ಅಂಕಣ ಬರಹ

ಲೇರಿಯೊಂಕ

ಲೇರಿಯೊಂಕ ( ಕಾದಂಬರಿ)
ಮೂಲ : ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ : ಪ್ರಶಾಂತ ಬೀಚಿ
ಪ್ರ : ಛಂದ ಪುಸ್ತಕ
ಪ್ರಕಟಣೆಯ.ವರ್ಷ : ೨೦೦೮
ಬೆಲೆ : ರೂ.೧೦೦
ಪುಟಗಳು : ೨೫೦

 ಕೀನ್ಯಾದ ಹೆಸರಾಂತ ಕಾದಂಬರಿಕಾರ ಹೆನ್ರಿ ಆರ್.ಓಲೆ ಕುಲೆಟ್ ಅವರ ಈ ಕಾದಂಬರಿಯು ಲೇರಿಯೊಂಕ ಎಂಬ ಒಬ್ಬ ದನಗಾಹಿ ಹುಡುಗ ಶಾಲೆಗೆ ಹೋಗಲು ಪಡಬಾರದ ಪಾಡು ಪಟ್ಟು ಕೊನೆಗೆ ಸ್ವಂತ ಪರಿಶ್ರಮದಿಂದ ವಿದ್ಯಾವಂತನಾಗಿ ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದರ ಕುರಿತಾದ ಕಥೆಯನ್ನು ಹೇಳುತ್ತದೆ.

 ಮಾಸಯಿ ಜನಾಂಗಕ್ಕೆ ಸೇರಿದ ಲೇರಿಯೊಂಕ ಸರಕಾರದ ಒತ್ತಾಯಕ್ಕೊಳಗಾಗಿ ಶಾಲೆಗೆ ಸೇರುತ್ತಾನಾದರೂ ಕಾಲಕ್ರಮೇಣ ಶಾಲೆಯ ಬದುಕನ್ನು ಬಹಳವಾಗಿ ಇಷ್ಟ ಪಡುತ್ತಾನೆ. ವಾಸ್ತವದಲ್ಲಿ ಮಾಸಯಿಗಳು ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುವುದಿಲ್ಲ. ಲೇರಿಯೊಂಕ ಏನೇನೋ ಸಬೂಬು ಹೇಳಿ ಮನೆ ಬಿಟ್ಟು ಕಾಲ್ನಡಿಗೆಯಲ್ಲಿ ಬಹು ದೂರ ಸಾಗಿ , ಹಳ್ಳ-ತೊರೆ-ಗುಡ್ಡ-ಕಾಡುಗಳನ್ನು ದಾಟಿ, ಅನೇಕ ಅಪಾಯ-ತೊಂದರೆಗಳನ್ನು ಎದುರಿಸಿ ದೂರದ ನಗರ ಸೇರಿ ಅಲ್ಲಿ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುತ್ತಾನೆ. ಆಗ ಅವನಿಗೆ ವಿದ್ಯಾವಂತರೆಲ್ಲ ಬಿಳಿಯರ ವಿರುದ್ಧ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವುದು ಕಾಣುತ್ತದೆ.

  ಕೆನ್ಯಾದವರಿಗೆ ತಮ್ಮನ್ನು ಆಳಿಕೊಳ್ಳುವ ಶಕ್ತಿಯಿದೆ, ಆದ್ದರಿಂದ ಬಿಳಿಯರು ತಮ್ಮ ಮೇಲೆ ಅಧಿಕಾರ ಚಲಾಯಿಸುವ ಅಗತ್ಯವಿಲ್ಲವೆನ್ನುವ ಭಾವನೆ ಲೇರಿಯೊಂಕನಿಗೂ ಬರುತ್ತದೆ.  ಎಲ್ಲ ವಿದ್ಯಾವಂತರಂತೆ ಕೆನ್ಯಾ ಸ್ವತಂತ್ರವಾಗಬೇಕು, ಮತ್ತು ತನ್ನ ಸಂಸ್ಕೃತಿಯ ಎಲ್ಲ ಅಂಶಗಳನ್ನು ಉಳಿಸಿಕೊಂಡು ಆ ಬಗ್ಗೆ ಅಭಿಮಾನ ಪಡಬೇಕು ಎಂಬ ಆಶಯವನ್ನು ಲೇರಿಯೊಂಕನೂ ಇಟ್ಟುಕೊಳ್ಳುತ್ತಾನೆ.  ವಿದ್ಯೆ ಪಡೆದರೆ ಕಪ್ಪು ಜನರೂ ಬಿಳಿಯರ ಸಮಾನರಾಗಬಲ್ಲರು ಎಂಬ ನಂಬಿಕೆಯನ್ನು ಹಿರಿಯ ತಲೆಮಾರಿನವರಲ್ಲೂ ಹುಟ್ಟಿಸಿ ಕಾದಂಬರಿ ಕೊನೆಗೊಳ್ಳುತ್ತದೆ.

ಕಾದಂಬರಿಯುದ್ದಕ್ಕೂ ಮಾಸಯಿ ಜನಾಂಗದ ಜೀವನ ಪದ್ಧತಿ, ನಂಬಿಕೆ-ಆಚರಣೆಗಳು, ನಡೆ-ನುಡಿ-ವರ್ತನೆ, ಅವರು ಸಂಬಂಧಗಳನ್ನಿಟ್ಟುಕೊಳ್ಳುವ ಪರಿ ಮತ್ತು ಅವರ ನಾಣ್ಣುಡಿ-ಗಾದೆ ಮಾತುಗಳು ತುಂಬಿಕೊಂಡಿವೆ.  ವಸ್ತು-ವಿನ್ಯಾಸ-ರಚನೆ, ನಿರೂಪಣೆ-ಪಾತ್ರ ಚಿತ್ರಣಗಳ ದೃಷ್ಟಿಯಿಂದ  ಇದು ಅತ್ಯುತ್ತಮವಾದ ಒಂದು ಕೃತಿ. ಆಧುನಿಕೋತ್ತರ ಸಾಹಿತ್ಯದ ಒಂದು ಪ್ರಮುಖ ಲಕ್ಷಣವಾಗಿರುವ ಬದಿಗೆ ತಳ್ಳಲ್ಪಟ್ಟ ಜನಾಂಗದ ಬದುಕಿನ ಚಿತ್ರಣ ಇಲ್ಲಿರುವುದರಿಂದ ಇದರ ಅನುವಾದ ಅತ್ಯಂತ ಪ್ರಸ್ತುತ.  ಅನುವಾದಕರ ಪ್ರಯತ್ನ ಶ್ಲಾಘನೀಯ. ಆದರೆ ವಾಕ್ಯ ರಚನೆ ಮತ್ತು ಪದಪ್ರಯೋಗಗಳನ್ನು ಸಮರ್ಪಕವಾಗಿ ಮಾಡುವಲ್ಲಿ ಇನ್ನಷ್ಟು ಪರಿಶ್ರಮವಿದ್ದರೆ ಒಳ್ಳೆಯದು.

********************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top