ತಿದ ಛಲದಂಕ ಮಲ್ಲೆಯಾಗಿ ಸಾಹಿತ್ಯ ಕೃಷಿ ಮೂಲಕ ನಾಡಿಗೆ ಖುಷಿಯ ಸಂದೇಶವನ್ನು ನೀಡಿದ ಸುವರ್ಣ ಕನ್ನಡತಿ ಎಂದರೆ ಅತಿಶೋಕ್ತಿ ಆಗದು.
“ನಾ ಹುಟ್ಟಿ ಮೆಟ್ಟಿದ ನನ್ನೂರು ಮೂಕವಾಗಿ ಕಂಡಿತು ನನ್ನ ಬದುಕು ಅದು ಹರಿಸಿ ಹಾರೈಸಿತ್ತು ಅದಕು ಇದಕು ಎದಕು” ಎಂಬ ತನ್ನ ಜನ್ಮಭೂಮಿಯ ಉಪಕಾರವನ್ನು ಹೃದಯಾಂತರಾಳದಿಂದ ಸ್ಮರಿಸುವ ಮಾನವ್ಯ ಕಾರುಣ್ಯದ ಮಾತೆ. ಭೀಕರ ಅಪಘಾತಕ್ಕೀಡಾಗಿ ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದರೂ ಧೃತಿಗೆಡದೇ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡ ಗಟ್ಟಿಗಿತ್ತಿ.
ಇವರು ಸಿರಿಬರಲಿ, ಉರಿ ಬರಲಿ ಜೀವನ ಮಾತ್ರ ಸಿಹಿಯನ್ನು ಹಂಚುತ್ತಾ ಸಾಗಲಿ ಎಂಬ ನೀತಿ ಇವರದು. ಸದಾ ಸಮವಿನಯದ ಹಸನ್ಮುಖಿ
ಸಂಕಮ್ಮನವರು ಆಸ್ಥೆಯಿಂದ ಸ್ವದೇಶ – ಪರದೇಶಗಳಲ್ಲಿ ಭಾಗವಹಿಸಿದ, ಆಯೋಜಿಸಿದ ಸಾಹಿತ್ಯ ಸಮ್ಮೇಳನಗಳ ಪಕ್ಷಿನೋಟ
ಇವರು ಯಾವತ್ತು ವೇದಿಕೆ ಹಾರಾ ತುರಾಯಿ ಮತ್ತು ಹೆಚ್ಚುಗಾರಿಕೆ ಬಯಸಿದವರಲ್ಲ ಆದರೆ
ಮೂಡಬಿದರೆ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ, ಮಾರಿಷಸ್ದಲ್ಲಿ ಅಂತರಾಷ್ಟ್ರೀಯ ಕವಿಯಿತ್ರಿ ಸಮ್ಮೇಳನ, ಭತ್ತಿಸಗಢದಲ್ಲಿ ಜರುಗಿದ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ಹೈದ್ರಾಬಾದ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ಬರೋಡಾ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ದೆಹಲಿ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ಬಿಜಾಪೂರ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ಬೆಂಗಳೂರ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಮೈಸೂರು ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ಬೆಳಗಾಂ ವಿಶ್ವಕನ್ನಡ ಸಮ್ಮೇಳನದಲ್ಲಿ ಕವಿ ಗೋಷ್ಠಿಯಲ್ಲಿ ಭಾಗಿ, ಅನೇಕ ಕವಿಗೋಷ್ಠಿ ಅಧ್ಯಕ್ಷತೆ, ಆಶಯ ಭಾಷಣ, ಉಪನ್ಯಾಸ, ಪ್ರಬಂಧ ಮಂಡನೆ, ಅನೇಕ ಸಮಾರಂಭಗಳ ಆಯೋಜಕಿ, ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಜನ ಮೆಚ್ಚುಗೆ ಗಳಿಸಿದ ಕವನ ವಾಚನ, ಉತ್ತರಕನ್ನಡ ಲೇಖಕಿಯರ ಸಂಘದ ಬೆಳ್ಳಿ ಹಬ್ಬದಲ್ಲಿ ಜನ ಮೆಚ್ಚುಗೆ ಗಳಿಸಿದ ಕವನ ವಾಚನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿಯಲ್ಲಿ ಮೆಚ್ಚುಗೆ ಗಳಿಸಿದ ಕವನ ವಾಚನ, ಬಿಜಾಪುರ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಷನ ಗೋಷ್ಠಿಯಲ್ಲಿ ವಚನವಾಚನ, ದೆಹಲಿಯ ಹೊರನಾಡಕನ್ನಡಿಗರ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆ. ರಾಯಚೂರ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ವಾಚನ,
ಪ್ರಬುದ್ಧ ಉಪನ್ಯಾಸಕಿಯಾಗಿ, ಪ್ರಬಂಧ ಮಂಡನಾಕಾರಳಾಗಿ, ಜನ ಜೀವನಕ್ಕೆ ಸ್ಪಂದಿಸುವ ಕವಯತ್ತಿಯಾಗಿ ರಾಜ್ಯ ಮತ್ತು ರಾಷ್ಟ್ರ ರಾಜ್ಯಧಾನಿಗಳನ್ಮು ದಾಟಿ ಸಪ್ತಸಾಗರದಾಚೆಗೂ ಕರುನಾಡಿನ ಹಿರಿಮೆ ಗರಿಮೆಯನ್ನು ಪಸರಿಸಿ ಕರುನಾಡಿನ ಹೆಮ್ಮೆಯ ಪುತ್ರಿಯಾಗಿದ್ದಾರೆ.
ಕ್ರಿಯಾಶೀಲ ಸಂಘಟಕಿಯಾಗಿ ಪ್ರಬಂಧಕಿಯಾಗಿ ಸಂಕಮ್ಮನವರು ನಿರ್ವಹಿಸಿದ ಸೇವಾ ಕ್ಷೇತ್ರಗಳು
ಬದುಕಿನ ಕಷ್ಟ ನಷ್ಟಗಳಿಗೆ ಎದೆಗುಂದದೆ ದಾಂಪತ್ಯ ಮತ್ತು ಸಾಮಾಜ ಎರಡನ್ಮು ಸರಿದೂಗಿಸಿ. ಎಲ್ಲಾರಂಗಗಳಲ್ಲೂ ತಮ್ಮ ಅತ್ಯಮೂಲ್ಯ ಅವಿಸ್ಮರಣೀಯ ಕೊಡುಗೆಗಳನ್ನು ನೀಡಿರುವುದು ಪುರುಷ ಪ್ರಧಾನ ಸಮಾಜ ಅಚ್ಚರಿ ಪಡುವಂತದಾಗಿದೆ.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷೆ, ಹಾವೇರಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ, ವಿಶ್ವಾಸ ಫೌಂಡೇಶನ್ (ರಿ) ಬ್ಯಾಡಗಿ ಅಧ್ಯಕ್ಷೆ, ೧೯೮೪ ರಲ್ಲಿ ನೆಹರೂ ನಗರ ಸಂಗೀತ ಮಹಿಳಾ ಮಂಡಲದ ಕಾರ್ಯದರ್ಶಿ, ೧೯೮೪ ರಲ್ಲಿ ನೆಹರೂ ನಗರ ಸಂಗೀತ ಮಹಿಳಾ ಮಂಡಲದ ಕಾರ್ಯದರ್ಶಿ. ೧೯೯೦ರಲ್ಲಿ ರಾಣೇಬೆನ್ನೂರ ಸ್ಪಂದನ ಸೇವಾ ಸಂಸ್ಥೆಯುಪಾಧ್ಯಕ್ಷೆ ಹಾಗೂ ೧೯೯೬ರಲ್ಲಿ ಅಧ್ಯಕ್ಷೆ, ೧೯೯೬ರಲ್ಲಿ ಸುವರ್ಣ ಸ್ತ್ರೀ ಸೇವಾ ಸಂಸ್ಥೆ ಬ್ಯಾಡಗಿಅಧ್ಯಕ್ಷೆ ಮತ್ತು ಹುಬ್ಬಳ್ಳಿಯ ಬ್ಯಾಡಗಿ ಮೆಣಸಿನಕಾಯಿ ಸಂಸ್ಕರಣ ಮಹಿಳಾ ಸಹಕಾರ ಗಿರಣಿಯ ನಿರ್ದೇಶಕಿ.೨೦೦೧ರಲ್ಲಿ ರಲ್ಲಿ ಇದರ ನಿರ್ದೇಶಕರ ನಿಯೋಗದೊಂದಿಗೆ ದೆಹಲಿಗೆ ಭೇಟಿ, ೨೦೦೨ ರಲ್ಲಿ ಕರ್ನಾಟಕ ಮಹಿಳಾ ಅಭಿವೃದ್ಧಿಗೆ ಮಾನ್ಯ ಮೋಟವರಿಂದ ಹಾವೇರಿ ಜಿಲ್ಲೆ ಪ್ರತಿನಿಧಿಯಾಗಿ ಆಯ್ಕೆ, ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯಾ ಪರಿಷತ್ ಅಧ್ಯಕ್ಷೆ. ಅಖಿಲ ಭಾರತ ಕವಯಿತ್ರಿ ಸಂಘದ ಸದಸ್ಯೆ, ಕನ್ನಡಸಾಹಿತ್ಯ ಪರಿಷತ್ ಆಜೀವ ಸದಸ್ಯೆ, ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆ,ಉತ್ತರಕನ್ನಡ ಲೇಖಕಿಯರ ಸಂಘದ ಸದಸ್ಯೆ, ಕರ್ನಾಟಕ ಚಲನಚಿತ್ರ ಅಕಾಡಮಿಯ ಹಾವೇರಿ ಜಿಲ್ಲಾ ಬೆಳ್ಳಿ ಮಂಡಲದ ಅಧ್ಯಕ್ಷೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸದಸ್ಯೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಸ್ಥೆ, ಬ್ಯಾಡಗಿ ಸೇವಾದಳದ ಉಪಾಧ್ಯಕ್ಷೆ. ಹಾವೇರಿ ಜಿಲ್ಲಾ ಸೈಟ್ ಮತ್ತು ಗೈಡ್ನ ಜಿಲ್ಲಾ ಸಹಾಯಕ ಆಯುಕ್ತ. ಹಾವೇರಿ ಜಿಲ್ಲಾ ಮಹಿಳಾ ದೂರು ನಿವಾರಣಾ ಸಮಿತಿ ಸದಸ್ಯೆ. ಹಾವೇರಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ. ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಬ್ಯಾಡಗಿ ತಾಲೂಕ ಅಧ್ಯಕ್ಷೆ, ಸ್ತ್ರೀ ಮಾಸ ಪತ್ರಿಕೆಯ ವರದಿಗಾರ್ತಿ, ಜಾನಪದ ವಿಶ್ವ ವಿದ್ಯಾಲಯದ ಶಬ್ದ ಕೋಶರಚನೆಗೆ ಕ್ಷೇತ್ರ ತಜ್ಞಳಾಗಿ ಸೇವೆ. ಬ್ಯಾಡಗಿಯ ಬಿ ಆರ್ ಸಿ ಗೆ ಗೌರವ ಸಲಹೆಗಾರ್ತಿ ಸೇವೆ ಸಂದಿದೆ. ಧಾರವಾಡ ವಿದ್ಯಾವರ್ಧಕ ಸಂಘದ ಅಜೀವ ಸದಸ್ಯೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಪ್ರತಿನಿಧಿಯಾಗಿ ಈ ದಿಸೆಯಲ್ಲಿ ಸಂಕಮ್ಮನವರು ವಿವಿಧ ಸ್ತರದ ಸಮಾಜಮುಖಿ ಕಾರ್ಯದಲ್ಲಿ ತೊಡಗಿ “ಮನೆಗೆದ್ದು ಮಾರು ಗೆಲ್ಲು” ಎಂಬ ಗಾದೆಮಾತಿಗೆ ತಕ್ಕ ಅರ್ಥವಂತಿಕೆ ನೀಡಿದ ಬಹುಶೃತ ಸಮಾಜಿಕ, ಸಾಹಿತ್ಯಿಕ ಶೈಕ್ಷಣಿಕ ಮಾರ್ಗದರ್ಶಿ ಸುಭದ್ರಸಂಪನ್ನಶೀಲ ವ್ಯಕ್ತಿತ್ವ ಹೊಂದಿ ಕರುನಾಡಿನ ಹೆಮ್ಮೆಯ ಕನ್ನಡತಿಯಾಗಿದ್ದಾರೆ.
ಕನ್ನಡದ ದಿಟ್ಟ ಬರಹಗಾರ್ತಿಯರಾದ ಸಂಕಮ್ಮನವರ ವೈವಿಧ್ಯಮಯ ಕೃತಿ ತೋರಣಗಳ ನೋಟ :
ಅಂಕಣಗಾತಿ ಸಂಕಮ್ಮನವರು ತಾವು ಬದುಕಿನಲ್ಲಿ ಕಂಡುಂಡ ನೋವು – ನಲಿವು, ತಮ್ಮ ಬದುಕಿನ ಸುತ್ತ – ಮುತ್ತ ಅನುಭವಿಸಿದ ಘಟನಾವಳಿಗಳನ್ನು ಹಾಗೂ ನಾಡಿನ ಒಳಿತಿಗಾಗಿ ತಮ್ಮ ಜೀವನವನ್ನು ಮೇಣದಂತೆ ಕರಗಿಸಿ ಬೆಳಕಾದವರ ಬಾಳಿನ ಮೌಲ್ಯಗಳಿಗೆ ಅಕ್ಷರರೂಪ ನೀಡಿ ಕವನ ಸಂಕಲನ, ಜೀವನಚರಿತ್ರೆ, ಅಭಿನಂದನಗ್ರಂಥ ಕೃತಿಗಳನ್ನು ಹೊರತಂದು, ಜನಾರ್ಪಣೆಮಾಡಿ ಪ್ರಾಥ: ಸ್ಮರಣಿಯರನ್ನಾಗಿಸಿದ್ದಾರೆ. ಪ್ರತಿಮೆ ರೂಪಕ ಮುಖೇನ ಜನರ ಎದೆಯಲ್ಲಿ ಸೇತುವೆ ಕಟ್ಟಿರುವ ಮಾತೃಸ್ವರೂಪಿ ಅವರ ಎದೆಯಾಳದಿಂದ ಮೂಡಿ ಬಂದ ಬಹು ಆಯಾಮಗಳ ಕೃತಿಗಳ ನೋಟ ಈ ಕೆಳಕಾಣಿಸಿದಂತಿವೆ.
ಜೋಡಿಹಕ್ಕಿ (2004-ಕವನ ಸಂಕಲನ), ಮುತ್ತಿನ ತೆನೆ (2005 – ಹನಿಗವನ), ವಚನಸೃಷ್ಟಿ (2005 – ಆಧುನಿಕ ವಚನಗಳು), ವಚನ ವೃಕ್ಷ (ಆಧುನಿಕ ವಚನಗಳು), ಸೂರ್ಯಪ್ರಭ (2009 – ಅಭಿನಂದನಾ ಗ್ರಂಥ), ಧರೆಗಿಳಿದ ಧನ್ವಂತರಿ (2009 -ಸಂಪಾದನಾ ಗ್ರಂಥ), ಕನ್ನಡದ ಕಣ್ಮಣಿ – ಡಾ. ಮಹದೇವ ಬಣಕಾರ (2009- ಜೀವನ ಚರಿತ್ರೆ), ವಚನ (2010 -ಆಧುನಿಕ ವಚನಗಳು), ಬ್ಯಾಡಗಿರಾಯರು (2011- ಸಂಪಾದನಾ ಗ್ರಂಥ), ಹೋರಾಟದ ಒಂದು ನೋಟ (2011- ಸಿದ್ದಮ್ಮ ಮೈಲಾರರ ಬದುಕು), ನುಡಿ ಬಾಗಿನ (ಅಭಿನಂದನ ಗ್ರಂಥ), “ಕನಕ ” ಜಿಲ್ಲಾ ಉತ್ಸವ ಸ್ಮರಣ ಸಂಚಿಕೆ ಸಂಪಾದನೆ, ನೆಲದ ನಕ್ಷತ್ರಗಳು (ಹಾವೇರಿ ಜಿಲ್ಲಾ ಸಾಧಕರು ಗದ್ಯಕೃತಿ), ಜಿಲ್ಲೆಯ ಮಹಿಳಾ ರತ್ನಗಳು (ಭಾರತ ಜ್ಞಾನ ವಿಜ್ಞಾನ ಸಮಿತಿ ಪ್ರಕಟಣೆ), ಜಿಲ್ಲೆಯ ಜಾನಪದ ಆಟಗಳು, ಸಿದ್ದಮ್ಮ ಮೈಲಾರ (ಗದಗ ಅಧ್ಯಯನ ಸಂಸ್ಥೆ), ಮಾಸದ ಹೆಜ್ಜೆಗಳು (ಅಂಕಣ ಬರಹ), ಹರಿದಾಡತಾವ ಭಾವ (ಕವನ ಸಂಕಲನ), ಬ್ಯಾಡಗಿ ರಾಯರು ಬೇಟಗೇರಿ ಮೃತ್ಯುಂಜಯಪ್ಪನವರು (ಅಭಿನಂದನಾ ಗ್ರಂಥ). ಪಾಪು ಪ್ರಪಂಚದ ಇಂಪು (ಇಂದುಮತಿ ಪುಟ್ಟಪ್ಪ ಪಾಟೀಲರ ಜೀವನ ಚರಿತ್ರೆ)
ಬಹುಮುಖ ಪ್ರತಿಭಾನ್ವಿತ ಸಂಕಮ್ಮನವರ ಬಹುವಿಧ ಪ್ರತಿಭಾದರ್ಶನ
ಜೀವನ ಚರಿತ್ರೆ ಬರಹಗಾರ್ತಿ ಸಂಕಮ್ಮನವರ ‘ಹೋರಾಟದ ಒಂದು ನೋಟ’ ಜೀವನ ಚರಿತ್ರೆ ಕೃತಿಯು
‘ಸ್ವಾತಂತ್ರ್ಯ ಸೇನಾನಿ ಸಿದ್ದಮ್ಮ ಮೈಲಾರ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಹಿಂದಿ ಭಾಷೆಗೆ ಲೀಲಾ ಕಲಕೋಟಿಯವರು ಅನುವಾದಿಸಿದ್ದಾರೆ. ಅಲ್ಲದೆ ಈ ಕೃತಿ ಆಧರಿಸಿ ೨೦೧೬ರಲ್ಲಿ “ಕನ್ನಡದ ಹುಲಿ ಮಹದೇವ ಮೈಲಾರ” ಚಲನಚಿತ್ರವಾಗಿ ಬೆಳ್ಳಿ ತೆರೆಯ ಮೂಲಕ ನಾಡಿನ ಜನತೆಯಲ್ಲಿ ನಾಡಪ್ರೇಮವನ್ನು ಬಿತ್ತರಿಸಿದೆ. ಚಂದನ ಟಿವಿಯ ಬೆಳಗು ಕಾರ್ಯಕ್ರಮದಲ್ಲಿ ಸಂದರ್ಶನ, ಓ ಸಖಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮೂರು ಸಾರಿ ಭಾಗವಹಿಸಿದ್ದು. ಶುಭೋದಯ ಕರ್ನಾಟಕದಲ್ಲಿ ಸಂದರ್ಶನ. ಹಾವೇರಿಯೇ ಕೆ. ಎಫ್ ಚಾನೆಲ್ ನಲ್ಲಿ ಸಂದರ್ಶನ. ಧಾರವಾಡ ಆಕಾಶವಾಣಿಯಲ್ಲಿ ಹಲವಾರು ಚಿಂತನ ಕಾರ್ಯಕ್ರಮ, ಉಪನ್ಯಾಸ ಮತ್ತು ಕವನ ವಾಚನ ಪ್ರಸಾರವಾಗಿವೆ. ಪ್ರಸನ್ನ ಭೋಜರಾಜರ ಸಂಗೀತದಲ್ಲಿ ನವನವೀನ ಸ್ವರ – ಮಧು ಮಧುರ ಗಾನಾಂಕುರ (ಭಾವಗೀತೆಗಳು), ನನ್ನ ಓದು ನನ್ನ ಕವಿತೆ (ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು) ಈ ಎರಡು ಅಡಕ (ಧ್ವನಿ ಮುದ್ರಿಕೆ) ಮುದ್ರಿಕೆಗಳು ಹೊರಬಂದು ಅಭಿಮಾನಿ ಬಳಗಕ್ಕೆ ಸಂತೋಷ ತಂದಿದೆ.
ಅಚ್ಚಿನಲ್ಲಿರುವ ಕೃತಿಗಳು
ನಂಗನಿಸಿದ್ದು ಅಂಕಣಬರಹ, ಓದೊಳಗಿನ ಓದು, ವೀರಮ್ಮ ಕರಿಯಪ್ಪ ಸಂಗೂರ (ಜೀವನ ಚರಿತ್ರೆ)
ಅಂಗಣಗಾರ್ತಿ ಸಂಕಮ್ಮನವರ ಪತ್ರಿಕಾ ನಂಟು ಮತ್ತು ಉದಯೋನ್ಮುಖ ಬರಹಗಾರಿಗೆ ಮಾರ್ಗದರ್ಶಿ ಬೆನ್ನುಡಿ ಸೇವೆ
ಸಂಯುಕ್ತ ಕರ್ನಾಟಕ, ಸುಧಾ, ತರಂಗ, ವಿಜಯ ಕರ್ನಾಟಕ, ಪ್ರಜಾ ವಾಣಿ, ಕಸ್ತೂರಿ, ಹಾಯ್ ಬೆಂಗಳೂರು, ಪಿಸುಮಾತು, ಹೊನ್ನಾರು, ದಲಿತ ಕ್ರಾಂತಿ, ಸ್ತ್ರೀ ಪತ್ರಿಕೆ ಇನ್ನೂ ಅನೇಕ ಪತ್ರಿಕೆಗಳಲ್ಲಿ ಲೇಖನ ಪ್ರಕಟ. ಕೌರವ ದಿನ ಪತ್ರಿಕೆಯಲ್ಲಿ ‘ ಹೆಣ್ಣು ಹೆಜ್ಜೆ ‘ ಮತ್ತು ‘ನಂಗನಿಸಿದ್ದು’ ಅಂಕಣಗಳು ಪ್ರಕಟವಾಗಿವೆ. ಅನೇಕ ಅಭಿನಂದನಾ ಗ್ರಂಥಗಳಿಗೆ ಲೇಖನಗಳನ್ನು ಬರೆದುದ್ದಾರೆ. ಅನೇಕ ಉದಯೋನ್ಮುಖ ಲೇಖಕರ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಶುಭಹಾರೈಕೆ ನುಡಿ ಬರೆದು ಪ್ರೋತ್ಸಾಹಿಸಿ ಮಾರ್ಗದರ್ಶಸಿದ್ದಾರೆ.
ಸಂಪನ್ನ ಶರಣಜೀವಿ ಸಂಕಮ್ಮನವರ ಬದುಕು ಮತ್ತು ಕೃತಿಗಳ ಸಾಹಿತಿ ಒಡನಾಡಿಗಳ ಸದಾಭಿಪ್ರಾಯಗಳು
ಮಾಸದ ಹೆಜ್ಜೆಗಳು ಕೃತಿಯ ಬೆನ್ನುಡಿಯಲ್ಲಿ…..ಪಾಪುರವರು
ಅವರ ಎಲ್ಲ ಕೃತಿಗಳನ್ನು, ಲೇಖನಗಳನ್ನು ನಾನು ಮತ್ತು ನನ್ನ ಪತ್ನಿ ಇಂದುಮತಿ ತಪ್ಪದೇ ಓದುತ್ತಿದ್ದೆವು. ಅವರ ಬರಹದಲ್ಲಿ ಜೀವಂತಿಕೆಯಿದೆ. ಚಿಕಿತ್ಸಕ ಬುದ್ಧಿಶಕ್ತಿಯಿದೆ. ಸದಾ ಸಜ್ಜನರ ಸಂಗದೊಳಿದ್ದು ಮಾಡಿದ ಸಾಧನೆ ಸ್ವಯಾರ್ಜಿತವಾದದ್ದು. ಎಲ್ಲವನ್ನೂ ಅರಿತು. ಎಲ್ಲರೊಡನೆ ಬೆರೆತು ಒಂದಾಗಬಲ್ಲ ಹೃದಯವೈಶಾಲ್ಯತೆ ಅವರಲ್ಲಿದೆ. ನಮ್ಮ ಪ್ರೀತಿಯ ಮಗಳಾದ ಸಂಕಮ್ಮ ಸಾಹಿತ್ಯಲೋಕದಲ್ಲಿ ಇನ್ನೂ ಎತ್ತರಕ್ಕೇರಬಲ್ಲಳೆಂಬ ನಂಬಿಕೆ ನನಗಿದೆ.
ಬ್ಯಾಡಗಿ ಬಾಗಿನ ಅಭಿನಂದನಾ ಗ್ರಂಥ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪ ಗೌಡರ, ಬೆಳಗಾವಿ*
ಅಕ್ಕನ ಭಲ, ಅಂಡಾಳಲ ನಿರ್ಮೋಹ, ನಾಗಲಾಂಬಿಕೆಯ ಹಿರಿತನ, ಬಸವನ ತಾಯ್ತನ, ಬುದ್ಧನ ಪ್ರೀತಿ, ಅಂಬೇಡ್ಕರರ ಸ್ವಾಭಿಮಾನ, ಅಲ್ಲಾಹುವಿನ ಸಮತೆ, ವಿಸುವಿನ ಕರುಣೆ, ಗಾಂಧೀಜಿಯವರ ಅಹಿಂಸೆಯಂತಹ ಗುಣಗ್ರಾಹಿಗಳಾಗಿದ್ದಾರೆ. ಸದಾ ಕಾಂತಸ್ವಭಾವ, ತಣ್ಣನೆಯ ಬದುಕು, ಸಹೃದಯತೆಯ ಆಕ್ಕರೆಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾದವರು. ಇವರೊಬ್ಬ ಅಪೂರ್ವ ಕಲಾವಿದೆ, ಜನಮೆಚ್ಚಿದ ಸ್ನೇಹಿತ, ಜಗಮೆಚ್ಚಿದ ಸಹೃದಯಿ, ಲೇಖಕಿ, ಕವಿಯತ್ರಿ ಸಾಹಿತಿಯೂ ಆದ ಶರಣಜೀವಿ, ತಮ್ಮ ಅಭಿವ್ಯಕ್ತಿ ಕೃತಿಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಸೇವೆಸಲ್ಲಿಸಿದ್ದಾರೆ. ಎಲೆಮರೆಯ ಕಾಯಿಯಂತಿರುವ ಅನೇಕ ಸೃಜನಶೀಲ ಪ್ರತಿಭಾನ್ವಿತರನ್ನು ತಮ್ಮ ಬರವಣಿಗೆಯ ಮೂಲಕ ಪರಿಚಯಸಿದ ಶ್ರೇಯಸ್ಸು
“ಕಾವ್ಯ ಅಂತರಂಗದ ಬೆಳಕು” ಎನ್ನುವುದಕ್ಕೆ ‘ಹರಿದಾಡುತಾವ ಭಾವ’ ಕವನ ಸಂಕಲನದ ಕವಿತೆಗಳು ಸಾಕ್ಷಿಯಾಗಿವೆ. …… ಡಾ. ಪಂಚಾಕ್ಷರಿ ಹಿರೇಮಠ.
“ರಕ್ತ ಸಂಬಂಧವಲ್ಲದ ಬಳಗ ತಲೆಗೂದಲಿಗೊಂದಿಹುದು ಸಂಕಮ್ಮಗ” ……ಪಿ. ಮನೋಹರಿ ಪಾರ್ಥಸಾರಥಿ.
ಸುವರ್ಣ ಕನ್ನಡತಿ ಸಂಕಮ್ಮನವರಿಗೆ ಒಲಿದುಬಂದ ಪ್ರಶಸ್ತಿ ಪುರಸ್ಕಾರ ಗೌರವಾಧಾರಗಳು
ಸಂಪನ್ನ ಶರಣ ಜೀವಿಯಾದ ಇವರು ಎಂದೂ ಯಾವ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಹಪಪಪಿಸಿದವರಲ್ಲ. ತಾವಾಯಿತು, ತಮ್ಮ ಕೆಲಸವಾಯಿತು. ಫಲಾಪೇಕ್ಷೆ ಬಯಸದೆ ಪರೋಪಕಾರಿಯಾಗಿ ಬಾಳಿದವರಿಗೆ ಪ್ರಶಸ್ತಿ ಸನ್ಮಾನಗಳು ತಾವಾಗಿ ಒಲಿದುಬಂದು ತಮ್ಮ ಘನತೆಯನ್ನು ಹೆಚ್ವಿಸಿಕೊಂಡಿವೆ.
ಬೆಂಗಳೂರಿನ ಶಾಂತಕಲಾ ಕಲಾಮಿತ್ರರಿಂದ ‘ನಾಡರತ್ನ’ ಪ್ರಶಸ್ತಿ, ಬೆಂಗಳೂರಿನ ಕಸ್ತೂರ ಬಾ ಸಂಘದಿಂದ ‘ಕಸ್ತೂರ ಬಾ’ ಪ್ರಶಸ್ತಿ, ಛತ್ತೀಸಗಡದಲ್ಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಇಂದಿರಾ ಗೋಸ್ವಾಮಿಜಿಯವರಿಂದ ‘ಕೌದೆ ಅಂಡಾಳ್’ (೨೦೦೫ ರಲ್ಲಿ )ಪ್ರಶಸ್ತಿ, ಬಿಜಾಪುರದಲ್ಲಿ ಅಖಿಲ ಭಾರತ ಕವಿಯತ್ರಿ ಸಮ್ಮೇಳನದಲ್ಲಿ ‘ತಪನಿ’ ಪ್ರಶಸ್ತಿ, ಬರೋಡಾದಲ್ಲಿ ಅಖಿಲ ಭಾರತ ಕವಿಯತ್ರಿ ವಿಶೇಷ ಪುರಸ್ಕಾರ, ಬೆಂಗಳೂರು ಅತ್ತಿಮಬ್ಬೆ ಪ್ರತಿಷ್ಠಾನದಿಂದ ‘ಅತ್ತಿಮಬ್ಬೆ’ ಪ್ರಶಸ್ತಿ, ಹಾವೇರಿ ಜಿಲ್ಲಾ ಬಿ. ಜಿ. ಬಣಕಾರ ‘ದತ್ತಿ’ ಪ್ರಶಸ್ತಿ, ಹಾವೇರಿ ಜಿಲ್ಲಾಡಳಿತದಿಂದ ‘ರಾಜ್ಯೋತ್ಸವ’ ಪ್ರಶಸ್ತಿ, ಬೆಂಗಳೂರ ಗಾಂಧೀ ಭವನದ ‘ಮಹದೇವ ಮೈಲಾರ ದತ್ತಿ’ ಪ್ರಶಸ್ತಿ, ಹಾವೇರಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸನ್ಮಾನ, ಹಾವೇರಿ ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಸನ್ಮಾನ, ಶಿವಮೊಗ್ಗ ಪತ್ರಮಿತ್ರ ಸಂಘಟನೆಯಿಂದ ‘ಪ್ರತಿಭಾ ಶಿರೋಮಣಿ’ ಪ್ರಶಸ್ತಿ, ಉತ್ತರ ಕನ್ನಡ ಲೇಖಕಿಯರ ಸಂಘದ ಬೆಳ್ಳಿ ಹಬ್ಬದಲ್ಲಿ ಸಾಹಿತ್ಯ ಸತ್ಕಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಸರ ರಾಜ್ಯ ಮಟ್ಟದ ಮಹಿಳಾ ಸಮಾವೇಶದಲ್ಲಿ ಸತ್ಕಾರ, ತುಮಕೂರಲ್ಲಿ ಕವಿತಾ ಕೃಷ್ಣರಿಂದ ಸತ್ಕಾರ, ಹಾವೇರಿಯ ಮಹದೇವ ಬಣಕಾರ ಪ್ರತಿಷ್ಠಾನದಿಂದ ಬಿ.ಜಿ. ಬಣಕಾರ ಪ್ರಶಸ್ತಿ- (2009), ಇಂದಿರಾ ಪ್ರಶಸ್ತಿ, ಬ್ಯಾಡಗಿಯ ಶ್ರೀ ಆಂಜನೇಯ ಯುವಕ ಸಂಘದಿಂದ ಸತ್ಕಾರ, ಬ್ಯಾಡಗಿಯ ಗ್ರಾಮದೇವತಾ ಜಾತ್ರಾ ಸುವರ್ಣ ಸಂಸ್ಕೃತಿ ದಿಬ್ಬಣದ ಮಹೋತ್ಸವದಲ್ಲಿ ಸತ್ಕಾರ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು “ವತ್ಸಲಾ ನಂಜುಂಡಪ್ಪ ದತ್ತಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಮಘದಿಂದ ‘ನೀಳಾದೇವಿ’ ದತ್ತಿ ಪ್ರಶಸ್ತಿ, ಚಿಕ್ಕಮಗಳೂರಲ್ಲಿ ಹಿರೇಮಗಳೂರು ಕಣ್ಣನವರಿಂದ ಸತ್ಕಾರ, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಸಾಧನಾ ರಾಷ್ಟ್ರೀಯ ಲೇಖಕಿ ಪ್ರಶಸ್ತಿ, ನೂರಾರು ಶಾಲಾ ಕಾಲೇಜುಗಳಲ್ಲಿ, ಹಲವಾರು ಸಂಘ ಸಂಸ್ಥೆಗಳಳ್ಲಿ ಗೌರವ ಸನ್ಮಾನಗಳು, ಬೆಳಗಾವಿ ಸಾರ್ವಜನಿಕ ಗ್ರಂಥಾಲಯದಿಂದ ‘ಕನ್ನಡ ಅಂಕಣಗಾರ್ತಿ’ ಪುರಸ್ಕಾರ ಸಂದಿದ್ದು; ಇವರ ಮಾಸದ ಕನ್ನಡ ಕಾಯಕದ ಜೀವಮಾನ ಸಾಧನೆಗಾಗಿ ಪ್ರಸ್ತುತ ಕರ್ನಾಟಕ ನಾಮಕರಣವಾಗಿ ೫೦ ವರ್ಷ ಸಂದಿರುವ ಸುಸಂದರ್ಭದಲ್ಲಿ ಸುವರ್ಣಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೦೧ ನವೆಂಬರ್ ೨೦೨೪ರಲ್ಲಿ) ಪ್ರಧಾನ ಮಾಡಿ ಕರ್ನಾಟಕ ಸರ್ಕಾರವು ಸತ್ಕರಿಸಿರುವುದು ಉಚಿತವಾಗಿದೆ. ಹಾವೇರಿ ಜಿಲ್ಲೆಯ ಹೆಮ್ಮೆಯ ಗರಿ ಸಂಕಮ್ಮನವರಿಗೆ ಹಿತೈಷಿ ಬಂಧುಗಳು, ಅಪಾರ ಶಿಷ್ಯ ಬಳಗ, ಸಾಹಿತ್ಯಾಭಿಮಾನಿಗಳು ‘ಬ್ಯಾಡಗಿ ಬಾಗಿನ’ ಎಂಬ ಅಭಿನಂದನಾ ಗ್ರಂಥ ಸಮರ್ಪಿಸಿರುವುದು ಇವರ ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಕೊಡುಗೆಗೆ ಸಂದ ವಿಶಿಷ್ಟ ಗೌರವಾಧಾರವಾಗಿದೆ.
ಸಕಾರಾತ್ಮಕ ಚಿಂತನೆಯಿಂದ ತನ್ನ ಸುತ್ತಲಿನ ಪರಿಸರದಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಎಚ್ಚರವನ್ನು ಬೆಚ್ಚಗಿಡುತ್ತ ಬಂದಿರುವ ಸಂಕಮ್ಮನವರ ಕನ್ನಡ ನಾಡು ನುಡಿ ಸೇವೆಯನ್ನು ಗುರುತಿಸಿ ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಂವಿಧಾನದ ಶೀಲವಾಗಿದೆ. ಹಿರೇಕೆರೂರುರಿನಲ್ಲಿರುವ ಪೋಲಿಸ್ ಮೈದಾನದಲ್ಲಿ ೧೦ ವ ೧೧ ಜನವರಿ ೨೦೨೫ ರಂದು ನಡೆಯುವ ನುಡಿ ಜಾತ್ರೆಯು (ಚಿಂತನಮಂಥನ, ಕವಿಗೋಷ್ಠಿ, ಸಂವಾದ, ಚರ್ಚೆ, ಸಂಗೀತ..) ಹಾವೇರಿ ಜಿಲ್ಲಾ, ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಯಲು ಕನ್ನಡಿಗರನ್ನು ಕೈ ಬಿಸಿ ಕರೆಯುತಿದೆ. ಕೇಂದ್ರ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ, ಹಾವೇರಿ ಜಿಕಸಾಪ ಅಧ್ಯಕ್ಷರಾದ ಲಿಂಗಯ್ಯ ಹಿರೇಮಠ, ಹಿರೇಕೆರೂರು ವ ರಟ್ಟಿಹಳ್ಳಿ ತಾಕಸಾಪ ಅಧ್ಯಕ್ಷದ್ವಯರಾದ ಎನ್ ಸುರೇಶಕುಮಾರ, ಎನ್ ಸಿ ಕಠಾರೆ, ಗೌರವ ಕಾರ್ಯದರ್ಶಿಗಳಾದ ಮಹೇಂದ್ರ ಬಡಳ್ಳಿ, ಪಿ. ಎಸ್. ಸಾಲಿ, ಎಂ. ಎಂ ಮತ್ತೂರ, ರಾಜು ಹರವಿಶೆಟ್ಟರ, ಕರಿಯಣ್ಣನವರ ಮತ್ತು ಪದಾಧಿಕಾರಿಗಳು ವ ಅಪಾರ ಸಾಹಿತ್ಯಾಭಿಮಾನಿ ಬಂಧುಗಳ ಕನ್ನಡ ಪ್ರೇಮ ಮತ್ತು ಸಾಹಿತ್ಯ ಸೇವೆಯನ್ನು ನೆನೆಯದಿರೆ ಪ್ರಮಾದವಾದಿತು.
ಸಾಮರಸ್ಯದೆಡೆಗೆ ಸಾಹಿತ್ಯ ಪಯಣ… ಬನ್ನಿ ಜೊತೆ ಸಾಗೋಣ
ಜೈ ಕನ್ನಡ, ಜೈ ಕರುನಾಡು, ಜೈ ಕನ್ನಡ ಸಾಹಿತ್ಯ ಸಮ್ಮೇಳನ
ಸುಹೇಚ ಪರಮವಾಡಿ
ಶ್ರೀ. ಸುಭಾಷ್ ಹೇಮಣ್ಣಾ ಚವ್ಹಾಣ ಶಿಕ್ಷಕರು
ಪರಮವಾಡಿ ತಾಂಡೆ, ಯಲವಿಗಿ ಅಂಚೆ, ಸವಣೂರು ತಾ, ಹಾವೇರಿ ಜಿ,
(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ೭೯೭೫೦ ೨೬೭೨೪)