ಅಂಕಣ ಬರಹ ದುಗುಡದ ನೆನಪು (ಕಲಬುರ್ಗಿಯವರು ಕೊಲೆಯಾದಾಗ ಬರೆದ ಬರೆಹ) ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ ತಿಳಿದಿತ್ತು. ಆದರೆ ಅವರ ವೈಯಕ್ತಿಕ ಒಡನಾಟವಿರಲಿಲ್ಲ. ನನಗೆ ಈ ಒಡನಾಟವು ಮೊದಲ ಸಲ ಒದಗಿದ್ದು ನನ್ನ ಪಿಎಚ್.ಡಿ., ಪ್ರಬಂಧದ ಮೌಲ್ಯಮಾಪಕರಾಗಿ ಅವರು ಮೌಖಿಕ ಪರೀಕ್ಷೆಗೆ ಬಂದಾಗ. 1987ರಲ್ಲಿ. ಪ್ರಬಂಧದಲ್ಲಿ ವಚನಸಾಹಿತ್ಯದ ಮೇಲೆ ನಾನು ಮಾಡಿದ್ದ `ಸೋಲು’ ಎಂಬ ಟೀಕೆಯ ವಿಷಯದಲ್ಲಿ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು. ಎಳೆಯನಾದ ನನ್ನನ್ನು ಝಂಕಿಸಲಿಲ್ಲ. ಒಳ್ಳೆಯ ಪ್ರಬಂಧ ಬರೆದಿದ್ದೇನೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿಗೆ ಆ ಪ್ರಕರಣ ಮುಗಿಯಿತು. ಕಲಬುರ್ಗಿಯವರ ದುಡಿಮೆ ಸಿಟ್ಟು ಪ್ರೀತಿ ತುಂಬಿದ ವ್ಯಕ್ತಿತ್ವವನ್ನು ಮತ್ತಷ್ಟು ಹತ್ತಿರದಿಂದ ನೋಡಲು ಸಾಧ್ಯವಾಗಿದ್ದು ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಬಂದ ಬಳಿಕ. ಅವರು ಕುಲಪತಿಗಳಾಗಿ ಕಾಲಿಡುವಾಗಲೇ ಕೆಲವು ಪೂರ್ವಗ್ರಹಿಕೆಗಳನ್ನು ಹೊತ್ತು ತಂದಿದ್ದರು. ಸಾರ್ವಜನಿಕ ಹಣದಲ್ಲಿ ನಡೆಯುವ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಆಸಕ್ತಿ ಇಲ್ಲದವರೇ ಸೇರಿಕೊಂಡಿದ್ದಾರೆ; ಅವು ಚಲಿಸದ ಕಲ್ಲಿನರಥಗಳಾಗಿವೆ; ಅವನ್ನು ಚಲನಶೀಲಗೊಳಿಸಬೇಕು; ಕನ್ನಡ ವಿಶ್ವವಿದ್ಯಾಲಯದಲ್ಲಿ ಹಳಗನ್ನಡ ಶಾಸ್ತ್ರಸಾಹಿತ್ಯ ಪರಿಚಯವಿಲ್ಲದ, ಪಂಪನನ್ನು ಓದಲು ಬಾರದ ಆಧುನಿಕ ಸಾಹಿತ್ಯದಲ್ಲಿ ಮಾತ್ರ ಆಸಕ್ತಿಯುಳ್ಳ ವಿಚಾರವಾದಿಗಳು ತುಂಬಿಕೊಂಡಿದ್ದಾರೆ; ಅವರಿಗೆಲ್ಲ ಪ್ರಾಚೀನ ಸಾಹಿತ್ಯ ಮತ್ತು ಶಾಸನಗಳ ದೀಕ್ಷೆ ಕೊಟ್ಟು ಕೆಲಸ ಮಾಡಿಸಬೇಕು ಇತ್ಯಾದಿ. ನಾವೂ ಅವರ ಬಗ್ಗೆ ಇಂತಹವೇ ಗ್ರಹಿಕೆಗಳನ್ನು ಹೊಂದಿದ್ದೆವು. ಕನ್ನಡ ವಿಶ್ವವಿದ್ಯಾಲಯವನ್ನು ಸಾರ್ವಜನಿಕವಾಗಿ ಮುಳುಗುತ್ತಿರುವ ಹಡಗೆಂದು ಟೀಕಿಸಿದವರು ಇವರು. ಇವರಿಗೆ ವೈಚಾರಿಕತೆಯಿಲ್ಲ. ಆಧುನಿಕ ಮನಸ್ಸಿಲ್ಲ. ಗತವನ್ನು ಪುನಾರಚಿಸುವ ಇವರ ಸಂಶೋಧನ ಮಾದರಿಯನ್ನು ವಿಮರ್ಶಾತ್ಮಕವಾಗಿ ಮುಖಾಮುಖಿ ಮಾಡಬೇಕು. ಸಾಧ್ಯವಾದರೆ ಅವರನ್ನೇ ಪರಿವರ್ತಿಸಬೇಕು-ಇದು ನಮ್ಮ ಇರಾದೆಯಾಗಿತ್ತು. ನಮ್ಮ ಅವರ ತಾತ್ವಿಕ ಸಂಘರ್ಷ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಡಿದ ಚೊಚ್ಚಲ ಭಾಷಣದಿಂದಲೇ ಶುರುವಾಯಿತು. ಆದರೆ ಮೂರು ವರ್ಷಗಳ ಗುದುಮುರಿಗೆಯಲ್ಲಿ ನಮಗರಿಯದಂತೆ ಅವರೂ ಅವರಿಗರಿಯದಂತೆ ನಾವೂ ಕಲಿತೆವು ಮತ್ತು ಬದಲಾದೆವು. ಅವರು ತಾವೂ ದುಡಿದು ನಮ್ಮನ್ನೂ ದುಡಿಸಿದರು. ಹಿಂತಿರುಗಿ ನೋಡುವಾಗ, ಅವರೊಟ್ಟಿಗೆ ಕೆಲಸ ಮಾಡಿದ ಮೂರು ವರ್ಷಗಳು ಹೆಮ್ಮೆಯ ಗಳಿಗೆಗಳು ಅನಿಸುತ್ತಿವೆ. ವಿಶ್ವವಿದ್ಯಾಲಯಕ್ಕೆ, ದೇಶೀಪ್ರತಿಭೆಯ ಸೃಜನಶೀಲ ಮನಸ್ಸಿನ ಕವಿ ಕಂಬಾರರು ಬುನಾದಿ ಹಾಕಿದರು; ಕ್ಲಾಸಿಕಲ್ ಅಭಿರುಚಿ ಮತ್ತು ಮಾರ್ಗ ಮನೋಧರ್ಮದ ಕಲಬುರ್ಗಿ, ತಮ್ಮ ವಿದ್ವತ್‍ಬಲದಿಂದ ಅದರ ಮೇಲೆ ಇಮಾರತು ಕಟ್ಟಿದರು. ವಿಶೇಷವೆಂದರೆ, ಕಲಬುರ್ಗಿಯವರ-ನಮ್ಮ ವಿದ್ವತ್ ಸಂಬಂಧ ಅವರು ನಿವೃತ್ತರಾಗಿ ಧಾರವಾಡಕ್ಕೆ ತೆರಳಿದ ಬಳಿಕವೂ ಮುಂದುವರೆದಿದ್ದು. ನಾವು ಅವರನ್ನು ಅನಧಿಕೃತ ಕುಲಪತಿ ಎನ್ನುತ್ತಿದ್ದೆವು. ನಮ್ಮಲ್ಲಿ ಅನೇಕರು ತಮ್ಮ ಸಂಶೋಧನೆಯನ್ನು ಪ್ರಕಟಿಸುವ ಮುಂಚೆ ಅವರಿಗೆ ಕೊಟ್ಟು ಅಭಿಪ್ರಾಯ ಪಡೆಯುವ ಪದ್ಧತಿ ಇರಿಸಿಕೊಂಡೆವು. ಆಗ ಉಮಾತಾಯಿ ಬಡಿಸುತ್ತಿದ್ದ ಬಿಸಿರೊಟ್ಟಿ-ಬದನೆಪಲ್ಯದ ಊಟವನ್ನು ತೀರಿಸುತ್ತಿದ್ದೆವು. ಅವರ ಎಲ್ಲ ಸೂಚನೆ ಪಾಲಿಸದಿದ್ದರೂ ಅವರು ಕೊಡುತ್ತಿದ್ದ ಹೊಳಹುಗಳನ್ನು ಹೆಕ್ಕಿಕೊಂಡು ಬೆಳೆಸುತ್ತಿದ್ದೆವು. ಅವರು ಯಾವ್ಯಾವುದೊ ಕಾಲೇಜುಗಳಲ್ಲಿ ಸಂಶೋಧನಾಸಕ್ತ ಅಧ್ಯಾಪಕರನ್ನು ಗುರುತಿಸಿ ಅವರಿಂದ ಕೆಲಸ ತೆಗೆಸಿದರು. ಕರ್ನಾಟಕ ಭಾಷೆ ಚರಿತ್ರೆ ಸಂಸ್ಕøತಿ ಸಾಹಿತ್ಯಗಳ ಮೇಲಿನ ಅವರ ಬದ್ಧತೆ ಅಪರೂಪದ್ದು.ಲಿಂಗಾಯತ ಸಮುದಾಯ ಮತ್ತು ಧರ್ಮಗಳಿಗೆ ಹೆಚ್ಚು ಒತ್ತುಕೊಟ್ಟು ಸಂಶೋಧನೆ ಮಾಡಿ, ವೈಚಾರಿಕವಾಗಿ ಸ್ಥಗಿತಗೊಂಡಂತೆ ಕಾಣುತ್ತಿದ್ದ ಕಲಬುರ್ಗಿ, ನಿಧಾನವಾಗಿ ಕರ್ನಾಟಕ ಸಂಸ್ಕøತಿಯನ್ನು ಹಲವು ಧರ್ಮ ಭಾಷೆ ಸಂಸ್ಕøತಿಗಳ ಮೂಲಕ ನೋಡುವ ಬಹುತ್ವದ ನೋಟಕ್ರಮಕ್ಕೆ ಹೊರಳಿಕೊಂಡರು. ಹಂಪಿಯಲ್ಲಿದ್ದಾಗ ಕರ್ನಾಟಕದ ಫಾರಸಿ-ಅರಬಿ ಶಾಸನಗಳನ್ನು ಪ್ರಕಟಿಸಿದರು; ನಿವೃತ್ತಿ ನಂತರ ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆಯಲ್ಲಿ ತೊಡಗಿಕೊಂಡರು. ಅವರಿಗೆ ಕನ್ನಡದ ಕೆಲಸ ಮಾಡಲು ವಿಶ್ವವಿದ್ಯಾಲಯಗಳೇ ಬೇಕಿರಲಿಲ್ಲ. ಮಠಗಳು ಶಿಕ್ಷಣಸಂಸ್ಥೆಗಳು ಸಾಕಾಗಿದ್ದವು. ಅವರಂತೆ ಸಾಂಸ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರೈಸಿದ ವಿದ್ವಾಂಸರೇ ಕನ್ನಡದಲ್ಲಿ ಕಡಿಮೆ. ನನಗೆ ಕಲಬುರ್ಗಿಯವರು ಬಜಾರಿನಲ್ಲಿ ಭೇಟಿಯಾದ ಒಂದು ಪ್ರಸಂಗ ನೆನಪಾಗುತ್ತಿದೆ. ನಾನು ಮಾರುಕಟ್ಟೆಗೆ ಹೋದವನು, ಕಾಯಿಪಲ್ಲೆ ತುಂಬಿದ ಎರಡು ಬ್ಯಾಗುಗಳನ್ನು ಸೈಕಲ್ ಹ್ಯಾಂಡಲಿನ ಎರಡೂ ಬದಿಗೆ ಸಿಕ್ಕಿಸಿಕೊಂಡು, ಕ್ಯಾರಿಯರಿನಲ್ಲಿ ನನಗೆ ಪ್ರಿಯವಾಗಿದ್ದ ಹಲಸಿನ ಹಣ್ಣನ್ನಿಟ್ಟು ಅದು ಬೀಳದಂತೆ ಹುರಿಯಲ್ಲಿ ಕಟ್ಟಿಕೊಂಡು ಬರುತ್ತಿದ್ದೆ. ಅವರು ಮೈಯಲ್ಲಿ ಹುಶಾರಿಲ್ಲವೆಂದು ಡಾಕ್ಟರ ಬಳಿ ಹೋಗಿದ್ದವರು, ಕಣ್ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ನನ್ನನ್ನು ಕಾರುಹತ್ತುವ ಮುನ್ನ ಕಂಡವರೇ `ತರಕೇರಿ’ ಎಂದು ಕರೆದರು. ಮನಸ್ಸಿಲ್ಲದ ಮನಸಿನಿಂದ ಸನಿಹಕ್ಕೆ ಹೋದೆ. ನನ್ನನ್ನು ಅಡಿಯಿಂದ ಮುಡಿಯವರೆಗೆ ನೋಡಿ, `ಏನಿದು ನಿನ್ನ ಅವಸ್ಥೆ? ಬಸವಣ್ಣ ಅಷ್ಟಿಲ್ಲದೆ ಹೇಳಿಲ್ಲ. ಸಂಸಾರ ಉರದುದ್ದವೇ ಹೇಳಾ? ಶಿರದುದ್ದವೇ ಹೇಳಾ?’ ಎಂದು ಚಾಷ್ಟಿ ಮಾಡಿದರು. ವಿದ್ವತ್ ಕೆಲಸದಲ್ಲಿ ಸಂಸಾರದ ದಂದುಗವನ್ನೇ ಮರೆತುಹೋಗಬಲ್ಲ ವಿದ್ವಾಂಸರಾದ ಅವರಿಗೆ ಅಧ್ಯಾಪಕರಿಗೂ ಖಾಸಗಿ ಬದುಕಿದೆ ಎಂಬುದು ಮರೆತುಹೋಗುತ್ತಿತ್ತೊ ಏನೊ? ಆದರೆ ಅವರು ಯಾವುದೇ ಸಂಸಾರಸ್ಥರಿಗೆ ಕಡಿಮೆಯಿಲ್ಲದಷ್ಟು ಭಾರದ ಕನ್ನಡದ ಕೆಲಸಗಳನ್ನು ಮೈತುಂಬ ಹೊತ್ತುಕೊಂಡವರಾಗಿದ್ದರು. ಅವರ ಅಮಾನುಷ ಕೊಲೆ, ಸಂಶೋಧನ ಕರ್ನಾಟಕದ ಎಷ್ಟೊ ಕನಸುಗಳನ್ನು ಹೊಸಕಿಹಾಕಿತು. ಲಂಕೇಶ್ ತೇಜಸ್ವಿ ಅನಂತಮೂರ್ತಿ ತೀರಿಕೊಂಡಾಗ ವೈಚಾರಿಕ ತಬ್ಬಲಿತನ ಕಾಡಿತ್ತು. ಕಲಬುರ್ಗಿಯವರ ಕೊಲೆ ವಿದ್ವತ್ ತಬ್ಬಲಿತನ ಹುಟ್ಟಿಸಿತು. ಅವರ ಜತೆ ನೂರಾರು ಭಿನ್ನಮತಗಳು ನನ್ನ ತಲೆಮಾರಿನವರಿಗಿದ್ದವು. ಅವರ ನಿರ್ಣಯಗಳು ಅವಸರದವು ಅನಿಸುತ್ತಿತ್ತು. ‘ಸಂಗ್ಯಾಬಾಳ್ಯಾ’ ಕುರಿತ ಅವರ ವಿಚಾರಗಳು ಸಮ್ಮತವೆನಿಸಿರಲಿಲ್ಲ; `ಪಂಪ ರನ್ನ ಕುಮಾರವ್ಯಾಸರು ಉತ್ತರ ಭಾರತದ ಆರ್ಯಜನಾಂಗದ ಕಥನವನ್ನು ವಸ್ತುವಾಗಿಟ್ಟುಕೊಂಡು ಕಾವ್ಯ ಬರೆದರು; ತಮಿಳು ಕವಿಗಳಂತೆ ದೇಸೀ ಕಥನವನ್ನು ಮುಟ್ಟದೆ ತಪ್ಪು ಹಾದಿ ಹಾಕಿಕೊಟ್ಟರು’ ಎಂಬ ಅವರ ಹೇಳಿಕೆಯಲ್ಲಿ ತುಸು ನಿಜವಿದ್ದರೂ, ಕನ್ನಡಕಾವ್ಯ ಪರಂಪರೆಯನ್ನು ನೋಡುವ ರೀತಿಯಿದಲ್ಲ ಅನಿಸುತ್ತಿತ್ತು; `ಗುಲ್ವಾಡಿ ವೆಂಕಟರಾವ್, ಪಂಜೆ, ಮಾಸ್ತಿ, ಕೈಲಾಸಂ, ಬೇಂದ್ರೆ, ಆರ್.ನರಸಿಂಹಾಚಾರ್ ಮುಂತಾದ ಕನ್ನಡೇತರ ಲೇಖಕರಿಂದ ಆಧುನಿಕ ಕನ್ನಡ ಸಾಹಿತ್ಯ ಶುರುವಾಗಿದ್ದರಿಂದ ಅದಕ್ಕೆ ಬರಬೇಕಾದ ಕಸುವು ಒದಗಲಿಲ್ಲ’ ಎಂಬರ್ಥವಿದ್ದ ಅವರ ಹೇಳಿಕೆ ಒಪ್ಪುವುದು ಕಷ್ಟವಾಗುತ್ತಿತ್ತು. ಅನಂತಮೂರ್ತಿಯವರಿಗೆ ಬಸವಶ್ರೀ ಪ್ರಶಸ್ತಿ ಬಂದಾಗ ಹೊರಹಾಕಿದ ವಿಚಾರಗಳಂತೂ ಸಂಕುಚಿತವಾಗಿದ್ದವು. ಅವು ನನ್ನನ್ನು ವ್ಯಥಿತನನ್ನಾಗಿ ಮಾಡಿದ್ದವು.ಆದರೂ ಅವರ ಜತೆ ವೈಚಾರಿಕ ಅಸಮ್ಮತಿ ಇಟ್ಟುಕೊಂಡೂ ನನ್ನ ತಲೆಮಾರಿನವರು ಬೆರೆಯುತ್ತಿದ್ದೆವು; ಸಂಶೋಧನೆಯಲ್ಲಿ ಕೈಜೋಡಿಸುತ್ತಿದ್ದೆವು. ಅವರು ಪ್ರಾಚೀನ ಸಾಹಿತ್ಯ ಅರ್ಥಮಾಡಿಕೊಳ್ಳುವಲ್ಲಿ ಬೇಕಾದ ಕೀಲಿಕೈ ಗೊಂಚಲು ಇಟ್ಟುಕೊಂಡ ವಿದ್ವಾಂಸರಲ್ಲಿ ಒಬ್ಬರಾಗಿದ್ದರು; ಶಾಸನ ಹಳಗನ್ನಡ ಹಸ್ತಪ್ರತಿ ವಚನಸಾಹಿತ್ಯಗಳಲ್ಲಿ ತಮಗಿದ್ದ ತಿಳುವಳಿಕೆಯಿಂದ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ತಮ್ಮ ವಿಚಾರಗಳನ್ನು ಹೊಸ ತಲೆಮಾರಿನವರು ಪೂರ್ಣವಾಗಿ ಒಪ್ಪುವುದಿಲ್ಲ ಎಂದು ಗೊತ್ತಿದ್ದರೂ, ಕರ್ನಾಟಕದ ಸಾಂಸ್ಕøತಿಕ ಹುಡುಕಾಟ ಬಂದಾಗ ಭಿನ್ನಮತ ಬದಿಗಿಟ್ಟು ಒಡನಾಡಬಲ್ಲವರಾಗಿದ್ದರು. ದಿಟ್ಟವಾಗಿ ಭಿನ್ನಮತ ವ್ಯಕ್ತಪಡಿಸುವ ಮೂಲಕ ಸಂಶೋಧನ ಪರಿಸರವನ್ನು ಜೀವಂತವಿಟ್ಟಿದ್ದ ಕಲಬುರ್ಗಿಯವರಿಗೆ, ಭಿನ್ನಮತ-ವಿವಾದ ಹೊಸವಲ್ಲ. ಪಂಚಪೀಠಗಳ ವೀರಶೈವವು ಬಸವತತ್ವಕ್ಕೆ ಸಲ್ಲದು ಎಂದು ಹೇಳುತ್ತ ಕಣ್‍ಕಿಚ್ಚಿಗೆ ಗುರಿಯಾಗಿದ್ದರು; ಬಸವತತ್ವದ ಸಮರ್ಥಕರಾಗಿ ಲಿಂಗಾಯತವು ಸಿಖ್ ಜೈನ ಬೌದ್ಧಗಳ ಹಾಗೆ ಭಾರತದ ಸ್ವತಂತ್ರ ಧರ್ಮಗಳಲ್ಲಿ ಒಂದೆಂದು ಪ್ರತಿಪಾದಿಸುತ್ತ ಸಂಪ್ರದಾಯವಾದಿಗಳ ಆಗ್ರಹಕೆ ಗುರಿಯಾಗಿದ್ದರು; ಕೊನೆಯ ದಿನಗಳಲ್ಲಿ ತಮ್ಮ ಅವಸರದ ಹೇಳಿಕೆಗಳಿಗೆ ದ್ವೇಷದಾಯಕ ಪ್ರತಿಕ್ರಿಯೆ ಎದುರಿಸಿದ್ದರು. ಸಂಶೋಧಕ ಸತ್ಯ ಹೇಳಿದಕ್ಕೆ ಶಿಲುಬೆ ಏರಬೇಕಾಗುವುದು ಎಂದು ಸದಾ ಹೇಳುತ್ತಿದ್ದರು. ಆದರೆ ಅವರ ಬದುಕಿನ ಕೊನೆ ಹೀಗೆ ದಾರುಣವಾಗುತ್ತದೆ ಎಂದು ಯಾರುತಾನೇ ಊಹಿಸಿದ್ದರು? 12ನೇ ಶತಮಾನದ ‘ಕಲ್ಯಾಣ’ ಕರ್ನಾಟಕ ಸಂಸ್ಕøತಿಯಲ್ಲಿ ಮಹತ್ವದ ಸ್ಥಳ. ಹೆಸರು ಕಲ್ಯಾಣವಾದರೂ ಅದು ಶರಣರ ಪಾಲಿಗೆ ದುರಂತ ತಾಣವೂ ಹೌದು. ಈ ವಸ್ತುವನ್ನಿಟ್ಟುಕೊಂಡು ಕಲಬುರ್ಗಿ ‘ಕೆಟ್ಟಿತ್ತು ಕಲ್ಯಾಣ’ ನಾಟಕವನ್ನೂ ಬರೆದರು. ಅವರು ವಾಸವಾಗಿದ್ದು ಧಾರವಾಡದ ಕಲ್ಯಾಣನಗರದಲ್ಲಿ. ಇದೇ ಕಲ್ಯಾಣನಗರವು ಅವರ ಬಾಳಿನಲ್ಲಿ ದುರಂತ ತಾಣವಾಗಿಬಿಟ್ಟಿತು. ಕಲಬುರ್ಗಿಯವರ ಕೊಲೆಯ ಕಾರಣ ಖಚಿತಗೊಂಡಿಲ್ಲ. ಕೊಲೆಗಾರರು ಸಿಕ್ಕಿಲ್ಲ. ಆದರೆ ಅವರ ಕೊಲೆಯನ್ನು ಕೆಲವರು ಸಂಭ್ರಮಿಸಿದ್ದು ಮಾತ್ರ ಅಮಾನುಷ. ಗಾಂಧಿಯವರ ಕೊಲೆಯಾದಾಗಲೂ ಸನಾತನವಾದಿಗಳು ಸಿಹಿಹಂಚಿದ್ದರು. ನಮಗೆ ಸಮ್ಮತವಲ್ಲದ ಚಿಂತಕರ ಸಾವನ್ನು ಸಂಭ್ರಮಿಸುವ ಘಟನೆ, ಅನಂತಮೂರ್ತಿ ನಿಧನದ ಹೊತ್ತಲ್ಲಿ ಕಾಣಿಸಿಕೊಂಡಿತು. ಲೇಖಕರ ಸಾವು-ಕೊಲೆಗಳಿಗೆ ಮಾಡುವ ಸಂಭಮ್ರಾಚರಣೆ, ಕರ್ನಾಟಕ ಕಷ್ಟಪಟ್ಟು ಉಳಿಸಿಕೊಂಡು ಬಂದಿದ್ದ ಸಾಂಸ್ಕøತಿಕ ಮತ್ತು ವೈಚಾರಿಕ ಸಹನೆಗಳು ತೀರಿರುವುದರ ಸೂಚನೆಯೇ? ಕೊಲೆ ತಾತ್ವಿಕ ಭಿನ್ನಮತದ ಕಾರಣಕ್ಕಾಗಿಯೆ ಸಂಭವಿಸಿದ್ದರೆ, ಕರ್ನಾಟಕದ ವಾಗ್ವಾದ ಪರಂಪರೆ ಕ್ಷೀಣವಾಗುತ್ತಿದೆ ಎಂದರ್ಥವೇ? ಪರರ ಸಾವಿಗೆ ಸಂತೋಷ ಪಡುವ ನಂಜಿನ ಮನಸ್ಸು ಸೃಷ್ಟಿಸಬಲ್ಲವರು ಎಂತಹ ಸಮಾಜ ಮತ್ತು ದೇಶವನ್ನು ಕಟ್ಟಬಯಸಿದ್ದಾರೆ? ಭಿನ್ನಮತವನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಬಯಸುವ ಎಲ್ಲರಿಗೂ ಬರುವ ದಿನಗಳು ಸವಾಲಿನವು. ಇದು ಪ್ರಜಾಪ್ರಭುತ್ವವನ್ನು ರಾಜಕೀಯ ನೆಲೆಯಲ್ಲಿ ಮಾತ್ರವಲ್ಲ, ಚಿಂತನೆಯ ನೆಲೆಯಲ್ಲಿ ಸಹ ಉಳಿಸಿಕೊಳ್ಳುವ ಪ್ರಶ್ನೆ. ಇದಕ್ಕೆ `ಮಾರ್ಗ’ ಯಾವುದು? ಇಂತಹ ಅನೇಕ ಜಟಿಲವಾದ ಪ್ರಶ್ನೆಗಳನ್ನು ಕಲಬುರ್ಗಿಯವರ ಕೊಲೆ ನಮ್ಮ ಮುಂದಿಟ್ಟು ನಿರ್ಗಮಿಸಿದೆ. ಕಷ್ಟ ತೀರಿಕೊಂಡವರದ್ದಲ್ಲ. ಉತ್ತರದಾಯಿಯಾಗಿ ಬದುಕುವವರದ್ದು. ********* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ನರವಾನರ ನರವಾನರಮರಾಠಿ ಮೂಲ : ಶರಣಕುಮಾರ ಲಿಂಬಾಳೆಕನ್ನಡಕ್ಕೆ : ಪ್ರಮೀಳಾ ಮಾಧವಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ. ೧೬೫ಪುಟಗಳು : ೧೯೨ ಭಾರತದಾದ್ಯಂತ ಅಂಬೇಡ್ಕರ್ ದಲಿತರ ಪರವಾಗಿ ಮಾಡಿದ ಚಳುವಳಿಯ ಕುರಿತಾದ ಕಾದಂಬರಿ ಇದು. ಮನುಸ್ಮೃತಿಯಲ್ಲಿ ಶೂದ್ರರು ಮತ್ತು ದಲಿತರ ಕುರಿತಾಗಿರುವ ಉಲ್ಲೇಖಗಳಿಂದ ದಲಿತರ ಬದುಕು ನರಕವಾಗಿ ಬಿಟ್ಟು ಅವರಿಗಾದ ಅನ್ಯಾಯಗಳ ವಿರುದ್ಧ ಕೆರಳಿ ಕೆಂಡವಾದ ಅಂಬೇಡ್ಕರ್ ವರ್ಣವ್ಯವಸ್ಥೆಯಿಂದಾಗಿ ಹಿಂದೂ ಸಮಾಜದಲ್ಲಿ ಮೇಲು ಜಾತಿಯವರು ನಿಮ್ನ ಜಾತಿಯವರನ್ನು ಶೋಷಿಸಿದ್ದರ ವಿರುದ್ಧ ಸಮರ ಸಾರಿದರು. ಇಂಥ ಹಿಂದೂ ಸಮುದಾಯದಲ್ಲಿ ತಾನೆಂದೂ ಇರಲಾರೆ ಎಂದು ಬೌದ್ಧಧರ್ಮಕ್ಕೆ ಮತಾಂತರ ಹೊಂದಿ ಇತರರಿಗೂ ಕರೆಯಿತ್ತರು. ಆದರೆ ಆ ಮಹನೀಯರು ಮರಣ ಹೊಂದಿದ ನಂತರ ದಲಿತ ಚಳುವಳಿಯ ನೇತೃತ್ವ ವಹಿಸುವವರು ಯಾರೂ ಇಲ್ಲದೆ ದಲಿತರು ಅಸಹಾಯಕರಾದರು. ಆ ವಿಚಾರದಲ್ಲಿ ದೇಶದಾದ್ಯಂತ ಬಿಕ್ಕಟ್ಟುಗಳು ತಲೆದೊರಿದವು. ಜಗಳಗಳಾದವು. ಹಲವಾರು ಪಕ್ಷ- ಪಂಗಡಗಳು ಹುಟ್ಟಿಕೊಂಡವು. ಎಲ್ಲರೂ ‘ನಿಜವಾದ ಆಂದೋಲನ ನಮ್ಮದು’ಎಂದು ಕೂಗೆಬ್ಬಿಸ ತೊಡಗಿದವು. ಪ್ರಜಾಪ್ರಭುತ್ವದ ಹೆಸರಿನಲ್ಲಿ ದಲಿತ ಪ್ರತಿನಿಧಿಗಳನ್ನು ರಾಜಕೀಯ ಪಕ್ಷಗಳು ತಮ್ಮೆಡೆಗೆ ಸೆಳೆಯ ತೊಡಗಿದವು. ಈ ಕಾದಂಬರಿ ಇದೇ ವಿಷಯವನ್ನು ಕುರಿತು ಚರ್ಚಿಸುತ್ತದೆ. ಮೊದಲ ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬಡ ಯುವಕ ಅನಿರುದ್ಧ ಕಾಲೇಜಿಗೆ ಸೇರಿದಾಗ ಅವನಿಗೆ ದಲಿತ ಯುವಕರಿದ್ದ ರೂಮಿನಲ್ಲಿ ಸೀಟು ಸಿಗುತ್ತದೆ. ಅವನು ದಲಿತ ಗೆಳೆಯರ ಸಂಕಷ್ಟಗಳನ್ನು ನೋಡಿ ಮರುಗುತ್ತ ಸಾವಿರಾರು ವರ್ಷಗಳಿಂದ ಅವರನ್ನು ಶೋಷಿಸುತ್ತ ಬಂದ ತನ್ನ ಬ್ರಾಹ್ಮಣ ಸಮುದಾಯವನ್ನು ಬಿಟ್ಟು ದಲಿತನಾಗುತ್ತಾನೆ. ಇನ್ನೊಂದು ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯದ ಹುಡುಗಿ ದಲಿತನನ್ನು ಮದುವೆಯಾಗುತ್ತಾಳೆ. ದಲಿತ ಚಳುವಳಿ ಪ್ರಬಲವಾಗುತ್ತ ಹೊಗುತ್ತದೆ. ದಲಿತ ಪ್ಯಾಂಥರ್ ಮತ್ತು ರಿಪಬ್ಲಿಕನ್ ಪಾರ್ಟಿ ಎಂಬ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಸಂಘರ್ಷಗಳ ಮೂಲಕ ದಲಿತ ಚಳುವಳಿ ವ್ಯವಸ್ಥೆಯ ಒಂದು ಭಾಗವಾಗಿ ಹೋಗುತ್ತದೆ. ದಲಿತ ಸಾಹಿತ್ಯ ಮತ್ತು ದಲಿತ ರಾಜಕೀಯಗಳು ಈ ಚಳುವಳಿಯ ಉತ್ಪನ್ನಗಳಾಗುತ್ತವೆ. ಹೀಗೆ ಕಾದಂಬರಿಯ ವಸ್ತು ಇಂದಿನ ವ್ಯವಸ್ಥೆಯ ಜ್ವಲಂತ ಚಿತ್ರಣವಾಗಿದ್ದು ಅತ್ಯಂತ ಪ್ರಸ್ತುತವಾಗಿದೆ. ಪ್ರಮೀಳಾ ಅವರ ಅನುವಾದದ ಶೈಲಿ ಸುಂದರವಾಗಿದೆ ಮತ್ತು ಸುಲಲಿತವಾಗಿದೆ. *************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಕಬ್ಬಿಗರ ಅಬ್ಬಿ ನಿಮಗೆ ತಿಳಿಸಾರು ಗೊತ್ತೇ? ಅದೊಂದು ಕೋಣೆ, ರಸಾವಿಷ್ಕಾರದ ಕೋಣೆ ಅದು!. ಅದನ್ನು ಜನರು ಈ ಕೋಣೆಯನ್ನು ಮನೆ ಅಂತಲೇ ಕರೆಯೋದಕ್ಕೆ, ಬಹುಷಃ ಈ ಕೋಣೆಯ ತಾಯ್ತನವೇ ಕಾರಣ ಅನ್ಸುತ್ತೆ. ಮಗುವಿಗೆ ಅಮ್ಮ ಊಡುವ ಎದೆ ಹಾಲಿನ ಹಾಗೆಯೇ, ಈ ಕೋಣೆ ಮನೆ ಮಂದಿಗೆಲ್ಲ ಉಣಿಸುವುದು ಬದುಕು. ‘ಅಡುಗೆ ಮನೆ’ ಯಲ್ಲಿ ಜೀವಜಲ ಬಿಂದುವಾಗಿ ಹರಿಯುತ್ತೆ. ಹಸಿರು ತರಕಾರಿಗಳು ನೆಲಹಾಸಿನಲ್ಲಿ ತಣ್ಣಗೆ ಕಾಯುತ್ತವೆ. ನೆಲದೊಳಗೆ ಬೇರಿಳಿಸಿ ಪಿಷ್ಟಅಹಾರ ಸಂಗ್ರಹಿಸಿ ಬಲಿತ ಗಡ್ಡೆಗಳೂ ಜತೆಗೆ. ಅಡುಗೆ ಮನೆಯ ಉಗ್ರಾಣಗಳಲ್ಲಿ, ಮನುಷ್ಯ ತಿನ್ನಲೇ ಹುಟ್ಟಿದ್ದೋ ಎಂಬಂತಹಾ ಧಾನ್ಯಗಳು. ಅವುಗಳಲ್ಲಿ ಕೆಲವಕ್ಕೆ ಕಪ್ಪು ಬಣ್ಣ, ಕೆಲವಕ್ಕೆ ಬಿಳಿ. ನಡು ನಡುವಿನ ಗೋಧಿ ಬಣ್ಣದವುಗಳೂ ಪುಡಿಯಾಗಲು ಕಾಯುತ್ತವೆ. ಕಡಲು ಅತ್ತೂ ಅತ್ತೂ ಉಪ್ಪಾದ ನೀರನ್ನು ಸೋಸಿ ಆವಿಯಾಗಿಸಿದಾಗ ಉಳಿದ ಉಪ್ಪುಪ್ಪಾದ ಭಾವ ಪಿಂಗಾಣಿ ಪಾತ್ರೆಯಲ್ಲಿದೆ. ( ಉಳಿದ ಪಾತ್ರೆಯಲ್ಲಿ ಉಪ್ಪು ತುಂಬಿದರೆ, ಅದು ಪಾತ್ರೆಯನ್ನು ತನ್ನ ಸ್ವ-ಭಾವ ದಿಂದ ಪುಡಿಗಟ್ಟುತ್ತೆ). ಬಲಿತ ಕಬ್ಬನ್ನು ಚರ ಚರಾ ಅಂತ ಗಾಣದ ತಿರುಗಾಲಿಗಳ ನಡುವೆ ಕ್ರಷ್ ಮಾಡಿ ನಮಗೆ ಸಿಹಿ ಅನ್ನಿಸುವ ರಸವಾಗಿಸಿ ಮಂದಗಟ್ಟಿಸಿ, ನಮಗಿಷ್ಟವಾದ ಆಕಾರದಲ್ಲಿ ( ಷಟ್ಕೋನವೋ, ದುಂಡಾಕಾರವೋ) ಅದನ್ನು ಅಚ್ಚಾಗಿಸಿದ ಬೆಲ್ಲ ಡಬ್ಬಿಯೊಳಗೆ ಅತಿಥಿಗಳ ಬಾಯಿ ಸಿಹಿ ಮಾಡಲು ಬಂದಿಯಾಗಿವೆ. ಮತ್ತೆ, ಜಿಹ್ವೆಯ ಜೀವೋತ್ಪತ್ತಿಗೆ ಅಗತ್ಯವಾದ ರಾಸ ರಸದ ಖಾರ, ದಿನ ದಿನವೂ ಬದುಕಲು ರುಚಿ ಹೆಚ್ಚಿಸುವ ಹುಣಿಸೇ ಹುಳಿ, ಪಾಕಕ್ಕೆ ಮುತ್ತಿಡುವ ಒಗ್ಗರಣೆಗೆ ಅಗತ್ಯದ ಸಾಸಿವೆ, ಹೀಗೇ ಹಲವು ಚೀಜ್ ಗಳು ಈ ಮನೆಯನ್ನು ಗ್ಲಾಮರಸ್ ಮಾಡಿವೆ. ಮರೆತೆನಲ್ಲ! ಅಲ್ಲಿ ಒಲೆಯಿದೆ. ಒಲೆಯಲ್ಲಿ ಬೆಂಕಿ, ಬೇಯಿಸುವುದಕ್ಕೆ. ನನ್ನಮ್ಮ ಒಲೆಯ ಪಕ್ಕದಲ್ಲಿ ಸ್ಥಾಪನೆಯಾಗಿ ಬದುಕಿಡೀ, ಆ ಒಲೆಯ ಕಿಚ್ಚಲ್ಲಿ ಆಹಾರವನ್ನು ಬೇಯಿಸುತ್ತಾ ಪಕ್ವವಾದವಳು. ಅನ್ನ ಬೆಂದಿದೆಯೇ ಎಂದು ಒಂದೇ ಅಗುಳನ್ನು ಒತ್ತಿ ಹೇಳಬಲ್ಲ ತಾಕತ್ತು, ಈ ಪಾಕತ್ತಿನಿಂದಲೇ ಬಂದದ್ದು. ಒಲೆಯ ಮೇಲಿನ ಅಟ್ಟದಲ್ಲಿ, ಶತಮಾನಗಳ ಹೊಗೆ ತಾಗಿದಂತಹ ಮಸಿಹಿಡಿದ ಸಾಲು ಭರಣಿಗಳು. ಅವುಗಳೊಳಗೆ ಶೇಖರಿಸಿ ಇಟ್ಟ ಬಗೆಬಗೆಯ ಉಪ್ಪಿನಕಾಯಿಗಳು. ಮಾವಿನ ಮಿಡಿ ಯೌವನದ ಗೊರಟು ಕಟ್ಟುವ ಮೊದಲೇ ಕೊಯಿದು, ಉಪ್ಪಲ್ಲಿ ಕಾದಿರಿಸಿ ಮುರುಟಿದಾಗ ಅದಕ್ಕೆ ಮೆಣಸಿನ ಪಾಕ ಸೇರಿಸಿ ಶೇಖರಣೆ ಮಾಡುವುದು. ಉಪ್ಪಿನ ಕಾಯಿ ಹಾಕುವಾಗಲೂ ಯೋಚನೆಗಳನ್ನು ಹದಬರಿಸುವಾಗಲೂ, ಮೈಮನಸ್ಸು ಕೊಳೆಯಾಗಬಾರದು. ಉಪ್ಪಿನಕಾಯಿ ಕೊಳೆತು ಹಾಳಾಗಬಾರದಲ್ಲಾ. ಅಡುಗೆ ಮನೆ ಅಮ್ಮನವರ ಗುಡಿ. ಅದರ ನೆಲವೇ ಸ್ತ್ರೀ ಪಾದ ಸ್ಪರ್ಶದ ನೆಲೆ. ಅಲ್ಲಿ ತೊಳೆದ ಅಕ್ಕಿಯ ನೀರಿಗೆ ತಿಳಿ ತಿಳಿಯಾದ ತಿಳಿವಿದೆ. ತುಂಬಿದ ಪಾತ್ರೆಯೊಳಗೆ ಸೌಟು ತಿರುಗಿಸುವಾಗ, ರಸ ಸ್ವರಕ್ಕೆ ಪ್ರಕೃತಿಸಹಜ ಸ್ವರೂಪವಿದೆ . ಒಳಗೆ ಜೋಡಿಸಿಟ್ಟ ಪಾತ್ರೆಗಳ ಸಾಲುಗಳಲ್ಲಿ ಒಳಸೌಂದರ್ಯವಿದೆ. ಒಂದೇ ಅಗುಳನ್ನು ಒತ್ತಿ ಅನ್ನ ಬೆಂದಿದೆಯೇ ಎನುವಷ್ಟು ಅನುಭೂತಿ ಇದೆ. ಅಂತಹ ಜೀವಕಟ್ಟುವ ಕಾಯಕದ ನಡುವೆ ಕವನ ಹುಟ್ಟದೇ?. ವೈದೇಹಿ ಅವರ ಈ ಕವನ ನೋಡೋಣ. ** ** *** ತಿಳಿದವರೇ… ಹೇಳಿ ಕಾವ್ಯದ ಬಗ್ಗೆ ತಿಳಿದವರೇ ಹೇಳಿ. ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು. ತಿಳಿಸಾರು ಎಂದರೆ ಏನೆಂದುಕೊಂಡಿರಿ? ಅದಕ್ಕೂ ಬೇಕು ಒಳಗೊಂದು ಜಲತತ್ವ – ಗಂಧತತ್ವ – ಕುದಿದು ಹದಗೊಂಡ ಸಾರತತ್ವ… ಹೀಗೆ – ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ ನಂಗದೆಯೂ ನಂಗದಂತಿದ್ದ ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ ಕಾಯುತ್ತಿದ್ದಂತೆ. ಕಾದರೇನು? ಮಾಂಸದಡುಗೆಯ ಕಿಡಿಮಿಂಚು ವಗ್ಗರಣೆಯ ಬಡಿಸುವ ಝಣ್ ಝಣ್ ನಡಿಗೆಯವರ ಲಘು ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ ತೆಳ್ಳನೆಯ ತಿಳಿಸಾರು ಹಾಗೆಯೇ ಇತ್ತು ಬೆಳಗಿಂದ ನಂಗದೆಯೂ ನಂಗಿದಂತಿದ್ದ ಕೆಂಡದೊಲೆಯ ಮೇಲೆ ಕುದಿಕುದಿದು ಬತ್ತಿ ರಾತ್ರಿಯಾದರೂ ಹಳಸದೆ ಕಾವ್ಯದ ಬಗ್ಗೆ ದೊಡ್ಡಕ್ಕೆ ತಿಳಿದವರೇ ಹೇಳಿ. ಗೊತ್ತೇ ತಿಳಿಸಾರು ನಿಮಗೆ? ಕ್ಷಮಿಸಿ, ಗೊತ್ತಿಲ್ಲ ಕಾವ್ಯ ನನಗೆ †* *** *** ‘ತಿಳಿದವರೇ …ಹೇಳಿ’ ಎನ್ನುವ ಈ ಶೀರ್ಷಿಕೆ ಒಂದು ವಿಜ್ಞಾಪನೆ ಮಾತ್ರವೇ?. ಅಥವಾ ಅದು, ಜ್ಞಾನಾಕಾಂಕ್ಷೀ ವಿದ್ಯಾರ್ಥಿಯ ಹಂಬಲವೇ?.ಅಥವಾ, ತಿಳಿದವರಿಗೆ ಹಾಕಿದ ಸವಾಲೇ?. “ಕಾವ್ಯದ ಬಗ್ಗೆ ತಿಳಿದವರೇ ಹೇಳಿ. ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು.” ಕಾವ್ಯ ಎನ್ನುವುದು ಕ್ಲಿಷ್ಟ ಅಭಿವ್ಯಕ್ತಿ. ಅದಕ್ಕೆ ಅದರದ್ದೇ ಆದ ವಿನ್ಯಾಸ, ಅರ್ಥದಿಗಂತ ಎಲ್ಲವೂ ಇದೆ. ಕಾವ್ಯದ ತಿಳಿವು ಅಂದರೆ ಏನು? . ಕಾವ್ಯ ಎಂದರೆ ಮಿದುಳು ಪೆಟ್ಟಿಗೆಯೊಳಗೆ ಬೀಗ ಹಾಕಿಡುವ ವಸ್ತುವೇ?. ತನಗೆ ಕಾವ್ಯ ತಿಳಿದಿದೆ ಎನ್ನುವಾಗ, ಕಾವ್ಯದ ವ್ಯಾಪ್ತಿಯನ್ನು ಘಮಂಡು ಸೀಮಿತಗೊಳಿಸದೇ?. ‘ಕಾವ್ಯ ತಿಳಿದವರೇ ಹೇಳಿ’ ಎನ್ನುವಾಗ ಅಕ್ಷರ ಪದರದ ಕೆಳಗೆ ವಿಡಂಬನೆಯ ಧ್ವನಿ ಕೇಳಿಸುತ್ತೆ. ‘ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು ‘ ಅಂತ ವೈದೇಹಿ ಅವರ ಉಸಿರು, ಉಸುರುತ್ತಿದೆ. ಅಡುಗೆ ಮನೆಯಲ್ಲಿ ತಿಳಿಸಾರು ತಯಾರು ಮಾಡುವ ಸ್ತ್ರೀ ಸಂವೇದನೆಯ ದನಿಯದು. ಅದಷ್ಟೇ ಅಲ್ಲ. ತಿಳಿಸಾರು, ಪ್ರಯೋಗ ಸಿದ್ಧ ಜ್ಞಾನ. ಕಾವ್ಯ ಬೆಳೆದು ನಿಲ್ಲುವುದು ಕಲ್ಪನೆ ಮತ್ತು ಚಿಂತನೆಗಳ ಚಪ್ಪರವಾಗಿ. ಹಲವು ಬಾರಿ ಕಾವ್ಯದ ಅಭಿವ್ಯಕ್ತಿ, ಸಿದ್ಧಾಂತದ ಪ್ರತಿಪಾದನೆ ಅಥವಾ ನಿರಾಕರಣೆಯೂ ಆಗಿರುತ್ತೆ. ಪ್ರಯೋಗ ಸಿದ್ಧ ‘ತಿಳಿಸಾರು’ ವಿನ ಜ್ಞಾನಕ್ಕೂ ಕಾವ್ಯದ ಥಿಯರೆಟಿಕಲ್ ಹೈಪಾಥಿಸಿಸ್ ಗೂ ನಡುವೆ ಪ್ರಶ್ನೋತ್ತರದ ಪ್ರತೀಕ ಮೇಲಿನ ಸಾಲೇ?. ‘ತಿಳಿಸಾರು’ ಆಹಾರ. ಆಹಾರವಿದ್ದರೆ ಮನುಷ್ಯ ಜೀವಿಸಬಲ್ಲ. ಕಾವ್ಯ ಜ್ಞಾನದಿಂದ ಹಸಿವು ತಣಿದೀತೇ?. ದೇಹದ ಪೋಷಣೆ ಮತ್ತು ಅಸ್ತಿತ್ವ ಕವಿತೆಯಿಂದ ಸಾಧ್ಯವಿಲ್ಲ. ಅದಕ್ಕೆ ಆಹಾರ ಬೇಕು. ಹಾಗಿದ್ದರೆ, ಅಸ್ಥಿತ್ವಕ್ಕೆ ಅಗತ್ಯವಾದ ವಾಸ್ತವ ವಸ್ತುಗಳು ಜೀವನದ ಮೊದಲ ಆದ್ಯತೆ ಅನ್ನಬಹುದೇ?. ಇನ್ನೂ ಗಹನವಾಗಿ ಯೋಚಿಸಿದರೆ, ‘ತಿಳಿ ಸಾರು’ ವಿನ ‘ತಿಳಿ’ ಎಂದರೆ ಅರಿವು. ತಿಳಿ ಎಂದರೆ ಸ್ಪಷ್ಟತೆ, ಸ್ಫುಟತೆ ಮತ್ತು ಪಾರದರ್ಶಕತೆ. ಕ್ರಿಯಾಪದವಾದಾಗ, ಈ ಎಲ್ಲವನ್ನೂ ಪಡೆಯುವ ದೃಷ್ಟಿ ಮತ್ತು ಪ್ರಕ್ರಿಯೆ. ಸಾರು ಎಂದರೆ ಘೋಷಣೆ ಅಂತಲೂ ಪ್ರಸಾರ ಮಾಡು ಅಂತಲೂ, ವಿಸ್ತರಿಸು ( spread, ಅಂಗಳಕ್ಕೆ ಸೆಗಣಿ ಸಾರಿಸುವುದು) ಅಂತ ಬಹುಅರ್ಥಗಳಿವೆ. ತಿಳಿಸಾರು ಎಂದರೆ ಅರಿವನ್ನು ಪಸರಿಸು, ಸ್ಪಷ್ಟವಾಗಿ ಸ್ಪುಟವಾಗಿ ವಿಸ್ತರಿಸಿ ಕಾಣು ಅಂತ ಅನ್ವಯಿಸಬಹುದು. ಹಾಗಾದರೆ, ಕಾವ್ಯ ಎಂಬ ಕ್ಲಿಷ್ಟಕರ, ಪ್ರತಿಮಾತ್ಮಕ ಗೂಡುಕಟ್ಟುವ ಅಭಿವ್ಯಕ್ತಿ ಗೊತ್ತಿಲ್ಲ. ಸರಳ, ಪ್ರಾಯೋಗಿಕ, ಸ್ಪುಟ,ಪಾರದರ್ಶಕ ದೃಷ್ಟಿಯೂ, ಅದನ್ನು ಅನಿರ್ಬಂಧವಾಗಿ ಹರಡಿ ವಿಸ್ತರಿಸಿ ಹಂಚುವುದು ಗೊತ್ತು ಅನ್ನುವ ಅರ್ಥವೇ?. “ತಿಳಿಸಾರು ಎಂದರೆ ಏನೆಂದುಕೊಂಡಿರಿ? ಅದಕ್ಕೂ ಬೇಕು ಒಳಗೊಂದು ಜಲತತ್ವ – ಗಂಧತತ್ವ – ಕುದಿದು ಹದಗೊಂಡ ಸಾರತತ್ವ… ಹೀಗೆ -“ ‘ತಿಳಿಸಾರು’ ವಿಗೆ ಬೇಕು ಜಲತತ್ವ, ಗಂಧ ತತ್ವ ಮತ್ತು ಕುದಿದು ಹದಗೊಂಡ ಸಾರ ತತ್ವ.ಜಲತತ್ವ ,ಗಂಧತತ್ವ ಮತ್ತು ಸಾರತತ್ವ, ಇವು ಮೂರೂ ನೀರು, ಪರಿಮಳ, ಇತರ ವ್ಯಂಜನಗಳನ್ನು ಸರಿ ಮಾತ್ರೆಯಲ್ಲಿ ಬೆರೆಸಿ, ಕುದಿಸಿ ಸಾರವನ್ನು ಸಮತೋಲಿಸುವ ಹದಬರಿಸುವ ಕ್ರಿಯೆ ಎನ್ನುವುದು ಸಾಲುಗಳ ಹೊರತತ್ವ.! ಜಲತತ್ವ ದ ಜಲದ ಮೂಲ ಸ್ವರೂಪ, ಹರಿಯುವುದು. ಅಧಿಕ ಗುರುತ್ವಾಕರ್ಷಣೆಯ ಪೊಟೆನ್ಶಿಯಲ್ ( ಎತ್ತರ) ನಿಂದ ಕಡಿಮೆ ಪೊಟೆನ್ಶಿಯಲ್ ( ತಗ್ಗು) ನತ್ತ ಹರಿಯುತ್ತೆ. ಜ್ಞಾನವೂ ಹಾಗೆಯೇ, ಹೆಚ್ಚು ಅರಿವಿನ ಸ್ಥಾನದಿಂದ ( ಗುರು) ಕಡಿಮೆ ಅರಿವಿನ ‘ಖಾಲಿ’ ( ವಿದ್ಯಾರ್ಥಿ) ಯತ್ತ ಹರಿಯುತ್ತೆ. ಜಲದ ಇನ್ನೊಂದು ಸ್ವಭಾವ, ಅದಕ್ಕೆ ಸ್ಥಿರ ಆಕಾರ ಇಲ್ಲ. ಅದು ತುಂಬಿದ ಪಾತ್ರೆಯ ಆಕಾರ ಅದಕ್ಕೆ. ( ಹಾಗಂತ ಅದು ನಿರಾಕಾರ ಅಲ್ಲ). ಜಲವನ್ನು ನೀವು ಮಥಿಸಬಹುದು ಅನ್ನುವುದು ಇನ್ನೊಂದು ತತ್ವ. ಜಲವನ್ನು ನಿರಂತರ ಕುದಿಸಿದಾಗ ಅದು ಆವಿಯಾಗಿ ತನ್ನ ತನವನ್ನು ಕಳೆದುಕೊಳ್ಳುತ್ತೆ. ಹಾಗಾಗಿ ಅದನ್ನು ಅಗತ್ಯಕ್ಕಿಂತ ಹೆಚ್ಚು ಕುದಿಸಬಾರದು! ಯಾವುದೇ ಗ್ರಹದಲ್ಲಿ ಜೀವಿಗಳು ಇರಬಹುದೇ ಎನ್ನುವ ಪ್ರಶ್ನೆಗೆ ವಿಜ್ಞಾನಿಗಳು ಮೊದಲು ಹುಡುಕುವುದು, ಅಲ್ಲಿ ಜಲವಿದೆಯೇ ಅಂತ. ಹಾಗಾಗಿ ಜಲತತ್ವ ಎನ್ನುವುದು ಜೀವ ತತ್ವ, ಸೃಷ್ಟಿತತ್ವಕ್ಕೂ ಪ್ರತಿಮೆಯೇ. ‘ಗಂಧ ತತ್ವ’ ದ ಗಂಧ ಎಂದರೆ ಪರಿಮಳ. ಪರಿಮಳ ಆಕರ್ಷಣೆಯೂ. ಗಂಧ ಎಂದರೆ ವಾಸನೆ, ಸ್ವಭಾವ. ಕರ್ಮಸಿದ್ಧಾಂತದ ಪ್ರಕಾರ, ವಾಸನೆಯ ಮೂಲದಲ್ಲಿ ಸಂಗ್ರಹಿತವಾದ ಕರ್ಮ, ಇಂದ್ರಿಯಗಳನ್ನು ಪೋಲರೈಸ್ ಮಾಡುವುದರಲ್ಲಿದೆ. ಗಂಧ ಎನ್ನುವುದು ಅನುವಂಶಿಕವೂ ( ಜೆನೆಟಿಕ್) ಆಗಬಗಹುದು. ಗಂಧ ಎನ್ನುವುದು ಗಂಧದ ಕೊರಡು ಅಂತ ತಗೊಂಡರೆ, ಕೊರಡನ್ನು ತಳೆದಷ್ಟೂ ಇನ್ನೂ ಪರಿಮಳ, ಸೂಸುವ ತತ್ವ ಅದು. ನಿರಂತರ ಪೀಡನೆಗೊಳಗಾದರೂ ಸಹಿಸಿ ಪರಿಮಳವನ್ನು ಹರಡುವ ತ್ಯಾಗ ಮತ್ತು ಸಮರ್ಪಣೆಯ ತತ್ವ. ‘ಕುದಿದು ಹದಗೊಂಡ ಸಾರತತ್ವ’ ಷಡ್ರಸಗಳನ್ನು ಅಗತ್ಯ ಮಾತ್ರೆಯಲ್ಲಿ ಬೆರೆಸಿದರೆ ‘ತಿಳಿಸಾರು’ ಆಗಲ್ಲ. ಅದನ್ನು ಕುದಿಸ ಬೇಕು. ಎಲ್ಲಾ ಸಾರಗಳೂ ಹದವಾಗಿ ಬೆರೆಯಬೇಕು. ಸಾರಗಳು ಇಂದ್ರಿಯಗ್ರಾಹ್ಯವಾಗುವಷ್ಟು ಪರಿಷ್ಕರಿಸಲ್ಪಡಬೇಕು. ಹದ ಎನ್ನುವುದು ಸಮತೋಲನ. ಚಲನಶೀಲ ಪ್ರಕ್ರಿಯೆಗಳು ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಸಮತೋಲನಕ್ಕೆ ( equilibrium) ಬರುತ್ತವೆ. ಆ ಸಮತೋಲನದಲ್ಲಿ ನೋಟಕ್ಕೆ,ಸ್ವಭಾವಕ್ಕೆ ಸ್ಥಿರತೆಯಿರುತ್ತೆ. ಚಂಚಲತೆಯಿಂದ ಸ್ಥಿರತೆಯತ್ತ ದಾರಿಯಲ್ಲಿ ಮಂಥನವಿದೆ. ಇಲ್ಲಿ ‘ತಿಳಿಸಾರು’ ಬದುಕಿಗೆ, ಕಾವ್ಯಕ್ಕೆ, ಕಲೆಗೆ, ಸೃಜನಶೀಲ, ಪ್ರಯೋಗಾತ್ಮಕ ಪ್ರಯತ್ನಕ್ಕೆ ಹೋಲಿಕೆಯಾದಂತೆ ಅನಿಸುತ್ತೆ. “ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ ನಂಗದೆಯೂ ನಂಗದಂತಿದ್ದ ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ ಕಾಯುತ್ತಿದ್ದಂತೆ. ಕಾದರೇನು?” ಮೂಲೆಯಲ್ಲಿ ಸದಾ ಉರಿಯುತ್ತಿರುವ ಬೂದಿ ಮುಚ್ಚಿದ ಒಲೆಯ ಮೇಲೆ, ಈ ತಿಳಿ ಸಾರಿನ ಪಾತ್ರೆ. ಹೊರಗೆ ತಣ್ಣಗಿನ ಬಿಳಿ ಬಿಳಿ ಬೂದಿ. ಒಳಗೆ ಉರಿಯುವ ಕೆಂಡ. ಸಾರು ಕಾಯುತ್ತಿದೆ. ಅಂದರೆ ಬಿಸಿಯಾಗುತ್ತಿದೆ ಅಂತ ಒಂದು ಅರ್ಥವಾದರೆ, ಸಾರು ಏನನ್ನೋ ನಿರೀಕ್ಷೆ ಮಾಡುತ್ತಿದೆ ಅಂತ ಇನ್ನೊಂದು ಅರ್ಥ. ಈ ಪ್ರಕ್ರಿಯೆಯ ನಂತರ ಏನು? ಎನ್ನುವ ಪ್ರಶ್ನೆ ಕೇಳುವುದು, ಬಹುಷಃ, ಈ ಕಾಯುವಿಕೆ ಮತ್ತು ಕಾಯುವ ವ್ಯಕ್ತಿಯತ್ತ ಸಮಾಜಕ್ಕೆ ಅಸಡ್ಡೆಯಿದೆ ಅಂತಾನೇ?. “ಮಾಂಸದಡುಗೆಯ ಕಿಡಿಮಿಂಚು ವಗ್ಗರಣೆಯ ಬಡಿಸುವ ಝಣ್ ಝಣ್ ನಡಿಗೆಯವರ ಲಘು ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ ತೆಳ್ಳನೆಯ ತಿಳಿಸಾರು ಹಾಗೆಯೇ ಇತ್ತು ಬೆಳಗಿಂದ” ಸಮಾಜದ ದೈಹಿಕ ಜಗತ್ತು ಮಾಂಸದಡುಗೆ, ರುಚಿ, ಆಡಂಬರ,ಅಬ್ಬರ ಇತ್ಯಾದಿಗಳನ್ನು ಸವಿಯುತ್ತೆ. ಕಿಡಿ ಮಿಂಚು ವಗ್ಗರಣೆ ಎಂಬುದು ಅಪೂರ್ವ ಪರಿಕಲ್ಪನೆ. ಪುರುಷ ಪ್ರಧಾನ ಸಮಾಜದ ಮಧುಶಾಲೆಯಲ್ಲಿ, ಝಣ್ ಝಣ್ ನಡಿಗೆಯ ಮಧುಬಾಲೆ ಎಲ್ಲರಿಗೂ ಆಕರ್ಷಣೆ. ( ಹರಿವಂಶರಾಯ್ ಬಚ್ಚನ್ ಅವರ ಮಧುಶಾಲಾ ನೀಳ್ಗವಿತೆಯನ್ನು ಇಲ್ಲಿ ನೆನೆಯಬಹುದು). ಆ ಅಬ್ಬರದಲ್ಲಿ ನಮ್ಮ ಅಡುಗೆ ಮನೆಯಲ್ಲಿ ದಿನರಾತ್ರೆ ಕಾದು, ಬೆಂದ ತೆಳುದೇಹದ ( ಹೊಳಪು ದೀಪ್ತಿಯ) ಅಮ್ಮ ಮತ್ತು, ಆಕೆ ಕುದಿಸಿದ ತಿಳಿಸಾರು ಬೆಳಗಿನಿಂದ ಕಾಯುತ್ತಿದೆ. ಹಾಗೆಯೇ ಇತ್ತು ಬೆಳಗಿನಿಂದ ಎಂದರೆ, ಆರಂಭದಿಂದಲೂ ರುಚಿಕೆಡದ ಬದುಕು. ಇಲ್ಲಿ ತಿಳಿಸಾರು ಮತ್ತು ಮನೆಮಂದಿಗಳ ಬದುಕು ಕಟ್ಟುವ ಸ್ತ್ರೀಯರ ನಡುವೆ ಸಾಮ್ಯತೆ ಕಾಣಿಸುತ್ತೆ. “ನಂಗದೆಯೂ ನಂಗಿದಂತಿದ್ದ ಕೆಂಡದೊಲೆಯ ಮೇಲೆ ಕುದಿಕುದಿದು ಬತ್ತಿ ರಾತ್ರಿಯಾದರೂ ಹಳಸದೆ” ದಿನವಿಡೀ ಕುದಿ ಕುದಿದು ಬತ್ತಿದೆ ತಿಳಿಸಾರು, ನಂದದೆಯೂ ನಂದಿದಂತಿದ್ದ ಕೆಂಡದೊಲೆಯ ಮೇಲೆ, ಮತ್ತು ಅದರ ರುಚಿ ಉಳಿಸಿಕೊಂಡಿದೆ. ಅಡುಗೆಗುಡಿಯಮ್ಮನೂ ಬದುಕಿನುದ್ದಕ್ಕೂ ( ಬೆಳಗಿನಿಂದ ರಾತ್ರಿತನಕ) ಕುದಿ ಕುದಿದು ದೇಹ ಬತ್ತಿದರೂ ಸ್ತ್ರೀ ಸಹಜ ಸಕಲ ಗುಣಗಳನ್ನು ಉಳಿಸಿಕೊಂಡು ಸ್ವಲ್ಪವೂ ಹಳಸದೇ ( ಹೊಸತನವನ್ನು ಕಾಪಿಟ್ಟು), ಹೊರಗೆ ನಂದಿದಂತೆ ಕಂಡರೂ ಹೃದಯದೊಳಗೆ ಸದಾ ಬೆಳಗುವ ಮಮತೆಯ ನಂದಾದೀಪ ಬೆಳಗುತ್ತಾ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ. “ಕಾವ್ಯದ ಬಗ್ಗೆ ದೊಡ್ಡಕ್ಕೆ
ಅಂಕಣ ಬರಹ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನಮೂಲ ಗುಜರಾತಿ: ಪನ್ನಾಲಾಲ್ ಪಟೇಲ್ ಕನ್ನಡಕ್ಕೆ : ಎಲ್.ವಿ.ಶಾಂತಕುಮಾರಿಪ್ರ : ಸಾಹಿತ್ಯ ಅಕಾಡೆಮಿಪ್ರ.ವರ್ಷ :೨೦೧೫ಬೆಲೆ : ರೂ.೧೯೦ಪುಟಗಳು : ೪೨೪ ಎಲ್.ವಿ.ಶಾಂತಕುಮಾರಿ ನಮ್ಮ ನಡುವಿನ ಬಹಳ ದೊಡ್ಡ ವಿದ್ವಾಂಸರು ಮತ್ತು ಅನುವಾದಕರು. ಅನೇಕ ಕ್ಲಾಸಿಕ್ ಗಳನ್ನು ಅವರು ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ’ ಕಾದಂಬರಿಯು ಜ್ಞಾನಪೀಠ ಪ್ರಶಸ್ತಿ ವಿಜೇತ ಗುಜರಾತಿ ಲೇಖಕ ಪನ್ನಾಲಾಲ್ ಪಟೇಲ್ ಅವರ ‘ಮಾನವೀನಿ ಭಾವೈ’ಎಂಬ ಮೂರು ಭಾಗಗಳಲ್ಲಿರುವ ಕೃತಿಯ ಮೊದಲ ಭಾಗ ‘ಮಾಲೇಲ್ ಜೀವ್’ ಇದರ ಭಾಷಾಂತರ. ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಅನುವಾದವನ್ನು ಶಾಂತಕುಮಾರಿಯವರಿಂದ ಮಾಡಿಸಿದೆ. ನಲವತ್ತರ ದಶಕದಲ್ಲಿ ಪನ್ನಾಲಾಲ್ ಅವರು ಬರೆದ ಈ ಕಾದಂಬರಿ ಕಾಲ್ಪನಿಕ ಕಥನ ಶೈಲಿಯಲ್ಲಿದೆ. ಅದುವರೆಗೆ ಗುಜರಾತಿ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಸಂಸ್ಕೃತ ಭೂಯಿಷ್ಠವಾದ ಶಿಷ್ಟ ಕಥಾಸಾಹಿತ್ಯಕ್ಕೊಂದು ತಿರುವು ಕೊಟ್ಟ ಕೃತಿಯಿದು. ತತ್ವ ಚಿಂತನೆಯ ಅತಿಭಾವುಕತೆ, ಆದರ್ಶಗಳ ಬೋಧನೆ ಮತ್ತು ತದ್ರೂಪಿ ಪಾತ್ರ ಚಿತ್ರಣಗಳನ್ನು ನಾವಿಲ್ಲಿ ನೋಡಬಹುದು. ಸಾಂಪ್ರದಾಯಿಕ ಶೈಲಿಯ ಕೃತಕತೆ ಹಾಗೂ ಸಂಕೀರ್ಣತೆಯಿಂದ ಮುಕ್ತವಾದ ಸರಳವೂ ನೇರವೂ ಆದ ನಿರೂಪಣೆ ಇಲ್ಲಿದೆ. ಈ ಕಾದಂಬರಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದ ರೈತಾಪಿ ಜನರ ಬದುಕು, ಅವರು ಅನುಭವಿಸುವ ಕಷ್ಟ ಕೋಟಲೆಗಳು, ಅವರ ಪದ್ಧತಿ-ಸಂಪ್ರದಾಯಗಳು, ಜೀವನ ಕ್ರಮ, ಅವರ ನಡುವಣ ಪ್ರೀತಿಯ ಸಂಬಂಧಗಳು ಮತ್ತು ಅಂಧ ವಿಶ್ವಾಸಗಳ ಚಿತ್ರಣಗಳಿವೆ. ಜತೆಗೆ ನಿಸರ್ಗದ ರಮ್ಯ ಮನೋಹರ ಹಿನ್ನೆಲೆಯೂ ಇದೆ. ಆದರೆ ಕಾದಂಬರಿಯುದ್ದಕ್ಕೂ ಕಾಣುವ ಬರಗಾಲದ ಚಿತ್ರಣವು ಭಯಾನಕವಾಗಿದೆ. ಹಳ್ಳಿಗಳನ್ನೂ ಬೆಟ್ಟ ಗುಡ್ಡಗಳನ್ನೂ ಕೊಚ್ಚಿಕೊಂಡು ಹೋಗಿ ಜನರ ಬದುಕನ್ನು ಛಿದ್ರಗೊಳಿಸುವ ಚಿತ್ರಗಳು, ಗುಡ್ಡಗಾಡಿನ ಮಂದಿ ಗ್ರಾಮೀಣರ ಮೇಲೆ ನಡೆಸುವ ಲೂಟಿ-ಆಕ್ರಮಣಗಳು, ಕ್ಷಾಮದ ಅಸಹಾಯಕ ಸ್ಥಿತಿಯಲ್ಲಿ ದನಗಳನ್ನು ಹಸಿಹಸಿಯಾಗಿಯೇ ತಿನ್ನುವ ಮತ್ತು ತಾಯಿಯೇ ತನ್ನ ಮಗುವನ್ನು ತಿನ್ನುವ ದೃಶ್ಯಗಳು ಭೀಭತ್ಸವಾಗಿವೆ. ಕಾಳು ಮತ್ತು ರಾಜೂ ಇಲ್ಲಿನ ಮುಖ್ಯ ಪಾತ್ರಗಳು. ಬಹಳ ಚಿಕ್ಕವರಿದ್ದಾಗಲೇ ಅವರಲ್ಲಿ ಅಂಕುರಿಸಿದ್ದ ಪ್ರೇಮವು ಸಾಮಾಜಿಕ ಕಟ್ಟುಪಾಡುಗಳ ನಡುವೆ ಸಿಲುಕಿ ನಲುಗಿದರೂ ಕಾದಂಬರಿ ಕೊನೆ ಮುಟ್ಟುತ್ತಿದ್ದಂತೆ ಶುದ್ಧ ಸಲಿಲದ ಕಾರಂಜಿಯಾಗಿ ಚಿಮ್ಮಿ ಹರಿಯುವ ಹೃದಯಂಗಮ ಚಿತ್ರಣವು ಓದುವವರ ಮನಸ್ಸಿಗೆ ಕಚಗುಳಿಯಿಡುತ್ತದೆ. ಕಾಳು-ರಾಜೂರ ನಡುವಣ ಉದಾತ್ತ ಪ್ರೇಮವು ಕಾದಂಬರಿಯ ಕೊನೆಯಲ್ಲಿ ಮನಸೂರೆಗೊಳ್ಳುತ್ತದೆ. ಬರದ ಬೇಗೆಯನ್ನು ತಾಳಲಾರದೆ ಅವರಿಬ್ಬರೂ ಊರು ಬಿಟ್ಟು ಹೋಗುತ್ತಾರೆ. ತಡೆಯಲಾರದ ಹಸಿವಿನಿಂದ ಬಳಲುವ ಕಾಳು ‘ನೀರು ಬೇಕು’ ಅನ್ನುತ್ತ ಕುಸಿದು ಬೀಳುತ್ತಾನೆ. ಬರದ ಬೆಂಗಾಡಿನಲ್ಲಿ ರಾಜು ಎಲ್ಲಿಂದ ತರಬೇಕು ನೀರು? ಅವಳ ಮಾತೃಹೃದಯ ವಿಲವಿಲ ಒದ್ದಾಡುತ್ತದೆ. ಕಾಳೂನ ಎದೆಯ ಮೇಲೆ ಮಲಗಿ ಅವಳು ಅಳುತ್ತಾಳೆ. ತನ್ನ ಎದೆಯನ್ನು ತೋರಿಸಿ ‘ ಇಲ್ಲೂ ಏನೂ ಇಲ್ಲ. ಎಲ್ಲ ಒಣಗಿ ಹೋಗಿದೆ’ಅನ್ನುತ್ತಾಳೆ. ಅವಳ ಮೊಲೆಗಳಿಂದ ದ್ರವ ಜಿನುಗಿತೋ ಅಥವಾ ಅವಳ ಬಾಯಿಯಿಂದ ರಸದ ಸ್ಪರ್ಶವಾಯಿತೋ ದೇವರೇ ಬಲ್ಲ. ಪವಾಡದಂತೆ ಕಾಳು ಎದ್ದು ನಿಲ್ಲುತ್ತಾನೆ. ಪ್ರಕೃತಿಯನ್ನು ಪ್ರತಿನಿಧಿಸುವ ಹೆಣ್ಣು ತಾನು ಪ್ರೀತಿಸುವ ಪುರುಷನ ಪಾಲಿಗೆ ಚೈತನ್ಯದಾಯಿನಿಯಾಗುತ್ತಾಳೆ ಎಂಬ ಅರ್ಥದಲ್ಲಿ ಈ ದೃಶ್ಯವು ಚಿತ್ರಿಸಲ್ಪಟ್ಟಿದೆ ( ಪು.೪೨೨). ಶಾಂತಕುಮಾರಿಯವರ ಸುಂದರ ಅನುವಾದವು ಕೃತಿಯನ್ನು ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ. ************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ
ಅನುಭವ ಮೊದಲಬಾರಿಪೇಯಿಂಗ್ ಗೆಸ್ಟ್ಆಗಿಹೋದಾಗ ಬೆಂಗಳೂರಿಗೆ ಹೋಗಿ ಬಂಧುಗಳ ಮನೆಯಲ್ಲಿ ಬಂಧುಗಳ ಹಾಗೆ ಒಂದೆರಡು ದಿನ ಇದ್ದು ಬರುವುದು ಬೇರೆ ವಿಚಾರ !ಅದೇ ನಮ್ಮ ಕೆಲಸಕ್ಕೆ ಹೋಗಿ ಇರುವುದು ವೆರಿ ಹಾರಿಬಲ್! ಯಾರಿಗೂ ಇರಿಸು ಮುರಿಸು ಬೇಡ ಎಂಬ ಕಾರಣಕ್ಕೆ ಸಾಧನಾಕಾಂಕ್ಷೆಗಳ ಅರ್ಥಾತ್ ಉದ್ಯೋಗಾಕಾಂಕ್ಷೆಗಳು,. ಸ್ಪರ್ಧಾಕಾಂಕ್ಷಿಗಳು ಏನೇ ಕರೆಯಲಿ ಅವರ ಮುಂದಿನ ಆಯ್ಕೆ ಪಿಜಿ. ಪಿಜಿ ಅಂದರೆ ‘ಪೇ’ ಮಾಡಿ ‘ಗೆಸ್ಟ್’ ಆಗಿರಿ ಅಂತ ಅಲ್ಲ ಪೇ ಮಾಡಿ ಪೇನ್ಫುಲ್ ಅಡ್ಜಸ್ಮೆಂಟ್ ಮಾಡಿಕೊಂಡಿರಿ ಎಂದರ್ಥ. ಅತ್ತೆ ಮನೆಯ ಝಲಕ್‌ಗಳನ್ನು ಅಂದರೆ ಅತ್ತೆ ಮನೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ರಿಯಲ್ ಡೆಮೊ ಕ್ಲಾಸ್‌ಮಾಡಿ ತೋರಿಸಿ ಬಿಡುತ್ತಾರೆ ಕೆಲವೊಮ್ಮೆ ಪಿಜಿ ಸುಂದರಿಯರು ಎದ್ದರೆ ಕಾಲು ಹಿಡಿಯುತ್ತಾರೆ ಬಗ್ಗಿದರೆ ಜುಟ್ಟು ಹಿಡಿಯುತ್ತಾರೆ ಅಂತರಲ್ಲ ಹಾಗೆ ಮುಖ ನೋಡಿ ವ್ಯವಹರಿಸುತ್ತಾರೆ. ನಮಗೆ ಪ್ರತಿಸ್ಪರ್ಧೆ ಒಡ್ಡುತ್ತಾರೆ ಎಂದು ಗೊತ್ತಾಗಿಬಿಟ್ಟರೆ ಚಿತ್ರ-ವಿಚಿತ್ರವಾಗಿ ವರ್ತಿಸುತ್ತಾರೆ. ಆದರೆ ನನಗೆ ಸಿಕ್ಕಿದ ರೂಮ್ಮೇಟ್ ಸ್ಮಿತಳ ಹಾಗೆ ಸದ್ಭಾವದವರೂ ಖಂಡಿತಾ ಇರುತ್ತಾರೆ ಹೇಗಾದರೂ ಮಾಡಿ ಕೆ.ಎ.ಎಸ್. ಪಾಸು ಮಾಡಿಯೇ ತೀರುತ್ತೇನೆ ಅಂತಿದ್ದ ನಂಗೆ ಪಿಜಿ ಗೆ ಹೋಗಲು ಮನಸ್ಸಾಯಿತು. ಲಗೇಜ್ ಸಮೇತ ಹೊರಟೇಬಿಟ್ಟೆ. ಜಸ್ಟ್ ಡಯಲ್ ಮೂಲಕ ಪಿಜಿ ಅಡ್ರೆಸ್ ಹುಡುಕಿದ್ದ ನನಗೆ ವಿಳಾಸ ಸಿಕ್ಕಿತು. ಅದು ನನ್ನ ಪಾಲಿಗೆ “ಅಡ್ಜಸ್ಟ್ ಡಯಲ್” ಪಿಜಿಯ ಹೆಸರು ‘ವಸಂತವಿಹಾರ’. ಅಲ್ಲಿಯ ವಾಚ್‌ಮ್ಯಾನ್ ನನ್ನನ್ನು ನೋಡುತ್ತಲೇ ಒಳಕರೆದ ನನ್ನ ತಮ್ಮ ಪೂರ್ವಾಪರ ವಿಚಾರಿಸತೊಡಗಿದ. ನಮ್ಮ ಲಗೇಜ್ ನೋಡುತ್ತಲೇ ಶಾಕ್‌ಗೆ ಒಳಗಾಗಿದ್ದ ಅವನು ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲಾರದೆ ಬಾಯಿ ಮುಚ್ಚಿಸಬೇಕೆಂದು “ನಿಮ್ಮನೆ ಅಂತ ತಿಳಿದುಕೊಳ್ಳಬೇಡಿ ಇದು ಬೆಂಗಳೂರು ಅದೂ ಪಿಜಿ…” ಅಂದುಬಿಟ್ಟ. “ಪ್ರಥಮ ಚುಂಬನA ದಂತಭಗ್ನA” ಆಯಿತು ಎಂಬ ಭಾವನೆ ನನ್ನನ್ನಾವರಿಸಿತು. ಪಿಜಿಯ ಮ್ಯಾನೇಜರ್ ನೀಲಾದೇವಿ ಬಂದು “ಮ್ಯಾಡಮ್” ಎಂದು ಪರಿಚಯ ಮಾಡಿಕೊಂಡು ಅಡ್ವಾನ್ಸ್ ತೆಗೆದುಕೊಂಡರು ಅಡ್ರೆಸ್ ಫೋಟೊ ಎಲ್ಲಾ ತೆಗೆದುಕೊಂಡು “ನಮ್ಮ ಪಿಜಿ ಅಂದರೆ ಬಹಳ ಫೇಮಸ್ ಇಲ್ಲಿ ಬಂದವರಿಗೆ ಯಾರಿಗೂ ಮೋಸವಾಗಿಲ್ಲ sಸಕ್ಸಸ್ss ಅಗಿಯೇ ಇಲ್ಲಿಂದ ಕಾಲ್ತೆಗೆಯುವುದು. ನಿಮಗೂ ಶುಭಕಾಲ ಬಂದಿದೆ ಅದಕ್ಕೆ ಇಲ್ಲಿಗೆ ಬಂದಿರುವುದು” ಎಂದು ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು. ನಂತರ “ನೀವು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು ಯುಗಾದಿ ಹಬ್ಬಕ್ಕೆ ವೆಕೇಟ್ ಮಾಡ್ತೀವಿ ಅಂದವರು ಇನ್ನೂ ಬಂದಿಲ್ಲ ಇನ್ನೆರಡು ದಿನದಲ್ಲಿ ಅವರು ಬರುತ್ತಾರೆ. ಅಲ್ಲಿವರೆಗೆ ಹಬ್ಬಕ್ಕೆ ಊರಿಗೆ ಹೋಗಿರುವವರ ಬೆಡ್‌ಖಾಲಿ ಇದೆ ಅದನ್ನು ಉಪಯೋಗಸಿಕೊಳ್ಳಿ” ಎಂದರು ಸರಿ! ಎಂದು ನಾನು ತಲೆಯಾಡಿಸಿದೆ ಅಲ್ಲಿಗೆ ಎರಡನೆ ದಂತಭಗ್ನವಾದAತಾಯಿತು. ಎರಡು ದಿನ ಹೇಗೋ ಕಳೆಯಿತು ಹಬ್ಬಕ್ಕೆ ಹೋದವಳು ಮರಳಿ ಬಂದು ನನ್ನನ್ನು ನೋಡಿದ ಕೂಡಲೆ ನೀಲಾದೇವಿಯನ್ನು ಕರೆದು “ನೋಡಿ ನಮ್ಮ ರೂಂನಲ್ಲಿ ಇರೋರು ಮೂವರು ಆ ಮೂವರನ್ನು ಬಿಟ್ಟರೆ ವಾಶ್ ರೂಮನ್ನು ಬೇರೆಯವರು ಉಪಯೋಗಿಸುವಂತಿಲ್ಲ”. ಎಂದು ಸುಟ್ಟುರಿಯುವಂತೆ ನುಡಿದಳು. ಬೇಜಾರಿನ ಮೇಲೆ ಬೇಜಾರು ಪ್ರಾರಂಭವಾಯಿತು. ಅಷ್ಟರಲ್ಲಾಗಲೇ ಅವರಿಗೆ ಜಾಗ! ಜಾಗ! ಎಂದು ಸುದ್ದಿ ಇಡೀ ಪಿ.ಜಿಯ ತುಂಬೆಲ್ಲಾ ಹರಡಿತು. ಬೃಹತ್ ಸುದ್ದಿಯೇ ಆಯಿತು ಅನ್ನಿ. ಇವತ್ತೊಂದು ದಿನ ಬಂಧುಗಳ ಮನೆಗೆ ತೆರಳಿ ಊರಿಗೆ ಹೊರಡುವ ನಿರ್ಧಾರದಿಂದ ಲಗೇಜ್ ಬ್ಯಾಗ್ ಎತ್ತಿಕೊಂಡಾಗಲೇ ಸ್ಮಿತ ನನಗೆ ಪರಿಚಯವಾದಳು. ಹುಡುಗಿ ಮಂದಸ್ಮಿತಳಾಗಿಯೇ ಬಂದು “ಎಲ್ಲಿ ಮಲಗುವಿರಿ?” ಎಂದಳು “ಗೊತ್ತಿಲ್ಲ? ಊರಿಗೋ ಕಸಿನ್ ಮನೆಗೋ ಹೋಗುವೆ” ಎಂದೆ “ನೀವು ಬಂದಿರುವುದು ಸಾಧನೆಯ ಉದ್ದೇಶದಿಂದ ಊರಿಗೆ ಹೊರಡುವುದು ಏನು ಮಾತು ಬನ್ನಿ ನನ್ನ ರೂಮಿಗೆ ಅರೆ ಏನು ನೋಡೋದು ಬನ್ನಿ…. ಬನ್ನಿ ಅಂದರೆ ಬರಬೇಕಪ್ಪ” ಎಂದು ನನ್ನನ್ನು ಅವಳ ರೂಮಿಗೆ ಕರೆದೊಯ್ದಳು. “ನಿಮ್ಮನ್ನು ನೋಡಿದರೆ ನನಗೆ ಏನು ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ನಮ್ಮ ರೂಮು ಖಾಲಿಯಿಲ್ಲ ಅದರೆ ನನ್ನ ಗೆಳತಿ ಬೇಸಿಗೆ ರಜೆಗೆ ಊರಿಗೆ ಹೋಗಿದ್ದಾಳೆ ಅವಳ ಬೆಡ್ ನೀವು ಉಪಯೋಗಿಸಬಹುದು” ಎಂದಳು. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಒಡಹುಟ್ಟಿದವರಿಗಿಂತ ಹೆಚ್ಚಾಗಿ ಪ್ರೀತಿ ತೋರಿಸಿದಳು. ಎಷ್ಟು ಆತ್ಮೀಯತೆ ಎಂದರೆ ಇವತ್ತಿಗೂ ನೆನೆಸಿಕೊಂಡರೆ ಕಣ್ಣಾಲಿಗಳು ತೇವಗಟ್ಟುತ್ತವೆ. ಪರಿಚಯ ಗಾಢವಾದಂತೆ ಒಂದೇ ಊರಿನವರು ಎಂದು ಗೊತ್ತಾಯಿತು. ಕಣ್ಣರಿಯದಿದ್ದರೂ ನಮ್ಮ ಕೊರಳ ಧ್ವನಿ ಒಂದೇ ಆದ್ದರಿಂದ ಕರುಳ ಬಳ್ಳಿಯ ಸಂಬAಧಕ್ಕಿAತ ನಮ್ಮ ಭಾಂದವ್ಯ ಹೆಚ್ಚಾಗಿಬಿಟ್ಟಿತು. ಒಂದೇ ಮಾತು ಹೇಳಿದಳು “ನೀವು ಬಂದಿರುವುದು ಉದ್ದೇಶವಿಟ್ಟುಕೊಂಡು ಉದ್ದೇಶ ಈಡೇರಿಸಿಕೊಳ್ಳಿ ಅಷ್ಟೆ” ಎಂದಳು. ಮರುದಿನ ಎದ್ದು ಸ್ನಾನ ಮುಗಿಸಿ ಕ್ಲಾಸ್‌ಗೆ ಹೊರಟೆ. ನನ್ನ ಊರಿನಿಂದ ನನ್ನೊಟ್ಟಿಗೆ ಬಂದಿದ್ದ ನನ್ನ ಜೊತೆಗಾತಿಗೆ ಆಗಲೆ ಮುಖ ಗಡಿಗೆಯಾಯಿತು! ಇಲ್ಲಿ ಬಂದರೂ ಅವರಿಗೆ ಆತ್ಮೀಯರು ಸಿಕ್ಕಿಬಿಟ್ಟರಲ್ಲ ಎಂಬ ಧಗೆ ಇತ್ತು. ಪಾಪ ಸ್ಮಿತ ಪಿಜಿಗೆ ಬರುವಷ್ಟರಲ್ಲಿ ತಿಂಡಿ ಖಾಲಿಯಾಗಿರುತ್ತದೆಂದು ಬಾಕ್ಸ್ಗೆ ತಿಂಡಿ ತುಂಬಿಸಿಕೊAಡು ನಮ್ಮ ತರಗತಿಗೇ ತಂದುಕೊಟ್ಟಳು. ರುಚಿರುಚಿಯಾಗಿ ಮಾಡಿಕೊಂಡು ತಿಂದಿದ್ದ ನಾಲಿಗೆಗೆ ಸ್ವಲ್ಪ ಕಷ್ಟದ ದಿನಗಳೆನೇ. ಮುರಿದ ಇಡ್ಲಿ, ಸುಕ್ಕುಗಟ್ಟಿದ ದೋಸೆ, ಬಣ್ಣಕಳೆದುಕೊಂಡ ಚಿತ್ರನ್ನ, ಸೊರಗಿದ ಉಪ್ಪಿಟ್ಟು, ಬಾಡಿದ ಪಲವ್ ಇವೆ! ಹಿಡಿಸಲಿಲ್ಲ. ನಾನು ಡಯಟ್ ಮಾಡುತ್ತಿದ್ದೇನೆ ಎಂದು ನೆಪಹೇಳಿ ಫ್ರಷ್ ಫ್ರೂಟ್ ಜೂಸ್ ತಂದು ಕುಡಿದು ರೂಮಿನಲ್ಲಿಯೇ ಓದುತ್ತಾ ಕುಳಿತೆ. ಅದೇ ಟೈಮ್ ಟೇಬಲ್ . ಸಂಜೆಯ ತರಗತಿ ಮತ್ತೆ ೪ ರಿಂದ ೬ ಗಂಟೆಗೆ, ಸರಿಯಾಗಿ ೧೨.೦೦ ೧೨.೦೫ಕ್ಕೆ ಕುಕ್ಕರ್‌ಯುವತಿ ವಿಷಲ್ ಹಾಕಿ ಹಾಕಿ ಅಡುಗೆ ಆಗುತ್ತಿದೆ ಎಂದು ಸಾರಿಸಾರಿ ಹೇಳುತ್ತಿದ್ದಳು. ಒಗ್ಗರಣೆಯ ಸದ್ದು ಅಷ್ಟೇನು ಆರ್ಭಟಿಸಲಿಲ್ಲ ! ಆಘ್ರಾಣಿಸುವಂತಿರಲಿಲ್ಲ!. ನಮಗೆ ಒಂದು ಗಂಟೆಗೆ ಊಟಕ್ಕೆ ಬನ್ನಿ ಎಂಬ ಕರೆ ಬಂತು. ಬೇರೆ ಬೇರೆ ರೂಮಿನವರೆಲ್ಲ ಊಟದ ಬಾಕ್ಸ್ಗಳನ್ನು ಲೋಟಗಳನ್ನು ಸದ್ದುಮಾಡಿಕೊಂಡು ಹೊರ ಮೆಟ್ಟಿಲಿಳಿಯುತ್ತ ಬಂದರು. ನನಗೆ ಮಜುಗರವಾಯಿತು ಅವರೆಲ್ಲ ಊಟ ತೆಗೆದುಕೊಂಡು ಹೋಗಲಿ ಎಂದು ನಿಧಾನವಾಗಿ ಹೊದೆ. ಸಾಂಬರ್ ಏನೋ ಇದೆ ಸರಿ! ಆದರೆ ಯಾವ ಎಂದು ಕೇಳುವ ಪರಿಸ್ಥಿತಿ ಬಂದೇ ಬಿಟ್ಟಿತು. ಮೊದಲಿಗೆ ಬಂದವರ ಪಾತ್ರೆಗೆ ಇದ್ದ ಸ್ವಲ್ಪ ತರಕಾರಿಗಳು ಸೇರಿದ್ದವು. ಸಂಜೆ ಟೀ ಟೈಮ್ ಅಗುತ್ತಲೇ ಬೆಕ್ಕು ಕೆಡಿಸಿದ ದುರ್ನಾತ ಎಲ್ಲಾ ಕಡೆ ಹಬ್ಬಿತು ಪಿಜಿ ಲಲನೆಯರು ಮೂಗು ಹಿಡಿದುಕೊಂಡೇ ಬೆಕ್ಕು ಕೆಡಿಸಿದ ಜಾಗ ಹುಡುಕಹೊರಟರೆ ಆ ಗಬ್ಬುನಾತ ಬರುತ್ತಿರುವುದು ಟೀ… ಪಾತ್ರೆಯಿಂದ ಎಂದು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಕಾಫಿ ಅಭ್ಯಾಸವಿದ್ದ ನಮಗೆ ಈ ಟೀ ಉಸಾಬರಿ ಬೇಡವೆಂದೇ ಕಾಫಿಗೆ ಅನ್ಯ ಮಾರ್ಗ ಕಂಡುಕೊAಡೆ. ತಿಂಗಳಿಗೆ ರೂ.೫೦ ಕೊಟ್ಟರೆ ಎರಡು ಗ್ಲಾಸ್ ಬಿಸಿನೀರು ಸಿಗುತ್ತಿತ್ತು ಸಂಜೆಗೆ ಸರಿ ಅಂತ ಬಿಸಿನೀರು ತಂದು ಇನ್ಸಟಂಟ್ ಕಾಫಿ ಪೌಡರ್, sಸಕ್ಕರೆ ಮಿಲ್ಕ್ ಪೌಡರ್ ಹಾಕಿ ಕಾಫಿ Éಅರೇಂಜ್ ಮಾಡಿಕೊಂಡರೆ ನನ್ನ ಊರಿನ ಜೊತೆಗಾತಿ “ಇದು ಕಾಫಿ ತರಾನೇ ಇಲ್ಲ” ಎಂದಳು ಇನ್ನೇನು ಅವಳ ತಲೆಗೆ ಮೊಟಕುವುದೊಂದು ಬಾಕಿ ಸುಮ್ಮನಾದೆ. ಹೀಗೆ ದಿನಗಳು ಉರುಳಿದವು. ಸಂಜೆ ಹೊರಗೆಲ್ಲು ಹೋಗಲಾಗುವುದಿಲ್ಲವಲ್ಲ ಪೇರ‍್ನಂಥ ನಂತಹ ಚಪಾತಿಗೆ ಟಿ ಸ್ಪೂನ್ನಂಥ sಸ್ಪೂನಲ್ಲಿ ಪಲ್ಯ ಹೆಸರುಗೊತ್ತಿಲ್ಲದ ಸಾಂಬರ್ ಸೋಡದಿಂದ ಉಬ್ಬಿದ ಅನ್ನ ನೀರ್‌ರ್ ……… ಮಜ್ಜಿಗೆ ಅನಿವಾರ್ಯವಾಗಿ ನನ್ನ ಊಟದ ಪರಿ ಅಡ್ಜಸ್ಟ್ ಆಯ್ತು. ಒದಲು ಕುಳಿತರೆ ೯.೩೦ ರಿಂದ ೯.೪೦ರ ಒಳಗೆ ಒಳ್ಳೆಯ ಸ್ಟಾçಂಗ್ ಕಾಫಿಯ ಮಸಾಲೆ ರೊಟ್ಟಿ ಬೇಯುತ್ತಿರುವ ಘಮಲು ಹಾಗೆ ನಾವಿದ್ದ ಎರಡನೆ ಮಹಡಿಗೆ ತೇಲಿ ತೇಲಿ ಬರುತ್ತಲಿತ್ತು. ಅಂದರೆ ನಮ್ಮ ಅಡುಗೆಯಾಕೆ ದ್ರೌಪದಿಯಮ್ಮನ ಸ್ಪೆಷಲ್ ಅಡುಗೆ ಅವರಿಗೆ ಮಾತ್ರ. ತೋಳಿಲ್ಲದ ಬಟ್ಟೆಯ ಲಲನೆಯರು ಬಂದರೆ ಕೆಂಗಣ್ಣಾಗುತ್ತಿದ್ದರು. ವಾಪಸಕಳಿಸಿ “ಮೈತುಂಬ ಬಟ್ಟೆ ಹಾಕೊಂಡು ಬಿಟ್ಟಿದ ಮುಡಿಯನ್ನು ಕಟ್ಟಿಕೊಂಡು ಬಾ!” ಎಂದು ಗದರುತ್ತಿದ್ದರು. ಸ್ಮಿತಾಳ ಚಿಕ್ಕಪ್ಪನ ಮನೆ ಜಯನಗರದ ಕಡೆಯಿತ್ತು. ಆಕೆ ವಾರಾಂತ್ಯದ ಎರಡು ದಿನಗಳು ಅಲ್ಲಿ ಹೋಗಿ ಗೆಳತಿಯರ ಜೊತೆ ಸೇರಿಸಿ ನನಗೂ ಬೇಕಾದ ಅಡುಗೆಯನ್ನು ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ತುಂಬಿ ತರುತ್ತಿದ್ದಳು. ಸದ್ಯ ಒಳ್ಳೆಯ ಮನೆ ರುಚಿ ತೋರಿಸಿ ಆಕೆಗೆ ಇಂದಿಗೂ ಮನಸ್ಸಿನಲ್ಲಿ ನೆನಪಾದಾಗಲೆಲ್ಲ ಥ್ಯಾಂಕ್ಸ್s ಹೇಳಿಕೊಳ್ಳುತ್ತೇನೆ. ಊಟವಾದ ನಂತರ ಬಿಡುವು ಮಾಡಿಕೊಂಡು ನಾನು ಕುಮಾರ ವ್ಯಾಸ ಭಾರತ ಸನ್ನಿವೇಶಗಳನ್ನು, ಕುವೆಂಪುರವರ ಬಗೆಗಿನ ವಿಚಾರ ಹೇಳುತ್ತಿದ್ದೆ ಅವಳು ಅವಳ ಗೆಳತಿ ರಮ್ಯ ಬಹಳ ಆಸಕ್ತಿಯಿಂದ ಕೇಳಿ ಮಲಗುತ್ತಿದ್ದರು. ಸ್ಮಿತ ಉದ್ಯೋಗ ಮಾಡುತ್ತಿದ್ದ ಯುವತಿ ನಾನು ಸಂಜೆಯ ತರಗತಿಗೆ ಹೋಗುವಾಗ ಹಾಲ್‌ನಲ್ಲಿ ಕೀಇಡುವ ಬದಲು ಮರೆತು ತೆಗೆದುಕೊಂಡು ಹೋಗಿದ್ದೆ ಫೋನ್ ಮಾಡಿ ಸುಟ್ಟವರಿಯುವಂತೆ ಮಾತನಾಡಿದಳು ದಢದಢನೆ ಅವಳೆಡೆಗೆ ಧಾವಿಸಿ ಬರುತ್ತಿದ್ದ ನನ್ನನ್ನು ಕಂಡಾಕೆ ಕೂಲ್ ಆದಳು ಮರುಮಾತನಾಡಲಿಲ್ಲ. ಇಂದಿಗೂ ಅವಳ ನೆನಪು ನನ್ನಲ್ಲಿ ಹಸಿರಾಗಿದೆ. ಬಿಸಿ ನೀರು ಎಲ್ಲಿ ಖಾಲಿಯಾಗಿಬಿಡುವುದೋ ಎಂದು ಸ್ನಾನಮಾಡಿಕೊಂಡು ಮಲಗುವವರು ಅಲ್ಲಿದ್ದರು. ಸ್ವಲ್ಪವೂ ಮುಜುಗರವಿಲ್ಲದೆ ಉಪಯೋಗಿಸಿದ ಪ್ಯಾಡನ್ನು ಬೇಕಾಬಿಟ್ಟಿ ಎಸೆದು ಬೇರೆಯವರಿಗೆ ಮಜುಗರ ತರಿಸುವವರು ಅಲ್ಲಿದ್ದರು. ಎದ್ದು ಶನಿಕಸ ಗುಡಿಸಿಕೊಳ್ಳದೆ ಕಸ ಗುಡಿಸುವವರು ಬರುವವರೆಗೂ ಕಾಯುವ ಸೋಮಾರಿಗಳು ಅಲ್ಲಿದ್ದರು. ಅಂತವರಿಗೆಲ್ಲ ಈ ಸ್ಮಿತ ಅಂದರೆ ಭಯ. ಒಂತರಾ ಲೇಡಿ ರ್ಯಾಂಬೋ ಆಕೆ ಬರುತ್ತಿದ್ದಳೆಂದು ಗೊತ್ತಾದರೆ ಎಲ್ಲರು ಅಲರ್ಟ್ ಆಗಿ ಬಿಡುತ್ತಿದ್ದರು. ನನಗೋಸ್ಕರ ಅವರಿವರ ಬಳಿ ಕೇ ಕೇಳಿ ನೋಟ್ಸ್s ತಂದುಕೊಡುತ್ತಿದ್ದಳು. ಇಷ್ಟರಲ್ಲಿ ಸ್ಮಿತಳ ರೂಮ್ ಮೇಟ್ ವಾಪಾಸ್ಸು ಪಿಜಿಗೆ ಬರುವುದು ಖಾತ್ರಿಯಾಯಿತು. ಬೇರೆ ರೂಂಗಳು ಖಾಲಿಯಿದ್ದರೂ ಅಲ್ಲಿಗೆ ಹೋಗಲು ನನಗೆ ಮನಸ್ಸಾಗಲಿಲ್ಲ. ಸ್ಮಿತ ಆಫೀಸಿನಿಂದ ಬರುವುದನ್ನೆ ಕಾಯ್ದು ನಾನು ಊರಿಗೆ ಹೊರಡುತ್ತೇನೆ! ನಿನಗೆ ಶುಭವಾಲಿ! ಎಂದೆ. ಮನಸ್ಸಿನಲ್ಲಿ ಅಲ್ಲಿ ಇರುವುದಕ್ಕೆ ಅಸೆ ಅದರೆ ಪರಿಸ್ಥಿತಿ ಬೇಡ ಅನ್ನಿಸುತ್ತಿತ್ತು. ಅಲ್ಲಿಗೆ ಅಕ್ಷಯ ತದಿಗೆ ಸ್ಮಿತಳ ಗೆಳತಿ ರಶ್ಮಿ ಅವರಿಬ್ಬರು ವಿಜಯನಗರ ಮಾರ್ಕೆಟ್ಗೆ ಹೋಗಿ ಅಗತಾನೆ ಸಂಪಿಗೆ, ಕನಕಾಂಬರ, ಮರುಗ ಹಾಕಿ ಕಟ್ಟಿದ ಮೈಸೂರು ಮಲ್ಲಿಗೆಹೂವನ್ನು , ಬಳೆ ಅರಿಸಿನ ಕುಂಕುಮ ಸ್ವೀಟ್ ಎಲ್ಲ ತಂದರು. ನನ್ನನ್ನು ಕೂರಿಸಿ ನನ್ನ ಮಡಿಲು ತುಂಬಿದರು ಎಲ್ಲರ ಕಣ್ಣಂಚಲ್ಲಿ ನೀರು! ನನ್ನ ವೇಲನ್ನೆ ಹರಹಿ ಮಡಿಲು ತುಂಬಿಸಿಕೊಂಡೆ.ಈಗಿನ ಹಾಗೆ ಸ್ಮಾರ್ಟ್ ಫೋನ್ ಹಾವಳಿ ಅಗಿರಲಿಲ್ಲ ಇದ್ದರೆ ಫೋಟೊಗಳಲ್ಲಿ ಒಂದಷ್ಟು ನೆನಪು ಹಸಿಯಾಗಿ ಇರುತ್ತಿದ್ದವೇನೋ.? ಗೊತ್ತಿಲ್ಲ!! “ಥ್ಯಾಂಕ್ಸ್ ಫಾರ್ ಟೀಚಿಂಗ್ ಪಲ್ಸಸ್ ಆಫ್ ಲೈಫ್ ಬಿಟ್ಸ್ ಆಫ್ ಲೈಫ್”s ಅಂತ ಅಂದುಕೊAಡೇ ನನ್ನೆಲ್ಲಾ ಲಗೇಜ್ ಪ್ಯಾಕ್ ಮಾಡಿಕೊಂಡೆ. ಆದರೆ ಹೊಸಬರನ್ನು ಕಳ್ಳಗಣ್ಣುಗಳಿಂದಲೆ ನೋಡುವ ಅನುಮಾನದ ಕಣ್ಣುಗಳಿಗೆ ಈಗಲೂ ಧಿಕ್ಕಾರವಿದೆ. ಮರು ದಿನ ಸ್ಮಿತ ಕಛೆರಿಗೆ ರಜೆ ಹಾಕಿ ಅಚೇ ಕರೆದುಕೊಂಡು ಎಂದು ಲಗೇಜ್ ಇಟ್ಟುಕೊಟ್ಟು ಶುಭಾಶಯಗಳನ್ನು ಗದ್ಗದಿತಳಾಗಿಯೇ ಹೇಳಿದಳು ಬಾಯ್! ಬಾಯ್! ಅನ್ನುವ ಆಕೆಯ ಕೈಸನ್ನೆ ಇನ್ನೊಮ್ಮೆ “ಈ ಪಿ.ಜಿ. ಗೆ ಕಾಲಿಡಬೇಡಿ ನಿಮ್ಮಂತಹವರಿಗೆಲ್ಲ ಈ ಪಿ.ಜಿ. ಜೀವನ!” ಎಂದು ವಿನಂತಿಸಿಕೊಳ್ಳುವAತಿತ್ತು. ವಿನಂತಿಗೊಳ್ಳುತ್ತಲೇ ಆಕೆ ಮರೆಯಾದಳು.. ಬಿಳಿಬಣ್ಣದ ಚೂಡಿದಾರ್ಗೆ ಧರಿಸಿದ್ದ ಅವಳ ತಿಳಿನೀಲಿ ಬಣ್ಣದ ವೇಲ್ ತಿಳಿಗಾಳಿಗೆ ಹಾರಾಡುತ್ತಿರುವಂತೆಯೇ ನಾನಿದ್ದ ಅಟೋ ಮುಂದೆ ಸಾಗಿತ್ತು. ಅವಳ ನಂಬರ್ ಬಹಳ ದಿನಗಳವರೆಗೆ ಇತ್ತು! ಆದರೆ ಈಗಿಲ್ಲ !ಕಡೆ ಪಕ್ಷ ಆಕೆಯ ನಂಬರನ್ನಾದರೂ ಉಳಿಸಿಕೊಂಡಿಲ್ಲವಲ್ಲ ಎಂಬ ಕೊರಗು ಇವತ್ತಿಗೂ ಇದೆ. ಆದರೆ ಆಕೆ ಸಾಯಿಮಂದಿರದಿAದ ತಂದು ಕೊಟ್ಟ ಸಾಯಿ ಫೋಟೋ ನನ್ನ
ಅಂಕಣ ಬರಹ ಜ್ಞಾನವೆಂಬ ತಿಜೋರಿಯ ಕೀಲಿಕೈ… ಪುಸ್ತಕಗಳ ರಾಶಿಯನ್ನು ತಡವುವಾಗೆಲ್ಲಾ ಎಂಥದೋ ಆಪ್ತಭಾವ. ಗುಪ್ತಗೆಳೆಯನೊಬ್ಬ ಮನಕ್ಕೆ ಆಗಮಿಸಿದಂತೆ ಪ್ರತಿ ಪುಸ್ತಕವೂ ನಮ್ಮ ಅತಿ ಖಾಸಗೀತನವನ್ನು ಕೊಳ್ಳೆ ಹೊಡೆಯುತ್ತಿರುತ್ತದೆ. ನನಗೆ ಪುಸ್ತಕದ ರುಚಿ ಹತ್ತಿದ್ದು ಬಹುಶಃ ಮೂರೋ ನಾಲ್ಕನೆಯದೋ ತರಗತಿಯಲ್ಲಿದ್ದಾಗ. ಆಗ ನನ್ನ ಮನೆಗೆ ಬರುತ್ತಿದ್ದದ್ದು ದಿಕ್ಸೂಚಿ ಮಾತ್ರ. ಅದು ಖಂಡಿತ ದಿಕ್ಸೂಚಿ ಆಕರ್ಷಕವಾಗಿ ಕಾಣಿಸಬಹುದಾದ ವಯಸ್ಸು ಆಗಿರಲಿಲ್ಲ. ಆದರೆ ಒಂದು ಪುಸ್ತಕದ ಸ್ಪರ್ಶದ ಅನುಭೂತಿ ಹೇಗಿರುತ್ತದೆಂದು ತಿಳಿದದ್ದು ಮಾತ್ರ ದಿಕ್ಸೂಚಿಯಿಂದಲೇ. ಶಾಲೆಯ ಪಠ್ಯ ಪುಸ್ತಕಗಳು ಸದಾ ನಮ್ಮೊಂದಿಗಿರುತ್ತಿದ್ದವಾದರೂ ಯಾವತ್ತಿಗೂ ಅವು ನಮಗೆ ಆತ್ಮೀಯವಾಗಿ ಕಾಣಿಸುತ್ತಿರಲಿಲ್ಲ. ಅವನ್ನು ಎಷ್ಟು ಬೇಗ ಹೊರತೆಗೆಯುತ್ತಿದ್ದೆವೋ ಅಷ್ಟೇ ಬೇಗ ಒಳ ಹಾಕಿ ಮುಚ್ಚಿಟ್ಟು ಎದ್ದರೇ ಸಮಾಧಾನ. ಆದರೆ ಕತೆಗಳ ಲೋಕ ಪರಿಚಯವಾಯ್ತು ನೋಡಿ ಪುಸ್ತಕಗಳ ರುಚಿಯೂ ಸಿಕ್ಕಿಬಿಟ್ಟಿತು. ಕತೆಗಳು ಹತ್ತಿರವಾದ ನಂತರ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯ ಪಾಠಗಳು ಪಾಠವಾಗಲ್ಲದೇ ಕಥೆಗಳಾಗಿಯೂ ಇಷ್ಟವಾಗತೊಡಗಿದವು. ಕವಿತೆಗಳು ಆಪ್ತ ಹಾಡಾದವು. ಇದು ಓದಿನ ರುಚಿ ಹತ್ತಿಸಿದ ಕತೆಗಳಿಂದ ಆದ ಬಹುದೊಡ್ಡ ಲಾಭ. ಆದರೆ ಚಿಕ್ಕಂದಿನಲ್ಲಿ ಬಾಲಮಂಗಳ, ಚಂದಾಮಾಮ, ಚಂಪಕದಂತಹ ಪುಸ್ತಕಗಳ ಬಗ್ಗೆ ಇರುತ್ತಿದ್ದ ಆಕರ್ಷಣೆಯ ಮಟ್ಟ ಎಷ್ಟಿರುತ್ತಿತ್ತೆಂದರೆ ಎಲ್ಲಿಯಾದರೂ ಸಿಕ್ಕರೆ ಸಾಕು ಲಪಟಾಯಿಸಿಬಿಡಬೇಕು ಎನ್ನುವಷ್ಟು. ಆದರೆ ಲಪಟಾಯಿಸುವ ಅವಕಾಶ ಸಿಗಲಿಲ್ಲ ಅದು ಬೇರೆ ಮಾತು. ಮನೆಯಲ್ಲಿ ಕೊಡಿಸಿ ಎಂದು ದುಂಬಾಲುಬಿದ್ದರೆ ದಿಕ್ಸೂಚಿ ಓದು ಎನ್ನುವ ಉತ್ತರ ಬರುತ್ತಿತ್ತು. ದಿಕ್ಸೂಚಿಯ ಪುಟ ತಿರುವುವಾಗ ಎಂಥದೋ ನಿರಾಸೆ… ಅಲ್ಲಿ ಎಲ್ಲಿಯಾದರೂ ಇತಿಹಾಸದ ರಾಜರ ಕತೆಗಳಿದ್ದರೆ ಕಣ್ಣುಗಳು ಕೊಂಚ ಮಿಂಚುತ್ತಿದ್ದವು. ಒಂದಷ್ಟು ವರ್ಷ ದಿಕ್ಸೂಚಿಯಲ್ಲಿ ನಾಗರೀಕತೆಗಳ ಬಗ್ಗೆ ಸಚಿತ್ರ ವಿವರಣೆ ಬರುತ್ತಿತ್ತು. ಅದು ಸ್ವಲ್ಪ ಆಸಕ್ತಿ ಹುಟ್ಟಿಸುತ್ತಿತ್ತು. ಆದರೆ ಬಾಲಮಂಗಳದ ಕತೆಗಳ ಮುಂದೆ ಮೃಷ್ಟಾನ್ನದ ಮುಂದೆ ಇಟ್ಟ ಮುದ್ದೆಯ ಹಾಗೆ ಸಪ್ಪೆ ಸಪ್ಪೆ… ನನ್ನ ಗೆಳತಿಯೊಬ್ಬಳು ತನ್ನಲ್ಲಿರುತ್ತಿದ್ದ ಬಾಲಮಂಗಳ ಪುಸ್ತಕವನ್ನು ಆಗಾಗ ಶಾಲೆಗೆ ತರುತ್ತಿದ್ದಳು. ಅದನ್ನು ನೋಡುವಾಗೆಲ್ಲಾ ಇವಳೆಷ್ಟು ಅದೃಷ್ಟವಂತಳು, ಇವಳ ಅಮ್ಮ ಇವಳಿಗೆ ಓದಲು ಕತೆ ಪುಸ್ತಕ ಕೊಡಿಸುತ್ತಾರಲ್ಲಾ ಎಂದು ಕರುಬುತ್ತಿದ್ದೆ. ರಜೆ ಸಿಕ್ಕಾಗ ಅವಳ ಮನೆಗೆ ಬಾಲ ಮಂಗಳವನ್ನು ನೋಡಲಿಕ್ಕೆಂದೇ ಹೋದದ್ದಿದೆ. ಆದರೆ ಅವನ್ನು ದೂರದಿಂದ ನೋಡಬಹುದಿತ್ತಷ್ಟೇ, ಮುಟ್ಟುವಂತಿರಲಿಲ್ಲ. ಇರಲಿ ಆ ಗೆಳತಿ ಕನಿಷ್ಟ ನೋಡಲು ಬಿಟ್ಟಿದ್ದಳಲ್ಲಾ… ಅದೇ ಸಮಾಧಾನ. ಈ ಪರಿಸ್ಥಿತಿಯನ್ನು ದಾಟುತ್ತಿರುವಾಗ ಅಚಾನಕ್ ನನಗೆ ಸಿಕ್ಕ ದೊಡ್ಡ ನಿಧಿ ಎಂದರೆ ಲೈಬ್ರರಿ ಕಾರ್ಡ್. ನಾನು ಐದನೇ ತರಗತಿಯಲ್ಲಿದ್ದಾಗ ಬಹುಶಃ ನನ್ನಪ್ಪ ನನಗದನ್ನು ಮಾಡಿಸಿಕೊಟ್ಟದ್ದು. ನಂತರ ಅಲ್ಲಿದ್ದ ಪಂಚತಂತ್ರದ ಕತೆಗಳಿಂದ ಹಿಡಿದು ಎಲ್ಲಾ ರೀತಿಯ ಕತೆಗಳನ್ನೂ ಒಂದು ಕಡೇಯಿಂದ ಓದಿ ಮುಗಿಸಿದ್ದೆ. ಪರೀಕ್ಷೆಗಳಿದ್ದಾಗಲೂ ಕತೆ ಪುಸ್ತಕಗಳನ್ನು, ಪಠ್ಯಪುಸ್ತಕದ ನಡುವೆ ಬಚ್ಚಿಟ್ಟುಕೊಂಡು ಓದಲು ಹೋಗಿ ಅಪ್ಪನ ಕೈಗೆ ಸಿಕ್ಕುಬಿದ್ದು ಬೈಸಿಕೊಂಡದ್ದೂ ಇದೆ. ಹೈಸ್ಕೂಲು ಮುಗಿದು ಕಾಲೇಜು ಮೆಟ್ಟಿಲು ಹತ್ತಿದಾಗ ನಾನು ನನ್ನ ಜೀವನದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ ಓದಿದ್ದು. ನಾನು ಓದಿದ ಮೊದಲ ಕಾದಂಬರಿ ಉಷಾನವರತ್ನರಾಮರ ಬಿರುಕು. ಆ ಕತೆಯ ಧರಣಿ, ಚಾರುದಾಸ್, ಅವರ ಮುದ್ದಾದ ಮಗಳು ಈಶಾನ್ಯ… ಪ್ರತಿ ಪಾತ್ರವೂ ಇಂದಿಗೂ ಮನಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದೆಷ್ಟೋ ಬಾರಿ ಆ ಪಾತ್ರಗಳು ನನ್ನನ್ನು ವಿಪರೀತ ಕಾಡಿವೆ. ಆ ವಯಸ್ಸೇ ಅಂಥದ್ದು. ಕಾದಂಬರಿಯ ಪಾತ್ರವನ್ನೇ ಆವಾಹಿಸಿಕೊಂಡು ಅನುಭವಿಸುವಂತಹ ವಯಸ್ಸು. ನಂತರ ಓದಿನ ಸಲುವಾಗಿ ನಗರದ ಹಾಸ್ಟೆಲ್ಲಿಗೆ ಬಂದೆ. ಅಲ್ಲಿ ನಮ್ಮ ಹಾಸ್ಟೆಲ್ ಎದುರಿಗೆ ಒಂದು ಸಣ್ಣ ಹೋಟೆಲ್ ಇತ್ತು. ಅದರ ಮುಂಭಾಗದ ಶೋಕೇಸಿನಲ್ಲಿ ಕುವೆಂಪುರವರು ಬರೆದ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಜೀವನ ಚರಿತ್ರೆಗಳನ್ನು ಇಟ್ಟಿರುತ್ತಿದ್ದರು. ದಿನಾ ಅವನ್ನು ಗಮನಿಸುತ್ತಿದ್ದ ನಾನು ಒಮ್ಮೆ ತಡೆಯಲಾಗದೆ ಆ ಪುಸ್ತಕವನ್ನು ಕೊಡುತ್ತೀರಾ ಓದಿ ತಂದುಕೊಡುವೆ ಎಂದು ಕೇಳಿಯೇಬಿಟ್ಟಿದ್ದೆ. ಒಂದೆರೆಡು ದಿನ ಇಲ್ಲ ಎನ್ನುತ್ತಾ ಸತಾಯಿಸಿದ ಹೋಟೇಲಿನ ಮಾಲೀಕರು, ಕೊನೆಗೆ ನಾ ಯಕೋ ಬಿಡೋ ಗಿರಾಕಿ ಅಲ್ಲ ಅನಿಸಿ ಒಂದಿನ ವಿವೇಕಾನಂದರ ಜೀವನ ಚರಿತ್ರೆಯನ್ನು ಮಾತ್ರ ಕೊಟ್ಟರು. ಅವತ್ತು ಆ ಪುಸ್ತಕವನ್ನು ಕೈಯಲ್ಲಿ ಹಿಡಿದದ್ದೇ ಒಂದು ರೋಮಾಂಚನ. ಅದರ ಓದು ನನ್ನಲ್ಲಿ ತಂದ ಬದಲಾವಣೆಯೂ ಒಂದು ಅದ್ಭುತವೇ ಸರಿ. ಆ ಅದ್ಭುತವೇ ಮೂರು ವರ್ಷಗಳ ಕಾಲ ಹಾಸ್ಟೆಲ್ಲಿನಲ್ಲಿದ್ದಾಗ ನನ್ನನ್ನು ತಿದ್ದಿದೆ, ಬುದ್ಧಿ ಹೇಳಿದೆ, ಸಮಾಧಾನಿಸಿದೆ, ಸರಿ ದಾರಿಯಲ್ಲಿ ನಡೆಸಿದೆ. ಆ ಪುಸ್ತಕವನ್ನು ವಾರಕ್ಕೆ ಮುಂಚೆಯೇ ಒಂದು ಮುಕ್ಕು ಬಾರದಂತೆ ಜೋಪಾನವಾಗಿಟ್ಟುಕೊಂಡು, ಓದಿ ಮುಗಿಸಿ ಹೋಟೇಲಿನ ಅಂಕಲ್ (ಇಷ್ಟು ದಿನಗಳಲ್ಲಿ ಅವರೀಗ ಅಂಕಲ್ ಆಗಿ ಬದಲಾಗಿದ್ದದ್ದೂ ಸೋಜಿಗ…) ಗೆ ಮರಳಿ ತಂದು ಕೊಟ್ಟಾಗ ಅವರ ಮುಖದಲ್ಲಿ ಒಂದು ಸಣ್ಣ ಸಂತೋಷ ಮತ್ತು ಮೆಚ್ಚುಗೆ ಇತ್ತು. ಮರಳಿ ಪಡೆದ ಪುಸ್ತಕವನ್ನು ಅದಿದ್ದ ಜಾಗದಲ್ಲೇ ಇಟ್ಟು, ಸದ್ದಿಲ್ಲದೇ ನಾ ಕೇಳದೆಯೇ ರಾಮಕೃಷ್ಣರ ಪುಸ್ತಕವನ್ನು ತಂದು ನನ್ನ ಕೈಗೆ ಇತ್ತಿದ್ದರು. ನನ್ನ ಕಣ್ಣಲ್ಲಿ ಕೃತಜ್ಞತೆಯ ಮಹಾಪೂರ… ಖುಷಿಯ ಉತ್ತುಂಗದಲಿ ನಾನಿದ್ದೆ. ಮತ್ತೊಂದು ವಾರದ ನನ್ನ ಓದು ಸಂಪನ್ನವಾಗಿತ್ತು. ಅಲ್ಲಿಂದ ಮುಂದಕ್ಕೆ ಪುಸ್ತಕಗಳನ್ನು ನಾನು ಹುಡುಕಿ ಹೊರಡಲು ಶುರುಮಾಡಿದೆ. ಎಲ್ಲೇ ಪುಸ್ತಕ ಕಾಣಲಿ ಅದು ನನಗೆ ಬೇಕು ಅನಿಸುತ್ತಿತ್ತು. ನನ್ನ ಪಾಕೆಟ್ ಮನಿಯ ಬಹುಭಾಗ ಪುಸ್ತಕಗಳಿಗೇ ಖರ್ಚಾಗುತ್ತಿತ್ತು. ಇನ್ನು ನಾನು ಯಾವ ಯಾವ ಊರಿನಲ್ಲಿರುತ್ತಿದ್ದೆನೋ ಅಲ್ಲೆಲ್ಲಾ ಒಂದೊಂದು ಲೈಬ್ರರಿ ಕಾರ್ಡ್ ಇರುತ್ತಿತ್ತು ನನ್ನ ಬಳಿ. ಇನ್ನು ನೌಕರಿ ಸಿಕ್ಕಾಗ ಆದ ಮೊದಲ ಆನಂದವೆ ಇನ್ನು ಮುಂದೆ ಸ್ವಂತ ಖರ್ಚಿನಲ್ಲಿ ಪುಸ್ತಕ ಕೊಳ್ಳಬಹುದು ಎಂಬುದು. ಅದು ಮತ್ತೊಂದೇ ಮಟ್ಟಿಗಿನ ಖುಷಿ. ನನ್ನ ಆಸಕ್ತಿ ಎಷ್ಟು ವೈವೀಧ್ಯವಿರುತ್ತಿತ್ತೋ ಅಷ್ಟೇ ರೀತಿಯ ಪುಸ್ತಕಗಳನ್ನು ನಾನು ಓದುತ್ತಿದ್ದದ್ದು. ಸಾಹಿತ್ಯ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಸಂಗೀತ, ಜ್ಯೋಯಿಷ್ಯ, ಸಂಖ್ಯಾಶಾಸ್ತ್ರ… ಹೀಗೆ ನಾನಾ ಬಗೆಯ ಪುಸ್ತಕಗಳಿರುತ್ತಿದ್ದವು ನನ್ನ ಬಳಿ. ನನ್ನ ಗೆಳತಿಯರು ಕೆಲವೊಮ್ಮೆ ಶಾಸ್ತ್ರ ಕೇಳಲು ಬರುತ್ತಿದ್ದರು ನನ್ನ ರೂಮಿಗೆ. ಈಗ ನೆನೆದರೆ ನಗು ಬರುತ್ತದೆ. ಈಗಲೂ ಆ ಎಲ್ಲ ಪುಸ್ತಕಗಳೂ ಇವೆ… ಎಲ್ಲೋ ಮೂಲೆಯಲ್ಲಿ. ಅಪ್ಪ ಒಮ್ಮೆ ತಮಾಷೆಗೆ, “ಸುಮ್ನೆ ಒಂದು ಬೋರ್ಡ್ ಹಾಕ್ಕೊಂಡು, ಪಂಚಾಂಗ ಇಟ್ಕೊಂಡು ಕೂತುಬಿಡು ಹೋಗ್ಲಿ, ಒಂಚೂರು ಸಂಪಾದನೆಯಾದ್ರೂ ಆಗುತ್ತೆ…” ಅಂತ ಹೇಳಿ ಹೇಳಿ ನಗಾಡಿದ್ರು. ಆದ್ರೆ ಯಾರೇನೇ ಹೇಳಲಿ, ನನಗೆ ಆಸಕ್ತಿ ಹುಟ್ಟಿದ್ದನ್ನೆಲ್ಲಾ ನಾ ಓದಿದ್ದೇ ಸೈ ಎನ್ನುವಂತೆ ಓದುತ್ತಿದ್ದೆ ಆಗ. ತುಷಾರ, ಮಯೂರ, ಓ ಮನಸೇ, ಸುಧಾ, ತರಂಗ… ತಪ್ಪದೇ ನನ್ನ ಕೋಣೆ ಸೇರುತ್ತಿದ್ದವು. ನಾನಾಲ್ಕು ನ್ಯೂಸ್ ಪೇಪರ್ ಹಾಕಿಸಿಕೊಳ್ತಿದ್ದೆ ಮನೆಗೆ. ಅಕ್ಕಪಕ್ಕದವರು ಒಂದು ರೀತಿ ಹುಚ್ಚರನ್ನು ನೋಡುವ ಹಾಗೆ ನೋಡುತ್ತಿದ್ದರು. ಒಂದೆರೆಡು ಮಂದಿ ತಮ್ಮ ಮನೆಗೆ ನ್ಯೂಸ್ ಪೇಪರ್ ಹಾಕಿಸಿಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದರು. ಇಲ್ಲಿಯೇ ಬಂದು ಓದಿ ಹೋದರಾಯಿತು ಎಂದುಕೊಂಡು. ಅವರು ಬಂದು ಕೇಳಿದಾಗ ನನಗೂ ಇಲ್ಲ ಎನ್ನಲು ಸಾಧ್ಯವಿರುತ್ತಿರಲಿಲ್ಲ. ವಾರವಿಡೀ ಕೆಲಸಕ್ಕೆ ಹೋಗುವ ತರಾತುರಿ. ಸಿಗುತ್ತಿದ್ದ ಒಂದೇ ಒಂದು ದಿನದ ಬಿಡುವು ಭಾನುವಾರ. ಭಾನುವಾರದಂದು ನಾ ಮಾಡುತ್ತಿದ್ದ ಮೊಟ್ಟ ಮೊದಲ ಕೆಲಸವೇ ಲೈಬ್ರರಿಗೆ ಹೋಗಿ ಅಲ್ಲೊಂದಿಷ್ಟು ಹೊತ್ತು ಪುಸ್ತಕಗಳನ್ನು, ನೋಡಿ, ಮುಟ್ಟಿ, ತಡವಿ ಕೊನೇಗೆ ಯಾವುದೋ ತುಂಬಾ ಬಿಡಲಾಗದ ಮೂರು ಪುಸ್ತಕಗಳಿಗೆ ಡೇಟ್ ಹಾಕಿಸಿಕೊಂಡು ತರುತ್ತಿದ್ದದ್ದು. ಅಷ್ಟಕ್ಕೂ ಡೇಟ್ ಹಾಕಿಸಿಕೊಂಡು ಬರುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಕಾರಣ ನಾಲ್ಕೈದು ದಿನಗಳೊಳಗಾಗಿಯೇ ಅವು ಲೈಬ್ರರಿಗೆ ಮರಳಿಬಿಡುತ್ತಿದ್ದವು. ಮತ್ತೆ ಹೊಸಪುಸ್ತಕಗಳು ಮನೆ ಸೇರುತ್ತಿದ್ದವು. ಇದೊಂದು ಮಾತ್ರ ಯಾವಾಗಲೂ ಹೀಗೆ ನಡೆಯುತ್ತಿತ್ತು. ಹಾಗಾಗಿ ಲೈಬ್ರೇರಿಯನ್ನೂ ಮೂರು ಕೊಡೋ ಜಾಗದಲ್ಲಿ ನಾಲ್ಕು, ಐದು ಪುಸ್ತಕಗಳನ್ನೂ ಕೊಟ್ಟು ಕಳಿಸಿಬಿಡುತ್ತಿದ್ದ. ಭಾನುವಾರ ಬಂತೆಂದರೆ ಪೂರ್ತಿ ಎಲ್ಲ ಪೇಪರ್ರುಗಳ ಅಡಿಶನಲ್ಸ್ ಗಳನ್ನು ಓದುವುದರಲ್ಲೇ ಮುಗಿಯುತ್ತಿತ್ತು. ಯಾವುದನ್ನು ಬೇಕಾದರೂ ತಪ್ಪಿಸಿ ಬಿಡುತ್ತಿದ್ದೆನೇನೋ ಆದರೆ ಇದನ್ನು ಬಿಡುವುದು ಸಾಧ್ಯವಿರುತ್ತಿರಲಿಲ್ಲ. ಹಾಗೆ ಲೋಕದ ಅರಿವಿಲ್ಲದೆ ಓದುತ್ತಾ ಕಾಲ ಕಳೆದುಬಿಡುವುದೂ ಒಂಥರಾ ಸುಖ. ಈಗ ಇವೆಲ್ಲಾ ನೆನಪುಗಳೂ ನನಗೇ ಒಂದು ನಮೂನಿ ದಂತಕಥೆಗಳಂತೆ ಕಾಣಿಸುತ್ತವೆ. ಕಾರಣ ಮದುವೆ, ಸಂಸಾರ, ಮಕ್ಕಳು, ಕೆಲಸ… ಒಟ್ಟಾರೆ ಧಾವಂತದ ಈ ಬದುಕಿನ ನಡುವೆ ಓದುವ ಸುಖ ಕಳೆದುಹೋಗಿದೆ. ಸಿಗುವ ಸಣ್ಣ ಸಣ್ಣ ಸಮಯದ ತುಣುಕುಗಳನ್ನು ಜೋಡಿಸಿಕೊಂಡು ಒಂದೊಂದೇ ಪುಸ್ತಕವನ್ನು ಪ್ರೀತಿಯಿಂದ ಮುಗಿಸಬೇಕಾಗಿ ಬರುತ್ತದೆ. ಆದರೆ ಓದುವ ಪ್ರೀತಿ ಇನ್ನೂ ಬತ್ತಿಲ್ಲ, ಸ್ವಲ್ಪವೂ ಸೊರಗಿಲ್ಲ, ಬದಲಿಗೆ ದುಪ್ಪಟ್ಟಾಗಿದೆ ಎನ್ನುವುದೇ ಖುಷಿಯ ವಿಚಾರ. ನಾವೆಲ್ಲಾ ಓದಿನ ಬಗ್ಗೆ ಚರ್ಚಿಸುತ್ತಾ, ಓದಿನ ಸುಖಕ್ಕಾಗಿ ಪುಸ್ತಕಗಳ ಕನಸುತ್ತಾ ಕೂತಿರುವಾಗ ನಮ್ಮ ಮಕ್ಕಳು ಅದಕ್ಕಿಂತ ಭಿನ್ನವಾಗಿ ಬೆಳೆಯುತ್ತಿದ್ದಾರೆ. ಆದರೆ ಆ ಭಿನ್ನತೆ ನಮ್ಮಲ್ಲಿ ಆತಂಕ ಹುಟ್ಟಿಸುತ್ತಿದೆ. ಮಕ್ಕಳಿಗೀಗ ಪುಸ್ತಕಗಳು ಬೇಕಿಲ್ಲ. ದೃಷ್ಯ ಮಾಧ್ಯಮದ ಎದುರು ಸಪ್ಪಗೆ ಕಾಣುವ ಪುಸ್ತಕಗಳನ್ನು ಅವರು ಮೂಸುವುದೇ ಇಲ್ಲ. ಡಿಜಿಟಲ್ ಲೈಬ್ರರಿ, ಇ ಬುಕ್ಸ್… ಹೀಗೆ ಎಲ್ಲವೂ ಮೊಬೈಲು, ಕಂಪ್ಯೂಟರಿನ ಮುಂದೆಯೇ ನಡೆಯಬೇಕು. ಅವರಿಗಾಗಿ ಕೂಡಿಟ್ಟ ಪುಸ್ತಕಗಳು, ಇಟ್ಟಲ್ಲೇ ಮುಲುಗುತ್ತವೆ. ಆದರೆ ಬುದ್ಧಿ ಮತ್ತು ಮೆದುಳಿಗೆ ಪುಸ್ತಕಕ್ಕಿಂತ ದೊಡ್ಡ ಆಹಾರವಿಲ್ಲ ಮತ್ತು ಕಣ್ಣಿಗೂ ಒಳ್ಳೆಯದು. ಇದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎನ್ನುವುದೇ ಚಿಂತೆ. ಆದರೆ ನನ್ನ ತರಗತಿಯಲ್ಲಿ ಒಬ್ಬ ಹುಡುಗನಿದ್ದಾನೆ. ಬಹಳಾ ಚೂಟಿ, ತರಲೆ, ಕಿತಾಪತಿ, ತುಂಬಾ ಬುದ್ಧಿವಂತ ಮೇಲಾಗಿ ಕವಿ ಕತೆಗಾರ. ತುಂಬಾ ಬಡತನವಿರುವ ಮನೆಯಿಂದ ಅವ ಶಾಲೆಗೆ ಬರುತ್ತಾನೆ. ಆದರೆ ಪುಸ್ತಗಳ ಬಗ್ಗೆ ಅವನಿಗೆ ಅಪಾರ ಪ್ರೀತಿ. ಎಲ್ಲೇ ಪುಸ್ತಕ ಸಿಕ್ಕರೂ ಅವನಿಗದು ಬೇಕು. ತನ್ನ ಓರಗೆಯವರಿಗಿಂತಲೂ ಹೆಚ್ಚಿನ ಜ್ಞಾನ ಅವನದು. ಅವನಿಗೆ ಆಗಾಗ ಒಂದಷ್ಟು ಪುಸ್ತಕಗಳನ್ನು ಕೊಡುತ್ತಿರುತ್ತೇನೆ. ಕಳೆದ ಬಾರಿ The magic of the lost temple ಎನ್ನುವ ಸುಧಾಮೂರ್ತಿಯವರ ಒಂದು ಪುಸ್ತಕ ಕೊಟ್ಟಿದ್ದೆ. ಅವನಿನ್ನೂ ನನಗೆ ಮರಳಿಸಿಲ್ಲ. ಒಂದುವೇಳೆ ಕೊಡದಿದ್ದರೂ ತೊಂದರೆ ಏನಿಲ್ಲ. ನನಗೆ ಗೊತ್ತು ಅದನ್ನವನು ಜೀವನಪರ್ಯಂತ ನನಗಿಂತಲೂ ಜೋಪಾನವಾಗಿ ಇಟ್ಟುಕೊಂಡಿರುತ್ತಾನೆ ಎಂದು. ************************************************************* –ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಹೊಸ ದನಿ ಹೊಸ ಬನಿ – ೧೦. ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ ಚಂ ಸು ಕವಿತೆಗಳು ರಾಣೇಬೆನ್ನೂರು ಸಮೀಪ ಕೂನಬೇವು ಗ್ರಾಮದ ಸಾಹಿತಿ ಚಂಸು (ಚಂದ್ರಶೇಖರ ಸುಭಾಸ ಗೌಡ ಪಾಟೀಲ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ!) ಅವರ “ಬೇಸಾಯದ ಕತಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೮ನೇ ಸಾಲಿನ ಸಿಂಪಿ ಲಿಂಗಣ್ಣ ದತ್ತಿ (ಜೀವನಚರಿತ್ರೆ) ಪ್ರಶಸ್ತಿ ಪ್ರಕಟವಾದಾಗ ಅವರನ್ನು ಅಭಿನಂದಿಸಲು ಫೋನ್ ಮಾಡಿದ್ದೆ. ಆ ಲೇಖನಗಳಲ್ಲಿ ಕೆಲವನ್ನು ಓದಿದ್ದರಿಂದಾಗಿ ಬೇಸಾಯದ ಬದುಕಿನ ಹಿಂದಣ ಕಷ್ಟ ಕಾರ್ಪಣ್ಯಗಳ ಕುರಿತು ಮಾತೆತ್ತಿದೆ. “ಅಯ್ಯೋ ಅದು ನಂದು ಒಬ್ಬನ್ನದೇ ಅಲ್ರೀ ಎಲ್ಲ ರೈತ ಮಕ್ಳ ಕತೇರೀ” “ಅಲ್ರೀ ನನ್ ಸಂಕಲ್ನದ ಬಗ್ಗೆ ಬರೆದವ್ರೂ ನೀವೊಬ್ರೇ, ಈಗ ಬಹುಮಾನ ಬಂತಂತ ಫೋನ್ ಮಾಡಿದವ್ರೂ ನೀವೇರೀ” ” ಶಿಶುನಾಳದಾಗ ಭೆಟ್ಟಿಯಾಗಿ ಇಪ್ಪತ್ತೊರ್ಸ ಆದ್ರೂ ನೆಪ್ಪಿಟ್ಟೀರಿ” ಎಂದು ಮಾತಾಡಿದ ಚಂಸು ದನಿಯಲ್ಲಿ ಈವರೆಗಿನ ಅವರ ಮೂರೂ ಕವನ ಸಂಕಲನಗಳಲ್ಲಿ ಕಂಡರಿಸಿದ್ದ ಬಂಡಾಯದ ಮೊಳಗು ಮತ್ತು ಮೊಹರು ಅವರ ಮಾತಲ್ಲಿ ಬತ್ತಿ ಹೋಗಿತ್ತು. ಹ್ಯಾಗಾದರೂ ಬದುಕು ಸಾಗಿಸಿದರೆ ಸಾಕು ಅನ್ನುವ ವ್ಯಥೆಯೂ ತುಂಬಿ ಕೊಂಡಂತಿತ್ತು. ಚಂಸು “ಬೇಸಾಯದ ಕತಿ” ಅನ್ನುವ ಶೀರ್ಷಿಕೆಯಲ್ಲಿ ತಮ್ಮ ಕೃಷಿ ಅನುಭವಗಳನ್ನು ಪತ್ರಿಕೆಯೊಂದರಲ್ಲಿ ಬರೆಯುತ್ತಿದ್ದರು. ರಾಸಾಯನಿಕಗಳನ್ನು ಬಳಸದೇ ಸಹಜ ಕೃಷಿಯಲ್ಲೇ ಇಳುವರಿ ಕಡಿಮೆಯಾದರೂ ಲುಕ್ಸಾನು ಇಲ್ಲವೆಂಬ ಅವರ ಅನುಭವ ಇತ್ತೀಚೆಗೆ ಎಲ್ಲ ರೈತರಿಗೂ ಮಾದರಿಯಾಗಿದೆ. ೧೯೯೫ರಲ್ಲಿ ಗೆಳೆಯನಿಗೆ, ೨೦೦೪ ರಲ್ಲಿ ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು, ೨೦೦೯ರಲ್ಲಿ ಅದಕ್ಕೇ ಇರಬೇಕು ಎನ್ನುವ ಕವನಸಂಕಲಗಳನ್ನು ಪ್ರಕಟಿಸಿರುವ ಚಂಸು ಪಾಟೀಲ್ ೨೦೦೨ ರಿಂದ ೨೦೦೬ ರವರೆಗೆ ನೋಟ, ಕ್ರಾಂತಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿಯು ಕೆಲಸ ನಿರ್ವಹಿಸಿದ್ದಾರೆ. ೨೦೦೭ ರಿಂದ ರಾಣೇಬೆನ್ನೂರಿಗೆ ಅಂಟಿದಂತಿರುವ ಕೂನಬೇವು ಗ್ರಾಮದಲ್ಲಿ ನೆಲೆಸಿದ್ದು ಸಹಜ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಮೂರು ಸಂಕಲನದ ಎಷ್ಟು ಕವಿತೆಗಳನ್ನು ಜನ ಓದಿದ್ದರೋ ಇಲ್ಲವೋ ಆದರೆ ಮೂರು ಸಾವಿರಕ್ಕೂ ಮೀರಿದ ಅವರ ಫೇಸ್ಬುಕ್ ಗೆಳೆಯರ ಬಳಗದಲ್ಲಿ ಅವರು ಹೊಸದೊಂದು ಕವಿತೆ ಪ್ರಕಟಿಸಿದ ಕೂಡಲೇ ಹಲವರು ಲೈಕುಗಳನ್ನು ಕೊಡುತ್ತಾರೆ. ಮತ್ತು ಮೇಲ್ನೋಟಕ್ಕೆ ಸಾಧಾರಣ ಶೈಲಿಯ ಹಾಸ್ಯದಂತೆ ಕಂಡರೂ ಆಂತರ್ಯದಲ್ಲಿ ವಿಷಾದವೇ ಅವರ ಎಲ್ಲ ಕವಿತೆಗಳಲ್ಲೂ ಸ್ಥಾಯಿಯಾಗಿ ಇರುತ್ತದೆ. ಬಂಡಾಯದ ದನಿ ಇಂಗಿ ಹೋಗಿದ್ದರೂ ಒಟ್ಟೂ ವ್ಯವಸ್ಥೆಯೊಳಗಿನ ದೌರ್ಬಲ್ಯಗಳನ್ನು ಅವರು ಶಕ್ತವಾಗಿ ದಟ್ಟವಾಗಿ ಹೇಳುತ್ತಾರೆ. ರೈತ ವಿರೋಧೀ ನಿಲುವನ್ನು ಪ್ರಶ್ನಿಸುವ ಅವರ ಕವಿತೆಗಳ ಮುಖ್ಯ ಸ್ಥಾಯಿಯೇ ರೈತನ ನಿತ್ಯ ಬದುಕಿನ ಸಮಸ್ಯೆಗಳು ಆಗಿರುವುದನ್ನು ಗಮನಿಸಲೇ ಬೇಕು. ಇವನಿಗೇಕೆ ಕವಿತೆಯ ಉಸಾಬರಿ? ತತ್ವಮೀಮಾಂಸಕರು ಕಾವ್ಯವಿಮರ್ಶಕರು ತಗಾದೆ ತೆಗೆದರು…. ಈ ಇಳೆಗೆ ಬೆಳೆಗೆ ತಗುಲಿದ ಕಳೆ ತೆಗೆಯುವುದು ಹೇಗೆಂದು ನಾ ಚಿಂತೆಗೆ ಬಿದ್ದಿರುವೆ! ಕವಿತೆ ಬರೆಯುವಾಗಲೂ ರೈತನ ಸಮಸ್ಯೆಯೇ ಇವರ ಕಾವ್ಯದ ಪ್ರತಿಮೆಗಳಾಗುವುದು ವಿಶೇಷ. ಹಸಿರು ಟವೆಲ್ ಕಟ್ಟಿಕೊಂಡು ಉದ್ದುದ್ದದ ಭಾಷಣ ಹೊಡೆಯುವವರು ಈ ಕವಿಯಿಂದ ಕಲಿಯಬೇಕಾದ್ದು ಬಹಳ ಇದೆ. ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ಎಂದು ಪ್ರತಿ ಅನುಪಲ್ಲವಿಯಲ್ಲಿ ಕೊನೆಯಾಗುವ ಕವಿತೆಯ ಆಂತರ್ಯ ಇಡೀ ಜಗತ್ತೇ ಬದಲಾದರೂ ಬದಲಾಗದ ಮನುಷ್ಯನ ಮಿತಿಯ ಬಗ್ಗೆ ಹೇಳುತ್ತದೆ. ಇಡೀ ಪದ್ಯ ಧೇನಿಸಿದ ಸಂಗತಿ ಕಡೆಯಲ್ಲಿ ಹೀಗೆ ವರ್ಣಿತವಾಗುತ್ತದೆ; ಮೋಡದಂತೆ ಕರಗುತ್ತೇವೆ; ನಿಜ, ಯಾರ ದಾಹವನ್ನೂ ಇಂಗಿಸುವುದಿಲ್ಲ! ಹೆಮ್ಮರವಾಗಿ ಬೆಳೆಯುತ್ತೇವೆ; ನಿಜ, ಯಾರ ಹಸಿವೆಯನ್ನೂ ಪೊರೆಯುವುದಿಲ್ಲ! ಮಳೆಬಿಲ್ಲಿನಂತೆ ಬಣ್ಣಗಟ್ಟುತ್ತೇವೆ; ನಿಜ, ಎಲ್ಲರ ಸಂಭ್ರಮವಾಗಿ ಮೂಡುವುದಿಲ್ಲ! ನಕ್ಷತ್ರದಂತೆ ಮಿನುಗುತ್ತೇವೆ; ನಿಜ, ಯಾರ ಬದುಕನ್ನೂ ಬೆಳಗುವುದಿಲ್ಲ! ಬದಲಾಗುತ್ತಲೆ ಇದೆ ಜಗತ್ತು ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ! ಪ್ರಾಯಶಃ ಪದ್ಯ ಇಲ್ಲಿಗೇ ಆಗಿದ್ದಿದ್ದರೆ ಕವಿತೆ ಗೆಲ್ಲುತ್ತಿತ್ತು. ಆದರೆ ತನ್ನ ಹೇಳಿಕೆಯನ್ನು ಸಮರ್ಥಿಸಲು ಕವಿ ಮತ್ತೆ ಮುಂದುವರೆಸಿದ ಸಾಲುಗಳು ಪದ್ಯವನ್ನು ನಾಟಕೀಯ ಅಂತ್ಯಕ್ಕೆ ಎಡೆಮಾಡುತ್ತದೆ. “ಮಾನವ ಜಾತಿ ತಾನೊಂದೇ ವಲಂ” ಎಂದಾ ಕವಿಯ ಮಾತು ನಮ್ಮೆದೆಯೊಳಗೆ ಇಳಿಯುವುದೇ ಇಲ್ಲ! ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ಈ ಸಾಲು ಪದ್ಯದ ಆಂತರಿಕ ಸತ್ವವನ್ನು ಘೋಷವಾಕ್ಯ ಮಾಡಿದ ಕಾರಣ ಮುಟ್ಟಬೇಕಾದ ಎತ್ತರ ಮುಟ್ಟದ ದೀಪಾವಳಿಯ ರಾಕೆಟ್ಟಿನಂತಾಗಿದೆ. ಬೆಳಕು ಬೆಳಕೆ ಆಗಿರುವುದಿಲ್ಲ; ಕತ್ತಲೆ ಕತ್ತಲೆಯೇ ಆಗಿರುವುದಿಲ್ಲ,; ಬೆಳಕಿನಲ್ಲಿ ಎಷ್ಟೊಂದು ಕತ್ತಲೆ… ನಾವದನ್ನು ಗಮನಿಸುವುದೇ ಇಲ್ಲ! ಈ ಸಾಲುಗಳನ್ನು ಓದಿದ ಕೂಡಲೇ ಯಾರೋ ದಾರ್ಶನಿಕರ ನೆನಪಾದರೆ ತಪ್ಪೇನಿಲ್ಲ. ಈ ಕವಿತೆಯಲ್ಲಿ ಚಂಸು ದಾರ್ಶನಿಕ ಸಂಗತಿಗಳನ್ನೇ ಹೇಳಹೊರಟಿದ್ದಾರೆ. ಆದರೆ ಪದ್ಯದ ಕೊನೆ ಕತ್ತಲಿನಂಥ ದ್ವೇಷದಲ್ಲೂ ಪ್ರೀತಿಯ ಬೆಳಕು ಮಿಂಚುವುದಿಲ್ಲವೇ? ಅನ್ನುವಾಗ ಈ ಕವಿ ಹೇಳ ಹೊರಟ ದಾರ್ಶನಿಕ ಸತ್ಯಕ್ಕೆ ತಲೆ ಬಾಗಲೇ ಬೇಕಾಗುತ್ತದೆ. ವರ್ತಮಾನದ ಸಂಗತಿಗಳಿಗೂ ಕವಿಯನ್ನು ಬಾಧಿಸುತ್ತವೆ. ಆ ಅಂಥ ಸಂಗತಿಗಳು ಕವಿತೆಗಳಾದಾಗ ಅಂದರೆ ನಿತ್ಯದ ಬದುಕಿನಲ್ಲಿ ನಾವೆಲ್ಲ ಕೇಳುತ್ತಲೇ ಇರುವ ಬ್ರಷ್ಟಾಚಾರ, ಅತ್ಯಾಚಾರ, ಮಧ್ಯವರ್ತಿಗಳ ಕಾಟವನ್ನು ಈ ಕವಿ ಪ್ರಶ್ನಿಸಿ ಉತ್ತರಕ್ಕಾಗಿ ತಡುಕುತ್ತಾರೆ. ಸೀತೆಗೆ ಪರೀಕ್ಷೆಯ ಮೇಲೆ ಪರೀಕ್ಷೆ! ಕೊನೆಗೊಂದು ಶವಪರೀಕ್ಷೆ… ವರದಿಗಳೆಷ್ಟೋ ಅಷ್ಟೂ ರಾಮಾಯಣ! ಮನಿಷಾಳ ಹತ್ಯೆ ಕುರಿತಂತೆ ಏನೆಲ್ಲವನ್ನೂ ಓದಿದ ನಮಗೆ ಚಂಸು ಅವರ ಈ ಕವಿತೆ ರಾಮಾಯಣದ ಸೀತೆಯನ್ನು ಈ ಕಾಲದ ಮನಿಷಾಳಿಗೆ ಲಿಂಕ್ ಮಾಡುತ್ತಲೇ ನಿಲ್ಲದ ಈ ಅತ್ಯಾಚಾರಗಳ ಬಗ್ಗೆ ವ್ಯಥೆ ಪಡುತ್ತಾರೆ. ಬರ್ತೇನಂತ ಬಂದೇ ಬಿಟ್ಟಳು ಎಂಥ ಬಜಾರಿ ಹೆಣ್ಣಪ್ಪ! ಮಾಯಗಾತಿ ಮುತ್ತೇಬಿಟ್ಟಳು ಹೋರಿ ಮ್ಯಾಲೆ ಮಾರಿ ಕಣ್ಣಪ್ಪ! ರೈತ ಮತ್ತು ಭೂಮಿಯ ಮೇಲೆ ವ್ಯವಸ್ಥೆ ಮಾಡುತ್ತಲೇ ಇರುವ ಕಂಟಕಗಳನ್ನು ಮಾರಿಯಂತೆ ಚಿತ್ರಿಸುವ ಈ ಕವಿ ರಾಣೇಬೆನ್ನೂರು ಭಾಗದಲ್ಲಿ ಬಿಟಿ ಹತ್ತಿ ಬೀಜದಿಂದ ಆಗಿದ್ದ ಘಟನೆಯನ್ನು ಸ್ವಾರಸ್ಯವಾಗಿ ವಿಸ್ತರಿಸುತ್ತಲೇ ಒಟ್ಟೂ ಸಾಮಾಜಿಕ ಸನ್ನಿವೇಶವನ್ನು ಚಿತ್ರಿಸುತ್ತಾರೆ ಅಜ ಒಯ್ದು ಗಜ ಮಾಡುವಳು ರೂಪಾಂತರವೊ ಎಲ್ಲ ಅಜಗಜಾಂತರ! ಜೀವ ಸಂಕುಲದ ಸ್ವಭಾವಾ ತಿದ್ದುವಳು ಕುಲಾಂತರವೊ ಎಲ್ಲ ಕಲಸುಮೇಲೋಗರ! ಚಾನೆಲ್ಲಗೆ ಚಾಕ್ಲೇಟು ಪೇಪರ್ಗೆ ಬಿಸ್ಕೀಟು ಏರಿಕೊಂಡೆ ಸಾರೋಟು ಮಾಡ್ತಾಳೆ ಕಣ್ಕಟ್ಟು! ಇವಳೆ ಲೆಫ್ಟು ಇವಳೆ ರೈಟು ಇವಳೇ ಫ್ರಂಟು ಚುಂಬಿಸಿ ರಂಬಿಸಿ ಎಗರಿಸಿ ಗಂಟು…. ಸದ್ಯ ಭೂ ಸುಧಾರಣೆ ಕಾಯಿದೆ ಮತ್ತು ಎಪಿಎಂಸಿ ಕುರಿತು ಚರ್ಚೆಗಳು ನಡೆದಿರುವ ಹೊತ್ತಲ್ಲಿ ಚಂಸು ಹೇಗೆ ಅಧಿಕಾರ ಪಿಪಾಸು ವ್ಯವಸ್ಥೆ ಬೇಸಾಯಗಾರನ ಬೆನ್ನು ಸುಲಿಯುತ್ತಿದೆ ಎನ್ನುವುದನ್ನು ಸರಳವಾಗಿ ಹೇಳುತ್ತಲೇ ರೈತನ ಮುಂದಿರುವ ಭವಿಷ್ಯದ ಸವಾಲುಗಳನ್ನು ಪಟ್ಟಿ ಮಾಡುತ್ತಾರೆ. ಇದರ ಮುಂದುವರೆದ ಸಾಲುಗಳನ್ನು ಅವರ ಇನ್ನೊಂದು ಪದ್ಯದಲ್ಲಿ ಹೀಗೆ ಹೇಳುತ್ತಾರೆ; ಬದಲಾಗುವ ಕಾಯ್ದೆಗಳ ಮಧ್ಯೆ ನಿನಗೂ ಇದೆಯೆ? ಕೃತಜ್ಞತೆಗೊಂದಿಷ್ಟು ಸ್ಥಳ? ಚಂಸು ಅವರನ್ನು ಯಾಕೋ ಬೇಸಾಯದಷ್ಟೇ ಕಾಡುವ ಸಂಗತಿಗಳು ಎಂದರೆ ಕತ್ತಲು ಮತ್ತು ಬೆಳಕು. ಅವರ ಇನ್ನೊಂದು ಪದ್ಯ ಹೀಗೆ ಕೊನೆಯಾಗುತ್ತದೆ; ಒಳಗಿನ ಕತ್ತಲೆಯ ಕಳೆಯಲು ಬೆಳೆಸಲೇಬೇಕು ಆತ್ಮಸಾಕ್ಷಿಯೊಂದಿಗೆ ನಂಟು! ಇದನ್ನು ಕವಿಯಾಗಿ ಹೇಳುವುದು ಸುಲಭ. ಆದರೆ ಬದುಕು ಅಷ್ಟು ಸರಳ ಅಲ್ಲವಲ್ಲ. ನಮ್ಮನ್ನು ಮುತ್ತಿರುವ ಕತ್ತಲನ್ನು ತೊಡೆಯುವ ಅಧಿಕಾರಕ್ಕೆ ಆತ್ಮ ಸಾಕ್ಷಿಯೇ ಸತ್ತಿದೆಯಲ್ಲ, ಅದಕ್ಕೇನು ಮಾಡಬೇಕು? ಇದು ಎಡವೂ ಅಲ್ಲ! ಬಲವೂ ಅಲ್ಲ! ಎಡಬಲವೊಂದಾದ ಏಕತೆಯ ಹಾದಿ! ಭಾವೈಕ್ಯತೆಯ ಹಾದಿ! ಉಳಿದೆಲ್ಲವೂ ಆಗಲಿ ಬೂದಿ! ಇದು ಈ ಕವಿ ನೆಚ್ಚಿಕೊಂಡ ಮೆಚ್ಚಿಕೊಂಡ ಬದುಕಿನ ಹಾದಿ. ಹಾಗಾಗಿಯೇ ಗಾಂಧಿ, ಬಸವ, ಅಂಬೇಡ್ಕರರ ಮುಂದಿಟ್ಟು ಕೊಂಡ ಸ್ಪಷ್ಟ ಹಾದಿ. ಆದರೆ ಬದುಕು ಕವಿತೆಯಷ್ಟು ಸರಳ ಅಲ್ಲವಲ್ಲ! ಸುಮ್ಮನೆ ಕೂತಿದ್ದೇನೆ ಅಂಧಭಕ್ತಿಯ ಸುಳ್ಳಿನುರುಳಿಗೆ ಗೋಣನೊಡ್ಡಿ ವಿಶ್ವಗುರುವಿನ ಪಟಾಕಿ ಹಾರಿಸಿ ಕೂಗುತ್ತ, ತಿಸ್‌ಮದ್ದು ಬುಸ್ ಅಂದಷ್ಟಕ್ಕೆ ಉಬ್ಬಿ ಹಲ್ಕಿರಿಯುತ್ತ! ಅಡಿಗರ “ಶ್ರೀ ರಾಮ ನವಮಿಯ ದಿನ” ಕವಿತೆಯ ಅಣುಕು ಈ ಸಾಲುಗಳು. ಅಡಿಗರ ಈ ಕವಿತೆಯನ್ನು ನೆನೆಯದೇ ನಮ್ಮ ಯಾವುದೇ ಕಾವ್ಯ ಕುರಿತ ಸಂಕಿರಣಗಳು ನಡೆಯಲಾರವು. ಅದನ್ನು ಅರಿತ ಈ ಕವಿ ಅಣಕವಾಡಿನ ಮೂಲಕ ಮತ್ತೊಂದು ಮಜಲಿಗೆ ಒಯ್ಯುವುದು ಹೀಗೆ; ಷಟ್ಚಕ್ರ ರಾಕೆಟುಗಳೆಲ್ಲಕ್ಕೂ ಚಲನೆಯೆ ಮೂಲಾಧಾರ. ಸಹಸ್ರಾರಕ್ಕದೇ ದಾರಿದೀಪ ಹುತ್ತಗಟ್ಟಿದೆ ಚಿತ್ತ! ಗೆದ್ದಿಲು ಪರಿತ್ಯಕ್ತ ಜಾಗ? ಎದೆಬಗೆದುಕೊಳ್ಳದೆ ಕಾಣಬಹುದೇ ಪ್ರಜಾವತ್ಸಲ ಬಾಪೂರಾಮನ ಆ ಅಂಥ ರೂಪ? ಗಾಂಧಿಯನ್ನು ಕಾಣಬೇಕಿರುವ ರೀತಿಯನ್ನು ಈ ಕವಿತೆ ಬಗೆಯುವ ಬಗೆಯೇ ಸಶಕ್ತವಾಗಿದೆ ಮತ್ತು ವಿಶಿಷ್ಠವೂ ಆಗಿದೆ. “ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ” ಎಂದು ಒಂದು ಕವಿತೆಯಲ್ಲಿ ತಮ್ಮ ಕನಸನ್ನು ತಾವೇ ವರ್ಣಿಸುವ ಈ ಕವಿಯ ಕನಸು ಖಬರಿಲ್ಲದವೇನೂ ಅಲ್ಲ. ಸಾಮಾಜಿಕ ಮೌಲ್ಯಗಳೇ ದಿವಾಳಿಯಾಗುತ್ತಿರುವ ಹೊತ್ತಲ್ಲಿ ತೀರ ಬೇಕೇ ಬೇಕಾದ ಆದರೆ ಮರೆತೇ ಹೋದ ಖಬರನ್ನು ಚಂಸು ಎತ್ತಿ ಹಿಡಿಯುತ್ತಾರೆ ಮತ್ತು ಆ ಕಾರಣಕ್ಕೇ ಹೆಚ್ಚು ಇಷ್ಟವಾಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಗುಂಪು ಕರಗಿದ ಮೇಲೆ ಮತ್ತೆ ಅಲ್ಲಿಗೆ ಧಾವಿಸಿದೆ…. ಧ್ಯಾನಸ್ಥ ತಪಸ್ವಿಯಂತೆ ಅದು ಹಾಗೆ ಕೂತಿರುವುದನ್ನು ಕಂಡು ಅಚ್ಚರಿಗೊಂಡೆ! ಅದೇ ನನ್ನ ಕವಿತೆ ಎಂದು ಎತ್ತಿಕೊಂಡೆ; ಎದೆಗೊತ್ತಿಕೊಂಡೆ! ಇಂಥ ಬರವಣಿಗೆಯ ನಡುವೆಯೇ ಬೇಂದ್ರೆಯವರ “ಕುಣಿಯೋಣು ಬಾರಾ” ಪದ್ಯಕ್ಕೂ ಚಂಸು ಅಣಕು ಮಾಡಬಲ್ಲರು; ಅವ್ನೌನು ಲಾಕ್ಡೌನು ಮುಗೀತು ಕೊರೊನಾ ಹೈರಾಣಾ ಸಾಕಾತು ಜುಮ್ಮಂತ ನುಗ್ಗಿ ಬಿಮ್ಮಂತ ಹಿಗ್ಗಿ ಕುಣಿಯೋಣಾ ಬಾರಾ ಕುಣಿಯೋಣಾ ಬಾರಾ! ಇನ್ನೂ ಸ್ವಾರಸ್ಯದ ಸಂಗತಿಯೆಂದರೆ ಲಾಕ್ಡೌನ್ ಕಾಲದ ಕವಿ ಈ ಚಂಸು. ಅದನ್ನು ಅತ್ಯಂತ ಸ್ವಾರಸ್ಯವಾಗಿ ಹಾಸ್ಯದಲ್ಲಿ ಹೇಳುತ್ತಲೇ ಆಳದಾಳದ ವಿಷಾದವನ್ನೂ ಗುರ್ತಿಸುವುದು ಇವರ ವಿಶೇಷ ಚಿತ್ರಕ ಶಕ್ತಿ. ಭಲ ಭಲಾ ಚಂಸು, ನಿಮ್ಮ ಪದ್ಯಗಳು ಓದುಗರದೇ ಆಗುವುದು ಈ ಸರಳ ರೀತಿಯಲ್ಲಿ ಹೇಳುತ್ತಲೇ ಸಂಕೀರ್ಣವೂ ಆಗುವ ತಿರುವುಗಳಿಂದಾಗಿ. ಮತ್ತು ಆ ತಿರುವುಗಳೇ ತಿವಿಯುವ ಆಯುಧಗಳಾಗಿ ಬದಲಾಗುವ ಕಾರಣಕ್ಕಾಗಿ. ಆದರೂ ಏನೆಲ್ಲ ಬಂಡಾಯದ ಮಾತುಗಳನ್ನು ಬರೆಯುತ್ತಿದ್ದ ನಿಮ್ಮ ಕವಿತೆಗಳು ಈಗ ಹತಾಶೆಯ ಮೂಸೆ ಸೇರಿ ನಿಜ ಬದುಕಿನ ಆವರ್ತನಗಳನ್ನು ಸರಳ ಸಾಲುಗಳಲ್ಲಿ ಕಂಡಿರಿಸುತ್ತಿರುವ ಪರಿಗೆ ದಿಗ್ಮೂಡಗೊಂಡಿದ್ದೇನೆ ಮತ್ತು ನಿಮ್ಮೊಳಗಿನ ಆ ಬಂಡಾಯ ಮತ್ತೆ ಪುಟಿದೆದ್ದು ಸದ್ಯದ ಕಾಯಿದೆ ಕಾನೂನುಗಳನ್ನು ಪ್ರಶ್ನಿಸುತ್ತಲೇ ಈ ನೆಲದ ಮಕ್ಕಳ ಹಕ್ಕನ್ನು ಎತ್ತಿ ಹಿಡಿಯಲಿ ಎನ್ನುವ ಆಶದೊಂದಿಗೆ ನಿಮ್ಮ ಕವಿತೆಗಳ ಟಿಪ್ಪಣಿಯನ್ನು ಕೊನೆಗೊಳಿಸುತ್ತಿದ್ದೇನೆ. ————————————————————————————————— ಚಂಸು ಪಾಟೀಲರ ಆಯ್ದ ಕವಿತೆಗಳು ೧. ಬದಲಾಗುತ್ತಲೆ ಇದೆ ಜಗತ್ತು ಅನುಕ್ಷಣ, ಅನುದಿನ, ವರ್ಷ ಯುಗಗಳಾಚೆಗೂ ಪುನರಾವರ್ತನೆಯ ಮಧ್ಯೆಯೂ ಪರಿವರ್ತನೆಯೆ ಜಗದ ನಿಯಮವೆಂಬಂತೆ ಬದಲಾಗುತ್ತಲೇ ಇದೆ ಜಗತ್ತು! ಇಲ್ಲ, ಇಲ್ಲ, ನಾವು ಮಾತ್ರ ಬದಲಾಗುವುದೇ ಇಲ್ಲ! ಮುಂಜಾನೆಯ ಇಬ್ಬನಿ ಕರಗಿತಲ್ಲ! ಮೊಗ್ಗು ಅರಳಿದೆಯಲ್ಲ; ಕೆಂಪನೆ ನೇಸರ ಬೆಳ್ಳಿತಟ್ಟೆಯಾಗಿ ಫಳಫಳಿಸುತಿಹನಲ್ಲ! ಚಿಲಿಪಿಲಿಗುಟ್ಟುತಿದ್ದ ಹಕ್ಕಿಗಳೆಲ್ಲೋ ದೂರಕೆ ಹಾರಿ ಹೋಗಿವೆಯಲ್ಲ…. ಬದಲಾಗುತ್ತಲೇ ಇದೆ ಜಗತ್ತು ಇಲ್ಲ, ಇಲ್ಲ, ನಾವು ಮಾತ್ರ ಬದಲಾಗುವುದೇ ಇಲ್ಲ! ಅದೇ ಭಾಷೆ, ಅದೇ ದೇಶ ಈ ಗಡಿಗಳಾಚೆ ನಾವು ಇಣುಕಿಯೂ ನೋಡುವುದಿಲ್ಲ! ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ವೈಶಾಖದಿ ಬಿತ್ತಿದ ಬಿತ್ತವಿದೋ ತೆನೆದೂಗಿ ನಿಂತಿದೆ! ಆಷಾಡದ ಸಮೀರನ ಶೀತಗಾಳಿ ಬಯಲಾಗಿ ಈಗೀಗ ಮತ್ತೆ ಮೂಡಲಸೋನೆ ಕೀಳುತಿದೆ! ಮಹಾನವಮಿಗೊಂದಿಷ್ಟು ಪಡುಗಾಳಿ ಬೀಸಿದರೆ ಹಾಯೆನಿಸುತ್ತದೆ…. ಬದಲಾಗುತ್ತಲೇ ಇದೆ ಜಗತ್ತು ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ! ಅದೇ ಧರ್ಮ, ಅದೇ ಜಾತಿ ಈ ಲಕ್ಷ್ಮಣರೇಖೆಯಾಚೆ ನಾವು ಖಂಡಿತ ಕಾಲಿಡುವುದಿಲ್ಲ! ಇಲ್ಲ,.ಇಲ್ಲ
ಭಯದ ಬಗ್ಗೆ ಭಯ ಬೇಡ ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ ಮನಸ್ಸಿನ ಮೆಲೆ ಅನೇಕ ದುಷ್ಪರಿಣಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ. ಮಕ್ಕಳು ಯಾವ ಯಾವದೆ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವದು ಎಂಬ ಪ್ರಶ್ನೆಗಳು ನಮ್ಮಲ್ಲಿ ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ. ಭಯ ಎಂದರೇನು? ನಮ್ಮ ಶಕ್ತಿಗೆ ಮೀರಿದ ಅಸಾಂಭವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡುಗತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ. ಭಯ ಉಂಟಾಗೋದು ಯಾವಾಗ? ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೊ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ. ಯಾವುದಕ್ಕೆ ಭಯಗೊಳ್ಳುತ್ತೆವೆ? ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರೆಮದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ತರ ಭಯಗೊಳುತ್ತಾರೆ.ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವದೆಂರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ. ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಭಧಿಸಿದ್ದುಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ. ಭಯದ ಲಕ್ಷಣಗಳೇನು? ಭಯವುಂಟಾದಾಗ ಮೈಂಡ್ ಫುಲ್ ಬ್ಲ್ಯಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯೊದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೊದಿಲ್ಲ.ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ಥವ್ಯಸ್ಥವಾಗುವವು ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು.ಇವೆಲ್ಲ ಭಯದ ಮುಖ್ಯ ಲಕ್ಷಣಗಳು. ಭಯ ತಡೆಯೋಕೆ ಏನು ಉಪಾಯ ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವದು.ಭಯ ನಿವಾರಿರಿಸುವದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ ಹಿಪ್ನಾಟಿಸಂ ಮಾಡಿಕೊಳ್ಳುವದು. ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು ನಿನಗೆ ನೀನೇ ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವದನ್ನು ನೆನಪಿನಲ್ಲಿಡಿ’. ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ************************** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ ವಿಭಾ ಪುರೋಹಿತ ಮುಖಾಮುಖಿ ೧. ಕತೆ, ಕವಿತೆಗಳನ್ನ ಏಕೆ ಬರೆಯುತ್ತೀರಿ ? ಕೆಲವು ಕಾಡುವ ವಿಷಯಗಳು ತನ್ನಷ್ಟಕ್ಕೆ ತಾನೇ ಬರೆಸಿಕೊಂಡುಬಿಡುತ್ತವೆ. ಮನದಲ್ಲಿ ಚಿಮ್ಮಿಬಂದ ತೀವ್ರ ಭಾವನೆಗಳ ಅಲೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವ ಕ್ರಿಯೆಯೇ ಕವಿತೆಗಳಾಗಿವೆ. ಹೀಗೇ ಹರಿದುಬಂದ ಪ್ರಬಲ , ಸಂವೇದನೆಗಳ ಕಂತೆಗಳು ಪದಗಳೊಂದಿಗೆ ಬೆಸೆದು ಕವನಗಳಾಗಿವೆ ಜೀವನದ ಅದೇ ರುಟೀನ್ ಕೆಲಸಕ್ಕೆ ಹೋಗುವದು,ಅಡುಗೆ,ಮನೆ,ಮಕ್ಕಳು ಅಂತ ಇದರಲ್ಲೇ ಮುಳುಗಿರುತ್ತೇವೆ. ಈ ಯಾಂತ್ರಿಕತೆಯಿಂದ ಹೊರಬರಲು ಚೂರು ಚಿನಕುರುಳಿಯಂತೆ ಸಹಾಯವಾಗುತ್ತದೆ ನನ್ನ ಬರವಣಿಗೆ. ಮನಸ್ಸು ಗೆಲುವಾಗಿರುತ್ತದೆ,ಬದುಕು ಕಳೆಕಟ್ಟಿದಂತಾಗುತ್ತದೆ. ವರಕವಿ ಬೇಂದ್ರೆಯವರು ಹೇಳಿದಂತೆ- ರಸವೇ ಜೀವನ , ವಿರಸ ಮರಣ, ಸಮರಸವೇ ಜೀವನ ಎಂತಾದರೆ ಕವನ ರಚನೆಯ ಗೀಳು ಜೀವನದಲ್ಲಿ ನನಗೆ ರಸವನ್ನು ತುಂಬಿವೆ. ೨. ಕತೆ, ಕವಿತೆ ಹುಟ್ಟುವ ಕ್ಷಣ ಯಾವದು ? ಹಿರಿಯರು ಹೇಳಿದಂತೆ ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ. ನನಗೂ ಸಹ ಈ ಎರಡೂ ಸಮಯದಲ್ಲಿ ಕವಿತೆಗಳು ಹುಟ್ಟುತ್ತವೆ. ಹಾಗೂ ಯಾರಾದರು ಅಸಹಾಯಕರನ್ನು ನೋಡಿದಾಗ ಅವರ ಪರಿಸ್ಥಿತಿಗೆ ಕಿವಿಯಾದಾಗ ಭಾವಲೋಕದಲ್ಲಿ ತೇಲಿ ನಾನೇ ಅವರ ಸ್ಥಿತಿಯಲ್ಲಿದ್ದೇನೆ ಎಂದು ( ಪರಕಾಯ ಪ್ರವೇಶ ಎನ್ನಬಹುದು) ಮನ ಕಂಬನಿಮಿಡಿಯುತ್ತದೆ, ಕವಿತೆ, ಕತೆ ಹುಟ್ಟುತ್ತದೆ. ಕೆಲವು ಕವಿತೆಗಳು ಮಿಂಚಿನ ಹಾಗೆ ಬಂದು ಬರೆಸಿಕೊಳ್ಳುತ್ತವೆ. ಇನ್ನೂ ಕೆಲವು ಒಂದೆರಡು ದಿನ ಮನಸ್ಸಿನಲ್ಲಿ,ಬುದ್ಧಿಯಲ್ಲಿ ಮಂಥನ ಚಿಂತನಗೊಂಡು ಕವಿತೆಗಳ ನವನೀತ ರೂಪುಗೊಳ್ಳುತ್ತದೆ. ಎಷ್ಟೋಸಲ ಹೆಣ್ಣಿನ ಸಂವೇದನೆಗಳಿಗೆ ಪ್ರತಿವಾದಿಯಾಗಿ ನಿಲ್ಲುವ ಘಟನೆಗಳು ಎದುರಾದಾಗ ಕವಿತೆಗಳು ಸೃಷ್ಟಿಯಾಗಿದ್ದಿವೆ. ಎದೆತುಂಬ ಒಲವು ತುಳುಕುವಾಗ ,ನಿಸರ್ಗ ರಮ್ಯತೆಯನ್ನು ಕಂಡಾಗ,ಅಂತಃಕರಣ ಒಳಹರಿವನ್ನು ಅನುಭವಿಸಿದಾಗ ಅನೇಕ ರಚನೆಗಳು ಜನ್ಮತಳಿದಿವೆ. ೩. ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಸ್ವೇದನೆಯೇ ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ವ್ಯವಸ್ಥೆ, ಅಸಮಾನತೆ,ಮನುಷ್ಯನ ಹಣದ ಮೋಹ ಇವೆಲ್ಲವು ವಿಷಯವಾಗುತ್ತವೆ. ಹೆಣ್ಣಿನ ಅನಾದರ,ಅಗೌರವ ನನ್ನನ್ನು ತಲ್ಲಣಗೊಳಿಸುತ್ತವೆ. ಸದಾ ಕಾಡುವ ಪಾತ್ರಗಳು ದ್ರೌಪದಿ,ಭಾನುಮತಿ,ಕುಂತಿ….. ಇತ್ಯಾದಿ. ಪ್ರಸ್ತುತವಾಗಿ ಕಾಡುವದೇನೆಂದರೆ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿರುವ ಹೆಣ್ಣು ಗಂಡಿಗೆ ಸರಿಸಮನಾಗಿ ದುಡಿಯುತ್ತಿದ್ದಾಗಲೂ ವಿವಿಧ ರೀತಿಯ ಸಂಕಟಗಳನ್ನು ಅನುಭವಿಸುವದು. ಮಾನಸಿಕವಾಗಿಯೂ ದೈಹಿಕವಾಗಿಯೂ ಅವಳ ಗೋಳು ಹೇಳತೀರದ್ದು. ಇದು ಒಂದು ಮುಖವಾದರೆ ಇನ್ನೊಂದು ಕಡೆ ಅನಕ್ಷರಸ್ಥರ ಗೋಳು , ಮನೆಗೆಲಸ ಮಾಡುವವರು, ಗಾರೆ ಕೆಲಸದವರು ವಿದ್ಯೆಗಳಿಸಿಲ್ಲವೆಂದು ಈ ಸಂಕಷ್ಟಗಳು ಎದುರಾಗಿವೆ ಎಂದು ಗೊಣಗುತ್ತಾ ಇರುತ್ತಾರೆ. ವ್ಯತ್ಯಾಸ ಕಂಡುಬರುವದಿಲ್ಲ ಇಬ್ಬರೂ ನೋವಿಗೆ ಮೈ ಒಡ್ಡಿಕೊಂಡೇ ದುಡಿಯುತ್ತಾರೆ. ೪. ಕತೆ, ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೆ ? ಖಂಡಿತವಾಗಿಯೂ ಇಣುಕಿದೆ. ಬಾಲ್ಯದ ಊರು,ಕಲಿತ ಶಾಲೆ, ಅಜ್ಜಅಜ್ಜಿ, ಗೆಳೆಯರು ಜೀವಮಾನವಿಡೀ ಮರೆಯಲಾರದ ನೆನಪಿನ ಜಾದೂಪೆಟ್ಟಿಗೆಗಳು : ತೆಗೆದರೆ ಒಂದೊಂದಾಗಿ ಹೊರಬಂದು ಹೃನ್ಮನಗಳನ್ನು ತಣಿಸುತ್ತವೆ. ಬಾಲ್ಯ ಎಲ್ಲರ ಜೀವನದ ಅದ್ಭುತ ಘಟ್ಟ. ಓ…. ಆ ಸುಂದರ ನೆನಪುಗಳ ಸೆಳೆತ ಮನಸ್ಸಿನ ಶೂನ್ಯತೆ,ಖಿನ್ನತೆಯ ಭಾವಗಳಿಂದ ಬಡಿದೆಬ್ಬಿಸಿ ಸಂತಸ ತುಂಬುತ್ತವೆ. ಕ್ಯಾಮರಾ ಕಣ್ಣಲ್ಲಿ ಚಿತ್ರಗಳು ಶಾಶ್ವತವಾದಂತೆ ಈ ಸುಂದರ ನೆನಪುಗಳ ತೊರೆಗಳನ್ನು ನನ್ನ ಹೃದಯದಲ್ಲಿ ಹಾಗೂ ಆತ್ಮದಲ್ಲಿ ಸೆರೆಹಿಡಿದು ಅವುಗಳಿಗೆ ಅಮರತ್ವವನ್ನು ನೀಡಿದ ಹಲವಾರು ಕವಿತೆಗಳಿವೆ. “ಹುಚ್ಚು ಖೋಡಿ ಈ ವಯಸು ಅದು ಹದಿನಾರರ ವಯಸು” ಎಂದು ಹಾಡಿದ ಹಿರಿಯಕವಿಯ ಸಾಲುಗಳಂತೆ ನನ್ನ ಕವಿತೆಗಳು ಕೆಲವು ಸಾಕ್ಷಿಯಾಗಿವೆ. ೫. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆ ಏನು ? ಮೊದಲಿನಿಂದಲೂ ರಾಜಕೀಯ ನನಗೆ ನಿರಾಸಕ್ತಿಯ ವಿಷಯ. ರಾಜಕೀಯ ದೊಂಬರಾಟವನ್ನು ನಿರ್ಭಿಡೆಯಿಂದ ಬಯಲಿಗೆಳೆಯುವ ಅನೇಕ ಬರಹಗಳು ತಂಡೊಪತಂಡವಾಗಿ ಬರುತ್ತವೆ. ಆದರೂ ಇದು ಯಾವಾಗಲೂ ಹಗ್ಗಜಗ್ಗಾಟದ ಮೈದಾನವೇ ಸರಿ.ಲೋಕಕಲ್ಯಾಣಾರ್ಥವಾಗಿ ಸೇವೆ ಮಾಡುವವರು ಈಗ ವಿರಳ. ದೇಶಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶನ ಮಾಡುತ್ತಾ ಅಂತರಂಗದಲ್ಲಿ ಸ್ವಾರ್ಥವೇ ತುಂಬಿಕೊಂಡಿರುವರು ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಒಂದಿಬ್ಬರು ನಿಜವಾದ ದೇಶಸೇವಕರಿದ್ದರೂ ಅವರ ಸುತ್ತ ಕಾಲೆಳೆಯುವ ಅಮೂರ್ತ ಕೈಗಳು ಬೇಕಾದಷ್ಟು ಇರುತ್ತವೆ. ಪಕ್ಷಾತೀತವಾದ ಅಪ್ಪಟ ಸೇವಾಮನೋಭಾವವುಳ್ಳ ನೇತಾರರು ಇಂದಿನ ಅಗತ್ಯ. ೬. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ವಿಶ್ವದ ಸಕಲ ಚರಾಚರಗಳ ಚಲನೆಗೆ ಯಾವುದೋ ಒಂದು ಶಕ್ತಿ ಕಾರಣ . ಆ ಆಮೂರ್ತ ಅವ್ಯಕ್ತ ಅನನ್ಯ ಶಕ್ತಿಯೇ ದೇವರು ಎಂದು ನನ್ನ ಭಾವನೆ.ಶಕ್ತಿ ನಿರಂತರ ಹಾಗೇ ದೇವರು ನಿರಂತರ. ವಿಗ್ರಹ ಆರಾಧನೆಯಲ್ಲಿ ನಂಬಿಕೆಯಿಲ್ಲ.ಮೌಢ್ಯ ಆಚರಣೆಗಳಿಗೆ ವಿರೋಧವಿದೆ. ಪ್ರೇಮ,ಜ್ಞಾನ,ಧ್ಯಾನ ಇವುಗಳ ತ್ರಿವೇಣಿಸಂಗಮವೇ ಧರ್ಮ. ಭಾರತೀಯತೆಯೇ ಶ್ರೇಷ್ಠ ಧರ್ಮ. ೭. ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನೆನಿಸುತ್ತದೆ ? ನಾವು ಹಿಂತಿರುಗಿ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ ನಮ್ಮ ಗಮನಕ್ಕೆ ಬರುವ ವಿಷಯವೆಂದರೆ ನಮ್ಮ ಪರಂಪರೆಯಲ್ಲಿ ಹಾಗೂ ಸಮಷ್ಟಿಪ್ರಜ್ಞೆಯಲ್ಲಿ ಅನೇಕ ಪುರಾತನ ವಿಚಾರಗಳು ಪದ್ಧತಿಗಳು ನಡೆ-ನುಡಿಗಳು ತಾವೇ ತಾವಾಗಿ ಕಳಚಿ ಹೋಗಿವೆ. ಹಲವು ಹೊಸತತ್ವಗಳು ಅಸ್ತಿತ್ವಕ್ಕೆ ಬಂದಿವೆ. ” ಬದಲಾವಣೆ ಪ್ರಕೃತಿಯ ನಿಯಮ” ಅಲ್ಲವೆ ? ಇಂದು ವಿಜ್ಞಾನದ ಪ್ರಗತಿಯಿಂದಾಗಿ ಜಗತ್ತೆಲ್ಲವೂ ಒಂದಾಗುತ್ತಿರುವ ಹಾಗೂ ಜಾಗತೀಕರಣದ ನೂತನ ಬಿರುಗಾಳಿ ಬೀಸುತ್ತಿರುವಾಗ ಹೊಸ ಚಿಂತನ,ಹೊಸ ಜೀವನಶೈಲಿ,ಹೊಸ ಆಲೋಚನೆಗಳು ನಮ್ಮ ಬದುಕಿನಲ್ಲಿ ಹೊಸ ಸವಾಲುಗಳನ್ನು ಹುಟ್ಟಿಸುತ್ತವೆ. ಹೊಸತನದ ತೆರೆಗಳ ಅಬ್ಬರ ! ಜಾಗರೂಕತೆಯಿಂದ ಯಾವ ತತ್ವವನ್ನು ಸ್ವೀಕರಿಸಬೇಕು ? ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ಮಹಾಮಾರಿ ಕೊರೋನಾ ಕಲಿಸಿದ ಪಾಠವನ್ನು ಮರೆಯುವಂತಿಲ್ಲ. ಪ್ರಜ್ಞಾಪೂರ್ವಕವಾಗಿ ಚಿಂತನ ಮಂಥನ ಮಾಡಿ ಹೊಸತತ್ವದಲ್ಲಿ ಯಾವುದು ಸತ್ವಹೀನವೋ ಅದನ್ನು ಬದಿಗೊತ್ತಿ ಪುಷ್ಟಿಯಿರುವ ತತ್ವಗಳನ್ನು ಮಾತ್ರ ಆಯ್ದುಕೊಳ್ಳಬೇಕಿದೆ. ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು, ಒಲವು ಹಾಗೂ ಗೌರವವಿದೆ. ೮. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಸುವಿರಿ ? ಇದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಪಂಥ ರಾಜಕೀಯವಿದೆ ಎಂದು ಆಗಾಗ ಕೇಳಿಬರುತ್ತದೆ. ಸಾಹಿತ್ಯದ ಅಂತಃಸತ್ವವನ್ನರಿತು ಮತಿವಂತರಾಗಿ ವರ್ತಿಸಬೇಕಾಗಿದೆ. ೯. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ ? ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ದೇಶದ ಚಲನೆ ಅವ್ಯಾಹತ. ಪಾರದರ್ಶಕತೆ ಮತ್ತು ದೂರದೃಷ್ಟಿ ಹೊಂದಿರುವ ಸಮರ್ಥ ಆಡಳಿತಗಾರರಾದರೆ ದೇಶ ಸುಗಮವಾಗಿ ನಡೆಯಬಲ್ಲದು.ಇಲ್ಲವಾದರೆ ದೇಶದ ಪ್ರಜೆಗಳು ದುರ್ಗಮ ಸ್ಥಿತಿ ಅನುಭವಿಸಬೇಕಾಗುವದು. ೧೦. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಸತ್ವಯುತವಾದ , ಕಾಲಾತೀತವಾಗಿ ನಿಲ್ಲುವ ಸಾಹಿತ್ಯ ಸೃಷ್ಟಿಯಡೆಗೆ ತುಡಿತವಿದೆ. ಎಲ್ಲ ಹಿರಿಯ ಸಾಹಿತಿಗಳ ಅಧ್ಯಯನ,ಹೊಸತಲೆಮಾರಿನ ಪ್ರಯೋಗಶೀಲತೆಯನ್ನು ಮನಸಲ್ಲಿಟ್ಟುಕೊಂಡು ನಮ್ಮತನವನ್ನು ಉಳಿಸಿಕೊಳ್ಳುತ್ತ ಮುಂದುವರಿಯಬೇಕಿದೆ. ಶೋಷಿತರಿಗೆ ದನಿಯಾಗುವ , ಸ್ತ್ರಿ ಸಂವೇದನೆ , ಸ್ತ್ರೀ ಪರ ಚಿಂತನೆಗೆ ಮೆಟ್ಟಿಲಾಗುವ ದಾರಿಯತ್ತ ಸಾಗಬೇಕಿದೆ. ೧೧. ನೆಚ್ಚಿನ ಕನ್ನಡದ ಹಾಗೂ ಆಂಗ್ಲ ಸಾಹಿತಿಗಳಾರು ? ಇಷ್ಟದಕವಿ ಜಿ.ಎಸ್. ಶಿವರುದ್ರಪ್ಪ ಇನ್ನೂ ಹಲವಾರು ಸಾಹಿತಿಗಳು ಜಯಂತ ಕಾಯ್ಕಿಣಿ, ಚೆನ್ನವೀರ ಕಣವಿ ಕವಯಿತ್ರಿಯರು ವೈದೇಹಿ,ಲಲಿತಾ ಸಿದ್ಧಬಸವಯ್ಯಾ ,ಮಾಲತಿ ಪಟ್ಟಣಶೆಟ್ಟಿ ಆಂಗ್ಲ ಸಾಹಿತಿಗಳೆಂದರೆ ಜಾನ್ ಕೀಟ್ಸ ಮತ್ತು ಟಿ.ಎಸ್.ಎಲಿಯಟ್ ೧೨. ಇತ್ತೀಚೆಗೆ ಓದಿದ ಕೃತಿಗಳಾವುವು ? ನಾರಾಯಣ.ಪಿ.ಭಟ್ಟ ಅವರ “ನೆನಪಿನ ಉಯ್ಯಾಲೆ” ನಾಗರೇಖಾ ಗಾವ್ಕರ್ ಅವರ ” ಆಂಗ್ಲ ಸಾಹಿತ್ಯ ಲೋಕ” ೧೩. ಇಷ್ಟವಾದ ಕೆಲಸ ಯಾವದು ? ಕನ್ನಡೇತರರಿಗೆ ಕನ್ನಡ ಕಲಿಸುವದು, ರಂಗೋಲಿ ಹಾಕುವದು ಮತ್ತು ಅಡುಗೆ ಮಾಡುವದು. ೧೪. ಇಷ್ಟವಾದ ಊರು ? ಧಾರವಾಡ ಎರಡು ಕಾರಣಗಳಿಂದ * ನನ್ನ ತವರುಮನೆ * ವರಕವಿ ಬೇಂದ್ರೆಯವರಂಥ ಮಹಾನ್ ಸಾಹಿತಿ ನೆಲೆಸಿದ್ದ ಊರು. ಹಾಗೂ ಕನ್ನಡ ಸಾರಸ್ವತಲೋಕಕ್ಕೆ ಧಾರವಾಡ ಹಲವಾರು ಮೇರು ಸಾಹಿತಿಗಳನ್ನ ನೀಡಿದಂತಹ ನೆಲ. ೧೫. ಇಷ್ಟವಾಗುವ ಸಿನಿಮಾಗಳು ಯಾವವು ? ಮಾಲ್ಗುಡಿ ಡೇಸ್, ಕವಿರತ್ನಕಾಳಿದಾಸ ಮತ್ತು ಫಸ್ರ‍್ಯಾಂಕ್ ರಾಜು ೧೬. ಮರೆಯಲಾರದ ಘಟನೆಗಳಾವವು ? * ಧಾರವಾಡದಲ್ಲಿ ನಡೆದ ೮೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸುಯೋಗ ಓದಗಿಬಂದಿತ್ತು. ಅಪ್ಪ,ಅಮ್ಮ ಇಬ್ಬರನ್ನೂ ಕರೆದುಕೊಂಡು ಹೋದೆ. ವಿಶಾಲವಾದ ಸಭಾಂಗಣದ ಆಸನದ ಮೇಲೆ ಕುಳಿತೆವು. ಕರ‍್ಯಕ್ರಮ ಇನ್ನೇನು ಶುರುವಾಗಬೇಕು ಕವಿಗೋಷ್ಠಿಯ ಅಧ್ಯಕ್ಷರು,ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸತೊಡಗಿದರು, ನಂತರ ಕವಿಗಳ ಹೆಸರುಗಳನ್ನು ವೇದಿಕೆಗೆ ಬರಬೇಕೆಂದು ಆಹ್ವಾನಿಸುತ್ತದ್ದರು,ಆಗ ವೇದಿಕೆಯ ಮೇಲೆ ನನ್ನ ಹೆಸರು ಕರೆದ ತಕ್ಷಣ ಅಪ್ಪನ ಕಣ್ಣಲ್ಲಿ ಆನಂದಬಾಷ್ಪಗಳು ದಳದಳನೇ ಇಳಿದುಬಂದವು. ಅಪ್ಪನ ಹೆಮ್ಮೆಯ ಭಾವ ಕಂಡು ನನ್ನ ಮತ್ತು ಅಮ್ಮನ ಕಣ್ಣುಗಳು ಆದ್ರಗೊಂಡಿದ್ದವು. ************************************************* ********************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಲೇರಿಯೊಂಕ ಲೇರಿಯೊಂಕ ( ಕಾದಂಬರಿ)ಮೂಲ : ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ : ಪ್ರಶಾಂತ ಬೀಚಿಪ್ರ : ಛಂದ ಪುಸ್ತಕಪ್ರಕಟಣೆಯ.ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೨೫೦ ಕೀನ್ಯಾದ ಹೆಸರಾಂತ ಕಾದಂಬರಿಕಾರ ಹೆನ್ರಿ ಆರ್.ಓಲೆ ಕುಲೆಟ್ ಅವರ ಈ ಕಾದಂಬರಿಯು ಲೇರಿಯೊಂಕ ಎಂಬ ಒಬ್ಬ ದನಗಾಹಿ ಹುಡುಗ ಶಾಲೆಗೆ ಹೋಗಲು ಪಡಬಾರದ ಪಾಡು ಪಟ್ಟು ಕೊನೆಗೆ ಸ್ವಂತ ಪರಿಶ್ರಮದಿಂದ ವಿದ್ಯಾವಂತನಾಗಿ ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದರ ಕುರಿತಾದ ಕಥೆಯನ್ನು ಹೇಳುತ್ತದೆ. ಮಾಸಯಿ ಜನಾಂಗಕ್ಕೆ ಸೇರಿದ ಲೇರಿಯೊಂಕ ಸರಕಾರದ ಒತ್ತಾಯಕ್ಕೊಳಗಾಗಿ ಶಾಲೆಗೆ ಸೇರುತ್ತಾನಾದರೂ ಕಾಲಕ್ರಮೇಣ ಶಾಲೆಯ ಬದುಕನ್ನು ಬಹಳವಾಗಿ ಇಷ್ಟ ಪಡುತ್ತಾನೆ. ವಾಸ್ತವದಲ್ಲಿ ಮಾಸಯಿಗಳು ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುವುದಿಲ್ಲ. ಲೇರಿಯೊಂಕ ಏನೇನೋ ಸಬೂಬು ಹೇಳಿ ಮನೆ ಬಿಟ್ಟು ಕಾಲ್ನಡಿಗೆಯಲ್ಲಿ ಬಹು ದೂರ ಸಾಗಿ , ಹಳ್ಳ-ತೊರೆ-ಗುಡ್ಡ-ಕಾಡುಗಳನ್ನು ದಾಟಿ, ಅನೇಕ ಅಪಾಯ-ತೊಂದರೆಗಳನ್ನು ಎದುರಿಸಿ ದೂರದ ನಗರ ಸೇರಿ ಅಲ್ಲಿ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುತ್ತಾನೆ. ಆಗ ಅವನಿಗೆ ವಿದ್ಯಾವಂತರೆಲ್ಲ ಬಿಳಿಯರ ವಿರುದ್ಧ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವುದು ಕಾಣುತ್ತದೆ. ಕೆನ್ಯಾದವರಿಗೆ ತಮ್ಮನ್ನು ಆಳಿಕೊಳ್ಳುವ ಶಕ್ತಿಯಿದೆ, ಆದ್ದರಿಂದ ಬಿಳಿಯರು ತಮ್ಮ ಮೇಲೆ ಅಧಿಕಾರ ಚಲಾಯಿಸುವ ಅಗತ್ಯವಿಲ್ಲವೆನ್ನುವ ಭಾವನೆ ಲೇರಿಯೊಂಕನಿಗೂ ಬರುತ್ತದೆ. ಎಲ್ಲ ವಿದ್ಯಾವಂತರಂತೆ ಕೆನ್ಯಾ ಸ್ವತಂತ್ರವಾಗಬೇಕು, ಮತ್ತು ತನ್ನ ಸಂಸ್ಕೃತಿಯ ಎಲ್ಲ ಅಂಶಗಳನ್ನು ಉಳಿಸಿಕೊಂಡು ಆ ಬಗ್ಗೆ ಅಭಿಮಾನ ಪಡಬೇಕು ಎಂಬ ಆಶಯವನ್ನು ಲೇರಿಯೊಂಕನೂ ಇಟ್ಟುಕೊಳ್ಳುತ್ತಾನೆ. ವಿದ್ಯೆ ಪಡೆದರೆ ಕಪ್ಪು ಜನರೂ ಬಿಳಿಯರ ಸಮಾನರಾಗಬಲ್ಲರು ಎಂಬ ನಂಬಿಕೆಯನ್ನು ಹಿರಿಯ ತಲೆಮಾರಿನವರಲ್ಲೂ ಹುಟ್ಟಿಸಿ ಕಾದಂಬರಿ ಕೊನೆಗೊಳ್ಳುತ್ತದೆ. ಕಾದಂಬರಿಯುದ್ದಕ್ಕೂ ಮಾಸಯಿ ಜನಾಂಗದ ಜೀವನ ಪದ್ಧತಿ, ನಂಬಿಕೆ-ಆಚರಣೆಗಳು, ನಡೆ-ನುಡಿ-ವರ್ತನೆ, ಅವರು ಸಂಬಂಧಗಳನ್ನಿಟ್ಟುಕೊಳ್ಳುವ ಪರಿ ಮತ್ತು ಅವರ ನಾಣ್ಣುಡಿ-ಗಾದೆ ಮಾತುಗಳು ತುಂಬಿಕೊಂಡಿವೆ. ವಸ್ತು-ವಿನ್ಯಾಸ-ರಚನೆ, ನಿರೂಪಣೆ-ಪಾತ್ರ ಚಿತ್ರಣಗಳ ದೃಷ್ಟಿಯಿಂದ ಇದು ಅತ್ಯುತ್ತಮವಾದ ಒಂದು ಕೃತಿ. ಆಧುನಿಕೋತ್ತರ ಸಾಹಿತ್ಯದ ಒಂದು ಪ್ರಮುಖ ಲಕ್ಷಣವಾಗಿರುವ ಬದಿಗೆ ತಳ್ಳಲ್ಪಟ್ಟ ಜನಾಂಗದ ಬದುಕಿನ ಚಿತ್ರಣ ಇಲ್ಲಿರುವುದರಿಂದ ಇದರ ಅನುವಾದ ಅತ್ಯಂತ ಪ್ರಸ್ತುತ. ಅನುವಾದಕರ ಪ್ರಯತ್ನ ಶ್ಲಾಘನೀಯ. ಆದರೆ ವಾಕ್ಯ ರಚನೆ ಮತ್ತು ಪದಪ್ರಯೋಗಗಳನ್ನು ಸಮರ್ಪಕವಾಗಿ ಮಾಡುವಲ್ಲಿ ಇನ್ನಷ್ಟು ಪರಿಶ್ರಮವಿದ್ದರೆ ಒಳ್ಳೆಯದು. ******************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
